ಅಕ್ಕಮಹಾದೇವಿಯ (Akka Mahadevi) ಕವನಗಳ ವೈಶಿಷ್ಟ್ಯ : ಎಂ.ಎ.ಕನ್ನಡ






ಅಕ್ಕಮಹಾದೇವಿ ಮೂಲತಃ ಆಧ್ಯಾತ್ಮ ಸಾಧಕಳು. ತನ್ನ ಇಷ್ಟ ದೈವವಾದ ಚೆನ್ನಮಲ್ಲಿಕಾರ್ಜುನನನ್ನು ಸೇರುವುದೇ ಅವಳ ಬಾಳಿನ ಪರಮ ಗುರಿಯಾಗಿತ್ತು. ಅದಕ್ಕಾಗಿಯೇ ಆಕೆ ಬಾಲ್ಯದಿಂದಲೂ ಹಂಬಲಿಸಿದಳು. ಅವಳ ಆ ಹಂಬಲಿಕೆಯ ಪ್ರತಿಬಿಂಬವೇ ಈ ವಚನಗಳು.

ಈ ದಾರಿಯಲ್ಲಿ ಸಾಗುವಾಗ ಅನೇಕ ಅಡ್ಡಿ-ಆತಂಕಗಳನ್ನು ದಿಟ್ಟೆಯಾಗಿ ಎದುರಿಸಿದವಳು ಅಕ್ಕ. ಆಕೆಯದು ಸಿದ್ಧಿಸಿಕೊಂಡ ವೈರಾಗ್ಯವೇ ಹೊರತು ಸಿದ್ಧ ವೈರಾಗ್ಯವಲ್ಲ. ಸಿದ್ಧಿಯ ಮೆಟ್ಟಿಲನ್ನು ಏರುವಾಗ ಸಹಜವಾದ ಘರ್ಷಣೆ ಆಕೆಗಿತ್ತು. ಅದಕ್ಕೆಂದೇ ಅಕ್ಕ ತನ್ನನ್ನು ತಾನೇ ಕಠೋರ ವಿಮರ್ಶೆಗೆ ಒಳಪಡಿಸಿಕೊಂಡು ಅದನ್ನು ತನ್ನ ವಚನಗಳಲ್ಲಿ ಯಾವುದೇ ಹಿಂಜರಿಕೆ ಇಲ್ಲದೇ ಅಭಿವ್ಯಕ್ತಿಸಿದ್ದಾಳೆ. ತನ್ನನ್ನು ಈ ಮತ್ರ್ಸದ ಸೆಳೆತದಿಂದ ಕಾಪಾಡುವಂತೆ ಚೆನ್ನಮಲ್ಲಿಕಾರ್ಜುನನಲ್ಲಿ ಮೊರೆ ಹೋಗುತ್ತಾಳೆ. 


ತೆರಣಿಯ ಹುಳು
ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲನ್ನು ತಾನೇ
ಸುತ್ತಿ ಸುತ್ತಿ ಸಾವ ತೆರನಂತೆ”

ಈ ವಚನದಲ್ಲಿ ಭಕ್ತಿಯ ಕ್ರಿಯಾಹೀನತೆಯ ಬಗ್ಗೆ ಹೇಳಲಾಗಿದೆ. ಆದರೆ ತನ್ನದು ಅನನ್ಯವಾದ ಭಕ್ತಿ, ತಾನು ಬೇರೆಯಲ್ಲ, ಚನ್ನಮಲ್ಲಿಕಾರ್ಜುನ ಬೇರೆಯಲ್ಲ ಎಂಬ ಅರಿವು ತನಗಿದೆ ಎನ್ನುತ್ತಾಳೆ. 

ಅಕ್ಕಮಹಾದೇವಿ ಪ್ರಕೃತಿ ಪ್ರೇಮಿ. ಪ್ರಕೃತಿಯ ಚರಾಚರ ವಸ್ತುಗಳನ್ನೂ ತನ್ನ ಕವನದಲ್ಲಿ ದೃಷ್ಟಾಂತವನ್ನಾಗಿಸುತ್ತಾಳೆ. 

