ರತ್ನಾಕರನ ಭೋಗ ಯೋಗದ ತೊಡಕು by ಜಿ ಎಸ್ ಶಿವರುದ್ರಪ್ಪ

 ಜಿ.ಎಸ್.ಶಿವರುದ್ರಪ್ಪ: ಶಿವರುದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಜನಿಸಿದರು. ಶ್ರೀಯುತರು ಹೊಸಗನ್ನಡ ಸಾಹಿತ್ಯದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.


ಹೆಸರು:  ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
DOB:   feb 7th 1926
ಸ್ಥಳ :     ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ
              ಈಸೂರು ಗ್ರಾಮ
ಪ್ರಶಸ್ತಿ :  ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ
              ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೃತಿಗಳು : ಸಾಮಗಾನ, ಚೆಲುವು ಒಲವು, ದೀಪದ
                ಹೆಜ್ಜೆ, ತೆರೆದ ದಾರಿ, ಪ್ರೀತಿ ಇಲ್ಲದ ಮೇಲೆ,
                ಪೂರ್ವ ಪಶ್ಚಿಮ, ನವೋದಯ,
                ಕಾವ್ಯಾರ್ಥ ಚಿಂತನೆ, 
                ಮಾಸ್ಕೋದಲ್ಲಿ 22 ದಿನ.

ಜಿ.ಎಸ್.ಎಸ್ ಅವರು ಕುವೆಂಪು ಅವರ ಮಾರ್ಗದರ್ಶನದಲ್ಲಿ "ಸೌಂದರ್ಯ ಸಮೀಕ್ಷೆ" ಎಂಬ ಪ್ರಬಂಧ ರಚಿಸಿ ಡಾಕ್ಟರೇಟ್ ಪಡೆದಿದ್ದಾರೆ.

ಜಿ.ಎಸ್.ಎಸ್ ರವರು ತಮ್ಮ ಹದಿನೈದನೇ ವಯಸ್ಸಿನಿಂದಲೇ ಬರವಣಿಗೆಯನ್ನು ಆರಂಭಿಸಿದರು. ಶ್ರೇಷ್ಠ ಕವಿ ಮತ್ತು ಉತ್ತಮ ವಿಮರ್ಶಕರು ಕೂಡ ಆಗಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. 

"ಉತ್ತಮ ಕವಿ ವಿಮರ್ಶಕ ಆಗಲಾರ : ಉತ್ತಮ ವಿಮರ್ಶಕ ಕವಿ ಆಗಲಾರ" ಎಂಬ ಮಾತಿಗೆ ಇವರು ಅಪವಾದ. 

ವಿಮರ್ಶೆಯಲ್ಲಿ ಜಿ.ಎಸ್.ಎಸ್ ಅವರ ವಿಶಿಷ್ಠ ಛಾಪು ಎದ್ದು ಕಾಣುತ್ತದೆ. ಪ್ರಸ್ತುತ ಅವರ ಲೇಖನವಾದ "ರತ್ನಾಕರನಲ್ಲಿ ಭೋಗ ಯೋಗದ ತೊಡಕು" ಅನ್ನು ಆಯ್ಕೆ ಮಾಡಲಾಗಿದೆ. 

ಪೀಠಿಕೆ:

ರತ್ನಾಕರ 16ನೇ ಶತಮಾನದಲ್ಲಿದ್ದ ಕನ್ನಡದ ಹೆಮ್ಮೆಯ ಕವಿ. 'ಭರತೇಶ ವೈಭವ' ಎಂಬ ಬೃಹತ್ ಕಾವ್ಯವನ್ನು ರಚಿಸಿದ್ದಾನೆ. ಜೈನಧರ್ಮೀಯನಾದ ಈಗ ಜೈನಧರ್ಮವನ್ನು ತನ್ನ ಸಾಹಿತ್ಯದ ಮೂಲಕ ಪ್ರಚಾರ ಮಾಡುವ ಮುಖ್ಯ ಉದ್ದೇಶ ಹೊಂದಿದ್ದಾನೆ. 

ರತ್ನಾಕರ ಬದುಕಿದ್ದ ಕಾಲ ಜೈನ ಧರ್ಮದ ದೃಷ್ಟಿಯಿಂದ ಸಂಕಷ್ಟದ ಕಾಲ.

ವೀರಶೈವ ಮತ್ತು ವೈದಿಕ ಧರ್ಮಗಳೆರೆಡೂ ಅವನತಿಯತ್ತ ಸಾಗಿದ್ದು, ಮತ್ತೊಮ್ಮೆ ತಮ್ಮ ಅಸ್ತಿತ್ವವನ್ನು ಸಾಧಿಸಿಕೊಳ್ಳಲು ಹೆಣಗುತ್ತಿದ್ದವು.‌ ಕಾಲಕ್ಕೆ ತಕ್ಕಂತೆ ಕೆಲವು ಮಾರ್ಪಾಡುಗಳನ್ನು ಧಾರ್ಮಿಕ ಆಚಾರ ವಿಚಾರಗಳಲ್ಲಿ ಅಳವಡಿಸಿಕೊಳ್ಳುವುದು ಎಲ್ಲಾ ಧರ್ಮಗಳಿಗೂ ಅನಿವಾರ್ಯವಾಗಿತ್ತು. 'ಭರತೇಶ ವೈಭವ' ಇಂತಹ ಮಾರ್ಪಾಡುಗಳನ್ನು ಮಾಡಿಕೊಂಡು ಜನಸಾಮಾನ್ಯರಿಗಾಗಿ ಹುಟ್ಟಿ ಬಂದ ಬೃಹತ್ಕಾವ್ಯ. 

