ಪಿ.ಬಿ.ಷೆಲ್ಲಿಯ ಕಾವ್ಯ ಸಮರ್ಥನೆ

  ಕವಿ ಪರಿಚಯ : 

ಷೆಲ್ಲಿಯು ಇಂಗ್ಲೆಂಡಿನ ಒಂದು ಹಳ್ಳಿಯಲ್ಲಿ ಜನಿಸಿದ. ತಂದೆ ತಾಯಿಗೆ ಮೊದಲ ಮಗ ಷೆಲ್ಲಿ‌. ಹುಟ್ಟೂರಿನಲ್ಲಿಯೇ ಬಾಲ್ಯದ ವಿದ್ಯಾಭ್ಯಾಸ ಮುಗಿಸಿ ಸಿಯಾನ್ ಹೌಸ್ ಅಕಾಡೆಮಿ ಎಂಬ ಶಾಲೆ ಸೇರಿದ. ಅದ್ಭುತ ಪವಾಡದ ಕಥೆಗಳನ್ನು ಓದಿದ. ಸಹಪಾಠಿಗಳೊಂದಿಗೆ ಆಟಕ್ಕೆ ಸೇರದೇ ಶತಪಥ ತಿರುಗುತ್ತ ಚಿಂತನೆ ನಡೆಸಿದ. ಪರರ ದುಃಖ ಕಂಡು ಕಣ್ಣೀರು ಸುರಿಸುತ್ತಿದ್ದ.‌ ಪ್ರಕೃತಿ ಪ್ರೇಮಿಯಾಗಿದ್ದ. ಪುಸ್ತಕಗಳನ್ನು ಹೆಚ್ಚೆಚ್ಚು ಓದುತ್ತಿದ್ದ. 

ನಂತರ ಈಟಾನ್ ಎಂಬ ಶಾಲೆಗೆ ಸೇರಿದವನು, ಸಾರ್ವಜನಿಕ ಕಾರ್ಯಗಳಲ್ಲಿ ಭಾಗವಹಿಸಿದ. ರಸಾಯನ ಶಾಸ್ತ್ರದ ವ್ಯಾಸಂಗದ ಜೊತೆ ನಾಟಕದ ರಚನೆ, ಅಭಿನಯ ಸಹ ಮಾಡಿದ. ಆದರೂ ಅವನಿಗೆ ಪ್ರಯೋಗ ಶಾಲೆಯಲ್ಲಿ ರಸಾಯನ ಶಾಸ್ತ್ರದ ಪ್ರಯೋಗ ನಡೆಸುವುದೇ ಹೆಚ್ಚು ಇಷ್ಟದ ವಿಷಯವಾಗಿತ್ತು.

"ರಾಜಕೀಯ ನ್ಯಾಯ" ಎಂಬ ಗ್ರಂಥದಿಂದ ಪ್ರೇರಿತನಾಗಿ ಕ್ರಾಂತಿಕಾರಕನಾಗಿ ಭಾಷಣ ಮಾಡಿದ. ಶಾಲೆಯ ವಿದ್ಯಾರ್ಥಿ ಸೇವಾ ಪದ್ಧತಿ ವಿರುದ್ಧ ತಿರುಗಿಬಿದ್ದ. 

ಸ್ವಲ್ಪ ವರ್ಷಗಳಲ್ಲಿ "ನಾಸ್ತಿಕ್ಯದ ಅವಶ್ಯಕತೆ" ಎಂಬ ಕಿರುಹೊತ್ತಿಗೆ ಪ್ರಕಟಿಸಿದ. ಅದರಿಂದಾಗಿ ತಾನು ಓದುತ್ತಿದ್ದ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಹೊರದೂಡಲ್ಪಟ್ಟ. 

ಲಂಡನ್ನಿಗೆ ಬಂದವನು ಹ್ಯಾರಿಯೆಟ್‌ಳನ್ನು ವಿವಾಹವಾದ. 

