ಕವಿ ಮತ್ತು ಕಾವ್ಯದ ಮೇಲೆ William Wordsworth ನ ವಿಚಾರಧಾರೆ ಎಂ.ಎ.ಕನ್ನಡ

Wordsworth (1770) ಇಂಗ್ಲೀಷ್ ಭಾಷೆಯ ಒಬ್ಬ ಶ್ರೇಷ್ಠ ಕವಿ. ಕನ್ನಡ ನವೋದಯದ ಕವಿಗಳ ಮೆಚ್ಚುಗೆ ಪಡೆದವನು. Wordsworth ನಿಗೆ ಚಿಕ್ಕ ವಯಸ್ಸಿನಿಂದಲೂ ನಿಸರ್ಗದಲ್ಲಿ ಅಪಾರವಾದ ಪ್ರೇಮ. ಒಂದು ರೀತಿಯಾದ ಅಸಾಧಾರಣ ಆಕರ್ಷಣೆ. ಫ್ರಾನ್ಸಿನ ಮಹಾಕ್ರಾಂತಿಯ ತತ್ವಗಳಿಂದ ಆಕರ್ಷಿತನಾಗಿದ್ದವನು, ಈ ಕ್ರಾಂತಿಯಿಂದ ಉಂಟಾದ ಕ್ರೌರ್ಯ, ರಕ್ತಪಾತಗಳನ್ನು ಕಂಡು ರೋಸಿದವನು. 1839 ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯ ಈತನಿಗೆ ಗೌರವ ಡಾಕ್ಟರೇಟ್ ನೀಡಿದೆ. 

Wordsworth ಕಾವ್ಯ ಜೀವನದಲ್ಲಿ ಗಾಢ ಪ್ರಭಾವವನ್ನು ಬೀರಿದವರಲ್ಲಿ ಇಬ್ಬರು ಪ್ರಮುಖರು. ಅವರೆಂದರೆ ಒಬ್ಬಳು ಅವನ ತಂಗಿ ಡೊರೋಥಿ, ಮತ್ತೊಬ್ಬ ಶ್ರೇಷ್ಠ ಕವಿ-ವಿಮರ್ಶಕ ಎಸ್.ಟಿ.ಕೊಲರಿಜ್.

1798ರಲ್ಲಿ “ಲಿರಿಕಲ್ ಬ್ಯಾಲೆಡ್ಸ್” ಎಂಬ Wordsworthನ ಕವನ ಸಂಕಲನ ಹೊರಬಂತು. ಈ ಕವನ ಸಂಕಲನವು “ರೊಮ್ಯಾಂಟಿಕ್ ಕಾವ್ಯ”ದ ಉದಯವನ್ನು ಸ್ಪಷ್ಟವಾಗಿ ಸಾರಿತು. ಇದರಲ್ಲಿ Wordsworth ಮತ್ತು ಕೊಲರಿಜ್ ಇಬ್ಬರ ಕವನಗಳೂ ಇವೆ. 

Wordsworth ಅತಿ ಸಾಮಾನ್ಯ ಎನ್ನಿಸುವಂತಹ ವಿಷಯದ ಮೇಲೆಯೂ ಕವನ ಬರೆದಿದ್ದಾನೆ. ಈ ಮೂಲಕ ರೊಮ್ಯಾಂಟಿಕ್ ಚಳುವಳಿಯ ನಾಯಕನಾಗಿದ್ದಾನೆ. ಕಾವ್ಯಭಾಷೆಯ ಕೃತಕತೆ ನಿವಾರಿಸಿ ಕಾವ್ಯ ಭಾಷೆಯನ್ನು ಸಹಜಗೊಳಿಸಿದ್ದಾನೆ. 

Wordsworth ಕವನಗಳು:

ಪ್ರಿಲ್ಯೂಡ್
ದಿ ಡಫೋಡಿಲ್ಸ್
ಮೈಕೆಲ್
ರೆಸಲ್ಯೂಷನ್ ಅಂಡ್ ಇಂಡಿಪೆಂಡೆನ್ಸ್

Wordsworth ಪ್ರಕಾರ ಕವಿ-ಕಾವ್ಯದ ಉದ್ದೇಶ:

ಕವನದ ಸಾಲುಗಳು ಕೆಲವೊಮ್ಮೆ ಸ್ವಭಾವ ಸಿದ್ಧವಾದ ಭಾಷೆಯಲ್ಲಿ ಮೂಡಿ ಬಂದಿದ್ದರೂ, ಛಂದಸ್ಸಿಗನಿಗುಣವಾಗಿ ರಚಿಸಿದ್ದರೂ, ಗದ್ಯ ರಚನೆಗಿಂತ ಭಿನ್ನವಾಗಿಲ್ಲದಿದ್ದರೆ, ಅದನ್ನು ವಿಮರ್ಶಕರು “ಪದ್ಯ ವೇಷದ ಗದ್ಯ” ಎಂದು ಹೆಸರಿಟ್ಟು ಬಿಡುವುದುಂಟು.  

ಆದರೆ ಪ್ರತಿಯೊಂದು ಕವನದ ಹೆಚ್ಚು ಭಾಗವು ಛಂದಸ್ಸಿಗನುಗುಣವಾಗಿ ರಚಿತವಾಗಿದ್ದರೂ ಸಹ, ಛಂದಸ್ಸು ಎಂಬ ಆ ನಿಯಮವೊಂದನ್ನು ಬಿಟ್ಟರೆ ಗದ್ಯ ಭಾಷೆಗಿಂತ ಭಿನ್ನವೇನೂ ಅಲ್ಲ. ಅಷ್ಟೇ ಅಲ್ಲದೇ, ಉತ್ತಮ ಕವನದ ಅತ್ಯಂತ ಸ್ವಾರಸ್ಯಕರವಾದ ಭಾಗಗಳು ಅವಶ್ಯಕವಾಗಿಯೂ ಉತ್ತಮವಾಗಿ ಬರೆದ ಗದ್ಯವೇ ಆಗಿರುತ್ತದೆ ಎಂದು ಮಿಲ್ಟನ್ ಕವಿಯ ಬರವಣಿಗೆಯಿಂದ ಉದಾಹರಿಸಿ ತೋರಿಸಬಹುದು. 

ಮಿಲ್ಟನ್ ಕವಿಯ ಕವನವನ್ನು ಗಮನಿಸಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ, ಗದ್ಯದ ಭಾಷೆಯನ್ನು ಪದ್ಯಕ್ಕೂ ಅಳವಡಿಸಿಕೊಳ್ಳಬಹುದು. ಇನ್ನೂ ಮುಂದುವರೆದು ಹೇಳುವುದಾದರೆ, ಗದ್ಯಕ್ಕೂ- ಛಂದಸ್ಸುಳ್ಳ ಪದ್ಯಕ್ಕೂ ಯಾವ ಸಾರಭೂತವಾದ ವ್ಯತ್ಯಾಸ ಇರುವುದಿಲ್ಲ. ಅನುಪ್ರಾಸ, ಅಂತ್ಯಪ್ರಾಸ ಮತ್ತು ಛಂದೋಬದ್ಧವಾದ ರಚನೆ. ಇವುಗಳು ಮಾತ್ರವೇ ಪದ್ಯವನ್ನು ಗದ್ಯದಿಂದ ಬೇರೆ ಆಗಿಸಿವೆ. 

ಕಾವ್ಯದ ಭಾಷೆ:

Wordsworth ತನ್ನ ಕಾವ್ಯಕ್ಕಾಗಿ ಜನರಾಡುವ ಸಾಮಾನ್ಯ ಭಾಷೆಯನ್ನು ಬಳಸಿಕೊಂಡಿದ್ದಾನೆ. ಕಾವ್ಯ ರಚಿಸುವಾಗ ಅನಾವಶ್ಯಕ ಆಡಂಬರ, ಅಲಂಕಾರಗಳು ಇರಲೇಬಾರದು ಎನ್ನುವುದು ಅವನ ಅಭಿಪ್ರಾಯವಾಗಿದೆ. ಏಕೆಂದರೆ ಕವಿಯು ಒಂದು ವಸ್ತುವನ್ನು ತನ್ನ ವಿವೇಕದಿಂದ ಆರಿಸಿದರೆ, ಅದು ಸ್ವಾಭಾವಿಕವಾಗಿ, ತಕ್ಕ ಸಮಯದಲ್ಲಿ, ಅವನಲ್ಲಿ ತಕ್ಕ ಭಾವನೆಗಳನ್ನು ಉದ್ದೀಪನಗೊಳಿಸಿ ಕಾವ್ಯ ರಚನೆಗೆ ಪ್ರೇರೇಪಿಸುತ್ತದೆ.