ಈ ಕಾರಣದಿಂದಾಗಿ ಈ ಕೃತಿ ಸಾಂಪ್ರದಾಯಿಕರ ತೀವ್ರ ವಿರೋಧ ಎದುರಿಸಿತಾದರೂ, ಜನಸಾಮಾನ್ಯರ ಮೆಚ್ಚುಗೆ ಪಡೆಯಿತು. ಕವನದ ಕೆಲವು ವಿಚಾರಗಳು ತೀವ್ರ ಚರ್ಚೆಗೆ ಒಳಗಾಯ್ತು. ಅದರಲ್ಲಿ 'ಕಥಾನಾಯಕನ ಯೋಗಭೋಗದ ಸಮನ್ವಯ' ವೂ ಒಂದು. ಪ್ರಸ್ತುತ ಲೇಖನದಲ್ಲಿ ಈ ವಿಷಯವನ್ನು ಎತ್ತಿಕೊಳ್ಳಲಾಗಿದೆ.‌

ರತ್ನಾಕರನ ಭೋಗ ಯೋಗದ ತೊಡಕು

ಭರತೇಶ ವೈಭವವನ್ನು ಅಭ್ಯಾಸಕ್ಕೆ ಎತ್ತಿಕೊಂಡ ಯಾರೇ ಆಗಲಿ, ಅದರ ಅದ್ಭುತ ಸೃಷ್ಟಿಗೆ ಬೆರಗಾಗಲೇಬೇಕು. ಅದಕ್ಕೆಂದೇ ಜಿ.ಎಸ್.ಎಸ್ ಅವರೂ ಇದನ್ನು ಜನಸಾಮಾನ್ಯರಿಗಾಗಿ ಬರೆದ ಸರಳ‌ಕೃತಿ ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ.‌

ಜೈನಧರ್ಮದ ಯಾವುದೇ ಕೃತಿಯಾಗಲೀ, ಅದರ ಮೂಲ ಉದ್ದೇಶ ಧರ್ಮಪ್ರಚಾರ. ಪ್ರಸ್ತುತ ಭರತೇಶ ವೈಭವ ಕೂಡ ಅದೇ ಉದ್ದೇಶ ಹೊಂದಿದ್ದರೂ, ಇದು ತೀರ್ಥಂಕರನ ಕಥೆ ಅಲ್ಲ. ಬದಲಿಗೆ ಇದು ಚಕ್ರವರ್ತಿಯ ಕಥೆ. ಈ ಕಥೆ ಮೂಲದ ಆದಿ ತೀರ್ಥಂಕರನ‌ ಕಥೆಯಲ್ಲಿ ಪೂರಕವಾಗಿ ಬರುತ್ತದೆ ಅಷ್ಟೇ. ಅದನ್ನೇ ತನ್ನ ಕಾವ್ಯದ ಮೂಲವಸ್ತುವಾಗಿ ಸ್ವೀಕರಿಸಿರುವ ರತ್ನಾಕರ ವರ್ಣಿ, ಅದನ್ನೇ ಮಹತ್ಕಾವ್ಯವನ್ನಾಗಿಸಿದ್ದಾನೆ.‌

ವಾಸ್ತವವಾಗಿ ಭರತ ಚಕ್ರವರ್ತಿಯ ಕಥೆಯಲ್ಲಿ ಮೊದಲಿನಿಂದಲೂ ನಿರೂಪಿತವಾಗಿರುವುದು ಅವನ ಭೋಗ ವೈಭವಗಳ ಕಥೆ. ಆದರೆ ರತ್ನಾಕರ ಎಲ್ಲರೂ ಅನುಸರಿಸುತ್ತಿದ್ದ ತೀರ್ಥಂಕರರ ಪುರಾಣ ನಿರ್ಮಾಣದ ಪದ್ಧತಿಯನ್ನು ಕೈ ಬಿಟ್ಟು, ಚಕ್ರವರ್ತಿಯ ಕಥೆಯನ್ನು ಎತ್ತಿಕೊಂಡಿರುವುದು ವಿಶೇಷವೇ ಸರಿ ಎನ್ನುತ್ತಾರೆ ಲೇಖಕರು. 

