ನವೋದಯ ಕಾವ್ಯದ ಸ್ವರೂಪ ಮತ್ತು ಲಕ್ಷಣಗಳು


ಪೀಠಿಕೆ:

ಇಂಗ್ಲೀಷ್ ಸಾಹಿತ್ಯದಿಂದ ಪ್ರಭಾವಗೊಂಡು ಹುಟ್ಟಿದ ಹೊಸ ಸಾಹಿತ್ಯ ಪ್ರಕಾರಕ್ಕೆ 'ನವೋದಯ' ಸಾಹಿತ್ಯ ಎಂದು ಕರೆಯಲಾಗಿದೆ. ದಾಖಲಾತಿಯ ಕಾರಣಕ್ಕೆ ಬಿ.ಎಂ.ಶ್ರೀ ಅವರ 'ಇಂಗ್ಲೀಷ್ ಗೀತಗಳು' ಕವನ ಸಂಕಲನವನ್ನು ಆಧುನಿಕ ಕನ್ನಡ ಸಾಹಿತ್ಯದ ಮೊದಲ ಘಟ್ಟವಾದ 'ನವೋದಯದ' ಪ್ರಾತಿನಿಧಿಕ ಕವನ ಸಂಕಲನವೆಂದು ಪರಿಗಣಿಸಲಾಗಿದೆ.

ಈ ಮೂಲಕ ಬಿ.ಎಂ.ಶ್ರೀ ಅವರನ್ನು ನವೋದಯದ ಹರಿಕಾರ ಎಂದು ಗುರುತಿಸಲಾಗಿದೆ.

ಬಿ.ಎಂ.ಶ್ರೀ-----> ನವೋದಯದ ಹರಿಕಾರ.

ಇಂಗ್ಲೀಷ್ ಗೀತಗಳು:

ಇಂಗ್ಲೀಷ್ ಗೀತಗಳು  ಆಧುನಿಕ ಕನ್ನಡ ಸಾಹಿತ್ಯಕ್ಕೆ ಒಂದು ಸ್ಪಷ್ಟವಾದ ಮಾದರಿಯ ಮಾರ್ಗವನ್ನು ತೋರಿಸಿತು ಎನ್ನಬಹುದು. ಆಗ ಆ ಮಾರ್ಗದ ಅವಶ್ಯಕತೆಯೂ ಇತ್ತು.

'ಇಂಗ್ಲೀಷ್ ಗೀತಗಳು' ಕವನ ಸಂಕಲನದಲ್ಲಿನ ಕವನಗಳು ಇಂಗ್ಲೀಷ್ ಸಾಹಿತ್ಯದ ಅನುವಾದ ಅನ್ನುವುದಕ್ಕಿಂತ ಪ್ರೇರಣೆ ಪಡೆದು ರಚಿಸಿದ ಕವನಗಳು ಎನ್ನಬಹುದು. ಆದರೆ ಅವುಗಳಿಗೆ ಪ್ರೇರಣೆಯಾಗಿ ಪಡೆದಿದ್ದು ಪ್ರಸಿದ್ಧರ ಕವನಗಳನ್ನಲ್ಲ.

ಬಿ.ಎಂ.ಶ್ರೀ ಅವರ ಪ್ರಕಾರ ಅವರ ಉದ್ದೇಶ ಇದ್ದಿದ್ದು ಇಷ್ಟೇ.

ಇಂಗ್ಲೀಷಿನಿಂದ ಪ್ರೇರಣೆ ಪಡೆದು ಕನ್ನಡದಲ್ಲಿ ಹೊಸ ಸಾಹಿತ್ಯ ಪ್ರಕಾರವನ್ನು ಸೃಜಿಸುವುದು. ಅದನ್ನು "ಇಂಗ್ಲೀಷ್ ಗೀತಗಳು" ಯಶಸ್ವಿಯಾಗಿ ಮಾಡಿತು.

ಭಾಷೆಯ ಶೈಲಿ, ಕಥಾವಸ್ತು, ಛಂದಸ್ಸು ಮೊದಲಾದ ವಿಷಯಗಳಲ್ಲಿ ಹೊಸ ಸಂಗತಿಗಳನ್ನು ಪ್ರಸ್ತಾಪಿಸಿತು‌.

