A C Bradley's ಕಾವ್ಯಕ್ಕಾಗಿ ಕಾವ್ಯ : ಎಂ.ಎ.ಕನ್ನಡ

ಕವಿ ಪರಿಚಯ:

ಎ.ಸಿ. ಬ್ರ್ಯಾಡ್ಲೀ (1851) ಇಂಗ್ಲೀಷ್ ಸಾಹಿತ್ಯದ ವಿದ್ವಾಂಸ. ತಮ್ಮ ತಂದೆಯ ಇಪ್ಪತ್ತೊಂದು ಮಕ್ಕಳಲ್ಲಿ ಕೊನೆಯವರು.ಓದಿನ ನಂತರ "ಲಿವರ್ ಪೂಲ್" ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾದರು.

ನಂತರ ಲಿವರ್ ಪೂಲ್, ಗ್ಲಾಸ್ಗೋ, ಎಡಿನ್ ಬರ್ಗ್, ಡರ್ಹಾಮ್ ವಿಶ್ವವಿದ್ಯಾನಿಲಯಗಳು ನೀಡಲು ಬಂದ ಗೌರವ ಡಾಕ್ಟರೇಟ್ ಅನ್ನು ನಿರಾಕರಿಸಿದರು. ಬ್ರಾಡ್ಲೀ ಮದುವೆ ಮಾಡಿಕೊಂಡಿಲ್ಲ, ಅವಿವಾಹಿತರು. ಅವರು ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದು ರಿಸರ್ಚ್ ಫೆಲೋಶಿಪ್ ಸ್ಥಾಪಿಸಿದ್ದಾರೆ.

ಬ್ರಾಡ್ಲೀ ಅವರು ಬರೆದಿರುವ "ಷೇಕ್ಸ್ ಪಿಯರಿಯನ್ ಟ್ರಾಜೆಡಿ" ಕೃತಿಯು ಎಲ್ಲರಿಂದಲೂ ಅತ್ಯಂತ ಕಟು ಟೀಕೆಗೆ ಒಳಗಾಗಿದ್ದರೂ, ಇಂದಿಗೂ ಸಹ ಅತ್ಯುತ್ತಮ ಮತ್ತು ಪ್ರಭಾವಿ ಕೃತಿಯಾಗಿದೆ. ಈ ಕೃತಿಯು ಇಪ್ಪತ್ತನಾಲ್ಕಕ್ಕಿಂತಲೂ ಹೆಚ್ಚು ಬಾರಿ ಮರು ಮುದ್ರಣ ಕಂಡಿದೆ.

 ಬ್ರಾಡ್ಲೀಯ ಸಿದ್ಧಾಂತವಾದ "ಕಾವ್ಯಕ್ಕಾಗಿ ಕಾವ್ಯ" ವಿಷಯವು, ಆತ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ನೀಡಿದ್ದ ಒಂದು ಆರಂಭಿಕ ಉಪನ್ಯಾಸವಾಗಿತ್ತು. ಮತ್ತು ಅದೇ ವರ್ಷ ಆತ ಅದನ್ನು ಪ್ರಕಟಿಸಿದ.

ಬ್ರಾಡ್ಲೀಯ ಕೃತಿಗಳು:

      ೧) ಷೇಕ್ಸ್ ಪಿಯರಿಯನ್ ಟ್ರಾಜೆಡಿ
      ೨) ಆಕ್ಸ್ ಫರ್ಡ್ ಲೆಕ್ಚರರ್ಸ್
      ೩) ಹೆಲೆನಿಕಾ
      ೪) ಕಾವ್ಯಕ್ಕಾಗಿ ಕಾವ್ಯ್
      ೫) ಮೆಮೋರಿಯಂ
      ೬) ಟೆನಿಸನ್ ನ ಒಂದು ಕಾಮೆಂಟರಿ

ಕಾವ್ಯಕ್ಕಾಗಿ ಕಾವ್ಯ:

