ಅರಿಸ್ಟಾಟಲ್’ನ ಅನುಕರಣ ಸಿದ್ಧಾಂತ : ಎಂ.ಎ.ಕನ್ನಡ

ಅನುಕರಣಾವಾದ:


19ನೆಯ ಶತಮಾನದವರೆಗೆ ಯುರೋಪಿನ ಎಲ್ಲಾ ಭಾಷೆಗಳ ಸಾಹಿತ್ಯ ವಿಮರ್ಶೆಯಲ್ಲಿಯೂ ಅತ್ಯಂತ ಪ್ರಭಾವಶಾಲಿಯಾಗಿದ್ದ ಒಂದು ಮೌಖಿಕ ಪರಿಕಲ್ಪನೆ "ಅನುಕರಣಾವಾದ" (THEORY OF IMITATION). "ಪ್ಲೇಟೋ" ಮತ್ತು "ಅರಿಸ್ಟಾಟಲ್" ಇಬ್ಬರೂ ಕಾವ್ಯದ ಸ್ವರೂಪವನ್ನು ಚರ್ಚಿಸುವ ಸಂದರ್ಭದಲ್ಲಿ "ಇಮಿಟೇಶನ್" ಶಬ್ದವನ್ನು ಬಳಸುತ್ತಾರೆ.

'ಇಮಿಟೇಶನ್’ ಎಂಬ ಶಬ್ದವು ಗ್ರೀಕ್ ಭಾಷೆಯ 'ಮಿಮೆಸಿಸ್’ ಶಬ್ದಕ್ಕೆ ಪರ್ಯಾಯವಾಗಿದೆ.

ಪ್ಲೇಟೋ "ಅನುಕರಣ" ಶಬ್ದವನ್ನು ಅದರ ಸಂಕುಚಿತ ಅರ್ಥದಲ್ಲಿ "ಪ್ರತಿರೂಪ" ಅಥವಾ "ನಕಲು" ಎಂದು ಉಪಯೋಗಿಸುತ್ತಾನೆ. ಪ್ಲೇಟೋ ಹೇಳುತ್ತಾನೆ:

೧) ಕಲೆ ನಮ್ಮಲ್ಲಿನ ಹೀನ ವಾಸನೆಗಳಿಗೆ ಪುಷ್ಟಿ ನೀಡುತ್ತದೆ. ಕಾಮಕ್ರೋಧಗಳನ್ನು ಪೋಷಿಸುತ್ತವೆ.

೨) ಕಲಾವಿದರು ದೇವದೇವತೆಗಳನ್ನು ಮತ್ತು ಮಹಾ ಪುರುಷರನ್ನು ಸಾಮಾನ್ಯರಂತೆ ಚಿತ್ರಿಸಿ ಅವರ ಮಹತ್ವಕ್ಕೆ ಚ್ಯುತಿ ತರುತ್ತಾರೆ.

ಈ ಕಾರಣಗಳಿಂದ ತಾತ್ವಿಕ ಮತ್ತು ನೈತಿಕ ನೆಲೆಗಳಲ್ಲಿ ಪ್ಲೇಟೋ ಕಲೆಯನ್ನು ನಿರಾಕರಿಸುತ್ತಾನೆ. ಆದರೆ ಪ್ಲೇಟೋವಿನ ವಿದ್ಯಾರ್ಥಿ "ಅರಿಸ್ಟಾಟಲ್" ತನ್ನ ಗುರುವಿನ ಆರೋಪವನ್ನು ಅಲ್ಲಗೆಳೆದು,"ಕಲೆ"ಯ ಪಾತ್ರವನ್ನು ಸಮರ್ಥಿಸಲು "ಅನುಕರಣ"ದ ಪರಿಕಲ್ಪನೆಯನ್ನು ಉಪಯೋಗಿಸುತ್ತಾನೆ. ಆದರೆ ಅರಿಸ್ಟಾಟಲ್ ಈ ಪರಿಕಲ್ಪನೆಯನ್ನು ತನ್ನ POETICS ಗ್ರಂಥದಲ್ಲಿ ಎಲ್ಲಿಯೂ ವಿವರಿಸಿಲ್ಲ.

"ಅನುಕರಣ" ಮನುಷ್ಯನಿಗೆ ಬಾಲ್ಯದಿಂದಲೂ ಸಹಜವಾದದ್ದು. ಈ ಅನುಕರಣಾ ಶಕ್ತಿಯಿಂದಲೇ ಅವನು ಬೇರೆಲ್ಲಾ ಪ್ರಾಣಿಗಳಿಗಿಂತ ವಿಶೇಷ ಸ್ಥಾನ ಪಡೆದಿದ್ದಾನೆ.ಅವನ "ಅನುಕರಣೆ"ಯಿಂದಲೇ ಕಲಿಯಲಿ ಶುರು ಮಾಡುತ್ತಾನೆ. ಹಾಗಾಗಿ "ಅನುಕರಣೆ" ಮಾನವನಿಗೆ ಸ್ವಭಾವ ಸಿದ್ಧವಾಗಿದೆ ಎನ್ನುತ್ತಾನೆ ಅರಿಸ್ಟಾಟಲ್.

