Met Gala published in Manasa (July 2019)




ನಾವು ನಮ್ಮದೇ ಪ್ರಪಂಚ ಎಂದುಕೊಂಡಿರುತ್ತೇವೆ. ಆದರೆ ನಮಗೆ ಗೊತ್ತಿಲ್ಲದ ಎಷ್ಟೋ ಸಂಗತಿಗಳು ಭೂಮಿಯ ಮೇಲೆ ನಡೆಯುತ್ತಲೇ ಇರುತ್ತವೆ. ಇವುಗಳಲ್ಲಿ ಎಷ್ಟೋ ವಿಷಯಗಳು ನಮ್ಮನ್ನು ತಲುಪದೇ ಹೋಗುತ್ತವೆ. ಕೆಲವು ವಿಷಯಗಳು ತಡವಾಗಿ ತಲುಪುತ್ತವೆ. ಆಗ ಇಷ್ಟು ದಿನ ಇದು ಗೊತ್ತೇ ಇರಲಿಲ್ವಲ್ಲ ಅಂತ ಕಣ್ಣು ಕಣ್ಣು ಬಿಡುವಂತಾಗುತ್ತದೆ. ಈ ಗೊತ್ತಿಲ್ಲದ ಸಂಗತಿಗೆ ಹೊಸ ಸೇರ್ಪಡೆ ಎಂದರೆ ಕಳೆದ ಮೇ ತಿಂಗಳಿನಲ್ಲಿ ಅಮೆರಿಕಾದಲ್ಲಿ ನಡೆದ "ಮೆಟ್ಗಾಲ" ಎಂಬ ಫ್ಯಾಷನ್ ಕಾರ್ಯಕ್ರಮ. ಪ್ರತೀ ವರ್ಷ ಮೇ ತಿಂಗಳ ಮೊದಲ ಸೋಮವಾರದಂದು ನಡೆಯುವ ಈ ಕಾರ್ಯಕ್ರಮಕ್ಕೆ ವಿಶ್ವಾದ್ಯಂತ ಫ್ಯಾಷನ್ ಪ್ರಿಯರು ಆಗಮಿಸುತ್ತಾರೆ. ಫ್ಯಾಷನ್ ಕಾರ್ಯಕ್ರಮ ಎಂದ ಮೇಲೆ ಎಲ್ಲರೂ ಸುಂದರವಾಗಿ ಡ್ರೆಸ್ ಮಾಡಿಕೊಂಡು ಬಂದು ಮಿಂಚುತ್ತಾರೆ, ಕಣ್ತುಂಬ ನೋಡಿ ಸಂತೋಷಿಸಬಹುದು ಎಂದುಕೊಂಡರೆ ಅದು ಕೇವಲ ಭ್ರಮೆಯಷ್ಟೇ. ಏಕೆಂದರೆ ಇಲ್ಲಿಗೆ ಬರುವವರ ವೇಷಭೂಷಣ ಬಹಳ ವಿಚಿತ್ರವಾಗಿರುತ್ತದೆ.

ಈ ಬಾರಿಯ ಮೆಟ್ಗಾಲದಲ್ಲಿನ ಪ್ರಿಯಾಂಕಾ ಛೋಪ್ರಾಳ ಒಂದು ಫೋಟೋ ಭಾರಿ ಸದ್ದು ಮಾಡಿತು. ವಿಚಿತ್ರ ಕೇಶ ವಿನ್ಯಾಸ ಮತ್ತು ಉಡುಪಿನಿಂದ ಅವಳ್ಯಾರು ಎಂದೇ ಅರ್ಥವಾಗದೇ ಪರದಾಡುವಂತಾಯ್ತು. ಈ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಸಹ ಹಾಜರಿದ್ದರೂ ಅವಳ ಉಡುಪು ಸರ್ವೇ ಸಾಧಾರಣದಂತೆ ಸಾಮಾನ್ಯವಾಗಿದ್ದರಿಂದ ಅವಳು ಭಾಗವಹಿಸಿದ್ದೇ ಯಾರಿಗೂ ಗೊತ್ತಾಗಲಿಲ್ಲ. ಎಲ್ಲಿ ನೋಡಿದರೂ ಬರೀ ಪ್ರಿಯಾಂಕಾಳದ್ದೇ ಸದ್ದು-ಸುದ್ದಿ. ಪ್ರಿಯಾಂಕಾಳಷ್ಟೇ ಅಲ್ಲ... ಅಲ್ಲಿ ಭಾಗವಹಿಸಿದ ಎಲ್ಲರೂ ಹೀಗೆಯೇ ವಿಚಿತ್ರ ವೇಷದಲ್ಲಿ ಬಂದಿದ್ದರು. ಕೊನೆಗೆ ಕಾರ್ಯಕ್ರಮ ನಿರೂಪಕರೂ ಸಹ ಇದೇ ವೇಷ ಹಾಕಿದ್ದರು. ಆದರೆ ಯಾರಿಗೂ ತಾವು ಎಂತಹಾ ಬಟ್ಟೆ ಹಾಕಿದ್ದೇವೆ ಎಂಬ ಅರಿವೂ ಇದ್ದ ಹಾಗೆ ಕಾಣಲಿಲ್ಲ. ತಾವು ಈ ಪ್ರಪಂಚಕ್ಕೆ ಸೇರಿದವರಲ್ಲ ಅನ್ನುವ ಹಾಗೆ ತಮ್ಮ ಪಾಡಿಗೆ ತಾವಿರುವುದು ಕಂಡು ನಮಗುಂಟಾದ ಕುತೂಹಲ‌ ಅಷ್ಟಿಷ್ಟಲ್ಲ. ಕೊನೆಗೆ ಕುತೂಹಲ ತಾಳಲಾರದೇ ಈ ಬಗ್ಗೆ ಕೆದಕಿದಾಗ ದೊಡ್ಡದೊಂದು ಇತಿಹಾಸವೇ ತೆರೆದುಕೊಂಡಿತು.

