ಧ್ವನಿ ಸಿದ್ಧಾಂತ: ಎಂ.ಎ.ಕನ್ನಡ

ಪೀಠಿಕೆ:
         
ಧ್ವನಿ ಎನ್ನುವುದು ಕಾವ್ಯದ ಅಂತರಂಗಕ್ಕೆ ವಿಶಿಷ್ಟವಾದ ಶಕ್ತಿಯನ್ನು ತಂದುಕೊಡುವ ಪ್ರಭೆಯಾಗಿದೆ. ಧ್ವನಿತತ್ತ್ವದ ಪ್ರತಿಪಾದನೆ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಅತಿ ಮುಖ್ಯವಾದ ಘಟ್ಟವಾಗಿದೆ. ಇದನ್ನು ಆನಂದವರ್ಧನ ತನ್ನ "ಧ್ವನ್ಯಾಲೋಕ" ಎಂಬ ಕೃತಿಯ ಮೂಲಕ ಪ್ರತಿಪಾದಿಸಿದ್ದಾನೆ.
     
ಕಾವ್ಯದ ಶರೀರ ಬೇರೆ, ಆತ್ಮ ಬೇರೆ. ಶರೀರದಂತೆ ಆತ್ಮವು ಗೋಚರವಾಗುವುದಿಲ್ಲ. ಆದರೆ ಆತ್ಮವು ಶರೀರದಲ್ಲಿ ಪ್ರಕಾಶಗೊಂಡು ಸಾರ್ಥಕವಾಗುತ್ತದೆ. "ಧ್ವನಿ ಸಿದ್ಧಾಂತ"ವು ಕಾವ್ಯದಲ್ಲಿ ಯಾವುದು ಶರೀರ, ಅದರ ಮೂಲಕ ಆತ್ಮವು ಹೇಗೆ ಪ್ರಕಾಶಿತವಾಗುತ್ತದೆ ಎಂದು ತಿಳಿಸಿಕೊಡುತ್ತದೆ.

ಧ್ವನಿ ಸಿದ್ಧಾಂತ:
    
"ಧ್ವನಿ" ಎಂಬುದು ಭಾಷೆಯನ್ನು ಅವಲಂಬಿಸಿ ಅನುಭವಕ್ಕೆ ಬರುವ ಒಂದು ಶಕ್ತಿ. ಅದನ್ನು ಆನಂದವರ್ಧನನು ಹೀಗೆ ಹೇಳಿದ್ದಾನೆ.
       
"ಮಹಾಕವಿಗಳ ವಾಣಿಯಲ್ಲಿ ವ್ಯಾಚ್ಯಾರ್ಥಕ್ಕಿಂತ ಬೇರೆಯಾಗಿ ಪ್ರತೀತಮಾನವಾಗುವ ಅರ್ಥವೊಂದು ಇದ್ದೇ ಇರುತ್ತದೆ. ಲಲನೆಯರಲ್ಲಿ ಸ್ಫುಟವಾದ ಅವಯವಗಳಿಗಿಂತ ಬೇರೆಯಾಗಿರುವ ಲಾವಣ್ಯದ ಹಾಗೆ ಅದು ಹೊಳೆಯುತ್ತದೆ"

ಅಲ್ಲದೇ ಆನಂದವರ್ಧನನು "ಧ್ವನಿ"ಗೊಂದು ಪರಿಭಾಷೆ ನೀಡಿದ್ದಾನೆ:

"ಭಾಷೆಯಲ್ಲಿ ಶಬ್ದಕ್ಕೆ ಇರುವುದು ವ್ಯಾಚ್ಯಾರ್ಥ-ಲಕ್ಷ್ಯಾರ್ಥ ಎಂಬ ಎರಡೇ ವೃತ್ತಿಗಳೆಂದೂ, ಶಬ್ದದಿಂದ ನಮಗೆ ಅರಿವಾಗುವ ಸಮಸ್ತ ಅರ್ಥವೂ ಈ ಲಕ್ಷ್ಯಾರ್ಥ-ವಾಚ್ಯಾರ್ಥಗಳಲ್ಲಿಯೇ ಅಡಕವಾಗಿದೆ ಎಂದೂ ತಿಳಿಯಲಾಗಿತ್ತು. ಆದರೆ ನಿಘಂಟುಗಳಿಗೆ ಗೋಚರವಾಗುವ ಇಷ್ಟು ಅರ್ಥ ಹೇಳುವುದರಲ್ಲಿಯೇ ಅದರ ಕೆಲಸ ಮುಗಿಯುವುದಿಲ್ಲ. ಕಾವ್ಯದಲ್ಲಿ ಶಬ್ದವು ಅರ್ಥ ವಿಶೇಷವನ್ನು ಬಾಯಿ ಬಿಟ್ಟು ಹೇಳದಿದ್ದರೂ ಸನ್ನಿವೇಶ ಮಹಿಮೆಯಿಂದ ವ್ಯಂಜನಾವೃತ್ತಿಯೆಂಬ ಬೇರೊಂದು ವೃತ್ತಿಯಿಂದ ಅದು ಅನುಭವಕ್ಕೆ ಬರುತ್ತದೆ. ವ್ಯಾಚ್ಯಾರ್ಥಕ್ಕೆ ಮೀರಿದ ಅದಕ್ಕಿಂತಲೂ ಮಿಗಿಲಾದ ಮನೋಹರವಾದ, ಬೇರೆಯಾದ ಅರ್ಥವು ಇಲ್ಲಿ ಸ್ಫುರಿಸುತ್ತದೆ.  ಇಂತಹ ವಿಶೇಷ ಸ್ಫುರಣವೇ "ಧ್ವನಿ". ಕಾವ್ಯದಲ್ಲಿ ಪ್ರಧಾನವೂ, ಪರಮಾರ್ಥವೂ ಆಗಿ ನಿಲ್ಲುವ ವ್ಯಂಗ್ಯಾರ್ಥಕ್ಕೆ "ಧ್ವನಿ" ಎಂದು ಹೆಸರು
 
"ಕಾವ್ಯಾಸತ್ಮಾ ಧ್ವನಿಃ" ಎಂದು ಆನಂದವರ್ಧನನು ಘೋಷಿಸಿದ. ಎಂದರೆ ಧ್ವನಿಯೇ ಕಾವ್ಯದ ಆತ್ಮ ಎಂದರ್ಥ.

ಈಗ ಕಾವ್ಯದಲ್ಲಿ ಆತ್ಮಸ್ವರೂಪಿಯಾಗಿರುವ, ಕೇವಲ ಪ್ರತೀಯಮಾನವಾಗಿರುವ ಅರ್ಥವನ್ನು ಅರಿಯುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ? ಇದಕ್ಕೆ ಉತ್ತರ ಎಂದರೆ, ಸಹೃದಯನು ತನ್ನ ಪ್ರತಿಭಾ ಸಾಮರ್ಥ್ಯದಿಂದ ಅದನ್ನು ಅರಿಯಬೇಕು ಎನ್ನುವುದು.

ಕೇವಲ ಶಬ್ದಗಳ ಅರ್ಥದಿಂದ ಧ್ವನಿಯ ಅರಿವು ಆಗುವುದಿಲ್ಲ. ವ್ಯಾಕರಣ, ನಿಘಂಟು ಮೊದಲಾದವುಗಳಿಂದಲೂ ಅದರ ಅರ್ಥ ತಿಳಿಯುವುದಿಲ್ಲ. ಅದಕ್ಕಾಗಿ ಆನಂದವರ್ಧನ ’ಯಾರಿಗೆ ಕಾವ್ಯಾರ್ಥ ತತ್ತ್ವ ರಹಸ್ಯ ಗೊತ್ತಿದೆಯೋ ಅವರು ಮಾತ್ರವೇ ಧ್ವನಿಯನ್ನು ಅರಿಯಬಲ್ಲರು’ ಎನ್ನುತ್ತಾನೆ.

