ಸಂಸ್ಕೃತ ಮೃತ ಭಾಷೆಯೇ?


ಸಂಸ್ಕೃತ ಎಂದರೆ ಸಮ್ಯಕ್ ಕೃತಂಇದರರ್ಥ ಒಪ್ಪವಾಗಿ ಮಾಡಲ್ಪಟ್ಟಿದ್ದು ಅಂತ. ಸಂಸ್ಕೃತ ಇಂದಿನ ಭಾಷೆಯಲ್ಲ. ಅದು ಇಂಡೋ ಯುರೋಪಿಯನ್ ಭಾಷಾ ಬಳಗಕ್ಕೆ ಸೇರಿದ ಬಹು ಪುರಾತನವಾದ ಮತ್ತು ಭಾರತದ ಶಾಸ್ತ್ರೀಯ ಭಾಷೆ. ಅತಿ ಪುರಾತನ ಗ್ರಂಥಗಳಾದ ವೇದ-ಉಪನಿಷತ್‍ಗಳು ಇದೇ ಭಾಷೆಯಲ್ಲಿ ಇದೆಯೆಂದರೆ ಸಂಸ್ಕೃತವು ಎಷ್ಟು ಹಿಂದಿನಿಂದಲೇ ರೂಢಿಯಲ್ಲಿತ್ತು ಅಂತ ಊಹಿಸಬಹುದು. 

ಯುರೋಪಿನಲ್ಲಿ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಹೊಂದಿರುವ ಸ್ಥಾನಮಾನವನ್ನು ಭಾರತದಲ್ಲಿ ಸಂಸ್ಕೃತ ಹೊಂದಿದೆ. ಇದು ಭಾರತದ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಅಲ್ಲದೇ ಹಿಂದೂ, ಬೌದ್ಧ ಮತ್ತು ಜೈನ ಧರ್ಮಗಳ ಪಾರಂಪರಿಕ ಭಾಷೆಯೂ ಆಗಿದೆ. ಈ ಭಾಷೆಯು ಅತ್ಯಂತ ಸಂಪದ್ಭರಿತ ಭಾಷೆಯಾಗಿದ್ದು, ಈ ಭಾಷೆಯಲ್ಲಿ ಇಲ್ಲದಿರುವುದೇ ಇಲ್ಲ ಎನ್ನಬಹುದಾಗಿದೆ. ವೇದ, ಪುರಾಣ, ಉಪನಿಷತ್‍ಗಳು, ಇತಿಹಾಸ, ಭೂಗೋಳ, ವಿಜ್ಞಾನ, ಜ್ಯೋತಿಷ್ಯ, ಖಗೋಳಶಾಸ್ತ್ರ ಮುಂತಾದ ಕೃತಿಗಳು ಸಂಸ್ಕೃತದಲ್ಲಿ ರಚನೆಯಾಗಿವೆ ಎಂದರೆ ಸಂಸ್ಕೃತದ ವಿಶಾಲತೆಯ ಅರಿವಾಗುತ್ತದೆ. ಸಂಸ್ಕೃತವನ್ನು "ದೇವ ಭಾಷೆ" ಅಂತಲೂ ಕರೆಯುತ್ತಾರೆ.

ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉಪಯೋಗಿಸಲ್ಪಡುತ್ತಿರುವುದು ತುಂಬಾ ಕಡಿಮೆ. ಆದರೆ ಆಧುನಿಕ ಭಾರತೀಯ ಭಾಷೆಯಗಳಲ್ಲಿನ ಅನೇಕ ಪದಗಳು ಸಂಸ್ಕೃತದಿಂದ ಎರವಲು ಪಡೆದವಾಗಿವೆ. ಸಂಸ್ಕೃತವು ಎಲ್ಲಾ ಭಾರತೀಯ ಭಾಷೆಗಳ ತಾಯಿಯಾಗಿದೆ. ಸಂಸ್ಕೃತದ ಪ್ರಥಮ ಕೃತಿ ಹಿಂದೂ ಧರ್ಮದ ವೇದಗಳಲ್ಲಿ ಒಂದಾದ ಋಗ್ವೇದ”.

