ಭಾಷೆಯ ಉಗಮ (origin of language) : ಎಂ.ಎ.ಕನ್ನಡ




ಭಾಷೆಎಂದರೆ ಮಾಹಿತಿಯ ಸಂವನಕ್ಕಾಗಿ ರೂಪಿತವಾಗಿರುವ ಒಂದು ಸಂಕೇತಗಳ ಮಾಧ್ಯಮ.

ಈ ಸಂಕೇತಗಳು ಉಚ್ಚರಿತವಾಗಬಹುದು ಅಥವಾ ಲಿಖಿತ ರೂಪದಲ್ಲಿರಬಹುದು. ಮಾನವ ತನ್ನ ಭಾವನೆ, ಚಿಂತನೆ, ಆಲೋಚನೆಗಳನ್ನು ಮತ್ತೊಬ್ಬರ ಬಳಿ ಹಂಚಿಕೊಳ್ಳಲು ರೂಢಿಸಿಕೊಂಡಿರುವ ಹಲವು ಮಾಧ್ಯಮಗಳಲ್ಲಿ ಭಾಷೆಪ್ರಧಾನವಾದುದು.

ಪ್ರಾಣಿಗಳಲ್ಲಿ ಮನುಷ್ಯ ಅತ್ಯಂತ ವೇಗವಾಗಿ ವಿಕಸಿತಗೊಂಡ ಪ್ರಾಣಿ. ಭಾಷೆಯು ಮನುಷ್ಯನನ್ನು ಪ್ರಾಣಿ ಜಗತ್ತಿನಿಂದ ಬೇರ್ಪಡಿಸುತ್ತದೆ. ಭಾಷೆಯಿಂದ ಚಿಂತನೆ ಮಾಡಲು ಸಾಧ್ಯ. ಭಾಷೆಮತ್ತು ಚಿಂತನೆಇಲ್ಲದಿದ್ದರೆ ಅವನು ಇತರ ಪ್ರಾಣಿಗಳಂತೆ ಇದ್ದು ಬಿಡುತ್ತಿದ್ದ. ಹಾಗೆಂದ ಮಾತ್ರಕ್ಕೆ ಪ್ರಾಣಿಗಳು ಮಾತನಾಡುವುದೇ ಇಲ್ಲವೆಂದಲ್ಲ. ಪ್ರಾಣಿಗಳಲ್ಲಿಯೂ ಸಹ ಪರಸ್ಪರ ಸಂವಹನಕ್ಕಾಗಿ ಸಂಕೇತಗಳ ಭಾಷೆಯೊಂದಿದೆ. 

ಅಲ್ಲದೇ ಗಿಡಮರಗಳಿಗೂ ಸಹ ಸಂವಹನ ಸಾಧ್ಯವಿದೆ. 

ಉದಾಹರಣೆಗೆ ಗಿಡಗಳು ಕೀಟಗಳ ಆಕ್ರಮಣ ಮುಂತಾದ ಅಪಾಯಗಳನ್ನು ಅನೇಕ ಮಾರ್ಗಗಳಲ್ಲಿ ಅಂದರೆ ತಮ್ಮ ಎಲೆಗಳನ್ನು ಮಡಿಚುವುದರ ಮೂಲಕ, ಹೂಗಳನ್ನು ಮಡಿಚುವುದರ ಮೂಲಕ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಈ ಆಕ್ರಮಣದ ಬಗ್ಗೆ ಸಂದೇಶ ರವಾನಿಸುತ್ತವೆ. ಅದರೆ ಅವುಗಳ ಭಾಷೆಗೆ ವ್ಯಾಕರಣವಿಲ್ಲ.

ಯಾವ ಭಾಷೆಯೂ ಯಾರಿಗೂ ಹುಟ್ಟಿದೊಡನೆ ಬರುವುದಿಲ್ಲ. ಭಾಷೆಯು ಮೂಲತಃ ಮನುಷ್ಯನಿಗೆ ಅನುಕರಣೆಯಿಂದ ಲಭ್ಯವಾಗುತ್ತದೆ. ನಾವು ಪ್ರತಿಯೊಂದು ಭಾಷೆಯನ್ನೂ ಕಷ್ಟಪಟ್ಟು ಕಲಿಯಬೇಕಾಗುತ್ತದೆ. ಆದರೆ ಪ್ರಾಣಿ-ಪಕ್ಷಿ-ಮರ-ಗಿಡಗಳಿಗೆ ಪರಸ್ಪರ ಸಂವಹನದ ಭಾಷೆ ಜನ್ಮದತ್ತವಾಗಿ ಬರುತ್ತವೆ. ಹಾಗಾಗಿಯೇ ಪ್ರಪಂಚದೆಲ್ಲೆಡೆಯ ಒಂದು ವರ್ಗಕ್ಕೆ ಸೇರಿದ ಪ್ರಾಣಿ-ಪಕ್ಷಿಗಳು ಸಮಾನ ಸಂವಹನ ನಡೆಸುತ್ತವೆ.

ಭಾಷೆ ಎಂದರೆ ಒಂದು ಸಮಾಜದ ಜನರು ಪರಸ್ಪರ ವ್ಯವಹಾರಕ್ಕಾಗಿ ಬಳಸುವ ಯಾದೃಚ್ಚಿಕ (ಸ್ವತಂತ್ರ) ಧ್ವನಿ ಸಂಕೇತಗಳ ಒಂದು ವ್ಯವಸ್ಥೆಯಾಗಿದೆಎನ್ನುತ್ತಾರೆ ಭಾಷಾ ವಿಜ್ಞಾನಿಗಳು. ಈ ಪ್ರಪಂಚದಲ್ಲಿ ಹಲವಾರು ಭಾಷೆಯಗಳಿವೆ. ಆದರೆ ಎಲ್ಲಾ ಭಾಷೆಗಳಲ್ಲಿಯೂ ಸಾಮಾನ್ಯವಾಗಿ ಎರಡು ರೀತಿಯ ಸಾಮ್ಯತೆಗಳು ಕಂಡು ಬರುತ್ತವೆ.