ರತ್ನಾಕರನಲ್ಲಿ ಸಮನ್ವಯದ ಆಶಯ: 

ಭೋಗ ಮತ್ತು ಯೋಗ ಎರಡನ್ನೂ ಜಿನ ಪುರಾಣಗಳು ಹೊಂದಿರುತ್ತದೆಯಾದರೂ, ರತ್ನಾಕರನು ಅದನ್ನು ಹೊರ ತೆಗೆದಿರುವ ಮಾರ್ಗ ಬೇರೆಯದು. 

"ಜೈನಪುರಾಣಗಳಲ್ಲಿ ಇಲ್ಲಿನ‌ ಹಾಗೆ ಭೋಗ-ಯೋಗದ ಸಮನ್ವಯದ ಭಾವನೆ ಇಲ್ಲ. ಭೋಗ ಮುಗಿಸಿದ ನಂತರ ಬರುವ ತ್ಯಾಗ, ಯೋಗಕ್ಕೆ ದಾರಿಯಾಗುವುದು ಅಲ್ಲಿನ ರೀತಿ. ತ್ಯಾಗ, ವೈರಾಗ್ಯಗಳಿಗೆ ಹಿನ್ನೆಲೆಯಾಗಿ ಬರುವ ಭೋಗ ಅತ್ಯಂತ ಪ್ರಖರೋಜ್ವಲವಾಗಿ ಚಿತ್ರಿತವಾಗಿರುತ್ತದೆ. ಆ ತೀವ್ರವಾದ ಭೋಗ ಅಲ್ಲಿ ಅಪಾಯದಂತೆ ಕಾಣುತ್ತದೆ.‌ ಆದರೆ ರತ್ನಾಕರನ ಭೋಗದಲ್ಲಿ ಬೆಂಕಿಯಂತಹ ಅಪಾಯವಿಲ್ಲ. ಇದೂ ಒಂದು ಬೆಳಕು ಎಂಬಂತೆ ಚಿತ್ರಿತವಾಗಿದೆ. ಈ ಭೋಗವು ನಶ್ವರ. ಆದರೂ ಭರತೇಶನ ಹಾಗೆ ಯೋಗದ ಹಿನ್ನೆಲೆ ಇದ್ದ ಪಕ್ಷದಲ್ಲಿ ಅದು ಅಪಾಯ ಮಾಡುವಂಥದ್ದೇನೂ ಅಲ್ಲ ಎಂಬ‌ ಅಭಯವೂ ಇಲ್ಲಿದೆ"

ಭರತೇಶ ವೈಭವದ ನಾಯಕ‌ ಯೋಗಿಯೂ ಹೌದು, ಭೋಗಿಯೂ ಹೌದು, ರಾಗರಸಿಕನೂ ಹೌದು. ಅವನು ಯೋಗ ಮತ್ತು ಭೋಗ ಎರಡನ್ನೂ ಅಂಕೆಯಲ್ಲಿ ಇರಿಸಿಕೊಂಡಾತ. ಬೇಕಾದಾಗ ಭೋಗಿಯಾಗಿ, ಬೇಕಾದಾಗ ಯೋಗಿಯಾಗಿ ಯಾವ ಸ್ಥಿತಿಗೆ ಬೇಕಾದರೂ ಏರಬಲ್ಲ. 

"ಬಳಸಿಯೂ ಬ್ರಹ್ಮಚಾರಿ: ಉಂಡುಪವಾಸಿ"

ಅಪಾರವಾದ ಭೋಗದಲ್ಲಿದ್ದು ಎಂದೋ ಒಮ್ಮೆ ಅದನ್ನು ಪೂರ್ಣವಾಗಿ ತ್ಯಜಿಸಿ ಯೋಗಿಯಾಗುವ ಚೇತನಕ್ಕಿಂತಾ, ಭೋಗದಲ್ಲಿದ್ದೂ ಯೋಗಿಯಾಗಿರುವ ಚೇತನ ದೊಡ್ಡದು. ಇಲ್ಲಿನ ಭರತ ಭೋಗದ ನಡುವೆಯೇ ಯೋಗಿಯಾಗಿ ನಿಲ್ಲುತ್ತಾನೆ.

ಆದರೆ ಲೇಖಕರು ಮತ್ತೊಂದು ವಿಷಯವನ್ಮು ಕೂಡ ಸ್ಪಷ್ಟಪಡಿಸುತ್ತಾರೆ. 

ಏನೆಂದರೆ; 

'ಇದರಲ್ಲಿ ರತ್ನಾಕರನ ಆಶಯದಂತೆ ‌ಭರತನಲ್ಲಿ ಯೋಗ ಭೋಗದ ಸಮನ್ವಯ ಅನುಷ್ಠಾನಗೊಂಡೇ ಇಲ್ಲ' ಅಂತ.

