ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)

ಪೀಠಿಕೆ:

ಕಾವ್ಯಮೀಮಾಂಸೆ ಎಂದರೆ ಕಾವ್ಯವನ್ನು ಕುರಿತ ಚರ್ಚೆ ಎಂದರ್ಥ. ಕಾವ್ಯ ಎಂದರೇನು? ಅದು ಹೇಗೆ ನಿರ್ಮಿತಿಯಾಗುತ್ತದೆ? ಏಕೆ ನಿರ್ಮಿತಿಯಾಗುತ್ತದೆ? ಎಂಬ ಸಂಗತಿಗಳನ್ನು ಕುರಿತ ಚರ್ಚೆಯೇ "ಕಾವ್ಯ ಮೀಮಾಂಸೆ".

ಶಬ್ದಾರ್ಥ ಸಹಿತವಾದದ್ದು ಕಾವ್ಯ. ಆ ಕಾವ್ಯದ ಶಬ್ದಾರ್ಥ ಸ್ವರೂಪವನ್ನು ಕುರಿತ ಚರ್ಚೆಯೇ ಕಾವ್ಯಮೀಮಾಂಸೆ.

ಕಾವ್ಯ ಅಥವಾ ಸಾಹಿತ್ಯದಲ್ಲಿ ನಮ್ಮ ಲೌಕಿಕ ವ್ಯವಹಾರದ ಮಾತುಗಳೇ ಕಂಡುಬಂದರೂ, ಅವು ಲೋಕ ಮತ್ತು ಶಾಸ್ತ್ರದಲ್ಲಿ ಕಂಡುಬರುವ ಶಬ್ದಾರ್ಥಕ್ಕಿಂತ ಭಿನ್ನವಾದ, ವಿಶಿಷ್ಟವಾದ ಒಂದು ಉಕ್ತಿ ವೈಚಿತ್ರ್ಯ ಹೊಂದಿರುತ್ತದೆ. ಯಾವ ಕಾರಣದಿಂದಾಗಿ ಕಾವ್ಯದ ಶಬ್ದಾರ್ಥವು ಲೌಕಿಕ ವ್ಯವಹಾರದ ಶಬ್ದಾರ್ಥದಿಂದ ಬೇರೆಯಾದ ಅರ್ಥ ಹೊಂದಿರುತ್ತದೆ‌ ಎಂಬ ರಹಸ್ಯ ಶೋಧನೆಯೇ "ಕಾವ್ಯ ಮೀಮಾಂಸೆಯ" ಮೊದಲ ಹೆಜ್ಜೆ.

ಹೀಗೆ ಶಬ್ದಾರ್ಥಸಹಿತವಾದ ಕಾವ್ಯದ ಸ್ವರೂಪವನ್ನು ಕುರಿತು ಹಿಂದಿನಿಂದ ಇಂದಿನವರೆಗೂ ಸೂತ್ರಗಳು, ವ್ಯಾಖ್ಯಾನಗಳು ಬರುತ್ತಲೇ ಇವೆ. ಒಂದೊಂದು ಕಾಲದಲ್ಲಿಯೂ ಅಂದಂದಿನವರು ಕಾವ್ಯದ ಯಾವುದೋ ಲಕ್ಷಣವನ್ನು ಎತ್ತಿ ಹಿಡಿದು ಅದೇ ಕಾವ್ಯದ ಆತ್ಮ ಎಂದು ಹೇಳುತ್ತಾ ಬಂದಿದ್ದಾರೆ. ಏಕೆಂದರೆ ಇದುವರೆಗೂ ಯಾರಿಂದಲೂ ಕಾವ್ಯವನ್ನು ಕುರಿತು ಸಮರ್ಪಕವಾದ ಕೊನೆಯ ಸೂತ್ರವನ್ನು ಹೇಳಲು ಸಾಧ್ಯವಾಗಿಲ್ಲ. 

ಭಾರತೀಯ ಕಾವ್ಯ ಮೀಮಾಂಸೆಯ ವಿವಿಧ ಘಟ್ಟಗಳು: 

ಕಾವ್ಯತತ್ತ್ವದ ಸಾಕ್ಷಾತ್ಕಾರವೇ ಕಾವ್ಯಮೀಮಾಂಸೆಯ ಪರಮಗುರಿ. ಈ ತತ್ತ್ವದ ಅನ್ವೇಷಣೆಯನ್ನು ಭಾರತೀಯರು ಅತ್ಯಂತ ಸಮರ್ಥವಾಗಿ ನಡೆಸಿದ್ದಾರೆ‌. ಕಾವ್ಯವು ಆನಂದವನ್ನು ಉಂಟು ಮಾಡುವುದೇನೋ ಸರಿ. ಆದರೆ ಆ ಆನಂದವನ್ನು ಉಂಟುಮಾಡುವ ಮೂಲತತ್ತ್ವ ಯಾವುದು ಎಂಬ ಪ್ರಶ್ನೆಯೇ ಕಾವ್ಯಮೀಮಾಂಸೆಯ ಸಮಸ್ತ ಬೆಳವಣಿಗೆಗೆ ಕಾರಣ ಎನ್ನಬಹುದು. 