ಅವು ಯಾವುವೆಂದರೆ:

ಅ) ಅಕ್ಷರ / ಪದ (ನಿರೂಪಣೆಗೆ ಉಪಯೋಗಿಸಲು)

ಆ) ವ್ಯಾಕರಣ (ಸಂಕೇತಗಳನ್ನು ಬಳಸಲು)

ಒಂದೇ ಪದಕ್ಕೆ ಕೆಲವೊಮ್ಮೆ ಬೇರೆ ಬೇರೆ ಭಾಷೆಗಳಲ್ಲಿ ವಿಭಿನ್ನ ರೀತಿಯಾದ ಅರ್ಥವಿರುತ್ತದೆ.

ಉದಾ: ನಾಡಾ (ಓಂಆಂ) ಎಂಬ ಪದಕ್ಕೆ ಸ್ಪಾನಿಷ್ ಭಾಷೆಯಲ್ಲಿ ಇಲ್ಲಎಂಬರ್ಥವಿದ್ದರೆ, ಕ್ರೊಯೇಷಿಯನ್ ಭಾಷೆಯಲ್ಲಿ ಆಶಯಎಂಬರ್ಥವಿದೆ.

ಭಾಷೆಯ ರೂಪ:

ನಾವು ಯಾವುದನ್ನು ಭಾಷೆ ಎಂದು ಕರೆಯುತ್ತೇವೆಯೋ ಅದರಲ್ಲಿ ಇರುವ ಪದಗಳೆಲ್ಲಾ ಅಮೂರ್ತರೂಪ ಹಾಗೆಯೇ ಸಾಂಕೇತಿಕ (ಸಂಕೇತಗಳ ಗುಂಪು). ಈ ಸಂಕೇತಗಳನ್ನು ಒಂದು ಭಾಷಿಕ ಸಮುದಾಯದ ಪರಂಪರೆ ಬೆಳೆಸಿಕೊಂಡು ಬಂದಿರುತ್ತದೆ. ಸಾವಿರಾರು ವರ್ಷಗಳ ಅವಧಿಯಲ್ಲಿ ಈ ರೂಢಿಗತ ಸಂಕೇತಗಳ ಬಳಕೆ ಎಷ್ಟು ಗಟ್ಟಿಯಾಗಿ ಬೇರುಬಿಟ್ಟಿರುತ್ತದೆ ಎಂದರೆ ಒಂದು ಪದಹಾಗೂ ಅದರ ಅರ್ಥಇವುಗಳ ನಡುವೆ ಅವಿನಾಸಂಬಂಧಇದ್ದ ಹಾಗೆ ಕಂಡುಬರುತ್ತದೆ. ಆದರೆ ಇದು ಸತ್ಯವಲ್ಲ. ಇದು ಬರಿಯ ತೋರಿಕೆ.

ಸೋಸ್ಕೋ ಎಂಬ ಭಾಷಾಶಾಸ್ತಜ್ಞ ಭಾಷೆ ಎಂದರೆ ಕೇವಲ ಶಬ್ದಗಳ ನೆನಪು, ಧ್ವನಿತರಂಗಗಳ ನೆನಪು, ಒಂದು ವಸ್ತುವನ್ನು ಸೂಚಿಸುವ ಪದವಲ್ಲ, ಕೇವಲ ಒಂದು ಪರಿಕಲ್ಪನೆಎನ್ನುತ್ತಾನೆ.  ಕುತೂಹಲದ ವಿಷಯವೆಂದರೆ ಪ್ರಾಚೀನ ಭಾರತೀಯ ಚಿಂತಕರು ಸಹ ಭಾಷೆಯ ಪದಗಳ ಬಗ್ಗೆ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಲಿಪಿಯು ಭಾಷೆಗೆ ಸಂಕೇತವಾಗುತ್ತದೆ.

ಭಾಷಾ ಶಾಸ್ತ್ರಜ್ಞರ ಪ್ರಕಾರ ಜಗತ್ತಿನ ಹೆಚ್ಚು ಭಾಷೆಗಳಿಗೆ ತಮ್ಮದೇ ಆದ (ಸ್ವತಂತ್ರ) ಲಿಪಿ ಇಲ್ಲ. ಯುರೋಪಿನ ಯಾವ ಭಾಷೆಗೂ ತನ್ನದೇ ಆದ ಲಿಪಿ ಇಲ್ಲ. ಇಂಗ್ಲೀಷ್, ಫ್ರೆಂಚ್, ಜರ್ಮನ್ ಮುಂತಾದ ಭಾಷೆಗಳೆಲ್ಲಾ ರೋಮನ್ (ಲ್ಯಾಟಿನ್) ಲಿಪಿಯನ್ನು ಉಪಯೋಗಿಸುತ್ತವೆ. ಭಾರತದಲ್ಲಿರುವ ಅನೇಕ ಲಿಪಿಗಳಿಗೆ ಅಶೋಕನ ಬ್ರಾಹ್ಮಿಲಿಪಿಯೇ ಮೂಲವಾಗಿದೆ. ಒಂದು ಭಾಷೆ ತನಗೆ ಬೇಕಾದ ಯಾವುದೇ ಲಿಪಿಯನ್ನು ಅಗತ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬಹುದು.