ಇದನ್ನು ಸಾಧಿಸುವುದಕ್ಕಾಗಿ ಅವರು ಕಾವ್ಯದ ಒಳಗಿನಿಂದಲೇ ಕಾರಣಗಳನ್ನು ಎತ್ತಿ ಕೊಡುತ್ತಾರೆ‌. 
  • ತನ್ನ ರಾಣಿಯರೊಂದಿಗೆ ಸುರತನಿರತನಾದ ಭರತ ಮರು ಕ್ಷಣದಲ್ಲಿ ಧ್ಯಾನಪರನಾಗುತ್ತಾನೆ. ಎಲ್ಲೆಲ್ಲಿ ಈ ಸುರತ ಸಂದರ್ಭಗಳ ವರ್ಣನೆ ಇದೆಯೋ, ಅಲ್ಲೆಲ್ಲಾ ಭರತ ಧ್ಯಾನಸ್ಥನಾಗುವ ಪ್ರಸ್ತಾಪ ತಪ್ಪದೇ ಬರುತ್ತದೆ. ಹಾಗಾಗಿ ಇದೊಂದು ನಿರೂಪಣಾ ತಂತ್ರ ಎಂಬಂತೆ ಪ್ರತಿಪಾದಿತವಾಗುತ್ತದೆ.
  • ಜೈನರಲ್ಲಿ ವೈರಾಗ್ಯ ಒಂದು ಮುಖ್ಯವಾದ ತತ್ವ. ಒಬ್ಬ ಚಕ್ರವರ್ತಿ ತಪಸ್ಸಿಗೆ ಹೊರಟರೆ, ಅವನಿಂದ ಪ್ರೇರಿತವಾಗಿ ಇಡೀ ಪರಿವಾರವೇ ತಪಸ್ಸಿಗೆ ಹೊರಡುವ  ಪ್ರಸಂಗಗಳು ಜೈನ‌ಕಾವ್ಯಗಳಲ್ಲಿ ಸಾಕಷ್ಟಿದೆ. ಆದರೆ ಇಲ್ಲಿ ವೈರಾಗ್ಯ ಪ್ರಸಂಗಗಳಿಂದ ಭರತನಿಗೆ ವೈರಾಗ್ಯ ಮೂಡುವುದಿಲ್ಲ. ಅಷ್ಟೇ ಅಲ್ಲದೇ ತನ್ನ ಮಕ್ಕಳೇ ವೈರಾಗ್ಯ ಪರರಾಗಿ ತಪಸ್ಸಿಗೆ ಹೊರಟರೆ, ಲೌಕಿಕರಂತೆ ಅವರನ್ನು ‌ತಡೆದು ದುಃಖ ಪಡುತ್ತಾನೆ. ಅವನು ಭೋಗ, ಯೋಗದ ಸಮನ್ವಯ ಸಾಧಿಸಿದ್ದರೆ, ಈ ಲೋಕದ ಹಂಗು ತೊರೆದು ತಪಸ್ಸಿಗೆ ಹೊರಟವರನ್ನು ಕಂಡು ಹರ್ಷ ಪಡಬಹುದಿತ್ತು. 
  • ಈ ಕೃತಿಯಲ್ಲಿ ಜೈನಕಾವ್ಯಕ್ಕೆ ಉಚಿತವಾದ ವೈರಾಗ್ಯ ಬೋಧನೆಯ ಪ್ರಸಂಗಗಳು, ಶೃಂಗಾರಕ್ಕೆ ಸಮತೂಕವಾಗಿ ಚಿತ್ರಿತವಾಗಿಲ್ಲದಿರುವಿದು ಮತ್ತೊಂದು ಋಣಾತ್ಮಕ ಅಂಶ.‌ ಇಲ್ಲಿನ ಪಾತ್ರಗಳು ಜೈನ ಧರ್ಮದ ಕೀಲು‌ಕೊಟ್ಟ ಗೊಂಬೆಗಳ ಹಾಗೆ ನಡೆಯುತ್ತವೆ ಎನ್ನುತ್ತಾರೆ ಲೇಖಕರು.
  • ಕೊನೆಯದಾಗಿ ಭರತನಂಥ ಜ್ಞಾನಿಗೆ ವೈರಾಗ್ಯಭಾವ ಬಂದಿದ್ದು, ಒಂದು ದಿ‌ನ ತನ್ನ ತಲೆಯಲ್ಲಿ ನರೆಕೂದಲನ್ನು ನೋಡಿದಾಗ. ತಕ್ಷಣವೇ ಕನ್ನೆಯಿಂದ ಒಡನಾಟ ನಿಲ್ಲಿಸಿ, ಇದುವರೆಗೂ ತಾನು ಬದುಕಿದ ರೀತಿಗೆ ಪಶ್ಚಾತ್ತಾಪ ಪಟ್ಟನಂತೆ.
ಇಲ್ಲಿಗೆ ರತ್ನನಾಕರನ ಈ ಬಗೆಯ ಪಶ್ಚಾತ್ತಾಪದ ಮಾತಿನಿಂದ ಭೋಗ ಯೋಗದ ಸಮನ್ವಯದ ಕಲ್ಪನೆ  ಸಿಡಿದು ಚೂರಾಗಿದೆ ಎನ್ನುತ್ತಾರೆ ಲೇಖಕರು. ಆತ್ಮಜ್ಞಾನಿಯಾದ ಭರತ ಅಳುವುದೆ, ಕೊರಗುವುದು ಏತಕ್ಕೆ? ಹಂಸಕಲೆಯಲ್ಲಿ ನಿಷ್ಣಾತನಾದ ಭರತನಿಗೆ ಇಂತಹಾ ಹಪಾಹಪಿತನ ಅಗತ್ಯವಿತ್ತೇ?

