"ಫೋಟೋ ಪುರಾಣ" 17.10.2018


ಬೆಳಗ್ಗಿನ ಜಾವದ ಸವಿಯಾದ ನಿದ್ದೆಯಲ್ಲಿದ್ದೆ. ಅಷ್ಟರಲ್ಲಿ ಅಪ್ಪನೂ ಅಮ್ಮನೂ ಏನೋ ಮಾತನಾಡಿಕೊಳ್ಳುತ್ತಿದ್ದುದು ಅಸ್ಪಷ್ಟವಾಗಿ ಕೇಳಿಸುತ್ತಿತ್ತು. "ಫೋಟೋ.. ಫೋಟೋ.." ಅಂತಿದ್ರು ಇಬ್ಬರೂ. ಯೆಸ್‌... ನನ್ನ ನಿದ್ದೆ ಹಾರಿ ಹೋಯಿತು. ನಮ್ಮಪ್ಪ ಅಮ್ಮನ ಏಕೈಕ ಪುತ್ರಿಯಾದ ಮತ್ತು ಮದುವೆಯಾಗಲು ಸಕಲ ಅರ್ಹತೆಯುಳ್ಳ ನನ್ನ ಫೋಟೋ ಅಲ್ಲದೇ ಮತ್ಯಾರ ಬಗ್ಗೆ ಮಾತನಾಡಲು ಸಾಧ್ಯ? ಹೋದ ವಾರ ತಾನೇ ಮ್ಯಾಟ್ರಿಮೋನಿಯಲ್ಲಿನಲ್ಲಿ ನನ್ನ ಹೆಸರು ನೊಂದಾಯಿಸಿ ಬಂದಿದ್ದೆವು. ಆನ್ಲೈನ್ ಸೈಟುಗಳ ಬಗ್ಗೆ ಅಮ್ಮನಿಗೆ ಎಳ್ಳಷ್ಟೂ ನಂಬಿಕೆ ಇರಲಿಲ್ಲ. ಪ್ರೀತಿಸಿ ಮದುವೆಯಾಗುವುದರಲ್ಲಿ ಅಪ್ಪನಿಗೆ ನಂಬಿಕೆ ಇರಲಿಲ್ಲ. ಹಾಗಾಗಿ ವಿಧಿ ಇಲ್ಲದೇ ನನ್ನ ಜಾತಕವನ್ನು ಒಬ್ಬ ಅಪರಿಚಿತರ ಕೈಗೆ ಒಪ್ಪಿಸಿ ಬಂದಿದ್ದೆ. ಈಗ ಮಾತನಾಡುತ್ತಿರುವುದು ಅದರ ಬಗ್ಗೆಯೇ ಅಂತ ಗೊತ್ತಾಯ್ತು.

ಮ್ಯಾಟ್ರಿಮೋನಿಯಲ್ ನಲ್ಲಿ ಮೊದಲು ಆಕರ್ಷಣೆಗೆ ಒಳಗಾಗುವುದೇ ನಮ್ಮ ಫೋಟೋ. ಅದು ಇಷ್ಟವಾದರೆ ಉಳಿದ ವಿಷಯಗಳ ಬಗ್ಗೆ ಗಮನ ಹರಿಸಲಾಗುತ್ತದೆ. ನಾವೂ ಸಹ ಹಾಗೆಯೇ ತಾನೇ..? ಮದುವೆಯಾಗಬೇಕಾದ ಹುಡುಗನನ್ನು ಮೊದಲು ಫೋಟೋ ನೋಡಿಯೇ ತಾನೇ ಒಪ್ಪುವುದು. ಹುಡುಗರ ಫೋಟೋ ಯಾವತ್ತಿಗೂ ಒಂದೇ ಥರ. ನೋ ಚೇಂಜ್. ಆದರೆ ನಮ್ಮದು ಹಾಗಲ್ಲ. ಏಕೆಂದರೆ ಹುಡುಗಿಯರ ಫೋಟೋ ಎಂದರೆ ಕೇವಲ ಫೋಟೋ ಮಾತ್ರ ಅಲ್ಲ. ನಮ್ಮ ಫೋಟೋ ನೋಡಿಯೇ ನಮ್ಮ ಗುಣ ಸ್ವಭಾವಗಳನ್ನು ಸಹ ಅಳೆಯಲಾಗುತ್ತದೆ. ಸೀರೆ ಉಟ್ಟವರ ಫೋಟೋಗೆ ಬಹಳ ಡಿಮಾಂಡ್ ಇದ್ದರೆ ಚೂಡಿ ಹಾಕಿದವರಿಗೆ ಮಧ್ಯಮ ಮತ್ತು ಜೀನ್ಸ್ ಹಾಕಿದ್ದರೆ ಡಿಮ್ಯಾಂಡ್ ಅಧಮವಾಗಿರುತ್ತದೆ. ಅಷ್ಟೇ ಅಲ್ಲ.. ಹಣೆಗಿಟ್ಟಿದ್ದಾಳೆಯೇ? ಕೂದಲು ಬಿಟ್ಟಿದ್ದಾಳೋ ಅಥವಾ ಜಡೆ ಹಾಕಿದ್ದಾಳೋ? ಬಳೆ ತೊಟ್ಟಿದ್ದಾಳೆಯೇ? ಮೇಕಪ್ ಮಾಡಿದ್ದಾಳೆಯೇ? ಅಬ್ಬಬ್ಬ ಒಂದಾ ಎರಡಾ? ನನಗೆ ಇದಕ್ಕಿಂತ ಒಬ್ಬ ಹುಡುಗನನ್ನು ಪಟಾಯಿಸಿ ಮದುವೆಯಾಗುವುದೇ ಈಸಿ ಅಂತನ್ನಿಸುತ್ತದೆ‌.

