ಮದುವೆ ಎಂಬ ಅದ್ಭುತ ವ್ಯವಸ್ಥೆ

‘ಮದುವೆ’ ಎಂಬ ಪರಿಕಲ್ಪನೆಗೆ ನಮ್ಮ ಸಮಾಜದಲ್ಲಿ ಉನ್ನತ ಸ್ಥಾನವಿದೆ. ಹೇಗೆಂದರೆ ಮದುವೆ ಆಗಿಲ್ಲದವರನ್ನು ನಮ್ಮ ಜನರು ಕನಿಕರದಿಂದ ನೋಡುವಾಗ “ಮದುವೆ” ಎಂಬ ಪದದ ಅರ್ಥ ತಿಳಿಯುತ್ತದೆ. ಜೊತೆಗೆ ‘ಮದುವೆ’ ಎಂಬ ಪದಕ್ಕೆ ಸಮಾಜ ಕೊಡುವ ಗೌರವವೂ ಅರಿವಾಗುತ್ತದೆ.

ಹಾಗಾದರೆ ಮದುವೆಯೇ ಮಾಡಿಕೊಳ್ಳದೇ ಬದುಕಲು ಸಾಧ್ಯವಿಲ್ಲವೇ?

ಯಾಕಿಲ್ಲ.. ಎಷ್ಟೋ ಜನ ತಮ್ಮ ಧ್ಯೇಯಕ್ಕಾಗಿ ಮದುವೆ ಮಾಡಿಕೊಳ್ಳದೇ ಹಾಗೇ ಉಳಿದಿದ್ದಾರೆ. ಆದರೆ ಯಾರೋ ಒಬ್ಬ ವಿವೇಕಾನಂದ, ಎಲ್ಲೋ ಒಬ್ಬರು ವಾಜಪೇಯಿ, ಅಬ್ದುಲ್ ಕಲಾಂ ನಂಥವರು ಮದುವೆ ಮಾಡಿಕೊಳ್ಳದೇ ಬ್ರಹ್ಮಚಾರಿಗಳಾಗಿ ಉಳಿದಿದ್ದಾರೆಂದು ಹೇಳಲು ನಾವು ಸಂತೋಷ ಪಡುತ್ತೇವೆ ಹೊರತು, ನಮ್ಮ ಅಣ್ಣ-ತಮ್ಮ , ನಮ್ಮ ಮಕ್ಕಳು, ಅಕ್ಕ-ತಂಗಿಯರು ಮದುವೆಯಾಗದೇ ಇರುವರೆಂದರೆ ನಮಗೆ ನಿಜಕ್ಕೂ ತುಂಬಾ ಸಂಕಟವಾಗುತ್ತದೆ.

ಏಕೆಂದರೆ...

ಮದುವೆ ಎಂಬ ಪರಿಕಲ್ಪನೆಯ ಹಿಂದೆ ಮದುವೆಯಾದರೆ ಅವರು ಸುಖವಾಗಿರ್ತಾರೆ ಎಂಬ ನಂಬಿಕೆಯಿದೆ. ಎಷ್ಟು ದಿನ ಅಂತ ನಮ್ಮ ಅಣ್ಣ-ತಮ್ಮಂದಿರು ನಾರದನ ಹಾಗೆ ಬೇಜವಾಬ್ದಾರಿಯಾಗಿ ಅಲೆಯುವುದು? ಅವರಿಗೂ ಮದ್ವೆಯಾಗಿ ಮಕ್ಕಳಾದರೆ ಜವಾಬ್ದಾರಿ ಬರುತ್ತದೆ ಅನ್ನುವುದು ಗಂಡಿನ ಬಗೆಗಿನ ಅಭಿಪ್ರಾಯವಾದರೆ... ಶತಶತಮಾನಗಳಿಂದಲೂ ಹೆಣ್ಣು ಗಂಡಿನ ಆಶ್ರಯದಲ್ಲೇ ಇರುವುದು, ಬಾಲ್ಯದಲ್ಲಿ ತಂದೆ, ಯೌವ್ವನದಲ್ಲಿ ಗಂಡ, ಮುಪ್ಪಿನಲ್ಲಿ ಮಕ್ಕಳಾಸರೆಯಲ್ಲಿ ಇರಬೇಕು, ಆದ್ದರಿಂದಲೇ ಅವಳಿಗೆ ಮದುವೆ ಮಾಡಬೇಕು ಎನ್ನುವುದು ಹೆಣ್ಣಿನ ಬಗೆಗಿನ ಅಭಿಪ್ರಾಯವಾಗಿದೆ.