ಆಡುಭಾಷೆಯಾಗಿ ಸಂಸ್ಕೃತ:

ಸಂಸ್ಕೃತ ಬಹಳ ಹಿಂದೆ ಆಡುಭಾಷೆಯಾಗಿತ್ತು ಎಂಬುದಕ್ಕೆ, ದೈನಂದಿನ ಉಪಯೋಗದಲ್ಲಿತ್ತು ಎನ್ನುವುದಕ್ಕೆ ಅನೇಕ ನಿದರ್ಶನಗಳಿವೆ. ಕಾಳಿದಾಸನ ಗ್ರಾಮದಲ್ಲಿ ಮಹಿಳೆಯರೂ ಕೂಡ ಸಂಸ್ಕೃತದಲ್ಲಿ ಸುಲಭವಾಗಿ ವ್ಯವಹರಿಸಬಲ್ಲವರಾಗಿದ್ದರು. ದೊರೆಗಳು ತಮ್ಮ ಆಸ್ಥಾನವನ್ನು ಸಂಸ್ಕೃತದಲ್ಲಿಯೇ ನಡೆಸುತ್ತಿದ್ದರು ಎನ್ನುವುದಕ್ಕೆ ಆ ರಾಜಾಸ್ಥಾನದಲ್ಲಿ ನಡೆಯುತ್ತಿದ್ದ ವಾಗ್ವಿವಾದಗಳ ಉಲ್ಲೇಖನ ಸಹಾಯ ಮಾಡುತ್ತದೆ.

ಅಂದಿನ ಕಾಲದಲ್ಲಿ ಭಾರತದ ಎಲ್ಲಾ ರಾಜಮಹಾರಾಜರೂ ಆದರಿಸುತ್ತಿದ್ದರು. ಮಹಾರಾಜರೆಂದರೆ ಸಂಸ್ಕೃತ ಪೋಷಕರೆಂದು ಹೆಸರುವಾಸಿಯಾಗಿದ್ದರು. ಅಲ್ಲದೇ ಆಗಿನ ಕಾಲದಲ್ಲಿ ಆಸ್ಥಾನ ವಿದ್ವಾಂಸನಾಗಬೇಕಾದರೆ ಸಂಸ್ಕೃತದ ಪರಿಪೂರ್ಣ ಜ್ಞಾನವಿರಬೇಕಾದ್ದು ಅವಶ್ಯಕವಾಗಿತ್ತು.

ಬಹಳ ಹಿಂದೆ ಈ ಭಾಷೆ ಆಡುಭಾಷೆಯಾಗಿ ಪ್ರಯೋಗದಲ್ಲಿದ್ದಾಗ ಈಗಿರುವ ಹಾಗೆ ಕಟ್ಟುನಿಟ್ಟಾದ ವ್ಯಾಕರಣದ ಬಂಧವಿರಲಿಲ್ಲ. ಅಲ್ಲದೇ ಯಾರು ಬೇಕಾದರೂ ಸುಲಭವಾಗಿ ಆಡಬಹುದಿತ್ತು. ಆದರೂ ಪ್ರಾಚೀನ ಕಾಲದಲ್ಲಿ ಧಾರ್ಮಿಕ ಹಾಗೂ ವ್ಶೆಜ್ಞಾನಿಕ ಜಿಜ್ಞಾಸೆಗೆ ಉಪಯೋಗಿಸಲ್ಪಡುತ್ತಿದ್ದ ಸಂಸ್ಕೃತ ಭಾಷೆ ಆಡುಭಾಷೆಗಳಿಗಿಂತ ಸ್ವಲ್ಪ ಭಿನ್ನರೂಪದಲ್ಲಿತ್ತು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.
     
