ಕೋಡಿಮಠ ಒಂದು ಸಾಂಸ್ಕೃತಿಕ ಕೇಂದ್ರ

ಪೀಠಿಕೆ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯ ಕೇದಾರೇಶ್ವರ ದೇವಸ್ಥಾನದ ಪ್ರಾಕಾರದಲ್ಲಿ ಇರುವ ಅನೇಕ ಶಿಲಾಶಾಸನಗಳಲ್ಲಿ ಇದೂ ಒಂದು. 

                 ಶಾಸನ   : ಕೋಡಿಮಠದ ಶಾಸನ
ಶಾಸನ ದೊರೆತ ಸ್ಥಳ : ಶಿವಮೊಗ್ಗ ಜಿಲ್ಲೆಯ  
                                  ಶಿಕಾರಿಪುರ 
                                 ತಾಲ್ಲೂಕಿನ ಬಳ್ಳಿಗಾವೆ
       ಶಾಸನದ ಕಾಲ  : ಕ್ರಿ ಶ 12 ನೇ ಶತಮಾನ
    ಶಾಸನದ ಎತ್ತರ   : 8 ಅಡಿ ಎತ್ತರ
                               4  ಅಡಿ 3 ಅಂಗುಲ ಅಗಲ
   ಕಂಡುಹಿಡಿದವರು  : ಬಿ. ಎಲ್. ರೈಸ್
   ಪ್ರಕಟಿಸಿದ ವರ್ಷ   : 1902

ಶಾಸನವು ಶಿವನಮನದ ಮೂಲಕ ಆರಂಭವಾಗುತ್ತದೆ. 

ನಂತರ ಶಿವನು ದೊರೆ ಬಿಜ್ಜಳನ ಆಸೆಗಳನ್ನು ಪೂರೈಸಲಿ ಎಂಬ ಆಶಯ ಪದ್ಯವಿದೆ. ಕಲಚುರಿ ದೊರೆ ಬಿಜ್ಜಳನ ಬಿರುದುಗಳನ್ನು ಕೂಡ ಶಾಸನ ತಿಳಿಸುತ್ತದೆ. 

'ಕಸಪಯ್ಯ ನಾಯಕ' ಬಿಜ್ಜಳನ ಕೈ ಕೆಳಗಿನ ಅಧಿಕಾರಿ. ಆತನನ್ನು ಬಣ್ಣಿಸುವ ಹಲವು ಪದ್ಯಗಳಿವೆ. ನಂತರ ಶಾಸನವು ಬಳ್ಳಿಗಾವೆಯ ಕೋಡಿಮಠದ ಶ್ರೇಷ್ಠತೆಯ ಬಗ್ಗೆ ತುಂಬಾ ಮನೋಹರವಾಗಿ ವರ್ಣಿಸುತ್ತದೆ. ದೊರೆ ಬಿಜ್ಜಳನು ದಕ್ಷಿಣದ ವಿಜಯ ಕೈಗೊಂಡು, ಬಳ್ಳಿಗಾವೆಯಲ್ಲಿ ಬೀಡು ಬಟ್ಟಾಗ ಎಲ್ಲಾ ಅಧಿಕಾರಿಗಳು ಒಂದುಗೂಡಿ ಬಿಜ್ಜಳನನ್ನು ಕಂಡರು. 

