ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಕವಿ ಪರಿಚಯ:

ಪಕ್ಷಿಕಾಶಿ ಕವನ ಸಂಕಲನದ ಕವಿ ರಾಷ್ಟ್ರಕವಿ ಕುವೆಂಪು ರವರು. ರಾಷ್ಟ್ರಕವಿ ಎನ್ನುವುದು ಸರ್ಕಾರ ಅವರಿಗೆ ಕೊಟ್ಟ ಬಿರುದಾದರೆ, ಕುವೆಂಪು (ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ) ಎಂಬುದು ಅವರ ಕಾವ್ಯನಾಮ. ಬೇಂದ್ರೆಯವರು ಹೇಳುವ ಹಾಗೆ ಕುವೆಂಪುರವರು "ಯುಗದ ಕವಿ.. ಜಗದ ಕವಿ.." ಎಂದೇ ಪ್ರಸಿದ್ಧರು. 

ಐರ್ಲೆಂಡಿನ ಕವಿ ಜೇಮ್ಸ್ ಕಸಿನ್ಸ್ ರವರ ಪ್ರೇರಣೆ ಕವಿಯ ಬದುಕನ್ನೇ ಬದಲಾಯಿಸಿತು. ತಮ್ಮ ಮೊದಲ ಕೃತಿಯಾದ ಅಮಲನ ಕಥೆಯನ್ನು "ಕಿಶೋರ ಚಂದ್ರವಾಣಿ" ಎಂಬ ಕಾವ್ಯನಾಮದಿಂದ ಅಚ್ಚು ಹಾಕಿಸಿದರು. ನಂತರ ಕುವೆಂಪು ಎಂಬ ಕಾವ್ಯನಾಮದಿಂದ ಬರೆಯಲು ಆರಂಭಿಸಿದರು.‌

1922 ರಿಂದ 1985 ವರೆಗೆ ಸುಮಾರು ಅರವತ್ತು ವರ್ಷಗಳಷ್ಟು ಕಾಲ ನಿರಂತರವಾಗಿ ಬರೆದರು. ನಾಟಕ, ಕಾವ್ಯ, ಮಕ್ಕಳ ಕಥೆ, ಕಾದಂಬರಿ, ವಿಮರ್ಶೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು.‌ 1945 ರಲ್ಲಿ ಬರೆದಿದ್ದ "ಶ್ರೀರಾಮಾಯಣ ದರ್ಶನಂ" ಮಹಾಕಾವ್ಯಕ್ಕೆ 1968 ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

ಪಕ್ಷಿಕಾಶಿ ಕವನಗಳು:

ಪಕ್ಷಿಕಾಶಿಯಲ್ಲಿ ಸುಮಾರು 47 ಕವನಗಳಿವೆ. ಅವುಗಳ ಆಶಯಕ್ಕೆ ತಕ್ಕಂತೆ ಅವುಗಳನ್ನು ಆರು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಅವು ಯಾವುವೆಂದರೆ:

* ಸೂರ್ಯೋದಯ ಕುರಿತ ಗೀತೆಗಳು
   (ಬಾ ಫಾಲ್ಗುಣ ರವಿ ದರ್ಶನಕೆ, ಆನಂದಮಯ.
     ಈ ಜಗಹೃದಯ, ಭಾದ್ರಪದದ ಸುಪ್ರಭಾತ,
     ಈ ಸುಂದರ ಪ್ರಾತಃಕಾಲದಿ)

* ಸಂಜೆ-ಸೂರ್ಯಾಸ್ತ-ರಾತ್ರಿ ಕುರಿತ ಗೀತೆಗಳು
    (ಕವಿಶೈಲದಲ್ಲಿ ಸಂಜೆ, ಗಗನಗುರು, ಲಲಿತಾದ್ರಿ)

* ಮಳೆ-ಚಳಿ-ಹಿಮವನ್ನು ಕುರಿತ ಗೀತಗಳು
   (ಮಾಗಿ ಬರುತಿದೆ, ವರ್ಷಭೈರವ, ಮಾಗಿಯ
    ಹಗಲು)

* ಹೂವು-ಲತೆಗಳನ್ನು ಕುರಿತ ಗೀತೆಗಳು
    (ಹೀರೆಯ ಹೂ, ಲತಾನಟಿ, ಒಂದು ಹೂವಿಗೆ)

* ಪಕ್ಷಿಗಳನ್ನು ಕುರಿತ ಗೀತೆಗಳು
    (ದೇವರು ರುಜು ಮಾಡಿದನು, ಒಂದು ಹಕ್ಕಿ)