ಈಳೆ, ನಿಂಬೆ, ಮಾವು ಮೊದಲಕ್ಕೆ 
ಹುಳಿನೀರನೆರೆದವರಾರಯ್ಯ?
ತೆಂಗು, ಹಲಸು, ಬಾಳೆ, ನಾರಿವಾಳಕ್ಕೆ
ಸಿಹಿಳಿನೀರನೆರೆದವರಾರಯ್ಯ?”

ಮೇಲಿನ ವಚನದಲ್ಲಿ ಅವಳ ನಿಸರ್ಗ ಪ್ರೇಮ ಕಾಣುತ್ತದೆ. ಎಳನೀರಿನಲ್ಲಿ ನೀರನ್ನು ಇಟ್ಟವರು ಯಾರು? ಮಾವಿನಲ್ಲಿ ಹುಳಿಯನ್ನು ಇಟ್ಟವರು ಯಾರು? ಎಂದು ಪ್ರಶ್ನಿಸುತ್ತಾ ‘ದೇವರ’ ಇರುವನ್ನು ಸದ್ದಿಲ್ಲದೇ ಪ್ರಕಟಗೊಳಿಸುತ್ತಾಳೆ. 

ತನ್ನ ಇಷ್ಟ ದೈವವಾದ ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತಾ ಸಾಗುವಾಗ ದಾರಿಯಲ್ಲಿ ಎದುರಾಗುವ ಪ್ರಾಣಿ-ಪಕ್ಷಿಗಳಲ್ಲಿ ಅವಳು ಅವನ ಇರುವನ್ನು ಪ್ರಶ್ನಿಸಿರುವುದು ಭಾವಗೀತೆಯ ಧಾಟಿಯಲ್ಲಿದೆ. 

ಚಿಲಿಮಿಲಿ ಎಂದೋದುವ ಗಿಳಿಗಳಿರಾ
ನೀವು ಕಾಣಿರೇ.. ನೀವು ಕಾಣಿರೇ..
ಸ್ವರವೆತ್ತಿ ಪಾಡುವ ಕೋಗಿಲೆಗಳಿರಾ..
ನೀವು ಕಾಣಿರೇ.. ನೀವು ಕಾಣಿರೇ..
ಎರಗಿ ಬಂದಾಡುವ ದುಂಬಿಗಳಿರಾ
ನೀವು ಕಾಣಿರೇ.. ನೀವು ಕಾಣಿರೇ..”

ಇಲ್ಲಿ ಇವಳ ಹಂಬಲಿಕೆ ಅತ್ಯುತ್ತಮವಾಗಿ ಬಿಂಬಿತವಾಗಿದೆ. ಇಡೀ ವಚನಕ್ಕೆ ಒಂದು ರೀತಿಯ ಲಯ ಸಂಯೋಜನೆ ಇದ್ದು, ಅದು ವಚನದ ಸೌಂದರ್ಯವನ್ನು ಹೆಚ್ಚಿಸ್ಮತ್ತದೆ. “ನೀವು ಕಾಣಿರೇ.. ನೀವು ಕಾಣಿರೇ..” ಎಂಬುದು ಪುನರುಕ್ತಿಯಾಗಿ ಬಂದರೂ, ಏಕತಾನತೆಗೆ ಅವಕಾಶ ಕೊಡದೇ ಅವಳ ಮನಸ್ಸಿನ ಅಭೀಪ್ಸೆಯಾಗಿ ಮೂಡಿ ಬಂದಿದೆ. 

ಹಸಿವಾದರೆ ಭಿಕ್ಷಾನ್ನಗಳುಂಟು
ತೃಷೆಯಾದರೆ ಕೆರೆ-ಹಳ್ಳ-ಬಾವಿಗಳುಂಟು
ಶಯನಕ್ಕೆ ಹಾಳು ದೇವಾಲಯಗಳುಂಟು
ಚೆನ್ನಮಲ್ಲಿಕಾರ್ಜುನ
ನನ್ನ ಆತ್ಮ ಸಾಂಗತ್ಯಕ್ಕೆ ನೀನುಂಟು”

ಹಸಿವಾದರೆ ಭಿಕ್ಷಾನ್ನಗಳಿವೆ, ಬಾಯಾರಿಕೆಯಾದರೆ ನೀರು ಕುಡಿದು ದಾಹ ತೀರಿಸುತ್ತೇನೆ. ಆದರೆ ಒಂದು ವೇಳೆ ಚನ್ನಮಲ್ಲಿಕಾರ್ಜುನ ಕೈ ಬಿಟ್ಟರೆ ಪ್ರಾಣ ಬಿಡುವುದೇ ಲೇಸು ಎಂದವಳ ಅಭಿಪ್ರಾಯ. 

