ಶಾಸನ ಸಾಹಿತ್ಯದಲ್ಲಿ ದೇಕಬ್ಬೆ ಶಾಸನದ ಸ್ಥಾನ

ಪೀಠಿಕೆ

ಶಾಸನಗಳಲ್ಲಿ ಹಲವು ಪ್ರಕಾರಗಳುಂಟು. ಅದರಲ್ಲಿ ಆತ್ಮಬಲಿಯೂ ಒಂದು. ಬೇರೆ ಬೇರೆ ಕಾರಣಗಳಿಗಾಗಿ ಪ್ರಾಣತ್ಯಾಗ ಮಾಡುತ್ತಿದ್ದ ಅನೇಕ ಉದಾಹರಣೆಗಳುಂಟು. ಅವರಿಗೆ ಹಾಕಿಸುತ್ತಿದ್ದ ಶಾಸನಗಳಿಗೆ ಸ್ಮಾರಕ ಶಾಸನ ಎಂದು ಹೆಸರು. ವೀರರ ಪತ್ನಿಯರು ಸಹಗಮನ ಪ್ರಕಾರ ಮರಣ ಹೊಂದುತ್ತಿದ್ದರು. ಆಗ ಅವರಿಗೆ ಹಾಕಿಸುತ್ತಿದ್ದ ಸ್ಮಾರಕಗಳನ್ನು ಮಹಾಸತಿಕಲ್ಲು ಅಥವಾ ಮಾಸ್ತಿಕಲ್ಲು ಎಂದು ಕರೆಯುತ್ತಿದ್ದರು. 

"ದೇಕಬ್ಬೆಯ ಶಾಸನ ಅಂತಹಾ ಒಂದು ಮಾಸ್ತಿಕಲ್ಲು"

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಬೆಳತೂರು ಗ್ರಾಮದ ಅಡ್ಡಕಟ್ಟೆ ಹೊಲದಲ್ಲಿರುವ ಮಹಾಸತಿ ಶಾಸನವನ್ನು ಪತ್ತೆ ಹಚ್ಚಿದವರು ಬಿ.ಎಲ್.ರೈಸ್. 'ಎಪಿಗ್ರಾಫಿಯಾ ಕರ್ನಾಟಿಕಾ'ದ ಎರಡನೇ ಎರಡನೇ ಸಂಪುಟದಲ್ಲಿ ಶಾಸನದ ಪಠ್ಯವನ್ನು ಪ್ರಕಟಿಸಿದರು. 

ನಂತರ ರೆವೆರೆಂಡ್ ಕಿಟ್ಟೆಲ್ ರವರು ಈ ಶಾಸನವನ್ನು ಎಪಿಗ್ರಾಫಿಯಾ ಇಂಡಿಕಾದಲ್ಲಿ ಪ್ರಕಟಿಸಿದರು. 

ಈ ಶಾಸನದ ವಿಶೇಷತೆಯೆಂದರೆ ಇದು ಬೇರೆ ಶಾಸನಗಳಂತೆ ದೇವತಾ ಶ್ಲೋಕದಿಂದ ಪ್ರಾರಂಭವಾಗುವುದಿಲ್ಲ. ಗದ್ಯಕ್ಕಿಂತ ಪದ್ಯಭಾಗವೇ ಇದರಲ್ಲಿ ಹೆಚ್ಚು. ಇದರಲ್ಲಿ ಒಟ್ಟು 23 ಪದ್ಯಗಳಿವೆ. 

ದೇಕಬ್ಬೆಯು ತನ್ನ ಪತಿಯ ಮರಣದ ಸುದ್ದಿ ಕೇಳಿದ ತಕ್ಷಣ ಇಹಲೋಕವನ್ನು ತ್ಯಜಿಸಲು ಸಿದ್ಧಳಾದಳು. ಚಿತೆಯನ್ನು ಸಿದ್ಧಪಡಿಸಿ ಉರಿಯುತ್ತಿದ್ದ ಚಿತೆ ಹೊಕ್ಕಳು. ತನ್ನ ಮಗಳ ಸ್ಮಾರಕವಾಗಿ ಆಕೆಯ ತಂದೆ ಶಾಸನ ಸಹಿತವಾದ ಈ ಶಿಲಾಸ್ತಂಭವನ್ನು ಮಾಡಿಸಿದ. 

