ಹೊಸ ಕವಿ, ಹೊಸ ಕಾವ್ಯ - ಪಿ. ಲಂಕೇಶ್

ಕವಿ ಪರಿಚಯ

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ‌ ಕಂಡ ಅನನ್ಯ ಲೇಖಕ ಪಿ. ಲಂಕೇಶ್. ಸಾಮಾಜಿಕ ಕಳಕಳಿಯ ಜೊತೆಗೆ ಸೃಜನಶೀಲ ಪ್ರತಿಮಯನ್ನು ಪ್ರಾಮಾಣಿಕವಾಗಿ ದುಡಿಸಿಕೊಂಡ ಅಪರೂಪದ ಸಾಹಿತಿ. ಎಡಪಂಥೀಯ ನಿಲುವಿನೊಂದಿಗೆ ತಮ್ಮ ಪ್ರಜ್ಞೆ ರೂಪಿಸಿಕೊಂಡ ಲಂಕೇಶ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿಯಾಗಿ, ಕಥೆ, ಕಾದಂಬರಿ, ನಾಟಕಕಾರರಾಗಿ, ವಿಮರ್ಶಕ, ಅನುವಾದಕರಾಗಿ, ನಟರಾಗಿ, ಸಿನೆಮಾ ನಿರ್ದೇಶಕರಾಗಿ, ಪತ್ರಕರ್ತರಾಗಿ ತಮ್ಮ ಛಾಪು ಮೂಡಿಸಿದವರು. ಕನ್ನಡ ನವ್ಯ ಸಾಹಿತ್ಯ ಕಾಲಘಟ್ಟದಲ್ಲಿ ತಮ್ಮ ಸೃಜನಶೀಲ ಬರಹಗಳ ಮೂಲಕ ಆರೋಗ್ಯಕರ ಸಂವಾದವನ್ನು ಹುಟ್ಟು ಹಾಕಿದ ಮಹತ್ವದ ಚಿಂತಕ.‌

ಹೆಸರು  :           ಪಿ. ಲಂಕೇಶ್

DOB   :            1935

ಸ್ಥಳ     :             ಶಿವಮೊಗ್ಗ

ವಿದ್ಯಾಭ್ಯಾಸ :     ಇಂಗ್ಲಿಷ್ ಎಂ.ಎ

ನಿರ್ದೇಶನ:        ಎಲ್ಲಿಂದಲೋ ಬಂದವರು, ಪಲ್ಲವಿ, 

                         ಖಂಡವಿದೆಕೋ ಮಾಂಸವಿದೆಕೋ

ಪತ್ರಿಕೆ:               ಲಂಕೇಶ್ ಪತ್ರಿಕೆ

ಕವನ ಸಂಕಲನ : ಇಂಚರ, ತಲೆಮಾರು

ಆತ್ಮಕಥೆ      :       ಹುಳಿ ಮಾವಿನಮರ

ಪ್ರಶಸ್ತಿಗಳು  :       ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 

                           ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕಾದಂಬರಿ :        ಅಕ್ಕ, ಮುಸ್ಸಂಜೆಯ ಕಥಾ ಪ್ರಸಂಗ


ಪೀಠಿಕೆ

ಯಾವುದೇ ಭಾಷೆಯ ಸಾಹಿತ್ಯವಾಗಲೀ ಸಂಕ್ರಮಣಾವಸ್ಥೆಗೆ ಒಳಪಡುತ್ತಲೇ ಹಲವು ಬಗೆಯ ಸ್ಥರಗಳಲ್ಲಿ ಬೆಳೆಯುವುದು ಆ ಭಾಷೆಯ ಜೀವಂತಿಕೆಯ ಸಂಕೇತವಾಗಿದೆ. ಪಂಪನ ಆದಿಕಾವ್ಯದಿಂದ ಹಿಡಿದು ಇವತ್ತಿನವರೆಗೂ ಕನ್ನಡ ಕಾವ್ಯ ಹಲವು ಮಗ್ಗುಲುಗಳನ್ನು ಕಾಣುತ್ತಾ, ಬದಲಾಗುತ್ತಾ ಬೆಳೆಯುತ್ತಾ ಬಂದಿರುವುದನ್ನು ಕಾಣಬಹುದು. ಹಾಗೆಯೇ ಅದರ ಜೊತೆಯಲ್ಲಿ ಕವಿಯ ಸಹ ಹಂತಹಂತವಾಗಿ ಬೆಳೆಯುತ್ತಿರುತ್ತಾನೆ. ಯಾವುದೇ ಕಾವ್ಯ ಬೆಳೆಯುವಂತೆ, ಬದಲಾಗುವಂತೆ ಕವಿಯೂ ಬೆಳೆಯುತ್ತಾ ಬದಲಾಗುತ್ತಿರುತ್ತಾನೆ. ಕನ್ನಡ ಕಾವ್ಯ ಪರಂಪರೆಯನ್ನು ಗಮನಿಸಿದಾಗ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ. 