ಆದರೆ ಮದುವೆ ಎಂಬ ಪರಿಕಲ್ಪನೆಯ ಹಿಂದೆ ಎಚಿತಹ ಒಳ್ಳೆಯ ಉದ್ದೇಶವಿತ್ತೆನ್ನುವುದು ಗೊತ್ತೇ?

‘ಮದುವೆ’ ಎಂಬ ಅದ್ಭುತ ವ್ಯವಸ್ಥೆ ಉತ್ತಮ ಸಮಾಜವನ್ನು ರೂಪಿಸುತ್ತದೆ. ಗಂಡಾಗಲಿ-ಹೆಣ್ಣಾಗಲಿ ಒಂಟಿಯಾಗಿ ಇದ್ದಾಗ ಬೇರೆಯವರ ಕಷ್ಟಗಳು ಗೊತ್ತಾಗುವುದಿಲ್ಲ. ಮದುವೆಯಾಗಿ ಕಷ್ಟ ಸುಖಗಳನ್ನು ಅರಿತ ಮೇಲೆ, ಬೇರೆ ಯಾರಿಗಾದರೂ ಕಷ್ಟವಿದ್ದಾಗ ಅವರ ಮೇಲೆ ಕನಿಕರವೆನಿಸುತ್ತದೆ. ಅವರೂ ನಮ್ಮ ಹಾಗೆಯೇ ಅಲ್ಲವೇ ಅಂತನಿಸಿ ಅವರಿಗೆ ಸಹಾಯ ಮಾಡಬೇಕೆನಿಸುತ್ತದೆ.

ಅಷ್ಟೇ ಅಲ್ಲದೇ.. ಮದುವೆಯಿಂದ ಮನುಷ್ಯನೊಳಗಿನ ಅಹಂಕಾರದ ನಾಶವಾಗುತ್ತದೆ. ಕೇವಲ ನಾನು, ನನ್ನದು ಎಂದು ಯೋಚಿಸುತ್ತಿದ್ದವರು, ಮದುವೆಯಾದ ಮೇಲೆ ನಾವು, ನಮ್ಮದು, ನಮ್ಮ ಕುಟುಂಬ ಅಂತ ಯೋಚಿಸುವಂತಾಗುತ್ತದೆ. ನೋವು-ಕಷ್ಟಗಳಲ್ಲಿ ಬೆಂದು ಅವರ ಮನಸ್ಸು ಪ್ರಬುದ್ಧವಾಗಿರುತ್ತದೆ. ಎಂಥ ಕಠಿಣ ಹೃದಯಿಯೇ ಆದರೂ ತನ್ನ ಮಕ್ಕಳ ಮುಂದೆ ಮೃದುವಾಗುತ್ತಾನೆ. ತನಗೆ, ತನ್ನ ಕುಟುಂಬಕ್ಕೆ ಸದಾ ಒಳ್ಳೆಯದಾಗಬೇಕೆಂದು ಬಯಸುತ್ತಾನೆ. ಅದಕ್ಕಾಗಿ ತಾನೂ ಒಳ್ಳೆಯವನಾಗುತ್ತಾನೆ. ಆದ್ದರಿಂದ ಅವನೇನು ಮಾಡಿದರೂ ಅದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ.

ಇಷ್ಟು ಸಮಾಜದ ವಿಷಯವಾದರೆ..