ಅದು “ಭಾವಗಳ ಭಾಷೆ”.

ಎಲ್ಲಾ ರಾಷ್ಟ್ರಗಳ ಆದಿಕವಿಗಳು ಜೀವನದ ನಿಜವಾದ ಘಟನೆಯಿಂದ ಪ್ರೇರಿತರಾಗಿ, ಅದೇ ಭಾವಾವೇಶದಿಂದ ಕಾವ್ಯ ರಚನೆ ಮಾಡಿದರು. ಅವರು ಸ್ವಾಭಾವಿಕವಾಗಿಯೇ ಬರೆದರು. ಅವರ ಭಾವ ಸಂವೇದನೆ ಆಳವಾಗಿತ್ತು. ಹಾಗಾಗಿ ಅವರ ಭಾಷೆ ಸಹಜವಾಗಿತ್ತು. 

ನಂತರದ ಯುಗದ ಕವಿಗಳು ‘ಕವಿ’ ಎಂಬ ಕೀರ್ತಿಗೆ ಮನಸೋತು, ಆಚಾರ್ಯಕೃತಿಗಳ ಭಾಷೆಯ ಪ್ರಭಾವವನ್ನು ಗಮನಿಸಿ, ಅಂತಹುದೇ ಪರಿಣಾಮ ಉಂಟುಮಾಡಲು ಆ ಭಾಷೆಯ ಅಲಂಕಾರಗಳನ್ನು, ಉಕ್ತಿ ವೈಚಿತ್ರ್ಯಗಳನ್ನು ಯಾಂತ್ರಿಕವಾಗಿ ಬಳಸುತ್ತಾ ಬಂದರು. ಮತ್ತು ಕಾವ್ಯಭಾಷೆಯನ್ನು ಜೀವಂತವಿಲ್ಲದ ಭಾಷೆಯನ್ನಾಗಿ ಮಾಡಿದರು. ಇದರಿಂದ ಸತ್ವವಿಲ್ಲದ ಒಂದು ಕೃತಕ ಭಾಷೆಯುಉ ಉತ್ಪತ್ತಿಯಾಯ್ತು. ಕವಿಗಳು ಬರುಬರುತ್ತ ಸ್ವಕಲ್ಪಿತವಾದ ಅನೇಕ ಭಾಷಾ ವೈಕಲ್ಯಗಳನ್ನು ಸೃಷ್ಟಿಸಿಕೊಂಡು ಪ್ರಕೃತಿಯಿಂದ-ಜೀವನದಿಂದ ಕಾವ್ಯವನ್ನು-ತಮ್ಮನ್ನೂ ಬಹುದೂರ ಕೊಂಡೊಯ್ದರು. 

ಆದಿಕವಿಗಳ ವೀರ್ಯವತ್ತಾದ ಭಾಷೆ ಜನರು ಆಡುವ ನಿಜವಾದ ಭಾಷೆಯಂತಿರದೆ ಅಸಾಧಾರಣ ಎಂಬಂತೆ ತೋರುವುದು ನಿಜ. ಆದರೆ ಅದು ಜನರಾಡುವ ಜೀವಂತ ಭಾಷೆಯೇ ಹೊರತು ಬೇರೆಯಲ್ಲ. ಈ ಅಸಾಧಾರಣ ಲಕ್ಷಣವನ್ನೇ ನೆಪವಾಗಿಟ್ಟುಕೊಂಡು, ಎಲ್ಲಾ ರೀತಿಯಲ್ಲಿಯೂ ಅಸಾಧಾರಣವಾಗಿ ಇರುವುದೇ ಕಾವ್ಯದ ಲಕ್ಷಣ ಎಂದು ಭ್ರಮಿಸುವ ಇತ್ತೀಚಿನ ಕವಿಗಳು ಅರ್ಥರಹಿತವಾದ, ವೈಚಿತ್ರಮಯವಾದ, ಕೇವಲ ಅಲಂಕಾರಿಕವಾದ ಭಾಷೆಯೊಂದನ್ನು ಸೃಜಿಸಿಬಿಟ್ಟಿದ್ದಾರೆ. ಈಗಿನ ಕವಿಗಳು ಜನರಾಡುವ ಭಾಷೆಯಿಂದ ದೂರವಾದಷ್ಟೂ ಕಾವ್ಯದ ಗೌರವ ಹೆಚ್ಚುತ್ತದೆ ಎಂದು ತಿಳಿದಿದ್ದಾರೆ ಎಂದು Wordsworth ಅಭಿಪ್ರಾಯ ಪಡುತ್ತಾನೆ. 