ಪಂಪನ‌ ಕಾಲದ ಹಳಗನ್ನಡ ಕಾವ್ಯ ಮುಂದೆ ಹಲವು ಪಲ್ಲಟಗಳಿಗೆ ಒಳಗೊಳ್ಳುತ್ತಲೇ ವಚನಗಳಾಗಿ, ದಾಸರ ಪದಗಳಾಗಿ ಸರ್ವಜ್ಞನ ತ್ರಿಪದಿಗಳಾಗಿ ಅನಂತರದಲ್ಲಿ ನವೋದಯ, ನವ್ಯ, ದಲಿತ, ಬಂಡಾಯ ಕಾವ್ಯವಾಗಿ ವಿಸ್ತ್ರತವಾಗಿ ಬೆಳೆಯುತ್ತಿದೆ. ಹಾಗೆಯೇ ಬಹುಮುಖ ಪ್ರತಿಭೆಯುಳ್ಳ ಕವಿಗಳು ತಮ್ಮ ಹೊಸ ಪರಿಕಲ್ಪನೆಯ ನೆಲೆಯಲ್ಲಿ ಕಾವ್ಯಾಭಿವ್ಯಕ್ತಿಯನ್ನು ನೀಡುತ್ತಾ ಕನ್ನಡ ಕಾವ್ಯವನ್ನು ನವೋನ್ಮೇಷಶಾಲಿಯನ್ನಾಗಿ ರೂಪಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಎಂ.ಗೋವಿಂದ ಪೈ, ಕುವೆಂಪು, ಪುತಿನ, ದ.ರಾ.ಬೇಂದ್ರೆ, ಅಡಿಗರು, ಕೆ.ಎಸ್.ನರಸಿಂಹ ಸ್ವಾಮಿ, ಚನ್ನವೀರ ಕಣವಿ, ಬಿ.ಎಂ.ಶ್ರೀ, ಜಿ.ಪಿ.ರಾಜರತ್ನಂ, ನಿಸಾರ್ ಅಹಮದ್ ಪ್ರಮುಖರು. 

ಕನ್ನಡ ಕಾವ್ಯ ಪರಂಪರೆಯ ಸಂಚಲನೆಯನ್ನು ಸೂಲ್ಷ್ಮವಾಗಿ ಗ್ರಹಿಸುತ್ತಾ, ಅದಕ್ಕೆ ಪ್ರತಿಕ್ರಿಯಿಸುತ್ತಾ ಬೆಳೆದ ಕವಿ ಪಿ.ಲಂಕೇಶ್. ಬೇರೆ ಬೇರೆ ಸಮುದಾಯದಿಂದ, ವಿಭಿನ್ನ ಪ್ರಾದೇಶಿಕ ಹಿನ್ನೆಲೆಯಿಂದ ಬಂದ ಕವಿಗಳು ರಚಿಸಿದ ಕೃತಿಗಳ ಸಾಂಸ್ಕೃತಿಕ- ಸಾಹಿತ್ಯಿಕ ಮೌಲ್ಯಗಳನ್ನು ಲಂಕೇಶರು ವಿಮರ್ಶೆಗೊಳಪಡಿಸಿದ್ದಾರೆ. ಕನ್ನಡ ಕಾವ್ಯ ಪರಂಪರೆಯು ಹೊಸತನವನ್ನು ಮೈಗೂಡಿಸಿಕೊಳ್ಳುತ್ತಾ ಕವಿಯಿಂದ ಕವಿಗೆ ಹೇಗೆ ವಿಕಸನಗೊಂಡಿದೆ ಎಂಬುದನ್ನು  ಲಂಕೇಶರು ವಿವರಿಸಿದ್ದಾರೆ. ನವ್ಯಕಾಲದ ಅವಶ್ಯಕತೆ ಮತ್ತು ಮಹತ್ವದ ಕುರಿತಾಗಿ ಚರ್ಚಿಸಿದ್ದಾರೆ. ಒಟ್ಟಾರೆಯಾಗಿ ಈ ಲೇಖನದಲ್ಲಿ ಲಂಕೇಶರು ಐವತ್ತರ ದಶಕದಿಂದೀಚೆಗೆ ಕನ್ನಡ ಕಾವ್ಯ ನಡೆದು ಬಂದ ದಾರಿಯನ್ನು ವಿಮರ್ಶಾತ್ಮಕವಾಗಿ ಪರಿಚಯಿಸಿದ್ದಾರೆ. 