ಅಕ್ಕಮಹಾದೇವಿಯ ವಚನಗಳಲ್ಲಿ ಸಾಮಾಜಿಕ ಅಂಶ ಕಾಣಿಸಿಕೊಂಡರೂ ಅದು ತಿಳಿ ಹೇಳುವ ಅಥವಾ ಬುದ್ಧಿ ಹೇಳುವ ನೆಲೆಯಿಂದ ಬಂದದ್ದಲ್ಲ. ಅದು ತನ್ನನ್ನು ತಾನೇ ಆತ್ಮ ವಿಮರ್ಶೆಗೆ ಒಳಪಡಿಸಿಕೊಂಡಂತದ್ದು. ಆಚಾರ-ಅನಾಚಾರ-ಅಂತರಂಗ-ಬಹಿರಂಗ ಡಾಂಭಿಕತನಗಳ ಬಗ್ಗೆ ಅಕ್ಕನಿಗೆ ತೀವ್ರ ಆಕ್ರೋಶವಿದೆ. ಆದರೆ ಅಕ್ಕ ಯಾರನ್ನೂ ಟೀಕಿಸಲು ಹೋಗುವುದಿಲ್ಲ. ಶಿವಶರಣರು ಮೊದಲು ತಮ್ಮನ್ನು ತಾವು ತಿದ್ದಿಕೊಳ್ಳಬೇಕು ಎನ್ನುತ್ತಾಳೆ. 

ಪುರುಷರ ಮುಂದೆ ಸ್ತ್ರೀ 
ಹೆಣ್ಣೆಂಬ ಅಭಿಮಾನವಾಗಿ ಕಾಡುವುದು..
ಸ್ತ್ರೀಯ ಮುಂದೆ ಪುರುಷ 
ಗಂಡೆಂಬ ಅಭಿಮಾನವಾಗಿ ಕಾಡುವುದು..”

ಇದು ಅಕ್ಕನ ವಚನಗಳ ವೈಶಿಷ್ಟ್ಯ. ಸಾಮಾನ್ಯವಾಗಿ ಕವಿಗಳೆಲ್ಲರೂ ಹೆಣ್ಣು-ಹೊನ್ನು-ಮಣ್ಣನ್ನು ಮಾಯೆಗೆ ಹೋಲಿಸುತ್ತಾರೆ. ಆದರೆ ಅಕ್ಕ ಇವರೆಲ್ಲರಿಗಿಂತಾ ವಿಭಿನ್ನ. ಅಕ್ಕ “ಸ್ತ್ರೀ” ದೃಷ್ಟಿಕೋನದಲ್ಲೂ ಮಾಯೆಯನ್ನು ಕಾಣುವ ಪ್ರಯತ್ನ ಮಾಡಿದ್ದಾಳೆ. ಗಂಡಿಗೆ ಹೆಣ್ಣು ಮಾಯೆಯಾದರೆ, ಹೆಣ್ಣಿಗೆ ಗಂಡು ಮಾಯೆ ಎನ್ನುವುದು ಅವಳ ಅಭಿಮತ. 

ತನ್ನ ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದ ಅಕ್ಕ ಅವುಗಳನ್ನೆಲ್ಲಾ ಧೈರ್ಯದಿಂದ ಎದುರಿಸುವಂತೆ ಸಲಹೆ ನೀಡುತ್ತಾಳೆ. 

ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದೊಡೆಂತಯ್ಯಾ..
ಸಮುದ್ರದ ತಡಿಯಲ್ಲೊಂದು ಮನೆಯ ಮಾಡಿ 
ತೆರೆಗಳಿಗಂಜಿದೊಡೆಂತಯ್ಯಾ..
ಸಂತೆಯ ಮಧ್ಯದಲ್ಲೊಂದು ಮನೆಯ ಮಾಡಿ
ಶಬ್ದಕ್ಕಂಜಿದೊಡೆಂತಯ್ಯಾ..”

