ಲೇಖನ: "ಸತ್ತವರನ್ನು ನೆನಪಿಸುವ ಹ್ಯಾಲೋವೀನ್ ಹಬ್ಬ"



ಜನರ ದೈನಂದಿನ ಅಥವಾ ವಿಶೇಷ ಆಚರಣೆಗಳು ದೇಶದಿಂದ-ದೇಶಕ್ಕೆ, ಪ್ರದೇಶದಿಂದ-ಪ್ರದೇಶಕ್ಕೆ ಬದಲಾಗುತ್ತದೆ. ಆದರೂ ಅವುಗಳ ಉದ್ದೇಶ ಮಾತ್ರ ಒಂದೇ ಇರುತ್ತದೆ. ಒಂದೇ ಆಚರಣೆಯನ್ನು ನಾವು ಹಲವು ರೀತಿಯಲ್ಲಿ ಆಚರಿಸುತ್ತೇವೆ. ಉದಾಹರಣೆಗೆ ಹೊಸವರ್ಷದ ಆಚರಣೆಯನ್ನು ತೆಗೆದುಕೊಂಡರೆ ಎಲ್ಲಾ ದೇಶದವರೂ, ಎಲ್ಲಾ ಧರ್ಮದವರೂ ಹೊಸವರ್ಷ ಆಚರಿಸುತ್ತಾರೆ. ಆದರೆ ಆಚರಿಸುವ ರೀತಿ ಮಾತ್ರ ಬೇರೆ ಬೇರೆಯಷ್ಟೇ. ಏಕೆಂದರೆ ನಾವೆಲ್ಲರೂ ಒಂದೇ ಮಾನವ ಜಾತಿಗೆ ಸೇರಿದ್ದೇವೆ. ಅರಿತೋ ಅರಿವಿಲ್ಲದೆಯೋ ವಿಶ್ವಾಂದ್ಯಂತ ನಮ್ಮ ಆಚರಣೆಗಳು ಸಮಾನತೆ ಹೊಂದಿವೆ. ಅದೇ ರೀತಿ ನಾವು ಮಹಾಲಯ ಅಮಾವಾಸ್ಯೆಯಲ್ಲಿ ಪಿತೃಗಳನ್ನು ನೆನೆಸಿಕೊಂಡ ಹಾಗೆ ಪಾಶ್ಚಾತ್ಯರೂ ಸಹ ಒಂದು ಆಚರಣೆ ಮೂಲಕ ಗತಿಸಿ ಹೋದ ತಮ್ಮ ಹಿರಿಯರನ್ನು ನೆನೆಸಿಕೊಳ್ಳುತ್ತಾರೆ. ಆ ಮೂಲಕ‌ ತಮ್ಮ ಹಿರಿಯರ ಜೀವನ ವಿಧಾನವನ್ನು ತಮ್ಮ ಮಕ್ಕಳಿಗೆ ಪರಿಚಯಿಸುತ್ತಾರೆ.

ಅದೇ "ಹ್ಯಾಲೋವೀನ್ ಹಬ್ಬ".

ಅಕ್ಟೋಬರ್ ಮೂವತ್ತೊಂದರಂದು ಇದನ್ನು ಪ್ರಪಂಚದಾದ್ಯಂತ ಕೆಲವು ದೇಶಗಳಲ್ಲಿ ಆಚರಿಸಲಾಗುತ್ತದೆ. "ಹ್ಯಾಲೋವೀನ್"ನ ನಿಜವಾದ ಅರ್ಥ 'ಹ್ಯಾಲೋವ್ ಈವ್' ಎಂದರೆ 'ಸಂತರ ಸಾಯಂಕಾಲ' ಎಂದು. ಬೆಳಕಿನ ಅರ್ಧ ವರ್ಷ ಮುಕ್ತಾಯವಾದ ನಂತರ ಕತ್ತಲೆಯ ಅರ್ಧ ವರ್ಷ ಶುರುವಾಗುವ ಮೊದಲನೇ ದಿನ ಇದನ್ನು ಆಚರಿಸಲಾಗುತ್ತದೆ. ಈ ಆಚರಣೆ ಇದೀಗ ವಿಶ್ವದ ಗಮನ ಸೆಳೆದಿದೆ.

