ಮುದ್ದಣ ಮನೋರಮೆಯ ಸಲ್ಲಾಪ : ರಾಮಾಶ್ವಮೇಧಂ

ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು by ಎಸ್.ವಿ.ರಂಗಣ್ಣ 

ಲೇಖಕರ ಪರಿಚಯ :

ಪ್ರೊಫೆಸರ್ ಎಸ್.ವಿ.ರಂಗಣ್ಣನವರು ಆಧುನಿಕ ಕನ್ನಡ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸುವಲ್ಲಿ ದುಡಿದ ಮಹನೀಯರಲ್ಲಿ ಒಬ್ಬರು. ವೃತ್ತಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ ಕನ್ನಡ ಸಾಹಿತ್ಯದಲ್ಲಿ ಅವರು ಮಾಡಿದ ಸೇವೆ ಅನುಪಮವಾದುದು. ಕನ್ನಡ ಸಾಹಿತ್ಯವನ್ನು ಪಾಶ್ಚಾತ್ಯ ಮಾನದಂಡಗಳಿಂದ ಅಳೆದು ಅದರ ಅಧ್ಯಯನಕ್ಕೆ ಹೊಸ ರೂಪ ಕೊಟ್ಟವರು. 

ವಿದ್ಯಾರ್ಥಿ ದಿಸೆಯಲ್ಲಿ ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಒಳಗಾಗಿದ್ದರೂ, ಎ.ಆರ್.ಕೃಷ್ಣಶಾಸ್ತ್ರಿಗಳ ಒತ್ತಾಸೆಯಿಂದ ಕನ್ನಡದ ಕಡೆ ತಿರುಗಿದರು. ಎಸ್.ವಿ.ರಂಗಣ್ಣನವರು 25ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ವಿಮರ್ಶೆ, ನಾಟಕ, ಕಾವ್ಯ ಹೀಗೆ ಇನ್ನೂ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಇವರ ಕೃತಿ ರಚಿತವಾಗಿದೆ. 

ವಿಮರ್ಶಕರಾಗಿ ಎಸ್.ವಿ.ರಂಗಣ್ಣನವರದ್ದು ಗಮನಾರ್ಹ ಸಾಧನೆ. ಪ್ರಾಚೀನ ಕನ್ನಡ ಸಾಹಿತ್ಯ ಕೃತಿಗಳನ್ನು ‌ಅಧ್ಯಯನಕ್ಕೆ ಎತ್ತಿಕೊಂಡು, ಅವುಗಳನ್ನು ಆಧುನಿಕ ದೃಷ್ಟಿಕೋನದಿಂದ ನೋಡಿ ಬೆಲೆ ಕಟ್ಟಿರುವುದು ಅವರ ವಿಮರ್ಶೆಯಲ್ಲಿ ಎದ್ದು ಕಾಣುವ ಗುಣ. 

ಎಸ್.ವಿ.ರಂಗಣ್ಣನವರ ವಿಮರ್ಶಕನ‌ ದೃಷ್ಟಿ ಹರಿತವಾದುದು. ಅಲ್ಲಿ ದಾಕ್ಷಿಣ್ಯಕ್ಕೆ ಎಡೆ ಇಲ್ಲ. ಅವರ ವಿಮರ್ಶೆಯ ಗುಣದಿಂದ ಆವರೆಗೂ ಕವಿ ಮತ್ತು ಕಾವ್ಯಗಳು ಹೊಂದಿದ್ದ ಸ್ಥಾನಮಾನಗಳು ಪಲ್ಲಟಗೊಳ್ಳಬೇಕಾಯ್ತು. ಕವಿ, ಕಾವ್ಯಗಳನ್ನು ಕುರಿತು ಸಾಂಪ್ರದಾಯಿಕವಾಗಿ ಬಂದ ಎಷ್ಟೋ ನಿಲುವು, ನಿರ್ಣಯಗಳು ಬುಡಮೇಲಾದವು. ಶ್ರೇಷ್ಠ ಕವಿಯೆಂದು ಗೌರವಕ್ಕೆ ಪಾತ್ರನಾದ ಕಾಳಿದಾಸ ರಂಗಣ್ಣನವರ ದೃಷ್ಟಿಯಲ್ಲಿ 'ಕವಿಕುಲಗುರು' ಅಲ್ಲ! 