ಈ ಹಿನ್ನೆಲೆಯಲ್ಲಿ ಭಾರತೀಯ ಕಾವ್ಯ ಮೀಮಾಂಸಕರು ಮಂಡಿಸಿರುವ ಒಂದೊಂದು ಸಿದ್ಧಾಂತವೂ ಒಂದೊಂದು ಘಟ್ಟ ಎನಿಸಿಕೊಂಡಿದೆ. ಆ ಘಟ್ಟಗಳನ್ನು ಪರಾಮರ್ಶಿಸೋಣ.

ಮೊದಲ ಘಟ್ಟ-----> ರಸ

ಭಾರತೀಯ ಕಾವ್ಯ ಮೀಮಾಂಸೆಯ ಪ್ರಸ್ಥಾನಗಳಲ್ಲಿ "ರಸ" ಅತ್ಯಂತ ಪ್ರಾಚೀನ ಮತ್ತು ಪ್ರಮುಖವಾಗಿದೆ. ರಸ ಎಂಬ ಶಬ್ದವು 'ರಸ್' ಮತ್ತು 'ಅರ್ಷ್' ಎಂಬ ಎರಡು ಧಾತುಗಳಿಂದ ಬಂದಿದೆ.

ರಸ------> ರಸ್ (ರುಚಿ ನೋಡುವುದು) +
                       ಅರ್ಷ್ (ದ್ರವಪದಾರ್ಥ/ ಹರಿಯುವುದು)

* ರಸ್ ಎಂಬ ಶಬ್ದಕ್ಕೆ ರುಚಿ ನೋಡುವುದು ಎಂರ್ಥವಿದೆ.
* ಅರ್ಷ್ ಎಂಬ ಶಬ್ದಕ್ಕೆ ಹರಿಯುವುದು ಎಂಬರ್ಥವಿದೆ.

ಆತ್ಮಸಾಕ್ಷಾತ್ಕಾರದಿಂದ ಉಂಟಾಗುವ ಆನಂದಕ್ಕೆ "ಬ್ರಹ್ಮಾನಂದ" ಎಂದು ಹೆಸರು. ಅದನ್ನೇ ಕಾವ್ಯ ಜಗತ್ತಿನಲ್ಲಿ "ರಸ" ಎಂದು ಕರೆಯಲಾಗಿದೆ. ಈ ರಸ ಸ್ವಾದನವನ್ನೇ ಆನಂದಾನುಭೂತಿ ಎಂಬ ಶಬ್ದದಿಂದ ಸೂಚಿಸಲಾಗಿದೆ. ಒಟ್ಟಿನಲ್ಲಿ ಕಾವ್ಯದಿಂದ ಹುಟ್ಟುವ ಆನಂದಾನುಭೂತಿಯೇ "ರಸ".

" ವಾಲ್ಮೀಕಿ ರಾಮಾಯಣದ" ಉಗಮದ ಹಿನ್ನೆಲೆಯಲ್ಲಿರುವ ಪ್ರಸಂಗವೇ ರಸ ಸಿದ್ಧಾಂತದ ಪರಂಪರೆಗೆ ನಾಂದಿ ಆಯಿತೆಂದು ವಿದ್ವಾಂಸರು ಹೇಳುತ್ತಾರೆ. ಕ್ರೌಂಚ ಪಕ್ಷಿಗಳ‌ ಜೋಡಿಗೆ ಬೇಡನೊಬ್ಬ ಬಾಣ ಹೊಡೆದ ಪರಿಣಾಮ ಗಂಡು ಹಕ್ಕಿ ಪ್ರಾಣ ಬಿಟ್ಟಾಗ, ಹೆಣ್ಣುಹಕ್ಕಿ ದುಃಖದಲ್ಲಿ ಮುಳುಗಿತು. ಆ ದೃಶ್ಯವನ್ನು ಕಣ್ಣಾರೆ ಕಂಡ ವಾಲ್ಮೀಕಿ ಮುನಿಗಳು ಸಹ ಶೋಕಪಟ್ಟರು. ಕ್ರೋಧ ಉಕ್ಕಿತು.

"ಎಲೈ ಬೇಡನೇ... ಕಾಮ ಮೋಹಿತವಾದ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದೆಯಾದ ಕಾರಣ ನೀನೆಂದೂ ಏಳಿಗೆ ಹೊಂದದಿರು" ಎಂದು ಶಪಿಸಿದರು.

ಆ ಮುನಿಗಳ ಶೋಕದಿಂದ ಹೊಮ್ಮಿದ ಶಾಪವಾಕ್ಯದ ಮಾತು ಲಯಬದ್ಧವಾಗಿ ಶ್ಲೋಕವಾಯ್ತು. ನಂತರ ಅದೇ ರಸಾನುಭವಕ್ಕೆ ಕಾರಣವಾಗಿ "ರಸ ಪಂಥ" ಕ್ಕೆ ಮೂಲವಾಯ್ತು.

