ನೀರು ಲೋಹದ ಚಿಂತೆ - ಕವನ ಸಂಕಲನ (ಎಂ.ಎ.ಕನ್ನಡ)

ಲೇಖಕರ ಪರಿಚಯ:

'ನೀರು ಲೋಹದ ಚಿಂತೆ' ಕವನ ಸಂಕಲನವನ್ನು ಬರೆದಿರುವವರು "ವಿಜಯಾ ದಬ್ಬೆ" ರವರು. ಇವರು ಆಧುನಿಕ ಮಹಿಳಾ ಕನ್ನಡ ಸಾಹಿತ್ಯದಲ್ಲಿ ಪ್ರಮುಖವಾದ ಲೇಖಕಿ.‌ ಕನ್ನಡದಲ್ಲಿ ಸ್ರ್ತೀ ಸಾಹಿತ್ಯವನ್ನು ಬೆಳೆಸುವಲ್ಲಿ ಇವರ ಪಾತ್ರ ದೊಡ್ಡದು.

"ಮಹಿಳಾ ಸಾಹಿತ್ಯವೆಂದರೆ ಅಡುಗೆ ಮನೆ ಸಾಹಿತ್ಯ" ಎಂಬ ಕೂಗು ಕೇಳಿ ಬರುತ್ತಿದ್ದ ಹೊತ್ತಿನಲ್ಲಿ ವಿಜಯಾ ದಬ್ಬೆ ರವರು ಬರವಣಿಗೆಗೆ ಇಳಿದರು. ಸಾಹಿತ್ಯ ವಿಮರ್ಶೆ, ಪ್ರವಾಸ ಕಥನ, ಗ್ರಂಥ ಸಂಪಾದನೆ, ಅನುವಾದ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ದುಡಿದರು. ಇವರನ್ನು ಕೇವಲ ಕವಿ ಎಂದೋ ಅಥವಾ ವಿಮರ್ಶಕಿಯೆಂದೋ ಗುರುತಿಸುವುದು ಕಷ್ಟ. ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿರುವುದರಿಂದ ಇವರನ್ನು ಅನನ್ಯ ಲೇಖಕಿ ಎನ್ನಬಹುದಾಗಿದೆ.

ಕನ್ನಡ ಎಂ.ಎ ಅನ್ನು ಮಾನಸ ಗಂಗೋತ್ರಿಯಲ್ಲಿ ಮುಗಿಸಿದ ವಿಜಯ ದಬ್ಬೆಯವರು ಮುಂದೆ ಸುಪ್ರಸಿದ್ಧ ಸಾಹಿತಿಯಾದ ಡಾ. ಹಾ.ಮಾ.ನಾಯಕರ ನೇತೃತ್ವದಲ್ಲಿ "ನಾಗಚಂದ್ರ: ಒಂದು ಅಧ್ಯಯನ" ಎಂಬ ವಿಷಯದ ಮೇಲೆ ಅಧ್ಯಯನ ಕೈಗೊಂಡು ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದರು.

ವಿಜಯ ದಬ್ಬೆ ರವರ ಕವನಗಳು ವಿಶಿಷ್ಟತೆಯನ್ನು ಕಾಪಾಡಿಕೊಂಡಿವೆ. ಭಾಷೆಯ ಹಿತಮಿತವಾದ ಬಳಕೆ ಅವರ ಕವನಗಳಲ್ಲಿ ಎದ್ದು ಕಾಣುವ ಗುಣ. ಮತ್ತೊಂದು ಗುಣವೆಂದರೆ ಸಮಾನತೆಯ ದೃಷ್ಟಿಕೋನ. ಸ್ತ್ರೀತ್ವದ ಬಗೆಗಿನ ಪಾಪಪ್ರಜ್ಞೆಯಾಗಲೀ, ಗಂಡಸರ ಮೇಲಿನ ವ್ಯಂಗ್ಯವಾಗಲೀ ಅವರ ಕವನಗಳಲ್ಲಿ ಇಲ್ಲ. ಇದು ವಿಜಯಾ ದಬ್ಬೆ ಅವರನ್ನು ಬೇರೆಯವರಿಗಿಂತ ಭಿನ್ನವಾಗಿ ನಿಲ್ಲುವಂತೆ ಮಾಡಿದೆ. 