“ಕವಿ” ಎಂಬ ಶಬ್ದದ ಅರ್ಥ:

Wordsworth ಕೇಳುತ್ತಾನೆ, ‘ಕವಿ’ ಎಂದರೆ ಯಾರು? ‘ಕವಿ’ ಎಂಬ ಶಬ್ದದ ಅರ್ಥವೇನು? ಆತ ಯಾರೊಡನೆ ವ್ಯವಹರಿಸುತ್ತಾನೆ. ಇದಕ್ಕೆಲ್ಲಾ ಉತ್ತರವೆಂದರೆ “ಕವಿಯೂ ನಮ್ಮಂತೆಯೇ ಒಬ್ಬ ಮನುಷ್ಯ”. ಆದರೆ ಒಂದು ವ್ಯತ್ಯಾಸವೆಂದರೆ, ಕವಿಯು ಇತರರಿಗಿಂತ ಹೆಚ್ಚು ಸಂವೇದನಾ ಶಕ್ತಿಯನ್ನೂ, ಕೋಮಲ ಹೃದಯವನ್ನೂ, ಇತರರ ಬಗೆಗೆ ಮೃದು ಧೋರಣೆಯನ್ನೂ ಹೊಂದಿರುತ್ತಾನೆ. 

ಇತರ ವ್ಯಾಖ್ಯಾನಗಳು:

1)  ಕವಿಗೆ ಇರುವಷ್ಟು ಮಾನವ ಸ್ವಭಾವದ ಅರಿವು ಇತರರಿಗೆ ಇರುವುದಿಲ್ಲ. 

2)  ಅವನ ಮನಸ್ಸು ವಿಶಾಲವಾಗಿರುತ್ತದೆ. 

3) ವಿಶ್ವದಲ್ಲಿ ಹೊಮ್ಮುತ್ತಿರುವ ಭಾವಾನುರಾಗಗಳನ್ನು ನೋಡಿ ಸಂತೋಷಿಸುತ್ತಾನೆ. ಆ ಭಾವಾನುರಾಗ ಇಲ್ಲದ ಕಡೆ ತಾನೇ ಸೃಷ್ಟಿಸಲು ಸ್ವಯಂಪ್ರೇರಿತನಾಗುತ್ತಾನೆ. 

4)  ಕಣ್ಮುಂದೆ ಇಲ್ಲದಿರುವ ವಸ್ತುವನ್ನು ಅಥವಾ ಸನ್ನಿವೇಶವನ್ನು ಇದೆ ಎಂಬಂತೆ ಬಣ್ಣಿಸುತ್ತಾನೆ. 

5) ತಾನು ಏನನ್ನು ಯೋಚಿಸುತ್ತಿರುವನೋ ಅದನ್ನು ಮಾತಿನಲ್ಲಿ ಹೇಳುವ ಶಕ್ತಿಯನ್ನು ಇತರರಿಗಿಂತ ಹೆಚ್ಚು ಸಂಪಾದಿಸಿಕೊಂಡಿರುತ್ತಾನೆ. 

6)   ಚಿಂತನೆಗಳು-ಭಾವನೆಗಳು ಆತನ ಮನಸ್ಸಿನಲ್ಲಿ ಯಾವುದೇ ಬಾಹ್ಯ ಪ್ರೇರಣೆ ಇಲ್ಲದೆಯೇ ಮೂಡಿಬರುತ್ತದೆ. 

ಆದರೆ ಕವಿ ಎಷ್ಟೇ ಸ್ವಾಭಾವಿಕವಾಗಿ ವರ್ಣಿಸಿದರೂ ಅದು ವಾಸ್ತವ ಜೀವನದ ಭಾವಾವೇಶಗಳಿಗೆ ಸರಿಸಮ ಆಗುವುದಿಲ್ಲ ಎನ್ನುತ್ತಾನೆ Wordsworth. ವಾಸ್ತವ ಬದುಕಿನ ಪ್ರತಿಬಿಂಬವನ್ನಷ್ಟೇ ಕವಿ ಸೃಷ್ಟಿಸಬಲ್ಲ, ಇವು ಎಂದಿಗೂ ವಾಸ್ತವ ಸತ್ಯವಲ್ಲ. 