ಸಾಂಪ್ರದಾಯಿಕವಾಗಿ ಸಾಗಿ ಬಂದ ಇಂಥಾ ನಿಲುವು ನಿರ್ಧಾರಗಳನ್ನು ಪಲ್ಲಟಗೊಳಿಸುವಾಗ ಎಸ್.ವಿ.ರಂಗಣ್ಣನವರು ಅದಕ್ಕೆ ಪ್ರಬಲವಾದ ಸಾಕ್ಷಾಧಾರ ಮಂಡಿಸುತ್ತಾರೆ. ಪ್ರಸ್ತುತ "ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು" ಎಂಬ ಲೇಖನವನ್ನು ಆಯ್ದುಕೊಂಡಿದ್ದೇವೆ. 

ಎಸ್.ವಿ. ರಂಗಣ್ಣನವರ ಕೃತಿಗಳು : 

  1. ಹೊನ್ನ ಶೂಲ
  2. ಪಾಶ್ಚಾತ್ಯ ಗಂಭೀರ ನಾಟಕಗಳು
  3. ಕಾಳಿದಾಸನ ನಾಟಕ ವಿಮರ್ಶೆ
  4. ಕನ್ನಡ ಸಾಹಿತ್ಯದ ಗುಣದೋಷಗಳು.

ಪೀಠಿಕೆ :

ಮುದ್ದಣ ಮತ್ತು ಅವನ‌ ಕೃತಿಗಳನ್ನು ಕುರಿತ ನೆನಪಿನೋತ್ಸವದ ಸಮಾರಂಭದ ಪ್ರಸ್ತಾಪದೊಂದಿಗೆ ಲೇಖನ ಆರಂಭವಾಗುತ್ತದೆ. ಈ ಸಮಾರಂಭದ ಜೊತೆ ಪ್ರಬುದ್ಧ ಕರ್ನಾಟಕದ ವಿಶೇಷ ಸಂಚಿಕೆಯಾಗಿ "ಮುದ್ದಣ" ಪ್ರಕಟವಾದುದು ಸೇರಿ, ಮುದ್ದಣ ಕವಿ-ಕಾವ್ಯದ ಪ್ರಚಾರ ಮಿತಿ ಮೀರಿದವು ಅನ್ನುವುದು ಲೇಖಕರ ಅಭಿಪ್ರಾಯ. 

ಹೀಗೆ ಮಿತಿ ಮೀರಿರುವುದಕ್ಕೆ ಲೇಖಕರು ಕಾರಣಗಳನ್ನು ಕೊಡುತ್ತಾರೆ : 

  • ಕವಿಯ ಸರಳ ಜೀವನ.
  • ಕಾವ್ಯಗಳ ಪ್ರಕಟಣೆಗಾಗಿ ನಡೆದ ವಿಚಿತ್ರ ಪ್ರಸಂಗಗಳು.
  • ಕವಿಯ ಗುಣ ಮತ್ತು ಶೀಲ. 
  • ಕವಿ ಅನುಭವಿಸಿದ ಸಂಕಟಗಳು.
  • ದೈಹಿಕ ಶಿಕ್ಷಕನಾಗಿದ್ದರೂ ಕವಿತ್ವದ ಧೈರ್ಯ.
  • ಎಲ್ಲಕ್ಕಿಂತ ಹೆಚ್ಚಾಗಿ ಕವಿ ‌ಅಕಾಲ ಮರಣಕ್ಕೆ ಈಡಾದುದು.
ಇತ್ಯಾದಿ ಸಂಗತಿಗಳು ಆತನಲ್ಲಿ ನಮ್ಮ‌ ಪ್ರೇಮ, ಔದಾರ್ಯ, ಮರುಕ, ಮನ್ನಣೆಗಳನ್ನು ನೆಲೆಸುವಂತೆ ಮಾಡುತ್ತದೆ. 