ನಂತರ ಸಂಸ್ಕೃತದ ಲಾಲಿತ್ಯವನ್ನೂ, ಸೌಂದರ್ಯವನ್ನೂ ಗಮನಿಸಿದ ಪಾಣಿನಿಯು ಇದನ್ನು ಹಲವು ನಿಯಮಗಳಿಗೆ ಒಳಪಡಿಸಬೇಕೆಂದು ತೀರ್ಮಾನಿಸಿದನು. ಸಂಸ್ಕೃತ ವ್ಯಾಕರಣದ ಮೇಲಿನ ಪುಸ್ತಕಗಳಲ್ಲಿ ಅತ್ಯಂತ ಹಳೆಯದು ಈ ಪಾಣಿನಿಯ ಅಷ್ಟಾಧ್ಯಾಯೀ” (ಕಾಲ ಸುಮಾರು ಕ್ರಿ. ಪೂ. ಐದನೇ ಶತಮಾನ). ಇದಕ್ಕೆ ಪಾಣಿನಿಯ ಸಂಸ್ಕೃತ ವ್ಯಾಕರಣವೆಂದೇ ಹೆಸರಿದೆ. ಆ ನಂತರ ಸಂಸ್ಕೃತದ ಸೌಂದರ್ಯ ಇನ್ನೂ ಹೆಚ್ಚಿ ಎಲ್ಲರನ್ನೂ ಆಕರ್ಷಿಸತೊಡಗಿತು.

ಭಾಷೆಯ ಬೆಳವಣಿಗೆ ಆದಂತೆ, ಪ್ರಯೋಗ ಹೆಚ್ಚಿದಂತೆಲ್ಲಾ ಹೊಸ ಹೊಸ ಪದಗಳ ಸೃಷ್ಟಿಯಾಗತೊಡಗಿತು. ಭಾಷೆಯು ವಿಶಾಲವಾಗತೊಡಗಿತು. ಪದಗಳನ್ನು ಸಂದರ್ಭಕ್ಕೆ ತಕ್ಕಂತೆ ಪ್ರಯೋಗಿಸಲು ಅಮರಸಿಂಹನೆಂಬ ಕವಿಯು ಅಮರಕೋಶವನ್ನು ರಚಿಸಿದ. ನಾವು ಅರ್ಥವಾಗದ ಪದಗಳಿಗೆ iಛಿಣioಟಿeಡಿಥಿ ನೋಡಿದ ಹಾಗೆಯೇ ಸಂಸ್ಕೃತ ತಜ್ಞರು ಅಮರಕೋಶವನ್ನು ನೋಡಿ ಅರ್ಥ ತಿಳಿಯುತ್ತಾರೆ.

ಈ ಭಾಷೆಯ ಸೌಂದರ್ಯ ಬಲ್ಲವರೇ ಬಲ್ಲರು ಹೊರತು, ಭಾಷೆಯೇ ಬರದವರಿಗೆ ಆ ಸೌಂದರ್ಯ ಕಾಣುವುದಿಲ್ಲ. ಕಣ್ಣಿರುವವನು ತನ್ನ ಸುತ್ತಲಿನ ಜಗತ್ತನ್ನು, ಅದರ ಸೌಂದರ್ಯವನ್ನು ನೋಡಿ ಆನಂದಿಸಬಲ್ಲ. ಆದೇ ಆ ಸೌಂದರ್ಯವನ್ನು ಹುಟ್ಟು ಕುರುಡನಿಗೆ ವಿವರಿಸಲು ಹೊರಟರೆ ಅವನಿಗದು ಅರ್ಥವಾಗುವುದೇ?