ಲಂಡನ್ನಿನಲ್ಲಿ ವಿಲಿಯಂ ಗಾಡ್ವಿಯನ್ನು ಭೇಟಿ ಮಾಡಿದ. ನಂತರ ತತ್ವಾಭ್ಯಾಸದ ಫಲವಾಗಿ "ದೇವಾಸ್ತಿಕ್ಯದ ಖಂಡನೆ" ಕೃತಿ ರಚಿಸಿದ. ಇದೇ ವೇಳೆ ಹ್ಯಾರಿಯಟ್`ಳ ಸಂಬಂಧ ಕಡಿದುಕೊಂಡ. ಗಾಡ್ವಿನ್ ಮಗಳಾದ ಮೇರಿಯ ಜೊತೆ ಸಂಬಂಧ ಬೆಳೆಸಿದ. ಅಷ್ಟರಲ್ಲಿ ಷೆಲ್ಲಿಯ ತಾತ ಸತ್ತು ಆಸ್ತಿಯೆಲ್ಲಾ ಷೆಲ್ಲಿಯ ಹೆಸರಿಗೆ ಬಂತು.

ದುರಾದೃಷ್ಟವಶಾತ್ ಷೆಲ್ಲಿ ಸಮುದ್ರದಲ್ಲಿ ಪ್ರಯಾಣ ಮಾಡುತ್ತಿದ್ದಾಗ ದೋಣಿ ಸಮೇತ ಮುಳುಗಿ ಹೋದ. ರೋಮಿನ ಪ್ರಾಟೆಸ್ಟೆಂಟ್ ಸ್ಮಶಾನ ಭೂಮಿಯಲ್ಲಿ ಅವನ ಅಂತ್ಯಸಂಸ್ಕಾರ ಮಾಡಲಾಯ್ತು. "ಆತ್ಮಗಳ ಆತ್ಮ" ಎನ್ನುವುದು ಷೆಲ್ಲಿಯ ಸಮಾಧಿ ಸ್ತಂಭದ ಮೇಲಿನ ಬರಹವಾಗಿದೆ.

ಷೆಲ್ಲಿಯ ಕೃತಿಗಳು:

1. ಸ್ಕೈಲಾರ್ಕ್
2. ದಿ ಮಾಸ್ಕ್ ಆಫ್ ಅನಾರ್ಕಿ
3. ದಿ ಚೆಂಡಿ

ಪ್ರಸ್ತುತ "ಕಾವ್ಯ ಸಮರ್ಥನೆ"- ಡಿಫೆನ್ಸ್ ಆಫ್ ಪೊಯೆಟ್ರಿಯನ್ನು ಸಿ.ಮಹಾದೇವಪ್ಪನವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. 

ಷೆಲ್ಲಿಯ ಕಾವ್ಯ ಸಮರ್ಥನೆ:

ಮನಸ್ಸಿನ ವ್ಯಾಪಾರಗಳನ್ನು ಎರಡು ಬಗೆಯಾಗಿ ಪರಿಗಣಿಸಬಹುದು. ಒಂದು ಪ್ರತಿಭೆ ಹಾಗೂ  ಮತ್ತೊಂದು ಬುದ್ಧಿ. 'ಬುದ್ಧಿ' ಆಲೋಚನೆ ಮಾಡುವ ಚಿಂತನೆಗೆ ಸಂಬಂಧಿಸಿದುದಾದರೆ, 'ಪ್ರತಿಭೆ'ಯು ಆ ಆಲೋಚನೆಗಳನ್ನು ತನ್ನದೇ ಆದ ಕಾಂತಿಯಿಂದ ರೂಪಿಸುತ್ತದೆ. ವೈಣಿಕನಿಗೆ ವೀಣೆ, ದೇಹಕ್ಕೆ ಆತ್ಮ, ವಸ್ತುವಿಗೆ ನೆರಳು ಹೇಗೋ ಹಾಗೆ ಪ್ರತಿಭೆಗೆ ಆಲೋಚನೆ ಮುಖ್ಯ.

"ಕಾವ್ಯ"ವನ್ನು ಪ್ರತಿಭೆಯ ಅಭಿವ್ಯಕ್ತಿ ಎಂದು ಹೇಳಬಹುದು.