ಇಷ್ಟರ ಮೇಲೆ ನಮಗೆ ವರನ ಕಡೆಯವರಿಗೆ ಎಂತಹ ಫೋಟೋ ಕೊಡಬೇಕು ಅಂತ ಗೊಂದಲ ಕಾಡುತ್ತದೆ. ನಾವು ಸೀರೆ ಉಟ್ಟಿರುವ ಫೋಟೋ ಅತ್ತೆಯಾಗುವವರಿಗೆ ಇಷ್ಟವಾಗಬಹುದು. ಆದರೆ ಮದುವೆಯಾಗುವ ಹುಡುಗ ನನ್ನನ್ನು ಹಳೆಯ ಕಾಲದವಳು ಅಂತ ತಿಳ್ಕೊಂಡ್ರೆ? ಇವಳಿಗೆ ಚೂರೂ ಆಧುನಿಕತೆ ಇಲ್ಲ ಅಂತ ನಿರ್ಧರಿಸಿದ್ರೆ? ಹಣೆಗಿಟ್ಟ ಕುಂಕುಮ, ಬಳೆ, ಜಡೆ ಇವುಗಳಿಂದ ನನ್ನ ಹಳ್ಳಿಯವಳು ಅಂತ ತಿಳ್ಕೊಂಡು ರಿಜೆಕ್ಟ್ ಮಾಡಿದ್ರೆ? ಅಂತ ಏನೇನೋ ಯೋಚನೆಗಳು ಶುರುವಾಗುತ್ತವೆ. ಸ್ಟುಡಿಯೋಗಳಲ್ಲಿ ಪಾಸ್ಪೋರ್ಟ್ ಫೋಟೋಗೂ ಮದುವೆಯಾಗಲಿರುವ ಹುಡುಗಿಯ ಫೋಟೋಗೂ ವ್ಯತ್ಯಾಸವೇ ಗೊತ್ತಿಲ್ಲದ ಹಾಗೆ ತೆಗೆಯಲಾಗುತ್ತದೆ. ಡ್ರಿಲ್ಲಿಗೆ ನಿಂತ ಹಾಗೆ ನಿಟಾರನೆ ನಿಲ್ಲಿಸಿ ಕ್ಲಿಕ್ ಅಂತಾರೆ. ಹೆಡ್ ಮೇಡಂ ಕೆಲಸಕ್ಕಾಗಿ ಆರಾಮಾಗಿ ಅರ್ಜಿ ಸಲ್ಲಿಸಬಹುದು. ಹಾಗಿರುತ್ತದೆ.

ನನ್ನ ಮೊಬೈಲಿನಲ್ಲಿ ನಾನೇ ತೆಗೆದುಕೊಂಡಿರುವ ನನ್ನದೇ ಸಾವಿರಾರು ಸೆಲ್ಫಿಗಳಿವೆ, ಅದನ್ನೇ ಪ್ರಿಂಟ್ ಹಾಕಿಸೋಣ ಅಂದ್ರೆ ಅಮ್ಮ ಒಪ್ಪುವುದಿಲ್ಲ. ಅದರಲ್ಲಿ ಶಿಸ್ತಿಲ್ಲ‌, ಕಣ್ಣು-ಮೂಗು ವಕ್ರವಾಗಿರುತ್ತದೆ, ಅಲ್ಲದೇ ಹಿನ್ನೆಲೆಯಲ್ಲಿ ನಿನ್ನ ರೂಮಿನ ರಂಪವೆಲ್ಲಾ ಕಾಣುತ್ತದೆ ಹಾಗಾಗಿ ಬೇಡ ಅಂತ ಅವಳ ವಾದ. ಕೊನೆಗೆ ಅವಳಿಚ್ಚೆಯಂತೆಯೇ ಮಿಲಿಟರಿಯ ಅಧಿಕಾರಿಯಂತೆ ಶಿಸ್ತಾಗಿ ಅಲಂಕಾರ ಮಾಡಿಕೊಂಡು ಫೋಟೋ ತೆಗೆಸಿಕೊಂಡು ಮ್ಯಾಟ್ರಿಮೋನಿಯಲ್ಲಿಗೆ ಕೊಟ್ಟು ಬಂದಿದ್ದೆ. ಇಂದ್ಯಾರೋ ಫೋಟೋ ನೋಡಿ ನಮ್ಮನ್ನು ಕಾಂಟಾಕ್ಟ್ ಮಾಡಿರಬೇಕು ಅಂತ ಊಹಿಸಿದೆ.

