ಶನಿವಾರ, ನವೆಂಬರ್ 23, 2013

ಅಚ್ಛೋದ ಮತ್ತು ವೈಶಂಪಾಯನ ಸರೋವರದ ವಿಶ್ಲೇಷಣೆ

ಕವಿ ಪರಿಚಯ:ಕುವೆಂಪು ಅವರು ಬೇಂದ್ರೆಯವರು ಹೇಳುವ ಹಾಗೆ “ಯುಗದ ಕವಿ; ಜಗದ ಕವಿ”. ಐರ್ಲೆಂಡಿನ ಕವಿ ಜೇಮ್ಸ್ ಕಸಿನ್ಸ್ ರವರ ಪ್ರೇರಣೆಯಿಂದಾಗಿ ಕವಿಯ ಬದುಕಿನ ದಿಕ್ಕೇ ಬದಲಾಯ್ತು. ತಮ್ಮ ಮೊದಲ ಕೃತಿಯಾದ “ಅಮಲನ ಕಥೆ”ಯನ್ನು ಕಿಶೋರಚಂದ್ರವಾಣಿ ಎಂಬ ಕಾವ್ಯನಾಮದಿಂದ ಹೊರತಂದವರು, ನಂತರ ಕುವೆಂಪು ಎಂಬ ಕಾವ್ಯನಾಮದಿಂದ ಬರೆದರು. 1922ರಿಂದ 1985ರವರೆಗೆ ನಿರಂತರವಾಗಿ ಬರೆದರು ಕುವೆಂಪು.       ಹೆಸರು                      :  ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ

       ಕಾವ್ಯನಾಮ                  :  ಕುವೆಂಪು

       ಜನನ                       :  1904

       ಜ್ಞಾನಪೀಠ ಬಂದ ವರ್ಷ    :  1968

       ಜ್ಞಾನಪೀಠ ಬಂದ ಕೃತಿ     :   ಶ್ರೀ ರಾಮಾಯಣ ದರ್ಶನಂಕುವೆಂಪು ಮೂಲತಃ ಕವಿ. ಕವಿಗಿಂತಲೂ ಅವರೊಬ್ಬ ಶ್ರೇಷ್ಠ ಕಾದಂಬರಿಕಾರರು ಎನ್ನುವುದು ಕೆಲವರ ಅಭಿಪ್ರಾಯ. ಆದರೆ ಕುವೆಂಪು ಶ್ರೇಷ್ಠ ಕವಿಯೂ ಹೌದು, ಶ್ರೇಷ್ಠ ಕಾದಂಬರಿಕಾರರೂ ಹೌದು ಮತ್ತು ವಿಮರ್ಶಕರೂ ಹೌದು. ಕುವೆಂಪು ಅವರ ವಿಮರ್ಶೆ ಇತರ ವಿಮರ್ಶೆಗಳಂತಲ್ಲ. ಅವುಗಳಲ್ಲಿ ದಾರ್ಶನಿಕತೆಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಕುವೆಂಪು ಅವರದ್ದು ದಾರ್ಶನಿಕ ವಿಮರ್ಶೆ. ಲೌಕಿಕ ಮತ್ತು ಪಾರಮಾರ್ಥಿಕ ಎರಡಕ್ಕೂ ಸೇತುವೆ ಕಟ್ಟಿ ಕೊಟ್ಟವರು ಕುವೆಂಪು. ಅವರ ಬರಹಗಳು ಆಧ್ಯಾತ್ಮ ಮತ್ತು ವೈಚಾರಿಕತೆಯಿಂದ ಕೂಡಿರುತ್ತವೆ. ವಿಷಯಗಳ ತಲಸ್ಪರ್ಶಿ ಅಧ್ಯಯನ, ತಾತ್ವಿಕ ವಾದ ಮಂಡನೆ, ಉಚಿತ ಪುರಾವೆಗಳಿಂದ ಸಮರ್ಥನೆ, ನಿಖರವಾದ ನಿಲುವು ಇವು ಕುವೆಂಪು ಅವರ ವಿಮರ್ಶಾ ಲೇಖನದ ಲಕ್ಷಣವಾಗಿದೆ.ಸರೋವರದ ಸಿರಿಗನ್ನಡಿಯಲ್ಲಿ:ಈ ಲೇಖನದಲ್ಲಿ ಕುವೆಂಪು ಅವರು ಎರಡು ಸರೋವರಗಳನ್ನು ಪ್ರಸ್ತಾಪಿಸಿದ್ದಾರೆ. ಕನ್ನಡದ ಕೆಲವು ಕಾವ್ಯಗಳಲ್ಲಿ ಈ ಸರೋವರಗಳು ಹೇಗೆ ವರ್ಣಿತವಾಗಿವೆ ಎಂದು ವಿವರಿಸಿದ್ದಾರೆ. ಆ ಸರೋವರಗಳು ಯಾವುವು ಎಂದರೆ;       ಅ) ಅಚ್ಛೋದ ಸರೋವರ