ಆದರೆ ಅಭಿಮಾನದ ಭರದಲ್ಲಿ ಆಡಿದ ಈ ಮಾತುಗಳ ಸತ್ಯಾಸತ್ಯತೆ ಎಷ್ಟು ಎಂದು ಲೇಖಕರು ಚಿಂತಿಸುತ್ತಾರೆ. 'ಮುದ್ದಣ' ಸಂಚಿಕೆ ಪ್ರಕಟವಾಗಿ ಹತ್ತು ವರ್ಷ ಕಳೆದಿದೆ. ಈಗವನ ಮೇಲಿನ ಅಭಿಮಾನದ ಕಾವು ಇಳಿದು ನಿಷ್ಪಕ್ಷಪಾತದ ವಿಮರ್ಶಕ ಬುದ್ಧಿ ತಲೆ ಎತ್ತಿದೆ‌. 

'ಮುದ್ದಣನ ಸ್ಥಾನ ಯಾವುದು?'

'ಮೇಲಿನ‌ ಹೊಗಳಿಕೆಗೆ ಅವನು ನಿಜವಾಗಿಯೂ ಪಾತ್ರನೇ?' 

ಎಂಬ ವಿಷಯದಲ್ಲಿ ಪ್ರಬಲವಾದ ಸಂದೇಹ ಮತ್ತು ಜಿಜ್ಞಾಸೆಗಳು ಮೂಡಿವೆ. ಅರ್ಹನಲ್ಲದಿದ್ದರೂ ಒಬ್ಬ ಕವಿಯನ್ನು ಅಭಿಮಾನ ಮಾತ್ರದಿಂದ ಎತ್ತರಕ್ಕೇರಿಸಿದರೆ ಅಪಾಯ ಎನ್ನುತ್ತಾರೆ ಲೇಖಕರು. 

ಅಲ್ಲದೇ ಉತ್ತಮ ಕಾವ್ಯ ಹೇಗಿರಬೇಕು ಅಂತಾಗಲೀ, ಉತ್ತಮ ಕೃತಿ ಆಗುವುದಕ್ಕೆ ಬೇಕಾದ ಅಂಶಗಳನ್ನು ಕಲೆ ಹಾಕುವುದರಲ್ಲಾಗಲೀ, ಈ ಎಲ್ಲಾ ಅಂಶಗಳೂ ಮುದ್ದಣನ "ರಾಮಾಶ್ವಮೇಧ"ದಲ್ಲಿದೆಯೇ ಎಂದು ಲೇಖಕರು ಪ್ರಶ್ನಿಸುತ್ತಾರೆ. 

'ವಿವಿಧ ಘನ ಪರೀಕ್ಷೆ, ಖಂಡಿತ ತೀರ್ಪುಗಳನ್ನು ಮುದ್ದಣನ ಕಾವ್ಯವು ತಡೆಯಬಲ್ಲದೇ?' ಎಂದೂ ಸಹ ಲೇಖಕರು ಪ್ರಶ್ನಿಸುತ್ತಾರೆ. 

ಮುದ್ದಣನ ರಾಮಾಶ್ವಮೇಧಂ

ಉತ್ತರ ರಾಮಾಯಣದ ಕಥೆಯೇ ಮುದ್ದಣ ರಚಿಸಿರುವ ರಾಮಾಶ್ವಮೇಧಂ ಕೃತಿಯ ಕಥಾವಸ್ತು. ವಾಲ್ಮೀಕಿಯ ರಾಮಾಯಣವೇ ಮುದ್ದಣನಿಗೆ ಆಕರ. ಆದರೆ ಮೂಲ‌ಕಥಾವಸ್ತುವನ್ನೇ ಲೇಖಕರು ಅನುಮಾನದಿಂದ ನೋಡುತ್ತಾರೆ. ಕೆಲವು ಪ್ರಧಾನ ಅಂಶಗಳಲ್ಲದೇ, ಅಪ್ರಧಾನ ಅಂಶಗಳೂ ಮೂಲ‌ಕಥೆಯಲ್ಲಿವೆ ಎನ್ನುತ್ತಾರೆ. ಅವುಗಳು ಅಪ್ರಧಾನವಾದರೂ ಕಥೆಯ ನಡೆಗೆ ಭಂಗ ತರದ ಕಾರಣ ಅದನ್ನು ಒಪ್ಪಿಕೊಳ್ಳುತ್ತಾರೆ. 

