"ಡ್ರಾಗನ್ ಫ್ಲೈ: ಶನಿಗ್ರಹದಲ್ಲೊಂದು ಸುತ್ತು" (Dragon fly Mission)




ಸದಾ ಹೊಸತನ್ನು ಹುಡುಕಾಡುವುದು ಮನುಷ್ಯನ ಲಕ್ಷಣಗಳಲ್ಲಿ ಒಂದು. ಹಾಗೆಯೇ ಕೈಗೆ ಸಿಕ್ಕ ವಸ್ತುವಿನ ಮೇಲೆ ನಿರ್ಲಕ್ಷ್ಯ ವಹಿಸಿ ಮತ್ತೆ ಹೊಸದನ್ನು ಹುಡುಕಲು‌ ಹೊರಡುವುದೂ ಸಹ ಅವನ‌ ಲಕ್ಷಣವೇ. ಮಾನವ ಮೊದಲ ಬಾರಿಗೆ ಈ ಭೂಮಿ ಮೇಲೆ ಜನ್ಮ ತಾಳಿದಾಗ ಭೂಮಿ ಸ್ವರ್ಗ ಸದೃಶವಾಗಿತ್ತು. ಆದರೆ ತನ್ನದೇ ದುರಾಸೆಗಳಿಂದ ಭೂಮಿಯ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಿ ನರಕಕ್ಕಿಂತಲೂ ಕಡೆಯಾಗಿಸಿದ್ದಾನೆ. ಈಗ ಕುಡಿಯಲು ನೀರಿಲ್ಲದೇ, ವಾತಾವರಣ ವೈಪರೀತ್ಯದಿಂದ ಬದುಕಲು ಆಗದೇ ಪರದಾಡುತ್ತಿದ್ದಾನೆ. ಹವಾಮಾನ ಹೊಂದಿರುವ ಮತ್ತೊಂದು ಗ್ರಹ ಸಿಕ್ಕರೆ ಹಾರಿಬಿಡೋಣ ಎಂದುಕೊಳ್ಳುತ್ತಿದ್ದಾನೆ. ಅದಕ್ಕಾಗಿ ಸೌರವ್ಯೂಹದ ಒಳಗೆ ಮತ್ತು ಸೌರವ್ಯೂಹದ ಹೊರಗೂ ಸಹ ಹುಡುಕಾಟ ನಡೆಸುತ್ತಲೇ ಇದ್ದಾನೆ. ಆದರೆ ಕೊಟ್ಟ ಗ್ರಹವನ್ನು ಇಟ್ಟುಕೊಳ್ಳಲು ಬಾರದವರಿಗೆ ಮತ್ತೊಂದು ಗ್ರಹ ಸಿಕ್ಕರೆ ಅದನ್ನೂ ಹಾಳುಗೆಡುವುದಿಲ್ಲ ಅಂತ ಗ್ಯಾರಂಟಿ ಏನಿದೆ?

ಹೊಸಗ್ರಹದ ಅನ್ವೇಷಣೆ ಇದೇ ಮೊದಲಲ್ಲ:

ಜೀವಿಸಲು ಇರುವ ಅತ್ಯುತ್ತಮ ವಾತಾವರಣ ಹೊಂದಿರುವ ಭೂಮಿಯನ್ನು ಸರ್ವನಾಶ ಮಾಡಿದ ಮೇಲೆ ಬಹಳ ನಿಧಾನವಾಗಿ ಮನುಷ್ಯನಿಗೆ ಬೇರೆ ಗ್ರಹಗಳ ಮೇಲೆ ಗಮನ ಹರಿದಿದೆ. ಮನಸ್ಸು ಮಾಡಿದರೆ ಈ ಭೂಮಿಯನ್ನೇ ಮೊದಲಿನ ಹಾಗೆ ಸುಂದರವಾಗಿಸಬಹುದು. ಆದರೆ ಜನರಿಗೆ ಅದು ಬೇಕಿಲ್ಲ. ಬದಲಿಗೆ ದೂರದಲ್ಲೆಲ್ಲೋ ಮನುಷ್ಯ ಜೀವಿಸುವಂತಹ ವಾತಾವರಣ ಹೊಂದಿರುವ ಮತ್ತೊಂದು ಭೂಮಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಹುಡುಕಾಟ ಇದೇ ಮೊದಲಲ್ಲ. ಬಹಳ ಹಿಂದಿನಿಂದಲೂ ಈ ಸಂಶೋಧನೆ ನಡೆಯುತ್ತಲೇ ಬಂದಿದೆ. ಈಗ ಈ ಸಂಶೋಧನೆಗೆ ಹೊಸದೊಂದು ಹುಡುಕಾಟ ಸೇರ್ಪಡೆಯಾಗಿದೆ.

