ಪೌರಾಣಿಕ-ಲೇಖನ : "ಕುಂತಿ" published in PRERANA on Nov 2013


‘ಕುತೂಹಲ’ ಎನ್ನುವುದು ಮಾನವ ಸಹಜ ಗುಣ. ಎಲ್ಲಾ ವಿಷಯಗಳನ್ನು ತಿಳಿಯಬೇಕು ಎಂಬ ಮಾನವನ ಮಹತ್ವಾಕಾಂಕ್ಷೆಯೇ ಇಂದು ಸೃಷ್ಟಿಯ ರಹಸ್ಯವನ್ನು ಭೇದಿಸುವತ್ತ ಸಾಗಿದೆ. ಅದರಲ್ಲೂ ಗುಟ್ಟಾದ ವಿಷಯಗಳನ್ನು ತಿಳಿಯುವುದೆಂದರೆ ಮಾನವರಿಗೆ ಎಲ್ಲಿಲ್ಲದ ಕುತೂಹಲ. ಈ ಕುತೂಹಲ ಅತಿಯಾದರೆ ಆಗುವ ಅನಾಹುತವನ್ನು ಮಹಾಭಾರತದ “ಕುಂತಿ”ಯ ಮೂಲಕ ತಿಳಿಯಬಹುದು.

ಕುಂತಿಭೋಜನ ಸಾಕು ಮಗಳಾದ ಕುಂತಿ ಒಂದು ಮಹತ್ತರ ಕಾರ್ಯಕ್ಕಾಗಿ ಜನ್ಮ ತಳೆದವಳು. ಹಸ್ತಿನಾವತಿಯ ಸಿಂಹಾಸನವನ್ನು ಕೌರವರಿಂದ ಮತ್ತೆ ಪಾಂಡುವಿನ ಮಕ್ಕಳಿಗೆ ಸಿಗುವಂತೆ ಮಾಡುವ ಪ್ರಭಾವೀ ಪಾತ್ರ ಅವಳದ್ದು. ಆದರೆ ಅವಳ ಜೀವನ ಅಷ್ಟೇ ದುಃಖದಾಯಕವೂ ಹೌದು.

ಚಿಕ್ಕವಳಿದ್ದಾಗ ಅವಳ ತಂದೆಯ ಆಸ್ಥಾನಕ್ಕೆ ಬಂದ ದೂರ್ವಾಸ ಮುನಿಯವರನ್ನು ಆದರದಿಂದ ಉಪಚರಿಸಿದ ಪರಿಣಾಮ, ದೂರ್ವಾಸರು ಅವಳ ಸೇವೆಗೆ ಸಂತೃಪ್ತರಾಗಿ ಒಂದು ಮಂತ್ರೋಪದೇಶ ಮಾಡುತ್ತಾರೆ. ಅದರಂತೆ ಅವಳು ತನಗೆ ಇಷ್ಟವಾದ ಐದು ದೇವತೆಗಳನ್ನು ಪ್ರತ್ಯಕ್ಷ ಮಾಡಿಕೊಂಡು ಅವರಿಂದ ಮಕ್ಕಳನ್ನು ಪಡೆಯಬಹುದಾಗಿರುತ್ತದೆ. ದೂರ್ವಾಸರು ಅವಳ ಜೀವನದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರಗಳನ್ನು ನೀಡಿರುತ್ತಾರೆ. ಮುಂದೆ ಈ ವರಗಳಿಂದ ಕುಂತಿಗೆ ಬಹಳ ಪ್ರಯೋಜನವಾಗುತ್ತದೆ. ನಿಜ.

ಆದರೆ ಈ ಮಂತ್ರಗಳನ್ನು ಹೇಳಿದರೆ ತನಗಿಷ್ಟವಾದ ದೇವರು ಪ್ರತ್ಯಕ್ಷನಾಗುತ್ತನೆಯೋ ಇಲ್ಲವೋ ಎಂಬ “ಕುತೂಹಲ”ವೇ ಕುಂತಿಯನ್ನು ಆಜೀವಪರ್ಯಂತ ದುಃಖಕ್ಕೆ ದೂಡುತ್ತದೆ.

ಹುಡುಗಾಟಿಕೆಯ ವಯಸ್ಸಿನ ಕುಂತಿಯು ಸೂರ್ಯನಾರಾಯಣನನ್ನು ಕಂಡು, ಮುಂಬರುವ ಪರಿಣಾಮವನ್ನು ಯೋಚಿಸದೇ, ಮಂತ್ರ ಹೇಳಿ ಪ್ರತ್ಯಕ್ಷ ಮಾಡಿಕೊಳ್ಳುತ್ತಾಳೆ. ತನ್ನೆದುರು ತನಗಿಷ್ಟವಾದ ದೇವರ ನಿಂತಿರುವುದನ್ನು ಕಂಡು ಆನಂದಿಸುತ್ತಾಳೆ. ಹಾಗಿದ್ದರೆ ಈ ಮಂತ್ರಗಳನ್ನು ಹೇಳಿಕೊಂಡು ಯಾವ ದೇವರನ್ನಾದರೂ ಪ್ರತ್ಯಕ್ಷ ಮಾಡಿಕೊಳ್ಳಬಹುದು ಎಂದು ಹಿರಿಹಿರಿ ಹಿಗ್ಗುತ್ತಾಳೆ.


