"ಸಾಗರಗಳ ಸಮ್ಮಿಲನ" (Pacific and Atlantic ocean Meet) Dec 2017




ಫೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರಗಳು ದಕ್ಷಿಣ ಅಮೇರಿಕಾದ ದಕ್ಷಿಣದ ತುತ್ತತುದಿಯ ಕೇಪ್ ಹಾರ್ನ್ ಎಂಬಲ್ಲಿ ಸೇರುತ್ತವೆ. ಪನಾಮಾ ಕಾಲುವೆ ಎಂಬ ಕೃತಕ ಕಾಲುವೆ ಇವೆರೆಡೂ ಸಾಗರಗಳನ್ನು ಬೆಸೆಯುತ್ತದೆ. ಆದರೆ ಎರಡೂ ಸಾಗರದ ನೀರು ಬೆರೆಯದೇ ಬೇರೆ ಬೇರೆಯಾಗಿಯೇ ಕಾಣುತ್ತದೆ

ಚಿತ್ರ ನೋಡಿದರೆ ನಂಬಲು ಅಸಾಧ್ಯ ಎನಿಸುತ್ತದೆಯಲ್ಲವೇ? ಯಾರೋ ಫೋಟೋಶಾಪ್ ಮಾಡಿರಬೇಕು ಎಂಬ ಅನುಮಾನವೂ ಬರುತ್ತದೆ. ಆದರೆ ಇದು ನಿಜಕ್ಕೂ ನೈಜವಾಗಿ ನಡೆಯುವ ಒಂದು ವಿಚಿತ್ರ ಪ್ರಾಕೃತಿಕ ವಿದ್ಯಮಾನ.

ಎರಡೂ ಸಾಗರದ ವಿಭಿನ್ನ ಬಣ್ಣದ ನೀರು ಅಕ್ಕಪಕ್ಕದಲ್ಲೇ ಹರಿಯುತ್ತಿದ್ದರೂ ಸಹ ಒಂದಾಗದೇ ದೇಶದ ಗಡಿಯ ಚಿತ್ರದ ಹಾಗೆ ಕಾಣುತ್ತದೆ. ಕಾವ್ಯಾತ್ಮಕವಾಗಿ ಹೇಳುವುದಾದರೆ ಜೊತೆಗಿದ್ದರೂ ಒಟ್ಟಿಗೆ ಬೆಸೆಯದ ಸಮುದ್ರಗಳು ಕೋಪ ಮಾಡಿಕೊಂಡ ಪ್ರೇಮಿಗಳ ಹಾಗೆ ಕಾಣುತ್ತವೆ. ಒಟ್ಟಿನಲ್ಲಿ ಎಂದೂ ಕಂಡು ಕೇಳಿರದ ಹಾಗೆ ತೋರುವ  ವಿದ್ಯಮಾನ ಎಲ್ಲರ ಗಮನ ಸೆಳೆಯುತ್ತಿದೆ.

ಸಮುದ್ರದ ನೀರು ಬೆರೆಯದಿರಲು ಕಾರಣವೇನು?
          
ಸಾಮಾನ್ಯ ಜನರು ಇದನ್ನು ನೋಡಿ ಖುಷಿಪಟ್ಟರು, ಅಚ್ಚರಿಪಟ್ಟರು, ನಂತರ ಸುಮ್ಮನಾದರು. ಆದರೆ ಸಂಶೋಧಕರು ಬಗ್ಗೆ ತಲೆ ಕೆಡಿಸಿಕೊಂಡರು. ಭೂಮಿ ಮೇಲಿನ ಎಲ್ಲಾ ಪ್ರಕ್ರಿಯೆಗೂ ಒಂದು ಕಾರಣ ಅಂತ ಇರಲೇಬೇಕು. ಪ್ರಕ್ರಿಯೆಗೂ ಏನೋ ಕಾರಣ ಇದ್ದೇ ಇದೆ. ಅದೇನು ಅಂತ ಕಂಡು ಹಿಡಿಯಲು ತುಂಬಾ ಪ್ರಯತ್ನಪಟ್ಟರು.
          
