ಆಧುನಿಕ ಕನ್ನಡ ಕಾವ್ಯದಲ್ಲಿ ಸಮಾಜ : ಡಿ.ಆರ್.ನಾಗರಾಜ್

ಡಿ.ಆರ್.ನಾಗರಾಜ್

ಡಿ.ಆರ್.ನಾಗರಾಜ್ ರವರು ದೊಡ್ಡಬಳ್ಳಾಪುರದಲ್ಲಿ ಹುಟ್ಟಿದರು. ಪ್ರಸ್ತುತ ಲೇಖನವನ್ನು ಅವರ ಸಂಶೋಧನಾ ಕೃತಿಯಾದ "ಶಕ್ತಿ ಶಾರದೆಯ ಮೇಳ" ಎಂಬ ಗ್ರಂಥದಿಂದ ಆರಿಸಿಕೊಳ್ಳಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿಎ ಆನರ್ಸ್ ಮತ್ತು ಎಂ.ಎ ಪದವಿ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತಮ್ಮ ವೃತ್ತಿ ಸೇವೆ ಆರಂಭಿಸಿದವರು, ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದ ಭಾರತೀಯ ಭಾಷಾ ವಿಭಾಗದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 

ಡಿ.ಆರ್.ನಾಗರಾಜ್ ಅವರು ಕನ್ನಡ ಸಾಹಿತ್ಯದ ಶ್ರೇಷ್ಠ ವಿಮರ್ಶಕರಾಗಿ, ನಾಟಕಕಾರರಾಗಿ, ಅನುವಾದಕರಾಗಿ, ಸಂಪಾದಕರಾಗಿ, ಪ್ರಾಧ್ಯಾಪಕರಾಗಿ ಇನ್ನೂ ಮೊದಲಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 

ಹೆಸರು : ಡಿ.ಆರ್.ನಾಗರಾಜ್

ಹುಟ್ಟಿದ ಸ್ಥಳ : ದೊಡ್ಡಬಳ್ಳಾಪುರ

DOB : 20th Feb 1954

ತಂದೆ : ರಾಮಯ್ಯ

ತಾಯಿ : ಅಕ್ಕಯ್ಯಮ್ಮ

ನಂತರ ಡಿ.ಆರ್.ನಾಗರಾಜ್ ರವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ , ಬೆಂಗಳೂರು ವಿಶ್ವವಿದ್ಯಾಲಯದ ತೌಲನಿಕ ಸಾಹಿತ್ಯ ಕೇಂದ್ರ ವಿದ್ವಾಂಸರು, ಬೆಂಗಳೂರು ವಿಶ್ವವಿದ್ಯಾಲಯದ ಕೈಲಾಸಂ ಪೀಠದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 

ಡಿ.ಆರ್.ನಾಗರಾಜ್ ಅವರ ಕೃತಿಗಳು

  • ಅಮೃತ ಮತ್ತು ಗರುಡ
  • ಶಕ್ತಿ ಶಾರದೆಯ ಮೇಳ
  • ಪಾಶ್ಚಾತ್ಯ ಸಾಹಿತ್ಯ ದರ್ಶನ
  • ಉರ್ದು ಸಾಹಿತ್ಯ
ಪ್ರಶಸ್ತಿಗಳು
  • ವರ್ಧಮಾನ ಪ್ರಶಸ್ತಿ
  • ಶಿವರಾಮ ಕಾರಂತ ಪ್ರಶಸ್ತಿ
  • ಆರ್ಯಭಟ ಪ್ರಶಸ್ತಿ
  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಮರಣೋತ್ತರ)