              1)ಕರ್ಣಾಟಕ ಕಾದಂಬರಿ (ನಾಗವರ್ಮ)       ಆ) ವೈಶಂಪಾಯನ ಸರೋವರ

              1) ವಿಕ್ರಮಾರ್ಜುನ ವಿಜಯ (ಪಂಪ)

              2) ಸಾಹಸಭೀಮ ವಿಜಯ (ರನ್ನ)

              3) ಕರ್ಣಾಟ ಭಾರತ ಕಥಾಮಂಜರಿ (ಕುಮಾರವ್ಯಾಸ)

      

ಆಚ್ಛೋದ ಸರೋವರವು ನಾಗವರ್ಮನ “ಕರ್ಣಾಟಕ ಕಾದಂಬರಿ”ಯಲ್ಲಿ ಬಂದರೆ, ವೈಶಂಪಾಯನ ಸರೋವರವು ಸಾಹಸಭೀಮ ವಿಜಯ, ವಿಕ್ರಮಾರ್ಜುನ ವಿಜಯ ಮತ್ತು ಕರ್ಣಾಟ ಭಾರತ ಕಥಾಮಂಜರಿಯಲ್ಲಿ ಬಂದಿದೆ.

       ಆಚ್ಛೋದ ಮತ್ತು ವೈಶಂಪಾಯನ ಸರೋವರಗಳು ಕೇವಲ ಪ್ರಾಕೃತಿಕ ವಿಶೇಷಗಳಾಗಿ ನಮ್ಮ ಕವಿಗಳಿಗೆ ಕಂಡಿಲ್ಲ. ಹಾಗೆ ಅವು ವರ್ಣಿತವಾಗಿಯೂ ಇಲ್ಲ. ಬದಲಿಗೆ ಅವು ಜೀವಂತ ಪಾತ್ರಗಳಾಗಿ ಕಾಣಿಸಿಕೊಂಡಿವೆ. ಅವುಗಳಿಗೊಂದು ಪುರುಷಾಕಾರವಿದೆ.ಅ) ಅಚ್ಛೋದ ಸರೋವರದ ವರ್ಣನೆ:“ಕರ್ಣಾಟಕ ಕಾದಂಬರಿ”ಯಲ್ಲಿ ಬರುವ ಅಚ್ಛೋದ ಸರೋವರದ ವರ್ಣನೆಯನ್ನು ಕವಿ ನಾಗವರ್ಮ ಹೇಗೆ ಮಾಡಿದ್ದಾನೆ ಎಂದರೆ, ಓದುಗರಿಗೆ ಅದೊಂದು ‘ಜಲರೂಪಿಯೂ ಸರೋವರ ವೇಷಿಯೂ ಆದ ಬೃಹದ್ದೇವತೆಯಂತೆ’ ಭಾಸವಾಗುತ್ತದೆ. ಕಥೆಯ ಹಾದಿಯಲ್ಲಿ ಪ್ರಾಸಂಗಿಕವಾಗಿ ಕಣ್ಣಿಗೆ ಬೀಳುವ ಈ ನಿಸರ್ಗದ ಭಾಗವನ್ನು ಅವಸರದಿಂದಾಗಲೀ, ಉದಾಸೀನತೆಯಿಂದಾಗಲೀ ಕವಿ ವರ್ಣಿಸುವುದಿಲ್ಲ. ಒಬ್ಬ ಪೂಜ್ಯ ವ್ಯಕ್ತಿಗೆ ಅರ್ಹವಾದ ಗೌರವಪೂರ್ವಕವಾದ ಪೀಠಿಕೆಗಳನ್ನು ಹಾಕಿಯೇ ಸರೋವರದ ದರ್ಶನ ಮಾಡಿಸುತ್ತಾನೆ. ಹೀಗೆ ಗೌರವ ಪಡೆಯುವ ಅರ್ಹತೆ ಸರೋವರಕ್ಕೂ ಇದೆ. ಅದನ್ನು ವರ್ಣಿಸುವ ಅಗತ್ಯ ಮತ್ತು ಅರ್ಹತೆ ಕವಿಗೂ ಇದೆ.