"ರಸ" ಎನ್ನುವುದು ಕಾವ್ಯಸ್ವಾದನೆಯಿಂದ ಉಂಟಾಗುತ್ತದೆ ಎಂದು ಮೊದಲು ಹೇಳಿದವನು ಭರತ ಮುನಿ. ಮೊದಲಿಗೆ ರಸ ಎನ್ನುವ ಮಾತು ಸ್ಥಾಯೀಭಾವದಲ್ಲಿ ಮಾತ್ರ ಪ್ರಯೋಗಿಸಲ್ಪಡುತ್ತಿತ್ತಾದ್ದರಿಂದ ಆಸ್ವಾದನೆ ಎನ್ನುವ ಅರ್ಥಕ್ಕೆ ಸೀಮಿತವಾಗಿತ್ತು. ಹಾಗಾಗಿ ನಮ್ಮ ಪ್ರಾಚೀನ ಕಾವ್ಯಮೀಮಾಂಸಕರು ಕಾವ್ಯದಲ್ಲಿ ಆನಂದವನ್ನು ಉಂಟು ಮಾಡುವ ತತ್ತ್ವ ಯಾವುದು ಅಂತ ಹೊರಟಾಗ "ರಸ" ವೇ ಕಾವ್ಯದಲ್ಲಿ ಆನಂದವನ್ನುಂಟು ಮಾಡುವ ತತ್ತ್ವ ಎಂದು ಅರಿಯಲಾರದೇ ಹೋದರು.

"ಭಾಮಹ"ನು ಒಂದು ಮಾಹಾಕಾವ್ಯವು ವಿವಿಧ ರಸಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದನಾದರೂ, ಅವನು ಅಲಂಕಾರಪಥ ಪ್ರವರ್ತಕನಾದ್ದರಿಂದ ಕಾವ್ಯದಲ್ಲಿ ರಸಕ್ಕಿಂತ ಅಲಂಕಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟನು. 

"ದಂಡಿ" ಯು ಭಾಮಹನಂತೆಯೇ ಮಹಾಕಾವ್ಯದ ಲಕ್ಷಣ ಹೇಳುವಾಗ ರಸದ ಸ್ಥಾನವನ್ನು ನಿರ್ದೇಶಿಸಿದ್ದಾನೆ.

"ರೀತಿ" ಯ ಪ್ರವರ್ತಕನಾದ ವಾಮನನು 'ರಸವನ್ನು ಕಾವ್ಯದ ಗುಣಗಳಲ್ಲಿ ಒಂದು' ಎಂದು ನಿರೂಪಿಸಿದ್ದಾನೆ. 


"ಆನಂದವರ್ಧನ" ನಿಂದ ಈ ಕ್ಷೇತ್ರದಲ್ಲಿ ಹೊಸದೊಂದು ದಿಕ್ಕು ಗೋಚರಿಸಿತು. 'ರಸ'ವನ್ನು ಅಲಂಕಾರಗಳಲ್ಲೊಂದು ಎಂದು ಭಾಮಹ ಹೇಳಿದ್ದನ್ನು ಆತ ಒಪ್ಪಲಿಲ್ಲ. ರಸಾಭೂತಿಯೇ ಕಾವ್ಯದ ಜೀವಾಳ, ಅದಿಲ್ಲದೇ ಕಾವ್ಯವೇ ಇಲ್ಲ ಎಂದು ಪ್ರತಿಪಾದಿಸಿದ.


ಭಾವಪ್ರಧಾನ ವಸ್ತುಗಳುಳ್ಳ ಕಾವ್ಯದಲ್ಲಿ ರಸವು ಪ್ರಮುಖ ಪಾತ್ರ ವಹಿಸುತ್ತದೆ. ಈ ಸಂಗತಿಯನ್ನು ಕುರಿತು ವಿಶ್ಲೇಷಿಸುವ ಎಂ.ಹಿರಿಯಣ್ಣ ರವರು ರತಿ, ಶೋಕ ಮೊದಲಾದ ಭಾವಗಳಿಂದ ಕೂಡಿದ ಕಾವ್ಯಭಾಗಗಳು ಅತ್ಯಂತ ಶ್ರೇಷ್ಠವೆನಿಸುತ್ತವೆ ಎಂದು ಹೇಳಿದ್ದಾರೆ. 

ಎರಡನೇ ಘಟ್ಟ-------> ಅಲಂಕಾರ

ಭಾರತೀಯ ಕಾವ್ಯಮೀಮಾಂಸೆಯಲ್ಲಿ ಭರತಮುನಿಯ ನಂತರ ಕೇಳಿಬರುವ ಮತ್ತೊಂದು ದೊಡ್ಡ ಹೆಸರು "ಭಾಮಹ" ನದ್ದು. ಅವನು ಅಲಂಕಾರ ಸಿದ್ಧಾಂತದ ಪ್ರವರ್ತಕ. ಇವನಿಗಿಂತಾ ಮುಂಚಿನವರು ಅಲಂಕಾರ ಸಿದ್ಧಾಂತವನ್ನು ನಿರೂಪಿಸಿದ್ದರಾದರೂ ಅದಕ್ಕೆ ಖಚಿತವಾದ ಚೌಕಟ್ಟನ್ನು ರೂಪಿಸಿದವನು ಭಾಮಹ.