ರೆಯನ್ನು ಹೊಸಕಾಲದ ಬದುಕಿನೊಟ್ಟಿಗೆ ಗ್ರಹಿಸುವ ಅವಶ್ಯಕತೆ ಇದೆ‌. ಕವಿ ಕಾವ್ಯ ಎರಡೂ ಬದುಕಿನೊಂದಿಗೆ ಸಂಘರ್ಷಕ್ಕಿಳಿಯುತ್ತಲೇ ತನ್ನ ಅನುಭವ ಲೋಕದ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ‌. ಅಂದರೆ ಕವಿ ಮತ್ತು ಕಾವ್ಯಗಳೆರೆಡೂ ಬದುಕು ಮತ್ತು ಸಮಾಜದೊಂದಿಗೆ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುತ್ತದೆ. ಇದು ಹೊಸ ಕಾವ್ಯದ ಹುಟ್ಟು. ವ್ಯಕ್ತಿತ್ವ, ಆಲೋಚನೆಗಳನ್ನು ಹೇಳುತ್ತಲೇ ಆ ಕಾಲಘಟ್ಟದ ಮನೋಧರ್ಮ ಮತ್ತು ಸಾಂಸ್ಕೃತಿಕ ಸಂವೇದನೆಯನ್ನು ಪರಿಚಯಿಸುತ್ತದ. ಹೊಸ ಕವಿ- ಹೊಸ ಕಾವ್ಯಗಳು ಪರಂಪರೆಯ ಕ್ರಿಯಾಶೀಲ ಮತ್ತು ಚಲನಶೀಲ ಮೌಲ್ಯಗಳ ಅಗತ್ಯತೆಯನ್ನು ಹೇಳುತ್ತಾ ಹೊಸ ಯುಗಧರ್ಮದ ಆಲೋಚನಾ ಲಹರಿಯೆಡೆ ಬೆಳಕು ಚೆಲ್ಲುತ್ತದೆ. 

ಲಂಕೇಶರು ತಮ್ಮ ಲೇಖನದಲ್ಲಿ 1950 ರಿಂದ 1970 ವರೆಗೆ ಪ್ರಕಟಗೊಂಡಿರುವ ಹಲವು ಪ್ರಮುಖ ಕವಿತೆಗಳನ್ನು ವಿಶ್ಲೇಷಣೆಗೆ ‌ಬಳಸಿಕೊಂಡಿದ್ದಾರೆ. ಆ ಕಾವ್ಯಗಳಲ್ಲಿನ ಪ್ರತಿಭಟನೆಯ ಸ್ವರೂಪ, ಜನಸಮುದಾಯದ ಮುಖ್ಯ ಧೋರಣೆ, ಸೂಕ್ಷ್ಮ ಮನಸ್ಥಿತಿಗಳನ್ನು ಚರ್ಚಿಸಿದ್ದಾರೆ. ಕವಿಗಳು ತಮ್ಮ ಪರಿಸರದೊಂದಿಗೆ ಇರಿಸಿಕೊಂಡಿರುವ ಸಂಬಂಧ ಅವರ ಆಸಕ್ತಿ, ವೈಶಿಷ್ಟ್ಯಗಳನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. 

"ನವ್ಯ ಸಾಹಿತ್ಯ" ಎಂದರೆ ಕ್ಲಿಷ್ಟಕರವಾದದ್ದು, ಸಿನಿಕತನದಿಂದ ಕೂಡಿದ್ದು, ಲೈಂಗಿಕವಾದದ್ದು ಎಂಬ ಕೆಲವು ವಿಮರ್ಶಕರ ತಪ್ಪು ಗ್ರಹಿಕೆಗೆ ಇಲ್ಲಿ‌ ಉತ್ತರ ನೀಡಿದ್ದಾರೆ. 

