ಪೌರಾಣಿಕ-ಲೇಖನ : ಏಕಲವ್ಯ (ಓ ಮನಸೇ)





ಮಹಾಭಾರತ ಎಂದರೆ ಎಲ್ಲರೂ ಬರೇ ದಾಯಾದಿಗಳ ದ್ವೇಷದ ಕಥೆ ಅಂತಲೇ ತಿಳಿಯುತ್ತಾರೆ. ಅದರ ಹಿಂದಿನ ಸತ್ಯ ಯಾರಿಗೂ ಬೇಕಿಲ್ಲ. ಏಕಲವ್ಯನ ಬಗ್ಗೆಯೂ ಹಾಗೆಯೇ ತಿಳಿಯುತ್ತಾರೆ. ದ್ರೋಣರು ಅರ್ಜುನನ ಮೇಲಿನ ಪ್ರೀತಿಯಿಂದ, ತಮ್ಮ ಮೆಚ್ಚಿನ ಶಿಷ್ಯನಾದ ಅರ್ಜುನನನ್ನು ಮಾತ್ರವೇ ಅಪ್ರತಿಮ ಬಿಲ್ಲುಗಾರನನ್ನಾಗಿಸುವ ಏಕಮಾತ್ರ ಕಾರಣದಿಂದಾಗಿ ಏಕಲವ್ಯನಿಂದ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದರು ಅಂತ. ಆದರೆ ವಾಸ್ತವ ಬೇರೆಯೇ ಇದೆ.

ಮಹಾಭಾರತದ ಸಮಯದಲ್ಲಿ ಹಸ್ತಿನಾವತಿಯನ್ನು ದುರ್ಯೋಧನ ಆಳುತ್ತಿದ್ದ. ಎಲ್ಲ ರೀತಿಯಿಂದ ಅರ್ಹರಾಗಿದ್ದ ಪಾಂಡವರು ಕಾಡಿನಲ್ಲಿದ್ದರು. ದುರ್ಯೋಧನನ ನಿಯಮದಂತೆ ಪಾಂಡವರು ವನವಾಸ, ಅಜ್ಞಾತವಾಸ ಮುಗಿಸಿ ಬಂದರೂ ದುರ್ಯೋಧನ ಅವರಿಗೆ ಅವರ ನೆಲ ಕೊಡಲಿಲ್ಲ. ಹಾಗಾಗಿ ಯುದ್ಧ ನಡೆಯಿತು. ಹಾಗಾದರೆ ಕೇವಲ ನೆಲಕ್ಕಾಗಿ ಯುದ್ಧ ನಡೆಯಿತೇ?

ಖಂಡಿತಾ ಇಲ್ಲ.

ಪಾಂಡವರು ತಮ್ಮ ನೆಲವನ್ನು ವಾಪಸ್ ಪಡೆಯದಿದ್ದರೆ ಯುಗಾಂತರದವರೆಗೂ ದುರ್ಯೋಧನನ ವಂಶಸ್ಥರೇ ಭರತ ಭೂಮಿಯನ್ನು ಆಳುತ್ತಿದ್ದರು. ಆಗ ಭೂಮಿಯಲ್ಲಿ ಕೇವಲ ಅಧರ್ಮವೇ ತಾಂಡವವಾಡುತ್ತಿತ್ತು. ಅದನ್ನು ತಪ್ಪಿಸಿ ಭೂಮಿಯಲ್ಲಿ ಧರ್ಮ ನೆಲೆಸುವಂತೆ ಮಾಡಲು ಹಸ್ತಿನಾವತಿ ಪಾಂಡವರಿಗೆ ದೊರೆಕಲೇ ಬೇಕಿತ್ತು. ಅದೂ ನ್ಯಾಯಯುತವಾಗಿ ಅವರದನ್ನು ಪಡೆಯಬೇಕಿತ್ತು.