ಭಾಮಹ----> ಅಲಂಕಾರ ಸಿದ್ಧಾಂತದ ಪ್ರವರ್ತಕ.


ಕಾವ್ಯ ಸೌಂದರ್ಯವನ್ನು ಉಂಟುಮಾಡುವ ಶಬ್ದಾರ್ಥ ವೈಚಿತ್ರ್ಯಗಳಿಗೆ "ಅಲಂಕಾರ" ಎಂದು ಹೆಸರು. ಧ್ವನಿ,ರಸಗಳು ಕಾವ್ಯಶರೀರದಲ್ಲಿ ಆತ್ಮೋಪಾದಿಯಲ್ಲಿದ್ದರೆ ಅಲಂಕಾತವು ಪ್ರತ್ಯೇಕವಾಗಿ ತೊಟ್ಟುಕೊಳ್ಳುವ ಆಭರಣದಂತಿರುತ್ತದೆ. ಶಬ್ದಗಳ ಜೋಡಣೆಯಲ್ಲಿ ಅರ್ಥಗಳನ್ನು ಅಳವಡಿಸುವಲ್ಲಿ ಕವಿಗಳು ಮೆರೆಯುವ ವೈಚಿತ್ರ್ಯವೇ ಅಲಂಕಾರ.


ಕಾವ್ಯ ರಚನೆಯಲ್ಲಿ ಬಳಸುವುದು ನಾವು ದಿನನಿತ್ಯದ ವ್ಯವಹಾರದಲ್ಲಿ ಬಳಸುವ ಶಬ್ದಗಳನ್ನೇ. ಆದರೆ ಕಾವ್ಯದ ಶಬ್ದಗಳು ಎಚ್ಚರದಿಂದ ಆಯ್ಕೆ ಮಾಡಿ, ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿರುತ್ತದೆ. ಸಾಮಾನ್ಯ ಮಾತುಗಳನ್ನು ವಿಶೇಷ ಮಾತುಗಳಾಗುವಂತೆ ಮಾಡುವ ಸಾಮಗ್ರಿಯೇ ಅಲಂಕಾರ.

ಪ್ರಾಚೀನತೆಯ ದೃಷ್ಟಿಯಿಂದ ಭಾರತೀಯ ಕಾವ್ಯಮೀಮಾಂಸೆಯಲ್ಲಿ ರಸ ಸಿದ್ಧಾಂತದ ತರುವಾಯ ಅಲಂಕಾರ ಸಿದ್ಧಾಂತ ಬರುತ್ತದೆ. ಭರತನು ತನ್ನ ನಾಟ್ಯ ಶಾಸ್ತ್ರದಲ್ಲಿ ನಾಲ್ಕು ಅಲಂಕಾರಗಳನ್ನು ಹೇಳಿದ್ದಾನೆ.

* ಉಪಮಾ
* ದೀಪಕ
* ರೂಪಕ
* ಯಮಕ


ಕಾವ್ಯಕ್ಕೆ ಅಲಂಕಾರ ಅನಿವಾರ್ಯ ಎಂಬ ಮಾತನ್ನು ಮೊದಲು ಹೇಳಿದವನು ಭಾಮಹ. ಹೆಣ್ಣಿನ ಮುಖ‌ ಅಂದವಾಗಿದ್ದರೂ ಒಡವೆಗಳಿಲ್ಲದೇ ಶೋಭಿಸುವುದಿಲ್ಲ ಎಂಬುದು ಅವನ ಮತ.‌

"ಸೂರ್ಯ ಮುಳುಗಿದನು, ಹಕ್ಕಿ ಹಾರುತ್ತದೆ, ಚಂದ್ರ ಹುಟ್ಟುತ್ತಾನೆ" ಇವೆಲ್ಲಾ ಕಾವ್ಯದ ಮಾತುಗಳಲ್ಲಿ ಕೇವಲ ವಾರ್ತೆಗಳು ಎನ್ನುತ್ತಾನೆ ಭಾಮಹ.

"ಅಲಂಕಾರ" ಗಳೇ ಕಾವ್ಯದ ಸರ್ವಸ್ವ. ಅದಿಲ್ಲದೇ ಕಾವ್ಯತ್ವ ಸಿದ್ಧಿಸುವುದಿಲ್ಲ. ಕಿವಿಗೆ ಇಂಪಾದ ಶಬ್ದಗಳನ್ನು ಬಳಸುವುದರಿಂದಷ್ಟೇ ಸೊಗಸು ಸಿದ್ಧಿಸುವುದಿಲ್ಲ. ಶಬ್ದ ಮತ್ತು ಅರ್ಥಗಳೂ ಇರಬೇಕು. ಶಬ್ದಾರ್ಥ ಸಹಿತವಾದ ಕಾವ್ಯದಲ್ಲಿ ಅಲಂಕಾರವೇ ಜೀವಾಳ ಎನ್ನುತ್ತಾನೆ ಭಾಮಹ.