ವಿಷಯವನ್ನು ಅನುಕರಿಸುವಲ್ಲಿ ಮೂರು ಬಗೆಗಳಿವೆ. ಅನುಕರಣಕ್ಕಾಗಿ ಒಂದೇ ರೀತಿಯ ಸಾಧನವನ್ನೂ, ಒಂದೇ ರೀತಿಯ ವಿಷಯವನ್ನೂ ಕೊಟ್ಟರೆ:

೧) ಹೋಮರನಂತೆ ಒಂದು ಬಾರಿ ಕಥನ ರೀತಿಯಲ್ಲಿಯೂ, ಮತ್ತೊಂದು ಬಾರಿ ಬೇರೊಂದು ಪಾತ್ರದ ಮೂಲಕವೂ ಹೇಳಬಹುದು.
೨) ಉದ್ದಕ್ಕೂ ಒಂದೇ ರೀತಿ ಹೇಳಬಹುದು. 
೩) ಕಾರ್ಯಗಳನ್ನು ತಾವೇ ಮಾಡುತ್ತಿರುವಂತೆ ಪಾತ್ರಗಳು ವರ್ಣಿಸಬಹುದು

ಈ "ಅನುಕರಣ’ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಕೆಲವು ಸಮಸ್ಯೆಗಳಿವೆ:

ಅರಿಸ್ಟಾಟಲ್’ನ ಪ್ರಕಾರ ಸಂಗೀತ, ನೃತ್ಯ, ಚಿತ್ರಕಲೆ, ಕಾವ್ಯ ಇವೆಲ್ಲಾ ಅನುಕರಣಾಶೀಲ.ಆದರೆ ಶಿಲ್ಪಕಲೆಗೆ ಮೂರು ಪರಿಮಾಣಗಳಿವೆ (THREE DIMENSIONS). ಚಿತ್ರಕಲೆಗೆ ಎರಡೇ ಪರಿಮಾಣ. ಕಾವ್ಯ, ಸಂಗೀತ, ನೃತ್ಯ ಇವುಗಳಿಗೆ ಪರಿಮಾಣವಿಲ್ಲ. ಹಾಗಾದರೆ ಇವು "ಅನುಕರಣೆ" ಮಾಡುವುದು ಏನನ್ನು?

'ಕವಿ’ಯು ಒಬ್ಬ ನಿರ್ಮಾರ್ತೃ.

ಕಾವ್ಯವನು ರಚಿಸುವವನೂ ಅವನೇ.. ಶಾಸ್ತ್ರಗ್ರಂಥವೊಂದನ್ನು ಬರೆಯುವವನೂ ಅವನೇ.. ಇಬ್ಬರೂ ಅದೇ ಭಾಷೆ, ಅದೇ ಶಬ್ದಗಳನ್ನು ಉಪಯೋಗಿಸುತ್ತಾರೆ. 

ಆದರೆ "ಕಾವ್ಯ" ಶಾಸ್ತ್ರಗ್ರಂಥಕ್ಕಿಂತ ವಿಭಿನ್ನವಾದುದು. 

ಏಕೆಂದರೆ, ಕವಿಯು "ಕಾವ್ಯ"ದ ಮೂಲಕ ಏನೋ ಒಂದನ್ನು ನಿರ್ಮಿಸುತ್ತಾನೆ. ಶಾಸ್ತ್ರಕಾರ ಸಿದ್ಧವಸ್ತುಗಳ ಯಥಾರ್ಥ ಚಿತ್ರಣವನ್ನು ನಮ್ಮ ಮುಂದೆ ಇಡುತ್ತಾನೆ. ನಮ್ಮಲ್ಲಿ ಇವೆರಡರ ವ್ಯತ್ಯಾಸ ಗುರುತಿಸಲು "ಸಾಹಿತ್ಯ", "ಕಾವ್ಯ" ಎಂಬ ಬೇರೆ ಬೇರೆ ಶಬ್ದಗಳಿವೆ. ಆದರೆ ಗ್ರೀಕ್ ಭಾಷೆಯಲ್ಲಿ ಬೇರೆ ಬೇರೆ ಪದವಿಲ್ಲ.

