ಲಯ, ಯತಿ, ಪ್ರಾಸ: ಎಂ.ಎ.ಕನ್ನಡ

ಲಯ:
         
ಲಯ ಎಂಬ ಪದ ಸಂಸ್ಕೃತದ ’ಲಯ್’ ಎಂಬ ಧಾತುವಿನಿಂದ ನಿಷ್ಪನ್ನಗೊಂಡಿದೆ.

                    ಲಯ- - - - > ನಡಿಗೆ, ಚಲನೆ, ಶೃತಿ
     
'ಲಯ’ ಎಂಬ ಪದಕ್ಕೆ ನುಡಿ, ಚಲನೆ, ಶೃತಿ ಎಂಬ ಅರ್ಥವಿದೆ. ಇಂಗ್ಲೀಷಿನ RYTHM ಎನ್ನುವುದು ಇದಕ್ಕೆ ಸಂವಾದಿಯಾದ ಪದ. ’ಲಯ’ ಎಂಬ ಪದಕ್ಕೆ ಪ್ರಳಯ, ನಾಶವಾಗು, ಕರಗು ಮುಂತಾದ ಅರ್ಥಗಳೂ ಇವೆ. ಆದುದರಿಂದ ’ಲಯ’ ಎನ್ನುವುದಕ್ಕೆ ನಡೆ/ ಗತಿ ಎಂಬುದನ್ನು ವಿಶಾಲಾರ್ಥದಲ್ಲಿ ಸ್ವೀಕರಿಸಲಾಗಿದೆ.
   
’ಲಯ’ವನ್ನು ಪದ್ಯ-ಗದ್ಯ ಎರಡರಲ್ಲಿಯೂ ಪರಿಗಣಿಸಬಹುದು. ಸಂಗೀತದ ಭಾಷೆಯಲ್ಲಿ ’ಲಯ’ ಎನ್ನುವುದು ಒಂದು ಕಾಲಮಾನ. ಇಂಗ್ಲೀಷಿನಲ್ಲಿ RYTHM ಎನ್ನುವುದು ಪದ್ಯದ ಅನಿವಾರ್ಯ. ಪದ್ಯ-ಗದ್ಯ ಎರಡರಲ್ಲಿಯೂ ಲಯ ಇರುತ್ತದೆ. ಗದ್ಯದಲ್ಲಿ ಲಯ ಅನಿಯತವಾಗಿದ್ದರೆ, ಪದ್ಯದಲ್ಲಿ ನಿಯತವಾಗಿರುತ್ತದೆ. ಪದ್ಯದಲ್ಲಿ ಹಾಡುವ ಲಯವಿದ್ದರೆ, ಗದ್ಯದಲ್ಲಿ ಓದುವ ಲಯವಿರುತ್ತದೆ.

                            ಲಯ
                               /\
                         ಪದ್ಯ   ಗದ್ಯ
                           /       \
           ಹಾಡುವ ಲಯ         ಓದುವ ಲಯ

 ಮೂರು ಮಾತ್ರೆಯ ಲಯವನ್ನು ಸಾಮಾನ್ಯವಾಗಿ ಉತ್ಸಾಹ ರಗಳೆಯಲ್ಲಿ ಗುರುತಿಸಲಾಗುವುದು.

ಉದಾ:

          U   U U| -- U | -- U| U U U
          ಮೊದಲ ತಾಯ ಹಾಲಕುಡಿದು

         --U | -- U| U U U| U U U
          ಲಲ್ಲೆಯಿಂದ ತೊದಲ ನುಡಿದು

    
’ಲಯ’ದ ಸ್ವರೂಪವನ್ನು ಹೀಗೆಯೇ ಎಂದು ನಿರ್ದಿಷ್ಟ ರೀತಿಯಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಬ್ಬರ ಭಾವನೆಯ ಅಭಿವ್ಯಕ್ತಿಯಲ್ಲಿಯೂ ಲಯವಿದ್ದೇ ಇರುತ್ತದೆ. ಹಾಡುವ ಕ್ರಮದಿಂದ ಲಯದ ಧಾಟಿ ಪ್ರಾಪ್ತವಾಗುತ್ತದೆ. ತ್ರಿಪದಿಯೊಂದನ್ನು ಬೇರೆ ಬೇರೆಯವರು ವಿಭಿನ್ನ ರೀತಿಯಲ್ಲಿ ಹಾಡಬಹುದು. ’ಲಯ’ವನ್ನು ಮೂರು ಘಟಕಗಳನ್ನಾಗಿ ವಿಂಗಡಿಸಲಾಗಿದೆ.

          * ಭಾಷೆ (SPEECH)
          * ನಾದ (MELODY)
          * ಆಂಗಿಕ ಚಲನೆ (BODILY MOTION)

          
’ಲಯ’ದಿಂದಾಗಿ ಓದುಗನಿಗೆ ಒಂದು ರೀತಿಯ ವಿಶೇಷ ಆನಂದ ಸಿಗುತ್ತದೆ. ಪದ್ಯ ರಚನೆಯಲ್ಲಿ ’ಲಯ’ದ ಸ್ಥಾನ ಗಣ್ಯವಾದುದು.


****************************

ಯತಿ:

  
ಛಂದಸ್ಸಿನ ವೈಶಿಷ್ಟ್ಯತೆಗಳನ್ನು ವಿಚಾರ ಮಾಡುವಾಗ ’ಯತಿ’ಯನ್ನು ಮುಖ್ಯವಾಗಿ ಪರಿಗಣಿಸಬೇಕಾದ ಅವಶ್ಯಕತೆಯಿದೆ. ’ಯತಿ’ ಎಂದರೆ ನಿಲುಗಡೆಯ ಸ್ಥಾನ.

          ಯತಿ - - - > ನಿಲುಗಡೆಯ ಸ್ಥಾನ

ಪದ್ಯವನ್ನು ಓದುವಾಗ ಕೆಲವು ಕಡೆಗಳಲ್ಲಿ ನಿಲುಗಡೆಯ ಸ್ಥಳ ಬರುತ್ತದೆ. ಈ ನಿಲುಗಡೆಯ ಸ್ಥಾನವನ್ನೇ ಛಂದಸ್ಸಿನ ಪರಿಭಾಷೆಯಲ್ಲಿ ’ಯತಿ’ ಎಂದು ಕರೆಯುತ್ತಾರೆ. ಇದು ಛಂದಸ್ಸಿನ ಪ್ರಮುಖ ಅಂಶವೆನಿಸಿದೆ. ಇದರ ಸ್ವರೂಪವನ್ನು ಕನ್ನಡ ಮತ್ತು ಸಂಸ್ಕೃತ ಛಂದೋಗ್ರಂಥಗಳಲ್ಲಿ ವಿವರಿಸಲಾಗಿದೆ.

ಒಂದು ಪದ್ಯವನ್ನು ಓದುವಾಗ ಒಂದು ನಿಯತವಾದ ಸ್ಥಾನದಲ್ಲಿ, ಓದುವಿಕೆಯ ಸುಭಗತೆಗೆ ಭಂಗ ಬರದ ಹಾಗೆ, ಉಸುರೆಳೆದುಕೊಳ್ಳಲು ಅಲ್ಲಲ್ಲಿ ನಿಲ್ಲಿಸಲಾಗುತ್ತದೆ. ಇಂತಹ ವಿಶ್ರಾಂತ ಸ್ಥಾನವೇ ಯತಿ’.