ಮೇಲಿನ ವಚನದಲ್ಲಿ ಸಮಾಜದ ಸ್ತುತಿ-ನಿಂದನೆಗಳಿಗೆ ಕಿವುಡಾಗಿರಬೇಕು ಅಥವಾ ಸ್ಥಿತಪ್ರಜ್ಞರಾಗಿರಬೇಕು ಎಂದು ಕರೆ ನೀಡುತ್ತಾಳೆ. ಲೌಕಿಕ ಗಂಡನನ್ನು ಬಿಟ್ಟು, ತನ್ನ ಇಷ್ಟ ದೈವವಾದ ಚೆನ್ನಮಲ್ಲಿಕಾರ್ಜುನನನ್ನು ಹುಡುಕಿ ಬರುವಾಗ ಅಕ್ಕ ಅದೆಷ್ಟು ಆಪತ್ತನ್ನು ಎದುರಿಸಿದ್ದಾಳೆ. ಜನರ ದೃಷ್ಟಿಯಲ್ಲಿ ತನ್ನನ್ನು ಹೇಗೆ ಆಡಿಕೊಂಡಿರಬಹುದು ಎಂಬ ಕಲ್ಪನೆ ಅವಳಿಗಿದೆ. ಅದಕ್ಕೆಂದೇ ಅವಳು ತನ್ನ ಕೋಪವನ್ನು ಸಾತ್ವಿಕ ರೀತಿಯಲ್ಲಿ ಪ್ರಕಟಿಸಿದ್ದಾಳೆ.

ಎಲ್ಲ ಎಲ್ಲವನರಿತು ಫಲವೇನಯ್ಯಾ?
ತನ್ನ ತಾನರಿಯಬೇಕಲ್ಲದೆ..
ನನ್ನಲಿ ಅರಿವು ಸ್ವಯಂವಾಗಿರಲು
ಅನ್ಯರ ಕೇಳಲುಂಟೆ?”

ಕೆಲವು ವಚನಗಳು ವಾಸ್ತವ ಜಗತ್ತಿನ ಕ್ರೂರತೆಯನ್ನು ಬಿಂಬಿಸುತ್ತವೆ. 

ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ
ಹಲವು ಪ್ರಾಣಿಗಳ ಕೊಂದು ನಲಿಯುವ
ತನ ಮನೆಯಲೊಂದು ಶಿಶು ಸತ್ತರೆ 
ಮರುಗುವಂತೆ ಅವನೇಕೆ ಮರುಗ?” 

ಎಂದು ಕೇಳುತ್ತಾಳೆ ಅಕ್ಕ. 

ಹೆಣ್ಣು ಬಾಲ್ಯದಲ್ಲಿ ತಂದೆ-ತಾಯಿಯ ಆಶ್ರಯದಲ್ಲಿ, ವಯಸ್ಕಳಾದ ಮೇಲೆ ಗಂಡನ ಆಶ್ರಯದಲ್ಲಿ, ಮುಪ್ಪಿನಲ್ಲಿ ಮಕ್ಕಳ ಆಸರೆಯಲ್ಲಿ ಇರಬೇಕೆಂದು ಮನುಸ್ಮೃತಿಯಲ್ಲಿ ಹೇಳಿದೆ. ಈ ಸೂತ್ರದ ಪ್ರಕಾರ ಹೆಣ್ಣು ಸ್ವಾತಂತ್ರಕ್ಕೆ ಅರ್ಹಳಲ್ಲ ಎಂಬ ಭಾವವನ್ನು ಧಿಕ್ಕರಿಸಿ, ಅದರಾಚೆಗೂ ಹೆಣ್ಣಿಗೆ ಸ್ಥಾನವಿದೆ ಅಂತ ತೋರಿಸಿಕೊಟ್ಟ ದಿಟ್ಟೆ ಅಕ್ಕ. ಹೆಣ್ಣಿನ ಪ್ರಗತಿಯ ಪ್ರತೀಕವಾಗಿ, ಹೆಣ್ಣುಕುಲದ ದಾರಿದೀಪವಾಗಿರುವ ಅಕ್ಕ ಹೆಣ್ಣು ಕುಲಕ್ಕೊಂದು ಘನತೆಯಾಗಿದ್ದಾಳೆ. 