* ಕವಿ-ಕಾವ್ಯ-ಕಲಾಸಕ್ತಿಯ ಗೀತೆಗಳು
    (ಪಕ್ಷಿಕಾಶಿ, ಪ್ರಕೃತಿ ಉಪಾಸನೆ)

ಇವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

* ಸೂರ್ಯೋದಯ ಕುರಿತ ಗೀತೆಗಳು:

ಕುವೆಂಪು ಅವರನ್ನು ಪ್ರಕೃತಿ ಕವಿ ಎನ್ನುವುದು ರೂಢಿ. ಅವರು ಸೂರ್ಯೋದಯವನ್ನು ವಿವಿಧ ಸ್ಥಳಗಳಲ್ಲಿ, ವಿವಿಧ ಋತುಗಳಲ್ಲಿ ನೋಡಿ ಅದರ ಸೌಂದರ್ಯವನ್ನು ನಮಗೆ ತಮ್ಮ ಕಾವ್ಯಗಳಲ್ಲಿ ದರ್ಶನ ಮಾಡಿಸಿದ್ದಾರೆ.

1) ಅದೆ ಅಮೃತದ ಹಣ್ಣೋ
    ಶಿವ ಕಾಣದ ಕವಿ ಕುರುಡನೋ
     ಶಿವ ಕಾವ್ಯದ ಕಣ್ಣೋ


ಭಾವಾರ್ಥ
ಸೂರ್ಯೋದಯ ಮತ್ತು ಚಂದ್ರೋದಯ ಪ್ರಕೃತಿಯ ವ್ಯಾಪಾರವಲ್ಲ. ಅದೊಂದು ಅಸಾಧಾರಣ ಆನಂದಮಯ ಘಟನೆ. ಅದನ್ನು ಅರಿಯದವನು ಕಣ್ಣಿದ್ದೂ ಕುರುಡನಂತೆ ಎನ್ನುತ್ತಾರೆ.

2) ಚೇತನಮೂರ್ತಿಯು ಆ ಕಲ್ಲು
     ತೆಗೆ! ಜಡವೆಂಬುದು ಬರೀ ಸುಳ್ಳು


ಭಾವಾರ್ಥ: 
ಕವಿಗೆ ಹುಲ್ಲು, ಮಣ್ಣು, ಮುಳ್ಳು, ಕಲ್ಲು ಎಲ್ಲದರಲ್ಲಿಯೂ ಚೈತನ್ಯ ಕಾಣುತ್ತಿದೆ. ಅದರಿಂದ ಒಂದು ಮರಮಸತ್ಯ ಹೊಳೆಯುತ್ತದೆ.

3) ಇಂತಹ ಒಂದು ಸುಂದರ ಪ್ರಾತಃಕಾಲದಿ
     ಜೀವಿಸುವುದಕ್ಕಿಂತಲೂ
     ಬೇರೆಯ ಗುರಿ ಜೀವಕೆ ಬೇಕಿಲ್ಲ


ಭಾವಾರ್ಥ: 
ಸೌಂದರ್ಯಾರಾಧನೆ ಸಹ ಧರ್ಮದ ದಾರಿ. ಅದರಿಂದಲೂ ಸತ್ಯದ ಸಾಕ್ಷಾತ್ಕಾರ ಸಾಧ್ಯ.  ಅದರ ಚೆಲುವು ಊರ್ವಶಿಯನ್ನು ಮೀರಿಸಿದ್ದು 'ಸತ್ತಳೋ ಊರ್ವಶಿ ಸ್ವರ್ಗದಲಿ'  ಎಂದುಲಿಯುತ್ತಾರೆ ಕವಿ.‌