       ಏಕೆಂದರೆ, ಕವಿಯ ಅಂತರ್ ದೃಷ್ಟಿಗೆ ಅಚ್ಛೋದ ಸರೋವರವು ಕೇವಲ ನೀರಿನ ವಿಸ್ತಾರವಲ್ಲ. ಕಾದಂಬರಿ ಕಾವ್ಯದ ಕಥೆಯಲ್ಲಿ ಅದು ಮುಖ್ಯ ಪಾತ್ರ ವಹಿಸುತ್ತದೆ. ಆ ಸರೋವರದ ಸುಂದರ ತೀರದಲ್ಲಿಯೇ ಕಾದಂಬರಿ ಕಥೆಯ ಅಂಕುರಾರ್ಪಣವಾಗುತ್ತದೆ. ಪುಂಡರೀಕ-ಮಹಾಶ್ವೇತೆಯರ ಪ್ರಥಮ ದರ್ಶನ ನಡೆಯುವುದು ಈ ಸರೋವರದ ತಟದಲ್ಲಿಯೇ. ನಂತರ ಕಥೆಯ ಎಷ್ಟೋ ಭಾಗ ಈ ನದಿಯ ತೀರದಲ್ಲಿಯೇ ನಡೆಯುತ್ತದೆ. ಈ ಕಥಾನಕದಲ್ಲಿ ಅಚ್ಛೋದ ಸರೋವರವು ವಹಿಸುವ ಪಾತ್ರವನ್ನು ಲೇಖಕರು ವಿವರಿಸಿದ್ದಾರೆ.ಕಥಾಭಾಗ:  ದಿಗ್ವಿಜಯಕ್ಕೆಂದು ಹೋಗಿದ್ದ ಉಜ್ಜಯನಿಯ ಯುವರಾಜ ಚಂದ್ರಾಪೀಡನು ಕೈಲಾಸಪರ್ವತದ ಬಳಿ ತನ್ನ ಸೈನ್ಯದೊಂದಿಗೆ ಬೀಡು ಬಿಟ್ಟಿರುತ್ತಾನೆ. ಒಮ್ಮೆ ಬೇಟೆಯ ವಿನೋದದಲ್ಲಿ ಪರಿವಾರದವರೊಡನೆ ಸುತ್ತುತ್ತಿರುವಾಗ ಜೋಡಿ ಕಿನ್ನರಗಳನ್ನು ಕಂಡು ಅವುಗಳ ಬೆನ್ನಟ್ಟುತ್ತಾನೆ. ಇಂದ್ರಾಯುಧವೆಂಬ ಅವನ ಕುದುರೆಯ ಸಮನಾಗಿ ಓಡಲಾಗದೇ ಪರಿವಾರದವರು ಹಿಂದುಳಿಯುತ್ತಾರೆ. ಕಿನ್ನರಗಳು ಕೈಲಾಸ ಪರ್ವತದ ಶಿಖರವನ್ನೇರಿ ಮರೆಯಾಗುತ್ತವೆ. ಆಗ ಚಂದ್ರಾಪೀಡ ಬೇಸರದಿಂದ ಹಿಂತಿರುಗುತ್ತಿರುತ್ತಾನೆ. ಆಯಾಸಗೊಂಡ ಕುದುರೆಗೆ ನೀರು ಕುಡಿಸಿ, ತಾನೂ ವಿಶ್ರಾಂತಿ ಪಡೆದು ಹೋಗೋಣವೆಂದು ನೀರ್ದಾಣವನ್ನು ಹುಡುಕುತ್ತಿರುವಾಗ ಅವನ ಕಣ್ಣಿಗೆ ಬೀಳುವುದೇ ಅಚ್ಛೋದ ಸರೋವರ. ಆ ಸರೋವರವನ್ನು ಚಂದ್ರಾಪೀಡ ಕಂಡದ್ದು ಇದೇ ಮೊದಲ ಬಾರಿ. ಅದು ಅನಿರೀಕ್ಷಿತ.. ಆಶ್ಚರ್ಯಕರ.. ಸಂಪೂರ್ಣ ಅಪರಿಚಿತ !!

       ಕುದುರೆ ಏರಿ ಪರ್ವತ ಶ್ರೇಣಿಯ ಕಂದರದೊಳಗಿಂದ ಇಳಿದು-ಏರಿ ಮುಂದೆ ಬರುತ್ತಿದ್ದ ಚಂದ್ರಾಪೀಡ ಅದೊಂದು ದಿಣ್ಣೆಯನ್ನೇರುತ್ತ ಅದರ ನೆತ್ತಿಯನ್ನು ಮುಟ್ಟಿದೊಡನೆ ಸರೋವರ ಕಾಣಿಸುತ್ತದೆ. ಒಮ್ಮೆಲೇ ‘ಎಲೆ!’ ಎಂಬ ಉದ್ಗಾರ ಹೊರಡಿಸುತ್ತಾನೆ ಕವಿ.