ಇದು ಕವಿ ಮತ್ತು ಓದುಗನ ನಡುವೆ ಹೊಸ ಕ್ರಾಂತಿಯನ್ನೇ ಉಂಟು ಮಾಡಿತು. ಆ ಮೂಲಕ‌ ಕವಿಯಾದವನು ಎತ್ತರದಲ್ಲಿ, ಅಂತರದಲ್ಲಿ ಪಂಡಿತನಾಗಿ ಉಳಿಯದೇ ಜನಸಾಮಾನ್ಯರ ಜೊತೆ ಪ್ರೀತಿ, ಸ್ನೇಹ, ಸೌಹಾರ್ದತೆಯಿಂದ ಮಧುರ ಬಾಂಧವ್ಯ ಸೃಷ್ಟಿಸಿಕೊಳ್ಳುವಂತಾದನು. ಆಗ ಅಂತಹ ಪ್ರಯೋಗಕ್ಕೆ ಈ ಯಶಸ್ಸು ಮುಖ್ಯವಾಗಿದ್ದಿತು.

ಭಾಷೆ ಸರಳವಾಗುತ್ತಾ ಜನಸಾಮಾನ್ಯರ ಬಳಿ ಸಾಗಿತ್ತು.

ಒಟ್ಟಿನಲ್ಲಿ 'ಇಂಗ್ಲೀಷ್ ಗೀತಗಳು' ಕನ್ನಡ ಸಾಹಿತ್ಯಕ್ಕೆ ಪ್ರಯೋಗದ ಹೆದ್ದಾರಿಯನ್ನೇ ತೆರೆಯಿತು.

ಆದರೆ ಆಗಲೇ ಗಮನಿಸಿದಂತೆ 'ನವೋದಯ' ಸಾಹಿತ್ಯ ಪರಂಪರೆ ದಿಢೀರನೆ ಆರಂಭವಾದುದಲ್ಲ. ಅದರ ಹಿಂದೆ ಭಾರತೀಯ ಸಾಹಿತ್ಯ ಮತ್ತು ಪಂಪನಿಂದ ಆರಂಭಗೊಂಡ ಕನ್ನಡ ಸಾಹಿತ್ಯದ ಪ್ರಭಾವ, ಹಿನ್ನಲೆ ಮತ್ತು ಪ್ರೇರಣೆಗಳಿದ್ದವು.


"ಕಾವ್ಯದ ವಸ್ತುವು ವಸ್ತುನಿಷ್ಟೆಯಿಂದ ವ್ಯಕ್ತಿನಿಷ್ಟೆಯೆಡೆಗೆ ಸಾಗಿತ್ತು"

ಈ ವ್ಯಕ್ತಿನಿಷ್ಠ ಸಾಹಿತ್ಯವು ನೇರವಾಗಿ ಇಂಗ್ಲೀಷ್ ಸಾಹಿತ್ಯದಿಂದ ಪ್ರೇರಣೆ ಪಡೆದಿತ್ತು. ಸಾಹಿತ್ಯ ಯಾವಾಗ ವ್ಯಕ್ತಿನಿಷ್ಠವಾಯಿತೋ ಮನುಷ್ಯನ ಎಲ್ಲ ಭಾವನೆಗಳೂ ಸಾಹಿತ್ಯದಲ್ಲಿ ದಾಖಲಾಗತೊಡಗಿತು. ಪ್ರೀತಿ, ಸ್ನೇಹ, ಕೋಪ, ದ್ವೇಷ ಎಲ್ಲವೂ ಕಾವ್ಯದ ವಸ್ತುಗಳಾಗತೊಡಗಿದವು.

ಇಂದ್ರಿಯ ಗ್ರಹಿಸುವಂತಹ ವಿಷಯಗಳಿಂದ ಹಿಡಿದು, ಇಂದ್ರಿಯಾತೀತ ಎಂದರೆ ಕನಸು-ಕಲ್ಪನೆಗಳೂ ಸಾಹಿತ್ಯದಲ್ಲಿ ಸ್ಥಾನ ಪಡೆಯತೊಡಗಿದವು‌. ಇದೊಂದು ಮಹತ್ತರ ಬದಲಾವಣೆ.


ಬದುಕಿನ ಕುರಿತಾಗಿ ನವ್ಯದ ಚಿಂತನೆ:

ಈಗಾಗಲೇ ನಮ್ಮ ಪ್ರಾಚೀನ ಧರ್ಮಗಳು ಬದುಕನ್ನು‌ ದೇವರ-ದೈವದ ಅಧೀನಕ್ಕೆ ಒಪ್ಪಿಸಿಬಿಟ್ಟಿದ್ದವು. ಬದುಕನ್ನು ಒಂದು ಸಿದ್ಧಪಡಿಸಿಟ್ಟ ಮಾದರಿಯಲ್ಲಿ ನೋಡಲಾಗುತ್ತಿತ್ತು. ಆದರೆ ನವೋದಯದ ಸಂದರ್ಭದಲ್ಲಿ ಬದುಕೆಂದರೆ ಅರ್ಥೈಸುವಂಥದ್ದು, ಸ್ವೀಕರಿಸಿ ಎದುರಿಸುವಂಥದ್ದು ಎಂಬ ಹತ್ತಾರು ಒಳನೋಟಗಳು ಲಭ್ಯವಾದವು. "ಬಾಳು ಸ್ವೀಕಾರಾರ್ಹ" ಎಂದು ಕಂಡುಕೊಂಡ ಮೇಲೆ ಪರಿಪೂರ್ಣ ಮನುಷ್ಯನಾಗುವತ್ತ ಹುಡುಕಾಟ ಮುಂದುವರೆಯಿತು.