ಆಗ ತಿಳಿದುಬಂದ ಮೊಟ್ಟ ಮೊದಲ ಸಂಗತಿ ಎಂದರೆ ಅದು ಸಾಗರಗಳ ಸಮ್ಮಿಲನ ಅಲ್ಲವೇ ಅಲ್ಲ ಎಂಬ ವಿಷಯ. ನೀರು ಅಲಾಸ್ಕಾದ ಮಂಜು ಪರ್ವತದಿಂದ ಕರಗಿ ಹರಿದು ಸಾಗರ ಸೇರುತ್ತಿದ್ದ ನೀರಾಗಿತ್ತು. ಆದರೆ ಅದು ಸಮುದ್ರದ ನೀರಿನೊಂದಿಗೆ ಬೆರೆಯದೇ ತನ್ನದೇ ಆದ ಸ್ವತಂತ್ರ ದಿಕ್ಕಿನಲ್ಲಿ ಮುಂದುವರೆಯುತ್ತಿತ್ತು. ಇದಕ್ಕೆ ಕಾರಣ ನೀರಿನ ಸಾಂದ್ರತೆ.
          
ಮಂಜಿನ ಪರ್ವತದಿಂದ ಹರಿದು ಬರುತ್ತಿದ್ದ ನೀರು ತಾಜಾ ನೀರಾಗಿದ್ದು, ಸಮುದ್ರದ ನೀರು ಉಪ್ಪಾಗಿರುತ್ತದೆ. ಇದರಿಂದ ತಾಜಾ ನೀರಿನ ಸಾಂದ್ರತೆ ಉಪ್ಪು ನೀರಿಗಿಂತಾ ಕಡಿಮೆ ಇರುತ್ತದೆ. ಕಾರಣಕ್ಕೂ ಎರಡೂ ನೀರು ಬೆರೆಯದೇ ಹಠ ಮಾಡುತ್ತವೆ. ಅಕ್ಕಪಕ್ಕದಲ್ಲಿಯೇ ಇದ್ದರೂ ಒಂದಕ್ಕೊಂದು ಘರ್ಷಿಸಿ ಇವೆರಡರ ಮಧ್ಯ ಒಂದು ರೀತಿಯ ನೊರೆಯ ಉತ್ಪಾದನೆ ಆಗುತ್ತದೆ. ಚಿತ್ರ ನೋಡುತ್ತಿದ್ದರೆ ಎರಡೂ ನೀರುಗಳು ಒಂದೇ ಕಡೆ ಸಂಧಿಸಿದರೂ ಒಂದರೊಳಗೊಂದು ಬೆರೆಯಲು ಇಚ್ಚಿಸದೇ ಸದಾ ಜಗಳ ಮಾಡುತ್ತಿರುವಂತೆ ಕಾಣಿಸುತ್ತದೆ.  
          
ನೀರಿನ ಸಾಂದ್ರತೆ ಎಂದರೇನು?
          
ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ ನೀರಿಗಿಂತಾ ಎಣ್ಣೆಯ ಸಾಂದ್ರತೆ ಬಹಳ ಕಡಿಮೆ. ಹಾಗಾಗಿ ಎಣ್ಣೆ ಎಂದಿಗೂ ನೀರಿನೊಂದಿಗೆ ಬೆರೆಯಲಾರದು. ಎಣ್ಣೆ ಮತ್ತು ನೀರನ್ನು ಬೆರೆಸಿದರೆ ಸಾಂದ್ರತೆ ಹೆಚ್ಚಿರುವ ನೀರು ಕೆಳಗೆ ಉಳಿಯುತ್ತದೆ, ಸಾಂದ್ರತೆ ಕಡಿಮೆ ಇರುವ ಎಣ್ಣೆ ನೀರಿನ ಮೇಲೆ ತೇಲುತ್ತದೆ. ಹಾಗೆಯೇ ಮಂಜು ಪರ್ವತದಿಂದ ಕರಗಿ ಹರಿಯುವ ನೀರು ಸಮುದ್ರದ ನೀರಿನೊಡನೆ ಬೆರೆಯಲಾರದು. ಹಾಗಂತ ಎರಡು ದೇಶದ ಗಡಿಗಳ ಹಾಗೆ ಕಾಣುವ ನೀರು ತಾನು ಹರಿಯುವ ಮಾರ್ಗದುದ್ದಕ್ಕೂ ಹಾಗೆಯೇ ಇರುತ್ತದೆ ಎಂದುಕೊಳ್ಳಬಾರದು. ಮುಂದೆ ಮುಂದೆ ಹರಿಯುತ್ತಿದ್ದ ಹಾಗೆ ನಿಧಾನವಾಗಿ ಎರಡರ ನಡುವಿನ ಗೆರೆ ಅಳಿಸಿಹೋಗಿ ಒಂದರೊಳಗೆ ಮತ್ತೊಂದು ಲೀನವಾಗಿಬಿಡುತ್ತದೆ.           
           