"ಈ ಶಾಸನ ರಚಿಸಿದ ಕವಿಯ ಹೆಸರು ಮಲ್ಲ"

ದೇಕಬ್ಬೆ ಶಾಸನದ ಮಹತ್ವ

ಶಾಸನದ ಭಾಷೆ ಪ್ರೌಢವಾದುದು. ಬಹು ಶುದ್ಧವಾದುದು. ಮನಸೆಳೆಯುವಂಥದ್ದು. ಈ ಶಾಸನ ರಚಿಸಿದವರು ವ್ಯರ್ಥವಾಗಿ ಪದ ಪ್ರಯೋಗ ಮಾಡದ "ಮಲ್ಲ" ಎಂಬ ಕವಿ. ಹಾಗಾಗಿ ಸಾಹಿತ್ಯಿಕ ದೃಷ್ಟಿಯಿಂದ ದೇಕಬ್ಬೆಯ ಶಾಸನ ಗಮನಾರ್ಹವಾದುದಾಗಿದೆ.

ಶಾಸನವು 23 ಪದ್ಯಗಳಿಂದ ಮತ್ತು ಸ್ವಲ್ಪ ಭಾಗ ಗದ್ಯದಿಂದ ಕೂಡಿದೆ. ಈ ಶಾಸನ ಸಂಪಾದಿಸಿದವರು ಬೆಂಜಮಿನ್ ಲೂಯಿಸ್ ರೈಸ್

ಕರ್ನಾಟಕ ವಿಶ್ವಕೋಶದಲ್ಲಿ ಶಾಸನದ ಬಗ್ಗೆ ಹೀಗೆ ಹೇಳಲಾಗಿದೆ

"ಶಾಸನ ಸರಳ ಹಾಗೂ ಸುಂದರವಾದ ಮನ ಕರಗಿಸುವ ಕನ್ನಡ ಜನಪದ ಗೀತೆಯಾಗಿದೆ. ಈ ಶಾಸನದಲ್ಲಿ ಅತ್ಯಂತ ಹೃದಯ ವಿದ್ರಾವಕ ಘಟನೆಯೊಂದನ್ನು ಸಮರ್ಥ ಹಾಗೂ ಸತ್ವಶಾಲಿಯಾದ ಭಾಷೆಯ ವರಸೆಯಲ್ಲಿ ಹೇಳಲಾಗಿದೆ. ಕನ್ನಡದ ಸೊಬಗನ್ನು ಚಿತ್ರಿಸಿರುವ ಈ ಶಾಸನ ಭಾಷೆಗಳ ಸಹಜತೆಗೆ ಉನ್ನತ ಮಟ್ಟದ ಉದಾಹರಣೆಯಾಗಿದೆ" 

ಮೇವುಂಡಿ ಮಲ್ಲಾರಿ ಶಾಸನದ ಬಗ್ಗೆ ಹೀಗೆ ಹೇಳುತ್ತಾರೆ: 

"ದೇಕಬ್ಬೆಯು ವೀರ ಸತಿತ್ವವನ್ನು ಮಲ್ಲ ಕವಿ ಬಲು ಸೊಗಸಾಗಿ ಚಿತ್ರಿಸಿದ್ದಾನೆ‌. ಬಂಧ, ಶಬ್ದ ಸಂಪತ್ತು, ಕಲ್ಪನಾ ವಿನ್ಯಾಸಗಳ ದೃಷ್ಟಿಯಿಂದ ಕಾವ್ಯ ಅಷ್ಟೊಂದು ಪ್ರೌಢವಲ್ಲ ಅಂತನಿಸಿದರೂ, ಸರಳ ಸುಂದರವಾಗಿದೆ"

ಆರ್ ನರಸಿಂಹಾಚಾರ್ಯರು ಶಾಸನದ ಬಗ್ಗೆ ಹೀಗೆ ಹೇಳುತ್ತಾರೆ :

"ಈ ಶಾಸನದಲ್ಲಿರುವ ವೃತ್ತ, ಕಂದ, ಅಕ್ಕರ ಇವುಗಳ ಬಂಧವನ್ನು ನೋಡಿದರೆ, ಬರೆದವನು ಪ್ರೌಢಕವಿಯೆಂದು ಊಹಿಸಬಹುದಾಗಿದೆ" 

