ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾಷೆಯ ಮೂಲರೂಪವನ್ನು ಪೂರ್ವದ ಹಳೆಗನ್ನಡ ಎಂದುಕೊಂಡರೆ, ನಂತರದ ರೂಪವನ್ನು ಹಳೆಗನ್ನಡ ರೂಪ ಎಂದೂ, ಅದರ ಮುಂದಿನ ಸ್ವರೂಪವನ್ನು ನಡುಗನ್ನಡ ಸ್ವರೂಪವೆಂದು, ಅದರ ನಂತರದ ರೂಪವನ್ನು ಹೊಸಗನ್ನಡ ರೂಪವೆಂದು ಗುರುತಿಸಲಾಗುತ್ತದೆ.

* ಪೂರ್ವದ ಹಳೆಗನ್ನಡ
* ಹಳೆಗನ್ನಡ
* ನಡುಗನ್ನಡ
* ಹೊಸಕನ್ನಡ

"ಮಧ್ಯಕಾಲೀನ ಕನ್ನಡ ಸಾಹಿತ್ಯ" ದ ಕಾಲದ ಭಾಷೆಯನ್ನು ನಡುಗನ್ನಡ ಭಾಷೆ ಎಂದು ಗುರುತಿಸಬಹುದಾಗಿದೆ. ಈ ಭಾಷೆಯ ಮೊದಲ ಹಂತವು ವಚನಕಾರರ ಉಗಮದೊಂದಿಗೆ ಆರಂಭವಾಗಿದೆ.

ಸಂಸ್ಕೃತದ ಪ್ರಭಾವ :

ಕನ್ನಡ ಮಾತ್ರವಲ್ಲ, ಇತರ ಎಲ್ಲಾ ಭಾರತೀಯ ಭಾಷೆಗಳ ಮೇಲೆಯೂ ಸಂಸ್ಕೃತ ಪ್ರಭಾವ ಬೀರಿದ್ದ ಕಾಲವದು. ಕನ್ನಡ ಸಾಹಿತ್ಯ ಸಂದರ್ಭದಲ್ಲಿಯೂ ಸಹ ಸಂಸ್ಕೃತದಿಂದ ಸ್ವತಂತ್ರವಾಗಿ ಯೋಚಿಸಲಾರದಷ್ಟು ಅನಿವಾರ್ಯತೆಯನ್ನು ಪಡೆದುಕೊಂಡಿತ್ತು. ಅಲ್ಲದೇ ಸಾಹಿತ್ಯವು ಕೇವಲ ರಾಜಪರಂಪರೆಗಷ್ಟೇ ಸೀಮಿತವಾಗಿದ್ದುದರಿಂದ ಭಾಷೆಯು ಕ್ಲಿಷ್ಟವೂ, ಸಂಕೀರ್ಣವೂ ಆಗಿತ್ತು. ಸಾಹಿತ್ಯಕ್ಕೆ ಸಂಸ್ಕೃತ-ಪ್ರಾಕೃತಗಳೇ ಮೂಲ ಆಕರಗಳಾದುದರಿಂದ ಭಾಷೆಯು ಸಹಜವಾಗಿ ಸಾಕಷ್ಟು ಪ್ರೌಢವಾಗಿತ್ತು. ಜನಸಾಮಾನ್ಯನಂತೂ ಸಾಹಿತ್ಯದಿಂದ ತುಂಬಾ ದೂರ ಉಳಿದುಬಿಟ್ಟಿದ್ದ. 