          ಶಬ್ದಾರ್ಥಶಾಸನಜ್ಞಾನ ಮಾತ್ತೇಣೈವ
          ನ ವೇದ್ಯತೇ |
          ವೇದ್ಯತೇ ಸ ತು ಕಾವ್ಯಾರ್ಥ
          ತತ್ತ್ವಜ್ಞೈರೇವ ಕೇವಲಂ||

ಕಾವ್ಯಾರ್ಥದಲ್ಲಿ ವ್ಯಂಗ್ಯಾರ್ಥವೆಂಬ ಧ್ವನಿಯೇ ಗಮ್ಯವಾದರೂ ವಾಚ್ಯಾರ್ಥವನ್ನು ಬಿಡುವ ಹಾಗಿಲ್ಲ. ಏನನ್ನಾದರೂ ನೋಡಲು ಬೆಳಕು ಬೇಕು ಎಂದು ಬಯಸುವವರು ಅದಕ್ಕೆ ಸಾಧನವಾದ ಒಂದು ಹಣತೆಯನ್ನೋ, ದೀಪವನ್ನೋ ಸಂಪಾದಿಸಿ ಕೊಳ್ಳಬೇಕು. ಕಾವ್ಯದಲ್ಲಿ ವ್ಯಂಗ್ಯಾರ್ಥವನ್ನು ನೋಡಲು ಬಯಸುವವನು ಮೊದಲು ವಾಚ್ಯಾರ್ಥ ಎಂಬ ದೀಪವನ್ನು ಸಂಪಾದಿಸಿ ಕೊಳ್ಳಬೇಕು. ಅದಕ್ಕಾಗಿ ವ್ಯಾಕರಣ, ಶಬ್ದಕೋಶಗಳೊಂದಿಗೆ ಸಂಬಂಧ ಬೆಳೆಸಿಕೊಳ್ಳಬೇಕು.



ಧ್ವನಿಯ ವಿಶ್ಲೇಷಣೆ:

ಈಗ ಕೆಲವು ಉದಾಗರಣೆಗಳ ಮೂಲಕ "ಧ್ವನಿ"ಯ ಸ್ವರೂಪವನ್ನು ಸ್ಪಷ್ಟಪಡಿಸಿಕೊಳ್ಳಬಹುದು.


ಉದಾ-1 :
   
ತೀ.ನಂ.ಶ್ರೀ ಅವರು ವಿಶ್ಲೇಷಿಸಿರುವ ’ಪಂಪ ಭಾರತ’ದ ಒಂದು ಸನ್ನಿವೇಶವನ್ನು ತೆಗೆದುಕೊಳ್ಳೋಣ. ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮರಿಗೆ ಸೇನಾಧಿಪತಿ ಪಟ್ಟ ಕಟ್ಟುವ ಸಂದರ್ಭದಲ್ಲಿ ಕರ್ಣನು ಆ ಪಟ್ಟವು ತನಗೆ ಬೇಕೆಂದು ಸಿಟ್ಟಿನಿಂದ ಏಲ್ಲೆ ಮೀರಿ ಮಾತನಾಡುತ್ತಾನೆ. ’ಭೀಷ್ಮನಂತಹ ವಯೋವೃದ್ಧ ಶತೃಗಳ ವಿರುದ್ಧ ಇನ್ನೇನು ಕಾದಾಡಿಯಾನು’ ಎನ್ನುವುದು ಕರ್ಣನ ಆಕ್ಷೇಪಣೆಯಾಗಿತ್ತು. ಅದನ್ನರಿತ ಭೀಷ್ಮರು ಒಂದು ಮಾತು ಹೇಳುತ್ತಾರೆ. 

"ಕರ್ಣ.. ಇದು ಮಹಾಭಾರತ ಯುದ್ಧ. ನಾವು ಕಾದಾಡುತ್ತಿರುವುದು ಅರ್ಜುನನಿಗೆ ಎದುರಾಗಿ. ಇಷ್ಟೊಂದೇಕೆ ಹಾರಾಡುವೆಯಪ್ಪಾ?" ಎನ್ನುತ್ತಾರೆ

ವಾಚ್ಯಾರ್ಥ : 