ಪೀಠಿಕೆ

ಕಾವ್ಯವೊಂದರಲ್ಲಿ ಬರುವ ಸಮಾಜದ ಪರಿಕಲ್ಪನೆಗಳು, ಚಾರಿತ್ರಿಕ ಅನುಭವಗಳು, ಆಯಾ ಸಮಾಜದ ಅನುಭವದಿಂದ ನಿಯಂತ್ರಿತವಾಗಿರುತ್ತದೆ. ತಮ್ಮ ಅನುಭವಕ್ಕೆ ಸಿಕ್ಕಿದಷ್ಟು ಮಾತ್ರ ಸತ್ಯಗಳನ್ನು ಆಯಾ ಸಮಾಜ ಸಾಹಿತ್ಯದಲ್ಲಿ ಪ್ರಕಟಿಸುತ್ತದೆ. ಭಾರತದಂತಹ ದೇಶಗಳಲ್ಲಿ ತಮ್ಮ ವಿಶಿಷ್ಟ ಅನುಭವಗಳಿಗೆ ಸಾಹಿತ್ಯಿಕ ರೂಪ ಕೊಡಲಾಗದ ಅನೇಕ ವರ್ಗಗಳು, ಗುಂಪುಗಳು ಇವೆ ಎಂಬುದು ಪ್ರಮುಖ ಅಂಶ. 

ವಸಾಹತುಶಾಹಿ ಸಂದರ್ಭದಲ್ಲಿ ಹೊಸ ಸಾಹಿತ್ಯ ಚಳುವಳಿಯ ಸನ್ನಿವೇಶದಲ್ಲಿ ನಾವು ಸಹಜವಾಗಿ ನಿರೀಕ್ಷಿಸುವುದು ವಿನಾಶ ಮತ್ತು ನಿರ್ನಾಮ.‌ ಇದು ಚಾರಿತ್ರಿಕ ಸತ್ಯವಾಗಿದೆ. ಆಧುನಿಕ ಆಫ್ರಿಕನ್ ಸಾಹಿತ್ಯ ಶೋಧಿಸಲು ಯತ್ನಿಸಿರುವುದೇ ಇಂತಹಾ ವಿನಾಶ ಮತ್ತು ನಿರ್ನಾಮದ ಅನುಭವಗಳನ್ನು. ಆಧುನಿಕ ಕನ್ನಡದಲ್ಲಿ ಒಂದೆರೆಡು ಅಪವಾದಗಳನ್ನು ಬಿಟ್ಟರೆ, ಈ ಬಗ್ಗೆ ಮೌನವೇ ಉತ್ತರ ಎಂದಿದ್ದಾರೆ ಲೇಖಕರು. ‌ಇದಕ್ಕೆ ಕಾರಣ ವಸಾಹತುಶಾಹಿ ಕಾಲದ ಕರಾಳ ಅನುಭವಗಳ ಬಗ್ಗೆ ಸ್ಪಷ್ಟವಾದ ಚಿತ್ರವೇ ನಮಗೆ ಸಿಕ್ಕಿಲ್ಲ. 

ವಸಾಹತುಶಾಹಿ ಆಗಮನಕ್ಕೆ ನೀಡಿದ ಪ್ರತ್ಯುತ್ತರವೇ ಕನ್ನಡದಲ್ಲಿ ನವೋದಯ ಸಾಹಿತ್ಯದ ಹುಟ್ಟಿಗೆ ಕಾರಣವಾಯ್ತು.‌ ಪರಕೀಯರ ಆಳ್ವಿಕೆಗೆ ಗುರಿಯಾದ ನಾಡಿನ ಸಂಸ್ಕೃತಿಯಲ್ಲಿ ಪರಕೀಯ ಶಿಕ್ಷಣದ ಕಾರಣದಿಂದಲೇ ಸ್ವಪ್ರಜ್ಞೆ ಉಂಟಾಗುತ್ತದೆ‌.‌ ಇದೊಂದು ವಿಪರ್ಯಾಸ. ಪರಕೀಯರ ಸಂಸ್ಕೃತಿ ಶ್ರೇಷ್ಠವಾದುದು ಎಂಬ ಅರಿವು ನಮ್ಮ ಸಂಸ್ಕೃತಿಯನ್ನು ರಕ್ಷಿಸುವ ಕಡೆ ಗಮನ ಹರಿಯುವಂತೆ ಮಾಡುತ್ತದೆ. ಆತ್ಮಾಭಿಮಾನದ ಮೂಲಕ ಹೊಸದೊಂದು ಸಂಸ್ಕೃತಿಯನ್ನು ಕಟ್ಟಿಕೊಳ್ಳಲು ನಾಡಿನ ಜನರು ಯತ್ನಿಸುತ್ತಾರೆ. ಇದನ್ನು ಹೋರಾಟದ ಸಾಧನವನ್ನಾಗಿ ಮಾಡಿಕೊಳ್ಳುತ್ತಾರೆ. 

