ದೇಕಬ್ಬೆ ಶಾಸನ : ಟಿಪ್ಪಣಿ

ಪ್ರಸ್ತುತ ಶಾಸನದ ಕೇಂದ್ರ ವ್ಯಕ್ತಿಯಾದ ದೇಕಬ್ಬೆ ರವಿಗ ಮತ್ತು ಪೊನ್ನಕ್ಕರ ಮಗಳು. ಆಕೆ ವಿವಾಹವಾದುದು ನವಲೆನಾಡಿನ ಪ್ರಭುವಾದ ಏಚನನ್ನು. ಏಚ ತನ್ನ ಪತ್ನಿಯೊಡನೆ ಸುಖವಾಗಿ ಬಾಳುತ್ತಿದ್ದ. ಆತ ಒಬ್ಬ ಜಟ್ಟಿ, ಕುಸ್ತಿ ಪಟುವಾಗಿದ್ದ. ಯಾವುದೋ ಒಂದು ಸ್ಪರ್ಧೆಯಲ್ಲೋ ಅಥವಾ ಹೋರಾಟದಲ್ಲಿಯೋ ತನ್ನ ಎದುರಾಳಿಯನ್ನು ಏಚ ಇರಿದು ಕೊಂದುಬಿಟ್ಟ. ಅದಕ್ಕಾಗಿ ಆತನಿಗೆ ಮರಣದಂಡನೆ ಶಿಕ್ಷೆಯಾಯ್ತು. ಆತ ಮೃತನಾದ. 

ದೇಕಬ್ಬೆಗೆ ಗಂಡನ ಸಾವಿನ ಸುದ್ದಿ ತಿಳಿದೊಡನೆ ಆಕೆ ಇಹಲೋಕವನ್ನು ತ್ಯಜಿಸಲು ನಿರ್ಧರಿಸಿದಳು

ಚಿತೆಯನ್ನು ಸಿದ್ಧಪಡಿಸಲಾಯ್ತು. 

ದೇಕಬ್ಬೆಯ ತಂದೆ, ತಾಯಿ, ಬಂಧು, ಬಳಗ, ಆಪ್ತೇಷ್ಟರು ಎಲ್ಲರೂ ಸೇರಿ ಆಕೆ ತನ್ನ ಸಂಕಲ್ಪ ಕೈ ಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರು. ಕಾಲು ಹಿಡಿದು ಕೇಳಿಕೊಂಡರು.‌ ದೇಕಬ್ಬೆ ವಿಚಲಿತಳಾಗಲಿಲ್ಲ. ಕೊಟ್ಟ ಮನೆಗೂ ಸೇರಿದ ಮನೆಗೂ ಶೋಭೆ ತರದ ಕೆಲಸ ತಾನು ಮಾಡುವುದಿಲ್ಲ ಎಂದು ದೇಕಬ್ಬೆ ಹೇಳಿಬಿಟ್ಟಳು.

ನಂತರ ಜನರಿಗೆ ತನ್ನಲ್ಲಿರುವ ಬಟ್ಟೆ, ಬರೆ, ಆಭರಣ, ಹಣ ಎಲ್ಲವನ್ನೂ ಜನರಿಗೆ ಹಂಚಿ, ಬರಿಗೈಯಲ್ಲಿ ದೇವರಿಗೆ ನಮಿಸಿ, ಉರಿಯುತ್ತಿದ್ದ ಚಿತೆ ಹೊಕ್ಕಳು ದೇಕಬ್ಬೆ. ನಂತರ ಸತಿಯಾದಳು.

ಈ ಶಾಸನದಲ್ಲಿ ದೇಕಬ್ಬೆಯ ಗುಣ ಪ್ರಶಂಸೆ ಮಾಡಲಾಗಿದೆ. ತನ್ನ ಮಗಳ ಸ್ಮಾರಕವಾಗಿ ಶಾಸನ ಸಹಿತವಾದ ಶಿಲಾಸ್ತಂಭವನ್ನು ಮಾಡಿಸಿದ್ದು ಆಕೆಯ ತಂದೆ ರವಿಗ. 

  • ಪತಿಯ ಶವದ ಜೊತೆಯಲ್ಲಿಯೇ ಚಿತೆಯೇರಿ ಮರಣ ಹೊಂದುವುದು ಸಹಗಮನ.
  • ಆ ದೃಷ್ಟಿಯಿಂದ ದೇಕಬ್ಬೆಯ ಮರಣ ಸಹಗಮನವಲ್ಲ, ಅನುಗಮನ.
ಅನುಗಮನ ಎಂದರೆ ಗಂಡನು ದೂರದಲ್ಲಿ ಮಡಿದು ಹೋದ ನಂತರ ಅದನ್ನು ತಿಳಿದ ಅವನ‌ ಪತ್ನಿ, ಅವನ‌ ಯಾವುದಾದರೂ ವಸ್ತುವಿನೊಡನೆ, ಒಂದು ವೇಳೆ ಅದೂ ದೊರಕದಿದ್ದರೆ ತಾನೊಬ್ಬಳೇ ಅಗ್ನಿ ಅಥವಾ ಸಮಾಧಿ ಪ್ರವೇಶ ಮಾಡುವ ವಿಧಾನವಾಗಿದೆ. 

ಕೊಟ್ಟ ಮನೆ ಮತ್ತು ಸೇರಿದ ಮನೆಗಳ ಘನತೆ ಗೌರವ ಕಾಪಾಡುವುದು ಆದರ್ಶ ಸ್ತ್ರೀಯರ ಕರ್ತವ್ಯವಾಗಿತ್ತು ಎಂದು ದೇಕಬ್ಬೆಯ ಮಾತುಗಳಿಂದ ತೋರುತ್ತದೆ. 

ದೇಕಬ್ಬೆ ಮೃತಳಾದುದು ತಂದೆಯ ಊರಿನಲ್ಲಲ್ಲ. ಬದಲಿಗೆ ತನ್ನ ಪತಿಯ ಊರಾದ ನವಲೆನಾಡಿನಲ್ಲಿ. ಆದರೆ ಆಕೆಯ ಶಾಸನ ಇರುವುದು ಬೆಳತೂರಿನಲ್ಲಿ. 

ಕನ್ನಡದಲ್ಲಿ ಇಷ್ಟು ವಿಸ್ತಾರವಾಗಿ ಸಹಗಮನವನ್ನು ವರ್ಣಿಸಿರುವ ಶಾಸನ ಮತ್ತೊಂದಿಲ್ಲ. ಹಾಗಾಗಿ ಕನ್ನಡ ನಾಡಿನ ಮಹತ್ವದ ಶಾಸನಗಳ ಸಾಲಿನಲ್ಲಿ ಇದು ಸೇರುತ್ತದೆ.

(ವಿವಿಧ ಮೂಲಗಳಿಂದ)

***************

ಕೆ.ಎ.ಸೌಮ್ಯ
ಮೈಸೂರು


ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)