ಏಕೆಂದರೆ ಕವಿಯು ಎಷ್ಟೇ ಭಾವಾವೇಶದಿಂದ ಬಣ್ಣಿಸಿದರೂ, ಕೆಲವು ಅಂಶಗಳಲ್ಲಿ ಅವನ ವರ್ಣನೆ ಯಾಂತ್ರಿಕವಾಗಿರುತ್ತದೆ. ತಾನು ಬರೆಯುತ್ತಿರುವುದು ಓದುಗನ ಸಂತೋಷಕ್ಕಾಗಿ ಎಂಬ ಕಾರಣದಿಂದ, ಆ ಭಾವಾವೇಶ ಬಣ್ಣಿಸುವಾಗ ಅಲ್ಪ ಸ್ವಲ್ಪ ಬದಲಾವಣೆ ಮಾಡುತ್ತಾನೆ. ಹಾಗಾಗಿ ಜೀವನದ ನಿಜವಾದ ಸತ್ಯಗಳಿಂದ ಹುಟ್ಟುವ ಶಬ್ದಗಳಿಗೆ, ಅವನ ಊಹೆ-ಕಲ್ಪನೆಗಳು ಎಂದಿಗೂ ಸರಿಸಮಾನ ಆಗಲಾರವು. 

ಕಾವ್ಯದ ಅರ್ಥ: 

‘ಕಾವ್ಯ’ ಬರವಣಿಗೆಗಳಲ್ಲೆಲ್ಲಾ ತುಂಬಾ ತಾತ್ವಿಕವಾದದ್ದು ಎಂದು “ಅರಿಸ್ಟಾಟಲ್” ಹೇಳಿದ್ದಾನೆ. ಕಾವ್ಯದ ಗುರಿ ಸತ್ಯ. ಕವಿಗೆ ಇರುವ ಗುರಿ ಒಂದೇ. ತನ್ನ ಕಾವ್ಯ ಓದಿದ ಮನುಷ್ಯನಿಗೆ ಆ ಕಾವ್ಯ ಸಂತೋಷವನ್ನುಂಟು ಮಾಡಬೇಕು ಎನ್ನುವುದು. ಇದು ಎಲ್ಲಾ ಕವಿಗಳೂ ತಮಗೆ ತಾವೇ ಹಾಕಿಕೊಂಡ ನಿಬಂಧನೆ ಎನ್ನಬಹುದು. 

ಕಾವ್ಯ ಎನ್ನುವುದು ಎಲ್ಲಾ ಜ್ಞಾನಗಳ ಆದಿ ಮತ್ತು ಅಂತ್ಯ.

ಮಾನವನ ಹೃದಯ ಎಷ್ಟು ಅಮರವೋ.. ಕಾವ್ಯವೂ ಅಷ್ಟೇ ಅಮರವಾದದ್ದು. ಕವಿ ಮತ್ತು ವಿಜ್ಞಾನಿ ಇಬ್ಬರ ಜ್ಞಾನವೂ ಸಂತೋಷದಾಯಕವಾದದ್ದು. ಲೋಕೋಪಯೋಗಕ್ಕಾಗಿ ವಿಜ್ಞಾನಿ ಒಂಟಿಯಾಗಿಯೇ ಸತ್ಯವನ್ನು ಅರಸುತ್ತಾನೆ. ಆದರೆ ಕವಿ ಒಂದು ಹಾಡು ಹಾಡಿದರೆ, ಇಡೀ ಲೋಕವೇ ಆ ಹಾಡಿನಲ್ಲಿ ಭಾಗಿಯಾಗುತ್ತದೆ. ಷೇಕ್ಸ್‍ಪಿಯರ್ ಹೇಳುವಂತೆ “ಕವಿಯು ಎಲ್ಲಾ ಹಿಂದನ್ನರಿತವನು, ಮತ್ತು ಮುಂದನ್ನು ಕಾಣುವವನು”