ಕವನ: ರಾಣಿ ತಿಮ್ಮಿಯ ಸಿಂಹಾಸನ

ನೀರು ಲೋಹದ ಚಿಂತೆ ಕವನ ಸಂಕಲನದ ಮೊದಲ ಕವನ‌ ಇದು. ಇದು ಕಥನ ಕವನದ ಮಾದರಿಯಲ್ಲಿದೆ. ಯಾವ ಕವನವು ಕಥನದ ಅಂಶಗಳನ್ನು ಒಳಗೊಂಡಿರುತ್ತದೆಯೋ ಅದನ್ನು ಕಥನ ಕವನ ಎಂದು ಕರೆಯಲಾಗುತ್ತದೆ.

"...ನಮ್ಮೂರಿನ
ಬಂಡೆಬಂಡೆಯ ಮೇಲೆ
ಪ್ರಗತಿಪಥದ ಹಾಡು
ಇಲ್ಲಿ
ನಾಯಿನರಿಗಳು
ಸಮಾನತೆಯಿಂದ
ಬೊಗಳುತ್ತವೆ...."

ಒಂದು ಊರು. ಆ ಊರಿನ ಬಂಡೆಯ ಮೇಲೆ  ಪ್ರಗತಿ ಪಥದ ಹಾಡು ಬರೆಯಲಾಗಿದೆ. ನಾಯಿ-ನರಿಗಳೂ ಇಲ್ಲಿ ಸಮಾನತೆಯಿಂದ ಬೊಗಳುತ್ತವೆ ಎನ್ನುವಾಗ ಲೇಖಕಿ ವ್ಯಂಗ್ಯ ಉಪಯೋಗಿಸಿದ್ದಾರೆ. ಅಂತಹ ಊರಿನಲ್ಲಿ ನಾಟಕವಾಡುವ ತಯಾರಿ ನಡೆಯುತ್ತದೆ.

ಮನೆ-ಮನೆ ಹುಡುಕಿ ತಿಮ್ಮಿಯನ್ನು ಆರಿಸುತ್ತಾರೆ.

ತಿಮ್ಮಿಗೋ ಇಂತಹ ಖಯಾಲಿ ಬಹಳ. ನೀನೇ ನಾಟಕದ ಜೀವ ಎಂದುಬಿಟ್ಟರೆ ಗಾಳಿಯಲ್ಲಿ ತೇಲುತ್ತಾಳೆ. ನಾಟಕದ ರಾಜ ರಂಗದ ಮೇಲೆ ಅವಳ ಕಾಲಿಗೆ ಬಿದ್ದರೆ ಅದಕ್ಕಿಂತಾ ಖುಷಿ ಅವಳಿಗೇನಿದೆ?

ಆದರೆ ರಂಗ ತಾಲೀಮಿಗೆ ಬಂದ ಅವಳ ಗಂಡ ಅವಳಿಗೆ ನಾಟಕದಲ್ಲಿ ಪಾರ್ಟು ಮಾಡದಂತೆ ಆಜ್ಞೆ ಮಾಡುತ್ತಾನೆ. ಇಲ್ಲ ಮಾಡ್ತೀನಿ ಎನ್ನುತ್ತಾಳೆ ತಿಮ್ಮಿ. ಅವಳ ಮನಸ್ಸಿನ ನೋವು ಈ ರೀತಿಯಾಗಿ ಮೂಡಿ ಬಂದಿದೆ.


"...ಕಿರೀಟ ಬಿದ್ದೋಗಿ
ಬಣ್ಣ ಕರಗೋಗಿ
ತಿಮ್ಮಿಗೆ ಅಳು ಬಂತು
ಇಲ್ಲ ಮಾಡ್ತೀನಿ ಅಂದ್ಲು..."