ರತ್ನಾಕರ ತನ್ನದೇ ಆದ ರೀತಿಯಲ್ಲಿ ಭರತನನ್ನು ಚಿತ್ರಿಸಿದ್ದರೂ, ಕೆಲವು ವೇಳೆ ಅನಿವಾರ್ಯವಾಗಿ ಸಂಪ್ರದಾಯಸ್ಥ ಭರತನ ಪಾತ್ರ ಚಿತ್ರಣಕ್ಕೆ ಕಟ್ಟು ಬೀಳಬೇಕಾದ ಪ್ರಸಂಗಗಳಿವೆ. ವೃಷಭಾಚಲದಲ್ಲಿ ತನ್ನ ಹೆಸರು ಕೆತ್ತಿಸುವಾಗ ಭರತನ ಪಾತ್ರ ಹಳೆಯ ಜಾಡನ್ನೇ ಹಿಡಿದಿದೆ. 

ಭರತೇಶ ವೈಭವದಲ್ಲಿ ಭೋಗ ಯೋಗದ ತತ್ವದ ನಿರ್ದೇಶನಕ್ಕಾಗಿಯೇ ಭರತ ಚಕ್ರಿಯ ಪಾತ್ರವನ್ನು ತಯಾರಿಸಿದಂತೆ ಕಾಣುತ್ತದೆ. ಜೊತೆಗೆ ಈ ಸಮನ್ವಯ "ಭರತ ಚಕ್ರವರ್ತಿಗೆ ಮಾತ್ರ ಸಾಧ್ಯ" ಎನ್ನುವಂತೆ ಚಿತ್ರಿತವಾಗಿದೆ. 

ಭರತನ‌ ಕಥೆಯನ್ನು ಇಟ್ಟುಕೊಂಡು ಜೈನಧರ್ಮವನ್ನು ತನ್ನ ನೂತನ ದೃಷ್ಟಿಯಿಂದ ಪುನರ್ ಅವಲೋಕಿಸಿ ಯೋಗಭೋಗದ ಒಂದು ಸಮನ್ವಯದ ಚಿತ್ರವನ್ನು ಕವಿ ಇದರಲ್ಲಿ ನಿರೂಪಿಸಿದ್ದಾನೆ. ಇದು ಅವನ ಸ್ವತಂತ್ರ ಕ್ರಿಯಾಶೀಲತೆಯ ಲಕ್ಷಣವಾಗಿದೆ. ಅವನು ಈ ಕಥೆಯನ್ನು ಆಯ್ದುಕೊಳ್ಳಲು ಜಿ.ಎಸ್.ಎಸ್ ಅವರು ಈ ಕಾರಣವನ್ನು ಮುಂದಿಡುತ್ತಾರೆ. 

"ಭೋಗವನ್ನು ವರ್ಜಿಸಿ ಯೋಗ ಎಂಬುದಿರಬಹುದು. ಆದರೆ ಭೋಗವನ್ನು ನಿರಾಕರಿಸಿ ಯೋಗ ಸಾಧಿಸುವುದಕ್ಕಿಂತಾ, ಭೋಗದಲ್ಲಿದ್ದೂ ಯೋಗವನ್ನು ಮೈಗೂಡಿಸಿಕೊಂಡ ಚಕ್ರವರ್ತಿಯ ಪಾತ್ರ, ಬದುಕಿನ ದೃಷ್ಟಿಯಿಂದ ದೊಡ್ಡದು ಅಂತ ರತ್ನಾಕರ ಭಾವಿಸಿರುವ ಹಾಗೆ ತೋರುತ್ತದೆ" 

ರತ್ನಾಕರ ಭರತೇಶ ವೈಭವವನ್ನು "ಜಿನ‌ ಕಥೆ" ಎನ್ನುತ್ತಾನೆ. ಈ ಜಿನ ಕಥೆ ಕೇಳಿದವರ ಪಾಪ ಬೀಜ ನಾಶವಾಗುವುದು ಎನ್ನುತ್ತಾನೆ. ಇದನ್ನು ಗಮನಿಸಿದರೆ ಭೋಗವನ್ನು ವರ್ಜಿಸಿ ಯೋಗವನ್ನು ಸಾಧಿಸಿದವನಿಗಿಂತಲೂ, ಭೋಗದಲ್ಲಿದ್ದುಕೊಂಡು ಯೋಗವನ್ನು ಮೈಗೂಡಿಸಿಕೊಂಡ ಭರತನೇ ಶ್ರೇಷ್ಠ ಎಂದು ಪ್ರತಿಪಾದಿಸುವ ದಿಟ್ಟ ಧೋರಣೆ ಕಾಣುತ್ತದೆ. 