ಉದಾ: ಕರ್ನಾಟಕದಲ್ಲಿ ಕೊಂಕಣಿಯನ್ನು ಕನ್ನಡ ಲಿಪಿಯಲ್ಲಿ ಬರೆಯುತ್ತಾರೆ. ಹಾಗೆಯೇ ಗೋವಾ-ಮಹಾರಾಷ್ಟ್ರಗಳಲ್ಲಿ ಕೊಂಕಣಿಯನ್ನು ದೇವನಾಗರಿ ಲಿಪಿಯಲ್ಲಿ ಬರೆಯುತ್ತಾರೆ.

ಭಾಷೆಯಂತೆ ಲಿಪಿಯೂ ಸಹ ಸಾಂಕೇತಿಕವೇ. ನಾವು ಕಾಗದದ ಮೇಲೆ ಬರೆಯುವ ಚಿಹ್ನೆಗೂ, “ಎಂಬ ಉಚ್ಚಾರಕ್ಕೂ ಯಾವ ಸಂಬಂಧವೂ ಇಲ್ಲ. ಇಲ್ಲಿರುವುದು ರೂಢಿಗತ ಯಾದೃಚ್ಚಿಕ ಸಂಬಂಧ. ಭಾಷೆಯ ಉಚ್ಚರಿತ ರೂಪ ಬದಲಾದರೂ ಲಿಖಿತ ರೂಪ ಮಾತ್ರ ಸ್ಥಿರವಾಗಿಯೇ ಉಳಿಯುತ್ತದೆ.

ಲಿಪಿಯ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಇನ್ನೂ ಖಚಿತವಾಗಿ ಯಾರಿಗೂ ಏನನ್ನೂ ಹೇಳಲು ಸಾಧ್ಯವಾಗಿಲ್ಲ. ಈ ವಿಷಯವನ್ನು ಕುರಿತು ವಿದ್ವಾಂಸರಲ್ಲಿಯೇ ಸಹಮತವಿಲ್ಲ. ವರ್ಣಮಾಲೆಎಂಬ ಸಂಶೋಧನಾ ಕೃತಿಯ ಲೇಖಕ ಡಿರಿಂಜರ್ ಹೀಗೆ ಹೇಳುತ್ತಾರೆ.

ವರ್ಣಮಾಲೆಗಳ ನಾಲ್ಕು ಸಾವಿರ ವರ್ಷಗಳ ಇತಿಹಾಸದಿಂದ ನಮಗೆ ಸ್ಪಷ್ಟವಾಗುವ ಅಂಶಗಳೆಂದರೆ
  1. ಭಾಷೆಗಳು ವಾಚಕ ರೂಪದಿಂದ ನೂರಾರು ವರ್ಷ ಉಳಿದು, ಬೆಳೆದ ನಂತರ ಯಾವುದೋ ಕಾಲಘಟ್ಟದಲ್ಲಿ ಯಾವುದೋ ಒಂದು ಲಿಪಿಯನ್ನು ಅವಲಂಬಿಸಿ ಲಿಖಿತ ರೂಪ ಪಡೆಯುತ್ತವೆ.
  2. ಜಗತ್ತಿನ ಯಾವ ಭಾಷೆಗೂ ತನ್ನದೇ ಆದ ಸ್ವಂತ ಲಿಪಿಯಿಲ್ಲ.
  3. ಭಾಷೆಗಳಂತೆಯೇ ಲಿಪಿಗಳೂ ಹುಟ್ಟುತ್ತವೆ. ಬೆಳೆಯುತ್ತವೆ. ಬದಲಾವಣೆಗೆ ಒಳಪಡುತ್ತವೆ. ಹಾಗೆಯೇ ಸಾಯುತ್ತವೆ.
  4. ಒಂದು ಭಾಷೆಗೂ, ಅದರ ಲಿಪಿಗೂ ಇರುವ ಸಂಬಂಧ ಯಾದೃಚ್ಚಿಕ.
  5. ಭಾಷೆಯಂತೆ ಲಿಪಿಯೂ ಕಾಲಕಾಲಕ್ಕೆ ಬದಲಾಗುವ ಸಂಕೇತಗಳ ವ್ಯವಸ್ಥೆ.

ಒಂದು ಭಾಷೆಯು ಲಿಪಿಯಾಗಿ ರೂಪುಗೊಳ್ಳುವುದಕ್ಕೂ ಮೊದಲೇ ಮೌಖಿಕ ಪರಂಪರೆಯಲ್ಲಿ ಬಹುದೂರ ಸಾಗಿ ಬಂದಿರುತ್ತದೆ. ಆ ಮೌಖಿಕ ಪರಂಪರೆ ತಲೆಮಾರಿನಿಂದ ತಲೆಮಾರಿಗೆ ಬಾಯಿಂದ ಬಾಯಿಗೆ ಹರಿದು ಬಂದಿರುತ್ತದೆ.

ಉದಾ: ಹೋಮರನ ಇಲಿಯಡ್ಮತ್ತು ಓಡಿಸ್ಸಿ” (ಸುಮಾರು ಕ್ರಿ. ಪೂ. ಹತ್ತನೇ ಶತಮಾನದಲ್ಲಿ ರಚಿತವಾದ ಕೃತಿ) ಎಂಬ ಕಾವ್ಯಗಳು ಕ್ರಿ.ಪೂ. ಹದಿಮೂರನೇ ಶತಮಾನದಲ್ಲಿ ಹತ್ತು ವರ್ಷಗಳ ಕಾಲ ನಡೆದ ಟ್ರೋಜನ್ ಯುದ್ಧದ ಕುರಿತು ಜನರ ಬಾಯಿಯಲ್ಲಾಡುತ್ತಿದ್ದ ಕಥನ ಕಾವ್ಯವನ್ನು ಆಧರಿಸಿದೆ. ಹಾಗೆಯೇ ರಾಮಾಯಣ (ಕ್ರಿ.ಪೂ.4000-3000), ಮಹಾಭಾರತ (ಕ್ರಿ.ಪೂ. 3000) ಕಾವ್ಯಗಳೂ ಸಹ ಜನಪದ ಕಥನ ಕಾವ್ಯವನ್ನು ಆಧರಿಸಿವೆ.

