ಜಿ.ಎಸ್.ಶಿವರುದ್ರಪ್ಪ ರವರ ಭಾರತೀಯ ಕಾವ್ಯ ಮೀಮಾಂಸೆ (ಎಂ.ಎ.ಕನ್ನಡ)

ಭಾರತೀಯ ಕಾವ್ಯ ಮೀಮಾಂಸೆ

ಕವಿ-ಕಾವ್ಯ-ಸಹೃದಯ ವಿಚಾರವನ್ನು ಕುರಿತ ಚರ್ಚೆಯನ್ನು "ಕಾವ್ಯ ಮೀಮಾಂಸೆ" ಎಂದು ಕರೆಯಲಾಗಿದೆ.

ಮೀಮಾಂಸೆ ಎಂದರೆ ಚಿಂತನೆ-ಚರ್ಚೆ ಎಂದರ್ಥ.

ಆದರೆ "ಕಾವ್ಯ ಮೀಮಾಂಸೆ" ಎಂಬ ಮಾತು ಬಳಕೆಗೆ ಬಂದದ್ದು ತೀರಾ ಇತ್ತೀಚೆಗೆ. ಅಂದರೆ ಸುಮಾರು 9 ನೇ ಶತಮಾನದ ವೇಳೆಗೆ. ಕಾವ್ಯ ವಿಚಾರವನ್ನು ಕುರಿತ ಚರ್ಚೆಗೆ ಕಾವ್ಯ ಮೀಮಾಂಸೆ ಎಂಬ ಹೆಸರು ಕಾಣಿಸಿಕೊಳ್ಳುವುದು "ರಾಜಶೇಖರ" ನಲ್ಲಿ. ಅವನ ಕೃತಿಯ ಹೆಸರೇ ಕಾವ್ಯ ಮೀಮಾಂಸೆ.

ರಾಜಶೇಖರನ ಕೃತಿಯ ಹೆಸರು-----> ಕಾವ್ಯಮೀಮಾಂಸೆ.

ಇಂದು ಕಾವ್ಯಮೀಮಾಂಸೆಯನ್ನು ಇಂಗ್ಲೀಷಿನ Poetics ಪದಕ್ಕೆ ಸಂವಾದಿಯಾಗಿ ಬಳಸಲಾಗುತ್ತಿದೆ.

ಆದರೆ ಇದಕ್ಕೂ ಮೊದಲಿನ‌ ಕಾವ್ಯ ಶಾಸ್ತ್ರಕ್ಕೆ "ಅಲಂಕಾರ ಶಾಸ್ತ್ರ" ಎಂದೇ ಹೆಸರಿತ್ತು.

ಉದಾ:

"ಭಾಮಹ" ನ ಕೃತಿ------> ಕಾವ್ಯಾಲಂಕಾರ
"ವಾಮನ" ನ ಕೃತಿ-------> ಕಾವ್ಯಾಲಂಕಾರ ಸೂತ್ರ
"ರುದ್ರಟ"ನ ಕೃತಿ----------> ಕಾವ್ಯಾಲಂಕಾರ.

ಇದಕ್ಕೆ ಹಿಂದಿನ ಶಾಸ್ತ್ರಕಾರರಿಗೆ ಕಾವ್ಯದ ಬಗ್ಗೆ ಇದ್ದ ಕಲ್ಪನೆಯೇ ಕಾರಣ ಎನ್ನಬಹುದು. "ಕಾವ್ಯ" ಎಂದರೆ ಒಂದಲ್ಲ ಒಂದು ಬಗೆಯ ಅಲಂಕಾರದಿಂದ ಅಥವಾ ಉಕ್ತಿ ವೈಚಿತ್ರದಿಂದ ಕೂಡಿರುವಂಥದ್ದು ಎಂದು ಭಾವಿಸಿದ್ದರು. ಅಲ್ಲದೇ ಕಾವ್ಯವು ಅಲಂಕಾರದಿಂದಲೇ ಗ್ರಾಹ್ಯವಾಗುತ್ತದೆ ಎಂದು ತಿಳಿದಿದ್ದರು. ಹಾಗಾಗಿ ಕಾವ್ಯದ ಚರ್ಚೆಯನ್ನು ಒಳಗೊಳ್ಳುವ ಗ್ರಂಥಕ್ಕೆ "ಅಲಂಕಾರ ಶಾಸ್ತ್ರ" ಎಂದು ಕರೆದರೆ ಪರಿಮಿತವಾಗುತ್ತದೆ ಎಂದು ಯೋಚಿಸಿ "ಕಾವ್ಯ ಮೀಮಾಂಸೆ" ಎಂದು ಕರೆಯಲಾಯಿತು.