ಕವಿಯು ಸಾಮಾನ್ಯ ಮಾನವನೇ ಆದರೂ ಇಬ್ಬರಲ್ಲಿಯೂ ಒಂದು ವ್ಯತ್ಯಾಸವಿದೆ. ಕವಿಯು ಸಾಮನ್ಯ ಮಾನವನಿಗಿಂತ ಯಾವುದೇ ಪ್ರಚೋದನೆ ಇಲ್ಲದೇ ಚಿಂತಿಸಬಲ್ಲ. ತನ್ನ ಭಾವನೆಗಳನ್ನು ಆಡಿ ತೋರಿಸುವ ಸಾಮಥ್ರ್ಯ ಹೊಂದಿರುತ್ತಾನೆ. ಈ ಚಿಂತನೆ-ಭಾವನೆ ಜನಸಾಮಾನ್ಯರದ್ದೇ ಆದರೂ ಕವಿಯು ಅದನ್ನು ವಿಶೇಷವಾಗಿ ಅಭಿವ್ಯಕ್ತಿಸುತ್ತಾನೆ. 

ಕವಿಗಳು ಬರೆಯುವುದು ಕವಿಗಳಿಗೆ ಮಾತ್ರವಲ್ಲ. ಜನರಿಗಾಗಿ. ಆದುದರಿಂದ ಕವಿಯು ಜನಕ್ಕೆ ಹತ್ತಿರವಾಗುವಂತಹ ಸಾಹಿತ್ಯ ಬರೆಯಬೇಕು. ಜನರ ನಿಜವಾದ ಭಾಷೆಯಿಂದ ತನ್ನ ಭಾವನೆಯನ್ನು ಕವಿ ಅಭಿವ್ಯಕ್ತಿಗೊಳಿಸಬೇಕು.

ಛಂದಸ್ಸು:

ಛಂದಸ್ಸಿಗೂ ಸಹ ಇದೇ ನಿಯಮವನ್ನು ಅನುಸರಿಸಬೇಕು ಎಂದು Wordsworth ಹೇಳುತ್ತಾನೆ. ಛಂದಸ್ಸಿನ ವಿಶೇಷತೆಯೆಂದರೆ ಅದು ಕ್ರಮಬದ್ಧವಾಗಿ ಇರುವುದು. ಇಷ್ಟೇ ಅದರ ಲಕ್ಷಣ. ಭಾವಾನುಭವದ ನೈಜತೆಯನ್ನು ಕೆಡಿಸದೇ ಇದ್ದರೆ, ಆ ಛಂದಸ್ಸು ತನ್ನ ಸ್ವಸಾಮಥ್ರ್ಯದಿಂದ ಕಾವ್ಯದ ಗುಣವನ್ನು ಹೆಚ್ಚಿಸಿಕೊಳ್ಳುತ್ತದೆ ಎಂದು ಯುಗಯುಗಗಳಿಂದ ಸಾಬೀತಾಗಿದೆ.

ಕಾವ್ಯದ ಉದ್ದೇಶ ಓದುಗನಲ್ಲಿ ಭಾವಾವೇಶವನ್ನು ಉಂಟು ಮಾಡುವುದರೊಂದಿಗೆ ಸಂತೋಷವನ್ನು ಉಂಟುಮಾಡುವುದುದಾಗಿದೆ. ಭಾವಾವೇಶವೆಂದರೆ ಬುದ್ಧಿಯ ಒಂದು ಸ್ಥಿತಿ. ಈ ಸ್ಥಿತಿಯಲ್ಲಿ ಭಾವನೆಗಳು, ಯೋಚನೆಗಳು, ವೇದನೆಗಳು ಒಂದೇ ಕ್ರಮವನ್ನು ಅನುಸರಿಸಿ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಮಾತುಗಳು ತನಗೆ ತಾನೇ ಒರಟಾಗಿದ್ದರೆ ಭಾವಾವೇಶವು ಎಲ್ಲೆ ಮೀರಬಹುದಾಗಿದೆ. 

ಇಂತಹ ಸಂದರ್ಭದಲ್ಲಿ ಕ್ರಮವುಳ್ಳದ್ದಾದ, ಉದ್ರೇಕ ಅತಿಯಾಗಿಲ್ಲದ, ಬುದ್ಧಿಯ ಜೊತೆ ಹೊಂದಬಲ್ಲ ಛಂದಸ್ಸು ಜೊತೆಗಿದ್ದರೆ, ಅಂತಹ ಭಾವಾತಿರೇಕವನ್ನು ನಿಯಂತ್ರಿಸುವುದು ಸುಲಭ. 