       ಆ ನೀರಿನ ವಿಶಾಲ ಹರವು ಬಿಸಿಲನ್ನು ಪ್ರತಿಬಿಂಬಿಸಿ ಥಳಥಳನೆ ಕರಗಿದ ಬೆಳ್ಳಿಯಂತೆ ರಾರಾಜಿಸುತ್ತಿರುತ್ತದೆ. ಆದರೆ ಬೆಳ್ಳಿ ಅಲ್ಲಿಗೆ ಎಲ್ಲಿಂದ ಬರಬೇಕು? ಬೆಳ್ಳಿಯ ಬೆಟ್ಟವೇನೋ (ಕೈಲಾಸ) ಬಳಿಯಿದೆ.    ಆದರೆ ಅದು ಕರಗುವುದೆಂತು? ಯಾವ ದಿವ್ಯಾಗ್ನಿಯಿಂದ ಅದು ಕರಗಬಲ್ಲುದು? ಇನ್ಯಾವ ದಿವ್ಯಾಗ್ನಿ? ಅದು ಹರನ ಮೂರನೆಯ ಕಣ್ಣು. ಆದರೆ ಗೌರಿಯೊಂದಿಗೆ ವಾಸಿಸುವ ಈ ಬೆಳ್ಳಿಯ ಬೆಟ್ಟವನ್ನು ಮುಕ್ಕಣ್ಣ ಏಕೆ ಕರಗಿಸಿಯಾನು? ಹಾಗೆಂದು ಕವಿ ಬೇರೆ ಯೋಚಿಸುತ್ತಾನೆ.

ಗೌರಿಯೊಡನೆ ಸರಸ-ಸಲ್ಲಾಪದಲ್ಲಿ ಮೈ ಮರೆತಿರುವ ಮಹೇಶ್ವರ ಯಾವುದೋ ವಿನೋದಕ್ಕೆ ನಗುತ್ತಾನೆ. ಅದು ರುದ್ರ ನಗೆ. ಹ್ಹ ಹ್ಹ ಹ್ಹ ಎಂದು ಲೋಕಗಳನ್ನು ಪ್ರತಿಧ್ವನಿಸುತ್ತದೆ. ಆ ರುದ್ರ ನಗೆಯೇ ಜಲವಾಯ್ತು ಎನ್ನುತ್ತಾನೆ. ಏಕೆಂದರೆ ಆ ಸರೋವರದ ಅಲೆಗಳು ಅಪ್ಪಳಿಸುವಾಗ ಬರುವ ಸದ್ದು ಹಾಗೆಯೇ ಇದೆ. ಹ್ಹ ಹ್ಹ ಹ್ಹ ಎಂದು ಕೇಳಿ ಬರುವ ರುದ್ರನ ಅಟ್ಟಹಾಸದಂತೆ.

ಕುದುರೆಯು ಸರೋವರದ ಬಳಿ ಮತ್ತಷ್ಟು ಸಾಗುತ್ತದೆ. ಚಂದ್ರಾಪೀಡನಿಗೆ ಆಗ ಸರೋವರದ ಹರವು ಎಲ್ಲೆ ಮೀರಿದ ಹಾಗೆ ಕಾಣುತ್ತದೆ. ಹೀಗೆ ಬರುವ ಅಚ್ಛೋದ ಸರೋವರದ ವರ್ಣನೆ ಕಡೆಗೆ ಗಂಭೀರವಾಗಿ ಪೂಜ್ಯ ಭಾವನೆ ತರುತ್ತದೆ. ಸರೋವರಕ್ಕೆ ಸ್ವಲ್ಪ ಸ್ವಲ್ಪವೇ ಹತ್ತಿರ ಬರುತ್ತಿದ್ದ ಚಂಡ್ರಾಪೀಡನಿಗೆ ಪ್ರತೀ ಬಾರಿಯೂ ಸರೋವರ ಭಿನ್ನವಾಗಿ ಕಾಣಿಸುತ್ತಿರುತ್ತದೆ. ಅಲ್ಲದೇ ಪ್ರತೀಬಾರಿಯೂ ಸರೋವರವು ಮೊದಲಿಗಿಚಿತ ಭವ್ಯವಾಗಿ ಬೆಳೆಯುತ್ತಾ ಪರಿಣಮಿಸುವುದನ್ನು ಕವಿ ಸುಂದರವಾಗಿ ವರ್ಣಿಸಿದ್ದಾರೆ.ವೈಶಂಪಾಯನ ಸರೋವರದ ವರ್ಣನೆ:

ವೈಶಂಪಾಯನ ಸರೋವರದ ವರ್ಣನೆ ಸಾಹಸಭೀಮ ವಿಜಯ, ವಿಕ್ರಮಾರ್ಜುನ ವಿಜಯ ಮತ್ತು ಕರ್ಣಾಟ ಭಾರತ ಕಥಾಮಂಜರಿಯಲ್ಲಿ ಬರುತ್ತದೆ.ವಿಕ್ರಮಾರ್ಜುನ ವಿಜಯ:

ಹದಿನೇಳು ದಿನಗಳವರೆಗಿನ ಮಹಾಭಾರತ ಯುದ್ಧದಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡು ಏಕಾಂಗಿಯಾದ ದುರ್ಯೋಧನ ಮಾರನೇ ದಿನದ ಯುದ್ಧಕ್ಕೆ ಹೊರಡುವ ಮುನ್ನ ಭೀಷ್ಮರ ಬಳಿಗೆ ಆಶೀರ್ವಾದ ಪಡೆಯಲು ಹೋಗುತ್ತಾನೆ. ಆಗ ಭೀಷ್ಮರು ಅವನಿಗೆ ಒಂದು ದಿನದ ಮಟ್ಟಿಗೆ ಪಾಂಡವರಿಗೆ ಕಾಣದ ಹಾಗೆ ಅಡಗಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಛಲವಾದಿಯಾದ ದುರ್ಯೋಧನ ಈ ಸಲಹೆಯನ್ನು ಒಪ್ಪಿಕೊಂಡು ಜಲಸ್ತಂಭನ ಮಂತ್ರ ಬಲದಿಂದ ನೀರಿನಲ್ಲಿ ಅಡಗಿಕೊಳ್ಳಲು ಸರೋವರವೊಂದಕ್ಕೆ ಹೋಗುತ್ತಾನೆ. ಅ ಸರೋವರವೇ ವೈಶಂಪಾಯನ ಸರೋವರ.

       ಸರೋವರದಲ್ಲಿ ಅಡಗಲು ಬಂದಿದ್ದ ದುರ್ಯೋಧನನ ಸ್ಥಿತಿಯನ್ನು ಲೇಖಕರು ಹಿಡಿದಿಟ್ಟಿದ್ದಾರೆ. ರಾಗ-ದ್ವೇಷಗಳಿಂದ ಕೂಡಿ ಜರ್ಜರಿತನಾಗಿರುವ ದುರ್ಯೋಧನನನ್ನು ಕೊಳದಲ್ಲಿ ಮುಳುಗಿಸಲಿರುವ ಪಂಪನು ನಾಗವರ್ಮನಂತೆ ಚಿತ್ರಿಸಲು ಸಾಧ್ಯವೇ?

ಏಕೆಂದರೆ ಪಂಪನಿಗೆ ನಾಗವರ್ಮನಂತೆ ಕೊಳದ ಚೆಲುವನ್ನು ಆಶ್ಚರ್ಯವಾಗಿ, ಭೌವ್ಯವಾಗಿ ವiುಂತಾಗಿ ಕಾಣುವ ಅವಕಾಶವೇ ಒದಗಿ ಬಂದಿಲ್ಲ. ಅವನು ಕೊಳವನ್ನು ಕಾಣುವ ಪರಿಯೇ ಬೇರೆ. ಅಲ್ಲಿ ಅವನು ಕಂಡದ್ದು ಪ್ರಶಾಂತತೆಯನ್ನಲ್ಲ.. ಕ್ಷೋಭೆಯನ್ನು!

ಪಂಪ ವೈಶಂಪಾಯನ ಸರೋವರವನ್ನು ಹೀಗೆ ವರ್ಣಿಸುತ್ತಾನೆ:

“ಆ ಸರೋವರವು ಪಾತಾಳ ಬಿಲಕ್ಕೆ ಬಾಗಿಲಾಗಿಯೂ, ಘೋರಾಂಧಕಾರಕ್ಕೆ ಮಾಡಿದ ಕೂಪವಾಗಿಂiÉÀು ಇತ್ತು” ಎಂದು ಹೇಳುತ್ತಾನೆ ಪಂಪ.ಇದನ್ನು ಕುವೆಂಪು ಅವರು ಹೀಗೆ ಹೇಳುತ್ತಾರೆ:

“ಪಂಪನು ಕೊಳವನ್ನು ವರ್ಣಿಸಲು ಉಪಯೋಗಿಸಿರುವ ರೂಪಕಗಳು ದುರ್ಯೋಧನನ ಅಂತಃಸ್ಥಿತಿಗೆ ಕೆತ್ತಿದ ಪ್ರತಿಮೆಯಂತಿದೆ”ಸರೋವರ ಎಷ್ಟು ಸುಂದರವಾಗಿದೆಯೋ ಅದರ ಚೆಲುವಿನಲ್ಲಿ ದುರ್ಯೋಧನ ಅನಾಸಕ್ತ. ಅಷ್ಟೇ ಅಲ್ಲ.. ಕವಿಗೂ ಅದು ಅಪ್ರಸ್ತುತ. ಸರೋವರ ಹೇಗೆ ಕಂಡಿತು ಎಂದು ರೂಪಕಗಳಿಂದ ವರ್ಣಿಸಿದರೂ ಮುಖ್ಯವಾದದ್ದು ಅದರಿಂದ ಹೊಮ್ಮುವ ಧ್ವನಿ. “ಪಾತಾಳ ಬಿಲಕ್ಕೆ ಬಾಗಿಲ್” ಎಂಬಲ್ಲಿ ಕೊಳ ಆಳವಾಗಿತ್ತು ಎಂದಲ್ಲ. ಅದು ಸೂಚಿಸುವುದು ಕುರು ಚಕ್ರವರ್ತಿಯ ಪತನವನ್ನು. ಅವನ ಪತನ ಪಾತಾಳದವರೆಗೂ ಇಳಿಯುತ್ತದೆ ಎಂದು ಅದು ಸಾರುತ್ತದೆ. “ಘೋರಾಂಧಕಾರಕ್ಕೆ ಮಾಡಿದ ಕೂಪ” ಎಂಬಲ್ಲಿ ಆ ಪತನದ ಅಪಕೀರ್ತಿ, ತಮಸ್ಸು, ಅವಿವೇಕ, ಅಂಧಕಾರ ಮತ್ತು ಅದರ ಘೋರತೆಯನ್ನು ಇದು ಪ್ರತಿಧ್ವನಿಸುತ್ತದೆ.

ಕುವೆಂಪು ಅವರು ಮೇಲಿನ ಎರಡು ಅಲಂಕಾರಗಳು ಹೇಗೆ ಕೇವಲ ಅಲಂಕಾರಗಳು ಮಾತ್ರವಲ್ಲ ಎಂದು ವಿವರಿಸುತ್ತಾರೆ. ಪಾತಾಳಕ್ಕೆ ಬಾಗಿಲ್ ಮುಂತಾದ ರೂಪಕಗಳು ಉತ್ಪ್ರೇಕ್ಷೆಯಾಗದೇ, ಅವು ಸಹಜ ವಿವರಗಳು ಎಂದು ಲೇಖಕರು ವ್ಯಾಖ್ಯಾನಿಸುತ್ತಾರೆ. ದುರ್ಯೋಧನನನ್ನು ಬಾರೆದಿರೆಂದು ಕೊಳದ ಹಕ್ಕಿಗಳು ಕೂಗಿಕೊಂಡ ಕ್ರಿಯೆಯು ಕಾವ್ಯದ ಸಂದರ್ಭಕ್ಕೆ ಹೊಂದಿಕೊಂಡಿದೆ. ಕೊಳದ ಬಳಿ ಯಾವುದೇ ವ್ಯಕ್ತಿ ಹೋದರೂ ಅವು ಕೂಗಿಕೊಂಡು ದೂರ ಹೋಗುವುದು ಸಾಮಾನ್ಯ ಪ್ರಕ್ರಿಯೆ. ದುರ್ಯೋಧನನ ಆಗಮನವಾದಾಗಲೂ ಹಕ್ಕಿಗಳು ಕೂಗಿಕೊಂಡಿವೆ. ಬಂದವನು ದುರ್ಯೋಧನ ಎಂದಾಗಲೀ, ಅವನು ಬಂದ ಕಾರಣವಾಗಲೀ ಅವುಗಳಿಗೆ ತಿಳಿದಿಲ್ಲ. ಆದರೆ ಪಂಪ ಈ ಸಹಜ ಪ್ರಕ್ರಿಯೆಯನ್ನು ಪ್ರತಿಮೆ ಮಾಡಿದ್ದಾನೆ. ಏನೆಂದರೆ, “ಪಕ್ಷಿಗಳು ದುರ್ಯೋಧನನ ಆಗಮನದ ರಹಸ್ಯ ತಿಳಿದವರಂತೆ, ಮುಂದಾಗಬಹುದಾದ ಭೀಕರ ಪರಿಣಾಮವನ್ನು ಬಲ್ಲೆವು ಎಂಬಂತೆ ಕೂಗಿಕೊಳ್ಳುತ್ತವೆ” ಎನ್ನುತ್ತಾನೆ ಪಂಪ.