ಕಡೆಗೂ ತಿಮ್ಮಿಗೆ ನಾಟಕದಲ್ಲಿ ಪಾರ್ಟು ಮಾಡಲು ಆಗುವುದಿಲ್ಲ. ಕೆಳವರ್ಗದ ಹೆಣ್ಣುಮಗಳಿಗೆ ನಾಟಕದಲ್ಲಿ ಸಹ ಅಭಿನಯಿಸಲು ಆಗುವುದಿಲ್ಲ.

ರಾತ್ರಿ ಅವಳಿಗೊಂದು ಕನಸು ಬೀಳುತ್ತದೆ.

ಅದರಲ್ಲಿ ಅವಳು ರಾಣಿ ಆಗಿರುತ್ತಾಳೆ. ಜನರೆಲ್ಲ ಕೈ ಮುಗಿದು ನಿಂತಿರುತ್ತಾರೆ. ರಾಣಿ ತಿಮ್ಮಿಯ ಸಿಂಹಾಸನ ಫಳಫಳನೆ ಹೊಳೆಯುತ್ತಿರುತ್ತದೆ ಎನ್ನುವುದರೊಂದಿಗೆ ಕವನ ಮುಗಿಯುತ್ತದೆ.

ಕವನ: ಪತಿದೇವರಿಗೊಂದು ಬಹಿರಂಗ ಪತ್ರ

ಕವನದ ಆರಂಭದಲ್ಲಿ ಒಂದು ಮುದುಕಿಯ ಚಿತ್ರಣ ಬರುತ್ತದೆ. ಮುದುಕಿ ತನ್ನ ಗಂಡನಿಗೆ ನಮಸ್ಕಾರ ಮಾಡುತ್ತಾಳೆ.

"...ಅಂದು
ನಸುಕು ಸರಿದ ವೇಳೆ
ಎಂದಿನಂತೆ ಆ ಮುದುಕಿ
ಆ ದೇವರೆದುರು
ತನ್ನ ದೇವರ ಕಾಲು ಮುಟ್ಟಿ
ಮಣಿದಳು...."

ಕವಿತೆಯಲ್ಲಿ ಎರಡು ಭಾಗಗಳಿವೆ ಎಂದು ಸೂಚ್ಯವಾಗದಿದ್ದರೂ ಓದುಗರಿಗೆ ಅದು ಗೊತ್ತಾಗುತ್ತದೆ. ಮೊದಲ ಭಾಗದಲ್ಲಿ ಮುದುಕಿಯ ಚಿತ್ರಣ. ಅವಳು ಮುಗ್ಧೆ, ಗಂಡನೇ ದೇವರು ಎಂದುಕೊಂಡಿರುವವಳು. ಅವಳಿಗೆ ದ್ವಂದ್ವಗಳಿಲ್ಲ. 

ಎರಡನೇ ಭಾಗದಲ್ಲಿ ಬರುವ ನಿರೂಪಕಿ ತನ್ನ ಗಂಡನನ್ನು ಉದ್ದೇಶಿಸಿ ಮಾತನಾಡುತ್ತಾಳೆ. ಇವರಿಬ್ಬರೂ ಪ್ರಗತಿಯ ಬಗ್ಗೆ ಮಾತನಾಡುವವರು. ಆದರೆ ಅದನ್ನು ಆಚರಣೆಗೆ ತರದವರು. ಅವರಿಬ್ಬರಲ್ಲಿಯೂ ಸಮಾನತೆಯಿಲ್ಲ. ಅಂತರಂಗ-ಬಹಿರಂಗಗಳ ನಡುವೆ ದ್ವಂದ್ವವಿದೆ. ನಿರೂಪಕಿಯ ಗಂಡ ಆಕೆಯನ್ನು ಮುಕ್ತ ಮನೋಭಾವದಿಂದ ನೋಡುತ್ತಿರಲಿಲ್ಲವಾದ್ದರಿಂದ ಅವರಿಬ್ಬರ ನಡುವೆ ಸಮಾನತೆ ಇರಲಿಲ್ಲ. 