ಕವಿತಾ ಶಕ್ತಿಯು ಮಾನವನ ಆದಿ ಕಾಲದಿಂದಲೇ ಹುಟ್ಟಿ ಬಂದಿದೆ. ಮನುಷ್ಯನು ತನ್ನ ಸುತ್ತ ಮುತ್ತಲಿನ ವಸ್ತುಗಳು ಮೂಡಿಸುವ ರಸಾವೇಶವನ್ನು ವ್ಯಕ್ತಪಡಿಸುತ್ತಾನೆ. ಭಾವಾಭಿನಯ, ಚಿತ್ರರಚನೆ ಇದೆಲ್ಲವೂ ಪ್ರತಿಭೆಯ ಅಭಿವ್ಯಕ್ತಿಯೇ ಆಗಿದೆ. ಜನರು ಪ್ರಕೃತಿಯ ವಸ್ತುಗಳನ್ನ ಅನುಕರಿಸುತ್ತಾರೆ. ನರ್ತಿಸುವುದಕ್ಕೆ ಮತ್ತು ಹಾಡುವುದಕ್ಕೆ ಇಲ್ಲೆಲ್ಲಾ ಒಂದು ಕ್ರಮವಿದೆ. ಅನುಕರಣೆಯೇ ಆದರೂ ಅದರ ಪ್ರದರ್ಶನಕ್ಕೆ ಒಂದು ಕ್ರಮಬದ್ಧತೆ ಇದೆ. ಇದರಿಂದ ಪ್ರೇಕ್ಷಕನಿಗೆ ಯಾವುದರಿಂದಲೂ ದೊರೆಯದಂತಹಾ ಒಂದು ಆನಂದ ಲಭಿಸುತ್ತದೆ. ಇದನ್ನೇ ನಮ್ಮ ಆಧುನಿಕರು "ರಸಜ್ಞತೆ" ಎಂದು ಕರೆದಿದ್ದಾರೆ.

ಇಂಥಾ ರಸಜ್ಞತೆಯನ್ನು ನಮ್ಮೊಳಗೆ ಮೂಡಿಸುವವರು ಕವಿಗಳೇ ತಾನೇ?

ಕವಿಗಳ ಭಾಷಾಶೈಲಿ ರೂಪಾತ್ಮಕವಾದದ್ದು. ಹಾಗೆ ನೋಡಿದರೆ ಸಮಾಜದ ಪ್ರತಿಯೊಬ್ಬ ರಚನಕಾರನೂ ಒಬ್ಬ ಕವಿಯೇ ಆಗಿರುತ್ತಾನೆ. ಆದರೆ ತಾನು ಕಂಡದ್ದನ್ನು, ಸೌಂದರ್ಯಗಳನ್ನು ಭಾಷೆಯಲ್ಲಿ ಸೆರೆ ಹಿಡಿಯುವವ ವಿಶೇಷ ಎನಿಸುತ್ತಾನೆ. ಕವಿಗಳು ನ್ಯಾಯ ಪ್ರತಿಷ್ಠಾಪಕರು. ನಾಗರೀಕ ಸಮಾಜದ ಪುನರ್ ನಿರ್ಮಾಪಕರು. ಅಷ್ಟೇ ಅಲ್ಲದೇ ಮನುಷ್ಯರನ್ನು ಸನ್ನತಿಗೆ ಒಯ್ಯಬಲ್ಲ ಆಧ್ಯಾತ್ಮಿಕ ಗುರುಗಳೂ ಹೌದು. 

ಕವಿಗಳನ್ನು ಅಕಿರೀಟ ಸಾಮ್ರಾಟರೆಂದೂ ಕರೆಯಲಾಗುತ್ತದೆ.

ಮುಖ್ಯವಾಗಿ ಕವಿಯು ವರ್ತಮಾನದಲ್ಲಿಯೇ ಭವಿಷ್ಯತ್ತನ್ನು ಕಾಣುತ್ತಾನೆ. ಆತನ ಕಲ್ಪನೆಗೆ ಕಾಲ ದೇಶಗಳ ಬಂಧವಿಲ್ಲ.

"ಕಾಲದಾಚೆಗೆ, ದೇಶದಾಚೆಗೆ, ಚಿಂತನೆಯಿಂದಾಚೆಗೆ ಹಾರುವೆ" ಎಂಬ ಕುವೆಂಪು ಅವರ ಪಕ್ಷಿಕಾಶಿಯ ಸಾಲುಗಳನ್ನು ಒಮ್ಮೆ ನೆನಪಿಸಿಕೊಳ್ಳಬಹುದು.