ಈ ಬಾರಿ ಅವರ ಗುರಿ ಶನಿಗ್ರಹದ ಚಂದ್ರನಾದ ಟೈಟನ್:

ಶನಿಗ್ರಹವು ತನ್ನ ಸುತ್ತಲೂ ಹಲವಾರು ನೈಸರ್ಗಿಕ ಉಪಗ್ರಹಗಳನ್ನು ಹೊಂದಿದೆ. ನಿಜ ಹೇಳಬೇಕೆಂದರೆ ಸಂಖ್ಯೆಗಳ ಆಧಾರದ ಮೇಲೆ ಶನಿಗೆ ಎಷ್ಟು ಉಪಗ್ರಹಗಳಿವೆ ಎಂದೇ ಲೆಕ್ಕಹಾಕಲಾಗಿಲ್ಲ. ಅಷ್ಟೊಂದು ಉಪಗ್ರಹಗಳಿವೆ. ಕೆಲವಂತೂ ತೀರಾ ಸಣ್ಣವು. ಆದರೆ ಅವುಗಳ ಮಧ್ಯದಲ್ಲಿ ಗಮನ ಸೆಳೆಯುವ ಉಪಗ್ರಹ ಎಂದರೆ ಟೈಟಾನ್.‌ ಏಕೆಂದರೆ ಟೈಟಾನ್ ಉಪಗ್ರಹವು ಇಡೀ ಸೌರವ್ಯೂಹದಲ್ಲಿಯೇ ವಾಯುಮಂಡಲ ಹೊಂದಿರುವ ಏಕೈಕ ಉಪಗ್ರಹವಾಗಿದೆ. ಅದರಲ್ಲಿ ನೀರಿನ ಸೆಲೆಯಿದೆ, ಮೋಡಗಳಿವೆ ಮುಂತಾದ ಭೂಮಿಗೆ ಸಮಾನವಾದ ವಾತಾವರಣವಿದೆ.

ಡ್ರಾಗನ್ ಫ್ಲೈ ಮಿಷನ್:

ಈಗ ಈ ಟೈಟಾನ್ ಉಪಗ್ರಹಕ್ಕೆ ನಾಸಾದವರು ಒಂದು ಮಾನವ ನಿರ್ಮಿತ ರೋಬಾಟ್ ಅನ್ನು ಕಳಿಸಲು ನಿರ್ಧರಿಸಿದ್ದು, ಈ ಯೋಜನೆಗೆ "ಡ್ರಾಗನ್ ಫ್ಲೈ ಮಿಷನ್" ಎಂದು ಹೆಸರಿಡಲಾಗಿದೆ. ಇದರ ಕೆಲಸ‌ ಟೈಟಾನಿನಲ್ಲಿ ಜೀವ ವಾಸಿಸಬಹುದಾದ ವಾತಾವರಣ ಇದೆಯೇ ಎಂದು ಅಭ್ಯಸಿಸುವುದು. 2026 ಕ್ಕೆ ಹಾರಲಿರುವ ಈ ಸ್ಪೇಸ್ ಕ್ರಾಫ್ಟ್ 2034 ಕ್ಕೆ ಟೈಟಾನ್ ಮೇಲೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ.

ಖಗೋಳ ಶಾಸ್ತ್ರಜ್ಞರ ಬದುಕು ಮತ್ತು ಕೆಲಸವೇ ವಿಚಿತ್ರ. ನಾವೆಲ್ಲರೂ ಅತೀ ಅವಸರದ ಜಮಾನದಲ್ಲಿ ಇರುವವರು. ಇಂದು ಬಿತ್ತಿದ ಬೀಜ ನಾಳೆಯೇ ಮರವಾಗಿ ಫಲ ಕೊಡಬೇಕೆಂದು ಬಯಸುವವರು. ಒಂದು ಅರ್ಧ ಗಂಟೆ ಇಂಟರ್ ನೆಟ್ ಇಲ್ಲವೆಂದರೆ ಚಡಪಡಿಸುವ ನಾವು ಯಾವುದಕ್ಕೂ ಕಾಯುವ ಸಹನೆಯೇ ಇಲ್ಲದವರು. ಆದರೆ ಖಗೋಳ ವಿಜ್ಞಾನದಲ್ಲಿ ಯಾರೋ ಕಂಡ ಕನಸನ್ನು ಮತ್ಯಾರೋ ಮುಂದುವರೆಸಿ ಅದು ಇನ್ಯಾರದ್ದೋ ಕೈಯಲ್ಲಿ ಸಾಕಾರವಾಗುತ್ತದೆ. ಈ ಮಿಷನ್ನಿಗಾಗಿ ಈಗಿನಿಂದಲೇ ತಯಾರಿ ಮಾಡಿಕೊಂಡು ಆರು ವರ್ಷದ ನಂತರ ಉಡಾವಣೆ ಮಾಡಿ, ಎಂಟು ವರ್ಷದ ನಂತರ ಅದು ಲ್ಯಾಂಡ್ ಆಗುವವರೆಗೂ ಕಾದು, ಅದರ ಮಾಹಿತಿ ಪಡೆಯುವುದು ಎಂದರೆ ಕಡಿಮೆ ಸಾಧನೆಯಲ್ಲ. ಇಡೀ ಮಿಷನ್ ಒಂದು ತಪಸ್ಸಿನಂತೆ. ತಾಳ್ಮೆಯೂ ಒಂದು ತಪಸ್ಸು ಅಲ್ಲವೇ?