ಭೂತಗಳ ವೇಷ:

ಈ ಆಚರಣೆಯಲ್ಲಿ ಹಲವು ಸ್ವಾರಸ್ಯವಿದೆ. ಮುಖ್ಯವಾಗಿ ಇದರಲ್ಲಿ ಭೂತಗಳಂತೆ ವೇಷ ಹಾಕುವುದು, ಭಯಾನಕ‌ ಕಥೆಗಳನ್ನು ಹೇಳುವುದು ಮತ್ತು ದೆವ್ವದ ಸಿನೆಮಾ ನೋಡುವ ಮೊದಲಾದ ಆಟಗಳಿವೆ. ಇವುಗಳಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಮತ್ತು ಗಮನ ಸೆಳೆಯುವಂಥದ್ದು ಎಂದರೆ ವೇಷ ಹಾಕುವ ಆಟ. ಏಕೆಂದರೆ ಅಂದು ಜನರು ಬಹಳ ಭಯಾನಕವಾದ, ಭೀಭತ್ಸವಾದ ವೇಷ ಹಾಕುತ್ತಾರೆ. ಹ್ಯಾಲೋವೀನ್‌ ಉಡುಪು ಸಾಮಾನ್ಯವಾಗಿ ದೆವ್ವದ ವೇಷದ್ದಾಗಿರುತ್ತದೆ. ರಕ್ತ ಹೀರುವ ಡ್ರಾಕುಲಾ, ದೆವ್ವ-ಭೂತಗಳು, ಅಸ್ಥಿಪಂಜರಗಳು ಮತ್ತು ಮಾಟಗಾರರು ಹೀಗೆ ವೇಷ ಹಾಕುತ್ತಾರೆ. ಆ ದಿನ ರಸ್ತೆಯಲ್ಲಿ ಯಾರು ನೋಡಿದರೂ ಇಂತಹ ಭಯಂಕರ ವೇಷದಲ್ಲಿಯೇ ಓಡಾಡುತ್ತಾ ಇರುತ್ತಾರೆ. ಕುಂಬಳಕಾಯಿಯನ್ನು ದೆವ್ವದ ಮುಖದ ಹಾಗೆ ಕೊರೆದು ಮನೆ ಬಾಗಿಲಿನಲ್ಲಿ ಇಡುತ್ತಾರೆ. ಅಂದು ಜನರು ಮನೆಯ ದೀಪವನ್ನೂ ಹಾಕದೇ ಸುತ್ತಲೂ ಅಘೋಷಿತ ಭೂತದ ವಾತಾವರಣವನ್ನು ಸೃಷ್ಟಿಸಿ ಬಿಡುತ್ತಾರೆ.

ಏಕೆಂದರೆ ಪಾಶ್ಚಾತ್ಯರ ನಂಬಿಕೆಯ ಪ್ರಕಾರ ಈ ಹಬ್ಬದಂದು ಮನೆಗೆ ಒಳ್ಳೆಯ ಶಕ್ತಿ ಮತ್ತು ದುಷ್ಟ ಶಕ್ತಿ ಎರಡೂ ಪ್ರವೇಶಿಸುತ್ತದಂತೆ. ಆಗ ಒಳ್ಳೆಯ ಶಕ್ತಿಯನ್ನು ಮನೆಯೊಳಗೆ ಸ್ವಾಗತಿಸಿ, ದುಷ್ಟಶಕ್ತಿಯನ್ನು ಮನೆಯಿಂದ ಓಡಿಸಬೇಕಂತೆ. ಈ ರೀತಿ ದುಷ್ಟಶಕ್ತಿಯನ್ನು ಹಿಮ್ಮೆಟ್ಟಿಸಲು ಜನರು ದೆವ್ವದ ವೇಷ ಧರಿಸುತ್ತಾರಂತೆ‌. ಇದರ ಹಿಂದಿನ ಉದ್ದೇಶ ದೆವ್ವಗಳನ್ನು ಕನ್ಫ್ಯೂಸ್ ಮಾಡುವುದಾಗಿದೆಯಂತೆ. ಜನರಿಗೆ ತೊಂದರೆ ಕೊಡಲು ಬರುವ ದುಷ್ಟ ಶಕ್ತಿಯು ತಮ್ಮದೇ ವೇಷದಲ್ಲಿರುವ ಜನರನ್ನು ಕಂಡು ತೊಂದರೆ ಕೊಡದೇ ಹಿಂತಿರುಗುತ್ತದೆ ಅಂತ ಜನರ ನಂಬಿಕೆ. ಇದೊಂದು ರೀತಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ರೀತಿಯ ಹಾಗಿದೆ.