"ಕಾವ್ಯಕ್ಕಾಗಿ ಕಾವ್ಯ" ಎಂಬ ಮಾತುಗಳು "ಕಲೆಗಾಗಿ ಕಲೆ" ಎಂಬ ಪ್ರಸಿದ್ಧ ನುಡಿಗಳನ್ನು ನೆನಪಿಗೆ ತರುತ್ತವೆ. ಎ.ಸಿ. ಬ್ರ್ಯಾಡ್ಲೀಯ ಉದ್ದೇಶವೇನೆಂದರೆ ’ಕಾವ್ಯಕ್ಕಾಗಿ ಕಾವ್ಯ’ ಎನ್ನುವುದನ್ನು ಹೇಗೆ ಅರ್ಥ ಮಾಡಿಕೊಳ್ಳಲಾಗಿದೆ ಎಂದು ವಿವರಿಸುವುದು. ಅಂದರೆ ಒಂದು ಕವಿತೆಯನ್ನು ಅದು ಹೇಗಿದೆಯೋ ಹಾಗೆಯೇ ಪರಿಭಾವಿಸುತ್ತಾ, ಅದರ ಧ್ವನಿಗಳ, ಆಲೋಚನೆಗಳ, ಪ್ರತಿಮೆಗಳ ಮೂಲಕ ಆ ಕಾವ್ಯವನ್ನು ಅರಿಯುವುದು..

ಕಾವ್ಯಕ್ಕಾಗಿ ಕಾವ್ಯ ಸೂತ್ರ ಏನು ಹೇಳುತ್ತದೆ:

ಮೊದಲೆಯದಾಗಿ ಈ ಸೂತ್ರ ಹೇಳುವುದೇನೆಂದರೆ:

೧) ಈ ಅನುಭವ ಸ್ವಯಂಪೂರ್ಣವಾದದ್ದು
೨) ಸಹಜ ಮೌಲ್ಯವುಳ್ಳದ್ದು
೩) ಕಾವ್ಯ ನಮಗೆ ತಿಳುವಳಿಕೆ ನೀಡುತ್ತದೆ
೪) ಕಾವ್ಯ ನಮ್ಮ ಭಾವನೆಗಳನ್ನು ಮೃದುಗೊಳಿಸುತ್ತದೆ
೫) ಕವಿಗೆ ಹಣ-ಕೀರ್ತಿ-ಆತ್ಮಶಾಂತಿಯನ್ನು ತಂದು ಕೊಡುತ್ತದೆ

ಮೇಲಿನ ಕಾರಣದಿಂದಾಗಿ ಕಾವ್ಯಕ್ಕೆ ಮನ್ನಣೆ ಸಿಗಬಹುದು. ಆದರೆ ಇದು ಕಾವ್ಯದ ನಿಜವಾದ ಮೌಲ್ಯ ಆಗಲಾರದು. ಕಾವ್ಯದ ಮೌಲ್ಯವನ್ನು ಸಂಪೂರ್ಣವಾಗಿ ಒಳಗಿನಿಂದಲೇ ನಿರ್ಣಯಿಸಬೇಕು. ಕಾವ್ಯ ರಚಿಸುವಾಗ ಕವಿಯಾಗಲೀ ಅಥವಾ ಓದುವಾಗ ವಾಚಕನಾಗಲೀ ಅದರ ಗೌಣವಾದ ಉದ್ದೇಶವನ್ನು ಪರಿಗಣಿಸಿದಲ್ಲಿ ಅದು ಕಾವ್ಯ ಮೌಲ್ಯವನ್ನು ಕೆಳಗಿಳಿಸುತ್ತದೆ.ಏಕೆಂದರೆ ಈ ಗೌಣವಾದ ಉದ್ದೇಶಗಳು ಕವಿತೆಯನ್ನು ಸ್ವಂತ ಪರಿಸರದಿಂದ ಹೊರತೆಗೆದು ಅದರ ಸ್ವಭಾವವನ್ನು ಬದಲಿಸುತ್ತವೆ.