ನ್ಯೂಯಾರ್ಕಿನಲ್ಲಿ ಪ್ರತೀವರ್ಷ ನಡೆಯುವ ಈ ಫ್ಯಾಷನ್ ಕಾರ್ಯಕ್ರಮಕ್ಕೆ ಜಗತ್ತಿನ ಮೂಲೆಮೂಲೆಗಳಿಂದ ಜನ ಆಗಮಿಸುತ್ತಾರೆ‌. ಪ್ರತೀವರ್ಷವೂ ಒಂದು ಥೀಮ್ ಅನ್ನು ನೀಡಲಾಗುತ್ತದೆ. ಅದರ ಪ್ರಕಾರವೇ ಇದರಲ್ಲಿ ಭಾಗವಹಿಸುವವರು ಡ್ರೆಸ್ ಮಾಡಿಕೊಳ್ಳಬೇಕಾಗುತ್ತದೆ. ಥೀಮ್ ಎಂದರೆ ಯಾವುದೋ ಸುಪ್ರಸಿದ್ಧ ಕಾದಂಬರಿಯ ಒಂದು ದೃಶ್ಯವನ್ನು ಅವರು ಸಜೆಸ್ಟ್ ಮಾಡಬಹುದು. ಆಗ ಅದರಲ್ಲಿ ಭಾಗವಹಿಸುವವರು ಅದಕ್ಕೆ ಸಂಬಂಧಿಸಿದ ಪಾತ್ರಗಳ ರೀತಿ ವೇಷ ಮಾಡಿಕೊಂಡು ಬರಬೇಕಾಗುತ್ತದೆ. ಎಲ್ಲರೂ ಅದೇ ವೇಷದಲ್ಲಿ ಇರುವುದರಿಂದ ಯಾರಿಗೂ ಮುಜುಗರ ಎನಿಸದೇ ಇರುವುದು ಇಲ್ಲಿನ ವಿಶೇಷ.