ಭಾಮಹ 35 ಅಲಂಕಾರಗಳನ್ನು ನಿರೂಪಿಸಿದ್ದಾನೆ.
ಭಾಮಹನ ತರುವಾಯ ಅಲಂಕಾರ ಪಥದಲ್ಲಿ ದಂಡಿ, ಉದ್ಭಟ, ರುದ್ರಟರು ಪ್ರಮುಖರು ಎನಿಸಿಕೊಂಡಿದ್ದಾರೆ.

ಅಲಂಕಾರಗಳು ಕಾವ್ಯದಲ್ಲಿ ಎಷ್ಟೇ ಮುಖ್ಯವಾಗಿದ್ದರೂ ಅದು ಕಾವ್ಯ ರಚನಾ ಸಮಯದಲ್ಲಿ ಸಹಜವಾಗಿ ಮೂಡಿ ಬರಬೇಕು. ಕವಿಯ ಅನುಭವದಿಂದ ಕೂಡಿರಬೇಕು. ಸನ್ನಿವೇಶಕ್ಕೆ ಹೊಂದಿಕೆಯಾಗಬೇಕು. ಹಾಗಲ್ಲದೇ ಅಲಂಕಾರವನ್ನು ಅಲಂಕಾರ ಎಂದರೆ ಅದು ಭಾರವಾಗಿ ಕಾವ್ಯ ವಿಫಲವಾಗುತ್ತದೆ.

 ಮೂರನೇ ಘಟ್ಟ---------> ರೀತಿ

ಶಬ್ದಾರ್ಥಗಳು ಕಾವ್ಯ ಶರೀರವೆಂದೂ, ಅಲಂಕಾರಗಳು ಆ ಶರೀರಕ್ಕೆ ಸಾಧಕಗಳೆಂದು ಅಲಂಕಾರ ಪಥದವರು ಪ್ರತಿಪಾದಿಸಿದರು. ನಂತರ ಶಬ್ದಾರ್ಥಗಳು ಕಾವ್ಯದ ಶರೀರವಾದರೆ ಆತ್ಮ ಯಾವುದು ಎಂಬ ಪ್ರಶ್ನೆ ಉದ್ಭವಿಸಿತು. ಈ ಪ್ರಶ್ನೆಗೆ ಉತ್ತರಿಸುವ ದಿಕ್ಕಿನಲ್ಲಿ "ರೀತಿ ಸಿದ್ಧಾಂತ" ಪ್ರತಿಪಾದಿತವಾಯ್ತು. ಮೊದಲು "ಮಾರ್ಗ" ಎಂದು ಕರೆಯಲ್ಪಟ್ಟು ನಂತರ "ರೀತಿ" ಎಂದು ಪ್ರಸಿದ್ಧವಾಯ್ತು. 

ರೀತಿ ಸಿದ್ಧಾಂತದ ಪ್ರವರ್ತಕ--> ವಾಮನ.

ರೀತಿ ಎಂದರೇನು?

ವಿಶಿಷ್ಟ ಪದರಚನಾ ರೀತಿ. ಎಂದರೆ ವಿಶಿಷ್ಟವಾದ ಬಗೆಯಲ್ಲಿ ಮಾಡುವ ಪದರಚನೆಯೇ ರೀತಿ. ಈ ಸಿದ್ಧಾಂತವನ್ನು ಪ್ರಮುಖವಾಗಿ ಪ್ರತಿಪಾದಿಸುವವನು ವಾಮನ. "ರೀತಿರಾತ್ಮಾ ಕಾವ್ಯಸ್ಯ" ರೀತಿಯೇ ಕಾವ್ಯದ ಆತ್ಮ ಎಂಬುದು ಅವನ ಸಿದ್ಧಾಂತ.

ನಾಲ್ಕನೆಯ ಘಟ್ಟ------------> ಧ್ವನಿ

ರಸ, ಅಲಂಕಾರ, ರೀತಿ ಎಂಬ ಹಂತಗಳಲ್ಲಿ ಕಾವ್ಯ ತತ್ತ್ವದ ನಿರೂಪಣೆ ಬಹುಮುಖ್ಯವಾದ ಘಟ್ಟವಾಯಿತು. ಆನಂದವರ್ಧನನು ಈ ತತ್ತ್ವವನ್ನು ಹೃದಯಂಗಮವಾಗಿ‌ ಪ್ರತಿಪಾದಿಸಿದ್ದಾನೆ. "ಧ್ವನಿಯೇ ಕಾವ್ಯದ ಆತ್ಮ" ಎಂದು ಘೋಷಿಸಿದ್ದಾನೆ. 