ಕಸಪಯ್ಯ ನಾಯಕನು ಮಠದ ಹಿರಿಮೆಯನ್ನು ದೊರೆಗೆ ತಿಳಿಸಿದನು. ನಂತರ ಅಂತಹ ಮಹಿಮಾನ್ವಿತ ಸ್ಥಳದಲ್ಲಿ ಧರ್ಮಕಾರ್ಯವೊಂದನ್ನು ಮಾಡುವಂತೆ ದೊರೆಯಲ್ಲಿ ಭಿನ್ನವಿಸಿಕೊಳ್ಳುತ್ತಾನೆ. ಅವನ‌ ಕೋರಿಕೆಗೆ ಸ್ಪಂದಿಸಿದ ಬಿಜ್ಜನು, ವಾಮಶಕ್ತಿ ಮುನಿಯ ಕಾಲು ತೊಳೆದು, ಕಿರಿಗೇರಿ ಗ್ರಾಮವನ್ನು ದಕ್ಷಿಣ ಕೇದಾರೇಶ್ವರ ದೇವಾಲಯದಲ್ಲಿನ ಪೂಜೆಗೆ, ಋಷಿಗಳ ಸೇವೆಗೆ, ದೇವಸ್ಥಾನದ ದುರಸ್ತಿ ಕಾರ್ಯ, ಅನ್ನ ಸಂತರ್ಪಣೆ ಹಾಗೂ ವಿದ್ಯಾಭ್ಯಾಸಕ್ಕೆ ನೀಡುತ್ತಾನೆ. 

ಪ್ರಸ್ತುತ ಶಾಸನವು ಕಲಚುರಿ ದೊರೆ ಬಿಜ್ಜಳನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ.  

ಕೋಡಿಮಠ- ಒಂದು ಸಾಂಸ್ಕೃತಿಕ ಕೇಂದ್ರ

ಬಳ್ಳಿಗಾವೆಯು ಕ್ರಿ.ಶ 11 ನೇ ಮತ್ತು ಕ್ರಿ.ಶ 12 ನೇ ಶತಮಾನದಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿದ ಸ್ಥಳವಾಗಿತ್ತು, ದೊಡ್ಡ ಪಟ್ಟಣವಾಗಿ ಖ್ಯಾತ ವಿದ್ಯಾ ಕೇಂದ್ರವಾಗಿ, ಹಲವು ಮಠವಿರುವ-ದೇವಾಲಯ ಇರುವ ಸ್ಥಳವಾಗಿ, ವ್ಯಾಪಾರಿ ಕೇಂದ್ರವಾಗಿ ಮೆರೆಯುತ್ತಿತ್ತು ಎಂದು ಶಾಸನಗಳಿಂದ ತಿಳಿದು ಬರುತ್ತದೆ. ಬಳ್ಳಿಗಾವೆಯು ಎಲ್ಲಾ ಧರ್ಮಗಳ ನೆಲೆಯಾಗಿದ್ದಿತು. 

ಕೋಡಿಮಠವು ಪ್ರಸಿದ್ಧ ವಿದ್ಯಾಕೇಂದ್ರವಾಗಿಯೂ ಖ್ಯಾತಿ ಪಡೆದಿತ್ತು. 

ಈ ಮಠದ ಪ್ರಾಚೀನತೆಯನ್ನು ಡಾ. ವೆಂಕಟ ಸುಬ್ಬಯ್ಯ ಅವರು ಕ್ರಿ.ಶ. 1073 ಎಂದು ನಿರ್ಣಯಿಸಿದರೆ, ಡಾ. ಚಿದಾನಂದ ಮೂರ್ತಿ ಅವರು ಕ್ರಿ.ಶ‌. 1060 ಎಂದು ಭಾವಿಸಿದ್ದಾರೆ. ಒಟ್ಟಿನಲ್ಲಿ ಹನ್ನೊಂದನೇ ಶತಮಾನದ ಉತ್ತರಾರ್ಧ ಎನ್ನಬಹುದು. 

ಇದನ್ನು ಕೇದಾರ ಶಕ್ತಿ ಸ್ಥಾಪಿಸಿದ್ದರಿಂದ ಕೇದಾರ ಮಠ ಎಂದು ಕೂಡ ಕರೆಯುತ್ತಾರೆ. 