".... ಬಾ ಕಡಲ ದಂಡೆಯಲಿ
ಸೋಕದಂತೆ ಕುಳಿತು ಮಾತನಾಡೋಣ..."

ಹಿಂದಿನ ಕಾಲದಲ್ಲಿ ಗಂಡ-ಹೆಂಡತಿಯರು ಸಾರ್ವಜನಿಕವಾಗಿ ಸೋಕಿಕೊಂಡು ಕೂರುತ್ತಿರಲಿಲ್ಲ. ಆಗಿನ ಸ್ಥಿತಿಗೂ, ಈಗಿನ ಸ್ಥಿತಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬುದು ಅವಳ ಮಾತಿನ ಅರ್ಥ.

ಕವನ: ಗೋಪುರಗಳೂ ಪಲ್ಲಕ್ಕಿಗಳೂ

'ನೀರು ಲೋಹದ ಚಿಂತೆ' ಕವನ ಸಂಕಲನದ ಮಹತ್ವದ ಕವನಗಳಲ್ಲಿ ಇದೂ ಒಂದು. ಇದು ಪ್ರತಿಮಾತ್ಮಕ‌ ಮಾದರಿಯಲ್ಲಿದೆ. ಈ ಮಾದರಿಯ ಕವಿತೆಗಳು ವಾಚ್ಯವಾಗಿರುವುದಿಲ್ಲ. ಅಲ್ಲದೇ ತಾರ್ಕಿಕವೂ ಆಹಿರುವುದಿಲ್ಲ. ರೂಪಕದ ಮುಂದುವರೆದ ಭಾಗವನ್ನು ಪ್ರತಿಮೆಗಳು ಮಾಡುತ್ತವೆ ಎನ್ನುತ್ತಾರೆ ವಿಮರ್ಶಕರು. ಅಲಂಕಾರಗಳಲ್ಲಿ ಬರುವ ರೂಪಕಗಳು ಅರ್ಥವತ್ತಾಗಿರುತ್ತದೆ. ಆದರೆ ಪ್ರತಿಮೆಗಳಲ್ಲಿ ಅರ್ಥ ನಿಗೂಢವಾಗಿರುತ್ತದೆ. ಕವನಗಳಲ್ಲಿ ಪ್ರತಿಮೆಗಳನ್ನು ಹೆಚ್ಚು ಬಳಸಿದವರು ನವ್ಯ ಕವಿಗಳು. ಲೇಖಕಿಯೂ ನವ್ಯಕಾವ್ಯದ ಪ್ರಭಾವಕ್ಕೆ ಒಳಗಾಗಿದ್ದರೆಂದು ಈ ಕವನದ ಮೂಲಕ ತಿಳಿಯಬಹುದು. 

"...ಸದ್ದಿಲ್ಲದ ಗುರುತಿಲ್ಲದ ಹೆಜ್ಜೆಯು
ಬೆಕ್ಕುಗಳೂ ಬೆಳೆಯಬಹುದಾದ
ಮಠದೊಳಗೆ ನಾನು ಬೆಳೆದೆ...."

ನಾನು ಮಠದಲ್ಲಿ ಬೆಳೆದು ಎಂದು ನಿರೂಪಕಿ ಹೇಳುವುದಿಲ್ಲ. ಬೆಕ್ಕುಗಳು ಬೆಳೆಯುವ ಮಠದೊಳಗೆ ಬೆಳೆದೆ ಎನ್ನುತ್ತಾರೆ. ಬೆಕ್ಕಿನ ಹೆಜ್ಜೆಯ ಸಪ್ಪಳ ಕೇಳುವುದಿಲ್ಲ. ಹಾಗೆಯೇ ಅವುಗಳಿಗೆ ಸ್ವಂತ ಚಹರೆ-ಗುರುತು ಇರುವುದಿಲ್ಲ. ತಾನೂ ಹಾಗೆಯೇ ಎನ್ನುತ್ತಾರೆ ನಿರೂಪಕಿ. ತಾನು ಅನಾಥೆ. ಅಪ್ಪ-ಅಮ್ಮ ಯಾರಿಲ್ಲ. ಏಕೆಂದರೆ ಕಣ್ಣುಬಿಟ್ಟಾಗ ಕಂಡಿದ್ದು ನೀಲಾಕಾಶ ಮಾತ್ರ..