ಕವಿ-ಕಾವ್ಯದ ಸ್ವರೂಪ:

ಕಾವ್ಯವು ಛಂಧೋಬದ್ಧವಾದ ಭಾಷೆಯ ರಚನಾ ಕ್ರಮವನ್ನು ಅಭಿವ್ಯಕ್ತಗೊಳಿಸುತ್ತದೆ. ಕಾವ್ಯವು ಹೃದಯದ ಸಾಮ್ರಾಜ್ಞ ದೇವತೆಯ ಸೃಷ್ಟಿಯಾಗಿದೆ. ಚಿತ್ರಕಲೆ, ರೂಪಕಲೆ, ನರ್ತನ ಕಲೆಗಳಿಗಿಂತಾ ಭಾಷೆಯೇ ನಮ್ಮ ಅಂತರಾತ್ಮದ ರಾಗಭಾವಗಳ ಪ್ರತಿನಿಧಿ ಸ್ವರೂಪವಾದುದು.

"ಸಸ್ಯವು ಅದರ ಬೀಜದೊಳಗಿನಿಂದ ಮತ್ತೆ ಹುಟ್ಟಿ ಬರಬೇಕು. ಇಲ್ಲದಿದ್ದರೆ ಅದು ಯಾವ ಹೂವನ್ನೂ ಬಿಡದು"

ಇದು ಬೈಬಲ್ಲಿನ ಶಾಪ ವೃತ್ತಾಂತ ಸಾರವಾಗಿದೆ.

ಕವಿಗಳಿಗೂ, ಗದ್ಯ ಲೇಖಕರಿಗೂ ತಾರತಮ್ಯ ಮಾಡುವುದು ಒಂದು ದೋಷವೇ ಆಗಿದೆ. ಪ್ಲೇಟೋ ಸ್ವತಃ ಒಬ್ಬ ಕವಿ. ಆತನ ಆಲೋಚನೆಗಳು ಕಲ್ಪನೆಗೂ ನಿಲುಕದಷ್ಟು ಗಹನವಾದುದು. ಅವನು ಒಂದು ಲಯದ ಯೋಜನಾಕ್ರಮವನ್ನು ಹೊಸದಾಗಿ ಕಂಡು ಹಿಡಿಯುವ ಸಲುವಾಗಿ ಮಹಾಕಾವ್ಯ, ನಾಟಕ ಮತ್ತು ಭಾವಗೀತ ರೂಪಗಳ ಛಂದಸ್ಸನ್ನು ನಿರಾಕರಿಸಿದನು.

ಆದರೆ ಪ್ಲೇಟೋ ಬಳಸಿದ ಛಂದಸ್ಸನ್ನು ಸಿಸಿರೋ ಅನುಕರಿಸಲು ಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಏಕೆಂದರೆ ಜನಮೆಚ್ಚುವ ಕವಿಗಳು ಯಶಸ್ವಿಯಾಗಿರುವುದು ಅವರು ಕೇವಲ ಕ್ರಾಂತಿ ಪುರುಷರೆಂದಲ್ಲ. ಅವರ ಜೀವನ ರಸಮಯವೂ, ಲಯ ಸಮನ್ವಿತವೂ ಆಗಿರುವುದರಿಂದ. ವಿಶ್ವಗೀತೆಯ ಪ್ರತಿನಿಧಿಗಳೇ ಕವಿಗಳು. ಆದ್ದರಿಂದಲೇ ಷೇಕ್ಸ್ಪಿಯರ್, ಡಾಂಟೆ, ಮಿಲ್ಟನ್ ಎಂದಿಗೂ ಸಲ್ಲುವವರಾಗಿದ್ದಾರೆ. 

ಚರಿತ್ರೆಗೂ ಕಾವ್ಯಕ್ಕೂ ವ್ಯತ್ಯಾಸವಿದೆ. ಚರಿತ್ರೆಯು ಕಾಲ, ದೇಶ, ಸನ್ನಿವೇಶಗಳಿಂದ ಬಂಧಿತವಾಗಿರುತ್ತದೆ. ಕಾವ್ಯವು ಕಾಲಾತೀತ ಮತ್ತು ದೇಶಾತೀತವಾಗಿದೆ. ವಾಸ್ತವಿಕ ಸಂಗತಿಗಳೇ ಚರಿತ್ರೆಯ ವಿಷಯ. ಅವುಗಳು ಚರಿತ್ರೆಯ ಕಾವ್ಯ ಗುಣವನ್ನೇ ತಿಂದು ಹಾಕುತ್ತವೆ. ಚರಿತ್ರೆಯ ವಿಕೃತರೂಪಕ್ಕೆ ಸಹಜರೂಪ ಕೊಡುವ ದರ್ಪಣವೇ ಕಾವ್ಯ.