ಏಕೆಂದರೆ ಕವಿತೆಯೇ ಒಂದು ಸ್ವಯಂಪೂರ್ಣವಾದ ಜಗತ್ತಾಗಿರುತ್ತದೆ. ಅದನ್ನು ಆಸ್ವಾದಿಸಬೇಕಾದರೆ ಆ ಜಗತ್ತನ್ನು ಪ್ರವೇಶಿಸಿ,ಅದರ ನಿಯಮಗಳಿಗೆ ಒಳಗಾಗಬೇಕಾಗುತ್ತದೆ.ಜೊತೆಯಲ್ಲಿ ಈ ವಾಸ್ತವ ಜಗತ್ತಿನಲ್ಲಿರುವ ನಮ್ಮ ನಂಬಿಕೆಗಳು, ಗುರಿಗಳನ್ನು ತತ್ಕಾಲಕ್ಕೆ ಅಲಕ್ಷಿಸಬೇಕು.

ಕಾವ್ಯ ಮತ್ತು ಜೀವನ:

ಜೀವನಕ್ಕೂ, ಕಾವ್ಯಕ್ಕೂ ಅಪಾರ ಸಂಬಂಧವಿದೆ. ಅವು ಒಳ ಸಂಬಂಧವನ್ನು ಹೊಂದಿರುತ್ತವೆ. ಅವು ಪರಸ್ಪರ ಸದೃಶವಾದವು. ಒಂದರ ನೆರವಿನಿಂದ ಮತ್ತೊಂದನ್ನು ತಿಳಿಯುತ್ತೇವೆ. ಎರಡೂ ಒಂದೇ ವಸ್ತುವಿನ ವಿಭಿನ್ನ ರೂಪ ಎನ್ನಬಹುದು. ಆದರೆ ಒಂದಕ್ಕೆ ಯಥಾರ್ಥತೆ ಉಂಟು, ಸಂಪೂರ್ಣ ತೃಪ್ತಿಯಿಲ್ಲ. ಮತ್ತೊಂದು ಕಲ್ಪನೆಯನ್ನು ತಣಿಸುತ್ತದೆ. ಆದರೆ ಯಥಾರ್ಥತೆಯಿಲ್ಲ.

"ಕಾವ್ಯ ಮತ್ತು ಜೀವನ ಎಲ್ಲಿಯೂ ಸಂಧಿಸದ ಸಮಾನಾಂತರ ರೇಖೆಗಳು"

ಕಾವ್ಯ ಎಂಬುದು ಜೀವನವಲ್ಲ. ಜೀವನದ ಪ್ರತಿಕೃತಿಯೂ ಅಲ್ಲ. ಕಾವ್ಯ-ಜೀವನ ಎರಡಕ್ಕೂ ವಿಭಿನ್ನ ಅಸ್ತಿತ್ವಗಳುಂಟು.ಜೀವನಕ್ಕೆ ನಿರ್ದಿಷ್ಟ ಕಾಲ-ದೇಶಗಳಿವೆ. ಆದರೆ ಕವಿತೆಯಲ್ಲಿ ಕಾಲ-ದೇಶಗಳಿಗೆ ಸ್ಥಾನವಿರುವುದಿಲ್ಲ.

ಮತ್ತೊಂದು ತತ್ವವಾದ "ರೂಪಕ್ಕಾಗಿ ರೂಪ" ದಲ್ಲಿ ಹೀಗೆ ಹೇಳಿದೆ; "ಒಬ್ಬ ಕವಿ ಚೆನ್ನಾಗಿ ಹೇಳುತ್ತಿರುವ ತನಕ ಅವನು ಏನನ್ನು ಹೇಳುತ್ತಿದ್ದಾನೆ ಎನ್ನುವುದು ಮುಖ್ಯವಲ್ಲ. ಕವಿತೆಯಲ್ಲಿ ರೂಪ-ನಿರೂಪಗಳೇ ಸರ್ವಸ್ವ. ವಿಷಯ ನಗಣ್ಯ. ಅಷ್ಟೇ ಅಲ್ಲ, ರೂಪದಿಂದ ಕವಿತೆಯ ವಿಷಯವನ್ನು ಅಳಿಸುವುದು ಕಲೆಯ ರಹಸ್ಯ"