ಹಾಗಾಗಿ ಛಂದಸ್ಸು ಜನರ ಜೀವನದ ವಾಸ್ತವ ಭಾಷೆಯನ್ನು ತನ್ನ ಉದ್ದೇಶಕ್ಕೆ ತಕ್ಕಂತೆ ಸ್ವಲ್ಪ ಮಟ್ಟಿಗೆ ಬದಲಾಯಿಸಿಕೊಳ್ಳುತ್ತದೆ ಎನ್ನಬಹುದು. ಇದರಿಂದ ಜನರ ಜೀವನದ ಭಾಷೆಯ ನ್ಶೆಜತೆ ಮಾಯವಾಗುವುದಿಲ್ಲ. ಅದರಲ್ಲೂ ಕೆಲವು ದುಖಃಕಾರಕವಾದ, ದಾರುಣವಾದ ಸನ್ನಿವೇಶಗಳು ಗದ್ಯಕ್ಕಿಂತ ಪದ್ಯದಲ್ಲಿ ಹೆಚ್ಚು ಅಂದರೆ ಛಂದಸ್ಸಿನ ರಚನೆಯಲ್ಲಿ ಸಹಿಸಿಕೊಳ್ಳಲು ಸುಲಭವಾಗುತ್ತದೆ. 

ಉದಾ: ಅತ್ಯಂತ ದಾರುಣ ಮತ್ತು ಹೃದಯ ಹಿಂಡುವಂತಹ ಕಥಾನಕಗಳನ್ನು ಒಮ್ಮೆ ಓದಿದ ಓದುಗನು ಮತ್ತೊಮ್ಮೆ ಓದಲು ಇಷ್ಟಪಡುವುದಿಲ್ಲ. ಆದರೆ “ಷೇಕ್ಸ್‍ಪಿಯರ್” ನ ಬರವಣಿಗೆ ಅತ್ಯಂತ ದಾರುಣವಾಗಿದ್ದರೂ, ಮತ್ತೆ ಮತ್ತೆ ಓದುವಂತಾಗುತ್ತದೆ. ಅದಕ್ಕೆ ಕಾರಣ ಛಂದಸ್ಸಿನ ಪ್ರಯೋಗ. 

ಕಾವ್ಯ ಹುಟ್ಟುವ ರೀತಿ:

ಕಾವ್ಯ ಎಂದರೆ ಆಳವಾದ ಭಾವ ಸಂವೇದನೆಗಳ ಹೊರಹೊಮ್ಮುವಿಕೆ ಎಂದು Wordsworth ಅಭಿಪ್ರಾಯ ಪಡುತ್ತಾನೆ. ಮನಸ್ಸು ಪ್ರಶಾಂತ ಸ್ಥಿತಿಯಲ್ಲಿದ್ದಾಗ ನೆನಪಿಗೆ ತಂದುಕೊಂಡ ರಸಭಾವದಿಂದ ಕಾವ್ಯ ಹುಟ್ಟುತ್ತದೆ. ರಸಭಾವದ ಈ ಧ್ಯಾನ ಮುಂದುವರೆದಂತೆ ಪ್ರಶಾಂತತೆ ನಿಧಾನವಾಗಿ ಮಾಯವಾಗುತ್ತಾ ಬಂದು, ಧ್ಯಾನಿಸಲ್ಪಟ್ಟ ಭಾವಕ್ಕೆ ಪ್ರತಿಯಾಗಿ ಮತ್ತೊಂದು ಭಾವ ಹುಟ್ಟಿ ಬುದ್ಧಿಯಲ್ಲಿ ನೆಲೆಯಾಗುತ್ತದೆ. ಈ ಅಪೂರ್ವವಾದ ಮನಸ್ಥಿತಿಯಲ್ಲಿ ಕಾವ್ಯ ರಚನೆ ಪ್ರಾರಂಭವಾಗುತ್ತದೆ. 

