ದೇಕಬ್ಬೆಯ ಶಾಸನದ ಹಿನ್ನೆಲೆಯಲ್ಲಿ ಸತಿ ಪದ್ಧತಿಯ ಪರಿಚಯ

ಪೀಠಿಕೆ

ಪ್ರಸ್ತುತ ಶಾಸನದ ಕೇಂದ್ರ ವ್ಯಕ್ತಿಯಾದ ದೇಕಬ್ಬೆ ರವಿಗ ಮತ್ತು ಪೊನ್ನಕ್ಕರ ಮಗಳು. ಆಕೆ ವಿವಾಹವಾದುದು ನವಲೆನಾಡಿನ ಪ್ರಭುವಾದ ಏಚನನ್ನು. ಏಚ ತನ್ನ ಪತ್ನಿಯೊಡನೆ ಸುಖವಾಗಿ ಬಾಳುತ್ತಿದ್ದ. ಆತ ಒಬ್ಬ ಜಟ್ಟಿ, ಕುಸ್ತಿ ಪಟುವಾಗಿದ್ದ. ಯಾವುದೋ ಒಂದು ಸ್ಪರ್ಧೆಯಲ್ಲೋ ಅಥವಾ ಹೋರಾಟದಲ್ಲಿಯೋ ತನ್ನ ಎದುರಾಳಿಯನ್ನು ಏಚ ಇರಿದು ಕೊಂದುಬಿಟ್ಟ. ಅದಕ್ಕಾಗಿ ಆತನಿಗೆ ಮರಣದಂಡನೆ ಶಿಕ್ಷೆಯಾಯ್ತು. ಆತ ಮೃತನಾದ. 

ದೇಕಬ್ಬೆಗೆ ಗಂಡನ ಸಾವಿನ ಸುದ್ದಿ ತಿಳಿದೊಡನೆ ಆಕೆ ಇಹಲೋಕವನ್ನು ತ್ಯಜಿಸಲು ನಿರ್ಧರಿಸಿದಳು. 

ಚಿತೆಯನ್ನು ಸಿದ್ಧಪಡಿಸಲಾಯ್ತು. 

ದೇಕಬ್ಬೆಯ ತಂದೆ, ತಾಯಿ, ಬಂಧು, ಬಳಗ, ಆಪ್ತೇಷ್ಟರು ಎಲ್ಲರೂ ಸೇರಿ ಆಕೆ ತನ್ನ ಸಂಕಲ್ಪ ಕೈ ಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರು. ಕಾಲು ಹಿಡಿದು ಕೇಳಿಕೊಂಡರು.‌ ದೇಕಬ್ಬೆ ವಿಚಲಿತಳಾಗಲಿಲ್ಲ. ಕೊಟ್ಟ ಮನೆಗೂ ಸೇರಿದ ಮನೆಗೂ ಶೋಭೆ ತರದ ಕೆಲಸ ತಾನು ಮಾಡುವುದಿಲ್ಲ ಎಂದು ದೇಕಬ್ಬೆ ಹೇಳಿಬಿಟ್ಟಳು.

ನಂತರ ಜನರಿಗೆ ತನ್ನಲ್ಲಿರುವ ಬಟ್ಟೆ, ಬರೆ, ಆಭರಣ, ಹಣ ಎಲ್ಲವನ್ನೂ ಜನರಿಗೆ ಹಂಚಿ, ಬರಿಗೈಯಲ್ಲಿ ದೇವರಿಗೆ ನಮಿಸಿ, ಉರಿಯುತ್ತಿದ್ದ ಚಿತೆ ಹೊಕ್ಕಳು ದೇಕಬ್ಬೆ. ನಂತರ ಸತಿಯಾದಳು.

ಈ ಶಾಸನದಲ್ಲಿ ದೇಕಬ್ಬೆಯ ಗುಣ ಪ್ರಶಂಸೆ ಮಾಡಲಾಗಿದೆ. ತನ್ನ ಮಗಳ ಸ್ಮಾರಕವಾಗಿ ಶಾಸನ ಸಹಿತವಾದ ಶಿಲಾಸ್ತಂಭವನ್ನು ಮಾಡಿಸಿದ್ದು ಆಕೆಯ ತಂದೆ ರವಿಗ. 

ಪತಿಯ ಶವದ ಜೊತೆಯಲ್ಲಿಯೇ ಚಿತೆಯೇರಿ ಮರಣ ಹೊಂದುವುದು ಸಹಗಮನ.

