"ಔಚಿತ್ಯ" : ಎಂ.ಎ.ಕನ್ನಡ

ಪೀಠಿಕೆ:

ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಕೊನೆಯದಾಗಿ ಗಮನಿಸಬೇಕಾದ ಮುಖ್ಯ ವಿಷಯ "ಔಚಿತ್ಯ"

ನಮ್ಮ ಕಾವ್ಯ ಮೀಮಾಂಸೆಯ ಚರಿತ್ರೆಯಲ್ಲಿ "ಔಚಿತ್ಯ"ದ ವಿಷಯವನ್ನು ಕೊನೆಯದಾಗಿಯೇ ಏಕೆ ಅಧ್ಯಯನ ನಡೆಸಬೇಕು ಎನ್ನುವುದನ್ನು ಒಂದು ಹೋಲಿಕೆಯ ಮೂಲಕ ಮನವರಿಕೆ ಮಾಡಿಕೊಳ್ಳಬಹುದು.ಒಂದು ಮಗುವಿಗೆ ತಂದೆ-ತಾಯಿಯರು ಪ್ರಾಪಂಚಿಕ ಜ್ಞಾನ ನೀಡುವಾಗ ಹೀಗೆ ಮಾಡಬೇಡ, ಹಾಗೆ ಮಾಡು ಎಂದು ಉಚಿತಾನುಚಿತ ಸಲಹೆಗಳನ್ನು ಕೊಡುತ್ತಾರೆ. ಇದೇ ರೀತಿ ಯಾವುದೇ ವಿಷಯವನ್ನು ಕುರಿತು ಉಚಿತಾನುಚಿತಗಳನ್ನು ನಿರ್ಧರಿಸಲು ನಮಗೆ ಆ ವಿಷಯವನ್ನು ಕುರಿತು ಸಂಪೂರ್ಣ ಜ್ಞಾನ ಇರಬೇಕಾಗುತ್ತದೆ. 

ಹಾಗೆಯೇ ನಮ್ಮ ಭಾರತೀಯ ಕಾವ್ಯ ಮೀಮಾಂಸೆಯ ಶಾಸ್ತ್ರದಲ್ಲಿಯೂ ಔಚಿತ್ಯವನ್ನು ಕುರಿತು ನಾವು ಕೊನೆಯಲ್ಲಿ ಅಧ್ಯಯನ ನಡೆಸಬೇಕಾಗುತ್ತದೆ. ಕಾವ್ಯದ ಪ್ರಮುಖ ಅಂಗಗಳಾದ ಅಲಂಕಾರ, ಗುಣ, ರೀತಿ, ಧ್ವನಿ, ರಸ ಇವುಗಳನ್ನು ಹೇಗೆ ಉಚಿತವಾಗಿ ಬಳಸಿಕೊಳ್ಳಬೇಕು,ಕಾವ್ಯದ ಯಾವ ಸಂದರ್ಭದಲ್ಲಿ ಯಾವ ವಿಷಯಗಳಿಗೆ ಪ್ರಾಮುಖ್ಯತೆ ದೊರೆಯುತ್ತದೆ,ಯಾವುದು ಉಚಿತ ಯಾವುದು ಅನುಚಿತ ಎಂಬ ಪರಿಜ್ಞಾನ ನೀಡುವುದೇ "ಔಚಿತ್ಯ" ತತ್ವ.
          
ಈ ಔಚಿತ್ಯ ತತ್ವವನ್ನು ಕುರಿತು ಸಮಗ್ರವಾಗಿ ವಿವೇಚಿಸಿರುವ ಮೀಮಾಂಸಕರು ಎಂದರೆ ಆನಂದವರ್ಧನ ಮತ್ತು ಕ್ಷೇಮೇಂದ್ರ. ಭರತನ ನಾಟ್ಯ ಶಾಸ್ತ್ರದ ಮೂಲಕ ಸೂಚ್ಯವಾಗಿ ಹರಿದು ಬಂದ ಔಚಿತ್ಯವೆಂಬ ವಿಷಯವು ಆನಂದವರ್ಧನ ಮತ್ತು ಕ್ಷೇಮೇಂದ್ರರ ಕೃತಿಯಲ್ಲಿ ಒಂದು ತತ್ವವಾಗಿ ಬೆಳೆಯಿತು.