ಪ್ರತಿಭಾವಂತನಾದ ಕವಿಯು ಪುರಾತನ, ಪ್ರಾಚೀನ ವಸ್ತುವನ್ನು ತನ್ನ ಕೃತಿಯ ವಸ್ತುವನ್ನಾಗಿ ಮಾಡಿಕೊಂಡರೂ, ವಸ್ತುವನ್ನು ನೋಡುವಲ್ಲಿ ತನ್ನ ವಿಶಿಷ್ಟ ದೃಷ್ಟಿಕೋನದಿಂದ ಹೊಸತನ್ನು ಕಾಣುತ್ತಾನೆ. ತಾನು ಬದುಕಿದ್ದ ಕಾಲದ ಯುಗಧರ್ಮವನ್ನು ಅದರಲ್ಲಿ ಪಡಿಮೂಡಿಸಲು ಯಶಸ್ವಿಯಾಗುತ್ತಾನೆ. ಈ ಕಾರಣಕ್ಕಾಗಿ ಲೇಖಕರು ಮುದ್ದಣನ ಕಥಾವಸ್ತುವಿನ ನಿರ್ವಹಣೆಯ ಬಗೆಯನ್ನು ಪ್ರಶ್ನಿಸುತ್ತಾರೆ. 

ಅಂದರೆ ರಾಮನ ನಡತೆಯನ್ನು ನಾವು ಮೆಚ್ಚಿದರೂ, ಈ ಹಿನ್ನಲೆಯಲ್ಲಿ ಸೀತಾ ಪರಿತ್ಯಾಗವನ್ನು ಒಪ್ಪುವುದು ಕಷ್ಟ. ವಿಧಿವಿಲಾಸವನ್ನು ಬದಲಾಯಿಸಲು ಕವಿಗೆ ಹಕ್ಕಿಲ್ಲದಿದ್ದರೂ, ರಾಮನಲ್ಲಿ ಧರ್ಮಾಧರ್ಮದ ಹೋರಾಟ, ಮನೋವೇದನೆ, ಸತಿಯ ಪರವಾಗಿ ಸಂಪೂರ್ಣ ನಂಬಿಕೆ, ರಾಮನ‌ ಪುರುಷ ಸಾಹಸ ಕೈಕೆಳಗಾಗಿ, ದುರುಳರ ಅಟ್ಟಹಾಸ ಕೈಗೂಡಿತು ಎಂಬಂತೆ ಚಿತ್ರಿಸಿ, ನಮ್ಮ ಮನಸ್ಸೂ ಅದನ್ನೇ ಅನುಮೋದಿಸಿದರೆ ಕವಿಯ ಶ್ರಮ ವ್ಯರ್ಥವಲ್ಲ. 

ಆದರೆ ಮುದ್ದಣ ನಡೆಸಿಕೊಂಡು ಹೋದ ಕಥೆಯ ನಡೆಯು ಲೇಖಕರಿಗೆ ಅಷ್ಟೇನೂ ಸಮಾಧಾನ ತಂದಿಲ್ಲ. 

"ರಾಮಾಶ್ವಮೇಧ" ದಲ್ಲಿ ರಾಮನ‌ ಪಾತ್ರಕ್ಕಿಂತಲೂ ಲೇಖಕರು ಸೀತೆಯ ಪಾತ್ರವನ್ನೇ ಹೆಚ್ಚು ಮೆಚ್ಚಿದ್ದಾರೆ. ಅಲ್ಲದೇ ರಾಮಾಶ್ವಮೇಧದ ಕಥೆ ಚಿತ್ತಾಕರ್ಷಕವಾಗಿಸಿಲ್ಲವೆಂದು ಮನೋರಮೆಯ ಮಾತುಗಳನ್ನೇ ಉದಾಹರಿಸಿ ತೋರಿಸಿದ್ದಾರೆ.