"ನಾನು ಹಿರಿಯ. ಮೊದಲು ಪಟ್ಟ ಕಟ್ಟಿಸಿಕೊಳ್ಳುತ್ತೇನೆ. ನೀನು ಕಿರಿಯ. ಅನಂತರ ಕಟ್ಟಿಸಿಕೋ"
ಮೊದಲು ನನ್ನ ಸರದಿ, ಆಮೇಲೆ ನಿನ್ನ ಸರದಿ ಎಂಬುದನ್ನು ಭೀಷ್ಮ ಹೇಳಿದಂತೆ ತೋರುವುದು. ಆದರೆ ಇದರರ್ಥ ಇಲ್ಲಿಗೇ ಮುಗಿಯುವುದಿಲ್ಲ. ಈ ಸಮರದಲ್ಲಿ ಅರ್ಜುನನನ್ನು ಎದುರಿಸಿ ನಿಲ್ಲುವ ವೀರರಿಗೆ ದೊರೆಯುವುದು ಪಟ್ಟ ಕಟ್ಟಿಸಿಕೊಳ್ಳುವ ಸರದಿಯಷ್ಟೇ. ಭೀಷ್ಮನ ಸರದಿಯಾದ ಮೇಲೆ ಕರ್ಣನ ಸರದಿ. ಆದರೆ ಕರ್ಣನಿಗೂ ಅದು ಸರದಿ ಮಾತ್ರವೇ. ಕರ್ಣನೂ ಮಡಿದ ಮೇಲೆ ಅವನ ನಂತರವೂ ಯುದ್ಧವು ಮುಂದುವರೆಯುತ್ತದೆ. ಹೀಗೆ ಪಟ್ಟ ಕಟ್ಟಿಸಿಕೊಂಡವರಿಗೆಲ್ಲಾ ಕೌರವ ಪಕ್ಷದಲ್ಲಿ ಅದು ಸರದಿ ಮಾತ್ರವೇ. ಏಕೆಂದರೆ ಅದು ಮಹಾಭಾರತ ಯುದ್ಧ. ಈ ರೀತಿಯ ಅರ್ಥ ಪರಂಪರೆಯನ್ನು "ಧ್ವನಿ" ಎನ್ನುತ್ತೇವೆ.



ಉದಾ-2 :
      
ವೀರಪ್ಪ ಮೊಯಿಲಿಯವರ "ಶ್ರೀರಾಮಾಯಣ ಮಹಾನ್ವೇಷಣಂ"ನ ಒಂದು ಪ್ರಸಂಗವನ್ನು ಗಮನಿಸಿ. ಸೀತಾದೇವಿಯು ಭೂಲರನೆಂಬ ಅರಣ್ಯವಾಸಿಗೆ ವಿದ್ಯೆ ಕಲಿಸಿ ಕೊಡುವ ಪ್ರಸಂಗವದು. ಭೂಲರನಿಗೆ ವಿದ್ಯೆ ಕಲಿಯುವುದೆಂದರೆ ಬಲವಂತದ ಮಾಘ ಸ್ನಾನವಾಗಿತ್ತು. ಅದಕ್ಕಾಗಿ ಸೀತೆಯು ಹೀಗೆ ಹೇಳುತ್ತಾಳೆ.

ವಿದ್ಯಾವಂತನಾದೊಡೆ ಅವನ ಮನುಜನೆನ್ನುವರು
ವಿದ್ಯಾಹೀನನನು ಪಶುವೆಂದೇ ಕರೆಯುವರು 
ವಿದ್ಯಾವಂತ ಪ್ರಭುವಾಗಿ ಆಳುವನು, ನೀನೋ ಆಳು !
  
ಮೇಲಿನ ಪದ್ಯದಲ್ಲಿ "ಆಳು" ಎಂಬ ಪದ ಗಮನಾರ್ಹವಾದುದು. ವಿದ್ಯಾವಂತನಾದವನು ಒಡೆಯನಾಗುತ್ತಾನೆ. ಆಳ್ವಿಕೆ ನಡೆಸುತ್ತಾನೆ. "ನೀನೋ ಆಳು" ಎಂಬಲ್ಲಿ ಆಳು ಎಂಬ ಶಬ್ದವು ಸೇವಕ ಎಂಬರ್ಥದಲ್ಲಿ ಬಳಕೆಯಾಗಿದೆ. ಅಂದರೆ ಅಕ್ಷರಜ್ಞಾನ ಇಲ್ಲದವನು ಮತ್ತೊಬ್ಬರಿಗೆ ಸೇವಕನಾಗಬೇಕಾಗುತ್ತದೆ ಎಂಬ ಭಾವ ಇಲ್ಲಿ ಕಂಡು ಬರುತ್ತದೆ.
  