ಗೋಪುರಗಳು ಇಲ್ಲಿ ಪ್ರತಿಮಾತ್ಮಕವಾಗಿ ಬಳಕೆಯಾಗಿದೆ. ಗೋಪುರಗಳು ಎಲ್ಲರಿಗೂ ಆಶ್ರಯ ಕೊಡುವಂಥದ್ದು ಎಂಬರ್ಥದಲ್ಲಿ ಬಳಕೆಯಾಗಿದೆ. ಅಂತಹಾ ಆಶ್ರಯ ಕೊಟ್ಟ ಗೋಪುರಕ್ಕೆ ಕವನದ ನಾಯಕಿ ತಲೆಬಾಗುವುದು ವಿನಯವಂತಿಕೆಯ ಸಾಕ್ಷಿಯಾಗಿದೆ. ಅದನ್ನು ನೋಡಿ ವಿಚಾರವಂತ ನಗುತ್ತಾನೆ. ಅದವನ ಹೃದಯ ಹೀನತೆಗೆ ಸಾಕ್ಷಿಯಾಗಿದೆ.

ಕವನ: ಆರಿ ತೋಯ್ಯುವ ಸತ್ಯಗಳು

ಇದು ನವ್ಯ ಕಾವ್ಯವಾಗಿದೆ. ಈ ಕವನದಲ್ಲಿ ಮೂರು ಭಾಗಗಳಿವೆ. ಇದರಲ್ಲಿ ಗಾಯವಾಗುವುದು ಸಹಜ, ಗಾಯ ಮಾಯುವುದೂ ಸಹಜ, ಮಾಯದ ಗಾಯದೊಳಗಿನ ನೋವೂ ಸಹಜ. ಹಾಗೆಯೇ ಜೀವನ ಎನ್ನುತ್ತಾಳೆ ನಿರೂಪಕಿ.

"...ಗಾಯವಾಗುವ ಸಹಜತೆಯೂ ಸುಳ್ಳಲ್ಲ
ಗಾಯಮಾಗುವ ಸಹಜತೆಯೂ ಸುಳ್ಳಲ್ಲ
ಮಾಯದ ಗಾಯದೊಳಗಿನ ನೋವೂ ಸುಳ್ಳಲ್ಲ.."

ಮೊದಲ ಭಾಗದಲ್ಲಿ ಮಳೆಯ ವರ್ಣನೆಯಿದೆ. ಮಳೆ ಬಿದ್ದ ನಂತರ ಆಗುವ ಪರಿಣಾಮಗಳಲ್ಲಿ ಮಣ್ಣಿನದು ಒಂದು ಗುಣವಾದರೆ, ಮರಳಿನದು ಮತ್ತೊಂದು. ಮರಳಿನಲ್ಲಿ ಹೆಜ್ಜೆಗುರುತು ಮೂಡುವುದಿಲ್ಲ. ಆದರೆ ಮಣ್ಣಿನಲ್ಲಿ ಹೆಜ್ಜೆಗುರುತು ಮೂಡುತ್ತದೆ.‌ ಮಳೆ ಬಿದ್ದಷ್ಟೂ ನೆಲ ನೀರು ಹೀರಿಕೊಂಡಷ್ಟೂ ಹೆಜ್ಜೆ ಗುರುತು ಆಳವಾಗಿ ಮೂಡುತ್ತದೆ. 