ಅಷ್ಟರಲ್ಲಿ ಸೂರ್ಯನು ತನ್ನ ಒಂದು ಅಂಶದಿಂದ ಮಗುವನ್ನು ಸೃಷ್ಟಿಸಿ ಅವಳ ಕೈಗೆ ಕೊಟ್ಟಾಗ ಅವಳಿಗೆ ಆಘಾತವಾಗುತ್ತದೆ. ಆಗ ಅವಳಿಗೆ ದೂರ್ವಾಸರು ಕೊಟ್ಟ ವರದಂತೆ ಕೊಟ್ಟಂತೆ ತನಗಿಷ್ಟವಾದ ದೇವರನ್ನು ಪ್ರತ್ಯಕ್ಷ ಮಾಡಿಕೊಳ್ಳುವುದರ ಜೊತೆಗೆ ಅವರಿಂದ ಮಗು ಪಡೆಯುವ ಬಗ್ಗೆಯೂ ಹೇಳಿದ್ದು ನೆನಪಾಗುತ್ತದೆ. ಆಗ ತಾನು ಮಾಡಿದ ತಪ್ಪಿನ ಅರಿವಾಗುತ್ತದೆ. ಅನಿರೀಕ್ಷಿತವಾದ ಈ ಆಘಾತದಿಂದ ತತ್ತರಿಸುತ್ತಾಳೆ. ಇದರಿಂದ ಹೇಗೆ ಹೊರಬರುವುದೆಂದು ಗೊತ್ತಾಗದೇ ಚಡಪಡಿಸುತ್ತಾಳೆ. ತನಗಿನ್ನೂ ಮದುವೆಯಾಗಿಲ್ಲ, ತಾನಿನ್ನೂ ಬಾಲೆ ಎಂದು ಸೂರ್ಯನಲ್ಲಿ ಗೋಗರೆಯುತ್ತಾಳೆ. ಆದರೆ ಸೂರ್ಯ ಅದು ಯಾವುದನ್ನೂ ಗಮನಿಸದೇ ತನ್ನ ಕರ್ತವ್ಯವನ್ನು ತಾನು ಮಾಡುತ್ತಿರುವುದಾಗಿ ಹೇಳಿ, ಅವಳಿಗೆ ಮಗುವನ್ನು ಕೊಟ್ಟು ಮಾಯವಾಗುತ್ತಾನೆ.

ಒಬ್ಬ ಹೆಣ್ಣಿಗೆ ಮದುವೆಯಾಗದೇ ತಾಯಿಯಾಗುವ ಪರಿಸ್ಥಿತಿ ಬಂದರೆ ಅವಳ ಮನಸ್ಥಿತಿ ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತು. ಸಮಾಜಕ್ಕೆ, ಮನೆಯವರಿಗೆ ಹೆದರಿ ಕುಂತಿ ಮಗುವನ್ನು ಗಂಗೆಯಲ್ಲಿ ತೇಲಿ ಬಿಡುತ್ತಾಳೆ. ತಾನು ಮಾಡುತ್ತಿರುವುದು ಘೋರ ಅಪರಾಧ ಎಂದು ಅವಳಿಗೆ ಗೊತ್ತು. ಆದರೂ ಅವಳಿಗೆ ಬೇರೆ ವಿಧಿಯಿಲ್ಲದೇ ಮಗುವನ್ನು ತ್ಯಜಿಸುತ್ತಾಳೆ.


       

ದೇವಾನುದೇವತೆಗಳಿಗೇ ಈ “ಕುತೂಹಲ” ಒಂದಲ್ಲ ಒಂದು ಹಂತದಲ್ಲಿ ಕಾಡಿರುವಾಗ, ಹುಲು ಮಾನವರು ಇದರಿಂದ ಹೇಗೆ ತಾನೇ ತಪ್ಪಿಸಿಕೊಳ್ಳಲು ಸಾಧ್ಯ? ಇದರಿಂದಾಗಿ ಕುಂತಿ ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವುದಲ್ಲದೇ ಜೀವನಪರ್ಯಂತ ಕೊರಗುವಂತಾಯ್ತು. 