ಒಟ್ಟಿನಲ್ಲಿ ಸಂಸ್ಕೃತ ಭಾಷೆಯ ಶಿಷ್ಟತೆ ಕನ್ನಡ ಸಾಹಿತ್ಯದ ಮೇಲೆ ಅಪಾರ ಪರಿಣಾಮವನ್ನು ಬೀರಿತು. ಯಾವುದೇ ಒಂದು ಸೃಜನಶೀಲ ಭಾಷೆಯ ಬೆಳವಣಿಗೆಗೆ ಈ ರೀತಿಯ ಪ್ರಭಾವ-ಪ್ರೇರಣೆಗಳು ಅವಶ್ಯಕ. ಇದರಿಂದ ಭಾಷೆ ಪಡೆದುಕೊಂಡಷ್ಟೂ ಗಟ್ಟಿಗೊಳ್ಳುತ್ತಾ ಹೋಗುತ್ತದೆ. ಜೊತೆಗೆ ಸ್ವಂತಿಕೆಯನ್ನೂ ಕಾಪಾಡಿಕೊಳ್ಳುತ್ತದೆ.

ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಇದೇ ರೀತಿ ಆಯ್ತು.

ಮೂಲ ದ್ರಾವಿಡದಿಂದ ಕನ್ನಡ ಬೇರೆಯಾದ ಮೇಲೆ ಸಂಸ್ಕೃತ ಮತ್ತು ಪ್ರಾಕೃತಗಳು ವಿಶೇಷವಾಗಿ ಅದನ್ನು ಪೋಷಿಸಿ ಬೆಳೆಸಿದವು. ಇವೆರೆಡೂ ಭಾಷೆಗಳ ಸಾರ ಹೀರಿದ ಕನ್ನಡ ಹೆಮ್ಮರವಾಗಿ ಬೆಳೆಯಿತು. ಜತೆಯಲ್ಲಿ ಸ್ವಂತಿಕೆಯನ್ನೂ ಕಾಯ್ದುಕೊಂಡಿತ್ತು. 

ನಡುಗನ್ನಡ ಭಾಷೆ:

ಹನ್ನೆರಡನೆಯ ಶತಮಾನದವರೆಗೂ ಭಾಷೆ ತುಂಬಾ ಕ್ಲಿಷ್ಟವಾಗಿದ್ದು ಅರ್ಥ ಮಾಡಿಕೊಳ್ಳಲು ತುಂಬಾ ಕಷ್ಟವಾಗಿತ್ತು. ಆದರೆ ಹನ್ನೆರಡನೆಯ ಶತಮಾನದಲ್ಲಿ ಭಾಷೆಯು ಕ್ಲಿಷ್ಟತೆಯಿಂದ ಸರಳತೆಯೆಡೆಗೆ ಸಾಗತೊಡಗಿತು. ಕಾವ್ಯ ರಚನೆ ಕೇವಲ‌ಪಂಡಿತರಿಗೆ ಮಾತ್ರವೇ ಅಲ್ಲ, ಜನಸಾಮಾನ್ಯರಿಗೂ ಅರ್ಥವಾಗಬೇಕೆಂಬ ಕೂಗು ಎದ್ದಿತು. ಕಾವ್ಯ ರಚನೆಯಲ್ಲಿ ಅನಾವಶ್ಯಕ ಆಡಂಬರ, ಅತಿಯಾದ ಅಲಂಕಾರಗಳ ಬಳಕೆ ಕೈಬಿಡಬಹುದೆಂಬ ಕೂಗು ಕೇಳಿಬರತೊಡಗಿತು. ಭಾಷೆ ಸರಳವಾಗುತ್ತಾ ಜನರನ್ನು ತಲುಪಲಾರಂಭಿಸಿತು. 

ವ್ಯಾಕರಣದ ದೃಷ್ಟಿಯಿಂದ ಹಿಂದಿನ ಯುಗದ ಭಾಷೆಗೂ, ಅಂದಿನ ಭಾಷೆಗೂ ಅಂತಹ ವ್ಯತ್ಯಾಸವೇನೂ ಇರದಿದ್ದರೂ ಪರಿವರ್ತನೆಯ ಹಾದಿ ತೆರೆದಾಗಿತ್ತು. ಹಳೆಗನ್ನಡ ಮತ್ತು ನಡುಗನ್ನಡ ಮಿಶ್ರಿತ ಭಾಷೆಯ ಸಾಹಿತ್ಯ ಸೃಷ್ಟಿಯಾದರೂ ಹಳೆಗನ್ನಡ ಸಂದರ್ಭದಲ್ಲಿದ್ದ ಕ್ಲಿಷ್ಟತೆ ಇರಲಿಲ್ಲ. ಹೊಸ ಹೊಸ ಪದಗಳನ್ನು ಆವಿಷ್ಕರಿಸುತ್ತಾ ಭಾಷೆಯ ವ್ಯಾಪ್ತಿ ಹಿರಿದಾಗತೊಡಗಿತು.