ಪುರಾಣ-ಇತಿಹಾಸಗಳೆಲ್ಲಾ ಈ ಭಾಷೆಯಲ್ಲಿದೆ. ಭಾರತದ ಮಹಾಕಾವ್ಯಗಳಾದ ರಾಮಾಯಣ-ಮಹಾಭಾರತದ ಮೂಲ ಇದೇ ಭಾಷೆಯಲ್ಲಿದೆ. ಈ ಗ್ರಂಥಗಳನ್ನು ನಮ್ಮ ಭಾಷೆಯಲ್ಲಿ ಅನುವಾದಿಸಿ ಓದುವಾಗಲೇ ನಾವು ಇಷ್ಟೊಂದು ಆನಂದ, ಮನಶ್ಯಾಂತಿ ಪಡೆಯುತ್ತಿರಬೇಕಾದರೆ, ಮೂಲ ಭಾಷೆಯಲ್ಲಿಯೇ ಇದನ್ನೋದಿದರೆ ಇನ್ನೆಷ್ಟು ಆನಂದ ಸಿಗಬಹುದು ಯೋಚಿಸಿ.

ಸಂಸ್ಕೃತ ಭಾಷೆ ನಡೆದು ಬಂದ ದಾರಿ:        

ಸಂಸ್ಕೃತ ಭಾಷೆ ನಡೆದು ಬಂದ ದಾರಿಯೇ ರೋಚಕವಾದದ್ದು. ಈ ಭಾಷೆಯಿಂದ ಆಕರ್ಷಿತರಾಗದವರೇ ಇಲ್ಲ ಎನ್ನಬಹುದು. ಜಗತ್ತಿನ ಎಲ್ಲಾ ಭಾಷೆಗಳಿಗೂ ಮೂಲ ಎಂದು ನಂಬಲಾಗಿರುವ ಸಂಸ್ಕೃತವನ್ನು ನೂರಾರು ಮಹಾಕವಿಗಳು, ದಾರ್ಶನಿಕರು ಸಮೃದ್ಧಗೊಳಿಸಿದ್ದಾರೆ.

ಆ ಪಟ್ಟಿಯಲ್ಲಿ ಮೊದಲು ಬರುವವರು ವಾಲ್ಮೀಕಿ ಮುನಿಗಳು.

ದರಿಂದಲೇ ಸಂಸ್ಕೃತದ ಮೊದಲ ಶ್ಲೋಕ ಹುಟ್ಟಿತು. ಅದು ಮಾ ನಿಷಾದ ಪ್ರತಿಷ್ಟಾಂ ತ್ವಮಗಮಃ ಶಾಶ್ವತೀ ಸಮಾಃ.. ಯತ್ಕ್ರೌಂಚ ಮಿಥುನಾತ್ ಏಕಮವಧೀಹಿ ಕಾಮಮೋಹಿತಂಎಂಬುದು. 

ಬೇಡನೊಬ್ಬ ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದಾಗ ಅದನ್ನು ನೋಡಿ ಸಿಟ್ಟುಗೊಂಡ ವಾಲ್ಮೀಕಿ ಮಹರ್ಷಿಗಳು ತಮಗೇ ಗೊತ್ತಿಲ್ಲದಂತೆ ಈ ಶ್ಲೋಕ ಹೇಳಿ ಆ ಬೇಡನಿಗೆ ಶಾಪ ಕೊಟ್ಟರು. ಶೋಕದಲ್ಲಿ ಹುಟ್ಟಿದ ಅದು ಶ್ಲೋಕವೆಂದು ಪ್ರಸಿದ್ಧಿಗೆ ಬಂದಿತು. ವಾಲ್ಮೀಕಿ ಮಹರ್ಷಿ ರಾಮಾಯಣ ರಚಿಸಿದ ಮೇಲೆ, ವೇದವ್ಯಾಸರು ಮಹಾಭಾರತವನ್ನು ರಚಿಸಿದರು.