ಸಂಸ್ಕೃತದಲ್ಲಿ ಸಾಹಿತ್ಯ:

ಸಂಸ್ಕೃತದಲ್ಲಿ "ಸಾಹಿತ್ಯ" ಎಂಬ ಪದಕ್ಕೇ ಸಾಹಿತ್ಯವನ್ನು ಕುರಿತ ಚರ್ಚೆ ಎಂಬರ್ಥವಿದೆ. ಅಂದಿನ ಕಾಲದಲ್ಲಿ "ಸಾಹಿತ್ಯ" ಎಂಬುದು ವಿಶಾಲಾರ್ಥದಲ್ಲಿ ಬಳಕೆಯಾಗುತ್ತಿರಲಿಲ್ಲ. ಕಾವ್ಯ, ನಾಟಕಗಳು ಸಾಹಿತ್ಯದ ಬೇರೆ ಬೇರೆ ಪ್ರಕಾರಗಳು ಎಂದು ನಾವು ಭಾವಿಸಿರುವ ಹಾಗೆ ನಮ್ಮ ಹಿಂದಿನವರು ಭಾವಿಸಿರಲಿಲ್ಲ. ಅವರಿಗೆ "ಸಾಹಿತ್ಯ" ಮತ್ತು "ಕಾವ್ಯ" ಎರಡೂ ಸಮಾನಾಂತರವಾಗಿಯೇ ಇತ್ತು. ನಾಟಕವನ್ನೂ ಸಹ ಕಾವ್ಯ ಎಂದೇ ತಿಳಿಯಲಾಗಿತ್ತು. "ಕಾವ್ಯೇಷು ನಾಟಕಂ ರಮ್ಯಂ" ಎಂಬ ಉಕ್ತಿಯನ್ನು ಗಮನಿಸಿ. ಕಾಳಿದಾಸ, ಶ್ರೀಹರ್ಷ ಮೊದಲಾದ ನಾಟಕಕಾರರನ್ನು ಕವಿಗಳೆಂದೇ ಹೇಳಲಾಗಿದೆ.

ಪಾಶ್ಚಿಮಾತ್ಯ ಕಾವ್ಯ ಮೀಮಾಂಸೆ:

ಭಾರತೀಯ ಕಾವ್ಯ ಮೀಮಾಂಸೆಗಿಂತಲೂ ಪಾಶ್ಚಿಮಾತ್ಯ ಕಾವ್ಯ ಮೀಮಾಂಸೆ ಬಹಳ ಪ್ರಾಚೀನವಾದದ್ದು‌. ಪ್ರಾಚೀನ ಗ್ರೀಕ್ ತತ್ತ್ವಶಾಸ್ತ್ರಜ್ಞರು ಕಾವ್ಯ ಮೀಮಾಂಸೆ್ಗೆಗೆ ತೊಡಗಿದಾಗ (ಕ್ರಿ.ಪೂ 4ನೆಯ ಶತಮಾನ) ಸೃಜನ ಕಲೆಗಳ ಉಚ್ಛ್ರಾಯ ಸ್ಥಿತಿ ದಾಟಿತ್ತು. ಪಾಶ್ಚಾತ್ಯ ಕಾವ್ಯ ಚಿಂತನೆ ಶುರುವಾದದ್ದು ಕಾವ್ಯಗಳ ನಿರಾಕರಣೆಯಿಂದ.