ರೇಡಿಯೋ, ದೂರದರ್ಶನ ಹಾಗೂ ಸಿನೆಮಾ ಮಾಧ್ಯಮಗಳು ಕಾವ್ಯ ಪ್ರೇಮಿಗಳನ್ನು ತಮ್ಮತ್ತ ಸೆಳೆದುಕೊಂಡಿರುವುದರಿಂದ, ಕನ್ನಡ ಸಾಹಿತ್ಯವು ಓದುಗರ ಬಳಗವನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳುತ್ತಾರೆ. ಆದರೆ ಕಾದಂಬರಿ ಹಾಗೂ ನಾಟಕ ಪ್ರಕಾರಗಳ ಜನಪ್ರಿಯತೆಯ ನಡುವೆಯೂ ಕಾವ್ಯ ತನ್ನಲ್ಲಿನ ಸ್ನೇಹತೆಯ ಗುಣದಿಂದ, ಲಯ, ಸಂಗೀತ, ವಾಚಾನಾಭಿರುಚಿಗಳಿಂದ ಕಾವ್ಯಾಸಕ್ತರನ್ನು ತನ್ನತ್ತ ಆಕರ್ಷಿಸಿದೆ ಎಂದವರು ಹೇಳುತ್ತಾರೆ.‌

ಈ ಹಿಂದೆ ಕಾವ್ಯವಾಚನ ಧಾರ್ಮಿಕ ವಿಧಿಯಂತೆ ಬಹುತೇಕ ಸಾಹಿತ್ಯಾಭಿಮಾನಿಗಳನ್ನು ಹಿಡಿದಿಡಬಲ್ಲಷ್ಟು ಶಕ್ತವಾಗಿತ್ತು. ಇದಕ್ಕೆ ಪ್ರಮುಖ ಕಾರಣವೆಂದರೆ ಓದುಗರ ಮತ್ತು ಕವಿಯ ನಡುವಿನ ಪರಸ್ಪರ ನಂಬಿಕೆ. ಈ ನಿಟ್ಟಿನಲ್ಲಿಯೇ ಬಸವಣ್ಣ ಮುಂತಾದ ವಚನಕಾರರು ಯಶಸ್ವಿಯಾಗಿರುವುದನ್ನು ಲೇಖಕರು ಖಚಿತಪಡಿಸುತ್ತಾರೆ. ಯಾವುದೇ ಸಾಹಿತ್ತವಾಗಿ ಸಮುದಾಯದ ಪ್ರಜ್ಞೆಯ ಹಿನ್ನೆಲೆಯಲ್ಲಿ ಒಡಮೂಡಿ ಬಂದಾಗ ಮಾತ್ರ ಹೆಚ್ಚು ಕಾಲ ನೆಲೆ ನಿಲ್ಲಲು ಸಾಧ್ಯ. 

ಹಳೆಯ ಕಾಲದಲ್ಲಿದ್ದ ಕವಿ ಮತ್ತು ಓದುಗನ‌ನಡುವಿನ ಪರಸ್ಪರ ನಂಬಿಕೆಯ ಸ್ವರೂಪದ ಸಂಬಂಧಗಳು ಕಾಲಕಾಲಕ್ಕೆ ಬದಲಾಗುತ್ತಿರುವುದನ್ನು ಲೇಖಕರು ಗುರುತಿಸುತ್ತಾರೆ. ಒಂದು ಸಾಹಿತ್ಯಿಕ ಪಂಥದಿಂದ ಮತ್ತೊಂದು ಸಾಹಿತ್ಯಿಕ ಪಂಥಕ್ಕೆ ಪಲ್ಲಟಗೊಳ್ಳುವ ಕವಿಯ ಮನೋಧರ್ಮ‌ ಹೇಗೆ ತನ್ನ ಧೋರಣೆ ಬದಲಿಸಿಕೊಳ್ಳುತ್ತದೆ ಎಂಬುದಕ್ಕೆ ಶರ್ಮರ ಕವಿತೆಯ ಹಿನ್ನೆಲೆಯಲ್ಲಿ ಚರ್ಚಿಸಿದ್ದಾರೆ. ಹೊಸ ಕಾವ್ಯ ಧರ್ಮಕ್ಕೆ ಪಲ್ಲಟಗೊಳ್ಳುವ ಕವಿ ಆದರ್ಶತೆಯನ್ನು ಬಿಟ್ಟುಕೊಡದೇ, ಸಮಾಜದ ಅನ್ಯಾಯ- ಶೋಷಣೆಗಳ ವಿರುದ್ಧ ‌ಬಂಡೇಳುತ್ತಾನೆ.‌