ಇವರಿಬ್ಬರು ಸಂಸ್ಕೃತ ಮೂಲ ಕವಿಗಳಾದರೆ, ಈ ಭಾಷೆಯ ಆದಿಕವಿ ಎಂದು ಹೆಸರಾದವನು ಕಾಳಿದಾಸ. ಷೇಕ್ಸ್‍ಪಿಯರ್, ರಸೆಲ್ ಮುಂತಾದವರನ್ನು ಆಂಗ್ಲ ಭಾಷಾ ಸಾಮ್ರಾಟರೆಂದು ಕರೆದ ಹಾಗೆ, ಕಾಳಿದಾಸ, ಭಾಸ, ಭವಭೂತಿ ಮೊದಲಾದವರು ಸಂಸ್ಕೃತ ಭಾಷಾ ಸಾಮ್ರಾಟರೆನಿಸಿದ್ದರು. ಕಾಳಿದಾಸನ ಕಾವ್ಯಗಳನ್ನು ಓದುತ್ತಿದರೆ ಓದುಗರು ತನ್ಮಯರಾಗಿ ತಮ್ಮನ್ನು ತಾವು ಮರೆಯುತ್ತಿದ್ದರು. ಸೊಗಸಾದ ವರ್ಣನೆಗಳಿಗೆ ಕಾಳಿದಾಸ ಹೆಸರಾಗಿದ್ದ. ಕಾಳಿಯ ವರಪುತ್ರನಾಗಿರುವ ಕಾಳಿದಾಸನಿಗೆ ವಿಕ್ರಮಾದಿತ್ಯನ ಆಸ್ಥಾನದಲ್ಲಿ ಅದ್ವಿತೀಯವಾದ ಸ್ಥಾನವಿತ್ತು.

       ಇಷ್ಟೊಂದು ಅಪಾರ ಜ್ಞಾನ ಸಂಪತ್ತುಳ್ಳ ಭಾಷೆ ಇಂದು ಬ್ರಿಟೀಷರ ನಾನೂರು ವರ್ಷಗಳ ಆಳ್ವಿಕೆಯ ಪ್ರಭಾವ ಮಾತ್ರದಿಂದಲೇ, ಭಾರತೀಯರಿಂದ ಮೃತ ಭಾಷೆಎನ್ನಿಸಿಕೊಳ್ಳುತ್ತಿರುವುದನ್ನು ನೋಡಿದರೆ ಸಂಸ್ಕೃತದ ಹಿರಿಮೆ ತಿಳಿದವನಿಗೆ ಖೇದವುಂಟಾಗದೇ ಇರದು. ತನ್ನ ಕಾಲದಲ್ಲಿ ಬಹು ವೈಭವದಿಂದ ಮೆರೆದ ಭಾಷೆ ಬ್ರಿಟೀಷರ ಪ್ರಾಬಲ್ಯದಿಂದ, ಆಧುನೀಕತೆಯಿಂದ ಮೃತವಾಗಬಲ್ಲುದೇ?