ಆದರೆ ಭರತನಿಗಿಂತಾ ಬಾಹುಬಲಿಯ ಕಥೆಯನ್ನು ರತ್ನಾಕರನು ಆರಿಸಿಕೊಂಡಿದ್ದರೆ ಚೆನ್ನಾಗಿತ್ತು ಎನ್ನುತ್ತಾರೆ ಲೇಖಕರು. ಭೋಗ ಯೋಗದ ಸಮನ್ವಯಕ್ಕಾಗಿ ಬಾಹುಬಲಿಯನ್ನು ತನ್ನ ನಾಯಕನನ್ನಾಗಿಸಿಕೊಂಡಿದ್ದರೆ ಅವನ ಉದ್ದೇಶ ಇನ್ನೂ ಮಹತ್ತರವಾಗಿ ನೆರವೇರುತ್ತಿತ್ತು ಎನ್ನುತ್ತಾರೆ. 

ರತ್ನಾಕರನ ಈ ಭೊಗ ಯೋಗದ ಕಲ್ಪನೆ ಜೈನ‌ಮೂಲ ತತ್ವಕ್ಕಿಂತಾ ವಿಭಿನ್ನವಾದುದು. ಏಕೆಂದರೆ ಜೈನತತ್ವ ತ್ಯಾಗ, ಭೋಗದ ಸಮನ್ವಯ ಅಲ್ಲ. ಅದು ಭೋಗ ನಿರಾಕರಣೆಯನ್ನು ಉದ್ದಿಷ್ಟವಾಗಿ ಇಟ್ಟುಕೊಂಡಿದೆ. ಬೋಗ ಮತ್ತು ಯೋಗ ಎರಡೂ ಒಂದೇ ಕಡೆ ಇರುವುದು ಜೈನ ಧರ್ಮದ ಪ್ರಕಾರ ಅಸಂಭವ. 

ಭೋಗ----> ಸ್ವರತತ್ವ
ಯೋಗ----> ಜಿನತತ್ವ
(ಶಾಂತಪುರಾಣ)

ಹೀಗೆ ಒಂದು ಉತ್ತರಕ್ಕೆ ಮತ್ತೊಂದು ದಕ್ಷಿಣಕ್ಕೆ ಮುಖ ಮಾಡಿರುವ ತತ್ವಗಳನ್ನು ಒಂದುಗೂಡಿಸುವುದು ಎಷ್ಟು ಸಮಂಜಸ ಎಂಬುದು ಲೇಖಕರ ಪ್ರಶ್ನೆಯಾಗಿದೆ. 

ರತ್ನಾಕರ ಬದುಕಿದ್ದು ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ. ಆಗ ವಿಜಯನಗರ ಸಾಮ್ರಾಜ್ಯ ತನ್ನ ವೈಭವ ಕಳೆದುಕೊಂಡು ಅವನತಿಯ ದಾರಿ ಹಿಡಿದಿತ್ತು. ಆದರೂ ಅದು ಮೊದಲಿನಿಂದಲೂ ಕನ್ನಡ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲದೇ ವೈಷ್ಣವ, ಶೈವ, ವೀರಶೈವ, ಜೈನ, ಮುಸ್ಲಿಂ ಎಲ್ಲಾ ಮತಗಳ ಆಶ್ರಯಸ್ಥಾನವಾಗಿತ್ತು. ಹೀಗೆ ತನ್ನ ಕಾಲದಲ್ಲಿ ಯುಗಧರ್ಮವಾಗಿದ್ದ ಸಮನ್ವಯ ತತ್ವವನ್ನು ರತ್ನಾಕರ ತನ್ನ ಕಾವ್ಯದಲ್ಲಿ ಅಳವಡಿಸಿದ. 

ಅಲ್ಲದೇ ಜೈನಧರ್ಮವು ವೈದಿಕ ಮತ್ತು ವೀರಶೈವ ಧರ್ಮಗಳಿಗಿಂತಾ ಆಚರಣೆಯಲ್ಲಿ ಕಠಿಣವಾಗಿದ್ದು, ಜನಸಾಮಾನ್ಯರಿಗೆ ಅನುಷ್ಠಾನ ಸುಲಭವಾಗಿರಲಿಲ್ಲ.‌ ಹೀಗಾಗಿ ಭೋಗವನ್ನು ನಿರಾಕರಿಸದೇ ಯೋಗವನ್ನು ಸಾಧಿಸುವಂತಹಾ ಒಂದು ಹೊಸ ಪರಂಪರೆಯನ್ನು ರತ್ನಾಕರ ಹಾಕಿಕೊಟ್ಟ. 