"ಬಾ ಫಲ್ಗುಣ ರವಿ ದರ್ಶನಕೆ" ಕವನದಲ್ಲಿ ಯಜ್ಞದ ಕಲ್ಪನೆ ಸ್ಫುಟವಾಗಿದೆ. ಯಜ್ಞವೆಂದರೆ ಲೋಕಕಲ್ಯಾಣಕ್ಕಾಗಿ ನಡೆಯುವ ಮಹಾನ್ ಕ್ರಿಯೆ. ಲೋಕಹಿತರತನಾದ ಸೂರ್ಯನಿಗಿಂತ ಬೇರೆ ಮಿತ್ರರುಂಟೇ. ಯಜ್ಞದಿಂದಲೇ ಸೃಷ್ಟಿ ಹೊಮ್ಮಿತೆಂಬ ಮಾತು ವೇದಗಳಲ್ಲಿ ಬರುತ್ತದೆ. ಸೂರ್ಯೋದಯದಿಂದ ಪ್ರತೀನಿತ್ಯವೂ ಪ್ರಪಂಚ ಮರುಸೃಷ್ಟಿಗೊಳ್ಳುವುದರಿಂದ ಇದು ಅನ್ವರ್ಥವಾಗುತ್ತದೆ. ಸಾಂಪ್ರದಾಯಿಕವಾದ ಪೂಜೆ, ದೇವರು, ಯಜ್ಞಗಳನ್ನು ನಿರಾಕರಿಸುವ ಕುವೆಂಪು ಅದರ ಜಾಗದಲ್ಲಿ ನಿಸರ್ಗಾರಾಧನೆಯನ್ನು ಸ್ಥಾಪಿಸಿರುವುದು ಅವರ ಕ್ರಾಂತಿಕಾರಕ ಮನೋಭಾವವನ್ನು ತೋರಿಸುತ್ತದೆ.

* ಸಂಧ್ಯೆ-ರಾತ್ರಿ ಕುರಿತ ಗೀತೆಗಳು:

ಪಕ್ಷಿಕಾಶಿಯಲ್ಲಿ ಸೂರ್ಯೋದಯದ ಗೀತೆಗಳು ಇರುವಂತೆಯೇ ಸೂರ್ಯಾಸ್ತದ ಗೀತೆಗಳೂ ಇವೆ. ಲಲಿತಾದ್ರಿ ಕವನದಲ್ಲಿ ಲಲಿತಾದ್ರಿ ಬೆಟ್ಟವನ್ನು ಸ್ವರ್ಗಕ್ಕೆ ಹೋಲಿಸಿದ್ದಾರೆ. ಲಲಿತಾದ್ರಿ ಭಕ್ತರಿಗೆ ದೇಗುಲ, ಲೌಕಿಕರಿಗೆ ಸ್ವರ್ಗ, ವೈದಿಕರಿಗೆ ಮುಕ್ತಿ ಎನ್ನುತ್ತಾರೆ.

1) ಮಾತಿಗೊಂದು ಅರ್ಥವೇಕೆ
     ಅರ್ಥವಿದ್ದರಷ್ಟೇ ಸಾಕೆ
     ಮೋಡಗಳನು ನೋಡಿರಲಿ
      ಮಾತು ಅಲ್ಪ ಎಂದು ತಿಳಿ
      ಮಾತು-ಅರ್ಥ ಎರಡೂ ವ್ಯತ್ಯಾಸ
      ಸ್ವ-ಅರ್ಥವಿರದಿರೆ

ಭಾವಾರ್ಥ: 
ಮೇಲಿನ ಸಾಲುಗಳು ಮೇಲ್ನೋಟಕ್ಕೆ ಒಂದು ಅರ್ಥ ತೋರಿದರೆ, ಒಳಾರ್ಥದಲ್ಲಿ ಮತ್ತೇನನ್ನೋ ಧ್ವನಿಸುತ್ತದೆ. ಕುವೆಂಪುರವರ ವೈಶಿಷ್ಟ್ಯವೆಂದರೆ ಪ್ರಕೃತಿ ವ್ಯಾಪಾರದಲ್ಲಿ ಅವರು ಪಡೆಯುತ್ತಿದ್ದ ತಲ್ಲೀನತೆ. ತಮ್ಮ  ಆರಾಧನೆಯ ವಸ್ತುವಿನೊಂದಿಗೆ ರಸಸಮಾಧಿ ಹೊಂದುತ್ತಿದ್ದರು. ಕುವೆಂಪು ಅವರು ಮೈಸೂರಿನಲ್ಲಿದ್ದರೂ ಬೆಳಿಗ್ಗೆ  ನವಿಲುಕಲ್ಲಿನಲ್ಲಿಯೂ, ಸಂಜೆ ಕವಿಶೈಲದಲ್ಲಿಯೂ ಇರುವಂತೆ ಧ್ಯಾನ ಮಾಡುತ್ತಿದ್ದುದಾಗಿ ಅವರೇ  ಹೇಳಿ ಕೊಂಡಿದ್ದಾರೆ.