ಮುದ್ದಣನ‌ ವರ್ಣನಾ ಸಾಮರ್ಥ್ಯ ಮತ್ತು ಮಿತಿ

ಮುದ್ದಣನನ್ನು ಲೇಖಕರು ಬಿರುಸಾಗಿ ಜೊತೆಗೆ ಬಹಳ ನಿರ್ದಾಕ್ಷಿಣ್ಯವಾಗಿ ವಿಮರ್ಶೆ ಮಾಡಿದ್ದಾರೆ. ರಾಮಾಶ್ವಮೇಧದ ಕಥೆ ಹಳತಾದರೂ, ಅದನ್ನು ಬರೆಯುತ್ತಿರುವ ಕವಿ ಆಧುನಿಕ.‌ ಹಾಗಾಗಿ ಕವಿ ಈಗಿನವನಾಗಿರುವುದರಿಂದ ವಸ್ತುವಿನಲ್ಲಿ ಅಲ್ಲದಿದ್ದರೂ, ವರ್ಣನೆಯಲ್ಲಾದರೂ ಹೊಸತನವನ್ನು ಲೇಖಕರು ಆಶಿಸಿದ್ದಾರೆ. 

ಆದರೆ ಇದರಲ್ಲಿ ಯಾವುದೇ ಸ್ವಂತಿಕೆಯಿಲ್ಲ ಎಂಬುದು ಲೇಖಕರ ಕೊರಗು

ನೂರಾರು ಹಿಂದಿನ ಕವಿಗಳಿಂದಲೂ ಇದೇ ರೀತಿಯ ವರ್ಣನೆಗಳು ಹೆಚ್ಚು ವ್ಯತ್ಯಾಸವಿಲ್ಲದೇ ಸಾಗಿ ಬಂದಿದೆ. ಇಂಥಾ ಒಂದೇ ರೀತಿಯ ವರ್ಣನೆಗಳಿಂದ ಯಾರಿಗೆ ಲಾಭವಿದೆ ಅಂತ ಲೇಖಕರು ಪ್ರಶ್ನಿಸುತ್ತಾರೆ. 

ಲೇಖಕರ ಅತೃಪ್ತಿ ಇಷ್ಟಕ್ಕೇ ಶಾಂತವಾಗುವುದಿಲ್ಲ. 

ಓದುತ್ತೋದುತ್ತಾ ಪಂಪನ ಕಾಲದಿಂದಲೂ ಅದೇ ಪ್ರಕೃತಿಯ ವರ್ಣನೆ,ಮೃಗ-ಖಗಗಳ ವರ್ಣನೆ, ನದಿ ಜಲಪಾತದ ವರ್ಣನೆಗಳನ್ನು ಉದಾಹರಣೆಗಳ ಮೂಲಕ ಹೆಕ್ಕಿ ಕೊಟ್ಟಿದ್ದಾರೆ. ಇಂತಹಾ ಒಂದೇ ರೀತಿಯ ವರ್ಣನೆಗಳಿಂದ ಲೇಖಕರು ರೋಸಿಹೋದಂತೆ ಕಾಣುತ್ತದೆ. 

ಆದರೂ ಒಂದು ಹಂತದವರೆಗೆ ಎಸ್.ವಿ.ರಂಗಣ್ಣನವರು ಮುದ್ದಣನನ್ನು ಒಪ್ಪುತ್ತಾರಾದರೂ, ಮುದ್ದಣನನ್ನು ಕುರಿತ ಮಾತುಗಳಾದ 'ಷೇಕ್ಸಪಿಯರಿಗಿಂತಾ ದೊಡ್ಡವನು', 'ಸಾಹಿತ್ಯ ಸಾಮ್ರಾಜ್ಯದ ಎಲ್ಲೆ ಮುಟ್ಟಿದವನು' ಎಂಬ ಪುಂಖಾನುಪುಂಖವಾದ ಹೊಗಳಿಕೆಯನ್ನು ಒಪ್ಪುವುದಿಲ್ಲ. 

"ಬೆಟ್ಟದ ಮೇಲೆ ಬೆಳಗಿರುವುದೆಲ್ಲವೂ ನಕ್ಷತ್ರವಾದೀತೇ?" ಎಂದು ಲೇಖಕರು ಪ್ರಶ್ನಿಸಿದ್ದಾರೆ. 