"ಸಂಸಾರದಲ್ಲಿದ್ದೂ ಶಿವಯೋಗ ಸಾಧಿಸಬಹುದು" ಎನ್ನುವುದು ವೀರಶೈವ ಧರ್ಮದ ಸೂತ್ರ. ಅಂದರೆ ಸತಿಪತಿಗಳು ಒಂದಾಗಿಯೂ ಶಿವಭಕ್ತಿ ಸಾಧ್ಯ ಎಂಬುದೇ ಅದರ ಆಕರ್ಷಣೆ. ಯೋಗ ಸಾಧನೆಗೆ ಭೋಗ ಬಿಡಬೇಕಾಗಿಲ್ಲ, ಜೀವನವನ್ನು ತಿರಸ್ಕರಿಸಬೇಕಾಗಿಲ್ಲ, ದೇಹವನ್ನು ದಂಡಿಸಬೇಕಾಗಿಲ್ಲ. ಅಲ್ಲದೇ ಈ ಯೋಗ ಕೇವಲ ಪುರುಷರ ಸ್ಚತ್ತಲ್ಲ. ಯಾವ ಜಾತಿಗೂ ಮೀಸಲಾದುದಲ್ಲ ಎಂಬುದು ವೀರಶೈವ ಧರ್ಮ ಸಾರವಾಗಿತ್ತು. 

ಹಾಗಾಗಿ ರತ್ನಾಕರ ತನ್ನ ಕಾವ್ಯದಲ್ಲಿ ಜೈನ ಧರ್ಮಕ್ಕೆ ಹೊರತಾದ, ಕೆಲವು ಇತರೆ ಧರ್ಮಗಳ ಉತ್ತಮಾಂಶಗಳ ಪರಿಕಲ್ಪನೆಗಳನ್ನು ಅಳವಡಿಸಿಕೊಂಡಿದ್ದಾನೆ. ಇದು ವೀರಶೈವ ಮತ ಪ್ರತಿಪಾದಿಸಿದ ಸಂಸಾರದಲ್ಲಿದ್ದೂ ಶಿವಯೋಗಿಯಾಗುವ ತತ್ವದ ಪ್ರತಿಪಾದನೆಯಾಗಿದೆ. 

ಭರತನ ಪಾತ್ರದ ಮೇಲೆ ಶ್ರೀಕೃಷ್ಣನ ಪ್ರಭಾವ: 

ಶ್ರೀಕೃಷ್ಣ ಕೂಡ ಯೋಗ, ಭೋಗದ ಸಮನ್ವಯಕಾರ. ಇಂತಹ ಮನೋಧರ್ಮ ಭಾರತೀಯ ಪರಂಪರೆಯಲ್ಲಿಯೇ ಇದೆ. (ಯೋಗ, ಭೋಗದ ಸಮನ್ವಯ ಎಂಬುದು ಒಂದು ಧರ್ಮದ ಸ್ವತ್ತೇನೂ ಅಲ್ಲ. ಭಗವಾನ್ ಶ್ರೀಕೃಷ್ಣ, ಜನಕ ಮಹಾರಾಜ ಮೊದಲಾದವರ ಜೀವನದಲ್ಲಿಯೂ ಇದು ಇದೆ ಎನ್ನುತ್ತಾರೆ ಲೇಖಕರು).

ಭರತೇಶನ ಪಾತ್ರ ಶ್ರೀಕೃಷ್ಣನನ್ನೇ ನೆನಪಿಗೆ ತರುವಷ್ಟು ಅತಿರಂಜಿತವಾಗಿದೆ.‌ ಭರತೇಶ ತನ್ನ 96,000 ಹೆಂಡತಿಯರೊಡನೆ (ಇದು ಶ್ರೀಕೃಷ್ಣನ ಹೆಂಡತಿಯರ ಸಂಖ್ಯೆಯ ಆರರಷ್ಟು) ಏಕಕಾಲದಲ್ಲಿ ಬಹುರೂಪಿಯಾಗಿ ಸುಖಿಸಿದ್ದು ಕೃಷ್ಣಲೀಲೆಯ ಪ್ರತೀಕವಾಗಿದೆ. 

ಜಿ.ಎಸ್.ಎಸ್ ಅವರ ವಿಮರ್ಶೆಗೆ ಪ್ರತಿಕ್ರಿಯೆ: 

ಜಿ.ಎಸ್.ಶಿವರುದ್ರಪ್ಪರವರು ಬರೆದ ಈ ವಿಮರ್ಶೆಗೆ ಪ್ರತ್ಯುತ್ತರವಾಗಿ ಎಂ.ಎ.ಜಯಚಂದ್ರ ಅವರು "ರತ್ನಾಕರನ ಯೋಗಭೋಗದಲ್ಲಿ ತೊಡಕಿದೆಯೇ?" ಎಂಬ ವಿಸ್ತಾರವಾದ ಲೇಖನ ಬರೆದಿದ್ದಾರೆ‌.

ರತ್ನಾಕರ ಭರತನ ಪಾತ್ರದಲ್ಲಿ ಯೋಗ, ಭೋಗ ಸಮನ್ವಯವನ್ನು ಉದ್ದೇಶಿಸಿಯೇ ಇಲ್ಲ ಎಂಬುದು ಜಯಚಂದ್ರ ಅವರ ಅಭಿಪ್ರಾಯ. ರತ್ನಾಕರನ ಶೈಲಿ ಕಾವ್ಯದಲ್ಲಿಲ್ಲ. ಪರಂಪರಾನುಗತ ಜೀವನ‌ದರ್ಶನವೇ ನೂತನ ಶೈಲಿಯಲ್ಲಿ ನಿರೂಪಿಸಲ್ಪಟ್ಟಿದೆ ಎನ್ನುತ್ತಾರೆ. 