ನೀಲಿ ಬೇರೆ.. ನೀಲಿ ಬೇರೆ..
          
ನಮಗೆ ಬಣ್ಣಗಳು ಕಾಣುವುದು ಸೂರ್ಯನ ಕಿರಣಗಳ ಚದುರುವಿಕೆಯಿಂದ. ಯಾವ ವಸ್ತು ಸೂರ್ಯನ ಏಳು ಬಣ್ಣಗಳಲ್ಲಿ ಯಾವುದನ್ನು ಹೆಚ್ಚು ಹೀರಿಕೊಳ್ಳುವುದೋ ವಸ್ತುವಿನ ಬಣ್ಣ ಅದಾಗುತ್ತದೆ. ಸಮುದ್ರಗಳು ಸೂರ್ಯನಲ್ಲಿನ ನೀಲಿ ಬಣ್ಣವನ್ನು ಹೀರಿಕೊಳ್ಳುವುದರಿಂದ ಸಮುದ್ರಗಳೂ ನಮಗೆ ನೀಲಿಯಾಗಿಯೇ ಕಾಣುತ್ತವೆ. ಆದರೆ ಚಿತ್ರದಲ್ಲಿರುವ ಎರಡೂ ನೀರಿನ ಮೂಲಗಳ ಬಣ್ಣ ನೀಲಿಯಾದರೂ ನೀಲಿಯೇ ಬೇರೆ, ನೀಲಿಯೇ ಬೇರೆಯಾಗಿದೆ.
          
ಇದಕ್ಕೂ ಸಹ ನೀರಿನ ಸಾಂದ್ರತೆಯೇ ಕಾರಣ. ಸಮುದ್ರದ ನೀರು ತಿಳಿನೀಲಿ ಬಣ್ಣವನ್ನು ಪ್ರತಿಫಲಿಸಿದರೆ, ಮಂಜಿನಿಂದ ಕರಗಿದ ನೀರು ತನ್ನ ಅಯಸ್ಕಾಂತದ ಗುಣದಿಂದಾಗಿ ಗಾಢ ನೀಲಿ ಬಣ್ಣವನ್ನು ಪ್ರತಿಫಲಿಸುತ್ತದೆ. ಹಾಗಾಗಿ ಎರಡೂ ನೀರಿನ ಬಣ್ಣದಲ್ಲಿಯೂ ನಾವು ವ್ಯತ್ಯಾಸ ಕಾಣಬಹುದಾಗಿದೆ.
          
ಒಟ್ಟಿನಲ್ಲಿ ವಿದ್ಯಮಾನ ಯಾವಾಗಲೂ ಇರುವುದಿಲ್ಲವಾದರೂ, ಇದು ಕಂಡಾಗ ಇದರ ಫೋಟೋ ತೆಗೆದು ನಮ್ಮವರೊಡನೆ ಹಂಚಿಕೊಳ್ಳುತ್ತಾ, ಇದರೊಂದಿಗೆ ಸೆಲ್ಫಿ ಹೊಡೆದುಕೊಂಡು ಸಂಭ್ರಮ ಪಡುತ್ತೇವೆ. ಏಕೆಂದರೆ ನಿಸರ್ಗದಲ್ಲಿ ನಡೆಯುವ ಎಲ್ಲವೂ ನಮಗೆ ಅಚ್ಚರಿಯ ಹಾಗೆಯೇ ಕಾಣುತ್ತದೆ.   
    
           **********

-ಕೆ..ಸೌಮ್ಯ
Published in MANASA on Dec 2017

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)