ಈ ಮಠವು ಹೀಗಿದ್ದಿರಬೇಕು : 

  • ಪೂಜೆಗೆ ಅವಕಾಶ ಇರುವ ದೇವಾಲಯ
  • ತಪಸ್ವಿಗಳಿಗೆ ಸಾಧನಾ ನಿಲಯ
  • ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯಾಲಯ
  • ಬಡಬಗ್ಗರಿಗೆ, ಹಸಿದವರಿಗೆ ಪ್ರಸಾದ ನಿಲಯ
  • ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಅನುಕೂಲ ಇರುವ ವಿದ್ಯಾಲಯ
ಇಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದ ವಿಷಯಗಳು ಹಲವಾರು. ವೇದವೇದಾಂಗಗಳು, ವ್ಯಾಕರಣ ಗ್ರಂಥಗಳು, ಪುರಾಣಗಳು, ಸ್ಮೃತಿ, ಧರ್ಮಗ್ರಂಥಗಳು ಇತ್ಯಾದಿ. ಎಲ್ಲಾ ರೀತಿಯ ಲಲಿತ ಕಲೆ ಮತ್ತು ಪ್ರದರ್ಶಕ ಕಲೆಗಳಿಗೆ ಇಲ್ಲಿ ಹೆಚ್ಚಿನ ಪ್ರಾಶಸ್ತ್ಯವಿತ್ತು. ಹಾಗಾಗಿ ಆಗಿನ ಕಾಲದಲ್ಲಿ ಮಠ ಅಥವಾ ದೇವಾಲಯ ಎನ್ನುವುದು ಜನರ ಭೌತಿಕ, ಬೌದ್ಧಿಕ ಹಾಗೂ ಮಾನಸಿಕ ಅವಶ್ಯಕತೆಗಳನ್ನು ಪೂರೈಸಿ ಸಾಂಸ್ಕೃತಿಕ ವಿಕಾಸಕ್ಕೆ ಕಾರಣವಾಗುವ ಧರ್ಮ ಸ್ಥಳವಾಗಿತ್ತು ಎಂದು ತಿಳಿದು ಬರುತ್ತದೆ. 

ಶಿಕ್ಷಣ ಕೇಂದ್ರವಾಗಿ ಬಳ್ಳಿಗಾವೆಯು ಪರಮ ಉನ್ನತ ಸ್ಥಿತಿಯನ್ನು ತಲುಪಿತ್ತು. ಅಲ್ಲಿ ಅನೇಕ ವಿದ್ವಾಂಸರು ನೆಲೆಗೊಂಡಿದ್ದರು. ಈ ವಿದ್ವಾಂಸರನ್ನು 'ಶಿಷ್ಯರೆಂಬ ಚಾತಕ ಪಕ್ಷಿಗಳಿಗೆ ಮಳೆಗಾಲದಂತೆ ಇದ್ದರು' ಎಂದು ಶಾಸನವೊಂದು ಬಣ್ಣಿಸುತ್ತದೆ. 

ಆದರೆ ಇಲ್ಲಿನ ವಿದ್ಯಾಕೇಂದ್ರದಲ್ಲಿನ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಸಂಖ್ಯೆ ಎಷ್ಟು, ವಿದ್ವಾಂಸರು ರಚಿಸಿದ್ದಿರಬಹುದಾದ ಗ್ರಂಥಗಳು ಯಾವುದು, ವ್ಯಾಸಂಗದ ರೀತಿ-ನೀತಿಗಳು ಹೇಗೆ ಎಂಬೆಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಬೆಳಕು ಚೆಲ್ಲುವ ವಿವರಗಳು ದೊರೆಯುವುದಿಲ್ಲ. 

ಖ್ಯಾತ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರ ಪ್ರಕಾರ ದೇವಸ್ಥಾನದಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಎರಡು ಭಾಗವಾಗಿ ವಿಂಗಡಿಸಬಹುದು. 
  • ವಿದ್ಯಾರ್ಥಿ ತಪೋಧನರು
  • ವಿದ್ಯಾರ್ಥಿ ಮಾಣಿಯರು
( ಪಾಣಿನಿಯ ಪ್ರಕಾರ ಮಾಣವ ಎಂದರೆ ವಿದ್ಯಾಭ್ಯಾಸ ಆರಂಭಿಸಿರುವ ಬಾಲಕ) 