ಹೆಣ್ಣು ಎಲ್ಲೋ ಹುಟ್ಟಿ-ಎಲ್ಲೋ ಬೆಳೆದು-ಯಾರೊಂದಿಗೋ ಬದುಕು ಹಂಚಿಕೊಳ್ಳುವುದು ನಿಜಕ್ಕೂ ವಿಸ್ಮಯ. ಗಂಡ-ಹೆಂಡತಿ ಪರಸ್ಪರ ಒಬ್ಬರನ್ನೊಬ್ಬರು ಅರಿತು, ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಗೌರವಿಸಿ, ಒಬ್ಬರ ಸಾಧನೆಗೆ ಮತ್ತೊಬ್ಬರು ಊರುಗೋಲಾಗಬೇಕು. ಸ್ತ್ರೀ ಶಕ್ತಿ ಮತ್ತು ಪುರುಷ ಶಕ್ತಿ ಒಂದಾದರೆ ಪ್ರಪಂಚದಲ್ಲಿ ಏನು ಬೇಕಾದರೂ ಸಾಧಿಸಬಹುದು. ಅದನ್ನರಿತೇ ಹಿರಿಯರು ಅವರಿಬ್ಬರನ್ನು ಮದುವೆ ಎಂಬ ಬಂಧನದಲ್ಲಿಟ್ಟರು. ಏಕೆಂದರೆ.. ಗಂಡ-ಹೆಂಡತಿಯರ ಸೇವೆಯಲ್ಲಿ ನಿಸ್ವಾರ್ಥವಿರುತ್ತದೆ. ಅದೇ ಗೆಲುವಿನ ಮೆಟ್ಟಿಲು. ಇವರಿಬ್ಬರ ನಡುವಿನ, ಲೈಂಗಿಕ ಸಂಬಂಧ ಎನ್ನುವುದು ಸದಾ ಚಂಚಲವಾಗಿರುವ ಇಬ್ಬರ ಮನಸ್ಸನ್ನು ಒಂದೆಡೆ ಕಟ್ಟಿ ಹಾಕುವುದಕ್ಕೇ ಹೊರತು, ಮೂಲ ಉದ್ದೇಶ ಇರುವುದು ಉತ್ತಮ ಸಮಾಜ ನಿರ್ಮಾಣದಲ್ಲಿ.

ಆದರೆ ಇಂದು...

ಮದುವೆಯೆಂದರೆ ಪರಸ್ಪರರ ಭಾವನೆಗಳನ್ನು ಅವಮಾನ ಮಾಡಲು, ಮಾನಸಿಕವಾಗಿ ಹಿಂಸಿಸಲು, ಒಬ್ಬರು ಮುಂದೆ ಬಂದರೆ ಮತ್ತೊಬ್ಬರು ಸಹಿಸಲಾರದಷ್ಟು ದುರ್ಬಲವಾಗಿಬಿಟ್ಟಿದೆ. ಗಂಡು ತನ್ನ ದೈಹಿಕ ಶಕ್ತಿಯಿಂದ ಜಗತ್ತನ್ನು ಆಳಬಲ್ಲವನಾದರೆ, ಹೆಣ್ಣು ತನ್ನ ಮಾನಸಿಕ ದೃಢತೆಯಿಂದ ಅವನಿಗೆ ಧೈರ್ಯ ತುಂಬುತ್ತಾಳೆ. ಆದರೆ ಇದು ಯಾರಿಗೂ ಬೇಡ. ಎಲ್ಲರಿಗೂ ಹೆಣ್ಣು ತರುವ ವರದಕ್ಷಿಣೆ ಬೇಕು, ಅವಳು ಗಂಡು ಮಗುವನ್ನೇ ಹೆತ್ತು ಕೊಡಬೇಕು, ಹೀಗೆ, ಹಾಗೆ, ಎಂಬೆಲ್ಲಾ ನೂರೆಂಟು ಅಲಿಖಿತ ನಿಯಮಗಳನ್ನು ಜಾರಿಗೆ ತಂದು ಮದುವೆ ಎಂಬ ವ್ಯವಸ್ಥೆಯನ್ನೇ ಹಾಳು ಮಾಡಿಬಿಟ್ಟಿದ್ದಾರೆ.

ಒಟ್ಟಿನಲ್ಲಿ ಒಬ್ಬ ವ್ಯಕ್ತಿ ಮದುವೆಯಾದರೆ ತಾನು, ತನ್ನ ಹೆಂಡತಿ, ತನ್ನ ತಂದೆ-ತಾಯಿ, ಅಕ್ಕ-ತಂಗಿ, ಬಂಧು-ಬಳಗ ಹೇಗೆ ಮುಖ್ಯವಾಗುತ್ತದೋ, ಹಾಗೇ ಸಮಾಜವೂ ಮುಖ್ಯವಾಗುತ್ತದೆ. ಈ ಸುಂದರ ಭಾವನೆಯಿಂದ ಆರೋಗ್ಯಕರ ಸಮಾಜವೂ ನಿರ್ಮಾಣವಾಗುತ್ತದೆ.

*********
ಕೆ.ಎ.ಸೌಮ್ಯ
ಮೈಸೂರು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)