ಕಾವ್ಯದ ವಸ್ತು, ಭಾಷೆ, ರೂಪಗಳ ಮೇಲೆ ಸಂಸ್ಕೃತದ ಪ್ರಭಾವ ಕಡಿಮೆಯಾಗತೊಡಗಿತು. ಅಲ್ಲಲ್ಲಿ ಸಂಸ್ಕೃತ ಪದ ಬಳಕೆಯಾದರೂ, ಅದು ಕನ್ನಡದ್ದೇ ಎನ್ನುವಷ್ಟು ಸ್ವಂತದ್ದಾಗಿ ಹೋಗಿದ್ದವು.

ಉದಾ:

"ದಯೆಯೇ ಧರ್ಮದ ಮೂಲವಯ್ಯ" ಎಂಬ ಬಸವಣ್ಣನವರ ಈ ವಚನದಲ್ಲಿ 'ದಯೆ' , 'ಧರ್ಮ' ಮತ್ತು 'ಮೂಲ' ಪದಗಳು ಸಂಸ್ಕೃತದ್ದಾದರೂ, ಜನಸಾಮಾನ್ಯನೂ ಅರ್ಥಮಾಡಿಕೊಳ್ಳಬಹುದಾದಂತಹ ಪದಗಳಾಗಿದ್ದವು. ಮುಖ್ಯವಾಗಿ "ಮಧ್ಯಕಾಲೀನ ಕನ್ನಡ ಸಾಹಿತ್ಯ"ವು ಜನ ಸಾಮಾನ್ಯನಿಗೆ ಹತ್ತಿರವಾಗಿತ್ತು. ಎಂದರೆ ಅವರು ಅರ್ಥ ಅರ್ಥಮಾಡಿಕೊಳ್ಳುವಂಥದ್ದಾಗಿತ್ತು. ಅಂದರೆ ಅದರಲ್ಲಿ ದೇಸೀಯ ಹತ್ರತೆಯ ಅಂಶ ಕಾಣಿಸಿತು.


"ಒಟ್ಟಿನಲ್ಲಿ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಅಪರೂಪದ ಮತ್ತು ಅಪೂರ್ವ ಕ್ರಾಂತಿಯೇ ಈ ಯುಗದಲ್ಲಾಯಿತು"

ವಚನಗಳು:

ಈ ಯುಗದ ಒಂದು ಮುಖ್ಯ ಬದಲಾವಣೆ ಎಂದರೆ ಕವಿಗಳು ರಾಜಾಶ್ರಯವನ್ನು ತೊರೆದದ್ದು‌ ಮತ್ತು ಜನರ ಮುಂದೆ ಬಂದು ನಿಂತದ್ದು.

"ವಚನ" ಎಂದರೆ ಸೂಳ್ನುಡಿ, ಸಂಭಾಷಣೆ, ಪ್ರತಿಮಾತು ಅಂತಲೂ ಕರೆಯುತ್ತಾರೆ. ಇದರ ಉದ್ದೇಶ ಇಷ್ಟೇ.... ಸರಳವಾಗುವುದು.

ವಚನಗಳು ಕೇವಲ ಪದ್ಯವಲ್ಲದ, ಗದ್ಯವೂ ಅಲ್ಲದ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾಗಿತ್ತು. 

ವಚನ -------> ಪದ್ಯವಲ್ಲದ ಗದ್ಯವಲ್ಲದ
                      ಒಂದು ವಿಶಿಷ್ಟ ರಚನೆ.