ಸಂಶೋಧನೆಗೆ ಟೈಟನ್ ಅನ್ನು ಏಕೆ ಆಯ್ಕೆ ಮಾಡಿದರು?

ಟೈಟನ್ ಉಪಗ್ರಹದಲ್ಲಿ ನೀರಿನಿಂದಾವೃತವಾದ ವಿಶಾಲ‌ ಜಲಮೂಲಗಳಿರುವುದು ಈ ಸಂಶೋಧನೆಗೆ ಕಾರಣ. ನೀರು ಇದ್ದ ಕಡೆ ಜೀವ ಸೃಷ್ಟಿ ಇರುತ್ತದೆ ಎನ್ನುವುದು ನಿರ್ವಿವಾದ. ಹಾಗಾಗಿ ಇಲ್ಲಿ ಮನುಷ್ಯ ವಾಸಯೋಗ್ಯ ಅಂಶಗಳಿವೆಯೇ ಎಂದು ಈ ಸ್ಪೇಸ್ ಕ್ರಾಫ್ಟ್ ಪರಿಶೀಲಿಸುತ್ತದೆ. ಭೂಮಿಗೆ ಹೋಲಿಸಿದರೆ ಟೈಟಾನ್ ಉಪಗ್ರಹದಲ್ಲಿ ಗುರುತ್ವಾಕರ್ಷಣೆ ಕಡಿಮೆ ಇದೆ. ಇದನ್ನು ಬಳಸಿಕೊಂಡು ಸ್ಪೇಸ್ ಕ್ರಾಫ್ಟ್ ಲ್ಯಾಂಡರ್ ಅನ್ನು ತಮಗೆ ಬೇಕಾದಲ್ಲಿ ಓಡಾಡಿಸಿ ಮಾಹಿತಿ ಪಡೆಯುವ ನಿಟ್ಟಿನಲ್ಲಿ ವಿಜ್ಞಾನಿಗಳು ಯೋಚಿಸುತ್ತಿದ್ದಾರೆ.

ಟೈಟನ್ ಅನ್ನೇ ವಿಜ್ಞಾನಿಗಳು ಆಯ್ಕೆ ಮಾಡಿಕೊಂಡಿರುವುದಕ್ಕೆ ಕಾರಣವಿದೆ.

ಟೈಟಾನ್ ವಾತಾವರಣ ಬಹುಪಾಲು ಭೂಮಿಯನ್ನು ಹೋಲುತ್ತಿದ್ದು, ಈ ಉಪಗ್ರಹದ ಅಧ್ಯಯನದಿಂದ ಭೂಮಿಯ ಮೇಲೆ ಜೀವ ಸೃಷ್ಟಿ ಹೇಗಾಯಿತು ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ದೊರೆಯಬಹುದು ಎಂಬ ನಿರೀಕ್ಷೆಯಿದೆ. ಮಂಗಳ ಗ್ರಹಕ್ಕಿಂತಲೂ ದೊಡ್ಡದಾಗಿರುವ ಟೈಟಾನ್ ನಮ್ಮ ಸೌರವ್ಯೂಹದಲ್ಲಿಯೇ ಎರಡನೇ ಅತಿದೊಡ್ಡ ಉಪಗ್ರಹವಾಗಿದೆ. ಇಲ್ಲಿಯೂ ನೀರು ಮತ್ತು ಮೋಡಗಳಿದ್ದು ಜೀವಸೃಷ್ಟಿಯ ಸಾಧ್ಯತೆ ಹೇರಳವಾಗಿದೆ. ಆದರೆ ಭೂಮಿಯ ಮೇಲಿಂದ ಹೊರಟ ನೌಕೆ ಟೈಟಾನ್ ತಲುಪಲು ಬರೋಬ್ಬರಿ ಎಂಟು ವರ್ಷ ತೆಗೆದುಕೊಳ್ಳುತ್ತದೆ. ಅಲ್ಲಿಂದ ಮಾಹಿತಿ ಬಂದ ಮೇಲಷ್ಟೇ ಮುಂದಿನ ಸಾಧ್ಯತೆಗಳ ಬಗ್ಗೆ ಯೋಚಿಸಬಹುದಾಗಿದೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯುವುದೊಂದೇ ದಾರಿ.
***********************
ಕೆ.ಎ.ಸೌಮ್ಯ
ಮೈಸೂರು

News17kannada.com ನಲ್ಲಿ ಪ್ರಕಟವಾಗಿದೆ on 01.06.2020

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)