ಆ ದೃಷ್ಟಿಯಿಂದ ದೇಕಬ್ಬೆಯ ಮರಣ ಸಹಗಮನವಲ್ಲ, ಅನುಗಮನ.

ಅನುಗಮನ ಎಂದರೆ ಗಂಡನು ದೂರದಲ್ಲಿ ಮಡಿದು ಹೋದ ನಂತರ ಅದನ್ನು ತಿಳಿದ ಅವನ‌ ಪತ್ನಿ, ಅವನ‌ ಯಾವುದಾದರೂ ವಸ್ತುವಿನೊಡನೆ, ಒಂದು ವೇಳೆ ಅದೂ ದೊರಕದಿದ್ದರೆ ತಾನೊಬ್ಬಳೇ ಅಗ್ನಿ ಅಥವಾ ಸಮಾಧಿ ಪ್ರವೇಶ ಮಾಡುವ ವಿಧಾನವಾಗಿದೆ. 

ಕೊಟ್ಟ ಮನೆ ಮತ್ತು ಸೇರಿದ ಮನೆಗಳ ಘನತೆ ಗೌರವ ಕಾಪಾಡುವುದು ಆದರ್ಶ ಸ್ತ್ರೀಯರ ಕರ್ತವ್ಯವಾಗಿತ್ತು ಎಂದು ದೇಕಬ್ಬೆಯ ಮಾತುಗಳಿಂದ ತೋರುತ್ತದೆ. 

ದೇಕಬ್ಬೆ ಮೃತಳಾದುದು ತಂದೆಯ ಊರಿನಲ್ಲಲ್ಲ. ಬದಲಿಗೆ ತನ್ನ ಪತಿಯ ಊರಾದ ನವಲೆನಾಡಿನಲ್ಲಿ. ಆದರೆ ಆಕೆಯ ಶಾಸನ ಇರುವುದು ಬೆಳತೂರಿನಲ್ಲಿ. 

ಕನ್ನಡದಲ್ಲಿ ಇಷ್ಟು ವಿಸ್ತಾರವಾಗಿ ಸಹಗಮನವನ್ನು ವರ್ಣಿಸಿರುವ ಶಾಸನ ಮತ್ತೊಂದಿಲ್ಲ. ಹಾಗಾಗಿ ಕನ್ನಡ ನಾಡಿನ ಮಹತ್ವದ ಶಾಸನಗಳ ಸಾಲಿನಲ್ಲಿ ಇದು ಸೇರುತ್ತದೆ.

ದೇಕಬ್ಬೆಯ ಶಾಸನದ ಹಿನ್ನೆಲೆಯಲ್ಲಿ ಸತೀ ಪದ್ಧತಿ :

ಶಾಸನಗಳಲ್ಲಿ ಹಲವಾರು ಬಗೆಗಳಿವೆ.‌ ಅದರಲ್ಲಿ ಆತ್ಮಬಲಿಯ ಪ್ರಕಾರವೂ ಒಂದು. ಬೇರೆ ಬೇರೆ ಕಾರಣಗಳಿಗಾಗಿ ದೇಹತ್ಯಾಗ ಮಾಡುತ್ತಿದ್ದ ಹಲವು ಉದಾಹರಣೆಗಳನ್ನು ಕಾಣಬಹುದು. ಅವರಿಗಾಗಿ ಹಾಕಿಸುತ್ತಿದ್ದ ಶಾಸನಗಳು "ಸ್ಮಾರಕ ಶಾಸನ" ಎಂದು ಕರೆಯಲ್ಪಡುತ್ತದೆ.

ವೀರರ ಪತ್ನಿಯರು ಪತಿಯೊಡನೆ ಸಹಗಮನ‌ ಹೊಂದಿದರೆ ಅದನ್ನು "ಸತೀ ಪದ್ಧತಿ" ಎನ್ನುತ್ತಿದ್ದರು. ಅವರಿಗಾಗಿ ಹಾಕಿಸುತ್ತಿದ್ದ ಶಾಸನಗಳು "ಮಹಾಸತಿಕಲ್ಲು" ಅಥವಾ "ಮಾಸ್ತಿಕಲ್ಲು".

ದೇಕಬ್ಬೆಯ ಶಾಸನವೂ ಒಂದು ಮಾಸ್ತಿಕಲ್ಲು.