ಕಾವ್ಯದ ಪ್ರಯೋಜನ :

ಕವಿತಾ ರಸವು ಸದಾ ಆನಂದ ಸಂಗಿಯಾಗಿದೆ. ಜನರಲ್ಲಿ ಯಾರೂ ಈ ಆನಂದವನ್ನು ಸಂಪೂರ್ಣವಾಗಿ ಅರಿತವರಲ್ಲ. ಏಕೆಂದರೆ ಶುದ್ದ ರಸಾನುಭವವು ಅಲೌಕಿಕವೂ, ಅಗೋಚರವೂ ಆದ ದೈವಿಕವಾದ ವ್ಯಾಪಾರವಾಗಿದೆ. ಆಧುನಿಕ ಕಾಲದಲ್ಲಿಯೂ ಯಾವ ಕವಿಯೂ ಪೂರ್ಣವಾಗಿ ಖ್ಯಾತಿ ಗಳಿಸಿದವನಲ್ಲ.

ಇರುಳಲ್ಲಿ ಕುಳಿತು ತನ್ನ ಏಕಾಂತವನ್ನು ಉಲ್ಲಸಿತಗೊಳಿಸಿಕೊಳ್ಳಲು ಹಾಡಿಕೊಳ್ಳುವ ಇರುಳಪಕ್ಷಿಯೇ ಕವಿ. ಅಗೋಚರನಾಗಿರುವ ಒಬ್ಬ ಕವಿಯ ಗಾನದಿಂದ ಪರವಶರಾದ ಜನರೇ ಶ್ರೋತೃಗಳು. ಕವಿತೆಯನ್ನು ಕೇಳಿ ಮನಕರಗಿದರೂ ಅದೇಕೆ ಎಂದು ಅವರು ಅರಿಯರು. 

'ಹೋಮರ'ನ ಕಾವ್ಯಗಳು ಅವನ ಕಾಲಕ್ಕೂ, ನಂತರ ಬಂದ ನಾಗರೀಕತೆಗೂ ಆಧಾರ ಸ್ಥಂಭ ಎನಿಸಿಕೊಂಡಿದೆ. ಹೋಮರನು ತನ್ನ ಕಾಲದ ಆದರ್ಶವನ್ನು ಕಾವ್ಯಗಳಲ್ಲಿ ಮೂರ್ತಿ ರೂಪಗೊಳಿಸಿದನು. ಆತನ ಪದ್ಯ ಓದಿದವರು ಅಕಿಲೀಸ್, ಹೆಕ್ಟರ್, ಯೂಲಿಸಿಸ್ ರ ಹಾಗೆ ಆಗಬೇಕೆಂದು ಬಯಸುವುದು ಸಹಜ. ಮಿತ್ರಸ್ನೇಹ, ದೇಶಭಕ್ತಿ ಆತನ ಕವನಗಳಲ್ಲಿ ಮಡುಗಟ್ಟಿ ನಿಂತಿವೆ.

ಕಾವ್ಯದ ಕಾರ್ಯನೀತಿಯು ಅಲೌಕಿಕವಾದುದು. ಕಾವ್ಯವು ಚಿತ್ತವನ್ನು ಎಚ್ಚರಿಸಿ ವಿಶಾಲಗೊಳಿಸುವುದು. ಒಬ್ಬ ಮನುಷ್ಯನು ಪರಮ ಸಾತ್ವಿಕನಾಗಲು ಅವು ಸಹಕರಿಸುವುವು. ಮಹಾಪುರುಷರ ಜೀವನ ಚರಿತ್ರೆಯ ಭಾಗಗಳು ಕಾವ್ಯ ರೂಪದಲ್ಲಿ ಉಜ್ವಲವಾಗಿ ತುಂಬಿ ತುಳುಕುತ್ತಿದ್ದರೆ, ಅದೇ ಮಹಾ ಪುರುಷರ ತತ್ವೋಪದೇಶಗಳು (ಗದ್ಯ) ಬಹುಬೇಗ ವಿರೂಪಗೊಂಡಿತು. 

ಕಾವ್ಯದ ಮಹೋನ್ನತ ಉಪಕಾರವೆಂದರೆ, ಇದು ವೈಯಕ್ತಿಕ ದಾಸ್ಯವನ್ನು ತೊಡೆದು ಹಾಕಿತು. ಸ್ತ್ರೀಯರ ಸ್ವಾತಂತ್ರ್ಯವು ಶೃಂಗಾರ ಕಾವ್ಯವನ್ನು ಸೃಷ್ಟಿಸಿತು. ಪ್ರೇಮವೇ ಧರ್ಮವಾಯ್ತು. ಆ ಧರ್ಮದ ಆರಾಧನಾ ದೇವತೆಗಳನ್ನು ಜನ ಪೂಜಿಸತೊಡಗಿದರು. 