ಎರಡನೆಯ ಭಾಗದಲ್ಲಿ ಸೂರ್ಯ ಮತ್ತೆ ಬಂದಿದ್ದಾನೆ. ತನ್ನ ಹೆಜ್ಜೆ ಗುರುತು ನೋಡಲು ನಾಯಕಿ ತವಕಿಸುತ್ತಾಳೆ.‌ ಓಡೋಡಿ ಬರುತ್ತಾಳೆ. ಆದರೆ ಭಾರೀ ಮಳೆಯಿಂದಾಗಿ ಹೆಜ್ಜೆ ಗುರುತು ಅಳಿಸಿ ಹೋಗಿರುತ್ತದೆ. ಅಂತೆಯೇ ಅವಳ ಅಸ್ತಿತ್ವವೂ.

ಮೂರನೆಯ ಭಾಗದಲ್ಲಿ ಸೂರ್ಯನ ವಿವರವಿದೆ. ಅವನು ಒಂದೇ ಸಮನೆ ಸುತ್ತುತ್ತಿದ್ದರೂ ಅವರಿ್ಗೆಗೆ ಬೇಸರವಿಲ್ಲ ಎಂಬ ಸಂದೇಶವಿದೆ.

ಕವನ: ಪರಂಪರೆ

ಇದು ಅತೀ ಮುಖ್ಯವಾದ ಕವನಗಳಲ್ಲಿ ಒಂದು. ಇದು ತಾಯಿ-ಮಗಳ ನಡುವೆ ನಡೆಯುವ ಸಂಭಾಷಣೆಯಂತಿದೆ.

'ಹೇಗೆ ಸಹಿಸಿದೆ ತಾಯೀ?' ಎಂದು ಕೇಳುತ್ತಾಳೆ ನಿರೂಪಕಿ.

ಮುಂದಿನ ಸಾಲುಗಳಲ್ಲಿ ಆ ತಾಯಿ ಎಂದರೆ ಸೀತೆ ಎಂದು ತಿಳಿಯುತ್ತದೆ.

'ತಾಯಿ ಆ ಲಂಕೆಯ ವನದಲ್ಲಿ, ಹೆದರಿ ಗೂಡಾಗಿ ಕುಳಿತು, ಅವಮಾನದ ಬೆಂಕಿಯಲಿ ಸೀದು ಕರಕಾಗುವಾಗ ಹೇಗೆ ಸಹಿಸಿದೆ ತಾಯಿ?' ಎಂದು ಕೇಳುತ್ತಾಳೆ.

ರಾವಣ ಅವಳನ್ನು ಅಪಹರಿಸಿದ ಮೇಲೆ, ರಾಮನಿಂದ ನಿಂದೆಯ ಮಾತನ್ನು ಕೇಳಬೇಕಾಗುತ್ತದೆ. ಈ ಭೂಮಿಯಲ್ಲಿ ಇಂತಹಾ ಸ್ತ್ರೀಯರು ಅನೇಕರು ಆಗಿ ಹೋಗಿದ್ದಾರೆ. ಎಲ್ಲರೂ ಅಪಮಾನವನ್ನು ಅನುಭವಿಸುತ್ತಾರೆ ಎನ್ನುತ್ತಾಳೆ ನಿರೂಪಕಿ.


"...ನಿನ್ನ ಮಡಿಲಲ್ಲಿ ಮಲಗಿ
ಮತ್ತೆ ಕೇಳುತ್ತೇನೆ
ಈ ಎಲ್ಲಾ ಶಿಕ್ಷೆ ಯಾಕಾಗಿ...?"


ಹೆಣ್ಣಾಗಿ ಹುಟ್ಟಿದ ಮೇಲೆ ಈ ಶಿಕ್ಷೆ ಅನುಭವಿಸಲೇಬೇಕಾ? ಎಂದು ಕೇಳುತ್ತಾಳೆ. ಇದೊಂದು ಅತ್ಯತ್ತಮ ಕವನ.

('ನೀರು ಲೋಹದ ಚಿಂತೆ' ಕವನ ಸಂಕಲನದಲ್ಲಿ ಹರಳುಗಟ್ಟಿರುವ ಸ್ತ್ರೀಪರ ದನಿಗಳನ್ನು ವಿಶದಪಡಿಸಿ)

*************
ಕೆ.ಎ.ಸೌಮ್ಯ
ಮೈಸೂರು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)