ಪ್ರಾಸಗಳ ಗೀಳು ನಮ್ಮಲ್ಲಿ ಬಹು ಹಿಂದಿನ‌ ಕಾಲದಿಂದಲೂ ಕವಿಗಳಲ್ಲಿ‌ ಕಾಣಬರುವ ಒಂದು ದೌರ್ಬಲ್ಯ. ಮುದ್ದಣನೂ ಇದರಿಂದ ಹೊರತಾಗಿಲ್ಲ ಎಂದು ಲೇಖಕರು ಬೆರಳಿಟ್ಟು ತೋರಿಸಿದ್ದಾರೆ.

ಮುದ್ದಣ ಮನೋರಮೆಯ ಸಲ್ಲಾಪ

ಮುದ್ದಣನ 'ರಾಮಾಶ್ವಮೇಧ' ಕೃತಿಯಲ್ಲಿ ಲೇಖಕರು ಬಹುವಾಗಿ ಮೆಚ್ಚಿರುವುದು 'ಮುದ್ದಣ ಮನೋರಮೆಯ ಸಲ್ಲಾಪವನ್ನು'.

ರಾಮಾಶ್ವಮೇಧ ಕಥೆಯನ್ನು ಬಂಧಿಸಿ ಹಿಡಿದಿಟ್ಟಿರುವುದೇ ಮುದ್ದಣ ಮನೋರಮೆಯ ಸಲ್ಲಾಪದ ಚೌಕಟ್ಟು ಎಂದು ಲೇಖಕರು ದೃಢವಾಗಿ ಹೇಳುತ್ತಾರೆ. 

ಮುದ್ದಣ ಪರಿಚಯಿಸಿದ ಈ ಪರಿಯನ್ನು ಹಿಂದೆ ಯಾರೂ ಮಾಡುವುದಿರಲಿ, ಅವನ ನಂತರವೂ ಯಾರೂ ಅನುಕರಣೆ ಮಾಡಲಾಗಿಲ್ಲ. ಅಂತಹಾ ವ್ಯಕ್ತಿ ವಿಶಿಷ್ಟತೆ ಈ ಪರಿಕಲ್ಪನೆಯಲ್ಲಿದೆ ಎನ್ನುತ್ತಾರೆ ಲೇಖಕರು. ಇದವನಿಗೆ ಸರಸ್ವತೀ ಹಸ್ತದಿಂದಲೇ ಒದಗಿರಬೇಕು ಎಂದು ಭಾವಿಸುತ್ತಾರೆ. 

"ಈ ಗ್ರಂಥವು ಒಂದು ಕಾಡುದಾರಿಗೆ ಸಮನಾಗಿದೆ. ಕಲ್ಲು, ಮುಳ್ಳು, ಕೊಂಬೆಗಳ ಅಡಚಣೆ, ಮೃಗಗಳ ಹೆದರಿಕೆ, ಏರಿಬರುವ ಆಯಾಸ ಎಲ್ಲವೂ ಇದೆ. ಇದಿರಾಗುವ ಪ್ರವಾಸ ಮಂದಿರಗಳಲ್ಲಿ ಓದುಗರಿಗೆ ಶ್ರೀಮಂತ ಆತಿಥ್ಯ ಸಿಗುತ್ತದೆ. ಒಂದು ಪ್ರವಾಸಿ ಮಂದಿರ ಸೇರಿದೊಡನೆಯೇ ಅವನು ಆಯಾಸವನ್ನೆಲ್ಲಾ ಮರೆತು, ಅದರ ಸವಿಯಲ್ಲಿ ಮುಳುಗಿ, ಮುಂದೆ ಹೋಗುವುದನ್ನೇ ಮರೆಯುತ್ತಾನೆ. ಕೆಲವು ದಿನಗಳ ನಂತರ ಹೊರಟರೂ, ಇಂಥ ಆತಿಥ್ಯ ‌ಮತ್ತೆಂದಾದರೂ ಸಿಗುವುದೇ ಎಂಬಂತೆ ಹಿಂದೆ ನೋಡುತ್ತಾ ಮುಂದೆ ಹೆಜ್ಜೆ ಹಾಕುತ್ತಾನೆ" ಎಂಬ ಮಾತುಗಳು ಕವನದ ವ್ಯಾಪ್ತಿ ಮತ್ತು ಮಿತಿಯನ್ನು ತಿಳಿಸಿಕೊಟ್ಟಿವೆ.‌

ಅದಕ್ಕಾಗಿ...