ಡಾ. ಚಿದಾನಂದ ಮೂರ್ತಿ ಅವರು " ಸಹಗಮನ" ಪದ್ಧತಿಯ ಬೇರುಗಳನ್ನು ಹುಡುಕಿಕೊಂಡು ಹೋಗಿದ್ದಾರೆ. ಕರ್ನಾಟಕದಲ್ಲಿ ಸಹಗಮನದ ಅತ್ಯಂತ ಪ್ರಾಚೀನ ಉಲ್ಲೇಖ ಸಿಗುವುದು ಕ್ರಿ.ಶ.5ರ ಸೊರಬ ತಾಲ್ಲೂಕಿನ ಶಾಸನ. ಕದಂಬ ವಂಶದ ರಾಣಿಯೊಬ್ಬಳು, ಪತಿಯೊಡನೆ ಮುಕ್ತಳಾದಳು ಎಂದು ಈ ಶಾಸನ ತಿಳಿಸುತ್ತದೆ. 

"ಸತಿ" ಪದದ ಅರ್ಥ : 

ಡಾ. ಬಿ.ಎಸ್.ಶೇಠೆ ಅವರ ಪ್ರಕಾರ 'ಸತಿ' ಎಂಬ ಪದ ವಿಶಾಲಾರ್ಥದಲ್ಲಿ ಸ್ತ್ರೀ ಎಂದು ಸೂಚಿಸುವ ಪದವಾಗಿದ್ದರೂ, ಮಿತವಾದ ಅರ್ಥದಲ್ಲಿ ಅದು ಗಂಡನ ಮರಣದ ನಂತರ, ತಕ್ಷಣ ನಿಧನ ಹೊಂದುವ ಪತ್ನಿಯನ್ನು ಸೂಚಿಸುವ ಪದವಾಗಿದೆ. 

ಸತಿ :  ವಿಶಾಲಾರ್ಥ - ಸ್ತ್ರೀ

ಸತಿ : ಮಿತಾರ್ಥ - ಗಂಡನ ಮರಣದ ತಕ್ಷಣ ನಿಧನ                              ಹೊಂದುವ ಪತ್ನಿ

ಗಂಡನ ಸಾವಿನ ನಂತರ ತಕ್ಷಣವೇ ಹೆಂಡತಿ ನಿಧನ‌ಹೊಂದುವ ಪದ್ಧತಿ ಜಗತ್ತಿನ ವಿವಿಧ ಭಾಗಗಳಲ್ಲಿ ಬೆಳೆದು ಬಂದುದಾಗಿದೆ. ಭಾರತದಲ್ಲಿಯೂ ಈ ಆಚರಣೆಯಿತ್ತು. ಹಾಗಾಗಿ ಕರ್ನಾಟಕದಲ್ಲಿಯೂ ಇದ್ದಿತ್ತು. ಈ ಪದ್ಧತಿ "ಮಹಾಭಾರತದ" ಕಾಲದಷ್ಟು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪಾಂಡುರಾಜನು ಮೃತನಾದಾಗ ಆತನ ಎರಡನೇ ಪತ್ನಿ ಮಾದ್ರಿ ಗಂಡನ ಚಿತೆಯೇರಿ ಸಹಗಮನ ಮಾಡಿದ ಸಂಗತಿ ಎಲ್ಲರಿಗೂ ತಿಳಿದಿದೆ. ರಾಜಾರಾಮ್ ಮೋಹನ್ ರಾಯ್ ರಂತಹ ಸಮಾಜ ಸುಧಾರಕರಿಂದ "ಸತೀ ಪದ್ಧತಿ"ಯು ನಿಂತಿದೆ ಎಂದು ಹೇಳಬೇಕು. 

ಈಗ ಸತೀ ಪದ್ಧತಿಯನ್ನು ನಿಷೇಧಿಸಲಾಗಿದೆ.