ಅಕ್ಕನನ್ನು ವಚನಗಾರ್ತಿ ಎನ್ನುವುದಕ್ಕಿಂತ ಕವಯಿತ್ರಿ ಎನ್ನಬಹುದು. ಅವಳ ಬದುಕಿನ ಅನುಭವಗಳು ಅವಳ ವಚನಗಳಲ್ಲಿ ಹರಳುಗಟ್ಟಿ ನಿಂತಿರುವುದರಿಂದ ಅವಳ ವಚನಗಳಲ್ಲಿ ಸಾಹಿತ್ಯಿಕ ಅಂಶಗಳು ಗೋಚರಿಸುತ್ತವೆ. 

ನಾಳೆ ಬರುವುದು ನಮಗಿಂದೇ ಬರಲಿ
ಇಂದು ಬರುವುದು ನಮಗೀಗಲೇ ಬರಲಿ” 

ಎನ್ನುತ್ತಾಳೆ ಅಕ್ಕ.

ಚೆನ್ನಮಲ್ಲಿಕಾರ್ಜುನ” ಎಂದರೆ ವಚನಗಳ ಕೊನೆಯಲ್ಲಿ ಜೋಡಿಸಲೇಬೇಕಾದ ಜಡ ಅಂಕಿತವಲ್ಲ. ಅಕ್ಕಮಹಾದೇವಿಯ ತನು-ಮನ-ಧನಗಳೇ ಆತ.

ಮನದಲ್ಲಿ ಕೋಪ ತಾಳದೇ ಸಮಾಧಾನಿಯಾಗಿರಬೇಕು, ಸಮಾಜದ ಸ್ತುತಿ ನಿಂದನೆಗಳನ್ನು ಸಮಾಧಾನದಿಂದ ಸ್ವೀಕರಿಸಬೇಕು ಎನ್ನುವ ಅಕ್ಕಮಹಾದೇವಿ ಪ್ರಕೃತಿ ವಿಕೋಪ, ಹಸಿವು, ತೃಷೆಗಳನ್ನು ಮೀರಿ ನಿಲ್ಲುವ ಎದೆಗಾರಿಕೆಯವಳು. ಕಠಿಣ ಪರೀಕ್ಷೆ ಎದುರಾದಾಗಲೆಲ್ಲಾ ಅವಳ ವ್ಯಕ್ತಿತ್ವ ಹೆಚ್ಚು ಪ್ರಖರವಾಗುತ್ತಾ ಹೋಗುವುದನ್ನು ಕಾಣಬಹುದಾಗಿದೆ. 

ಅಕ್ಕನದು ಮುಖ್ಯವಾಗಿ ಸಮರ್ಪಣಾ ಭಕ್ತಿ ಮಾರ್ಗ.

ಆದ್ದರಿಂದಲೇ ಅಕ್ಕಮಹಾದೇವಿಯ ವಚನಗಳಲ್ಲಿ ಕಾವ್ಯದ ಸೊಗಸು ಹೆಚ್ಚು. ಅವಳ ಕಾವ್ಯದ ಗುಣ ಎರಡು; ಒಂದು ವೇದನೆ, ಇನ್ನೊಂದು ನಿವೇದನೆ. ಹಾಗಾಗಿ ಅವಳ ಸಾಹಿತ್ಯ ಉತ್ಕೃಷ್ಟ ಮಾತ್ರವಲ್ಲ, ಉಜ್ಜೀವಕ ದಿವ್ಯ ಸಾಹಿತ್ಯ. 