ಪ್ಲೇಟೋನ ವಿಚಾರಧಾರೆ:

ಕಾವ್ಯವನ್ನು ಯಾಕೆ ನಿರಾಕರಿಸಬೇಕು ಎನ್ನುವುದನ್ನು ಸಮರ್ಥಿಸುವಾಗ ಪ್ಲೇಟೋ ಉತ್ತಮ ಕವಿ ಎಂದರೆ ಯಾರು, ಉತ್ತಮ ಕಾವ್ಯದ ಲಕ್ಷಣಗಳೇನು ಎಂದು ಪ್ರತಿಪಾದಿಸುತ್ತಾ ಕಾವ್ಯಮೀಮಾಂಸೆಗೆ ಸಂಬಂಧಪಟ್ಟ ವಿಷಯವನ್ನು ಮಂಡಿಸುತ್ತಾನೆ.

ಮುಂದೆ ಪ್ಲೇಟೋನ ವಿಚಾರಧಾರೆಯ ನೆಲೆಗಟ್ಟಿನ ಮೇಲೆ ಕಾವ್ಯಮೀಮಾಂಸೆಗೆ ಸಂಬಂಧಪಟ್ಟ ಮೌಲಿಕವಾದ ಮತ್ತು ಮೊದಲ ಕೃತಿಯನ್ನು ಬರೆದವನು "ಅರಿಸ್ಟಾಟಲ್". ನಿಜವಾದ ಅರ್ಥದಲ್ಲಿ ಈತನೇ ಪಾಶ್ಚಿಮಾತ್ಯ ಕಾವ್ಯ ಮೀಮಾಂಸೆಯ ಪ್ರಥಮ ಪುರುಷ". ನಮ್ಮಲ್ಲಿ ಭರತಮುನಿ ಹೇಗೋ ಹಾಗೆ.‌

ಪಾಶ್ಚಿಮಾತ್ಯ ಕಾವ್ಯ ಮೀಮಾಂಸೆಯ ಪ್ರಥಮ ಪುರುಷ
                                      ------> "ಅರಿಸ್ಟಾಟಲ್"

ಅರಿಸ್ಟಾಟಲ್ ಕಾವ್ಯ ಮೀಮಾಂಸೆ ಮುಖ್ಯವಾಗಿ ರುದ್ರ ನಾಟಕವನ್ನು ಕುರಿತಾದದ್ದು‌. ಗ್ರೀಕರಲ್ಲಿ "ಕಾವ್ಯ" ತನ್ನ ಶಿಖರ ಸ್ಥಿತಿ ತಲುಪಿದ್ದು ರುದ್ರನಾಟಕದಲ್ಲಿಯೇ. ಸ್ವಾರಸ್ಯಕರ ಸಂಗತಿ ಎಂದರೆ ಭಾರತೀಯ ಕಾವ್ಯ ಮೀಮಾಂಸೆಯ ಆದಿಗ್ರಂಥವಾದ "ಭರತನ ನಾಟ್ಯ ಶಾಸ್ತ್ರ"ವೂ ಮೂಲತಃ ನಾಟಕವನ್ನು ಕುರಿತ ಚರ್ಚೆಯೇ ಆಗಿದೆ.