ಇಂತಹ ಹೇಳಿಕೆಗಳು ಬಹಳಷ್ಟು ಕಂಡು ಬಂದರೂ, ನಾವು ಗೌರವಿಸಬೇಕಾದ ಲೇಖಕರೂ ಇದನ್ನೇ ಅನುಸರಿಸುತ್ತಿರುವುದು ವಿಷಾದನೀಯ ಎಂದು ಬ್ರ್ಯಾಡ್ಲೀ ಹೇಳುತ್ತಾನೆ.

ಕವಿತೆಯ ವಸ್ತು:

ಒಂದು ಓದದ ಕವಿತೆಯ ಶೀರ್ಷಿಕೆಯನ್ನು ನೋಡಿ, ಯಾವುದನ್ನು ಕವಿ ವಸ್ತುವನ್ನಾಗಿ ತೆಗೆದುಕೊಂಡಿದ್ದಾನೆ ಎಂದು ಹೇಳುವಾಗ, ಯಾವುದನ್ನು ನಾವು ದೃಷ್ಟಿಯಲ್ಲಿಟ್ಟುಕೊಂಡಿರುತ್ತೇವೆಯೋ ಅದೇ "ವಸ್ತು" ಎಂದು ಪರಿಗಣಿಸಬೇಕು.

ಉದಾ: "Paradise Lost" ದ ವಸ್ತು Bible ಓದುವ ಸಾಮಾನ್ಯ ಜನರ ಪ್ರಕಾರ "ಪತನ"ದ ಕಥೆ ಆಗುತ್ತದೆ.

ಕವಿತೆಯ ವಸ್ತು ಕವಿತೆಯ ಒಳಗಿರುವುದಿಲ್ಲ. ಹೊರಗಿರುತ್ತದೆ. "ವಸ್ತು" ಕವನದ ವಿಷಯವಲ್ಲ.ಯಾವ ವಸ್ತುಗಳು ಕಲೆಗೆ ಯೋಗ್ಯ ಎಂಬುದನ್ನು ಪೂರ್ವಭಾವಿಯಾಗಿ ನಾವು ನಿರ್ಧರಿಸಲಾರೆವು. ಹಾಗೆಯೇ ಒಂದು ಒಳ್ಳೆಯ ಕವಿತೆಯನ್ನು ಬರೆಯಲು ಸಾಧ್ಯವಾಗುವಂತಹ ಒಳ್ಳೆಯ ವಸ್ತುವೊಂದನ್ನು ಹೆಸರಿಸಲಾರೆವು. ವಸ್ತುಗಳನ್ನು ಸುಂದರ-ವಿಕೃತ, ಉದಾತ್ತ-ದೂಷಿತ ಎಂದು ವಿಂಗಡಿಸುವುದು ತಪ್ಪು ಎಂದು ಬ್ರ್ಯಾಡ್ಲೀ ಹೇಳುತ್ತಾನೆ.ಕವಿತೆಯಲ್ಲಿ ಏನು ವಿಷಯವಿದೆಯೋ ಅದರಿಂದ ಕವಿತೆಯನ್ನು ಅಳೆಯಬೇಕು.ಆ ಕವಿ ಆ ಕವಿತೆ ಬರೆಯುವುದಕ್ಕೆ ಮುನ್ನ ಆ ವಿಷಯಕ್ಕಿದ್ದ ಬೆಲೆಯಿಂದಲ್ಲ.