ಇದರಿಂದ ಸ್ಪಷ್ಟವಾಗುವ ಅಂಶವೇನೆಂದರೆ ಪ್ರಬಲ ರಾಜಕೀಯ ಹೋರಾಟವೊಂದು ರೂಪುಗೊಳ್ಳುವ ಮುನ್ನ ರಾಷ್ಟ್ರೀಯ ಸಂಸ್ಕೃತಿಯೊಂದು ನಾಡಿನ ಅಂತಃಕರಣ, ಕ್ರಿಯಾಶೀಲತೆಯನ್ನು ಎಚ್ಚರಿಸುತ್ತದೆ ಎಂಬುದು. 

ಆಧುನಿಕ ಕನ್ನಡ ಕಾವ್ಯದಲ್ಲಿ ಸಮಾಜ

ಡಿ.ಆರ್.ನಾಗರಾಜ್ ಅವರ ಸಂಶೋಧನಾ ಪ್ರಬಂಧವಾದ "ಶಕ್ತಿ ಶಾರದೆಯ ಮೇಳ" ದಿಂದ ಈ ಲೇಖನವನ್ನು ಆರಿಸಿಕೊಳ್ಳಲಾಗಿದೆ. ಲೇಖನದ ಪ್ರಧಾನ ಅಂಶಗಳು ಹೀಗಿವೆ. 
  • ಕಾವ್ಯವೊಂದರಲ್ಲಿ ಕಂಡುಬರುವ ಸಮಾಜದ ಪರಿಕಲ್ಪನೆಗಳು, ಚಾರಿತ್ರಿಕ ಅನುಭವಗಳು ಆಯಾ ಸಮಾಜದ ನಿರ್ದಿಷ್ಟ ಅನುಭವದಿಂದ ನಿಯಂತ್ರಿತವಾಗಿರುತ್ತದೆ. 
  • ವಸಾಹತುಶಾಹಿ ಸನ್ನಿವೇಶದಲ್ಲಿ ಬಂದ ಹೊಸ ಸಾಹಿತ್ಯ ಚಳುವಳಿಯಲ್ಲಿ ನಾವು ಸಹಜವಾಗಿ ನಿರೀಕ್ಷೆ ಮಾಡುವುದು  ವಿನಾಶ ಮತ್ತು ನಿರ್ನಾಮ‌.
  • ವಸಾಹತುಶಾಹಿ ಆಗಮನಕ್ಕೆ ಉಂಟಾದ ಪ್ರತಿಕ್ರಿಯೆಯೇ ಕನ್ನಡ ನವೋದಯ ಪರಂಪರೆಯ ಹುಟ್ಟಿಗೆ ಕಾರಣ ಎಂದು ಹೇಳುವ ಡಿ.ಆರ್.ನಾಗರಾಜ್ ಅವರು ಸಂಸ್ಕೃತಿಗಳ ವಿವಿಧ ಭಾವನೆಗಳನ್ನು ಬಚ್ವಿಡುತ್ತಾರೆ. 
  • ಪರಕೀಯರ ಶಿಕ್ಷಣದ ಕಾರಣದಿಂದಲೇ ನಮ್ಮಲ್ಲಿ ಸ್ವಪ್ರಜ್ಞೆ ಉಂಟಾಗುತ್ತವೆ, ನಮ್ಮ ಸಂಸ್ಕೃತಿಯ ಬಗ್ಗೆ ಯೋಚಿಸುವಂತೆ ಮಾಡುತ್ತದೆ.