ಅದರ ಜೊತೆಗೆ ಈಗಾಗಲೇ ಇದ್ದ ಬದುಕನ್ನು ಸಹ್ಯಗೊಳಿಸಿಕೊಳ್ಳುವುದರ ಹುಡುಕಾಟವೂ ನಡೆಯಿತು. ಅದಕ್ಕಾಗಿ ತಾಯಿ, ತಂದೆ, ನಾಡು, ನುಡಿಗಳ ಎಲ್ಲಾ ವಸ್ತುಗಳ ಮೇಲೆ ಕವನ ರಚಿಸಲಾರಂಭಿಸಿದರು. ಬದುಕು ಎನ್ನುವುದನ್ನು ಹೊಸ ದೃಷ್ಟಿಕೋನದಿಂದ ನೋಡಲು ಸಾಧ್ಯವಾಯ್ತು.


ನವ್ಯದಲ್ಲಿ ರಾಷ್ಟ್ರೀಯತೆಯ ಚಿಂತನೆ: 

ಕವನಗಳಿಗೆ "ರಾಷ್ಟ್ರೀಯತೆ"ಯೇ ಅಂದಿನ ಪ್ರಧಾನ ವಸ್ತುವಾಗಿತ್ತು. ಏಕೆಂದರೆ "ದೇಶಭಕ್ತಿ" ಎನ್ನುವುದು ಎಲ್ಲಾ ಕವನಗಳ ಮೂಲಾಂಶವಾಗಿತ್ತು. ಈ ನಿಟ್ಟಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ನವೋದಯ ಸಲ್ಲಿಸಿದ ಸೇವೆ ಮಹತ್ವದ್ದಾಗಿದೆ. ಕವಿಗಳು ಏಕಕಾಲಕ್ಕೆ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ಎರಡರ ಪ್ರಜ್ಞೆಯನ್ನು ಕಂಡುಕೊಂಡು ಕವನ ರಚಿಸಿದರು.‌


ನವ್ಯದಲ್ಲಿ ಆಧ್ಯಾತ್ಮಿಕತೆಯ ಚಿಂತನೆ: 

ಅದೇ ರೀತಿ ಆಧ್ಯಾತ್ಮಿಕತೆಯೂ ನವೋದಯದ ಮತ್ತೊಂದು ಅಂಶವಾಗಿತ್ತು. ಇದು ಸಹ ಈಗಾಗಲೇ ನಮ್ಮ ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಬೆಳೆದು ಬಂದಿದ್ದರೂ, ನವೋದಯದ ಸಂದರ್ಭದಲ್ಲಿ ಬೇರೆಯದೇ ರೀತಿಯಲ್ಲಿ ಗಮನಿಸಲಾಯ್ತು. ದೇವರೊಬ್ಬನಿದ್ದಾನೆ ಎಂದರೆ ಈ ಪ್ರಪಂಚವನ್ನು ನಿಯಂತ್ರಿಸುವ ಶಕ್ತಿಯೊಂದಿದೆ ಎಂಬ ನಂಬಿಕೆಯೊಂದಿಗೆ, ಆ ದೇವರೊಂದಿಗೆ ಮನುಷ್ಯನ ಸಂಬಂಧ, ಭಕ್ತಿ, ಅರ್ಪಣೆ, ಅಂತರಂಗದ ಶೋಧ ಮುಂತಾದ ಹತ್ತು ಹಲವು ವಿಷಯವನ್ನು ಆಧ್ಯಾತ್ಮದಿಂದ ಆಧರಿಸಿ ನವೋದಯದ ಕಾಲದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕವನಗಳು ಸೃಷ್ಟಿಯಾದವು.