ಡಾ. ಚಿದಾನಂದ ಮೂರ್ತಿಯವರು ಶಾಸನದ ಬಗ್ಗೆ ಹೀಗೆ ಹೇಳುತ್ತಾರೆ :

"ಬೆಳತೂರಿನ ದೇಕಬ್ಬೆ ಶಾಸನವು ಅಲ್ಲಿ ಬರುವ ಸತಿ ಸಹಗಮನ ಪದ್ಧತಿಯ ಪೂರ್ಣ ವಿವರ ಚಿತ್ರದಿಂದಾಗಿ ಮತ್ತು ತನ್ನ ಕಾವ್ಯ ಗುಣದಿಂದಾಗಿ ಪ್ರಸಿದ್ಧವಾಗಿದೆ" 

ನಮ್ಮ‌ನಾಡಿನಲ್ಲಿ ದೊರೆತ ಮಹಾಸತಿಕಲ್ಲು ಶಾಸನಗಳಲ್ಲಿ "ದೇಕಬ್ಬೆಯ ಶಾಸನವೇ" ಅತ್ಯಂತ ದೊಡ್ಡದು. ಪ್ರಸ್ತುತ ಶಾಸನದಲ್ಲಿ ಬಳಸಿರುವ ಬಂಧವೆಂದರೆ ಕಂದ, ಚಂಪಕಮಾಲಾ, ಪಿರಿಯಕ್ಕರ, ಸ್ರಗ್ಧರ, ಮಹಾಸ್ರಗ್ಧರ ಮತ್ತು ತುಂಬಾ ಅಪರೂಪವಾದ ಲಲಿತ ವೃತ್ತ. ಆದರೆ ದಾನ ವಿಷಯವನ್ನು ನಿರೂಪಿಸುವ ಭಾಗ ಮಾತ್ರ ಗದ್ಯದಲ್ಲಿದೆ. 

ಇಲ್ಲಿ ಬಳಸಲಾಗಿರುವ ಲಲಿತ ವೃತ್ತ ಮತ್ತು ಪಿರಿಯಕ್ಕರ ಬಂಧದ ಬಗ್ಗೆ ನಾಗವರ್ಮನ‌ "ಛಂದೋಗ್ರಂಥದಲ್ಲಿ" ವಿವರಿಸಲಾಗಿದೆಯೆಂದು ರೆವೆರೆಂಡ್ ಕಿಟೆಲ್ ಹೇಳಿದ್ದಾರೆ‌.‌ರನ್ನನ ಗಧಾಯುದ್ಧದಲ್ಲಿಯೂ ಇಂತಹ ಲಲಿತ ವೃತ್ತದ ಬಳಕೆಯಿದೆ ಎಂಬುದನ್ನು ಗಮನಿಸಬೇಕು ಎನ್ನುತ್ತಾರೆ ಮೇವುಂಡಿ ಮಲ್ಲಾರಿಯವರು.‌

ಶಾಸನ ರಚಿಸಿದ ಕವಿ ಮಲ್ಲನಿಗೆ "ಕವಿರಾಜ ಬಾಂಧವ" ಎಂಬ ಬಿರುದಿತ್ತು. 

ಈತ ವ್ಯರ್ಥವಾಗಿ ಪದಬಳಕೆ ಮಾಡುತ್ತಿರಲಿಲ್ಲ.‌ ದೇಕಬ್ಬೆಯ ಗುಣಗಾನವೇ ಈತನ ಪ್ರಧಾನ ಆಶಯ. ಕನ್ನಡ ಭಾಷೆಗೆ ರಾಜಾಶ್ರಯ ಕುಂದಿ ಹೋಗಿದ್ದ ಚೋಳರ ಅಧಿಪರ್ಯದ ಕರ್ನಾಟಕದ ಭಾಗದಲ್ಲಿ ಮಲ್ಲ ಅಪರೂಪದ ಕವಿಯಾಗಿ ಕಂಡು ಬರುತ್ತಾನೆ. ಸರಳ, ನಿರಾಡಂಬರ ನಿರೂಪಣೆಯೇ ಶಾಸನ ಕಾವ್ಯದ ಸೊಬಗು.