ಈ ನಿಟ್ಟಿನಲ್ಲಿ ಐವರು ಪಾಂಡವರೂ ಒಬ್ಬೊಬ್ಬರೂ ಒಂದೊಂದು ವಿದ್ಯೆಯಲ್ಲಿ ನಿಷ್ಣಾತರಾಗಿದ್ದರು. ಅವರಲ್ಲಿ ಅರ್ಜುನ ಬಿಲ್ಲುಗಾರಿಕೆಯಲ್ಲಿ ಪ್ರಚಂಡನಾಗಿದ್ದ. ತನಗಿಂತ ಶ್ರೇಷ್ಠ ಬಿಲ್ಲುಗಾರ ಈ ಪ್ರಪಂಚದಲ್ಲೇ ಇಲ್ಲ ಅಂತ ಹೆಮ್ಮೆ ಪಡುತ್ತಿದ್ದ. ಅಷ್ಟೇ ಅಲ್ಲ, ಯುದ್ಧದಲ್ಲಿ ಸಹ ಎಲ್ಲರೂ ನಂಬಿದ್ದೇ ಅರ್ಜುನನ ಬಿಲ್ಲು ಬಾಣದ ಚಮತ್ಕಾರವನ್ನು.

ಹೀಗಿರುವಾಗ ಅರ್ಜುನನನ್ನು ಮೀರಿಸಬಲ್ಲ ಏಕಲವ್ಯನನ್ನು ಭೇಟಿಯಾದಾಗ ದ್ರೋಣರಿಗೆ ಸ್ವಲ್ಪ ಇರಿಸು ಮುರಿಸುಂಟಾದದ್ದು ನಿಜ. ಏಕಲವ್ಯನನ್ನು ಕಂಡಾಗಿನಿಂದ ಅರ್ಜುನನಲ್ಲಿ ತನ್ನೊಳಗೇ ತಾನೇನು ಅಲ್ಲ ಎಂಬ ಕೀಳರಿಮೆ ಬೆಳೆಯಲಾರಂಭಿಸಿದ್ದನ್ನು ಗಮನಿಸಿದ ದ್ರೋಣರು ಈ ನಿರ್ಧಾರಕ್ಕೆ ಬಂದರು. ಇಲ್ಲದಿದ್ದರೆ ಬಹಳ ಸೂಕ್ಷ್ಮ ಮನಸ್ಸಿನವನಾದ ಅರ್ಜುನ ಏಕಲವ್ಯನೇ ತನಗಿಂತ ಶ್ರೇಷ್ಠ ಬಿಲ್ಲುಗಾರ ಅಂತ ಒಪ್ಪಿಕೊಳ್ಳುವುದಲ್ಲದೇ, ಏಕಲವ್ಯನನ್ನು ಸ್ನೇಹಿತನೆಂದು ಅಪ್ಪಿಕೊಂಡೂ ಬಿಡುತ್ತಿದ್ದ. ಇದರಿಂದ ಅರ್ಜುನನೆಂದೂ ಮಹಾನ್ ಬಿಲ್ಲುಗಾರನಾಗಲು ಸಾಧ್ಯವಿರಲಿಲ್ಲ. ಅರ್ಜುನನ ಮನಸ್ಸು ಕದಡುವುದರಲ್ಲಿ ದ್ರೋಣರೇ ಏನಾದರೂ ಮಾಡಬೇಕಿತ್ತು.