ಔಚಿತ್ಯ : ಆನಂದವರ್ಧನನ ಅಭಿಪ್ರಾಯ
       
ಯಾವುದೇ ಕೃತಿಯಲ್ಲಿ ಕಥಾವಸ್ತು, ಪಾತ್ರಗಳು, ಶೈಲಿ, ಸನ್ನಿವೇಶ ರಚನೆ, ಭಾಷೆ ಎಲ್ಲಾ ಅಂಗಗಳೂ ರಸಕ್ಕೆ ಅಧೀನವಾಗಿಯೇ ಬರಬೇಕು.ಈ ಅಂಗಗಳು ರಸಕ್ಕೆ ಅನುಗುಣವಾಗಿ ಬಂದಾಗ ಅದು ಉಚಿತವೆನಿಸುತ್ತದೆ. ಅದರ ಬದಲಾಗಿ ಈ ಅಂಗಗಳು ರಸಕ್ಕೆ ಹೊಂದಿಕೆಯಾಗದೇ ಹೋದಾಗ ಅನುಚಿತವೆನಿಸುತ್ತದೆ. ಹೀಗೆ ಕಾವ್ಯ-ನಾಟಕಗಳ ಸಮಗ್ರ ಅಂಗಗಳು ರಸಕ್ಕೆ ಅನುಗುಣವಾಗಿ ಬಂದಿದೆಯೇ ಇಲ್ಲವೇ ಎಂಬ ಪರಿಶೀಲನೆಯೇ "ಔಚಿತ್ಯ ತತ್ವ". ಕವಿಯಾದವನು ರಸವನ್ನು ಪ್ರಧಾನವಾಗಿ ಗಮನದಲ್ಲಿಟ್ಟುಕೊಂಡು ಕಾವ್ಯದ ಇತರ ಎಲ್ಲಾ ಅಂಗಗಳನ್ನು ರಸಕ್ಕೆ ಅನುಗುಣವಾಗಿ ತರುವುದಕ್ಕೆ ಶ್ರಮಿಸಬೇಕು.
   
ಆನಂದವರ್ಧನನ ಅಭಿಪ್ರಾಯದಂತೆ "ರಸ"ವು ಕಾವ್ಯದ "ಅಂಗಿ". ವಸ್ತು, ಪಾತ್ರ, ಶೈಲಿ, ಅಲಂಕಾರ, ಗುಣ, ರೀತಿ ಇತರ ಎಲ್ಲಾ ಅಂಶಗಳೂ ಕಾವ್ಯದ ಅಂಗಗಳು. ಕಾವ್ಯದ ರಸವು ಸಮರ್ಪಕವಾಗಿ ಅಭಿವ್ಯಕ್ತವಾಗಬೇಕಾದರೆ ಈ ಅಂಗಿಗೂ ಮತ್ತು ಅಂಗಕ್ಕೂ ಹೊಂದಾಣಿಕೆ ಇರಬೇಕು. ಈ ಹೊಂದಿಕೆಯೇ "ಔಚಿತ್ಯ" ಎಂದು ಆನಂದವರ್ಧನನ ಅಭಿಪ್ರಾಯ.


"ಅನೌಚಿತ್ಯವನ್ನು ಬಿಟ್ಟರೆ ರಸಭಂಗಕ್ಕೆ ಬೇರೆ ಕಾರಣವಿಲ್ಲ. ಲೋಕಶಾಸ್ತ್ರಗಳಲ್ಲಿ ಪ್ರಸಿದ್ಧವಾಗಿರುವ ಔಚಿತ್ಯವನ್ನರಿತು ಅಂಗಗಳನ್ನು ಅಳವಡಿಸುವುದೇ ರಸದ ಪರಮ ರಹಸ್ಯ" ಎನ್ನುತ್ತಾನೆ ಆನಂದವರ್ಧನ.