ಕಥೆ ಹೇಳುವ ಆಟ:

ಭಯ ಹುಟ್ಟಿಸುವ ದೆವ್ವದ ಕಥೆ ಹೇಳುವುದು ಮತ್ತು ರಕ್ತ ಹೆಪ್ಪುಗಟ್ಟಿಸುವ ಭಯಾನಕ ಸಿನೆಮಾಗಳನ್ನು ನೋಡುವುದೂ ಹ್ಯಾಲೋವೀನ್ ಆಚರಣೆಯ ಒಂದು ಭಾಗ. ಆದ್ದರಿಂದಲೇ ಈ ಹಬ್ಬವನ್ನು ಸಾಮಾನ್ಯವಾಗಿ ವಾರದ ರಜೆಯ ಹಿಂದಿನ ದಿನವೇ ಆಚರಿಸಲಾಗುತ್ತದೆ. ಸಿನೆಮಾ ಕಂಡು ಭಯಗ್ರಸ್ತವಾದ ಮನಸ್ಸುಗಳಿಗೆ ಮಾರನೇ ದಿನದ ರಜೆ ಬಿಡುವು ಕೊಡಬಹುದು ಅಂತಿರಬಹುದು. ಇದಲ್ಲದೇ ಕೆಲವು ಹ್ಯಾಲೋವೀನ್ ಆಚರಣೆಗೆ ಸಂಬಂಧಿಸಿದ ಭಯಾನಕ ಸಿನೆಮಾಗಳು ಈ ಸಂದರ್ಭದಲ್ಲಿಯೇ ಬಿಡುಗಡೆಯಾಗುವುದೂ ಉಂಟು.

ಆಚರಣೆ ಹಿಂದಿನ ಮರ್ಮ:

ಈ ಭಯಾನಕ ಆಚರಣೆಯ ಹಿಂದೆ ಯಾವುದೇ ಕೆಟ್ಟ ಉದ್ದೇಶವಿಲ್ಲ. ಜನರು ತಮ್ಮ ಮಕ್ಕಳಿಗೆ ಸಂಪತ್ತಿನ ನಶ್ವರತೆಯನ್ನು ಮತ್ತು ಎಂದಿದ್ದರೂ ಈ ದೇಹ ಅಳಿಯಲೇಬೇಕು ಎಂಬ ಅಂಶವನ್ನು ಮನದಟ್ಟು ಮಾಡಿಸುವುದು ಈ ಹಬ್ಬದ ಉದ್ದೇಶವಾಗಿದೆ. ಇದು ಜೀವನದ ಅತ್ಯಂತ ಮೌಲ್ಯಯುತ ಪಾಠವಾಗಿದೆ. ಕೆಲವರ ಪ್ರಕಾರ ಹ್ಯಾಲೋವೀನ್‌ ಹಬ್ಬ ಕೇವಲ ಮಕ್ಕಳ ಮನರಂಜನೆಯ ಆಟವಾಗಿದೆ. ಮಕ್ಕಳು ವೇಷ ಹಾಕಿ, ಮನೆಮನೆಗೂ ಭೇಟಿ ನೀಡಿ, ಸಿಹಿತಿಂಡಿ ಪಡೆದು ಹಾಡಿ ನಲಿಯುತ್ತಾರೆ. ಅದರ ಜೊತೆಗೇ ತಮ್ಮ ಪೂರ್ವಿಕರ ಬಗ್ಗೆಯೂ ಅರಿಯುತ್ತಾರೆ.

***********************
ಕೆ.ಎ‌ಸೌಮ್ಯ
ಮೈಸೂರು

Published in news17kannada.com

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)