ಮನುಷ್ಯ ಒಳ್ಳೆಯವನಾಗುವುದಕ್ಕೆ ಮತ್ತು ಒಳ್ಳೆಯ ಜೀವನ ನಡೆಸುವುದಕ್ಕೆ ಈ ನಂಬಿಕೆಗಳು ಮುಖ್ಯವಾಗಿದ್ದವು. ನಮ್ಮ ಪ್ರಾಚೀನ ಧರ್ಮಗಳೂ, ಪುರಾಣಗಳೂ ಮತ್ತು ಧಾರ್ಮಿಕ ಕಾವ್ಯಗಳ ಮೂಲಕ‌ ಇಂತಹಾ ನಂಬಿಕೆಯನ್ನು ಪೋಷಿಸಿತ್ತು ಎನ್ನುವುದು ಗಮನಾರ್ಹ ಸಂಗತಿ.



ಕುಟುಂಬ ವ್ಯವಸ್ಥೆಯ ಕುರಿತಾದ ಚಿಂತನೆ:

ಭಾರತದಲ್ಲಿ ಕುಟುಂಬ ವ್ಯವಸ್ಥೆಯಿಂದಲೇ ರೂಪುಗೊಂಡಿರುವುದು ಸಮಾಜ ಜೀವನ.‌ ಇಲ್ಲಿ ಗಂಡು-ಹೆಣ್ಣಿನ ನಡುವಿನ ಸಂಬಂಧವನ್ನು ಕೇವಲ‌ ಒಪ್ಪಂದ ಎಂದಾಗಲೀ, ಕರಾರು ಎಂದಾಗಲೀ ನೋಡಲು ಸಾಧ್ಯವಿಲ್ಲ.

ಅದಕ್ಕೆ ಮದುವೆ ಎಂಬ ಚೌಕಟ್ಟಿದೆ‌.

ಇದು ಸರಿ-ಇದು ತಪ್ಪು ಎಂಬ ಸಿದ್ಧ ಸೂತ್ರಗಳಿವೆ. ಇಂತಹಾ ಗಂಡು-ಹೆಣ್ಣಿನ ನಡುವಿನ ಸಂಬಂಧವನ್ನು ಬಲಪಡಿಸುವಂತಹಾ "ಒಲವಿನ ಗೀತೆಗಳು" ನವೋದಯದ ಕಾಲದಲ್ಲಿ ಸೃಷ್ಟಿಯಾದವು.



ನವ್ಯದಲ್ಲಿ ಪ್ರೇಮದ ಕಲ್ಪನೆ:

"ಪ್ರೇಮ" ಎಂಬ ವಸ್ತು ಕಾಲ, ದೇಶ, ಪರಿಸರಗಳನ್ನು ಮೀರಿದುದರಿಂದ ಅದು ಸಾರ್ವಕಾಲಿಕ ಸಹೃದಯ ಪ್ರಿಯ ವಿಷಯವಾಗಿದ್ದು, ನವೋದಯದ ಕಾಲದಲ್ಲಿ ತನ್ನ ಉತ್ಕರ್ಷವನ್ನು ಕಂಡುಕೊಂಡಿತು.


"ಒಟ್ಟಿನಲ್ಲಿ ನವೋದಯವು ಕನ್ನಡ ಸಾಹಿತ್ಯ ಪರಂಪರೆಗೆ ಹೊಸ ಆಯಾಮವನ್ನು ನೀಡಿತು"


ಉಪಸಂಹಾರ:

ಈ ಬದಲಾವಣೆಗಳನ್ನು ಓದುಗರು ಮುಕ್ತವಾಗಿ ಸ್ವಾಗತಿಸಿದರು. ಚರ್ಚಿಸಿದರು. ಮತ್ತಷ್ಟು ಪ್ರಯೋಗಗಳಿಗೆ ಉತ್ತೇಜನ ನೀಡಿದರು. ಕವಿಗಳಿಗೆ ಹೇಗೋ, ಹಾಗೆಯೇ ಓದುಗರಿಗೂ ಇದು ಹೊಸ ಸಾಧ್ಯತೆಯಾಗಿತ್ತು. ಕುತೂಹಲದ ವಿಷಯವಾಗಿತ್ತು. ಇದರ ಫಲವಾಗಿ ಅನೇಕ ಕವಿಗಳ ಕವನಗಳು ಓದುಗರ ನಾಲಿಗೆಯಲ್ಲಿ ನಲಿದಾಡತೊಡಗಿದವು. ಕವಿ ಮತ್ತು ಓದುಗರ ನಡುವೆ ಒಂದು ವಿಶೇಷ ಬಾಂಧವ್ಯ ನವೋದಯದ ಕಾಲದಲ್ಲಿ ಬೆಳೆಯಿತು.

*********
ಕೆ.ಎ.ಸೌಮ್ಯ
ಮೈಸೂರು


(ಕನ್ನಡ ನವೋದಯ ಕಾವ್ಯದ ಸ್ವರೂಪವನ್ನು ಕುರಿತು ವಿವರಿಸಿ- ಎಂ.ಎ.ಕನ್ನಡ)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)