ಲೇಖನ: "ಸತ್ತವರನ್ನು ನೆನಪಿಸುವ ಹ್ಯಾಲೋವೀನ್ ಹಬ್ಬ"

ಜನರ ದೈನಂದಿನ ಅಥವಾ ವಿಶೇಷ ಆಚರಣೆಗಳು ದೇಶದಿಂದ-ದೇಶಕ್ಕೆ, ಪ್ರದೇಶದಿಂದ-ಪ್ರದೇಶಕ್ಕೆ ಬದಲಾಗುತ್ತದೆ. ಆದರೂ ಅವುಗಳ ಉದ್ದೇಶ ಮಾತ್ರ ಒಂದೇ ಇರುತ್ತದೆ. ಒಂದೇ ಆಚರಣೆಯನ್ನು ನಾವು ಹಲವು ರೀತಿಯಲ್ಲಿ ಆಚರಿಸುತ್ತೇವೆ. ಉದಾಹರಣೆಗೆ ಹೊಸವರ್ಷದ ಆಚರಣೆಯನ್ನು ತೆಗೆದುಕೊಂಡರೆ ಎಲ್ಲಾ ದೇಶದವರೂ, ಎಲ್ಲಾ ಧರ್ಮದವರೂ ಹೊಸವರ್ಷ ಆಚರಿಸುತ್ತಾರೆ. ಆದರೆ ಆಚರಿಸುವ ರೀತಿ ಮಾತ್ರ ಬೇರೆ ಬೇರೆಯಷ್ಟೇ. ಏಕೆಂದರೆ ನಾವೆಲ್ಲರೂ ಒಂದೇ ಮಾನವ ಜಾತಿಗೆ ಸೇರಿದ್ದೇವೆ. ಅರಿತೋ ಅರಿವಿಲ್ಲದೆಯೋ ವಿಶ್ವಾಂದ್ಯಂತ ನಮ್ಮ ಆಚರಣೆಗಳು ಸಮಾನತೆ ಹೊಂದಿವೆ. ಅದೇ ರೀತಿ ನಾವು ಮಹಾಲಯ ಅಮಾವಾಸ್ಯೆಯಲ್ಲಿ ಪಿತೃಗಳನ್ನು ನೆನೆಸಿಕೊಂಡ ಹಾಗೆ ಪಾಶ್ಚಾತ್ಯರೂ ಸಹ ಒಂದು ಆಚರಣೆ ಮೂಲಕ ಗತಿಸಿ ಹೋದ ತಮ್ಮ ಹಿರಿಯರನ್ನು ನೆನೆಸಿಕೊಳ್ಳುತ್ತಾರೆ. ಆ ಮೂಲಕ ತಮ್ಮ ಹಿರಿಯರ ಜೀವನ ವಿಧಾನವನ್ನು ತಮ್ಮ ಮಕ್ಕಳಿಗೆ ಪರಿಚಯಿಸುತ್ತಾರೆ. ಅದೇ "ಹ್ಯಾಲೋವೀನ್ ಹಬ್ಬ". ಅಕ್ಟೋಬರ್ ಮೂವತ್ತೊಂದರಂದು ಇದನ್ನು ಪ್ರಪಂಚದಾದ್ಯಂತ ಕೆಲವು ದೇಶಗಳಲ್ಲಿ ಆಚರಿಸಲಾಗುತ್ತದೆ. "ಹ್ಯಾಲೋವೀನ್"ನ ನಿಜವಾದ ಅರ್ಥ 'ಹ್ಯಾಲೋವ್ ಈವ್' ಎಂದರೆ 'ಸಂತರ ಸಾಯಂಕಾಲ' ಎಂದು. ಬೆಳಕಿನ ಅರ್ಧ ವರ್ಷ ಮುಕ್ತಾಯವಾದ ನಂತರ ಕತ್ತಲೆಯ ಅರ್ಧ ವರ್ಷ ಶುರುವಾಗುವ ಮೊದಲನೇ ದಿನ ಇದನ್ನು ಆಚರಿಸಲಾಗುತ್ತದೆ. ಈ ಆಚರಣೆ ಇದೀಗ ವಿಶ್ವದ ಗಮನ ಸೆಳೆದಿದೆ. ಭೂತಗಳ ವೇಷ: ಈ ಆಚರಣೆಯಲ್ಲಿ ಹಲವು ಸ್ವಾ...