ಆಧುನಿಕ ಕನ್ನಡ ಕಾವ್ಯದಲ್ಲಿ ಸಮಾಜದ ಸ್ವರೂಪವನ್ನು ಕಟ್ಟಿಕೊಡುವ ಸಂದರ್ಭದಲ್ಲಿ ಡಿ.ಆರ್.ನಾಗರಾಜ್ ಅವರು 19 ನೇ ಶತಮಾನದ ಅನುಭಾವೀ ಕವಿಗಳ ಪ್ರತಿಕ್ರಿಯೆ ಮಹತ್ವದ್ದು ಎಂದು ಗುರುತಿಸುತ್ತಾರೆ. ಅವರು ಚರ್ಚಿಸುವ ಆಯಾಮಗಳಲ್ಲಿ ಈ ಅನುಭಾವಿ ಕವಿಗಳ ಪ್ರತಿಕ್ರಿಯೆಯೇ ಮಹತ್ವದ್ದಾಗಿದೆ. 

ಕನ್ನಡ ನವೋದಯದ ಪ್ರಾರಂಭ ಆದದ್ದು ಆಚಾರ್ಯ ಬಿ.ಎಂ.ಶ್ರೀ ರವರಿಂದ ಎಂಬ ವಾದವು ಹಿಂದಿನ ಪ್ರೇರಣೆಗಳನ್ನು ಅಳಿಸಿ ಹಾಕುತ್ತದೆ. ಕನ್ನಡ ನವೋದಯದ ಪ್ರಮುಖ ಬೇರುಗಳಿರುವುದು ಹತ್ತೊಂಬತ್ತನೆಯ ಶತಮಾನದ ಕತ್ತಲ ಲೋಕದಲ್ಲಿ. ಉತ್ತರ ಕರ್ನಾಟಕದ ಅನುಭವೀ ಕವಿಗಳ ಪ್ರತಿಕ್ರಿಯೆ ಇಲ್ಲಿ ಮುಖ್ಯವಾದುದು.‌ ಈ ಕ್ರಿಯೆಯ ಬಲಶಾಲಿ ಪ್ರತಿನಿಧಿ ಎಂದರೆ ಬಿ.ಎಂ.ಶ್ರೀ ಅವರು. 

ಇಂಗ್ಲೀಷ್ ಸಂಸ್ಕೃತಿಯನ್ನು ಕಂಡು ದಾಸಾನುದಾಸರಾಗಿ ಕುಗ್ಗಿಹೋಗುವ ಪ್ರವೃತ್ತಿ ಬಿ.ಎಂ.ಶ್ರೀ ಅವರಲ್ಲಿ ಇರಲಿಲ್ಲ. ರಾಷ್ಟ್ರೀಯ ಸ್ವಾಭಿಮಾನದ ಕಾರಣದಿಂದ ಉಗ್ರ ದೇಶಾಭಿಮಾನಿ ಹಠವೂ ಇವರಲ್ಲಿ ಇರಲಿಲ್ಲ. 'ಕನ್ನಡ-ಇಂಗ್ಲೀಷ್ ಸಾಮರಸ್ಯ' ಕುರಿತು ಅವರು ಹಾಡಿದ ರೀತಿ ಅವರ ನಿಲುವೇ ಆಗಿದೆ. 

ನಂತರ ರಾಷ್ಟ್ರೀಯ ಅಂಶಗಳನ್ನು ಗುರುತಿಸುವ ಕೆಲಸವನ್ನು ನಾಗರಾಜ್ ರವರು ಮಾಡಿದ್ದಾರೆ. 