ಭಾಷೆ ಹೇಗೆ ಹುಟ್ಟಿತು:

ಭಾಷೆ ಹೇಗೆ ಹುಟ್ಟಿತು? ಮನುಷ್ಯ ಭಾಷೆಯ ಬಳಕೆಯನ್ನು ಹೇಗೆ ಆರಂಭಿಸಿದ? ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಸಂಸ್ಕೃತ ವೈಯಾಕರಣಿಯಾದ ಪಾಣಿನಿಯು (ಈತನ ಕಾಲ ಸುಮಾರು ಕ್ರಿ.ಪೂ. ಏಳನೇ ಅಥವಾ ಎಂಟನೇ ಶತಮಾನ) ಈ ಬಗ್ಗೆ ಚಿಂತಿಸಿ ಅಷ್ಟಾಧ್ಯಾಯೀಎಂಬ ವ್ಯಾಕರಣ ಗ್ರಂಥ ರಚಿಸಿದ್ದಾನೆ. ಈ ಗ್ರಂಥದಲ್ಲಿ ಎಂಟು ಅಧ್ಯಾಯಗಳಿವೆ.

ಪಾಣಿನಿಯ ಅಷ್ಟಾಧ್ಯಾಯಿವಿಶ್ವದಲ್ಲಿಯೇ ಮೊಟ್ಟಮೊದಲ ಪರಿಪೂರ್ಣ ವ್ಯಾಕರಣ. ಶತಮಾನದ ಭಾಷಾ ವಿಜ್ಞಾನಿ ಬ್ಲೂಮ್ ಫೀಲ್ಡ್ ಹೇಳುವ ಹಾಗೆ ಕ್ರಿ. ಪೂ 350-250ರ ಅವಧಿಯಲ್ಲಿ ರಚಿಸಲ್ಪಟ್ಟ ಈ ವ್ಯಾಕರಣ ಮಾನವನ ಬೌದ್ಧಿಕತೆಯ ಅತ್ಯುತ್ತಮ ಸ್ಮಾರಕ. ಇಲ್ಲಿಯವರೆಗೆ ಯಾವುದೇ ಬೇರೆ ಭಾಷೆಯಲ್ಲಿ ಹೀಗೆ ವಿವರಿಸಲ್ಪಟ್ಟಿಲ್ಲ

ಈ ಸಂದರ್ಭದಲ್ಲಿ ನಾವು ಗಮನಿಸಬಹುದಾದ ಆಸಕ್ತಿಕರ ವಿಚಾರವೆಂದರೆ, ಪಾಣಿನಿ ತನ್ನ ಗ್ರಂಥವಾದ ಅಷ್ಟಾಧ್ಯಾಯೀಯಲ್ಲಿ ವ್ಯಾಕರಣ ಸಿದ್ಧಾಂತಗಳನ್ನು ನಿರೂಪಿಸುವುದಕ್ಕೂ ಮೊದಲೇ, ಬಹಳ ಹಿಂದಿನಿಂದಲೇ ಜನರ ಆಡುಭಾಷೆಯಲ್ಲಿಯೇ ಆಡುಭಾಷೆಗಿಂತ ವಿಭಿನ್ನವಾದ ಒಂದು ಶಿಷ್ಟರೂಪದ ಭಾಷೆಯು ಜಾನಪದ ಕಥನ-ಕಾವ್ಯಗಳಲ್ಲಿ ಸ್ಥಾನ ಪಡೆದುಕೊಂಡಿತ್ತು.

ಆಡುಮಾತಿಗೂ, ಬರವಣಿಗೆಯ ಭಾಷೆಗೂ ಸ್ಪಷ್ಟವಾದ ವ್ಯತ್ಯಾಸಗಳಿವೆ. ಆಡುಮಾತಿನಲ್ಲಿ ನಾವು ನಿಯಮ ಪಾಲಿಸುವುದಿಲ್ಲ. ಆದರೆ ಬರವಣಿಗೆಯಲ್ಲಿ ನಾವು ವ್ಯಾಕರಣ ಇಲ್ಲದೇ ಬರೆಯಲು ಸಾಧ್ಯವಿಲ್ಲ.

ಭಾಷೆಯ ಮಿತಿ:

ಭಾಷೆಯ ಮೂಲಕವೇ ನಮ್ಮ ಯೋಚನೆಗಳು-ಚಿಂತನೆಗಳು ಸಾಗುವುದು. ಹಾಗಾಗಿ ನಮಗೆ ನಮ್ಮ ಭಾಷೆಯಲ್ಲಿ ಒಂದು ಸಾವಿರ ಪದಗಳು ಮಾತ್ರ ಗೊತ್ತಿರುವುದು ಎಂದರೆ, ನಾವು ಆ ಒಂದು ಸಾವಿರ ಪದಗಳನ್ನು ಬಳಸಿಯೇ ನಮ್ಮೆಲ್ಲಾ ಭಾವನೆಗಳನ್ನೂ ವ್ಯಕ್ತಪಡಿಸಬೇಕಾಗುತ್ತದೆ. ಸಾವಿರಾರು ವರ್ಷಗಳ ಹಿಂದೆ ಸಾಮಾನ್ಯವಾಗಿ ಎಲ್ಲಾ ಭಾಷೆಗಳಲ್ಲಿಯೂ ಪರಿಸ್ಥಿತಿ ಹೀಗೆಯೇ ಇತ್ತು. ಈಗ ಪ್ರಪಂಚದಲ್ಲಿ ಹಲವಾರು ಸಾವಿರ ಭಾಷೆಗಳಿವೆ. ಹಾಗೆಯೇ ಇವುಗಳಲ್ಲಿ ಕೇವಲ ಹತ್ತು ಸಾವಿರ ಪದ ಭಂಡಾರವೂ ಇಲ್ಲದ ಭಾಷೆಗಳೂ ಇವೆ.