  • 'ಸಹಗಮನ' ಕೆಲವೊಮ್ಮೆ ಸ್ವಿಚ್ಛೆಯಿಂದಲೂ, ಕೆಲವೊಮ್ಮೆ ಬಲಾತ್ಕಾರದಿಂದಲೂ ನಡೆಯುತ್ತಿತ್ತು. 
  • ವೈದಿಕ ಯುಗದಲ್ಲಿ ಸಹಗಮನ‌ ಪದ್ಧತಿ ಆಚರಣೆಯಲ್ಲಿ ಇರಲಿಲ್ಲ.
  • ಅಥರ್ವ ವೇದದ ಕಾಲದಲ್ಲಿ ವಿಧವೆಯು ಗಂಡನ ಶವದ ಪಕ್ಕದಲ್ಲಿ ಮಲಗಿಕೊಳ್ಳುತ್ತಿದ್ದಳು. ಉಳಿದವರು ಅವಳನ್ನು ಕೆಳಗಿಳಿದು ಬಾ ಅಂತ ಕರೆಯುತ್ತಿದ್ದರು. ನಂತರ ಅವಳು ತನ್ನ ಮಕ್ಕಳೊಂದಿಗೆ ಬಾಳಲಿ ಎಂದು ಪ್ರಾರ್ಥನೆ ಮಾಡುತ್ತಿದ್ದರು.‌ (ಚಿ.ಮೂ)
  • 'ಪ್ರಾಚೀನ ಜನಾಂಗಗಳು ಈ ಲೋಕದಂತಹ ಮತ್ತೊಂದು ಲೋಕವಿದೆ ಎಂದು ಬಹುವಾಗಿ ನಂಬಿದ್ದರು. ವ್ಯಕ್ತಿ ಮಡಿದಾಗ ಅವನು ಆ ಪರಲೋಕಕ್ಕೆ ಹೋಗುವನೆಂದೂ, ಅಲ್ಲಿಯ ಅವನ ಭೋಗಕ್ಕೆ ಇಲ್ಲಿಂದ ಅವನಿಗಿಷ್ಟವಾದ ವಸ್ತುಗಳನ್ನು ಕಳಿಸಬೇಕೆಂದೂ ಭಾವಿಸಿದ್ದರು. ಬಹುಶಃ ಸಹಗಮನದ ಪದ್ಧತಿಗೆ ಇದೇ ಮೂಲವಿರಬಹುದು (ಚಿ.ಮೂ) 
  • ಪ್ರಪಂಚದಾದ್ಯಂತ ಸತೀಪದ್ಧತಿ ಇರುವ ಹಾಗೆ ಪತಿಯ ಸಹಗಮನ‌ ಪದ್ಧತಿ ಇಲ್ಲದಿರುವುದು, ಪುರುಷ ಪ್ರಧಾನ ವ್ಯವಸ್ಥೆಯ ಕ್ರೌರ್ಯವನ್ನು ತೋರಿಸುತ್ತದೆ. ಪುರುಷನಿಗೆ ಸ್ತ್ರೀ ಕೇವಲ ಭೋಗವಸ್ತುವಾದರೆ, ಸ್ತ್ರೀಗೆ ಪತಿಯು ಪರದೈವ.
ಡಾ. ಬಿ.ಎಸ್.ಶೇಠೆ ಅವರು ತಮ್ಮ "ಕರ್ನಾಟಕದಲ್ಲಿ ಸತೀಪದ್ಧತಿ" ಗ್ರಂಥದಲ್ಲಿ ಸತೀ ಪದ್ಧತಿಯ ಕಾರಣಗಳನ್ನು ಲೌಕಿಕ ಮತ್ತು ಅಲೌಕಿಕ ಎಂದು ಕ್ರೋಡೀಕರಿಸಿದ್ದಾರೆ. 

ಸತೀ ಪದ್ಧತಿಯ ಲೌಕಿಕ ಕಾರಣಗಳು : 
  • ಪತ್ನಿ ಅಗಲಬಾರದು ಎಂಬ ಪುರುಷನ ಸ್ವಾರ್ಥ
  • ಪತ್ನಿ ಇನ್ನೊಬ್ಬಳ ವಶವಾಗಬಾರದು ಎಂಬ ಸ್ವಾರ್ಥ
  • ಪಾತಿವ್ರತ್ಯದ ವೈಭವೀಕರಣ
  • ವೈಯುಕ್ತಿಕ ಪ್ರತಿಷ್ಠೆ
  • ಮಾನರಕ್ಷಣೆಯ ವ್ಯವಸ್ಥೆ
  • ವಿಧವೆಯ ನಿಕೃಷ್ಟ ಜೀವನ
  • ಸಂಪತ್ತು ಪಡೆಯುವ ಸಂಚು
  • ಪತ್ನಿ ತನ್ನನ್ನು ಸಾಯಿಸಬಾರದೆಂಬ ಪುರುಷನ ಪೂರ್ವಾಲೋಚನೆ    
ಸತೀ ಪದ್ಧತಿಯ ಅಲೌಕಿಕ ಕಾರಣಗಳು : 
  • ಪರಲೋಕ ಕಲ್ಪನೆ
  • ಪುನರ್ಜನ್ಮ ಕಲ್ಪನೆ
  • ಸತ್ತವನೊಂದಿಗೆ ಪ್ರಿಯವಸ್ತುಗಳನ್ನು ಆತನೊಂದಿಗೆ ಕಳಿಸುವ ನಂಬಿಕೆ
  • ಸತಿ-ಪತಿಗಳಿಬ್ಬರೂ ಒಟ್ಟಿಗೆ ಸ್ವರ್ಗ ಪಡೆಯುವ ನಂಬಿಕೆ. 
ಪತಿಯ ಶವದ ಜೊತೆಯಲ್ಲಿಯೇ ಚಿತೆಯೇರಿ ಮರಣ ಹೊಂದುವುದು ಸಹಗಮನವಾದರೆ, ಗಂಡನು ದೂರದಲ್ಲಿ ಎಲ್ಲೋ ಮಡಿದು ಹೋದ ಸುದ್ದಿ ಕೇಳಿ ಹೆಂಡತಿಯು ತಾನು ಇದ್ದಲ್ಲಿಯೇ ಸ್ವತಃ ಅಗ್ನಿ ಪ್ರವೇಶ ಮಾಡಿದರೆ ಅದು ಅನುಗಮನ ಎನಿಸಿಕೊಳ್ಳುತ್ತದೆ (ಬಿ.ಎಸ್.ಶೇಠೆ) 