ರಾಮಾಶ್ವಮೇಧ ಚಿತ್ರವು ಸತ್ಯವಾಗಿ ಸಾಮಾನ್ಯ : ಚೌಕಟ್ಟು ಶಿವನಾಣೆ ಸುವರ್ಣ ಎಂಬುದೇ ಲೇಖಕರ ಕಡೆಯ ತೀರ್ಪು. 

ಉಪಸಂಹಾರ

ಎಸ್.ವಿ.ರಂಗಣ್ಣರವರ ಈ ಲೇಖನ ಕನ್ನಡದ ಪ್ರಮುಖ ವಿಮರ್ಶಾ ಲೇಖನಗಳಲ್ಲಿ ಒಂದು. ಮುದ್ದಣನ ರಾಮಾಶ್ವಮೇಧ ಕೃತಿಯನ್ನು ಇಲ್ಲಿ ವಿಮರ್ಶೆಗೆ ಒಳಪಡಿಸಲಾಗಿದೆ. ರಾಮಾಶ್ವಮೇಧವು ಹಲವು ಚಾರಿತ್ರಿಕ ಕಾರಣಗಳಿಂದ ಹೊಸಗನ್ನಡ ಸಾಹಿತ್ಯದಲ್ಲಿ ಪ್ರಮುಖ ಸ್ಥಾನ ಪಡೆದಿತ್ತು. ಕೃತಿಯ ನೈಜ‌ ತೂಕಕ್ಕಿಂತಲೂ ಹೆಚ್ಚಿನ‌ ಬೆಲೆ ಪ್ರಾಪ್ತವಾಗಿತ್ತು. ಇದನ್ನು ಹೊರತು ಪಡಿಸಿ ನೋಡಿದರೆ ಕೃತಿ ಸಾಮಾನ್ಯವಾದುದು ಎಂಬುದು ಲೇಖಕರ ಪ್ರಬಲವಾದ ವಾದವಾಗಿದೆ. 

ಆದರೆ ಮುದ್ದಣ ಮನೋರಮೆಯರ ಸಲ್ಲಾಪದ ಪರಿಕಲ್ಪನೆಯನ್ನು ಲೇಖಕರು ಬಹುವಾಗಿ ಮೆಚ್ಚಿದ್ದಾರೆ. ಇಂತಹಾ ಪ್ರಯೋಗ ಹಿಂದೆ ಇರಲಿಲ್ಲ, ಮುಂದೆ ಯಾರಿಂದಲೂ ಮಾಡಲಾಗಿಲ್ಲ ಎನ್ನುತ್ತಾರೆ.

ಎಸ್.ವಿ.ರಂಗಣ್ಣರವರು ಕೃತಿಯ  ಗುಣ, ದೋಷ ಎರಡನ್ನೂ ಪೂರ್ವಾಗ್ರಹವಿಲ್ಲದೇ ನಿರ್ಲಿಪ್ತವಾಗಿ ವಿಮರ್ಶಿಸಿದ್ದಾರೆ. ತಮ್ಮ ವಾದಗಳಿಗೆ ಪೂರಕವಾದ ಸಾಕ್ಷಿಗಳನ್ನು ಕೃತಿಯ ಒಳಗಿನಿಂದಲೇ ಎತ್ತಿ ತೋರಿಸಿದ್ದಾರೆ.

(ವಿವಿಧ ಮೂಲಗಳಿಂದ)
******

K A Sowmya
Mysore

*******
ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು: ಎಸ್.ವಿ.ರಂಗಣ್ಣನವರ ಲೇಖನವನ್ನು ವಿಶ್ಲೇಷಿಸಿ
*******
(ಕನ್ನಡ ಎಂ.ಎ 2010)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)