ಭಾಷೆ ಯಾರ ನಿರ್ಮಿತಿ:

ಕೆಲವರು ಭಾಷೆ ಮಾನವ ನಿರ್ಮಿತವಲ್ಲ, ಅದು ದೇವರ ಸೃಷ್ಟಿ ಎಂದು ವಾದಿಸಿದರೆ, ಮತ್ತೆ ಕೆಲವರು ಭಾಷೆ ಮಾನವ ಸೃಷ್ಟಿ ಎಂದು ಹೇಳುತ್ತಾರೆ. ಹೀಗೆ ಚರ್ಚಿಸುತ್ತಾ ಹೋದಂತೆ ಭಾಷೆಯ ಇತಿಹಾಸ ಬಹಳ ಹಿಂದೆ ಎಂದರೆ ಸುಮಾರು ಮೂರು ಸಾವಿರ ವರ್ಷಗಳಷ್ಟು ಹಿಂದೆ ಹೋಗುತ್ತದೆ. ಹರ್ಡರ್ಎಂಬ ವಿದ್ವಾಂಸ ಬರ್ಲಿನ್‍ನಲ್ಲಿ ಮೊದಲ ಬಾರಿಗೆ ಭಾಷೆಯ ಉಗಮದ ಬಗ್ಗೆ ಒಂದು ಪ್ರಬಂಧ ಮಂಡಿಸಿ, ಭಾಷೆ ದೈವದತ್ತವಾದುದಲ್ಲ ಎಂದು ಹೇಳಿದ. ಅಲ್ಲಿಯತನಕ ಭಾಷೆ ದೈವದತ್ತವಾದುದು ಎಂದೂ, ಮನುಷ್ಯನಿಗೆ ಹುಟ್ಟಿನಿಂದಲೇ ಭಾಷೆ ಬರುತ್ತದೆ ಎಂದೇ ನಂಬಲಾಗಿತ್ತು. ಇಷ್ಟಾದ ಮೇಲೆಯೂ ಸಹ ಈಗಲೂ ಕೆಲವರು ಭಾಷೆ ದೈವದತ್ತ ಎಂದೇ ನಂಬಿದ್ದಾರೆ.

ಪ್ರಕೃತಿ, ಭೂಮಿ, ನದಿ, ಪರ್ವತ, ಆಕಾಶದ ಹಾಗೆ ಭಾಷೆಯೂ ದೇವರ ಸೃಷ್ಟಿ ಎಂಬುದು ಅವರ ನಂಬಿಕೆ. ಅವರ ವಾದವೇನೆಂದರೆ; ಬೇರೆ ಪ್ರಾಣಿಗಳ ಹಾಗೆ ಮನುಷ್ಯನೂ ಪ್ರಾಣಿ. ಆದರೆ ಆ ಪ್ರಾಣಿಗಳಿಗೆ ಇಲ್ಲದ ಸೌಲಭ್ಯ ಮನುಷ್ಯನಿಗೆ ಮಾತ್ರ ಯಾಕೆ? ಪ್ರಾಣಿಗಳು ಏಕೆ ಮಾತನಾಡುವುದಿಲ್ಲ? ಜಗತ್ತಿನ ಎಲ್ಲಾ ಸೃಷ್ಟಿಗೂ ದೇವರೇ ಕಾರಣ. ಹಾಗೆಯೇ ಭಾಷೆ ಕೂಡ ದೇವರಿಂದಲೇ ಹುಟ್ಟಿದ್ದು ಎಂಬುದು ಇವರ ವಾದ.

  • 17 ನೇ ಶತಮಾನದ ಭಟ್ಟಾಕಳಂಕನು ವೈಯ್ಯಾಕರಣಿಯಲ್ಲಿ ಭಾಷೆಗಳೆಲ್ಲವೂ ಭಗವಂತನ ಸೃಷ್ಟಿಅಂತ ಹೇಳಿದ್ದಾನೆ.
  • ಶಬ್ದವು ದೇವರಿಂದ ಹೊರಬಂದು ಭಾಷೆಯಾಗಿ ರೂಪುಗೊಂಡಿತು. ಈ ದೈವಬಲದಿಂದ ಜನರು ಮಾತನಾಡಲು ತೊಡಗಿದರುಕ್ರೈಸ್ತರ ನಂಬಿಕೆ.
  • ಈಜಿಪ್ಟ್‌ನಲ್ಲಿ ಭಾಷೆಗಾಗಿಯೇ ಪ್ರತ್ಯೇಕ ದೈವವಿದೆ. ಥಾಥ್ಎಂಬ ದೈವ ಜನರಿಗೆ ಭಾಷೆಯ ವರದಾನ ನೀಡಿತು ಎಂದು ನಂಬುತ್ತಾರೆ.
  • ಚೀನಾದಲ್ಲಿಯೂ ಭಾಷೆ ಮನುಷ್ಯನಿಗೆ ದೈವದತ್ತವಾಗಿ ಬಂದಿತು ಎಂದು ನಂಬುತ್ತಾರೆ.
  • ಇಡೀ ಸೃಷ್ಟಿಯಲ್ಲಿ ಮೊದಲೂ ನೀರಿತ್ತಂತೆ. ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಮೊದಲು ಬ್ರಹ್ಮ ಇಡೀ ಜೀವರಾಶಿಯನ್ನು ಸೃಷ್ಟಿ ಮಾಡಿದ. ಇದೇ ದೇವರು ಮನುಷ್ಯರಿಗೆ ಮಾತನಾಡುವ ಶಕ್ತಿ ನೀಡಿದಎಂದು ಜನಪದರು ನಂಬಿದ್ದಾರೆ.