ಔಚಿತ್ಯವನ್ನು ಸಾಧಿಸುವ ಬಗೆ:
  
ಕವಿಯು ಕಥಾವಸ್ತುವನ್ನು ಆಯ್ಕೆ ಮಾಡಿಕೊಳ್ಳುವಾಗ ಕಥಾ ಶರೀರವು ಮನೋಹರವಾಗಿರುವಂತೆ ಕಥಾ ಶರೀರವನ್ನು ಕಟ್ಟಬೇಕು ಎಂದು ಆನಂದವರ್ಧನ ಹೇಳುತ್ತಾನೆ. ಅಲ್ಲದೇ ಕಥಾವಸ್ತುವನ್ನು ತಾನೇ ಕಲ್ಪಿಸಿದಾಗಲಂತೂ ಬಹು ಎಚ್ಚರಿಕೆಯಿಂದ ಔಚಿತ್ಯವನ್ನು ಪಾಲಿಸಬೇಕು ಎಂದು ಹೇಳುತ್ತಾನೆ. ಕವಿಯು ಶಾಸ್ತ್ರದ ಅನುಕರಣೆಯನ್ನು ರಸಕ್ಕೆ ಪೋಷಕವಾಗುವ ಹಾಗೆ ತರಬೇಕೆ ಹೊರತು,ಅದಕ್ಕೆ ವಿರೋಧಿಯಾಗುವ ಹಾಗೆ ಅನುಸರಿಸಬಾರದು. ಅಷ್ಟೇ ಅಲ್ಲದೇ, ಪಂಡಿತರನ್ನು ಮೆಚ್ಚಿಸುವುದಕ್ಕಾಗಿ ಕವಿಯು ಲಕ್ಷಣ ಶಾಸ್ತ್ರ ಗ್ರಂಥಗಳ ನಿಯಮವನ್ನು ಅಕ್ಷರಷಃ ಪಾಲಿಸುವುದಕ್ಕೆ ಹೊರಡಬಾರದು. ಇದಕ್ಕೆ ಉದಾಹರಣೆಯಾಗಿ "ವೇಣಿಸಂಹಾರ" ನಾಟಕವನ್ನು ಕೊಡುತ್ತಾನೆ. 

ನಾಟಕದ ಎರಡನೆಯ ಅಂಕದಲ್ಲಿ ಇಂತಹ ಚಿತ್ರಣವಿದೆ. 

ನಾಟಕದಲ್ಲಿ ಈಗಾಗಲೇ ಯುದ್ಧ ಪ್ರಾರಂಭವಾಗಿರುವಾಗ, ಹಿಂದಿನ ಕಥೆಗೆ ಸಂಬಂಧವಿಲ್ಲದ, ಮುಂದಿನ ಕಥೆಗೆ ಪ್ರಯೋಜನವಿಲ್ಲದ ಪ್ರಣಯ ವಿಲಾಸವನ್ನು ಕವಿ ತಂದಿರುವುದು ಅತ್ಯಂತ ಅನುಚಿತವಾದುದು ಎನ್ನುತ್ತಾನೆ ಆನಂದವರ್ಧನ. ಇದರಿಂದ "ವೀರರಸ"ಕ್ಕೆ ಭಂಗವೊದಗಿದೆ ಎಂಬುದು ಆನಂದವರ್ಧನನ ಅಭಿಪ್ರಾಯ.
          
ಅಲ್ಲದೇ ರಸಕ್ಕೆ ಪೋಷಕಾವಾಗಿರುವಂತೆಯೇ ಅಲಂಕಾರವನ್ನು ರಚಿಸಬೇಕು. ಅಲಂಕಾರವನ್ನು ಸಮಯವರಿತು ತರಬೇಕು, ಸಮಯವರಿತು ಬಿಡಬೇಕು. ಅದನ್ನು ತಂದಾಗಲೂ ಅತಿಯಾಗಿ ಬೆಳೆಸಬಾರದು.ಒಂದು ವೇಳೆ ವಿಸ್ತರಿಸಿದರೂ ರಸಕ್ಕೆ ಅಂಗವಾಗಿಯೇ ನಿಲ್ಲುವಂತೆ ನೋಡಿಕೊಳ್ಳಬೇಕು. ಕವಿಯು ತನ್ನ ಅಲಂಕಾರ ರಚನೆಯ ಸಾಮರ್ಥ್ಯ ಮೆರೆಯಲಿಕ್ಕಾಗಿ ಸನ್ನಿವೇಶದಲ್ಲಿ ಅವಶ್ಯಕತೆ ಇರಲಿ,ಇಲ್ಲದಿರಲಿ ಅಲಂಕಾರಗಳನ್ನು ತಂದರೆ ಅದು ರಸಕ್ಕೆ ಭಂಗ ತಂದು ಅನೌಚಿತ್ಯವುಂಟಾಗುತ್ತದೆ ಎಂದು ಅವನ ಅಭಿಪ್ರಾಯ.