* ಮಳೆ-ಚಳಿ ಕುರಿತ ಗೀತೆಗಳು:

ಮಲೆನಾಡೆಂದರೆ ಮಳೆಯ ನಾಡೂ ಹೌದು. ವರ್ಷವಿಡೀ ಧೋ ಎಂದು ಸುರಿಯುವ ಮಳೆ ಕವಿಯನ್ನು ಆಕರ್ಷಿಸಿದೆ. ಮಳೆಗಾಲದಲ್ಲಿ ಅಲ್ಲಿ ಚಲನೆಯೇ ಇರುತ್ತಿರಲಿಲ್ಲ. ಜನರು ಯಾರೂ ಗಡಿಬಿಡಿಯಿಂದ ಓಡಾಡುತ್ತಿರಲಿಲ್ಲ. ಪ್ರತಿದಿನ ನೋಡಿದ್ದನ್ನೇ ನೋಡುತ್ತಿದ್ದುದರಿಂದ ಪ್ರಕೃತಿ ಎಂದರೆ ಆನಂದಿಸುವ ವಿಷಯ ಎಂದು ಅವರಿಗೆ ಅನ್ನಿಸುತ್ತಿರಲಿಲ್ಲ. ಆದರೆ ಕುವೆಂಪು ಅವರು ನಿಸರ್ಗದಲ್ಲಿ ಪ್ರತಿದಿನವೂ ಹೊಸತನ್ನು ಕಾಣುತ್ತಿದ್ದರು. ಪ್ರಕೃತಿಗೆ ಹತ್ತಿರವಾಗುತ್ತಿದ್ದರು. ಮಳೆಯೆಂದರೆ ಅವರ ಪಾಲಿಗೆ ಕೇವಲ ಮಳೆಯಲ್ಲ... ಅದು ದಿವ್ಯ ಶಕ್ತಿಗಳ ಅವತಾರ! 

"ಮುಂಗಾರು" ಕವನದಲ್ಲಿ ಮಳೆಯನ್ನು ಕಾಳಿಗೆ ಹೋಲಿಸಿದ್ದರೆ, "ವರ್ಷಭೈರವ" ಕವನದಲ್ಲಿ ಮಳೆಯನ್ನು ರುದ್ರನಿಗೆ ಹೋಲಿಸಿದ್ದಾರೆ.‌ ಒಂದೇ ವಸ್ತುವಿನ ಮೇಲೆ ಬೇರೆ ಬೇರೆ ಕವನಗಳನ್ನು ರಚಿಸಿರುವುದು ಕವಿಯ ವೈಶಿಷ್ಟ್ಯವಾಗಿದೆ.

"ಮಾಗಿ ಬರುತಿದೆ" ಕವನದಲ್ಲಿ ಮಾಗಿಯನ್ನು ಮುದುಕನಿಗೆ ಹೋಲಿಸಲಾಗಿದೆ.

1) ನೋಡು ನೋಡು ಕುಳಿರ ಬೀಡು
     ಮಾಗಿ ಬರುತಿದೆ
     ಹಲ್ಲು ಕಡಿದು ಮುಷ್ಠಿ ಹಿಡಿದು
     ಸೆಟೆದು ಬರುತಿದೆ.

ಭಾವಾರ್ಥ: 
ಇಲ್ಲಿ ಚಳಿಯನ್ನು ಮುದಿಕುರುಬನಿಗೆ  ಹೋಲಿಸಲಾಗಿದೆ. ವಸಂತವನ್ನು ನಿಸರ್ಗದ  ಯೌವ್ವನ ಎನ್ನುವುದಾದರೆ, ಶಿಶಿರವನ್ನು ವೃದ್ಧಾಪ್ಯ ಎನ್ನಬೇಕಾಗುತ್ತದೆ.‌ ಏಕೆಂದರೆ ಮನುಷ್ಯ ಮತ್ತು ನಿಸರ್ಗ ಇಬ್ಬರಿಗೂ ಮಾಗಿಯು ಚಳಿ, ನಡುಕ ಮತ್ತು ನಿರುತ್ಸಾಹವನ್ನು ಹುಟ್ಟಿಸುತ್ತದೆ. ಇಲ್ಲಿ ಚಳಿಯನ್ನು ಮುದಿಕುರುಬನಿಗೆ ಹೋಲಿಸಲಾಗಿದೆ. ವಸಂತವನ್ನು ನಿಸರ್ಗದ ಯೌವ್ವನ ಎನ್ನುವುದಾದರೆ, ಶಿಶಿರವನ್ನು ವೃದ್ಧಾಪ್ಯ ಎನ್ನಬೇಕಾಗುತ್ತದೆ.‌ ಏಕೆಂದರೆ ಮನುಷ್ಯ ಮತ್ತು ನಿಸರ್ಗ ಇಬ್ಬರಿಗೂ ಮಾಗಿಯು ಚಳಿ, ನಡುಕ ಮತ್ತು ನಿರುತ್ಸಾಹವನ್ನು ಹುಟ್ಟಿಸುತ್ತದೆ. 