ಕಾವ್ಯದ ನೈತಿಕ ಪರಿಣಾಮ:

ಕಾವ್ಯದ ನೈತಿಕ ಪರಿಣಾಮ ಅಷ್ಟೇ ಮುಖ್ಯವಾದದ್ದು. ಇದರ ಬಗ್ಗೆ ಸೂಕ್ಷ್ಮ ಸಂವೇದನೆ ಉಳ್ಳವನಾಗಿದ್ದ ರಾಸೆಟ್ಟ. ಈತ ಟೆನಿಸನ್’ನ ಹೊಗಳಿಕೆಗಾಗಿ ಆರಿಸಿಕೊಂಡಿದ್ದ ತನ್ನ ಅತ್ಯುತ್ತಮ ಷಟ್ಪದಿಯೊಂದನ್ನು ತಾನೇ ಸ್ವತಃ ದಮನ ಮಾಡಿದ. ಏಕೆಂದರೆ ಅದನ್ನು "ಇಂದ್ರಿಯಯ ವಿಷಯ" ಎಂದು ಕರೆಯಲಾಗಿತ್ತು. ರಾಸೆಟ್ಟನ ತೀರ್ಮಾನಕ್ಕೆ ಯಾರಾದರೂ ವಿಷಾದಿಸಬಹುದು.ಅವನ ನೀತಿಪರತೆಯನ್ನು ಮೆಚ್ಚಬಹುದು. ಆದರೆ ಆತ ನಿರ್ಣಯ ಕೈಗೊಂಡಿದ್ದು ಸಾಮಾನ್ಯ ಜನರ ಸ್ಥಾನದಲ್ಲಿ ನಿಂತು, ಕವಿಯ ಸ್ಥಾನದಲ್ಲಲ್ಲ.

ಕಾವ್ಯದ ತಿರುಳು ಮತ್ತು ರೂಪ:

ಕಾವ್ಯದ ತಿರುಳು ಮತ್ತು ರೂಪ ಎರಡಕ್ಕೂ ಒಂದೇ ಅರ್ಥವಿದೆ. ಯಾರಾದರೂ ಮುಗುಳ್ನಗುವುದನ್ನು ನೋಡಿದಾಗ ಮುಖದ ಮೇಲಿನ ಗೆರೆಗಳು ಮತ್ತು ಭಾವವನ್ನು ಬೇರೆಬೇರೆಯಾಗಿ ಹೇಗೆ ಗ್ರಹಿಸಲು ಸಾಧ್ಯವಿಲ್ಲವೋ, ಹಾಗೆಯೇ ಕಾವ್ಯದ ತಿರುಳು ಮತ್ತು ರೂಪ ಒಂದೇ ಆಗಿರುತ್ತದೆ.


ಉದಾ: ’ಸೂರ್ಯ ಬಿಸಿಯಾಗಿದ್ದಾನೆ, ಆಗಸ ತಿಳಿಯಾಗಿದೆ’ ಎಂಬ ಪಂಕ್ತಿಯನ್ನೋದಿದಾಗ, ಸೂರ್ಯನ ಚಿತ್ರ ಒಂದು ಕಡೆ, ಬಿಡಿಬಿಡಿಯಾದ ಅಸ್ಪಷ್ಟ ಅಕ್ಷರಗಳನ್ನು ಒಂದು ಕಡೆ ನಾವು ಕಲ್ಪಿಸಿಕೊಳ್ಳುವುದಿಲ್ಲ. ಒಂದರಲ್ಲಿ ಮತ್ತೊಂದನ್ನು ಅನುಭವಿಸುತ್ತೇವೆ. ಅದು ಕಾವ್ಯಾತ್ಮಕ ಅನುಭವ.