  • ಈಡನ್ನಿನ ಶೇಷ ಎಂಬಂತೆ ಒಂದು ಸ್ವರ್ಗ ಸೃಷ್ಟಿಯಾಯ್ತು. 
  • ಈ ಸೃಷ್ಟಿಯು ರಸಮಯವಾದುದರಿಂದ ಕವಿಗಳೇ ಅದರ ನಿರ್ಮಾತೃಗಳಾದರು. 
  • ಭಾಷೆ ಅವರ ಕಲೆಯ ಉಪಕರಣವಾಯ್ತು.‌ 
  • ಪುರಾತನರಲ್ಲಿ ಪ್ಲೇಟೋ ಒಬ್ಬನೇ ಪ್ರಣಯ ಕವಿ. 
  • ಡಾಂಟೆಯ ಕಾವ್ಯವು ಆಧುನಿಕ ಮತ್ತು ಪ್ರಾಚೀನ ಜಗತ್ತುಗಳನ್ನು ಒಂದುಗೂಡಿಸುತ್ತದೆ. 
  • ಮಿಲ್ಟನ್ ನ ಕಾವ್ಯಕ್ಕೆ ಜನಾದರಣೆ ದೊರೆತು ಪ್ರಸಿದ್ಧವಾಗಿದೆ. 
ಮಹಾಕಾವ್ಯಗಳನ್ನು ರಚಿಸಿದವರಲ್ಲಿ; 
  1. ಹೋಮರ್ ಮೊದಲನೆಯವನು
  2. ಡಾಂಟೆ ಎರಡನೆಯವನು
  3. ಮಿಲ್ಟನ್ ಮೂರನೆಯವನು
ಆದರೆ ಡಾಂಟೆ ಮತಸುಧಾರಕರಲ್ಲಿ ಮೊದಲಿಗ.‌ ಮೈಮರೆತಿದ್ದ ಯುರೋಪನ್ನು ಮೊದಲು ಎಚ್ಚರಿಸಿದವನೇ ಡಾಂಟೆ. ಸಮರಸವಲ್ಲದ ಅನಾಗರೀಕ‌ ಭಾಷೆಗಳ ಅವ್ಯವಸ್ಥೆಯಿಂದ ವಸ್ತುತಃ ಇಂಪಾಗಿ ಮನವೊಪ್ಪಿಸುವ ಒಂದು ಭಾಷೆಯನ್ನು ಆತ ಸೃಷ್ಟಿಸಿದ. ಆತನ ಮಾತುಗಳು ಸತ್ವಪೂರ್ಣವಾದವು. 

ಒಂದೊಮ್ಮೆ ಡಾಂಟೆ, ಪೆಟ್ರಾರ್ಕ್, ಬೊಕಾಶಿಯೋ, ಷೇಕ್ಸ್ಪಿಯರ್, ಲಾರ್ಡ್ ಬೇಕನ್, ಮಿಲ್ಟನ್ ರಾಗಲೀ ಜನಿಸದೇ ಹೋಗಿದ್ದರೆ, ಹೀಬ್ರ್ಯೂ ಕಾವ್ಯವೆಂದೂ ಭಾಷಾಂತರವಾಗದೇ ಹೋಗಿದ್ದರೆ, ಗ್ರೀಕ್ ಸಾಹಿತ್ಯ ಪುನರುಜ್ಜೀವನವಾಗದೇ ಹೋಗಿದ್ದರೆ, ಪುರಾತನ ಶಿಲ್ಪದ ಯಾವ ಪ್ರತಿಮೆಗಳೂ, ಸ್ಮಾರಕಗಳೂ, ಮಂದಿರಗಳೂ ನಮಗೆ ಪರಂಪರೆಯಾಗಿ ಬಾರದೇ ಹೋಗಿದ್ದಲ್ಲಿ ಪ್ರಾಚೀನ ಜಗತ್ತಿನ ಮತಧರ್ಮದ ಕಾವ್ಯಗಳು ನಾಶವಾಗಿ ಹೋಗಿದ್ದರೆ...