ಮುಖ್ಯ ರಸಕ್ಕೆ ಬೆಲೆ ಕೊಡದೇ ಈ ವರ್ಣನೆಗಳನ್ನು ಬೆಳೆಸಿದರೆ ತನಗೆ ಮಹಾಕವಿ ಪಟ್ಟ ದೊರೆಯುತ್ತದೆ ಎಂಬಂತೆ ಕವಿಗಳು ವರ್ತಿಸಿದ್ದಾರೆ.ಇಂತಹ ಕವಿಗಳಿಗೆ ನಮ್ಮ ಲಾಕ್ಷಣಿಕರು ಬಹು ಹಿಂದಿನಿಂದಲೂ ಎಚ್ಚರಿಕೆ ಕೊಡುತ್ತಲೇ ಬಂದಿದ್ದಾರೆ. ಸೂರ್ಯೋದಯ, ಚಂದ್ರೋದಯ ಮುಂತಾದ ವರ್ಣನೆಗಳು ಅದೆಷ್ಟೇ ರಸವತ್ತಾಗಿದ್ದರೂ ಪ್ರಸ್ತುತ ರಸಕ್ಕೆ ಸಂಬಂಧಪಡದಿದ್ದರೆ ಹೆಚ್ಚು ಬೆಳೆಸಬಾರದು. ನದಿ, ಬೆಟ್ಟ, ಸಾಗರ, ಕುದುರೆ, ತೇರು ಮೊದಲಾದ ವರ್ಣನೆಗೆ ಕೈ ಹಾಕುವುದರಿಂದ ಕವಿಶಕ್ತಿಯುಂಟೆಂಬ ಖ್ಯಾತಿಯೇನೋ ಉಂಟಾಗುತ್ತದೆ. ಆದರೆ ವಿಶಾಲಮತಿಗಳಿಗೆ ಇದು ತಕ್ಕದ್ದಲ್ಲ ಎನ್ನುತ್ತಾನೆ ಲೊಲ್ಲಟ ಎಂಬ ಲಾಕ್ಷಣಿಕ. ಹಾಗೆಯೇ ಪ್ರಸ್ತುತ ರಸಕ್ಕೆ ನೇರವಾಗಿ ಸಂಬಂಧಪಡದ ಒಂದು ವಿಷಯವನ್ನು ವರ್ಣಿಸಿದಲ್ಲಿ ರಸಭಂಗವಾಗುವುದು ಖಂಡಿತ ಎನ್ನುತ್ತಾನೆ ಆನಂದವರ್ಧನ.
          
ಎಂದರೆ ಕಾವ್ಯದಲ್ಲಿ ಯಾವುದಾದರೂ ಒಂದು ರಸಕ್ಕೆ ಪ್ರಾಧಾನ್ಯತೆ ನೀಡಿ ಚಿತ್ರಿಸಬೇಕು. ಉಳಿದ ಎಲ್ಲಾ ರಸಗಳೂ ಪೋಷಕವಾಗಿರಬೇಕು. ಉದಾಹರಣೆಗೆ ಮಹಾಭಾರತ ಕಥಾನಕದಲ್ಲಿ "ವೀರರಸ"ವೇ ಪ್ರಧಾನವಾಗಿದ್ದರೂ, ಅಲ್ಲಲ್ಲಿ ಅರ್ಜುನನ "ಶೃಂಗಾರ ರಸ" ಪ್ರಕರಣಗಳು, ಕರ್ಣನ "ಕರುಣರಸ"ಗಳು ಪೋಷಕವಾಗಿ ಬಂದಿವೆ. ಆದರೆ ಇದರಿಂದ ಪ್ರಧಾನರಸಕ್ಕೆ ಎಲ್ಲಿಯೂ ಭಂಗವುಂಟಾಗಿಲ್ಲ.