ವಚನಗಳು ನಡುಗನ್ನಡ ಭಾಷೆಯ ಆಡುಮಾತಿನ ಲಯದ ಆಧ್ಯಾತ್ಮ ಗೀತೆಗಳಾಗಿದ್ದವು. ಇವನ್ನು "ಕನ್ನಡ ಸಾಹಿತ್ಯದ ಉಪನಿಷತ್" ಅಂತಲೂ ಕರೆಯುತ್ತಾರೆ.

ವಚನ ಸಾಹಿತ್ಯ ಪ್ರಕಾರ 1140 ರ ದೇವರ ದಾಸಿಮಯ್ಯನೆಂಬ ಶರಣನಿಂದ ಆರಂಭವಾಯ್ತು. ಮುಂದೆ ಅಕ್ಕಮಹಾದೇವಿ, ಬಸವಣ್ಣ, ಅಲ್ಲಮಪ್ರಭು ಈ ಕುರಿತು ಗಂಭೀರ ಕೃಷಿ ನಡೆಸಿದರು. ವಚನಕಾರರು ಅನಿಸಿದ್ದನ್ನು ನೇರವಾಗಿ ಹೇಳಿದರು. ಅವರ ಭಾಷೆ ಬಹಳ ಸರಳವಾಗಿದ್ದು, ಯಾವ ಕ್ಲಿಷ್ಟತೆಯಾಗಲೀ, ಭಾಷಾಡಂಬರವಾಗಲೀ, ಪದಗಳ ಚಮತ್ಕಾರವಾಗಲೀ ಇರಲಿಲ್ಲ. ಅವರ ಜೀವನದ ಅನುಭವಗಳನ್ನು ಜನರ ಮುಂದೆ ತೆರೆದಿಡುವುದಷ್ಟೇ ಅವರ ಗುರಿಯಾಗಿತ್ತು. ಆದ್ದರಿಂದ ಯಾವ ಭಾಷಾಡಂಬರಕ್ಕೂ, ಪಾಂಡಿತ್ಯ ಪ್ರದರ್ಶನಕ್ಕೂ ಅವಕಾಶವಿರಲಿಲ್ಲ. 

ಈ ಹಂತದ ಭಾಷೆಯಲ್ಲಿ ಯಾವುದೇ ನಿರ್ದಿಷ್ಟ ವಸ್ತುವಿನ ಮೇಲೆ ಮಹಾಕಾವ್ಯ ಸೃಷ್ಟಿಯಾಗಲಿಲ್ಲ ಎನ್ನುವುದನ್ನು ಬಿಟ್ಟರೆ, ಬಿಡಿಬಿಡಿಯಾದ ವಚನಗಳು ಮಹತ್ತರವಾದುದನ್ನು ಸಾಧಿಸಿದವು.

ದಾಸ ಸಾಹಿತ್ಯ: 

ಹದಿನೈದನೇ ಶತಮಾನದ ನಂತರ ಕಾಣುವ ಮಹತ್ವದ ಘಟ್ಟ ದಾಸಸಾಹಿತ್ಯದ್ದು. ವಚನಗಳಿಗೆ ಹೇಗೆ ಶರಣರೋ, ಹಾಗೆ ಕೀರ್ತನೆಗಳಿಗೆ ದಾಸರು. ಆಡುಮಾತಿನ ಭಾಷೆಗೆ ಅತ್ಯಂತ ನಿಕಟವಾಗಿದ್ದ ಈ ಸಾಹಿತ್ಯ ಪ್ರಕಾರ ಆ ಕಾಲದಲ್ಲಿ ರಾಶಿರಾಶಿಯಾಗಿ ಸೃಷ್ಟಿಯಾಯ್ತು. ಕೀರ್ತನಕಾರರು ಸಮಾಜದ ಡೊಂಕಿನ ಬಗ್ಗೆ ಮಾತನಾಡುತ್ತಾ ಜೊತೆಯಲ್ಲಿ ಧರ್ಮವನ್ನೂ ಸಾರಿದರು. 