ಮತ್ತೊಂದು ಉದಾಹರಣೆಯನ್ನು ’ಶ್ರೀರಾಮಾಯಣ ಮಹಾನ್ವೇಷಣಂ’ ನಿಂದಲೇ ತೆಗೆದುಕೊಳ್ಳೋಣ. ಲಂಕೆಯನ್ನು ಹೊಕ್ಕ ಆಂಜನೇಯನು ನಡೆಸಿದ ಕೋಲಾಹಲವನ್ನು ಕಂಡು ರಾವಣನ ಮಗನಾದ ಅಕ್ಷಕುಮಾರನು ಆಂಜನೇಯನನ್ನು ಕೊಂಡಾಡುವ ಮಾತುಗಳು ಹೀಗಿವೆ.

   ಆವಸೀಮೆಯ ಆಳೊ ಆವ ಗರ್ಭದ ಸೆಲೆಯೋ
ಆವ ಯುಗದಂತ್ಯವನ್ನು ಬಯಸುತ್ತಾ ನಿಂದಿಹನೋ
  ಆವ ಕಾಡಿನ ಹುಲಿಯ ಹಾಲ್ಗುಡಿದು ಬೆಳೆದಿಹನೋ
   ಆವ ಗಜಗರ್ಭವನು ಸೀಳಿ ಹೊರಬಂದಿಹನೋ
   
ಇಲ್ಲಿ "ಆಳು" ಎಂಬ ಶಬ್ದಕ್ಕಿರುವ ಅರ್ಥ ವೀರಯೋಧ. ಈ ಮಾತು ಹನುಮಂತನಿಗೆ ಚೆನ್ನಾಗಿ ಒಪ್ಪುತ್ತದೆ. ಇಲ್ಲಿ ವಾಚ್ಯಾರ್ಥ ಸಂಪೂರ್ಣ ತಿರಸ್ಕೃತವಾಗಿ ಬೇರೆಯದೇ ಅರ್ಥ ಸ್ಫುರಿಸುತ್ತದೆ.




ಉದಾ-3 :
     
'ಶಾಕುಂತಲ’ ನಾಟಕದ ಒಂದು ಸನ್ನಿವೇಶ ತೆಗೆದುಕೊಳ್ಳೋಣ. ಶಕುಂತಲೆ ಕಣ್ವಾಶ್ರಮದಿಂದ ಪತಿಗೃಹಕ್ಕೆ ಹೊರಡುವಾಗ, ತಾನು ಪ್ರೀತಿಯಿಂದ ನೀರೆರೆದು ಬೆಳೆಸಿದ್ದ ಬಳ್ಳಿಯೊಂದರ ಯೋಗಕ್ಷೇಮವನ್ನು ತನ್ನ ಸಖಿಯರಿಗೆ ವಹಿಸಿಕೊಡುತ್ತಾ..

ಶಕುಂತಲೆ: ಸಖಿಯರೆ, ಇದನ್ನು ನಿಮ್ಮ ಕೈಯಲ್ಲಿರಿಸಿದೆ
ಸಖಿಯರು: ನಮ್ಮನ್ನು ಯಾರ ಕೈಗೆ ಒಪ್ಪಿಸಿದೆ (ಕಣ್ಣೀರು ಮಿಡಿಯುತ್ತಾರೆ)

ವಾಚ್ಯಾರ್ಥ: ಇಲ್ಲಿ ವಾಚ್ಯಾರ್ಥ ಎಂದರೆ ಕೇವಲ ಪ್ರಶ್ನೆ ಮಾತ್ರ.  