ಕ್ಷೇಮೇಂದ್ರನ "ಔಚಿತ್ಯ ವಿಚಾರ ಚರ್ಚಾ":
     
ಕ್ಷೇಮೇಂದ್ರನ ಕಾಲ ಕ್ರಿ.ಶ. ಹನ್ನೊಂದನೆಯ ಶತಮಾನ. ಸಂಸ್ಕೃತ ಸಾಹಿತ್ಯ ಇತಿಹಾಸದಲ್ಲಿ ಕ್ಷೇಮೇಂದ್ರನ ಹೆಸರು ಅವಿಸ್ಮರಣೀಯವಾದದ್ದು. ಸ್ವತಃ ಮಹಾ ಕವಿಯಾದ ಕ್ಷೇಮೇಂದ್ರ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾನೆ.ಅಲ್ಲದೇ ತಾನು ಮಂಡಿಸಿರುವ ಇಪ್ಪತ್ತೇಳು ಔಚಿತ್ಯ ಪ್ರಕಾರಗಳಿಗೆ ಉದಾಹರಣೆಯಾಗಿ ತನ್ನ ಸ್ವಂತ ಕಾವ್ಯವನ್ನೇ ಆರಿಸಿಕೊಂಡಿದ್ದಾನೆ.ಅಂದರೆ ಔಚಿತ್ಯ ಮತ್ತು ಅನೌಚಿತ್ಯ ದೋಷಕ್ಕೂ ಸ್ವಕೃತಿಯಿಂದ ಉದಾಹರಣೆ ಕೊಡುವ ಮೂಲಕ ವಿನಯ ಪ್ರಕಟಿಸಿದ್ದಾನೆ.

ಕ್ಷೇಮೇಂದ್ರನ ಪ್ರಕಾರ ಕಾವ್ಯದಲ್ಲಿ ಯಾವುದ್ಯಾವುದು ಎಲ್ಲೆಲ್ಲಿ ಬರಬೇಕೆಂದು ನಿರ್ಧರಿಸಲು ಇರುವ ಜ್ಞಾನವೇ "ಔಚಿತ್ಯ".
    
ಔಚಿತ್ಯ ಈತನಿಂದಲೇ ಮೊದಲ ಬಾರಿಗೆ ಪ್ರತಿಪಾದಿತವಾದ ತತ್ವವಲ್ಲ. ಇದುವರೆಗೂ ಅನೇಕ ಅಲಂಕಾರಿಕರು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಆದರೆ ಕ್ಷೇಮೇಂದ್ರನಿಂದಾಗಿ "ಔಚಿತ್ಯ" ಒಂದು ಸ್ವತಂತ್ರ ಸಿದ್ಧಾಂತದ ಸ್ಥಾನ ಪಡೆಯಿತು.
      
ಕಾವ್ಯಕ್ಕೆ ರಸವೇ ಆತ್ಮ. ಆ ರಸಕ್ಕೆ ಔಚಿತ್ಯವೇ ಪ್ರಾಣ ಎನ್ನುತ್ತಾನೆ. ಎಂದರೆ ಅಲಂಕಾರಗಳು ಅಲಂಕಾರಗಳೇ, ಗುಣಗಳು ಯಾವಾಗಲೂ ಗುಣಗಳೇ. ಕಾವ್ಯಕ್ಕೆ ರಸಸಿದ್ಧವಾದ ಔಚಿತ್ಯವೊಂದೇ ಜೀವ ಎನ್ನುತ್ತಾನೆ. ಇದರರ್ಥ ಗುಣ ಮತ್ತು ಅಲಂಕಾರಗಳು ಔಚಿತ್ಯದಿಂದ ನಿಯಂತ್ರಿತ ವಾಗಿರಬೇಕು. ಉಚಿತವಾದ ಸ್ಥಾನದಲ್ಲಿರಿಸಿದಾಗಲೇ ಅಲಂಕಾರವು ಅಲಂಕಾರವಾಗುತ್ತದೆ. ಈ ಮಾತನ್ನು ಭರತನಲ್ಲಿಯೂ ನಾವು ಕಾಣುತ್ತೇವೆ. ಭರತ ಔಚಿತ್ಯವನ್ನು ಕುರಿತು ಹೇಳುತ್ತಾ "ಸೊಂಟದ ಆಭರಣವನ್ನು ಎದೆಯ ಮೇಲೆ ಧರಿಸಿದರೆ ಹಾಸ್ಯಾಸ್ಪದವಾಗುತ್ತದೆ" ಎಂದು ಹೇಳಿರುವುದನ್ನು ಸ್ಮರಿಸಬಹುದು. ಇದೇ ಅಭಿಪ್ರಾಯವನ್ನು ಕ್ಷೇಮೇಂದ್ರ ವಿಸ್ತರಿಸಿದ್ದಾನಷ್ಟೇ. ಅಲ್ಲದೇ ಈತ ಆನಂದವರ್ಧನನ ಅಭಿಪ್ರಾಯವನ್ನೇ ಇನ್ನೊಂದು ರೀತಿಯಲ್ಲಿ ನಿರೂಪಿಸುತ್ತಾನೆ. ಕ್ಷೇಮೇಂದ್ರನ ಹೇಳಿಕೆಗಳಲ್ಲಿ ಆನಂದವರ್ಧನನ ಪ್ರಭಾವವೇ ಎದ್ದು ಕಾಣುತ್ತದೆ.
  
