ಭೂಮಿಯಂತಹಾ ಮತ್ತೊಂದು ಗ್ರಹ (ಮಾನಸಾ) ಆಗಸ್ಟ್ 2019



ಭೂಮಿ ನಮ್ಮ ಗ್ರಹ. ತಿಳಿದೋ ತಿಳಿಯದೆಯೋ ನಾವಿಲ್ಲಿ ಹುಟ್ಟಿಬಿಟ್ಟಿದ್ದೇವೆ. ಅನಂತ ಆಕಾಶದಲ್ಲಿ ದೂರದೂರದವರೆಗೂ ನಾವು ದೃಷ್ಟಿ ಹಾಯಿಸಿದರೂ ನಮ್ಮ ಕಣ್ಣಿಗೆ ಕಾಣಸಿಗುವುದು ನಕ್ಷತ್ರಗಳು ಮಾತ್ರ. ನಮ್ಮ ಸೌರವ್ಯೂಹದ ಇತರೆ ಗ್ರಹಗಳಲ್ಲಿ ಮನುಷ್ಯ ಬದುಕುವಂತಹ ವಾತಾವರಣ ಇಲ್ಲ ಅಂತ ನಮಗೆ ಈಗಾಗಲೇ ಗೊತ್ತಾಗಿದೆ. ಹಾಗಾಗಿ ಭೂಮಿ ಒಂದರಲ್ಲಿಯೇ ಜೀವಿಗಳು ಇರುವುದು, ಜೀವ ಇರುವುದು ಅಂತ ನಮ್ಮ ನಂಬಿಕೆ. ಭೂಮಿಯಂತಹ ಗ್ರಹ ಮತ್ತೊಂದಿಲ್ಲ ಅಂತ ಗಾಢವಾಗಿ ನಂಬಿದ್ದೇವೆ ನಾವುಗಳು. ಆದರೆ ನಮ್ಮ ಈ ನಂಬಿಕೆಯನ್ನು ಸುಳ್ಳು ಮಾಡುವಂತಹ ಸುದ್ದಿಯೊಂದು ಇದೀಗ ಬಂದಿದೆ.

ಭೂಮಿಯಂತಹ ಮತ್ತೆರೆಡು ಗ್ರಹ:

ನಮ್ಮ ಸೌರವ್ಯೂಹದಿಂದ ಕೆಲವೇ ಜ್ಯೋತಿ ವರ್ಷಗಳಷ್ಟು ದೂರದಲ್ಲಿರುವ ಒಂದು ನಕ್ಷತ್ರವನ್ನು ಸುತ್ತು ಹಾಕುತ್ತಿರುವ ಎರಡು ಗ್ರಹಗಳು ಥೇಟ್ ಭೂಮಿಯಂತೆಯೇ ಇವೆಯಂತೆ. ಅದೂ ಸಹ ನಮ್ಮ ಗೆಲಾಕ್ಸಿಯ ಪರಿಮಿತಿಯಲ್ಲಿಯೇ... ಆಶ್ಚರ್ಯ ಆಯ್ತಲ್ವಾ? ಆದರೆ ಈ ಗ್ರಹಗಳು ಭೂಮಿಗಿಂತಲೂ ದೊಡ್ಡದಾಗಿವೆಯಂತೆ. ಅಷ್ಟೇ ಅಲ್ಲ... ಈ ಗ್ರಹಗಳಲ್ಲಿಯೂ ಮನುಷ್ಯ ಬದುಕುವ ವಾತಾವರಣ ಇದೆಯಂತೆ. ಅಲ್ಲಿ ನೀರಿರುವ ಸುಳಿವು ಮತ್ತು ಆ ನೀರು ದ್ರವರೂಪದಲ್ಲಿಯೇ ಇರುವ ಕುರುಹು ಸಿಕ್ಕಿದೆಯಂತೆ. ಅವುಗಳೂ ಸಹ ತನ್ನ ಸೂರ್ಯನನ್ನು ನಿಗದಿತ ಅವಧಿಯಲ್ಲಿ ಸುತ್ತು ಹಾಕುತ್ತಿದೆಯಂತೆ. ಹಾಗಾಗಿ ಋತುಗಳೂ ಸಹ ಇರಬಹುದು. ಮನುಷ್ಯನಿಗೆ ಬೇಕಾದ ಎಲ್ಲವೂ ಅಲ್ಲಿದೆ. ಅಕಸ್ಮಾತ್ ನಮ್ಮ ಭೂಮಿಗೆ ಏನಾದರೂ ಗಂಡಾಂತರ ಒದಗಿದರೆ ನಾವು ಆ ಗ್ರಹಕ್ಕೆ ಶಿಫ್ಟ್ ಆಗಬಹುದು. ಆದರೆ ಆ ಗ್ರಹಗಳು ನಮ್ಮಿಂದ ಕೇವಲ ಹನ್ನೆರೆಡು ಜ್ಯೋತಿರ್ವರ್ಷಗಳಷ್ಟು ದೂರವಿದೆ. ಅಲ್ಲಿಗೆ ತಲುಪಲು ನಾವು ರಾಕೆಟ್ಟಿನಲ್ಲಿಯೇ ನಮ್ಮ ವಂಶವನ್ನು ಬೆಳೆಸಬೇಕಾಗುತ್ತದೆ. ಯಾರಿಗೆ ಗೊತ್ತು? ನಮ್ಮ ಕೊನೆಯ ಪೀಳಿಗೆ ಅಲ್ಲಿಗೆ ತಲುಪಿದರೂ ತಲುಪಬಹುದು.