ನಂತರ ಅವಳ ತಂದೆ ಅವಳ ಸ್ವಯಂವರ ಏರ್ಪಡಿಸಿದಾಗಲೂ ಕುಂತಿ ದ್ವಂದ್ವದಲ್ಲಿ ತೊಳಲುತ್ತಾಳೆ. “ಈ ವಿಷಯ ತಿಳಿಸದೇ ಯಾರನ್ನಾದರೂ ಮದುವೆಯಾಗುವುದಾದರೂ ಹೇಗೆ?” ಎಂದು ಕೊರಗುತ್ತಾಳೆ. ನಂತರ “ಈ ವಿಷಯ ತಿಳಿದರೆ ಯಾರು ತಾನೇ ತನ್ನನ್ನು ಪತ್ನಿಯಾಗಿ ಸ್ವೀಕರಿಸುತ್ತಾರೆ? ಯಾರು ತಾನೇ ನನ್ನೊಡನೆ ಸಂಸಾರ ಮಾಡುತ್ತಾರೆ?” ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬರುತ್ತಾಳೆ.

ಆ ನಿರ್ಧಾರದಂತೆ ಸ್ವಯಂವರಕ್ಕೆ ಬಂದವರಲ್ಲಿ ಒಂದು ಪ್ರಶ್ನೆ ಕೇಳುತ್ತಾಳೆ: “ಅಹಲ್ಯೆ ಮಹರ್ಷಿ ಗೌತಮರಿಗೆ ವಂಚಿಸಿ ಅವರಿಂದ ಶಾಪ ಪಡೆದಿದ್ದರೂ, ಶ್ರೀರಾಮ ಅವಳನ್ನು ಯಾಕೆ ಶಾಪಮುಕ್ತಳನ್ನಾಗಿಸಿದ?” ಎಂದು ಪ್ರಶ್ನಿಸುತ್ತಾಳೆ.

ಆಗ ಸ್ವಯಂವರಕ್ಕೆ ಬಂದಿದ್ದ ಎಲ್ಲರೂ “ರಾಮ ಏನು ಮಾಡಿದರೂ ಸರಿ, ಏಕೆಂದರೆ ರಾಮ ದೇವರು” ಅಂತೊಬ್ಬರು, “ಅಹಲ್ಯೆ ಪತಿವ್ರತಾ ಶಿರೋಮಣಿ, ಅದಕ್ಕಾಗಿ ಶಾಪದಿಂದ ಮುಕ್ತಿಗೊಳಿಸಿದ” ಎಂದು ಮತ್ತೊಬ್ಬರು ಉತ್ತರಗಳನ್ನು ಕೊಡುತ್ತಾರೆ.

ಆದರೆ ಎಲ್ಲರಂತೆ ಸ್ವಯಂವರಕ್ಕೆ ಬಂದಿದ್ದ ಪಾಂಡು ಮಾತ್ರ “ಅಹಲ್ಯೆ ಬೇಕಂತಲೇ ಗೌತಮನನ್ನು ವಂಚಿಸಲಿಲ್ಲ. ದೇವೇಂದ್ರ ಗೌತಮ ಮುನಿಗಳ ವೇಷ ಹಾಕಿ ಬಂದು ಅಹಲ್ಯೆಯನ್ನು ವಂಚಿಸಿದ. ಗೊತ್ತಿಲ್ಲದೇ ಮಾಡಿದ ತಪ್ಪಿಗೆ ಶಿಕ್ಷೆ ಕೊಡುವುದು ಸರಿಯಲ್ಲ. ಹಾಗಾಗಿ ರಾಮ ಅವಳ ಶಾಪ ವಿಮೋಚನೆ ಮಾಡಿದ” ಎಂದು ಹೇಳಿ ಕುಂತಿಯ ಮನಸ್ಸನ್ನು, ಹೃದಯವನ್ನು ಗೆಲ್ಲುತ್ತಾನೆ.

 ಇಲ್ಲಿ ಕುಂತಿಯ ಪ್ರಾಮಾಣಿಕತೆ ಮಹತ್ವ ಪಡೆಯುತ್ತದೆ.

ಆದರೂ ಯಾವುದೇ ವಿಷಯವಾಗಲೀ ಸರಿಯಾಗಿ ವಿವೇಚಿಸದೇ, ಮುಂದಾಗುವ ಪರಿಣಾಮಗಳ ಬಗ್ಗೆ ಯೋಚಿಸದೇ, ಕುತೂಹಲದಿಂದ ಪರೀಕ್ಷಿಸಲು ಹೋದರೆ ಆಗುವ ಅನಾಹುತವನ್ನು ಕುಂತಿಯ ನಿದರ್ಶನ ನಮ್ಮ ಮುಂದಿಡುತ್ತದೆ. ಅನಗತ್ಯ ಕುತೂಹಲಕ್ಕೆ ನಾವು ಕಡಿವಾಣ ಹಾಕದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ನಮಗೆ ತಿಳಿಯುತ್ತದೆ. 

*          *          *          *          *

ಕೆ.ಎ.ಸೌಮ್ಯ
ಮೈಸೂರು

(ಪ್ರೇರಣಾ ನವೆಂಬರ್ 2013 ರಲ್ಲಿ ಪ್ರಕಟವಾಗಿದೆ)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)