ಪ್ರಾಚೀನ ಭಾಷೆ ಯಾವುದು:

ಪ್ರಪಂಚದಲ್ಲಿ ಇರುವ ಭಾಷೆಗಳಲ್ಲಿ ಅತ್ಯಂತ ಹಳೆಯ ಭಾಷೆ ಯಾವುದು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಆದರೆ ಆಯಾ ದೇಶದವರು ತಮ್ಮಲ್ಲಿರುವ ಹಳೆಯ ಭಾಷೆಯೇ ಜಗತ್ತಿನ ಎಲ್ಲಾ ಭಾಷೆಗಳಿಗೂ ಮೂಲ ಅಂತ ವಾದಿಸುತ್ತಾರೆ.

ಬೌದ್ಧರು : ಪಾಳಿಭಾಷೆಯನ್ನು ಜಗತ್ತಿನ ಹಳೆಯ ಭಾಷೆ ಎನ್ನುತ್ತಾರೆ.

ಜೈನರು : ಅರ್ಧಮಾಗಧಿಭಾಷೆಯನ್ನು ಜಗತ್ತಿನ ಹಳೆಯ ಭಾಷೆ ಎನ್ನುತ್ತಾರೆ.

ಯಹೂದಿಗಳು : ಹೀಬ್ರೂಭಾಷೆಯನ್ನು ಜಗತ್ತಿನ ಮೂಲ ಭಾಷೆ ಎನ್ನುತ್ತಾರೆ.

ಭಾರತೀಯರು : ಸಂಸ್ಕೃತವನ್ನು ಮೂಲ ಭಾಷೆ ಎನ್ನುತ್ತೇವೆ.

ಸುಮಾರು ಕ್ರಿ.ಶ. 7ನೇ ಶತಮಾನದ ಗ್ರೀಕ್ ಇತಿಹಾಸಗಾರ ಹೆರೋಡೋಟಸ್ ಭಾಷೆಯ ಹುಟ್ಟನ್ನು ಕುರಿತು ಒಂದು ಕಥೆ ಹೇಳುತ್ತಾನೆ.

ಕಥೆ: ಪ್ಲಮೆತಿಕಸ್ ಎಂಬ ಈಜಿಪ್ಟ್ ದೊರೆ ಅತ್ಯಂತ ಹಳೆಯ ಭಾಷೆ ಯಾವುದುರಬಹುದು ಎಂದು ತಿಳಿಯಲು ಇಬ್ಬರು ಪುಟ್ಟ ಬಾಲಕರನ್ನು ಜನಸಂಪರ್ಕದಿಂದ ದೂರ ಇರಿಸುತ್ತಾನೆ. ಇವರನ್ನು ನೋಡಿಕೊಳ್ಳಲು ಒಬ್ಬ ವ್ಯಕ್ತಿಯನ್ನು ನೇಮಿಸುತ್ತಾನೆ. ಒಂದು ದಿನ ಆ ಮಕ್ಕಳಿಬ್ಬರೂ ಆ ವ್ಯಕ್ತಿಯ ಬಳಿ ಓಡಿ ಬಂದು ಬೇಕುಸ್ಎನ್ನುತ್ತಾರೆ. ಬೇಕುಸ್ಎಂದರೆ ಫ್ರಿಜಿಯನ್ ಭಾಷೆಯಲ್ಲಿ ರೊಟ್ಟಿ ಎಂದರ್ಥ. ಇದರಿಂದ ಆ ರಾಜನು ಈ ಫ್ರಿಜಿಯನ್ ಭಾಷೆಯನ್ನೇ ಪ್ರಾಚೀನ ಭಾಷೆ ಎಂದು ನಿರ್ಧರಿಸುತ್ತಾನೆ.

ಆದರೆ, ಒಂದು ವೇಳೆ ಪ್ಲಮೆತಿಕಸ್ ಆಸ್ಥಾನದಲ್ಲಿ ಕನ್ನಡ ವಿದ್ವಾಂದರಿದ್ದರೆ, ಆ ಮಕ್ಕಳು ಕನ್ನಡದ ಬೇಕುಎಂಬ ಪದ ಉಚ್ಚರಿಸಿದರೆಂದೂ, ಆ ಮೂಲಕ ಕನ್ನಡವೇ ಜಗತ್ತಿನ ಅತಿ ಪ್ರಾಚೀನ ಭಾಷೆಯೆಂದು ಘೋಷಿಸುತ್ತಿದ್ದರು ಎಂದು ಚಿದಾನಂದ ಮೂರ್ತಿಯವರು ಹಾಸ್ಯ ಮಾಡಿದ್ದಾರೆ.