   
’ಯತಿ’ ಎಲ್ಲೆಲ್ಲಿ ಬರಬೇಕು ಎನ್ನುವುದು ಮುಂದಿನ ಪ್ರಶ್ನೆ. ಜಯಕೀರ್ತಿಯ ಪ್ರಕಾರ ಪದಾಂತ್ಯದಲ್ಲಿ ಎಂದರೆ ಪ್ರತೀ ಪಾದದ ಅಂತ್ಯದಲ್ಲಿ ’ಯತಿ’ ಬರಬೇಕು. ಆದರೆ ಇದು ಸಂಸ್ಕೃತದ ವಿಷಯವಾಯಿತು. ಕನ್ನಡದಲ್ಲಿ ’ಯತಿ’ಯ ವಿಚಾರವನ್ನು ಮೊದಲು ಪ್ರಸ್ತಾಪಿಸಿದವನು ಕವಿರಾಜಮಾರ್ಗಕಾರ. ನಾಗವರ್ಮನು ’ಯತಿ’ಯನ್ನು ಕನ್ನಡಕ್ಕೆ ಹೊರತಾದುದು ಎಂದು ಹೇಳಿದ್ದಾನೆ. ಆದರೂ ಕನ್ನಡದಲ್ಲಿ ’ಯತಿ’ ಇಲ್ಲವೆಂದಲ್ಲ. ಕನ್ನಡದಲ್ಲಿ ಅದು ಸಹಜವಾದ ರೀತಿಯಲ್ಲಿದೆ.

ಉದಾ:

                 *          *           *
          ಖಂಡ|ವಿದೆಕೋ| ಮಾಂಸ|ವಿದೆಕೋ|
                 *      *    *    *
          ಗುಂಡಿ|ಗೆಯ|ಬಿಸಿ|ರಕ್ತ|ವಿದೆಕೋ


(* ಯತಿಯ ಸ್ಥಾನ)

  
ಕನ್ನಡದಲ್ಲಿ ಪ್ರಾಸಕ್ಕೆ ಹೆಚ್ಚು ಮಹತ್ವ ಕೊಟ್ಟಿರುವುದರಿಂದ ಕೆಲವೊಂದು ಕಡೆ ಕವಿಗಳು ’ಯತಿ ವಿಲಂಘನೆ’ ಮಾಡಿದಂತೆ ಕಾಣುತ್ತದೆ. ಆದರೆ ’ಯತಿ’ಯ ಮಹತ್ವವನ್ನು ತಿಳಿದ ಮೇಲೆಯೂ ’ಯತಿ’ಯನ್ನು ಬಿಡುವ ವಿಚಾರವನ್ನು ವಿದ್ವಾಂಸರು ಮಾಡಿದ್ದಾರೆ. ಏಕೆಂದರೆ, ಅರ್ಥಕ್ಕೆ ಭಂಗ ಬರುವುದೆಂಬ ಕಾರಣಕ್ಕೆ ಕೆಲವು ಕಡೆ ’ಯತಿ’ಯನ್ನು ಬಿಡಲಾಗಿದೆ.

*************************

ಪ್ರಾಸ: 
   
    
ಪ್ರಾಸವನ್ನು ಕುರಿತು ಮೊದಲು ಪ್ರಸ್ತಾಪಿಸಿದವನು ಕವಿರಾಜಮಾರ್ಗಕಾರ. ’ಪ್ರಾಸ’ ಇದು ಸಂಸ್ಕೃತ ಪದ. ಕವಿರಾಜಮಾರ್ಗಕಾರ ದ್ವಿತೀಯಾಕ್ಷರ ಪ್ರಾಸದ ಬಗ್ಗೆ ವಿವರಿಸಿದ್ದಾನೆ. ಎಂದರೆ ಪ್ರತೀ ಪದ್ಯದ ಎರಡನೇ ಅಕ್ಷರ ಒಂದೇ ವಿಧವಾಗಿರುವುದನ್ನು ’ಪ್ರಾಸ’ ಎನ್ನಲಾಗಿದೆ. ಇಂಗ್ಲೀಷಿನ RHYME ಎಂಬ ಪದವನ್ನು ಪ್ರಾಸಕ್ಕೆ ಸಂವಾದಿಯಾಗಿ ಬಳಸಲಾಗುತ್ತದೆ.