ಈ ರೀತಿಯ ಸಂಶೋಧನೆ ಇದೇ ಮೊದಲಲ್ಲ:
ಈ ಹಿಂದೆಯೂ ಬಹಳಷ್ಟು ವಿಜ್ಞಾನಿಗಳು ಭೂಮಿಯಂತಹ ಅನ್ಯಗ್ರಹಗಳ ಇರುವಿಕೆಯನ್ನು ಶೋಧ ಮಾಡುತ್ತಲೇ ಇದ್ದಾರೆ. ಒಂದು ವರ್ಗದ ಜನರು ಭೂಮಿಯಲ್ಲಿ ಮಾತ್ರವೇ ಜೀವ ಇರುವುದು ಅಂತ ನಿರಾಳವಾಗಿದ್ದರೆ, ಇನ್ನೊಂದು ವರ್ಗದ ಜನರು ಭೂಮಿಯಂತಹ ಮತ್ತೊಂದು ಗ್ರಹವನ್ನು ಕಂಡು ಹಿಡಿಯಲು ತಮ್ಮ ಜೀವನವನ್ನೇ ಅದಕ್ಕಾಗಿ ಮುಡುಪಿಟ್ಟಿದ್ದಾರೆ. ನಾವೂ ಸಹ ಭೂಮಿಯ ಮೇಲೆ ಅಚಾನಕ್ ಆಗಿ ಹುಟ್ಟಿದ್ದಲ್ಲ, ಅದಕ್ಕೂ ಒಂದು ಕಾರಣ ಇರಬೇಕು, ಭೂಮಿಯಲ್ಲಿ ಹುಟ್ಟುವ ಮೊದಲು ನಾವು ಮತ್ತೆಲ್ಲೋ ಇದ್ದಿರಬೇಕು ಎನ್ನುವುದು ಅವರ ಸಂಶೋಧನೆಯ ತಳಹದಿ ಆಗಿದೆ. ಆದರೆ ನಾವು ದಿಗಂತದಿಂದಾಚೆ ಕಣ್ಣು ಹಾಯಿಸಿ ಇಂತಹಾ ಲಕ್ಷಣ ಇರುವ ಗ್ರಹಗಳನ್ನು ಕಂಡು ಹಿಡಿಯುವುದು ಎಂದರೆ ಕಂಪ್ಯೂಟರಿನಲ್ಲಿ ಪ್ರೋಗ್ರಾಂ ಮಾಡಿದಷ್ಟು ಸುಲಭವಲ್ಲ. ಮುಖ್ಯವಾಗಿ ಅದಕ್ಕೆ ಬೇಕಾದ ಪರಿಕರಗಳು, ಬೆಳಕಿನ ವೇಗದಲ್ಲಿ ಸಂಚರಿಸುವ ರಾಕೆಟ್ ಆಗಲೀ ನಮ್ಮಲ್ಲಿಲ್ಲ. ಕೆಲವೊಮ್ಮೆ ಕೇವಲ ಒಂದು ನಕ್ಷತ್ರ ಅಥವಾ ಗ್ರಹದ ಇರುವಿಕೆ ಕಂಡು ಹಿಡಿಯಲು ನಮ್ಮ ಜೀವಮಾನವೇ ಸಾಲದಿರಬಹುದು. ನಾವು ನಡೆಸುವ ಸಂಶೋಧನೆಯ ಫಲಿತಾಂಶದ ಬಗ್ಗೆಯೂ ಖಚಿತತೆ ಇರುವುದಿಲ್ಲ. ನಾವು ನಡೆಸಿದ ಸಂಶೋಧನೆಯನ್ನು ನಮ್ಮ ನಂತರ ಮತ್ಯಾರೋ ಪೂರ್ಣಗೊಳಿಸಬಹುದು. ಹೀಗಿರುವಾಗ ದಿಕ್ಕುದೆಸೆ ಏನೂ ಇರದ ಇಂತಹ ಸಂಶೋಧನೆ ನಡೆಸಲು ಮಹಾನ್ ತಾಳ್ಮೆಯ ಅಗತ್ಯ ಇರುತ್ತದೆ. ಹಾಗಾಗಿ ಇಂತಹ ಸಂಶೋಧನೆ ಬಹಳ ಕಷ್ಟಕರ. ಆದರೂ ಭೂಮಿಯಂತಹ ಮತ್ತೆರೆಡು ಗ್ರಹ ಇರುವ ಸುಳಿವು ಇದೀಗ ಸಿಕ್ಕಿದೆ.