ಭಾಷೆಯ ಉಗಮದ ಬಗ್ಗೆ ಬೇರೆ ಬೇರೆ ವಿದ್ವಾಂಸರ ಅಭಿಪ್ರಾಯಗಳು:
  •  “ಕಾಂಡಿಲಾಕ್ಎಂಬ ವಿದ್ವಾಂಸ ಪ್ರಕೃತಿಯ ಮೊದಲ ಸ್ತ್ರೀ ಮತ್ತು ಪುರುಷರ ಸ್ವಭಾವದಲ್ಲಿನ ಆವೇಶಗಳು ಧ್ವನಿರೂಪದಲ್ಲಿ ಹೊರಬಿದ್ದು ಕ್ರಮೇಣ ಶಬ್ದಗಳಾಗಿ, ಈ ಶಬ್ದಗಳು ಸಂಕೇತಗಳಾಗಿ, ನಂತರ ಭಾಷೆಯಾಗಿ ರೂಪುಗೊಂಡಿರಬಹುದು ಎನ್ನುತ್ತಾನೆ.
  • ಹರ್ಡರ್ಎಂಬ ವಿದ್ವಾಂಸನ ಪ್ರಕಾರ ಭಾಷೆ ದೈವದತ್ತವಲ್ಲ. ಹಾಗೇನಾದರೂ ಭಾಷೆ ದೈವದತ್ತವಾಗಿದ್ದರೆ ಅದು ಸಮರ್ಪಕವಾಗಿರುತ್ತಿತ್ತು. ಆದರೆ ಭಾಷೆ ಅಸಮರ್ಪಕವಾಗಿದೆ. ಮನುಷ್ಯ ಭಾಷೆಯನ್ನು ತಾನೇ ಬುದ್ಧಿಪೂರ್ವಕವಾಗಿ ರೂಪಿಸಿಕೊಂಡಿದ್ದಾನೆ ಎನ್ನುತ್ತಾನೆ ಅವನು. ಈ ವಾದವನ್ನು ಸ್ವಲ್ಪ ಮಟ್ಟಿಗೆ ಒಪ್ಪಬಹುದು. ಏಕೆಂದರೆ, ಭಾವಾವೇಶದಿಂದ ಹೊರಹಾಕಿದ ಶಬ್ದಗಳಿಂದ ಭಾಷೆ ಹುಟ್ಟುತ್ತದೆ ಎಂಬುದು ತಪ್ಪು ಅಭಿಪ್ರಾಯ. ಪ್ರಾಣಿಗಳೂ ಇದೇ ರೀತಿ ಶಬ್ದಗಳನ್ನು ಮಾಡಿದರೂ, ಅವು ಭಾಷೆಯನ್ನು ಸೃಷ್ಟಿಸಿಕೊಂಡಿಲ್ಲ. ಹಾಗಾಗಿ ಮನುಷ್ಯನ ಮಾನಸಿಕ ಬುದ್ಧಿಯಿಂದ ಭಾಷೆ ರೂಪುಗೊಂಡಿದೆ ಎನ್ನುವುದರಲ್ಲಿ ಸಂಶಯವಿಲ್ಲ.
  • ಲೀಬ್ನಿಜ್ಎಂಬ ವಿದ್ವಾಂಸನ ಪ್ರಕಾರ ಬಹಳ ಹಿಂದೆ ಆದಿಮಾನವ ತನ್ನ ಸುತ್ತಮುತ್ತಲಿನ ಪ್ರಾಣಿ-ಪಕ್ಷಿಗಳ ಧ್ವನಿಯನ್ನು ಅನುಕರಣೆ ಮಾಡತೊಡಗಿದ. ಇದರ ಫಲವೇ ಭಾಷೆ. ಈ ವಾದವನ್ನು ಸಹ ಒಪ್ಪಬಹುದು. ಏಕೆಂದರೆ ಪುಟ್ಟ ಮಕ್ಕಳು ಭಾಷೆ ಕಲಿಯುವಾಗ ನಾಯಿಗೆ ಬೌ ಬೌ ಎಂದೂ, ಕೋಳಿಗೆ ಕ್ಕೊ ಕ್ಕೋ ಎಂದೂ ಅನುಕರಣೆ ಮಾಡುತ್ತವೆ.
  • ಮಾನವನ ವಿವಿಧ ರೀತಿಯ ಉದ್ಗಾರಗಳೇ ಭಾಷೆಯ ಉಗಮಕ್ಕೆ ಕಾರಣ ಎಂಬುದು ಹಲವರ ವಾದ. ಆದರೆ ಹಸಿವಾದಾಗ ಒಂದು ಕರು ಅಂಬಾಎಂದು ಕೂಗುವಂತೆ, ಹಲವು ಪ್ರಾಣಿಗಳು ಹಲವು ರೀತಿಯ ಉದ್ಗಾರ ಮಾಡುತ್ತವೆ. ಹಾಗಾದರೆ ಇತರ ಪ್ರಾಣಿಗಳ ಉದ್ಗಾರವೇಕೆ ಭಾಷೆಯಾಗಿ ರೂಪುಗೊಂಡಿಲ್ಲ? ಹಾಗಾಗಿ ಉದ್ಗಾರಗಳು ಭಾಷೆಯ ಹುಟ್ಟಿಗೆ ಮೂಲ ಕಾರಣವಲ್ಲ ಎಂದು ಒಪ್ಪಿಕೊಳ್ಳಬೇಕಾಗುತ್ತದೆ.
  • ರಿವೇಜ್ಎಂಬ ವಿದ್ವಾಂಸ ಇನ್ನೊಬ್ಬರೊಡನೆ ಸಂಪರ್ಕ ಬೆಳೆಸುವ ಮಾನವನ ಅಭಿಲಾಷೆಯೇ ಭಾಷೆಯನ್ನು ರೂಪಿಸಿತು ಎನ್ನುತ್ತಾನೆ.
  • ಮ್ಯಾಕ್ಸ್ ಮುಲ್ಲರ್ನು ಪ್ರಕೃತಿಯಲ್ಲಿ ಯಾವುದೇ ವಸ್ತುವಿಗೆ ಹೊಡೆದರೂ ಒಂದು ರೀತಿಯ ಶಬ್ದ ಬರುತ್ತದೆ. ಈ ಶಬ್ದವು ನಿಯಮಗಳಿಗನುಸಾರವಾಗಿ ಇರುತ್ತದೆ. ಆದರೆ ಎಲ್ಲಾ ವಸ್ತುಗಳೂ ಒಂದೇ ರೀತಿಯ ಶಬ್ದ ಮಾಡುವುದಿಲ್ಲ. ಹಾಗೆಯೇ ಒಂದೇ ವಸ್ತುವಿಗೆ ಪದೇ ಪದೇ ಹೊಡೆದಾಗ ಒಂದೇ ರೀತಿಯ ಶಬ್ದ ಹೊರಡಿಸುತ್ತದೆ. ಈ ಧ್ವನಿಗಳು ಮನುಷ್ಯನ ಮನಸ್ಸಿನ ಮೇಲೆ ಬೀರಿದ ಪರಿಣಾಮವೇ ಭಾಷೆಯ ಹುಟ್ಟಿಗೆ ಕಾರಣವಾಯ್ತು ಎಂದು ಹೇಳಿದ್ದಾನೆ. ಒಂದು ಮಗುವಿನಲ್ಲಿ ಅದರ ಮೆದುಳಿನಲ್ಲಿ ಅದರ ಹುಟ್ಟಿನಿಂದಲೇ ಒಂದು ಸಾರ್ವತ್ರಿಕ ವ್ಯಾಕರಣ ಹೊಂದಿರುತ್ತದೆ. ಈ ಸಾರ್ವತ್ರಿಕ ವ್ಯಾಕರಣ ಹೇಗಿರುತ್ತದೆ ಎಂದರೆ, ಜಗತ್ತಿನ ಯಾವುದೇ ಭಾಷೆಗೂ ಈ ವ್ಯಾಕರಣ ಹೊಂದಿಕೊಳ್ಳಬಲ್ಲುದು. ಆದ್ದರಿಂದಲೇ ನಿರ್ದಿಷ್ಟ ವಯಸ್ಸಿನ ಮಗುವಿಗೆ ಜಗತ್ತಿನ ಯಾವುದೇ ಭಾಷೆ ಕಲಿಸದರೂ ಆ ಮಗು ಸಹಜವಾಗಿ ಕಲಿಯುತ್ತದೆ.