ಅವನ ನಂತರ ಬಂದ ಅಭಿನವ ಗುಪ್ತನೂ ಧ್ವನಿ ಸಿದ್ಧಾಂತದ ಮಹಿಮೆಯನ್ನು ಹೆಚ್ಚಿಸಿದವನಾಗಿದ್ದಾನೆ‌.

ಐದನೇ ಘಟ್ಟ---------> ವಕ್ರೋಕ್ತಿ

ಭಾಮಹ: ಭಾಮಹನು ವಕ್ರೋಕ್ತಿ ಎಂಬ ಪದವನ್ನು ಬಾಗು ಬಳುಕಿನ ನುಡಿ ಎಂಬರ್ಥದಲ್ಲಿ ಬಳಸಿದ್ದಾನೆ. ಅವನಿಗೆ ವಕ್ರೋಕ್ತಿ ಕೇವಲ ಅಲಂಕಾರವಲ್ಲ,ಅದೊಂದು ವಿಶಿಷ್ಟಪೂರ್ಣವಾದ ಮಾತಿನ ಬಗೆ ಎಂದು ಅರಿವಾದಂತಿದೆ.

ಕುಂತಕ: ವಕ್ರೋಕ್ತಿ ಎಂದರೆ ಮಾತಿನ ಸರಣಿಗಿಂತ ಭಿನ್ನವಾದುದು. ವಾಚ್ಯದ ಹಂತವನ್ನೂ ಮೀರಿಸುವ, ಸಹೃದಯರ ಆಹ್ಲಾದಕ್ಕೆ ಕಾರಣವಾಗುವಂತಹ ವಿಶೇಷತೆಯನ್ನು ಒಳಗೊಂಡಿರುವಂಥದ್ದು ಎಂದು ಕುಂತಕ ವಿವರಿಸಿದ್ದಾನೆ. ವಕ್ರತೆ ಎಂದರೆ ಸೌಂದರ್ಯಾನುಭವ, ಅದೇ ಕಾವ್ಯದ ತಿರುಳು, ಅದೇ ಕಾವ್ಯದ ಬದುಕು ಎಂದು ತನ್ನ ವಕ್ರೋಕ್ತಿಜೀವಿತದಲ್ಲಿ ಪ್ರತಿಪಾದಿಸಿದ್ದಾನೆ.

ಆದರೆ ವಕ್ರೋಕ್ತಿ ಕುಂತಕನ ಸ್ವತಂತ್ರ ಪ್ರಸ್ಥಾನವಲ್ಲ. ಭಾಮಹನಿಂದ ಬೆಳಕಿಗೆ ಬಂದ ಅಲಂಕಾರ ಪ್ರಸ್ಥಾನವನ್ನು ಇನ್ನೂ ವಿಸ್ತರಿಸಿದ್ದಾನೆ ಕುಂತಕ. ಇದರಿಂದ ಕಾವ್ಯಚರ್ಚೆಯನ್ನು ಹೊಸದಿಕ್ಕಿಗೆ ಕೊಂಡೊಯ್ದ ಕೀರ್ತಿಯು ಕುಂತಕನಿಗೆ ಲಭಿಸುತ್ತದೆ. 

ಆರನೇ ಘಟ್ಟ---------> ಅನುಮಾನ

ಮಹಿಮಭಟ್ಟ ಎಂಬ ಕಾವ್ಯ ಮೀಮಾಂಸಕನು ಅನುಮಾನ ಎಂಬ ಹೊಸ ಪ್ರಸ್ಥಾನವನ್ನು ಮಂಡಿಸುವ ಪ್ರಯತ್ನ ಮಾಡಿದ್ದಾನೆ. ಮಹಿಮಭಟ್ಟನು "ಧ್ವನಿ" ಸಿದ್ಧಾಂತವನ್ನು ಒಪ್ಪದೇ ಅದನ್ನು ಪೂರ್ಣವಾಗಿ ಖಂಡಿಸಿದ್ದಾನೆ. ಆದರೆ ಧ್ವನಿ ಸಿದ್ಧಾಂತವನ್ನು ಖಂಡಿಸುವುದಕ್ಕಾಗಿಯೇ ಮಹಿಮಭಟ್ಟನು ಅನುಮಿತಿಯನ್ನು ಮಂಡಿಸಿದ್ದರಿಂದ ಇವನ ನಂತರದ ಅಲಂಕಾರಿಕರು ಈತನ ಹೊಸ ಪ್ರಸ್ಥಾನಕ್ಕೆ ಮಾನ್ಯತೆ ಕೊಡಲಿಲ್ಲ. 