ಸಾಹಿತ್ಯದಂತೆಯೇ ಇತರ ಕಲೆಗಳು- ಚಿತ್ರಕಲೆ, ಸಂಗೀತ, ನಾಟ್ಯ- ಇವುಗಳೂ ಜೀವನವನ್ನು ಅನುಕರಿಸುತ್ತವೆ ಎನ್ನುತ್ತಾನೆ ಅರಿಸ್ಟಾಟಲ್. ಭಾಷೆಯ ಮೂಲಕ ಜೀವನವನ್ನು "ಅನುಕರಿಸುವ" ಕಲೆಯೇ "ಸಾಹಿತ್ಯ". ಇದನ್ನು ಪದ್ಯದಲ್ಲಿ ಅಥವಾ ಗದ್ಯದಲ್ಲಿ ಹಿಡಿದಿಡುವವರೇ ಕವಿಗಳು.

"ರುದ್ರನಾಟಕ"ವು ಪಾತ್ರಗಳನ್ನು ಆದರ್ಶ ಪ್ರಾಯವನ್ನಾಗಿ, ಆ ಪಾತ್ರಗಳು ನಮ್ಮ ಜೀವನಕ್ಕಿಂತಲೂ ಉತ್ತಮ ರೀತಿಯಲ್ಲಿರುವಂತೆ ಚಿತ್ರಿಸಿದರೆ, "ವೈನೋದಿಕ"ವು ಆ ಪಾತ್ರಗಳು ನಮಗಿಂತ ಕೀಳಾಗಿರುವ ಹಾಗೆ ಚಿತ್ರಿಸುತ್ತವೆ. 

"ಅನುಕರಣ"ದ ಪ್ರಕಾರಗಳು: 

ಮಹಾಕಾವ್ಯ (EPIC)
ರುದ್ರನಾಟಕ, 
ವೈನೋದಿಕ (COMEDY),
                                                             ಡಿಥಿರಾಂಬ್  ಕಾವ್ಯ, ವೇಣುವೀಣಾವಾದನಗಳು

ಅನುಕರಣಕ್ಕೂ, ಪ್ರಭಾವಕ್ಕೂ ಹೆಚ್ಚು ವ್ಯತ್ಯಾಸವಿಲ್ಲ.

"ಪ್ರಭಾವ" ತಿಳಿಯದೇ ಮಾಡಿದ ಅನುಕರಣೆಯಾದರೆ, "ಅನುಕರಣೆ" ತಿಳಿದು ಸ್ವೀಕರಿಸಿದ ಪ್ರಭಾವ ಎನ್ನುತ್ತಾರೆ ವೀಸ್ಟಿನರು.

ಎಲ್ಲಾ ಅಭಿಜಾತ ಯುಗದಲ್ಲಿಯೂ (CLASSICAL AGE) ಹಿರಿಯ ಕಲೆಗಾರರ "ಅನುಕರಣೆ"ಯೇ ಕಲೆಯ ಮೂಲ ಎಂದು ಭಾವಿಸಲಾಗಿತ್ತು. ಉದಾಹರಣೆಗೆ ಇಂದಿಗೂ ಸಹ ಪತ್ತೇದಾರಿ ಕಾದಂಬರಿ ಬರೆಯುವವರು ಪ್ರತ್ಯಕ್ಷವಾಗಿಯೋ ಅಪ್ರತ್ಯಕ್ಷವಾಗಿಯೋ ಅರಿಸ್ಟಾಟಲ್’ನ ಕಾವ್ಯ ತತ್ವಗಳನ್ನು ಮೈಗೂಡಿಸಿ ಕೊಂಡಿರುತ್ತಾರೆ. ಇದಕ್ಕೆ ಶ್ರೇಷ್ಠ ಉದಾಹರಣೆ ಎಂದರೆ ಜೇಮ್ಸ್ ಹ್ಯಾಡ್ಲಿ ಚೇಸ್.

ಅನುಕರಣೆಯ ತೀರಾ ಕೀಳು ಉದಾಹರಣೆ ಎಂದರೆ "ಕೃತಿಚೌರ್ಯ".

ಏನೇ ಆದರೂ "ಅನುಕರಣೆ"ಯಲ್ಲಿ ಕೃತಿಕಾರನ ಸ್ವೋಪಜ್ಞತೆ, ಅವನ ಸ್ವತಂತ್ರ ಕೊಡುಗೆ ಏನೂ ಇರುವುದಿಲ್ಲ. "ಅನುಕರಣ" ಎಂದರೆ "ಒಬ್ಬ ಲೇಖಕ ತನ್ನ ಸೃಷ್ಟಿಶೀಲ ವ್ಯಕ್ತಿತ್ವವನ್ನು ಬಿಸಾಕಿ ಬೇರೆ ಲೇಖಕನ ಮುಖವಾಡ ಧರಿಸುತ್ತಾನೆ. ಆದರೆ ಅವನು ಅನುವಾದದ ವಿವರಗಳ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಾನೆ"

ಕೆ.ಎ.ಸೌಮ್ಯ
ಮೈಸೂರು

* * (ವಿವಿಧ ಮೂಲಗಳಿಂದ)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)