ಇವರಲ್ಲಿ ವಿದ್ಯಾರ್ಥಿ ತಪೋಧನರನ್ನು ನೈಷ್ಠಿಕ ಬ್ರಹ್ಮಚಾರಿಗಳೆಂದು ಕರೆಯುತ್ತಿದ್ದರು ಎಂದು ಕಾಣುತ್ತದೆ. ವಿದ್ಯಾರ್ಥಿ ತಪೋಧನರು ಅಥವಾ ನೈಷ್ಠಿಕ ಬ್ರಹ್ಮಚಾರಿಗಳು ಆ ದೇವಸ್ಥಾನದ ಯತಿಗಳ ಸಂಪ್ರದಾಯಕ್ಕೆ ಸೇರಿದವರು. ಅವರು ಆಜೀವಪರ್ಯಂತ ಬ್ರಹ್ಮಚಾರಿಗಳಾಗಿ ಉಳಿದು, ತಮ್ಮ ಅಧ್ಯಯನ ಮುಗಿದ ನಂತರ ಬೇರೆ ಬೇರೆ ಮಠಗಳಲ್ಲಿ ಸ್ಥಾನಾಧಿಪತಿಗಳಾಗುತ್ತಿದ್ದರು. 

ನೈಷ್ಠಿಕ ಬ್ರಹ್ಮಚಾರಿಗಳ ಏಕೈಕ ಗುರಿ ಜ್ಞಾನಾರ್ಜನೆ. ಸ್ಥಾನಾಧಿಪತಿಗಳು ನೈಷ್ಠಿಕ ಬ್ರಹ್ಮಚಾರಿಗಳಾಗದಿದ್ದರೆ, ಆ ಸ್ಥಾನದಿಂದ ಅವರನ್ನೇ ಅಟ್ಟಬೇಕು ಎಂದು ಅನೇಕ ಶಾಸನಗಳು ವಿಧಿಸುತ್ತವೆ.

ಉಪಸಂಹಾರ

ದಕ್ಷಿಣ ಕರ್ನಾಟಕದಲ್ಲಿ ದಿಗ್ವಿಜಯ ಯಾತ್ರೆ ನಡೆಸುವ ಉದ್ದೇಶದಿಂದ ಕಲಚುರಿಯ ದೊರೆ ಬಿಜ್ಜಳನು ಬಳ್ಳಿಗಾವೆಯಲ್ಲಿ ಬೀಡು ಬಿಟ್ಟಿದ್ದ. ಆಗ ಕಸಪಯ್ಯ ನಾಯಕನ‌ ಕೋರಿಕೆಯಂತೆ ಬಳ್ಳಿಗಾವೆಯ ಕೇದಾರೇಶ್ವರ ದೇವಾಲಯದಲ್ಲಿ ದೇವ ಪೂಜೆ, ಋಷಿ ಜನರ ಭೋಜನ, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮೊದಲಾದವುಗಳಿಗಾಗಿ ದೊರೆಯು ದತ್ತಿ ನೀಡಿದ. ಈ ಮೂಲಕ ಬಳ್ಳಿಗಾವೆಯು ಆ ಕಾಲದ ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು ಎಂದು ಶಾಸನವು ತಿಳಿಸುತ್ತದೆ.

(ವಿವಿಧ ಮೂಲಗಳಿಂದ)

**********

ಕೆ.ಎ.ಸೌಮ್ಯ
ಮೈಸೂರು

****************
"ಬಳ್ಳಿಗಾವೆಯ ಕೋಡಿಮಠವು ಒಂದು ಸಾಂಸ್ಕೃತಿಕ ಕೇಂದ್ರ ಎಂಬುದನ್ನು ವಿವರಿಸಿ"
ಅಥವಾ 
"ಕೋಡಿಮಠದ ಶಾಸನದ ಹಿನ್ನೆಲೆಯಲ್ಲಿ ಮಧ್ಯಕಾಲೀನ ಕರ್ನಾಟಕದ ವಿದ್ಯಾಭ್ಯಾಸ ಪದ್ಧತಿಯನ್ನು ಪರಿಚಯಿಸಿ"
******************
(ಎಂ.ಎ.ಕನ್ನಡ 2007 & 2013)


ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)