ತನ್ನ ಇನಿಯನಿಂದ ಅಗಲಿ ದುಃಖವನ್ನು ಅನುಭವಿಸುತ್ತಿರುವವಳನ್ನು ವರ್ಣಿಸುವಾಗ ಅವಳು ಒಡವೆ-ವಸ್ತ್ರಗಳಿಂದ ಅಲಂಕೃತಳಾಗಿರುವಂತೆ ವರ್ಣಿಸುವುದು ಯುಕ್ತವಲ್ಲ. ರಸಕ್ಕೆ ಸಹಾಯಕವಾಗುವಂತೆ ವರ್ಣಿಸಬೇಕು. ಅದೇ ಔಚಿತ್ಯ. ಒಡವೆಗಳನ್ನು ಆಯಾ ಸ್ಥಳಗಳಲ್ಲಿ ಹಾಕಿಕೊಂಡರೆ ಮಾತ್ರ ಶೋಭಿಸುವಂತೆ, ವರ್ಣನೆಗಳು ಸನ್ನಿವೇಶಕ್ಕನುಗುಣವಾಗಿ ಬರಬೇಕೆಂದು ಭರತ ಹೇಳಿರುವುದನ್ನೇ ಕ್ಷೇಮೇಂದ್ರ ಇನ್ನೂ ವಿಸ್ತರಿಸಿದ್ದಾನೆ.
   
ಈತನ "ಔಚಿತ್ಯ ವಿಚಾರ ಚರ್ಚಾ" ಬಹಳ ಚಿಕ್ಕ ಕೃತಿ. ಅಲ್ಲದೇ ಔಚಿತ್ಯವನ್ನು ಕುರಿತು ಆನಂದವರ್ಧನ, ಅಭಿನವಗುಪ್ತರು ಹೇಳಿರುವುದಕ್ಕಿಂತ ಹೆಚ್ಚೇನೂ ಹೇಳಿಲ್ಲ. ವಕ್ರೋಕ್ತಿಗೆ ಕುಂತಕ ಇದ್ದಂತೆ, ಔಚಿತ್ಯಕ್ಕೆ ಕ್ಷೇಮೇಂದ್ರ ಎಂದು ಹೇಳಬಹುದು.

ಕ್ಷೇಮೇಂದ್ರ ಇಪ್ಪತ್ತೇಳು ಕಾವ್ಯಾಂಗಗಳನ್ನು ಹೇಳಿ, ಈ ಎಲ್ಲವುಗಳಲ್ಲಿಯೂ ಔಚಿತ್ಯವಿರಬೇಕೆಂದು ಉದಾಹರಣೆಗಳ ಮೂಲಕ ವಿವರಿಸುತ್ತಾನೆ.
    
"ಪದೌಚಿತ್ಯ"ವನ್ನು ಕುರಿತು ಒಂದೇ ಉಚಿತ ಪದವನ್ನೊಳಗೊಂಡ ಸೂಕ್ತಿ ಸಹ ಕಸ್ತೂರಿ ಚಂದನವನ್ನಿಟ್ಟುಕೊಂಡ ಶ್ಯಾಮಲ ಯುವತಿಯಂತೆ ಶೋಭಿಸುತ್ತದೆ ಎನ್ನುತ್ತಾನೆ. ಎಂದರೆ ಔಚಿತ್ಯವನ್ನರಿತು ಬಂದ ಒಂದೇ ಒಂದು ಪದ ಇಡೀ ಕಾವ್ಯಕ್ಕೆ ಶೋಭೆ ತರುತ್ತದೆ ಎಂದು ಸುಂದರವಾದ ಉದಾಹರಣೆಗಳಿಂದ ವಿವರಿಸಿದ್ದಾನೆ.
     