ಏಳನೇ ಘಟ್ಟ-------> ಔಚಿತ್ಯ

ಕ್ಷೇಮೇಂದ್ರನು ಔಚಿತ್ಯ ಎಂಬ ಕಾವ್ಯ ಸಿದ್ದಾಂತದ ಪ್ರವರ್ತಕ ಎನಿಸಿದ್ದಾನೆ. ಔಚಿತ್ಯದ ವಿಚಾರ ಹಿಂದಿನ ಅಲಂಕಾರಿಕರಲ್ಲಿ ಪ್ರಾಸಂಗಿಕವಾಗಿ ಬಂದಿತ್ತು. ಆನಂದವರ್ಧನ, ಅಭಿನವಗುಪ್ತರು ಅದನ್ನು ಸಾಕಷ್ಟು ವಿವರಿಸಿದ್ದಾರೆ. ಅದರ ಹಿನ್ನೆಲೆಯಲ್ಲಿಯೇ ಕ್ಷೇಮೇಂದ್ರನು "ಔಚಿತ್ಯವೇ ಕಾವ್ಯದ ಜೀವಿತ" ಎಂದು ಘೋಷಿಸಿದ್ದಾನೆ. 

ಕಾವ್ಯತತ್ತ್ವ ಯಾವುದೇ ಆಗಿರಲಿ, ಅದು ಯಾವುದೇ ಮಾರ್ಗದಿಂದಾದರೂ ಸಹೃದಯರಿಗೆ ಆನಂದವನ್ನು ಉಂಟುಮಾಡಲಿ "ಕಾವ್ಯ" ಎನಿಸಿಕೊಳ್ಳುವ ಅರ್ಹತೆ ಬರಬೇಕಾದರೆ ಅದರ ಶಬ್ದಾರ್ಥಗಳು ಪರಸ್ಪರ ಹೊಂದಿಕೊಂಡಿರಬೇಕು, ದೋಷಗಳಿರಬಾರದು, ಕಾವ್ಯಗುಣ ಎದ್ದು ತೋರಬೇಕು ಎಂಬ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕ್ಷೇಮೇಂದ್ರ ಔಚಿತ್ಯ ಎಂಬ ಪ್ರಸ್ಥಾನ ಮಂಡಿಸಿದ್ದಾನೆ.

ಔಚಿತ್ಯ ಪ್ರಸ್ಥಾನದ ಬೀಜಗಳು ಭರತಮುನಿಯ ನಾಟ್ಯಶಾಸ್ತ್ರದಲ್ಲಿಯೇ ಬಿತ್ತಲ್ಪಟ್ಟಿವೆಯೆಂದು ವಿದ್ವಾಂಸರು ನಿರೂಪಿಸುತ್ತಾರೆ. ಭಾಮಹ, ದಂಡಿಯ ಕಾವ್ಯಗಳಲ್ಲಿ ಗುಣ-ದೋಷಗಳ ಬಗ್ಗೆ ಚರ್ಚಿಸುವಾಗ ಪರೋಕ್ಷವಾಗಿ ಔಚಿತ್ಯದ ಮಹತ್ವವನ್ನು ಎತ್ತಿಹಿಡಿದಿದ್ದಾರೆ.

 * ಔಚಿತ್ಯ ಪದವನ್ನು ಮೊದಲು ಬಳಸಿದವನು ರುದ್ರಟ.

* ಔಚಿತ್ಯಕ್ಕೆ ಸ್ಫುಟವಾದ ರೂಪು ನೀಡಿದವನು ಆನಂದವರ್ಧನ.

"ಅನೌಚಿತ್ಯವನ್ನು ಬಿಟ್ಟರೆ ರಸಭಂಗಕ್ಕೆ ಬೇರೆ ಕಾರಣವಿಲ್ಲ. ಲೋಕಶಾಸ್ತ್ರಗಳಲ್ಲಿ ಮಂಡಿತವಾಗಿರುವ ಔಚಿತ್ಯವನ್ನರಿತು ಅಂಗಗಳನ್ನು ಅಳವಡಿಸುವುದೇ ರಸದ ಪರಮ ರಹಸ್ಯ" ಎನ್ನುತ್ತಾನೆ ಆನಂದವರ್ಧನ

* ಔಚಿತ್ಯವೇ ಕಾವ್ಯದ ಪ್ರಾಣ, ಔಚಿತ್ಯವಿಲ್ಲದಿದ್ದರೆ ಅದು ಕಾವ್ಯವಲ್ಲ ಕಾವ್ಯಾಭಾಸ ಎನ್ನುತ್ತಾನೆ ಅಭಿನವ ಗುಪ್ತ.

* ನಂತರದ ಕಾವ್ಯ ಮೀಮಾಂಸಕರಾದ ಕುಂತಕ, ಮಹೀಭಟ್ಟಲ, ಭೋಜ ಮುಂತಾದವರು ಔಚಿತ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ‌.