ರಾಷ್ಟ್ರೀಯತೆ ಎನ್ನುವುದು ಒಂದು ಆಧುನಿಕ ಬೆಳವಣಿಗೆ. ಸಾಹಿತ್ಯದ ಮೇಲೆ ಇದರ ಪ್ರಭಾವ ವಿಶಿಷ್ಟವಾದುದು. ಈ ರಾಷ್ಟ್ರೀಯತೆಯ ಪ್ರಮುಖ ಉದ್ದೇಶವೇನೆಂದರೆ ಇಡೀ ರಾಷ್ಟ್ರವನ್ನು ಕ್ರಿಯಾಶೀಲವನ್ನಾಗಿ ಮಾಡುವುದು. ಈ ಆಶಯವು ಬಹು ವ್ಯಾಪಕವಾಗಿರುತ್ತದೆ. 

ಕನ್ನಡ ನವೋದಯದಲ್ಲಿಯೂ ರಾಷ್ಟ್ರೀಯತೆಯು ಹಲವು ಆಯಾಮ ಪಡೆದುಕೊಂಡಿದೆ. ನವೋದಯದ ಗುಣಗಳಾದ ಪ್ರಕೃತಿ ಪ್ರೇಮ, ಆಧ್ಯಾತ್ಮದ ಜೊತೆ ರಾಷ್ಟ್ರೀಯತೆ ಬೆರೆತು ಹೋಗುತ್ತದೆ. 

"ಪ್ರೇಮ" ವು ಕನ್ನಡ ನವೋದಯದವರಲ್ಲಿ‌ ಪ್ರಮುಖವಾದ ತತ್ವವಾಗಿದೆ. ಕುವೆಂಪು, ಬೇಂದ್ರೆ, ಪುತಿನ ಇವರೆಲ್ಲರೂ "ಪ್ರೇಮ" ದ ವಸ್ತುವಿನ ಸುತ್ತಲೇ ಕವನ ರಚಿಸಿದವರು. ವಿಶ್ವ ಸಮಸ್ತ ವ್ಯವಹಾರವನ್ನು ಕವಿಗಳು ಅರ್ಥೈಸುವುದು ಈ ಪ್ರೇಮದ ಪರಿಭಾಷೆಯಲ್ಲಿ ಎಂಬುದು ಲೇಖಕರ ಅಭಿಪ್ರಾಯ. 

ಜಾತಿ ಪದ್ಧತಿಯ ಬಗ್ಗೆ ಅತ್ಯಂತ ಉಗ್ರವಾಗಿ ಬಂಡೆದ್ದವರು ಕುವೆಂಪು. ಅದಕ್ಕಾಗಿ ಕುವೆಂಪು ಅವರ ಒಂದು ಕವನದ ಸಾಲನ್ನು ನೋಡೋಣ.

"ನೂರು ದೇವರನ್ನೆಲ್ಲಾ ನೂಕಾಚೆ ದೂರ

ಭಾರತಾಂಬೆಯೇ ದೇವಿ

ನಮಗಿಂದು ಪೂಜಿಸುವ ಬಾರ" 

ಪುತಿನ, ಬೇಂದ್ರೆ, ಮಾಸ್ತಿಯವರಲ್ಲಿ ಈ ಸಾಲುಗಳನ್ನು ಕಾಣಲಾಗುವುದಿಲ್ಲ. ಅವರ ಕಾವ್ಯಕ್ಕೂ ಅವರದ್ದೇ ರೊಚ್ಚಿದೆ 

ಲೇಖನದ ಉದ್ಧೃತ ಭಾಗಗಳು: 