ಇದೆಂತಹ ಅದ್ಭುತ ಕಲ್ಪನೆ !!!!!ಅಚ್ಛೋದ-ವೈಶಂಪಾಯನ ಒಂದು ವಿಶ್ಲೇಷಣೆ:       ಅಚ್ಛೋದ ಸರೋವರ ಚಂದ್ರಾಪೀಡನಿಗೆ ಹಿತವಾದ ಅನುಭವವನ್ನು ಕೊಡುವುದರ ಮೂಲಕ ಅವನನ್ನು ಆಹ್ವಾನಿಸಿದಂತೆ ನಾಗವರ್ಮ ವರ್ಣಿಸಿದ್ದಾನೆ. ಇದನ್ನು ಪಂಪ ಕವಿಯು ವೈಶಂಪಾಯನ ಸರೋವರವನ್ನು ವರ್ಣಿಸಿರುವ ರೀತಿಯ ಜೊತೆಗೆ ತುಲನೆ ಮಾಡಿ, ಇಬ್ಬರು ಕವಿಗಳು ವರ್ಣನೆಗೆ ತೊಡಗಿದ ವಸ್ತು ಸ್ಥಿತಿ, ಸರೋವರಗಳು ವಹಿಸಿದ ಪಾತ್ರ ಇವುಗಳನ್ನು ಲೇಖಕರು ವಿವರಿಸಿದ್ದಾರೆ.

       ಕಾದಂಬರಿಯ ನಾಯಕ ಚಂದ್ರಾಪೀಡ ಮತ್ತು ಮಹಾಭಾರತದ ಪ್ರತಿನಾಯಕ ದುರ್ಯೋಧನ ಇಬ್ಬರೂ ಸರೋವರವನ್ನು ಬಳಸಿಕೊಳ್ಳುವ ಉದ್ದೇಶ ಭಿನ್ನವಾದುದು.ಹೇಗೆಂದರೆ;1)ಚಂದ್ರಾಪೀಡನಿಗೆ ಅಚ್ಛೋದ ಸರೋವರ ಅಪರಿಚಿತವಾದರೆ ದುರ್ಯೋಧನನಿಗೆ ವೈಶಂಪಾಯನ ಪೂರ್ವ ಪರಿಚಿತ. ಅದನ್ನವನು ಅನೇಕ ಬಾರಿ ಕಂಡಿದ್ದಿರಬಹುದು.2)ಚಂದ್ರಾಪೀಡನಿಗೆ ಸರೋವರ ಬೇಕಾದಿದ್ದಿದ್ದು ವಿಶ್ರಾಂತಿಗಾದರೆ, ದುರ್ಯೋಧನನಿಗೆ ಸರೋವರ ಬೇಕಾದಿದ್ದಿದ್ದು ತಲೆಮರೆಸಿಕೊಳ್ಳುವುದಕ್ಕೆ.ಹೀಗಾಗಿ ಈ ಸಂದರ್ಭದಲ್ಲಿ ಪಂಪ ಒಂದಿನಿತೂ ಎಚ್ಚರ ತಪ್ಪದೇ ವರ್ತಿಸಿದ್ದಾನೆ. ದುರ್ಯೋಧನನಿಗೆ ಆ ಸಮಯದಲ್ಲಿ ಸರೋವರ ಹೇಗೆ ಕಂಡಿದ್ದಿರಬಹು ದು ಎಂಬುದರಲ್ಲಿ ಮಾತ್ರ ಅವನು ಆಸಕ್ತ. ಸರೋವರದ ಸೌಂದರ್ಯದಲ್ಲಿ ದುರ್ಯೋಧನನಿಗೆ ಆಸಕ್ತಿಯಿಲ್ಲ. ಅಚ್ಛೋದ ಸರೋವರದಿಂದ ಬೀಸುವ ಗಾಳಿ ಚಂದ್ರಾಪೀಡನನ್ನು ಸೆಳೆದರೆ, ವೈಶಂಪಾಯನ ಸರೋವರದಲ್ಲಿದ್ದ ಹಕ್ಕಿಗಳು “ಇತ್ತ ಬಾರದಿರು” ಎಂಬಂತೆ ಹುಯಿಲಿಡುತ್ತವೆ.