* ಲತೆ-ಹೂವು ಕುರಿತ ಗೀತಗಳು:

ಪ್ರಕೃತಿಯ ಸಣ್ಣ-ಪುಟ್ಟ ವಸ್ತುಗಳನ್ನೂ ಬಿಡದೇ ಕವಿತೆಯಾಗಿಸಿದ್ದಾರೆ ಎನ್ನುವುದಕ್ಕೆ ಲತೆ-ಹೂವುಗಳನ್ನು ಕುರಿತ ಕವನಗಳೇ ಸಾಕ್ಷಿ. ಮನುಷ್ಯಲೋಕದ ನಟಿ ಮತ್ತು ಲತೆಯನ್ನು ಸೇರಿಸಿ 'ಲತಾನಟಿ' ಎಂಬ ಅದ್ಭುತ ರೂಪಕ ಮಾಡಿದ್ದಾರೆ ಕುವೆಂಪು. 

ಕುವೆಂಪು ಅವರು ಪ್ರಕೃತಿಯಲ್ಲಿ ಚೈತನ್ಯವನ್ನು ಕಾಣುತ್ತಾರೆ. ಆ ಚೈತನ್ಯ ಅವರಿಂದ ಹೊರಹರಿದು ಪ್ರಕೃತಿಯನ್ನು ಆಧ್ಯಾತ್ಮೀಕರಿಸುತ್ತದೆ. ಹೀಗೆ ರೂಪಾಂತರಗೊಂಡ ಪ್ರಕೃತಿ ಮತ್ತೆ ಕವಿಯ ಹೃದಯ ಪ್ರವೇಶಿಸುತ್ತದೆ.

"ಗುಲಾಬಿ" ಕವನದಲ್ಲಿ ಮನ್ಮಥ ರತಿಗೆ ಮುತ್ತನ್ನಿಟ್ಟಾಗ, ರತಿಗೆ ದಂತಕ್ಷಯವಾಗಿ ಉದುರಿದ ರಕ್ತದ ಹನಿಯೇ ಗುಲಾಬಿಯಾಯ್ತು ಎಂಬ ಮೋಹಕ ಕಲ್ಪನೆ ತರುತ್ತಾರೆ.

ಎಲ್ಲರಿಂದಲೂ ನಿಕೃಷ್ಟಕ್ಕೊಳಗಾದ "ಹೀರೆಯ ಹೂ" ಬಗ್ಗೆಯೂ ಕವನ ಬರೆಯುತ್ತಾರೆ.‌ ಹೀರೆಯ ಹೂವನ್ನು ದೇವರ ಮುಡಿಗೇರಿಸುವುದಿಲ್ಲ, ತರುಣಿಯರು ಮುಡಿಯುವುದಿಲ್ಲ. ಆದರೂ ಪ್ರಕೃತಿ ಧರ್ಮದಂತೆ ಹೂ ಕಾಯಾಗುತ್ತದೆ. ಜನರು ಅದನ್ನು ತಿಂದು ಹೊಟ್ಟೆತುಂಬಿಸಿಕೊಳ್ಳುತ್ತಾರೆ.‌ ಇಲ್ಲಿ ಹೀರೆಯ ಹೂವಿನ ಸಾರ್ಥಕತೆಯ ಜೊತೆಗೆ ಮನುಷ್ಯನ ಸ್ವಾರ್ಥವನ್ನು, ಅವನ ಪ್ರಯೋಜನಪರ ದೃಷ್ಟಿಯನ್ನು ಹೇಳಿದ್ದಾರೆ.