  • ಈಗ ಕನ್ನಡ ಅಧ್ಯಯನಕ್ಕೆ ಲಭ್ಯವಿರುವ ಮಾಹಿತಿಗಳ ಪ್ರಕಾರ ಎರಡು ರೀತಿಯ ಪ್ರತಿಕ್ರಿಯೆ ಕಾಣುತ್ತವೆ. ಒಂದು ಹಳೆಯ ಮೈಸೂರು ಪ್ರಾಂತ್ಯದ ಪ್ರತಿಕ್ರಿಯೆ, ಮತ್ತೊಂದು ಪೂರ್ಣವಾಗಿ ಬೆಳಕಿಗೆ ಬಾರದ ಉತ್ತರ ಕರ್ನಾಟಕದ ಕವಿಗಳ ಪ್ರತಿಕ್ರಿಯೆ. ‌
  • ಬೇಂದ್ರೆ ಬಡತನ ಕಂಡ ಕ್ರಮಕ್ಕೂ, ಕುವೆಂಪು ಬಡತನ‌ ಕಂಡ ಕ್ರಮಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕುವೆಂಪು ಅದನ್ನು ರೋಷದಿಂದ ಅಭಿವ್ಯಕ್ತಿಸಿದರೆ, ಬೇಂದ್ರೆ ಅತ್ಯಂತ ಗಾಢವಾದ ನೋವಿನ ರೂಪದಲ್ಲಿ ಅಭಿವ್ಯಕ್ತಿಸುತ್ತಾರೆ. 
  • ರಾಷ್ಟ್ರೀಯತೆ ಎನ್ನುವುದು ಒಂದು ಆಧುನಿಕ ಬೆಳವಣಿಗೆ. ಕನ್ನಡ ನವೋದಯದ ಸಂದರ್ಭದಲ್ಲಿಯೂ ರಾಷ್ಟ್ರೀಯತೆ ಅನೇಕ ಆಯಾಮಗಳನ್ನು ಪಡೆದುಕೊಂಡಿದೆ. ನವೋದಯದ ಇತರ ಗುಣಗಳಾದ ನಿಸರ್ಗ ಪ್ರೇಮ, ಆಧ್ಯಾತ್ಮಿಕತೆ ಜೊತೆಗೆ ರಾಷ್ಟ್ರೀಯತೆ ಬೆರೆತು ಹೋಗುತ್ತದೆ. 
ಉಪಸಂಹಾರ

ಪ್ರಸ್ತುತ ಲೇಖನದಲ್ಲಿ ಡಿ.ಆರ್.ನಾಗರಾಜ್ ಅವರು ನವೋದಯ ಕನ್ನಡ ಕಾವ್ಯದ ವಿವಿಧ ಆಯಾಮಗಳನ್ನು ಚರ್ಚಿಸಿದ್ದಾರೆ. ಈ ಲೇಖನದಲ್ಲಿ ತಿಳಿಸಿರುವ ವಿಚಾರಗಳು ತುಂಬಾ ಗಹನವಾದವು. ಅವರ ಚಿಂತನಶೀಲ ಬರವಣಿಗೆ ಗ್ರಹಿಕೆಗೆ ಸುಲಭವಾದರೂ, ತಿಳಿಸಿ ಹೇಳುವುದು ಸುಲಭವಲ್ಲ ಅಂತನ್ನಿಸುತ್ತದೆ. ಆದರೂ ಲೇಖಕರು ನವೋದಯ ಕಾಲದ ಸಾಹಿತ್ಯ ಚಿಂತನೆಗೆ ವಿವಿಧ ಮಜಲುಗಳನ್ನು ಅನಾವರಣಗೊಳಿಸುತ್ತಾ ಚರ್ಚಿಸುವ ಪರಿ ವಿಶಿಷ್ಟವಾದುದು. 

(ವಿವಿಧ ಸಂಗ್ರಹದಿಂದ)

**********

ಕೆ.ಎ.ಸೌಮ್ಯ
ಮೈಸೂರು

***********
ಆಧುನಿಕ ಕನ್ನಡ ಕಾವ್ಯದಲ್ಲಿ ಸಮಾಜ / ಡಿ.ಆರ್.ನಾಗರಾಜ್ ಕುರಿತು ಟಿಪ್ಪಣಿ ಬರೆಯಿರಿ
***********
(ಎಂ.ಎ.ಕನ್ನಡ 2007, 2010) 

 




ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)