ಮತ್ತೆ ಪ್ರಿಯಾಂಕಾ ವಿಷಯಕ್ಕೆ ಬರುವುದಾದರೆ ಅವಳ ವೇಷ ನೋಡಿ ಎಲ್ಲರೂ ಮನಸೋ ಇಚ್ಛೆ ಮಾತನಾಡಿದರು. ಯಾವುದ್ಯಾವುದಕ್ಕೋ ಹೋಲಿಸಿ ಕಾಲೆಳೆದರು. ವಸ್ತ್ರವೇ ಹೊಂದಿಲ್ಲದ ಆ ಉಡುಗೆಗೆ ನಲವತ್ತು ಲಕ್ಷ ಕೊಟ್ಟಳೆಂದು ತಿಳಿದು ಆಶ್ಚರ್ಯ ಪಟ್ಟರು ನಮ್ಮ ಜನ. ಆದರೆ ಮಾರನೇ ದಿನ ನಡೆದದ್ದೇ ಬೇರೆ. 2019 ರ ಮೆಟ್ ಗಾಲಾ ಫ್ಯಾಷನ್ ಇವೆಂಟಿನಲ್ಲಿ ಅತೀ ಹೆಚ್ಚು ಸೂಟ್ ಆಗುವ ಹಾಗೆ ಅಥವಾ ಅವರು ಕೊಟ್ಟ ಥೀಮಿಗೆ ತಕ್ಕಂತೆ ಹೊಂದಿಕೆಯಾಗುವ ಹಾಗೆ ಡ್ರೆಸ್ ಮಾಡಿದ್ದು ಪ್ರಿಯಾಂಕಾ ಎಂದು ಸುದ್ದಿಯಾಯಿತು. ಆಗವಳ ಕಾಲೆಳೆದಿದ್ದವರು ಕಣ್ಣು ಕಣ್ಣು ಬಿಟ್ಟರು. ನಾರ್ಮಲ್ ಆಗಿ ಅಥವಾ ಸುಂದರವಾಗಿ ಕಾಣುವಂತೆ ಬಂದಿದ್ದ ದೀಪಿಕಾ ಎಲ್ಲರ ಗಮನ ಸೆಳೆಯದೇ ಹೋದರು. ಇದರರ್ಥ ಏನು? ಬಹುಶಃ ಚಂದವಾಗಿ ಡ್ರೆಸ್ ಮಾಡಿಕೊಂಡು ಬಂದರೆ ಎಲ್ಲದರ ಜೊತೆ ಈ ಇವೆಂಟ್ ಸಹ ಹತ್ತರಲ್ಲಿ ಒಂದಾಗುತ್ತದೆ. ಅದರ ಬದಲು ಕಣ್ಣಿನಲ್ಲಿ ನೋಡಲು ಸಾಧ್ಯವಿಲ್ಲದ ಹಾಗೆ ವೇಷ ಮಾಡಿಕೊಂಡ ಬಂದರೆ ಜಗತ್ತಿನ ಗಮನ ಸೆಳೆಯಬಹುದು. ಸುಂದರವೋ ಅಥವಾ ಕುರೂಪವೋ... ಸುದ್ದಿ ಎಂದಿದ್ದರೂ ಸುದ್ದಿಯೇ. ಈ ವೇಷ ನೋಡಿದ ಜನರು ತಾವು ಮಾತ್ರ ನೋಡಿ ಸುಮ್ಮನಾಗಲಾರರು. ಅದನ್ನು ಇನ್ನೊಬ್ಬರಿಗೆ, ಮತ್ತೊಬ್ಬರಿಗೆ ತೋರಿಸುತ್ತಾರೆ. ಹೀಗೆ ಜನಪ್ರಿಯತೆ ಬೆಳೆಯುತ್ತ ಹೋಗುತ್ತದೆ. ಅವರಿಗೆ ಬೇಕಾಗಿರುವುದೂ ಅದೇ ತಾನೇ? ಜನಪ್ರಿಯತೆ ಮತ್ತು ದುಡ್ಡು. 1948 ರಲ್ಲಿ ನ್ಯೂಯಾರ್ಕಿನ ಕಾಸ್ಟ್ಯೂಮ್ ಇನ್ಸ್ಟಿಟ್ಯೂಟ್ ನಲ್ಲಿ ಮೆಟ್ ಗಾಲಾದ ಮೊದಲ ಕಾರ್ಯಕ್ರಮ ನಡೆದಿತ್ತು. ಅಂದಿನ ಪ್ರವೇಶ ಶುಲ್ಕ ಇದ್ದದ್ದು ಕೇವಲ ಐವತ್ತು ಡಾಲರ್. ಇಂದು ಅದೇ ಮೆಟ್ ಗಾಲ ಕಾರ್ಯಕ್ರಮವು ನ್ಯೂಯಾರ್ಕಿನ ಅತ್ಯಂತ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅತ್ಯಂತ ದುಬಾರಿ ಶುಲ್ಕವಿದ್ದು, ಕಾರ್ಯಕ್ರಮದ ಆಯೋಜಕರಿಗೆ ಬಹು ದೊಡ್ಡ ಆದಾಯ ಕೂಡ ಸಿಗುತ್ತದೆ. ಇಲ್ಲಿ ನಡೆಯುವ ಕಾರ್ಯಕ್ರಮಗಳು ತಿಂಗಳಾನುಗಟ್ಟಲೆ ಪ್ರಪಂಚದೆಲ್ಲೆಡೆ ಚರ್ಚೆಯಾಗುತ್ತವೆ. ಈ ಕಾರ್ಯಕ್ರಮದಿಂದ ಆಯೋಜಕರಿಗೆ ದುಡ್ಡು ಮತ್ತು ಪ್ರಸಿದ್ಧಿ ಏಕಕಾಲಕ್ಕೆ ಸಿಗುತ್ತದೆ. ಬಹುಶಃ ಸಭ್ಯತೆಯಿಂದ ಕೂಡಿದ ಕಾರ್ಯಕ್ರಮವಾಗಿದ್ದರೆ ಇಷ್ಟು ಸುದ್ದಿ ಆಗುತ್ತಿತ್ತೋ ಇಲ್ಲವೋ? ಈಗಂತೂ ತನ್ನ ಚಿತ್ರ ವಿಚಿತ್ರ ವೇಷಭೂಷಣಗಳಿಂದಲೇ ಜಗತ್ತಿನ ಗಮನ ಸೆಳೆದಿದೆ.
**************
 ಕೆ.ಎ.ಸೌಮ್ಯ
 Mysore

(Published in Manasa : July 2019)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)