ಜಗತ್ತಿನ ಪ್ರಾಚೀನ ಸಂಸ್ಕೃತಿಯ ಎರಡು ಮುಖ್ಯ ಕೇಂದ್ರಗಳಾದ ಗ್ರೀಸ್ ಮತ್ತು ಭಾರತದಲ್ಲಿ ಕಾವ್ಯಮೀಮಾಂಸೆ ಪ್ರಾರಂಭವಾದದ್ದು ನಾಟ್ಯ ಮೀಮಾಂಸೆಯಿಂದ. ಅರಿಸ್ಟಾಟಲ್‌ ಕಾವ್ಯಮೀಮಾಂಸೆಯ ಉದ್ದೇಶ ಕಾವ್ಯತತ್ತ್ವವನ್ನು ವಿಶ್ಲೇಷಿಸುವುದಷ್ಟೇ ಆಗಿರದೇ, ಕೃತಿ ರಚನೆಗೆ ತೊಡಗುವವರಿಗೆ ಮಾರ್ಗದರ್ಶನ ಮಾಡುವುದೂ ಆಗಿದೆ. ಹಾಗೆಯೇ ಭರತನ ನಾಟ್ಯಶಾಸ್ತ್ರವು ನಾಟ್ಯ ಲಕ್ಷಣಗಳನ್ನು ವಿವರಿಸುವುದರ ಜೊತೆಗೆ ನಾಟಕವನ್ನು ಅಭಿನಯಿಸುವವರಿಗೆ ಮಾರ್ಗದರ್ಶನ ಮಾಡುತ್ತದೆ.

ಸಾಹಿತ್ಯವನ್ನು ಕುರಿತ ಚರ್ಚೆಗೆ Poetics ಎಂದು ಕರೆಯುವುದರ ಜೊತೆಗೆ Literary Criticism ಎಂಬ ಮಾತೂ ಸಹ ಬಳಕೆಯಲ್ಲಿದೆ. ಇದಕ್ಕೆ ಸಂವಾದಿಯಾಗಿ ನಮ್ಮಲ್ಲಿ "ಸಾಹಿತ್ಯ ವಿಮರ್ಶೆ" ಎಂದು ಬಳಸುತ್ತೇವೆ. ಸಾಮಾನ್ಯವಾಗಿ ಮೀಮಾಂಸೆ, ಚರ್ಚೆ, ವಿಮರ್ಶೆ ಈ ಎಲ್ಲವೂ ಸಮಾನ ಎಂದು ಭಾವಿಸಬಹುದಾದರೂ "ಕಾವ್ಯ ಮೀಮಾಂಸೆ" ಮತ್ತು "ಸಾಹಿತ್ಯ ವಿಮರ್ಶೆ" ಈ ಎರಡೂ ಭಾರತೀಯ ಸಂದರ್ಭದಲ್ಲಿ ಸ್ಪಷ್ಟವಾಗಿ ಗುರುತಿಸಬಲ್ಲ ಅರ್ಥ ವ್ಯತ್ಯಾಸವನ್ನು ಪಡೆದುಕೊಂಡಿದೆ.

ಭಾರತೀಯ ಪರಿಸರದಲ್ಲಿ ಅಲಂಕಾರ ಶಾಸ್ತ್ರವು "ಕಾವ್ಯಮೀಮಾಂಸೆ" ಆಯಿತೇ ಹೊರತೂ, ಪಾಶ್ಚಾತ್ಯರಂತೆ "ಸಾಹಿತ್ಯ ವಿಮರ್ಶೆ" ಎಂಬ ಪ್ರತ್ಯೇಕ ಶಾಖೆಯಾಗಿ ಬೆಳೆಯಲಿಲ್ಲ. ಭಾರತೀಯ ಪರಿಸರದಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಪಾಶ್ಚಾತ್ಯರ ಪ್ರೇರಣೆಯಿಂದ ಹುಟ್ಟಿಕೊಂಡ ಸಾಹಿತ್ಯ ವಿಮರ್ಶೆಯ ಪ್ರಯತ್ನಗಳೇ ಮೊಟ್ಟಮೊದಲನೆಯದು. "ಭಾಮಹ"ನಿಂದ ಹಿಡಿದು ಹತ್ತೊಂಭತ್ತನೇ ಶತಮಾನದವರೆಗೂ ನಡೆದ ಕಾವ್ಯ ಚರ್ಚೆ " ಕಾವ್ಯ ಮೀಮಾಂಸೆ"ಯ ಹಂತದಲ್ಲಿಯೇ ನಿಂತುಬಿಟ್ಟಿದೆ.

********
ಕೆ. ಎ. ಸೌಮ್ಯ
ಮೈಸೂರು
(ಎಂ. ಎ. ಕನ್ನಡ)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)