ಕಾವ್ಯದಲ್ಲಿ ವರ್ಣಿಸಲ್ಪಡುತ್ತಿರುವ ಭಾವಗಳು ಜನಜೀವನ ನೈಜ ಭಾಷೆಯನ್ನು ಹೋಲುತ್ತಿದ್ದರೂ, ಛಂದಸ್ಸಿನ ಕ್ರಮ ವಿನ್ಯಾಸದ ಕಾರಣ ಸಂಪೂರ್ಣವಾಗಿ ಬೇರೆಯೇ ಎಂಬಂತೆ ನವೀನ ಅನುಭವ ನೀಡುತ್ತದೆ. ಜೊತೆಗೆ ಓದುಗನಿಗೆ ತೃಪ್ತಿಯನ್ನು ನೀಡುತ್ತದೆ. 


ಈ ರೀತಿಯ ನೇರ ನಡೆನುಡಿಯ ಭಾವಸಂವೇದನೆಗಳನ್ನು ಛಂದಸ್ಸಿನ ಸಮರ್ಪಕವಾದ ಹೊಂದಿಕೆಯ ಕಾರಣ ‘ಪದ್ಯ’ದಲ್ಲಿ ಇರುವುದನ್ನು ಓದುಗರು ನೂರು ಬಾರಿ ಓದುತ್ತಾರೆ. ‘ಗದ್ಯ’ದಲ್ಲಿ ಇರುವುದನ್ನು ಒಂದು ಸಾರಿ ಓದಿ ಸಾಕು ಮಾಡುತ್ತಾರೆ. 

ಉಪಸಂಹಾರ:

Wordsworth ತನ್ನ “ಲಿರಿಕಲ್ ಬ್ಯಾಲೆಡ್ಸ್” ಕವನ ಸಂಕಲನದ ಎರಡನೆಯ ಮುದ್ರಣದ ಮುನ್ನುಡಿಯಲ್ಲಿ ಪ್ರಸ್ತಾಪಿಸಿರುವ ‘ಕವಿ, ಕಾವ್ಯದ ಭಾಷೆ, ಛಂದಸ್ಸು” ಮುಂತಾದವುಗಳ ಬಗ್ಗೆ ತಿಳಿದುಕೊಂಡೆವು. 

ಈ ಪ್ರಬಂಧದಲ್ಲಿ ಕವಿಯು ಕಾವ್ಯ, ಕಾವ್ಯದ ಭಾಷೆ, ಛಂದಸ್ಸು, ಕಾವ್ಯದ ವಸ್ತುವಿನ ಬಗ್ಗೆ ತಮ್ಮದೇ ಆದ ವಿಚಾರವನ್ನು ಮಂಡಿಸಿದ್ದಾನೆ. ಇದರಲ್ಲಿ ಕೆಲವು ವಿರೋಧಾಭಾಸಗಳಿವೆ ಎಂದು ಕೊಲರಿಜ್ ಮುಂತಾದವರು ಟೀಕಿಸಿದ್ದರೂ, ಈ ವಿಚಾರಸರಣಿಯಲ್ಲಿ ಒಪ್ಪತಕ್ಕಂತಹ ಮತ್ತು ಸ್ವೀಕರಿಸಬೇಕಾದ ಅಂಶಗಳೂ ಇವೆ. 

ತರ್ಕಕ್ಕೆ ಅತೀತವಾದ ಒಂದು ನಿಗೂಢ ಸತ್ಯವು ಇಲ್ಲಿ ಪ್ರತಿಪಾದಿಸಲ್ಪಡುತ್ತದೆ. ಜನಸಾಮಾನ್ಯರ ಭಾಷೆಯನ್ನು ಕಾವ್ಯವನ್ನಾಗಿಸಿದ ವಡ್ರ್ಸ್‍ವರ್ತ್‍ನ ಔದಾರ್ಯ ಚಿರಸ್ಮರಣೀಯವಾದುದು.  

*******
ಕೆ.ಎ.ಸೌಮ್ಯ
ಮೈಸೂರು



**** ಕವಿ, ಕಾವ್ಯ, ಭಾಷೆ ಮತ್ತು ಛಂದಸ್ಸನ್ನು ಕುರಿತು ವರ್ಡ್ಸ್‌ವರ್ತ್ ಅಭಿಪ್ರಾಯಗಳನ್ನು ವಿವರಿಸಿ (ಜೂನ್ 2010) / ಕಾವ್ಯ ಸ್ವರೂಪವನ್ನು ಕುರಿತು ವರ್ಡ್ಸ್‌ವರ್ತ್ ಅಭಿಪ್ರಾಯಗಳನ್ನು ನಿರೂಪಿಸಿ (ಜೂನ್ 2013) ****

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)