ದ್ರೋಣರ ಬಳಿ ಯೋಚಿಸಲು ಸಮಯವಿರಲಿಲ್ಲ. ಗುರುಗಳಿಲ್ಲದೇ ವಿದ್ಯೆ ಕಲಿತ ಏಕಲವ್ಯನಂತ ಪ್ರತಿಭಾವಂತನಿಗೆ ಒಂದೇಟಿಗೆ ಈ ವಿದ್ಯೆ ಮರೆತುಬಿಡು ಅಂತ ಹೇಳುವುದು ಅಷ್ಟು ಸುಲಭವಿರಲಿಲ್ಲ. ಹಾಗೆ ದ್ರೋಣರು ಮರೆತುಬಿಡು ಅಂದಿದ್ದರೆ ಏಕಲವ್ಯ ಏನನ್ನುತ್ತಿದ್ದನೋ ಏನೋ? ಆದರೆ ಅವನು ಏನಾದರೂ ಹೇಳುವಷ್ಟರಲ್ಲಿ ಅರ್ಜುನನೇ ಏಕಲವ್ಯ ಮಹಾನ್ ಬಿಲ್ಲುಗಾರನೆಂದು ಒಪ್ಪಿಕೊಂಡು ತಾನೇ ತನ್ನ ಬಿಲ್ಲನ್ನು ಕೆಳಗಿಡುತ್ತಿದ್ದುದಂತೂ ನಿಜ. ಹಾಗಾಗಬಾರದೆಂದು ದ್ರೋಣರು ಧರ್ಮಾಧರ್ಮ ಯೋಚಿಸಿ ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳಿದರು. ಏಕಲವ್ಯನಿಗೆ ಇದು ಆಘಾತವೆನಿಸಿದರೂ, ಕಲಿತ ವಿದ್ಯೆಗೆ ಪ್ರತಿಯಾಗಿ ಗುರುಗಳು ಕೇಳಿದ್ದನ್ನು ಗುರುದಕ್ಷಿಣೆಯಾಗಿ ನೀಡುವ ಸಂಪ್ರದಾಯದ ಅರಿವಿದ್ದ ಏಕಲವ್ಯ ತಕ್ಷಣವೇ ಗುರುಗಳ ಇಷ್ಟಾರ್ಥ ಕಾರ್ಯಗತಗೊಳಿಸಿಯೇ ಬಿಟ್ಟ.

ಏಕಲವ್ಯನೂ ಮಹಾನ್ ಶಿಷ್ಯನೇ....

ಪ್ರತ್ಯಕ್ಷವಾಗಿ ಕಲಿಯದೆ ಪರೋಕ್ಷವಾಗಿ ಕಲಿತಿದ್ದರೂ, ಮನದಲ್ಲೇ ದ್ರೋಣರನ್ನು ಗುರುಗಳೆಂದು ಆರಾಧಿಸಿದಕ್ಕೆ ತನ್ನ ಗುರುಭಕ್ತಿ ಏನೆಂದು ತೋರಿಸಿಯೇ ಬಿಟ್ಟ. ಗುರುಗಳು ಕೇಳಿದರೆ ಪ್ರಾಣವನ್ನೂ ಸಹ ನೀಡಬೇಕಿತ್ತು. ಅಲ್ಲದೇ ಗುರುದಕ್ಷಿಣೆ ಕೊಡದೇ ಕಲಿತ ವಿದ್ಯೆಯನ್ನು ಎಲ್ಲಿಯೂ ಪ್ರದರ್ಶಿಸಿವಂತೆಯೂ ಇರಲಿಲ್ಲ. ಇದು ಆಗಿನ ಕಾನೂನಾಗಿತ್ತು. ಹಾಗಾಗಿ ಕಲಿತ ವಿದ್ಯೆಗೆ ಪ್ರತಿಯಾಗಿ ಗುರುದಕ್ಷಿಣೆ ನೀಡಲೇಬೇಕಿತ್ತು. ಅದಕ್ಕಾಗಿಯೇ ಏಕಲವ್ಯ ಹಿಂದೆ ಮುಂದೆ ಯೋಚಿಸದೇ ತನ್ನ ಬಲಗೈ ಹೆಬ್ಬೆರಳನ್ನೇ ಕತ್ತರಿಸಿ ಗುರುಗಳಿಗೆ ಅರ್ಪಿಸಿದ.

ಅರ್ಜುನನಿಗೂ ಇದು ಅನಿರೀಕ್ಷಿತವಾಗಿತ್ತು. ತಾನೇ ಸರ್ವಶ್ರೇಷ್ಠ ಬಿಲ್ಲುಗಾರನೆಂಬ ಅಹಂಕಾರದ ಪೊರೆ ಇದೀಗ ತಾನೇ ಕಳಚಿತ್ತು. ಅಷ್ಟರಲ್ಲಿಯೇ ಈ ಅವಘಡ...