ಜೊತೆಯಲ್ಲಿಯೇ ಸೋಷಿಯಲಿಸ್ಟ್ ಸಮಾಜವೊಂದನ್ನು ಸಂಸ್ಥಾಪಿಸುವ ಕುರಿತು ಚಿಂತನೆ ನಡೆಸುತ್ತಿರುತ್ತಾನೆ. ಶರ್ಮರು ತಮ್ಮ ಕವಿತೆಗಳಲ್ಲಿ ಹೊಸದರ ಸೂಚನೆಯನ್ನು ಕೊಡುತ್ತಲೇ, ಹಳೆಯದರ ನೆರಳಿನಲ್ಲಿ ಸಾಗುತ್ತಿರುತ್ತಾರೆ ಎಂದು ಲಂಕೇಶರು ಗುರುತಿಸಿದ್ದಾರೆ. ಅಂದರೆ ಪಲ್ಲಟಕ್ಕೆ ಒಳಗಾದ ಕವಿಗಳೂ ಹಳೆಯ ಮೌಲ್ಯಗಳಿಂದ ಸಂಪೂರ್ಣವಾಗಿ ಕಳಚಿಕೊಳ್ಳದೇ ಹೊಸ ಮೌಲ್ಯಗಳನ್ನು ಬಿಟ್ಟುಕೊಡದೇ, ಕೆಲವು ದ್ವಂದ್ವಗಳೊಡನೆ ಹೋರಾಡುತ್ತಲೇ ಇರುತ್ತಾರೆ ಎಂದು ಇದು ತಿಳಿಸುತ್ತದೆ.

ಭಾವನಾತ್ಮಕತೆಗಿಂತಾ ವಾಸ್ತವಿಕತೆಗೆ ಹೆಚ್ಚು ಒತ್ತು ಕೊಡುವ ಲಂಕೇಶರು, ಹೊಸ ಜನಾಂಗದ ಮತ್ತು ಯುವಪೀಳಿಗೆಯ ಆಲೋಚನೆ, ತುಮುಲಗಳು, ಅನಿಸಿಕೆಗಳ ಬಗೆಗೆ ಸದಾ ಆಸಕ್ತಿಯುಳ್ಳವರು. ಆ ಹಿನ್ನೆಲೆಯಲ್ಲಿ ಒಟ್ಟು ಸಮಾಜದ ಆಗುಹೋಗುಗಳನ್ನು ಬದಲಾಗುವ ವ್ಯವಸ್ಥೆಯ ಪ್ರವೃತ್ತಿಯನ್ನು ಹುಡುಕುವವರು ಈ ಬಗೆಯ ಅನ್ವೇಷಣಾ ಮನಸ್ಥಿತಿಯಲ್ಲಿಯೇ  ಹೊಸ ಕಾವ್ಯ- ಹೊಸ ಕವಿ ಯನ್ನು ನೋಡುವ ಮನೋಭಾವವನ್ನು ಈ ಬರಹದಲ್ಲಿ ಕಾಣಬಹುದು. 

ಲೇಖನದ ಉದ್ಧೃತ ಭಾಗಗಳು : 

