ಅಕ್ಕಮಹಾದೇವಿಯ (Akka Mahadevi) ಕವನಗಳ ವೈಶಿಷ್ಟ್ಯ : ಎಂ.ಎ.ಕನ್ನಡ
ಅಕ್ಕಮಹಾದೇವಿ ಮೂಲತಃ ಆಧ್ಯಾತ್ಮ ಸಾಧಕಳು. ತನ್ನ ಇಷ್ಟ ದೈವವಾದ ಚೆನ್ನಮಲ್ಲಿಕಾರ್ಜುನನನ್ನು ಸೇರುವುದೇ ಅವಳ ಬಾಳಿನ ಪರಮ ಗುರಿಯಾಗಿತ್ತು. ಅದಕ್ಕಾಗಿಯೇ ಆಕೆ ಬಾಲ್ಯದಿಂದಲೂ ಹಂಬಲಿಸಿದಳು. ಅವಳ ಆ ಹಂಬಲಿಕೆಯ ಪ್ರತಿಬಿಂಬವೇ ಈ ವಚನಗಳು. ಈ ದಾರಿಯಲ್ಲಿ ಸಾಗುವಾಗ ಅನೇಕ ಅಡ್ಡಿ-ಆತಂಕಗಳನ್ನು ದಿಟ್ಟೆಯಾಗಿ ಎದುರಿಸಿದವಳು ಅಕ್ಕ. ಆಕೆಯದು ಸಿದ್ಧಿಸಿಕೊಂಡ ವೈರಾಗ್ಯವೇ ಹೊರತು ಸಿದ್ಧ ವೈರಾಗ್ಯವಲ್ಲ. ಸಿದ್ಧಿಯ ಮೆಟ್ಟಿಲನ್ನು ಏರುವಾಗ ಸಹಜವಾದ ಘರ್ಷಣೆ ಆಕೆಗಿತ್ತು. ಅದಕ್ಕೆಂದೇ ಅಕ್ಕ ತನ್ನನ್ನು ತಾನೇ ಕಠೋರ ವಿಮರ್ಶೆಗೆ ಒಳಪಡಿಸಿಕೊಂಡು ಅದನ್ನು ತನ್ನ ವಚನಗಳಲ್ಲಿ ಯಾವುದೇ ಹಿಂಜರಿಕೆ ಇಲ್ಲದೇ ಅಭಿವ್ಯಕ್ತಿಸಿದ್ದಾಳೆ. ತನ್ನನ್ನು ಈ ಮತ್ರ್ಸದ ಸೆಳೆತದಿಂದ ಕಾಪಾಡುವಂತೆ ಚೆನ್ನಮಲ್ಲಿಕಾರ್ಜುನನಲ್ಲಿ ಮೊರೆ ಹೋಗುತ್ತಾಳೆ. “ ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲನ್ನು ತಾನೇ ಸುತ್ತಿ ಸುತ್ತಿ ಸಾವ ತೆರನಂತೆ” ಈ ವಚನದಲ್ಲಿ ಭಕ್ತಿಯ ಕ್ರಿಯಾಹೀನತೆಯ ಬಗ್ಗೆ ಹೇಳಲಾಗಿದೆ. ಆದರೆ ತನ್ನದು ಅನನ್ಯವಾದ ಭಕ್ತಿ, ತಾನು ಬೇರೆಯಲ್ಲ, ಚನ್ನಮಲ್ಲಿಕಾರ್ಜುನ ಬೇರೆಯಲ್ಲ ಎಂಬ ಅರಿವು ತನಗಿದೆ ಎನ್ನುತ್ತಾಳೆ. ಅಕ್ಕಮಹಾದೇವಿ ಪ್ರಕೃತಿ ಪ್ರೇಮಿ. ಪ್ರಕೃತಿಯ ಚರಾಚರ ವಸ್ತುಗಳನ್ನೂ ತನ್ನ ಕವನದಲ್ಲಿ ದೃಷ್ಟಾಂತವನ್ನಾಗಿಸುತ್ತಾಳೆ. “ ಈಳೆ, ನಿಂಬೆ, ಮಾವು ಮೊದಲಕ್ಕೆ ಹುಳಿನೀರ...