ಶಾಸನದಲ್ಲಿನ ಏಳನೆಯ ಪದ್ಯದಲ್ಲಿ ಕೆಲವು ರಾಜವಂಶಗಳ ಮತ್ತು ಕೆಲವು ದೇಶಗಳ ಹೆಸರುಗಳ ಪ್ರಸ್ತಾಪ ಬರುತ್ತದೆ. ಕಿಟ್ಟೆಲ್ ಅವರು ಈ ವಿಷಯ ತಿಳಿಸುತ್ತಾ "ವೀರಶಿಲಾ ಮೇಗನ್" ಎಂಬ ಹೆಸರಿನ ಇಬ್ಬರು ದೊರೆಗಳು ಇದ್ದುದಾಗಿ ತಿಳಿಸುತ್ತಾರೆ. ಇವರಿಬ್ಬರೂ ಚೋಳ ದೊರೆಯಿಂದ ಹತರಾಗಿದ್ದರು. ಕುಡಿಯರು ಎಂದರೆ ಶೂದ್ರರು ಎಂದು ಕಿಟ್ಟೆಲ್ ಹೇಳಿದ್ದಾರೆ. 

ಕಿಟ್ಟೆಲ್ ಹಾಗೂ ಬಿ.ಎಲ್. ರೈಸ್ ಅವರು ಪ್ರಕಟಿಸಿರುವ ಶಾಸನಕ್ಕೂ, ಎಪಿಗ್ರಾಫಿಯಾ ಕರ್ನಾಟಿಕಾ  ಪರಿಷ್ಕೃತ ಆವೃತ್ತಿ ಪ್ರಕಟಿಸಿರುವ ಶಾಸನ ಪಾಠಕ್ಕೂ ವ್ಯತ್ಯಾಸವಿದೆ. ಕಿಟ್ಟೆಲ್ ಅವರು ತಮ್ಮ ಲೇಖನದಲ್ಲಿ ಕೆಲವು ಶಾಸನೋಕ್ತ ಶಬ್ದಗಳ ವಿಶೇಷತೆಯನ್ನು ಗುರುತಿಸಿದ್ದಾರೆ.

ಉಪಸಂಹಾರ

ಗಂಡನ ಸಾವಿನ ಸುದ್ದಿ ಕೇಳಿ, ತಾನೂ ಚಿತೆಯೇರಿ ಸಹಗಮನ‌ ಮಾಡಿದ ದೇಕಬ್ಬೆಯನ್ನು ಈ ಶಾಸನ ಸ್ಮರಿಸುತ್ತದೆ. ಈ ಶಾಸನಕಲ್ಲಿ ನೆಡೆಸಿದವರು ದೇಕಬ್ಬೆಯ ತಂದೆ. ರಚಿಸಿದವನು ಮಲ್ಲ ಎಂಬ ಕವಿ. 

ಕನ್ನಡದಲ್ಲಿ ಸತೀ ಪದ್ಧತಿಯನ್ನು ಇಷ್ಟು ವಿಸ್ತಾರವಾಗಿ ವರ್ಣಿಸಿರುವ ಮತ್ತೊಂದು ಶಾಸನವಿಲ್ಲ. ಕನ್ನಡ ಸಾಹಿತ್ಯಿಕ ಬೆಳವಣಿಗೆಯನ್ನು ಅಧ್ಯಯನ ಮಾಡುವಾಗ ಈ ಶಾಸನವನ್ನು ಗಮನಿಸಲೇಬೇಕಾಗುತ್ತದೆ ಎಂದು ಹೇಳಿದರೆ ಇದರ ಮಹತ್ವ ಅರಿವಾಗುತ್ತದೆ.

(ವಿವಿಧ ಮೂಲಗಳಿಂದ)

************

ಕೆ.ಎ.ಸೌಮ್ಯ

ಮೈಸೂರು


**************

ಕನ್ನಡ ಶಾಸನ ಸಾಹಿತ್ಯದಲ್ಲಿ ದೇಕಬ್ಬೆ ಶಾಸನದ ಸ್ಥಾನವನ್ನು ಕುರಿತು ಬರೆಯಿರಿ

*************

(ಎಂ.ಎ ಕನ್ನಡ 2010) 





ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)