 "ಲೋಕದ ನೈತಿಕ ಪರಿಸ್ಥಿತಿಯು ಏನಾಗಿ ಹೋಗುತ್ತಿತ್ತೆಂದು ಊಹಿಸುವುದೂ ಕಷ್ಟ"

ಕಾವ್ಯ ವಾಸ್ತವವಾಗಿ ದೈವಸ್ವರೂಪವಾದುದು. ಕಾವ್ಯವು ಸಕಲವನ್ನೂ ರಮ್ಯವನ್ನಾಗಿ ಮಾಡುತ್ತದೆ. ಸುಂದರವಾದುದನ್ನು ಸೌಂದರ್ಯಾತಿಶಯಗೊಳ್ಳುವಂತೆ ಮಾಡುತ್ತದೆ. ವಿರೂಪವಾದುದನ್ನು ಸುಂದರಗೊಳಿಸುತ್ತದೆ‌. ಶೋಕ ಮತ್ತು ಹರ್ಷ, ಮುಕ್ತತೆ ಮತ್ತು ಕ್ಷಣಿಕತೆ ಇವುಗಳಿಗೆ ಅದು ಪರಸ್ಪರ ವಿವಾಹ ಮಾಡಿಸುವುದು. ಬದ್ಧ ವಿರೋಧಿಗಳನ್ನೆಲ್ಲಾ ತನ್ನ ಪ್ರಭುತ್ವದಲ್ಲಿ ಒಂದುಗೂಡುವಂತೆ ವಶಪಡಿಸಿಕೊಳ್ಳುವುದು. ಕಾವ್ಯವು ಮುಟ್ಟಿದ್ದೆಲ್ಲಾ ಚಿನ್ನವಾಗುವುದು. 

ಉಪಸಂಹಾರ

ಷೆಲ್ಲಿಯ ಕಾವ್ಯ ಸಮರ್ಥನೆ (A Defence of Poetry) ಯನ್ನು ನಾವು ಇಲ್ಲಿ ವಿಚಾರ ಮಾಡಿದೆವು. ಇದನ್ನು ಡಾ.ಸಿ.ಮಹದೇವಪ್ಪ ರವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಲೇಖನವನ್ನು "ಷೆಲ್ಲಿ" ಜಾನ್ ಕೀಟ್ಸ್ ನ ಮರಣದ ನಂತರ ಬರೆದಿದ್ದ. 

ಇದು ಕಾವ್ಯದ ಅಂಶ ಮೂಲತತ್ವಕ್ಕೆ ಸಂಬಂಧಿಸಿದ ಮಹತ್ವದ ವಿಚಾರಗಳನ್ನು ತಿಳಿಸುತ್ತದೆ. 

ಪ್ರತಿಭೆ ಎಂದರೇನು?

ಕವಿಗಳೆಂದರೆ ಯಾರು?

ಎಂದು ಹೇಳುತ್ತಾ ಕಾವ್ಯದ ಪ್ರಯೋಜನದ ಕಡೆಗೂ ಬೆಳಕು ಚೆಲ್ಲುತ್ತದೆ. ಇಂದಿನ ಸ್ಥಿತಿಗೆ ಆ ತತ್ವಗಳನ್ನು  ಅನ್ವಯಿಸುವ ಯತ್ನವನ್ನು ಅವನ ಲೇಖನದ ವಿಶ್ಲೇಷಣೆಯಲ್ಲಿ ಕಾಣಬಹುದಾಗಿದೆ. 

(ವಿವಿಧ ಮೂಲಗಳಿಂದ)

************
ಕೆ.ಎ.ಸೌಮ್ಯ
ಮೈಸೂರು

************
"ಕಾವ್ಯ ನೀತಿ ಪ್ರಸಾರದ ಮುಖ್ಯ ಸಾಧನ" ಈ ಮಾತಿನ ಹಿನ್ನೆಲೆಯಲ್ಲಿ ಷೆಲ್ಲಿಯ ಕಾವ್ಯ ತತ್ವ ವಿವರಿಸಿ 
ಮತ್ತು
ಷೆಲ್ಲಿ ಪ್ರತಿಪಾದಿಸುವ ಕಾವ್ಯ ಸಮರ್ಥನೆಯನ್ನು ವಿವರಿಸಿ
**********
(ಎಂ.ಎ.ಕನ್ನಡ 2013, 2011, 2007)


ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)