ಉದಾ: ಕರ್ನಾಟದಲ್ಲಿ ಹುಟ್ಟಿದ ಮಗುವನ್ನು ನಿರ್ದಿಷ್ಟ ವಯಸ್ಸಿನಲ್ಲಿ ಚೀನಾ ಅಥವಾ ಜಪಾನಿನಲ್ಲಿ ಬೆಳೆಸಿದರೆ, ಆ ಮಗು ಆ ದೇಶದ ಭಾಷೆಯನ್ನು ಸಹಜವಾಗಿ ಕಲಿಯುತ್ತದೆ. ಮತ್ತು ಆ ಮಗುವಿನ ಮಾತೃಭಾಷೆಯಾದ ಕನ್ನಡ ಆ ಮಗುವಿಗೆ ಪರದೇಶದ ಭಾಷೆಯಾಗುತ್ತದೆ. ಇದರಿಂದ ಮನುಷ್ಯ ಹುಟ್ಟುವಾಗಲೇ ಆತನೊಂದಿಗೆ ಭಾಷಾ ವ್ಯಾಕರಣ ಹುಟ್ಟಿರುತ್ತದೆ ಎಂದು ವ್ಶೆಜ್ಞಾನಿಕವಾಗಿ ಸಾಬೀತು ಮಾಡಬಹುದಾಗಿದೆ.

ಉಪಸಂಹಾರ:

ಆದರೆ ಜಗತ್ತಿನ ಎಲ್ಲಾ ಭಾಷೆಗಳ ಮೂಲ ಭಾಷೆ ಒಂದೇ ಎಂದು ಒಪ್ಪಿಕೊಳ್ಳಲು ಬರುವುದಿಲ್ಲ. ಏಕೆಂದರೆ ಜಗತ್ತಿನ ಭಾಷೆಗಳೆಲ್ಲವೂ ಒಂದೇ ಭಾಷೆಯಿಂದ ರೂಪುಗೊಂಡಿದ್ದರೆ ಅವುಗಳ ರಚನೆಯಲ್ಲಿ ಸಾಮ್ಯತೆ ಇರಬೇಕಿತ್ತು. ಉದಾಹರಣೆಗೆ ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಅವುಗಳ ಮೂಲ ಭಾಷೆಯಾದ ದ್ರಾವಿಡ ಭಾಷೆಯ ಲಕ್ಷಣ ಕಾಣಬಹುದು. ಆದರೆ ಜಗತ್ತಿನ ಬೇರೆ ಬೇರೆ ಭಾಷೆಗಳು ಬೇರೆ ಬೇರೆ ರೀತಿಯ ¯ಕ್ಷಣ ಹೊಂದಿವೆ. ಭಾಷೆಯ ಉಗಮದ ಬಗ್ಗೆ ಇದುವರೆಗೂ ಯಾರಿಂದಲೂ ಏನನ್ನೂ ಖಚಿತವಾಗಿ ಹೇಳಲಾಗಿಲ್ಲ. ಭಾಷೆಯ ಉಗಮವನ್ನು ಸಂಶೋಧಿಸುತ್ತಾ ಹೋದಂತೆ ಅದು ಇನ್ನೂ ಜಟಿಲವಾಗುತ್ತಲೇ ಹೋಗುತ್ತಿದೆ.

ಕೆ ಎ.ಸೌಮ್ಯ
ಮೈಸೂರು

(M A Kannada)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)