ಅರ್ಜುನನ ಮನಸ್ಸು ಡೋಲಾಯಮಾನವಾಯಿತು.

ಪ್ರಪಂಚದಲ್ಲಿ ತನ್ನಂತಹ ಬಿಲ್ಲುಗಾರ ಮತ್ತಾರೂ ಇರಬಾರದೆಂದರೆ, ತಾನು ಅವರೆಲ್ಲರಿಗಿಂತ ಚೆನ್ನಾಗಿ ಬಿಲ್ಲುಗಾರಿಕೆ ಕಲಿಯಬೇಕೆಂದೋ ಅಥವಾ ತನಗಿಂತ ಯಾರೂ ಚೆನ್ನಾಗಿ ಕಲಿತಿರಲೇಬಾರದು ಅಂತಲೋ ಅಥವಾ ಬೇರೆಯವರು ಕಲಿತಿದ್ದರೂ ಅವರು ಉಳಿಯಬಾರದು ಅಂತಲೋ ಅಂತ ಅಂತರ್ಮುಖಿಯಾದ. ತನ್ನಿಂದ ಒಬ್ಬ ನಿಜವಾದ ಪ್ರತಿಭಾವಂತನಿಗೆ ಅನ್ಯಾಯವಾಯ್ತೆಂದು ದುಃಖಪಟ್ಟ.

ಆದರೆ ದ್ರೋಣರಿಗೆ ಈ ನಿರ್ಧಾರ ಅನಿವಾರ್ಯವಾಗಿತ್ತು.

ಭರತಖಂಡದಲ್ಲಿ ನ್ಯಾಯ ಧರ್ಮ ಉಳಿಯಬೇಕೆಂದರೆ ಇಂದು ಅವರು ಈ ಕಠಿಣ ನಿರ್ಧಾರ ತಳೆಯಲೇ ಬೇಕಿತ್ತು. ಸ್ಚಲ್ಪ ದುಡುಕಿದೆ ಅಂತನನಿಸಿದರೂ ಅಂದಿನ ಪರಿಸ್ಥಿತಿ ಹಾಗಿತ್ತು. ಅರ್ಜುನನ ಮನದೊಳಗೆ ಕೀಳರಿಮೆ ನುಸುಳುವ ಮೊದಲೇ ಅವರು ಏನಾದರೂ ಮಾಡಬೇಕಿತ್ತು. ಇಲ್ಲದಿದ್ದರೆ ಮುಂದಿನ ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಕಡೆಯ ಕರ್ಣನನ್ನು ಯಾರೂ ಎದುರಿಸುವವರೇ ಇಲ್ಲದ ಹಾಗೆ ಆಗುತ್ತಿತ್ತು. ಲೋಕಹಿತಕ್ಕಾಗಿ ದ್ರೋಣರು ಲೋಕದ ದೃಷ್ಟಿಯಿಂದ ಸಮಂಜಸವಲ್ಲದ ನಿರ್ಧಾರ ತೆಗೆದುಕೊಂಡರೂ, ಅವರ ದೂರದೃಷ್ಟಿ ನೆನೆದರೆ ಅಂದಿನ ಪರಿಸ್ಥಿತಿ ಅರ್ಥವಾಗುತ್ತದೆ. ಇಲ್ಲದಿದ್ದರೆ, ತಾವು ಬೇರೆಯವರಿಗೆ ಕಲಿಸುವುದನ್ನು ನೋಡಿಯೇ ಕಲಿತ ಏಕಲವ್ಯನಂತಹ ಶಿಷ್ಯನನ್ನು ಕಳೆದುಕೊಳ್ಳುವ ನಿರ್ಧಾರ ಅವರು ಮಾಡುತ್ತಿದ್ದರೇ?

ನೀವೇ ಯೋಚಿಸಿ.....

********
ಕೆ.ಎ.ಸೌಮ್ಯ
ಮೈಸೂರು

(ಓ ಮನಸೇ 16-31 may 2018)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)