  • ಒಂದು ತಲೆಮಾರಿನ ಕವನಗಳ ಸಂಗ್ರಹವೊಂದರಲ್ಲಿ ವಿಶಿಷ್ಟ ರೀತಿಯಲ್ಲಿ ಬಂದೊಡನೆ ಅಲ್ಲಿನ ವಿವಿಧ ಬಗೆಯ ಜೀವಂತಿಕೆಯ ಕವನಗಳು‌ ಒಂದಾದ ಮೇಲೆ ಒಂದರಂತೆ ಕಾಣಿಸಿಕೊಳ್ಳುತ್ತವೆ. ಈ ಅರ್ಥದಲ್ಲಿ‌ ಕವನಗಳ ಮಂಡನೆಯೇ ಒಂದು ಬಗೆಯ ವಿಮರ್ಶೆ.
  • ಜೀವಂತ ಕಾವ್ಯವಿಲ್ಲದೇ ಜೀವಂತ ಜನಾಂಗ ಇಲ್ಲವೆಂಬುದು ನನ್ನ ಅನಿಸಿಕೆ.
  • ಕವಿ ತಾನು ಕಂಡದ್ದನ್ನು ನಮಗೆ ವಿವರಿಸುವಾಗ ಹೇಳುವುದಕ್ಕೆ ತಕ್ಕ ನುಡಿಗಟ್ಟನ್ನು ರೂಪಿಸಿಕೊಳ್ಳುತ್ತಾನೆ. ಬಸವಣ್ಣನವರಲ್ಲಿ ಇದಕ್ಕೆ ಉತ್ತಮ ಉದಾಹರಣೆ ದೊರೆಯುತ್ತದೆ.‌
  • ರೊಮ್ಯಾಂಟಿಕ್ ಕವಿಗಳು ಅದ್ವೈತಿಗಳು. ಮನುಷ್ಯನು ತನ್ನ ದಿವ್ಯ ಅನುಭೂತಿಯಿಂದ ಮನುಷ್ಯತ್ವವನ್ನು ನೀಗಿ ಬ್ರಹ್ಮನೊಂದಿಗೆ ಐಕ್ಯನಾಗುವುದು ಎಂಬುದು ಅವರ ನಂಬಿಕೆ. ಆದರೆ "ಎಲಿಯಟ್ಟನ" ದೃಷ್ಟಿಯಲ್ಲಿ ಮಾನವನು‌ ಪಾಪಿ. ಸೌಂದರ್ಯವನ್ನು ಕಾಣಲು ದಿವಯಾನುಭೂತಿಯ ಜೊತೆ ತಪಸ್ಸು ಮತ್ತು ಪರಿಶುದ್ಧ ಜೀವನವೂ ಮುಖ್ಯ. ರೊಮ್ಯಾಂಟಿಕ್ ಕವಿಗಳು ಹೆಚ್ಚಾಗಿ ಸುಂದರ, ದಿವ್ಯ ದೃಶ್ಯಗಳನ್ನು ವರ್ಣಿಸದರೆ, ಎಲಿಯಟ್ ಅದರ ಕೆಳಗಿರುವ ಅತೃಪ್ತಿ, ನಿರಾಶೆ, ಭಯ, ಪಶ್ಚಾತ್ತಾಪ ಮುಂತಾದವುಗಳನ್ನು ವರ್ಣಿಸುತ್ತಾನೆ.
  • ಅಡಿಗರಿಗೆ ಆದರ್ಶ ಕಷ್ಟವಾದಾಗಲೂ ಮಾತು ಸೋಲುವುದಿಲ್ಲ. ತಿರುಮಲೇಶರಿಗೆ ಸೋತ ಸ್ಥಿತಿಯೇ ಕವನದ ಹಂದರವಾಗುತ್ತದೆ. 
ಉಪಸಂಹಾರ

ಪ್ರಸ್ತುತ ಲೇಖನದಲ್ಲಿ ಲಂಕೇಶರು 1950- 1970 ರ ಒಳಗೆ ಪ್ರಕಟಗೊಂಡಿರುವ ಕಾವ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಕಾವ್ಯವು ಕನ್ನಡ ಕಾವ್ಯ ಪರಂಪರೆಯಲ್ಲಿ ಹೇಗೆ ಹೊಸ ಬದಲಾವಣೆ ಉಂಟು ಮಾಡಿತು ಎಂದು ಚರ್ಚಿಸಿದ್ದಾರೆ. ನವ್ಯ ಕಾವ್ಯವನ್ನು ಸಮರ್ಥಿಸಿದ್ದಾರೆ. ಜೊತೆಗೆ ನವ್ಯಕಾವ್ಯವನ್ನು ವಿರೋಧಿಸುವವರಿಗೆ ಸೂಕ್ತ ಉತ್ತರ ನೀಡಿದ್ದಾರೆ. 

(ವಿವಿಧ ಮೂಲಗಳಿಂದ)

*******

ಕೆ.ಎ.ಸೌಮ್ಯ
ಮೈಸೂರು

********
ಹೊಸ ಕವಿ, ಹೊಸ ಕಾವ್ಯ ಕುರಿತ ಲಂಕೇಶ್ ಅವರ ವಿಮರ್ಶೆಯನ್ನು ಪರಿಶೀಲಿಸಿ
*********
(ಎಂ.ಎ.ಕನ್ನಡ 2007, 2013, 2008)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)