ಕುವೆಂಪು ಅವರು ಎರಡೂ ಸರೋವರಗಳ ಸ್ವರೂಪ-ಸ್ವಭಾವಗಳು ಉತ್ತರ-ದಕ್ಷಿಣ ಧೃವಗಳಂತೆ ಭಿನ್ನ ದಿಕ್ಕಿಗೆ ಮನೆ ಮಾಡಿಕೊಂಡಿರುವುದನ್ನು ನಮಗೆ ಮನನ ಮಾಡಿಸುತ್ತಾರೆ.ವ್ಯತ್ಯಾಸಗಳು ಹೀಗಿವೆ:

  
       ಅಚ್ಛೋದ               ವೈಶಂಪಾಯನ

 1)ಶಾಂತಿಯ ಕುಟೀರ        1)ಅಶಾಂತಿಯ ರಣಕ್ಷೇತ್ರ

 2)ತಪೆÇೀಮಯ             2)ರಜೋಮಯ

 3)ಪುಣ್ಯವೇದಿಕೆ              3)ರಕ್ತರಂಗ

 4)ಶಾಂತಿ ದಿವ್ಯ              4) ರೌದ್ರ ಭವ್ಯಉಪಸಂಹಾರ:ಸರೋವರದ ಸಿರಿಗನ್ನಡಿಯಲ್ಲಿ ಎಂಬ ಲೇಖನದಲ್ಲಿ ಕುವೆಂಪುರವರು ಎರಡು ಸರೋವರಗಳ ವರ್ಣನೆಯನ್ನು ವಿವರಿಸಿದ್ದಾರೆ. ತುಲನಾತ್ಮಕವಾಗಿ ವಿಶ್ಲೇಷಿಸಿದ್ದಾರೆ. ಸರೋವರದ ವರ್ಣನೆ ಎಂದರೆ ಕೇವಲ ಸರೋವರದ ವರ್ಣನೆಯಾಗದೇ ಆಯಾ ಕಥಾ ಸಂದರ್ಭಕ್ಕೆ ಪೂರಕವಾಗಿ ಪ್ರಮುಖ ಪಾತ್ರವಾಗಿ ಪ್ರತಿನಿಧಿಸಿರುವ ಸರೋವರಗಳ ವರ್ಣನೆಯಾಗಿದೆ. ಇವು ಕವಿಯ ಪ್ರತಿಭೆಗೆ ಹಿಡಿದ ಕನ್ನಡಿಯೂ ಆಗಿದೆ ಎಂದು ಲೇಖಕರು ಸೋದಾಹರಣವಾಗಿ ವಿವರಿಸಿದ್ದಾರೆ.*      *      *      *      *      *      *      *


** “ಸರೋವರದ ಸಿರಿಗನ್ನಡಿಯಲ್ಲಿ” ವ್ಯಕ್ತವಾಗಿರುವ ಕುವೆಂಪುರವರ ದೃಷ್ಟಿ ಧೋರಣೆಗಳನ್ನು ನಿರೂಪಿಸಿ **

** (June 2010 and June 2011 and June 2013)  **


3 ಕಾಮೆಂಟ್‌ಗಳು:

 1. ಸುಂದರ ವಿವರಣೆ. ನಿಮ್ಮ ಎಲ್ಲಾ ಲೇಖನಗಳನ್ನೂ ಓದಿದೆ. ಮನೋಜ್ಞವಾಗಿದೆ. ಧನ್ಯವಾದ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಮಾನ್ಯರೆ,
   ತಮ್ಮ ಅಮೂಲ್ಯವಾದ ಕಾಮೆಂಟಿಗೆ ನನ್ನ ಧನ್ಯವಾದಗಳು. ನಿಮ್ಮ ಭಾವಕಿರಣ ಈಶ್ವರ ತತ್ವ ಬ್ಲಾಗುಗಳು ಬಹಳ ಚೆನ್ನಾಗಿದೆ.
   ಹೀಗೆಯೇ ನಿಮ್ಮ ಬ್ಲಾಗ್ ವಾಚನ ಮುಂದುವರೆಯಲಿ ಅಂತ ಕೋರುವೆ.

   ಸೌಮ್ಯ

   ಅಳಿಸಿ
 2. ನಿಮ್ಮ ಈ ಸರಳವಾದ ಲೇಖನ ಐಚ್ಛಿಕ ಕನ್ನಡ ಪರೀಕ್ಷೆಗೆ ಅನುಕೂಲವಾಯಿತು, ಧನ್ಯವಾದಗಳು 🙏 From ಬೆಳಗಾವಿ

  ಪ್ರತ್ಯುತ್ತರಅಳಿಸಿ