ಸಂಗೀತದಲ್ಲಿ ಹೇಗೆ ಶಬ್ದವೊಂದು ಕಡೆ, ಅರ್ಥವೊಂದು ಕಡೆ ಇರುವುದಿಲ್ಲವೋ, ಚಿತ್ರಕಲೆಯಲ್ಲಿ ಹೇಗೆ ಅರ್ಥವತ್ತಾದ ಬಣ್ಣ ಅಥವಾ ಬಣ್ಣದಲ್ಲಿ ಅರ್ಥ ಇರುತ್ತದೋ, ಅದೇ ರೀತಿ "ಕಾವ್ಯದಲ್ಲಿ ತಿರುಳು ಮತ್ತು ರೂಪ ಪ್ರತ್ಯೇಕವಾಗಿರುವುದಿಲ್ಲ"

ಕಾವ್ಯದಲ್ಲಿ ಎಲ್ಲವೂ ಅಭಿವ್ಯಕ್ತಿಯೇ. ಕಾವ್ಯದ ಪ್ರತಿಯೊಂದು ವಾಕ್ಯ, ನುಡಿಗಟ್ಟು,ಪ್ರತಿಮೆಗಳು ಲೇಖಕನ ಆಲೋಚನೆಗಳನ್ನು ಪರಿಪೂರ್ಣವಾಗಿ ಅಭಿವ್ಯಕ್ತಿಸಬೇಕು. ಏಕೆಂದರೆ ನಿಜವಾದ ಕಾವ್ಯದಲ್ಲಿ ಅದರ ಸ್ವಂತ ಶಬ್ದಗಳಿಂದಲ್ಲದೆ ಬೇರೆ ಶಬ್ದಗಳಿಂದ ಅದರ ಅರ್ಥವನ್ನು ಅಭಿವ್ಯಕ್ತಿಸುವುದು ಅಸಾಧ್ಯ. ಹಾಗೆಯೇ ಅರ್ಥ ಬದಲಾಗದ ಹಾಗೆ ಶಬ್ದಗಳನ್ನು ಬದಲಾಯಿಸುವುದೂ ಸಾಧ್ಯವಲ್ಲ. ಇಂತಹ ಕವಿಯ ಭಾಷಾಂತರ ಹೊಸಬಟ್ಟೆ ತೊಟ್ಟ ಹಳೆಯ ಕವಿತೆ ಆಗುವುದಿಲ್ಲ. ಬದಲಿಗೆ ಇದು ಹೊಸ ಉತ್ಪನ್ನವೇ ಆಗುತ್ತದೆ. ಕಾವ್ಯವನ್ನು ಅರ್ಥ ಮಾಡಿಕೊಳ್ಳುವ ಯಾರೂ ಈ ಬಗ್ಗೆ ವಿವಾದ ಮಾಡುವುದಿಲ್ಲ.

ಉದಾ: "Steed" ಮತ್ತು " Horse" ಗೆ ಒಂದೇ ಅರ್ಥ ಎಂದು ಜನ ಹೇಳುತ್ತಾರೆ. ಬೈರನ್’ನ ಒಂದು ಕವನದಲ್ಲಿ ಹೀಗಿದೆ.

        Bring Forth the Horse
        The Horse was Brought
        In Truth he was a noble Steed

 ಎರಡೂ ಶಬ್ದಕ್ಕೂ ಒಂದೇ ಅರ್ಥವಾದರೆ..?

        Bring Forth the Steed
        The Steed was Brought
        In Truth he was a noble Horse

ಅಂತ ಯಾಕೆ ಬರೆಯಬಾರದು? ಏಕೆಂದರೆ HORSE ಮತ್ತು STEED ಗೆ ಪ್ರತ್ಯೇಕ ಅರ್ಥವಿದೆ.

 ಛಂದಸ್ಸು:

ಕಾವ್ಯದ ವಸ್ತು ಮತ್ತು ರೂಪ ತಿರುಳಿನಷ್ಟೇ ಮುಖ್ಯವಾದದ್ದು "ಛಂದಸ್ಸು". ಛಂದಸ್ಸು ಕವಿತೆಯ ಅರ್ಥದೊಡನೆ ಅಭಿನ್ನವಾಗಿ ಬೆರೆತುಗೊಂಡಾಗ, ಕವಿತೆಯ ಮೌಲ್ಯ ಹೆಚ್ಚಾಗುತ್ತದೆ.