ರತ್ನಾಕರನನ್ನು ಸಮರ್ಥಿಸಲು‌ ಲೇಖಕರು ಕುಂದಾಚಾರ್ಯರ "ನಿರ್ಜರಾ" ತತ್ವವನ್ನು ಉದಾಹರಿಸುತ್ತಾರೆ. ಜ್ಞಾನಪುರುಷ ಯಾವ ಕರ್ಮವನ್ನು ಮಾಡಿದರೂ, ಅದು ಮಾಡಿದ ಹಾಗಲ್ಲ ಎನ್ನುವುದು ಆ ತತ್ವ. ಹಾಗೆಯೇ ಭರತ ಚಕ್ರಿಯೂ ಸಹಸ್ರಾರು ಹೆಂಡತಿಯರನ್ನು ಉಪಭೋಗಿಸುವುದು, ತಾಯಿ-ಮಕ್ಕಳ ಅಗಲುವಿಕೆಯಿಂದ ದುಃಖಿತನಾಗುವುದು, ಎಲ್ಲವೂ ಮೇಲಿನ ನಿರ್ಜರಾ ತತ್ವಕ್ಕೆ ಅನುಸಾರವಾಗಿ ಭರತೇಶ ವೈಭವದಲ್ಲಿ ಚಿತ್ರಿತವಾಗಿದೆ. 

ಭರತನು ತನ್ನ ಪೂರ್ವಾಜಿತ ಪುಣ್ಯಫಲವನ್ನು ಅನುಭವಿಸುತ್ತಾನೆ. ಆದರೆ ಅದರಲ್ಲಿ ಆಸಕ್ತನಾಗುವುದಿಲ್ಲ. ಆತ ಬಂದುದನ್ನು ಬಿಡುವುದಿಲ್ಲ. ಬರದೇ ಇರುವುದನ್ನು ಬಯಸುವುದಿಲ್ಲ. ಎಲ್ಲವನ್ನೂ ಉದಾಸೀನವಾಗಿ ಅನುಭವಿಸುತ್ತಾನೆ.‌ ಈ ಭಾವದಲ್ಲಿಯೇ ಭರತ ಆಹಾರ ಸ್ವೀಕರಿಸುತ್ತಿದ್ದ, ಗಾನ ಕೇಳುತ್ತಿದ್ದ, ನೃತ್ಯ ನೋಡುತ್ತಿದ್ದ, ಸತಿಯರನ್ನು ಭೋಗಿಸುತ್ತಿದ್ದ.

ಉಪಸಂಹಾರ:

ರತ್ನಾಕರ ಕನ್ನಡದ ಜನಪ್ರಿಯ ಕವಿಗಳಲ್ಲಿ ಒಬ್ಬ. ಪ್ರಮುಖವಾಗಿ ಸಾಂಗತ್ಯ ಕವಿ. ರತ್ನಾಕರ ಜೀವಿಸಿದ್ದ ಕಾಲ ಜೈನಧರ್ಮವು ಜನಮಾನ್ಯವಾದ ಕಾಲವಲ್ಲ. ತನ್ನ ಧರ್ಮವನ್ನು ಪುನರುಜ್ಜೀವನಗೊಳಿಸಲು ಎಂಬಂತೆ ಸಮಕಾಲೀನ ಧರ್ಮಗಳಾದ ವೀರಶೈವ ಮತ್ತು ವೈದಿಕ ಧರ್ಮಗಳಿಂದ ಕೆಲವು ಅಂಶಗಳನ್ನು ಸ್ವೀಕರಿಸಿ, ತನ್ನ ಕಾವ್ಯದಲ್ಲಿ ಅಳವಡಿಸಿಕೊಂಡಿದ್ದಾನೆ. ಭೋಗದಲ್ಲಿದ್ದೂ ಮುಕ್ತಿ ಪಡೆಯಬಹುದು ಎಂದು 'ಭರತೇಶ ವೈಭವದಲ್ಲಿ' ತೋರಿಸಿದ್ದಾನೆ. ಅದನ್ನು ಅದರ ಮಿತಿಗಳನ್ನು ಜಿ.ಎಸ್.ಶಿವರುದ್ರಪ್ಪರವರು ವಿಶ್ಲೇಷಣೆಗೆ ಒಳಪಡಿಸಿದ್ದಾರೆ.


(ವಿವಿಧ ಮೂಲಗಳಿಂದ) 
*****************

K A Sowmya
Mysore

*****
ರತ್ನಾಕರ ವರ್ಣಿಯ ಯೋಗ ಭೋಗದ ತೊಡಕಿನ‌ ಕುರಿತು ಬರೆಯಿರಿ
******
 (M A Kannada 2010) 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)