ಅಕ್ಕನ ವಚನಗಳಲ್ಲಿ ಉದ್ದೇಶಪೂರ್ವಕವಾದ ಅಲಂಕಾರಗಳ ಬಳಕೆ ಇಲ್ಲ. ಒಳಗಿನ ಒತ್ತಡಗಳು ಭಾಷೆಯಲ್ಲಿ ಹೊರ ಹೊಮ್ಮುವಾಗ ಸಹಜವಾಗಿ ನುಸುಳಿಕೊಂಡು ಬಂದ ಉಪಮೆ ದೃಷ್ಟಾಂತಗಳು ಅವು. ಈ ಉಪಮೆಗಳು ವಚನದ ಸೌಂದರ್ಯ ಹೆಚ್ಚಿಸುತ್ತವೆ. 

ಅಕ್ಕನ ವಚನಗಳಲ್ಲಿ ಬರುವ ದೃಷ್ಟಾಂತಗಳು ದೈನಂದಿನ ಜೀವನದಿಂದಾಯ್ದ ಸಜೀವ ದೃಷ್ಟಾಂತಗಳು. ಅಕ್ಕನ ವಚನಗಳಲ್ಲಿ ವಿಶೇಷ ಶಕ್ತಿ ಇದೆ. ಅವಳ ವಚನಗಳಲ್ಲಿ ಕೇವಲ ಧಾರ್ಮಿಕ ಅಥವಾ ದಾರ್ಶನಿಕ ಅಂಶಗಳಿಗಿಚಿತ ಮಾನವೀಯ ಜೀವಂತಿಕೆಯ ಅಂಶಗಳು ಉಸಿರಿನಷ್ಟು ಸಹಜವಾಗಿ ವ್ಯಕ್ತವಾಗುತ್ತವೆ. ತಾನೂ ಬದುಕಿ, ಇತರರನ್ನೂ ನ್ಶೆತಿಕತೆಯ ಭಕ್ತಿ ಮಾರ್ಗದೆಡೆಗೆ ಕರೆದೊಯ್ಯಬಲ್ಲ ವ್ಯಕ್ತಿತ್ವವನ್ನು ನಾವು ಅಕ್ಕನ ವಚನಗಳಲ್ಲಿ ಕಾಣಬಹ್ಮದಾಗಿದೆ. ಅಕ್ಕನ ವಚನಗಳಲ್ಲಿ ಕಾವ್ಯಗುಣ ಎನ್ನುವುದು ತಿದ್ದಿ ತೇಯ್ದ ಗಂಧವಲ್ಲ. ಬದಲಿಗೆ ಓದುಗರ ಮನಸ್ಸಿನಲ್ಲಿ ಪದದಿಂದ ಪದಕ್ಕೆ, ಸಾಲಿನಿಂದ ಸಾಲಿಗೆ ಹೊಸ ಅರ್ಥ ಸೃಷ್ಟಿಸುವ ಅಂಶ. 

ಮಹಾದೇವಿ ಅಕ್ಕನದು ಅಪರೂಪದ ವ್ಯಕ್ತಿತ್ವ. 

ಮಹಿಳೆಯರ ದೃಷ್ಟಿಯಿಂದ ಇಂತಹ ವ್ಯಕ್ತಿತ್ವ ಮತ್ತೊಂದಿಲ್ಲ. ಅಕ್ಕಮಹಾದೇವಿ ಅನನ್ಯವಾದ ಮಹಿಳಾಮಣಿ. ಅಕ್ಕನ ವಚನಗಳಿಂದ ಕನ್ನಡ ಕಾವ್ಯದ ಶ್ರೀಮಂತಿಕೆ ಹೆಚ್ಚಿದ್ದು, ಅವು ಬುದ್ಧಿಭಾವಕ್ಕೆ ಬೆಳಕನ್ನೀಯುವ ಉನ್ನತ ಮಟ್ಟದ ಕೃತಿಗಳಾಗಿವೆ. ಅಕ್ಕನ ವಚನಗಳು ವಚನ ಸಾಹಿತ್ಯದಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತವೆ. ಒಟ್ಟಿನಲ್ಲಿ ಅಕ್ಕ ಕನ್ನಡದ ಮೊದಲ ಕವಯಿತ್ರಿ ಎನ್ನಿಸಿಕೊಂಡಿದ್ದಾಳೆ. 

**********************
ಕೆ.ಎ.ಸೌಮ್ಯ
ಮೈಸೂರು
(M A Kannada)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)