* ಪಕ್ಷಿಗಳನ್ನು ಕುರಿತ ಗೀತೆಗಳು:


ಮಲೆನಾಡಿನಲ್ಲಿ ಕುವೆಂಪು ಅವರನ್ನು ಆಕರ್ಷಿಸಿದ ಮತ್ತೊಂದು ಸಂಗತಿ ಎಂದರೆ ಪಕ್ಷಿಲೋಕ. 
ಹಕ್ಕಿಯ ಟುವ್ವಿ ಅವರಿಗೆ ಸ್ವರ್ಗದ ಬಾಗಿಲಿನಂತೆ ಕಾಣುತ್ತದೆ.‌ ಕೋಗಿಲೆಯ ಕುಹೂ ಗಾನ ಅವರಿಗೆ ಬಾಲ್ಯವನ್ನು ನೆನಪಿಸುತ್ತದೆ. ಕೋಗಿಲೆಯ ಧ್ವನಿಯನ್ನು ಇಂಗ್ಲೀಷಿಗೆ ತರ್ಜುಮೆ ಮಾಡಿದರೆ ನೊಬೆಲ್ ಬರುತ್ತದೆ ಎನ್ನುತ್ತಾರೆ ಕವಿಗಳು.

1) ಓ ವ್ಯಾಧನೆ
     ನಿನಗೆ ಇಲ್ಲಿ‌ ಪ್ರವೇಶವಿಲ್ಲ
     ಇದು ಪಕ್ಷಿಕಾಶಿ


ಭಾವಾರ್ಥ
: 
ಪಕ್ಷಿಕಾಶಿ ಎಂಬುದು ಅದ್ಭುತವಾದ ಪದಪ್ರಯೋಗ. ಇಲ್ಲಿ ವ್ಯಾಧನಾದವನಿಗೆ ಪ್ರವೇಶವಿಲ್ಲ. ಬಾಣ ಪ್ರಯೋಗ ಮಾಡುವಂತಿಲ್ಲ. ಅಂತೆಯೇ ಕವನ  ಪಕ್ಷಿಕಾಶಿಯಲ್ಲಿ ಬಂದವನು ಬೇಡನಾದರೆ ಅವನಿಗೆ ಪ್ರವೇಶವಿಲ್ಲ. ಕವಿಕೃತಿಯಲ್ಲಿ  ಕೇವಲ ದೋಷಾರೋಪಣೆ ಮಾಡುವವರು ವ್ಯಾಧನಿದ್ದಂತೆ ಎಂಬುದು ಕವಿಯ  ಅಭಿಪ್ರಾಯ.


ಉಪಸಂಹಾರ:

ಕುವೆಂಪು ಅವರ ಕವಿತೆಗಳಲ್ಲಿ ಸೂರ್ಯೋದಯ ಗೀತೆಗಳು ಹೆಚ್ಚಿವೆ.‌ ಒಂದೊಂದರಲ್ಲಿಯೂ‌ ಕಂಡ ದೃಶ್ಯಗಳು ಬೇರೆ, ಸ್ಫೂರ್ತಿಗೊಂಡ ಭಾವಗಳು ಬೇರೆ, ತೃಪ್ತಿಗೊಂಡ ಅನುಭವಗಳು ಬೇರೆ. ಕುವೆಂಪುರವರು ಜಡ-ಚೈತನ್ಯಗಳ ನಡುವಿನ ವ್ಯತ್ಯಾಸವನ್ನು ಹೇಳುತ್ತಲೇ ಅವುಗಳ ನಡುವಿನ ಸಾಮ್ಯವನ್ನೂ ಹೇಳಬಲ್ಲವರು. ಹೀಗಾಗಿ ಅವರ ಅದ್ವೈತ ಕಲ್ಪನೆ ಏಕಕಾಲದಲ್ಲಿ ಆಧ್ಯಾತ್ಮವೂ ಹೌದು. ಕುವೆಂಪು ಅವರ ಕವನಗಳಲ್ಲಿ ಎದ್ದು ಕಾಣುವ ಅಂಶವೆಂದರೆ ಸೌಂದರ್ಯ ಮತ್ತು ಚೈತನ್ಯ. ಪ್ರಕೃತಿಯ ಸೌಂದರ್ಯದಿಂದ ಆನಂದ ಮತ್ತು ಚೈತನ್ಯದಿಂದ ಶಕ್ತಿ ದೊರಕುತ್ತದೆ ಎನ್ನುವುದು ಕವಿಯ ನಂಬಿಕೆ.


****ಕುವೆಂಪುರವರ ಪಕ್ಷಿಕಾಶಿ ಕವನ ಸಂಕಲನದ ವೈಶಿಷ್ಟ್ಯಗಳನ್ನು ಚರ್ಚಿಸಿ****


**********
ಕೆ.ಎ.ಸೌಮ್ಯ
ಮೈಸೂರು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)