* ಇದೆಲ್ಲವನ್ನೂ ಅನುಸರಿಸಿದ ಕ್ಷೇಮೇಂದ್ರನು ಔಚಿತ್ಯವನ್ನು ಪ್ರತ್ಯೇಕ ಪ್ರಸ್ಥಾನವಾಗಿ ಮಂಡಿಸಿದನು. ಕಾವ್ಯದಲ್ಲಿ ಯಾವುದಕ್ಕೆ ಯಾವುದು ಅನುರೂಪವೋ ಅದನ್ನು 'ಉಚಿತ' ಎನ್ನಲಾಗುತ್ತದೆ.‌ ಅದೇ "ಔಚಿತ್ಯ" ಎನ್ನುತ್ತಾನೆ ಕ್ಷೇಮೇಂದ್ರ.

ಔಚಿತ್ಯವು ಕೇವಲ ಸೂತ್ರಗಳಿಗೆ ಸಿಕ್ಕತಕ್ಕದ್ದಲ್ಲ. ಲೋಕಸ್ವಭಾವ, ಕವಿಪ್ರತಿಭೆ, ಸಹೃದಯಾನುಭವ ಇವೇ ಅದಕ್ಕೆ ಆಧಾರ. ಅನೇಕ ಮಂದಿ ಗಾಯಕರು- ವಾದನಕಾರರಿದ್ದರೂ ಗಾಯನವು ಒಂದೇ ಗುರಿಯನ್ನು ಹಿಡಿದು ಸಾಗುವಂತೆ, ಕಾವ್ಯವೂ ವಿವಿಧ ಅಭಿವ್ಯಕ್ತಿ ಅಂಶಗಳಿಂದ ವ್ಯಕ್ತವಾಗುತ್ತದೆ. ಇಲ್ಲಿ ಔಚಿತ್ಯ ಎಂಬ ನಿಯಮವು ಇವುಗಳಲ್ಲಿ ಇರಬಹುದಾದ ವಿರೋಧಗಳನ್ನು ಸಮನ್ವಯಗೊಳಿಸಿ, ಒಂದರಿಂದ ಮತ್ತೊಂದನ್ನು ಪುಷ್ಟೀಕರಿಸಿ ಸಾಮರಸ್ಯ ಸೃಷ್ಟಿಸುತ್ತದೆ ಎಂದು ಆಚಾರ್ಯ ತೀ.ನಂ.ಶ್ರೀ ರವರು ಔಚಿತ್ಯವನ್ನು ವಿವರಿಸುತ್ತಾರೆ. 

ಉಪಸಂಹಾರ:

ಭಾರತೀಯ ಕಾವ್ಯಮೀಮಾಂಸೆಯ ಚಿಂತನಧಾರೆಯು ಭರತನ ರಸ ಸಿದ್ಧಾಂತದಿಂದ ಪ್ರಾರಮಭವಾಗಿ ಅಲಂಕಾರ, ರೀತಿ, ಧ್ವನಿ, ವಕ್ರೋಕ್ತಿ, ಅನುಮಾನ ಮೊದಲಾದ ಪ್ರಸ್ಥಾನಗಳ ಮೂಲಕ ಸಾಗಿಬಂದು, ಔಚಿತ್ಯ ಪ್ರಸ್ಥಾನದಲ್ಲಿ ಪೂರ್ಣತೆಯನ್ನು ಪಡೆದುಕೊಂಡಿದೆ. ಸುಮಾರು ಎರಡು ಸಾವಿರ ವರ್ಷಗಳ ಭಾರತೀಯ ಕಾವ್ಯಮೀಮಾಂಸೆ ಇತಿಹಾಸದಲ್ಲಿ ನೂರಾರು ಜನ ಅಲಂಕಾರಿಕರು ಬಂದು ಹೋಗಿದ್ದಾರೆ. ತಾವು ಮಂಡಿಸಿದ್ದ ಸಿದ್ಧಾಂತಗಳನ್ನೇ ಕಾವ್ಯದ ಆತ್ಮ ಎಂದು ಧೈರ್ಯವಾಗಿ ಘೋಷಿಸಿದ್ದಾರೆ. ಅವರ ಆತ್ಮವಿಶ್ವಾಸ ಮೆಚ್ಚತಕ್ಕದ್ದು.‌ ಭಿನ್ನತೆಯಲ್ಲಿ ಏಕತೆಯನ್ನು ಕಾಣುವುದೇ ಭಾರತೀಯ ಧರ್ಮ-ಸಂಸ್ಕೃತಿಗಳ ಪರಮ ಗುರಿಯಾಗಿದೆ. ಸಾಹಿತ್ಯ ಮತ್ತು ಕಾವ್ಯಮೀಮಾಂಸೆಯ ಕ್ಷೇತ್ರಗಳಲ್ಲಿಯೂ ಅದೇ ಮನೋಧರ್ಮ ಪ್ರಕಟವಾಗಿದೆ.

**********
ಕೆ.ಎ.ಸೌಮ್ಯ
ಮೈಸೂರು

(ಭಾರತೀಯ ಕಾವ್ಯಮೀಮಾಂಸೆಯ ವಿವಿಧ ಘಟ್ಟಗಳನ್ನು ಪರಿಚಯಿಸಿ: 
ಎಂ.ಎ.ಕನ್ನಡ ---> 
June 2008, June 2013) 


ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