ಆದರೆ ಛಂದಸ್ಸೊಂದನ್ನೆ ಪರಿಗಣಿಸಿದಾಗ ಅದಕ್ಕೆ ಬೇರೆ ಸ್ವತಂತ್ರ ಬೆಲೆಯುಂಟು. ಅದು ನಿಮಗೆ ಅರ್ಥವಾಗದ ಭಾಷೆಯಲ್ಲಿ ಕಾವ್ಯವನ್ನೋದುವಾಗ ಅನುಭವಕ್ಕೆ ಬರಬಹುದು. ಅರ್ಥ ಗೊತ್ತಿಲ್ಲದ ಅಥವಾ ಭಾಷೆ ಬರದ ಯಾವ ಕೃತಿಯನ್ನಾಗಲೀ ಓದಲು ಸಾಧ್ಯವಿಲ್ಲ. ಅಥವಾ ಅದನ್ನು ಓದುವುದರಿಂದ ನಮಗೆ ದಣಿವಾಗುತ್ತದೆ. ಆದರೆ ಕವಿತೆಯಲ್ಲಿರುವ ಸಂಗೀತವನ್ನು ಪರಿಗಣಿಸಿದರೆ ಅದ್ಭುತ ಪರಿವರ್ತನೆಯಾಗುತ್ತದೆ.

"ಶುದ್ಧ ಕಾವ್ಯ" ಎಂದರೆ ಪೂರ್ವಕಲ್ಪಿತವಾದ ವಸ್ತುವಿನಿಂದ ಬರೆಯಲ್ಪಟ್ಟ ವಸ್ತುವಿನ ಅಲಂಕಾರವಲ್ಲ. ತಾನು ಹೇಳಬೇಕಾದ ಆಶಯವೇನೆಂದು ಕವಿಗೆ ಮೊದಲೇ ಖಚಿತವಾಗಿ ಗೊತ್ತಿದ್ದಲ್ಲಿ ಕವನ ಬರೆಯಬೇಕೇಕೆ? ವಾಸ್ತವವಾಗಿ ಕವನವಾಗಲೇ ರಚಿತವಾಗಿರುತ್ತಿತ್ತು. ಅವನ ಆಶಯ ಏನೆಂದು ಕವನದ ಮುಕ್ತಾಯ ಮಾತ್ರವೇ ತೋರಿಸಿಕೊಡಬಲ್ಲದು. ಅವನಿಗೂ ಸಹ. ಅವನು ಕವನ ಪ್ರಾರಂಭಿಸಿದಾಗ ಅದರ ಅರ್ಥವನ್ನು ವಶಪಡಿಸಿಕೊಂಡಿರಲಿಲ್ಲ. ಅದೇ ಅವನನ್ನು ವಶಪಡಿಸಿಕೊಂಡಿತ್ತು.

ಉಪಸಂಹಾರ

"ಕಾವ್ಯಕ್ಕಾಗಿ ಕಾವ್ಯ" ಎಂಬಲ್ಲಿ ಕಾವ್ಯವನ್ನು ಅದು ಇರುವಂತೆಯೇ ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂದು ಎ.ಸಿ.ಬ್ರ್ಯಾಡ್ಲೀ ವಿವರಿಸಿದ್ದಾನೆ. ಕಾವ್ಯದಲ್ಲಿ ವಸ್ತು, ತಿರುಳು, ರೂಪ, ಛಂದಸ್ಸು ಔಚಿತ್ಯಪೂರ್ಣವಾಗಿ ಬೆಸೆದುಕೊಂಡಾಗ ಸಂಗೀತ-ಚಿತ್ರಕಲೆಗಿಂತ ಉತ್ತಮವಾಗುತ್ತದೆ ಎಂದು ವಾದಿಸುತ್ತಾನೆ.

*********************
K A Sowmya
Mysore

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)