       ಇಂದು ನಾವು ಆಧುನಿಕ ಯುಗದಲ್ಲಿ ಏನೇನು ಕಾಣುತ್ತಿದ್ದೇಯೋ ಅವೆಲ್ಲವನ್ನೂ ನಮ್ಮ ಸಂಸ್ಕೃತಜ್ಞರು ಅರಿತಿದ್ದರೆನ್ನುವುದಕ್ಕೆ ಅವರ ಕವನಗಳೇ ಸಾಕ್ಷಿ. ಆರ್ಯಭಟ ಪ್ರಖ್ಯಾತ ಸಂಸ್ಕೃತ ಕವಿ. ಸಂಸ್ಕೃತ ಭಾಷೆಯು ಎಲ್ಲಾ ಭಾಷೆಗಳಿಗೂ ಮಾತೃ ಸ್ಥಾನದಲ್ಲಿದೆ. ಭಾರತೀಯ ಭಾಷೆಯೆಲ್ಲವೂ ಸಂಸ್ಕೃತ ಮಯವಾಗಿದೆ ಎಂಬುದಕ್ಕೆ ನಾವು ದಿನನಿತ್ರ ಬಳಸುವ ಪದಗಳೇ ಸಾಕ್ಷಿ. ಅಲ್ಲದೇ ಮದುವೆ, ಮುಂಜಿ ಮುಂತಾದ ಶುಭ ಕಾರ್ಯಗಳಲ್ಲಿಯೂ, ಅಶುಭಕಾರ್ಯಗಳಲ್ಲಿಯೂ ಮಂತ್ರರೂಪದಲ್ಲಿ ಸಂಸ್ಕೃತವನ್ನು ಬಳಸುತ್ತಲೇ ಇದ್ದೇವೆ. ನಮ್ಮ ರಾಷ್ಟ್ರಭಾಷೆಯಾದ ಹಿಂದಿಯನ್ನು ಈ ಲಿಪಿಯಲ್ಲಿಯೇ ಉಪಯೋಗಿಸುತ್ತಿದ್ದೇವೆ. ಭಾರತದ ಮೂಲಮಂತ್ರವನ್ನಾಗಿ ಮಾಂಡೂಕ್ಯೋಪನಿಷತ್‍ನ ಸತ್ಯಮೇವ ಜಯತೆಎಂಬ ಸಂಸ್ಕೃತದ ನಾಣ್ಣುಡಿಯನ್ನು ತೆಗೆದುಕೊಂಡಿದ್ದೇವೆ. ಇದನ್ನೆಲ್ಲಾ ಗಮನಿಸಿದಾಗ ಇಷ್ಟೆಲ್ಲಾ ಬಳಕೆಯಿದ್ದೂ ಸಂಸ್ಕೃತವನ್ನು ಮೃತಭಾಷೆಎಂದರೆ ಹೊಟ್ಟೆ ತುಂಬಾ ಉಂಡ ನಂತರವೂ, ಊಟವೇ ಮಾಡಿಲ್ಲ ಅಂತ ಹೇಳಿದಂತಾಗುತ್ತದೆ. 

ಬ್ರಿಟಿಷರ ಆಡಳಿತ ಈ ದೇಶದಲ್ಲಿದ್ದಾಗ ಅವರು ಸಂಸ್ಕೃತವನ್ನು ಕಡೆಗಣಿಸಿ ಆ ಸ್ಥಾನದಲ್ಲಿ ಇಂಗ್ಲೀಷ್ ಭಾಷೆಯನ್ನು ಸ್ಥಾಪಿಸಿದರು. ದೇಶ ಸ್ವತಂತ್ರವಾದ ನಂತರ ಅಧಿಕಾರ ಹಿಡಿದ ನಮ್ಮವರೂ ಆಂಗ್ಲಭಾಷೆಗೇ ಮಹತ್ವ ಕೊಟ್ಟು, ಸಂಸ್ಕೃತವನ್ನು ಕಡೆಗಣಿಸಿದ ಪರಿಣಾಮವಾಗಿ ನಾವು ಇಂದು ನಮ್ಮ ಆ ಪ್ರಾಚೀನ ಭಾಷೆಯಿಂದ ದೂರವಾಗಿದ್ದೇವೆ. ಪರಿಣಾಮವಾಗಿ ಆ ಭಾಷೆಯಲ್ಲಿನ ಜ್ಞಾನ-ವಿಜ್ಞಾನಗಳಿಂದಲೂ ದೂರವಾಗಿದ್ದೇವೆ.