 
ಪ್ರಾಚೀನ ಸಾಹಿತ್ಯದಲ್ಲಿ ವಿಶೇಷವಾಗಿ ಬಳಕೆಯಾಗಿರುವುದು ಆದಿಪ್ರಾಸ. ಆದರೂ ಅಂತ್ಯಪ್ರಾಸವೂ ಅಷ್ಟೇ ಬಳಕೆಯಲ್ಲಿತ್ತು ಎಂದು ಕವಿರಾಜಮಾರ್ಗಕಾರ ಹೇಳುತ್ತಾನೆ. ಆದಿಪ್ರಾಸ ಕವಿರಾಜಮಾರ್ಗಕ್ಕಿಂತ ಮೊದಲಿನಿಂದಲೇ ಕನ್ನಡದಲ್ಲಿ ಬಳಕೆಯಲ್ಲಿದೆ. ಆದರೂ ಅದರ ನಿರ್ದಿಷ್ಟ ಬಳಕೆ ಎಲ್ಲಿಂದ ಶುರುವಾಯಿತು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಶ್ರವಣಬೆಳಗೊಳದ ಶಾಸನಗಳಲ್ಲಿ ಆದಿಪ್ರಾಸವನ್ನು ಗುರುತಿಸಲಾಗಿದೆ.

        
ಹಳೆಗನ್ನಡ ಕಾವ್ಯ ರಚನೆಯಲ್ಲಿ ನಿಯತವಾಗಿ ಬಳಸುತ್ತಿದ್ದ ಆದಿಪ್ರಾಸವನ್ನು ಹೊಸಗನ್ನಡ ಕಾವ್ಯ ರಚನೆಯ ಸಂದರ್ಭದಲ್ಲಿ ಕೈ ಬಿಡಲಾಯ್ತು. ಈ ಪ್ರಯತ್ನವನ್ನು ಮೊದಲು ಮಾಡಿದವರು ಗೋವಿಂದ ಪೈ ಅವರು. ನಂತರ ಅಂತ್ಯಪ್ರಾಸದ ಬಳಕೆ ಹೆಚ್ಚಿತು. ಅಂತ್ಯಪ್ರಾಸಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರೆತಿರುವುದು ರಗಳೆಗಳಲ್ಲಿ. ಪ್ರತೀ ಪಾದದ ಕೊನೆಯಲ್ಲಿ ಒಂದೇ ಪದ ಪುನರಾವರ್ತನೆಯಾದಾಗ ಅದನ್ನು ಅಂತ್ಯಪ್ರಾಸ ಎನ್ನುವರು.

ಪ್ರಾಸವನ್ನು ಕುರಿತು ಸರ್ವಜ್ಞನ ವಚನವೊಂದು ಹೀಗಿದೆ:

          ಪ್ರಾಸವಿಲ್ಲದ ಪದವ ತಾಸು ಹಾಡಿದರೇನು
          ಸಾಸಿವೆ ಎಣ್ಣೆ ಹದ ಮಾಡಿ ಕಣ್ಣಿಂಗೆ
          ಸೂಸುಕೊಂಡಂತೆ ಸರ್ವಜ್ಞ ||

 ಪ್ರಾಸದಿಂದಾಗಿ ಪದ್ಯವನ್ನು ನೆನಪಿಟ್ಟುಕೊಳ್ಳಲು ಸಹಾಯವಾಗುತ್ತದೆ. ಪ್ರಾಸವು ಕಾವ್ಯದ ಸೌಂದರ್ಯವನ್ನು ಹೆಚ್ಚಿಸುತ್ತದೆ.

********
ಕೆ.ಎ.ಸೌಮ್ಯ
ಮೈಸೂರು

         

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)