ಆದರೆ ಇದು ಅಷ್ಟಕ್ಕೇ ಮುಗಿಯುವುದಿಲ್ಲ. ಈ ಸನ್ನಿವೇಶದಲ್ಲಿ ವಿಯೋಗದ ನೋವಿದೆ. ಸಖಿಯರ ಮಾತಿನಿಂದ ಅವರ ಸಂಕಟ ಎಷ್ಟು ಗಾಢವಾದದ್ದು ಎಂದು ಅನುಭವವಾಗುತ್ತದೆ. ಇದರ ಬದಲು ಸಖಿಯರು ಎಷ್ಟು ಬಾರಿ "ಅಯ್ಯೋ ಅಯ್ಯೋ ದುಃಖ ದುಃಖ" ಅಂತ ಬಾಯಾರೆ ಕೂಗಿಕೊಂಡಿದ್ದರೂ ನಮಗೆ ಈ ಅನುಭವ ಆಗುತ್ತಿರಲಿಲ್ಲ.


ಉದಾ-4 :

ಕುವೆಂಪು ಅವರ ’ಪಕ್ಷಿಕಾಶಿ’ಯ ಒಂದು ಸಾಲನ್ನು ಗಮನಿಸೋಣ.

          ನಿನಗೆ ಹುಗಲಿಲ್ಲ ಓ ಬಿಯದ
          ಇದು ಪಕ್ಷಿಕಾಶಿ

  • ಕುವೆಂಪುರವರು ಈ ಮಾತುಗಳನ್ನು ವಿಮರ್ಶಕರಿಗೆ ಹೇಳುತ್ತಿದ್ದಾರೆ. ’ಪಕ್ಷಿಕಾಶಿ’ ಎಂದರೆ ಕಾವ್ಯ ಜಗತ್ತು. ವಾಚ್ಯಾರ್ಥ ಸಂಪೂರ್ಣ ತಿರಸ್ಕೃತವಾಗಿ ಸುಂದರವಾದ ಪ್ರತಿಮೆ ಇಲ್ಲಿ ನಿರ್ಮಾಣವಾಗಿದೆ. ಇಲ್ಲಿ ವಿಮರ್ಶಕನನ್ನೇ ಬಿಯದ (ಬೇಟೆಗಾರ) ಎನ್ನಲಾಗಿದೆ. ಅಂತಹವನಿಗೆ ಪಕ್ಷಿಕಾಶಿಗೆ ಪ್ರವೇಶವಿಲ್ಲ. ಇಲ್ಲಿ ಹೆಜ್ಜೆ ಹೆಜ್ಜೆಗೂ ವಾಚ್ಯಾರ್ಥ ತಿರಸ್ಕೃತವಾಗಿ ಅತ್ಯಂತ ಮೋಹಕವಾದ ಧ್ವನಿಪರಂಪರೆ ನಿರ್ಮಾಣವಾಗಿದೆ.

ಉಪಸಂಹಾರ:

ಆನಂದವರ್ಧನನು ’ಧ್ವನಿ’ಯಲ್ಲಿಯೇ ಕಾವ್ಯ ಜೀವಾಳವು ಅಡಗಿದೆ ಎಂದು ತೋರಿಸಿಕೊಟ್ಟನು. ಧ್ವನಿ ಸಿದ್ಧಾಂತದ ರಂಗಕ್ಕೆ ಮಾತ್ರವಲ್ಲದೇ ಇಡೀ ಭಾರತೀಯ ಕಾವ್ಯ ಮೀಮಾಂಸೆಗೆ ಒಪ್ಪುವಂತಹ ಗ್ರಂಥರಚನೆ ಮಾಡಿದವರಲ್ಲಿ ಆನಂದವರ್ಧನನು ಅಗ್ರಗಣ್ಯನಾಗಿದ್ದಾನೆ ಎಂದು ವಿದ್ವಾಂಸರು ಆತನ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.


*******************************************************

ಪ್ರಶ್ನೆ: ಧ್ವನಿ ಎಂದರೇನು? ಕಾವ್ಯಾಸ್ವಾದನದಲ್ಲಿ ಅದರ ಪಾತ್ರವನ್ನು ಸೋದಾಹರಣವಾಗಿ ಚರ್ಚಿಸಿ (ಜೂನ್’08 - ಜೂನ್’10)

ಪ್ರಶ್ನೆ: ಧ್ವನಿ ಸಿದ್ಧಾಂತ (ಟಿಪ್ಪಣಿ- ಐದು ಅಂಕಗಳಿಗೆ) ಜೂನ್’07

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)