ಅನಂತರ "ಪ್ರಬಂದಾರ್ಥದಲ್ಲಿ ಔಚಿತ್ಯ" ಎಂಬಲ್ಲಿ ಉಚಿತವಾದ ಅರ್ಥ ವಿಶೇಷದಿಂದ ಇಡಿಯ ಪ್ರಬಂಧದ ಅರ್ಥ ಪ್ರಕಾಶಿತವಾಗುತ್ತದೆ ಎನ್ನುತ್ತಾನೆ. ವರ್ಣಿತವಾದ ವಸ್ತು ವಿಶೇಷದಿಂದ ಇಡೀ ಕಾವ್ಯಕ್ಕೆ ಬೆಳಕು ಉಂಟಾಗುವಂತಿರಬೇಕು. ಇದನ್ನು ಪ್ರಬಂಧೌಚಿತ್ಯ ಎಂದು ವಿವರಿಸಿದ್ದಾನೆ. ಇದಕ್ಕಾಗಿ ಕಾಳಿದಾಸ ಮತ್ತು ಭವಭೂತಿಯರ ಕೃತಿಗಳಲ್ಲಿನ ಪ್ರಸಂಗಗಳನ್ನು ವಿವರಿಸಿದ್ದಾನೆ. ಹಾಗೆಯೇ ಅನೌಚಿತ್ಯಕ್ಕೂ ಕಾಳಿದಾಸನಿಂದಲೇ ಉದಾಹರಣೆಯನ್ನು ಆರಿಸಿಕೊಂಡಿದ್ದಾನೆ.
    
ಮುಂದೆ ಗುಣ ಮತ್ತು ಅಲಂಕಾರಗಳ ಔಚಿತ್ಯವನ್ನು ವಿವರಿಸಿದ್ದಾನೆ. ನಂತರದ್ದೇ ರಸೌಚಿತ್ಯ.ಇದನ್ನು ಅನೇಕ ಉದಾಹರಣೆಗಳಿಂದ ಬಹಳ ದೀರ್ಘವಾಗಿ ಪ್ರತಿಪಾದಿಸಿದ್ದಾನೆ. ಒಂದೊಂದು ರಸಕ್ಕೂ ಒಂದೊಂದು ಉದಾಹರಣೆ ಕೊಟ್ಟಿದ್ದಾನೆ. ಹೀಗೆ ಒಂದಾದ ನಂತರ ಮತ್ತೊಂದರಂತೆ ಇಪ್ಪತ್ತೇಳು ಔಚಿತ್ಯವನ್ನು ಹೇಳಿದ್ದಾನೆ.

ಉಪಸಂಹಾರ:

ಒಟ್ಟಿನಲ್ಲಿ ಈತನ ಕೃತಿ ಚಿಕ್ಕದಾಗಿದ್ದು, ಉದ್ದೇಶಿತ ವಿಷಯವಲ್ಲದೇ ಅತ್ತಿತ್ತ ಕಣ್ಣು ಹಾಯಿಸದೇ, ನೇರವಾಗಿ ಔಚಿತ್ಯವನ್ನು ಮಾತ್ರ ಪ್ರತಿಪಾದಿಸಿದ್ದಾನೆ. ಗುಣ, ಅಲಂಕಾರ, ರೀತಿ, ರಸ, ಧ್ವನಿ, ಎಲ್ಲವೂ ಇಲ್ಲಿ ಸಮಾವೇಶಗೊಳ್ಳುತ್ತದೆ. ಇವುಗಳನ್ನೆಲ್ಲಾ ನಿಯಂತ್ರಿಸುವುದೇ ಔಚಿತ್ಯ. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಇದು ಕೊನೆಯ ತತ್ವ. ಎಲ್ಲಾ ಅಲಂಕಾರಿಕರೂ ಒಂದಲ್ಲ ಒಂದು ರೀತಿಯಲ್ಲಿ ಇದನ್ನು ಗುರುತಿಸಿದ್ದಾರೆ.

(ವಿವಿಧ ಮೂಲಗಳಿಂದ)

**************
ಕೆ.ಎ.ಸೌಮ್ಯ
ಮೈಸೂರು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)