ಈ ದೃಷ್ಟಿಯಿಂದ ದೇಕಬ್ಬೆಯದು ಅನುಗಮನ ಎನ್ನುತ್ತಾರೆ ಡಾ.ಎಂ. ಚಿದಾನಂದ ಮೂರ್ತಿ ಅವರು. 

ಕಿಟ್ಟೆಲ್ ಅವರ ಪ್ರಕಾರ ಏಚನು ಮರಣದಂಡನೆ ಶಿಕ್ಷೆಗೆ ಒಳಗಾದದ್ದು ತಲಕಾಡಿನಲ್ಲಿ. ಆಗಿನ ಕಾಲದಲ್ಲಿ ಶಿವಭಕ್ತರಾದ ಶೂದ್ರರನ್ನು ಮೃತರಾದಾಗ ಸುಡುವ ಪದ್ಧತಿ ಇತ್ತು. ಹಾಗಾಗಿ ಏಚನನ್ನೂ ಸುಟ್ಟಿರಬೇಕು‌. ದೇಕಬ್ಬೆ ಚಿತೆ ಏರಿದ್ದು ಬೆಳತೂರಿನಲ್ಲಿ.‌

ಉಪಸಂಹಾರ

ಗಂಡನ ಸಾವಿನ ಸುದ್ದಿ ಕೇಳಿ, ತಾನೂ ಇಹಲೋಕ ತ್ಯಜಿಸುವ ನಿರ್ಧಾರ ಮಾಡಿ, ಚಿತೆಯೇರಿ ಮಡಿದ ದೇಕಬ್ಬೆಯನ್ನು ಕುರಿತು ಈ ಶಾಸನ ವಿವರಿಸುತ್ತದೆ. ಈ ಶಾಸನದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ನಡೆದು ಬಂದ ಸತೀ ಪದ್ಧತಿಯನ್ನು ಕುರಿತು ಚಿದಾನಂದ ಮೂರ್ತಿ, ಕಿಟ್ಟೆಲ್ ಮತ್ತು ಬಿ.ಎಸ್.ಶೇಠೆ ರವರ ಮಾತುಗಳನ್ನು ನಾವು ಗಮನಿಸಿದೆವು. ಇವರ ಮಾತುಗಳಿಂದ ದೇಕಬ್ಬೆಯದು ಸಹಗಮನವಲ್ಲ ಬದಲಿಗೆ ಅನುಗಮನ‌ ಎಂದೂ ತಿಳಿಯಿತು‌. ಜೊತೆಗೆ ಇಂತಹಾ ಪದ್ಧತಿ ಪುರುಷರಲ್ಲಿ ಇಲ್ಲದೇ ಇರುವುದರಿಂದ ಪುರುಷ ಪ್ರಧಾನ ವ್ಯವಸ್ಥೆಯ ಕ್ರೂರ ಮುಖಕ್ಕೆ ಕನ್ನಡಿ ಹಿಡಿದಂತಾಯ್ತು. 

(ವಿವಿಧ ಮೂಲಗಳಿಂದ)

************

ಕೆ.ಎ.ಸೌಮ್ಯ
ಮೈಸೂರು

************
ದೇಕಬ್ಬೆಯ ಶಾಸನದ ಹಿನ್ನೆಲೆಯಲ್ಲಿ ಸತೀ ಪದ್ಧತಿಯನ್ನು ಪರಿಚಯಿಸಿ
************
(ಎಂ.ಎ.ಕನ್ನಡ 2013) 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)