ರಾಮಾಯಣ, ಮಹಾಭಾರತ, ಭಾಗವತ, ಶಾಕುಂತಲ ಇವುಗಳೆಲ್ಲಾ ಇಂದು ವಿಶ್ವವಿಖ್ಯಾತವಾಗುವುದಕ್ಕೆ ಕಾರಣ ಯಾವುದು? ಅಂದಿನ ಕವಿಗಳು ತಮ್ಮ ಭಾವನೆಯನ್ನು ಸುಂದರವಾಗಿ ಪ್ರತಿಬಿಂಬಿಸಲು ಅನಕೂಲವಾಗಿದ್ದ ಸಂಸ್ಕೃತದಿಂದ ಅಲ್ಲವೇ? ಸಂಸ್ಕೃತಿಯ ಪ್ರತಿರೂಪವೇ ಸಂಸ್ಕೃತ ಭಾಷೆ. ಸಂಸ್ಕೃತ ಮರಣಿಸಿದರೆ ಭಾರತೀಯ ಸಂಸ್ಕೃತಿಯೂ ಮರಣಿಸಿದಂತೆ ಅಲ್ಲವೇ? ವ್ಯಾಕರಣ ಕಷ್ಟವೆನಿಸಿದ ಮಾತ್ರಕ್ಕೇ ಭಾಷೆ ಸಾಯಬಲ್ಲದೇ

ಯಾವ ಭಾಷೆಯಾದರೂ ಮೊದಲಿಗೆ ಕಷ್ಟವೆನಿಸಬಹುದು. ಇಷ್ಟಕ್ಕೂ ಸಂಸ್ಕೃತ ಭಾಷೆಯ ಅಧ್ಯಯನ ಯಾರೊಬ್ಬರ ಸ್ವತ್ತಲ್ಲ. ಎಲ್ಲರಿಗೂ ಈ ಭಾಷೆಯ ಅಧ್ಯಯನಕ್ಕೆ ಮುಕ್ತ ಅವಕಾಶವಿದೆ. ಹಲವು ಮುಸಲ್ಮಾನರು ಸಂಸ್ಕೃತದಲ್ಲಿ ಪಂಡಿತರಾಗಿದ್ದುಂಟು. ಸ್ವತಂತ್ರ ಭಾರತದ ಪ್ರತಿಯೊಬ್ಬ ಪ್ರಜೆಯೂ ಕಲಿಯಲೇ ಬೇಕಾದ ಭಾಷೆ ಸಂಸ್ಕೃತ.

ಸಂಗೀತ ಕ್ಷೇತ್ರದಲ್ಲಿಯೂ ಸಂಸ್ಕೃತದ ಕೊಡುಗೆ ಅಪಾರ.

ಸಂಗೀತದಲ್ಲಿ ಖ್ಯಾತನಾಮರಾದ ಮುತ್ತುಸ್ವಾಮಿ ದೀಕ್ಷಿತರು, ತ್ಯಾಗರಾಜರು ಸಂಸ್ಕೃತದಲ್ಲಿ ಪಾಂಡಿತ್ಯ ಪಡೆದವರೇ ಆಗಿದ್ದರು. ಇದಕ್ಕೆ ಅವರು ರಚಿಸಿರುವ ಸಂಸ್ಕೃತದ ರಚನೆಗಳೇ ಆಧಾರ. ಇಂದಿನ ಸಂಗೀತಾಭ್ಯಾಸಿಗಳೂ ಸಹ ಸಂಸ್ಕೃತ ಕಲಿತು, ರಾಗದೊಂದಿಗೆ ಹಾಡಿನಲ್ಲಿರುವ ಭಾವವನ್ನೂ ಅರಿತು ಹಾಡಿದರೆ ಅದೆಷ್ಟು ಚೆನ್ನಾಗಿರುತ್ತದೆ. ಮತ್ತೊಮ್ಮೆ ಸಂಸ್ಕೃತವನ್ನು ಜನರಿಗೆ ಹತ್ತಿರ ಮಾಡಬೇಕಾದ ಕಾರ್ಯ ಆಗಬೇಕಾಗಿದೆ.

(ವಿವಿಧ ಮೂಲಗಳಿಂದ)

*******
ಕೆ.ಎ.ಸೌಮ್ಯ
ಮೈಸೂರು



ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)