ಪರಂದರ ದಾಸರು 'ದಾಸರೆಂದರೆ ಪುರಂದರ ದಾಸರಯ್ಯಾ' ಎಂದು ತಮ್ಮ ಗುರುಗಳಾದ ವ್ಯಾಸರಾಯರಿಂದ ಹೊಗಳಿಸಿಕೊಂಡವರು. ಇವರು ಸುಮಾರು 4,75,000 ಕೀರ್ತನೆಗಳನ್ನು ರಚಿಸಿದ್ದಾರೆ ಎನ್ನಲಾಗಿದೆ. ನಂತರ ಬಂದ ಕನಕದಾಸರು ಕೀರ್ತನೆಗಳನ್ನು ರಚಿಸಿದರೂ ಅದಕ್ಕೇ ಸೀಮಿತಗೊಳ್ಳಲಿಲ್ಲ. ಮುಂಡಿಗೆ, ಸಾಂಗತ್ಯಗಳನ್ನೂ ಬಳಸಿ ಕೃತಿ ರಚನೆ ಮಾಡಿದರು. 


ಸರಳ ಮಾತಿನ ಕೀರ್ತನೆಗಳು ತುಂಬಾ ಸುಲಭವಾಗಿ ಜನಸಾಮಾನ್ಯರನ್ನು ತಲುಪಿದವು ಮತ್ತು ಜನರು ಇದಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸಿದರು. ಇದು ಸಹಜವೇ ಆಗಿತ್ತು. ಒಟ್ಟಿನಲ್ಲಿ ಜನರು ಸಾಹಿತ್ಯದ ಕಡೆ ಬರುವ ಹಾಗೆ, ಸಾಹಿತ್ಯವೂ ಜನರ ಕಡೆ ಬರಬಹುದಾದ ಸಾಧ್ಯತೆಯನ್ನು ಕೀರ್ತನೆಗಳು ತೋರಿಸಿಕೊಟ್ಟವು. 

ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ರಗಳೆ, ಸಾಂಗತ್ಯ, ಷಟ್ಪದಿಗಳಂತಹಾ ಛಂದೋಬಂಧಗಳು ಬಳಕೆಯಾದವು. ಇವುಗಳಲ್ಲಿ ಮುಖ್ಯವಾದದ್ದು ರತ್ನಾಕರವರ್ಣಿಯ ಸಾಂಗತ್ಯ ಕೃತಿಯಾದ "ಭರತೇಶ ವೈಭವ".

ಉಪಸಂಹಾರ

ದಾಸಸಾಹಿತ್ಯದ ಮೇಲೆ ವಚನ ಸಾಹಿತ್ಯದ ಪ್ರಭಾವವನ್ನು ಅಲ್ಲಗಳೆಯುವಂತಿಲ್ಲ. ಹನ್ನೆರಡನೆಯ ಶತಮಾನದಲ್ಲಿ ನಡೆದ ವಚನ ಕ್ರಾಂತಿಯೇ ಹದಿನೈದನೇ ಶತಮಾನದ ದಾಸ ಸಾಹಿತ್ಯಕ್ಕೆ ಮುನ್ನುಡಿಯನ್ನು ಹಾಕಿಕೊಟ್ಟಿತ್ತು. ಒಟ್ಟಿನಲ್ಲಿ ದಾಸಸಾಹಿತ್ಯದ ವೈಶಿಷ್ಟ್ಯವೆಂದರೆ ಎಷ್ಟೇ ಉನ್ನತ ಸ್ಥರದಲ್ಲಿ ಹುಟ್ಟಿದರೂ, ಸಮಾಜದ ಎಲ್ಲ ಸ್ಥರದ ಜನರನ್ನೂ ಅದು ತಲುಪಿತು.

************
ಕೆ.ಎ.ಸೌಮ್ಯ
ಮೈಸೂರು






ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)