ನನ್ನ ಹೆಡ್ಮೇಡಂ ಫೋಟೋ ನೋಡಿಯೂ ಮೆಚ್ಚಿರುವ ಭೂಪ ಯಾರಪ್ಪಾ ಅಂತ ಆಶ್ಚರ್ಯವಾಯ್ತು. ಬಹುಶಃ ಅವನ ಮನೆಯವರು ನನ್ನನ್ನು ಮೆಚ್ಚಿರುತ್ತಾರೆ. ಈಗ ಹುಡುಗನನ್ನ ನೋಡಲೂ ಇದೇ ಅವತಾರದಲ್ಲಿಯೇ ಹೋಗಬೇಕು. ಅವನು ಬ್ರಾಡ್ ಮೈಂಡೆಡ್ ಆದರೆ ಪರವಾಗಿಲ್ಲ. ಆದರೆ ಅವನು ನನ್ನನ್ನು ನಿಜಕ್ಕೂ ಸಂಪ್ರದಾಯಸ್ಥೆ ಅಂತ ತಪ್ಪು ತಿಳಿದರೆ ಗತಿಯೇನು ಅಂತ ಭಯವಾಯ್ತು. ಇವಳು ತುಂಬಾ ಸಂಪ್ರದಾಯಸ್ಥೆ ಅಂದುಕೊಂಡು ಮದುವೆಯಾಗಿ ನಂತರ ನನ್ನ ಬೇರೆ ವೇಷ ನೋಡಿ ತಲೆ ತಿರುಗಿದರೆ? ವಿಷಯ ಮೊದಲೇ ಹೇಳಬೇಕಿತ್ತು ಅಂತ ದೂರಿದರೆ? ಏಕೆಂದರೆ ಇಂದಿಗೂ ಜೀನ್ಸ್ ಹಾಕುವ ಹುಡುಗಿಯರನ್ನು ಗಂಡುಬೀರಿಗಳು ಎಂಬಂತೆ ನೋಡಲಾಗುತ್ತದೆ. ಅವನ ಫೋನ್ ನಂಬರ್ ಕೊಟ್ಟರೆ ನಾನೇ ಅವನಿಗೆ ನಾನು ಹೀಗ್ ಹೀಗೆ, ನನ್ನ ಆಸಕ್ತಿಗಳು ಇಂಥವು ಅಂತ ವಿಷಯ ತಿಳಿಸುತ್ತೇನೆ. ಆದರೆ ನಮ್ಮ ಭೇಟಿ ಮಾಡಿಸಲಿರುವ ಮ್ಯಾಟ್ರಿಮೋನಿಯಲ್ ನವರು ನಂಬರ್ ಕೊಡುವುದಿಲ್ಲ. ಹೀಗಾಗಿ ನಾನು ವಿಷಯ ಅವನಿಗೆ ಮೊದಲೇ ಹೇಳಲಾಗೋಲ್ಲ. ಅವನು ನನ್ನನ್ನು ಸಂಪ್ರದಾಯಸ್ಥೆ ಅಂದ್ಕೊಳ್ಳುವುದೂ ನನಗಿಷ್ಟ ಇರಲಿಲ್ಲ, ಬಜಾರಿ ಅಂದ್ಕೊಳ್ಳೋದೂ ಇಷ್ಟ ಇರಲಿಲ್ಲ‌.

ಹೀಗೆ ತುಂಬಾ ಯೋಚಿಸಿ ತಲೆ ಕೆಡಿಸಿಕೊಂಡೆ. ಒಂದು ಮದುವೆಯಾಗುವುದು ಎಂದರೆ ಇಷ್ಟು ಕಷ್ಟವಾ? ದೇವರೇ ನಿನ್ನಾಣೆಗೂ ಇನ್ನೊಂದು ಮದುವೆ ಆಗುವುದಿಲ್ಲ ಅಂತ ಶಪಥ ಮಾಡಿದೆ. ಗಂಡಿನ ಕಡೆಯವರು ಬಂದಾಗ ನಾನು ಯಾವ ಸೀರೆಯುಟ್ಟು, ಯಾವ ಒಡವೆ ಹಾಕಿಕೊಳ್ಳಬೇಕು ಅಂತ ಅಮ್ಮ ನಿರ್ಧಾರ ಮಾಡುತ್ತಿದ್ದರು. ನಾನು ಹುಡುಗ ನನ್ನನ್ನು ಸೀರೆಯಲ್ಲಿ ನೋಡಿ ಒಪ್ಪಿದ ಮೇಲೆ ಮೊದಲ ಬಾರಿ ಔಟಿಂಗ್ ಹೋಗುವಾಗ ಯಾವ ಮಾಡರ್ನ್ ಡ್ರೆಸ್ ಹಾಕಿ ಬೆಚ್ಚಿ ಬೀಳಿಸುವುದು ಅಂತ ಯೋಚಿಸಲು ಶುರು ಮಾಡಿದೆ.

Published in Vishwavani on 17.10.2018
*********************************************

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)