ಈಗ ಹುಟ್ಟುವ ಪ್ರಶ್ನೆ... ಅಲ್ಲಿಯೂ ಮನುಷ್ಯರಿದ್ದಾರೆಯೇ?

ಬೇರೆ ಗ್ರಹದಲ್ಲಿಯೂ ಜೀವಿಗಳಿದ್ದಾರೆ ಎಂದ ತಕ್ಷಣ ಜನಸಾಮಾನ್ಯರಿಗೆ ಬರುವ ಮೊದಲ ಕುತೂಹಲವೆಂದರೆ ಅವರು ಹೇಗಿರಬಹುದು ಎಂಬುದು. ನೋಡಲು ನಮ್ಮಂತೆಯೇ ಇದ್ದಾರೆಯೋ ಅಥವಾ ಬೇರೆ ರೂಪದಲ್ಲಿ ಇದ್ದಾರೆಯೋ? ಜೀವಿ ಇದೆಯೋ ಇಲ್ಲವೋ ಎಂದು ತಿಳಿಯುವ ಮೊದಲು ಆ ಗ್ರಹದಲ್ಲಿ ಜೀವಿಗಳು ಇರಬಹುದಾದಂತಹ ವಾತಾವರಣ ಇದೆಯೇ ಎಂದು ಗಮನಿಸಬೇಕಾಗುತ್ತದೆ. ಏಕೆಂದರೆ ನಮ್ಮ ಭೂಮಿ ತನ್ನ ಸೂರ್ಯನಿಂದ ಸರಿಯಾದ ಪ್ರಮಾಣದ ದೂರದಲ್ಲಿದೆ. ಸೂರ್ಯನಿಗೆ ತೀರಾ ಹತ್ತಿರದಲ್ಲಿದ್ದರೆ ಅತಿಯಾದ ಶಾಖದಿಂದ ಜೀವಿಯ ಹುಟ್ಟು ಸಾಧ್ಯವಿರಲಿಲ್ಲ ಮತ್ತು ತೀರಾ ದೂರವಿದ್ದರೆ ಶಾಖದ ಕೊರತೆಯಿಂದ ಶೀತಲತೆ ಹೆಚ್ಚಿ ಆಗಲೂ ಸಹ ಜೀವಿಯ ಉಗಮ ಸಾಧ್ಯವಾಗುತ್ತಿರಲಿಲ್ಲ. ಸೂರ್ಯನಿಂದ ದೂರವಿರುವ ಗ್ರಹಗಳಲ್ಲಿ ನೀರು ಇದ್ದರೂ ದ್ರವರೂಪದಲ್ಲಿರದೇ ಮಂಜುಗೆಡ್ಡೆಯ ರೂಪದಲ್ಲಿರುತ್ತದೆ. ನೀರು ಮನುಷ್ಯನ ಮೂಲಭೂತ ಅವಶ್ಯಕತೆ. ಆದ್ದರಿಂದ ದ್ರವರೂಪದ ನೀರಿಲ್ಲದೇ ಅಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ. ಭೂಮಿಯಲ್ಲಿ ನೀರು, ವಾತಾವರಣ, ಸರಿಯಾದ ಪ್ರಮಾಣದ ಶಾಖ ಎಲ್ಲವೂ ಇರುವುದರಿಂದಲೇ ನಾವು ನೆಮ್ಮದಿಯಾಗಿರುವುದು.

ಈಗ ಸಿಕ್ಕಿರುವ ಹೊಸ ಭೂಮಿಯಲ್ಲಿ ನೀರು ದ್ರವರೂಪದಲ್ಲಿಯೇ ಇದೆಯಂತೆ. ನಾವಿರುವ ಭೂಮಿಯ ಮೇಲೆ ಜೀವಿಗಳ ಉಗಮವೂ ಮೊತ್ತ ಮೊದಲು ನೀರಿನಲ್ಲಿಯೇ ಆಗಿದ್ದು. ನಂತರವೇ ವಿಕಾಸವಾಗಿ ಮಾನವನಾಗಿ ಬದಲಾಗಿದ್ದು. ಹಾಗಾಗಿ ಈ ಹೊಸ ಗ್ರಹದಲ್ಲಿಯೂ ಸಹ ನೀರು ಇರುವುದರಿಂದ ಜೀವಿಗಳ ಉಗಮ ಆಗಿರಬಹುದು ಎಂದು ನಂಬಬಹುದು. ಉಗಮವಾದ ಜೀವಿಗಳು ಕಾಲಕ್ರಮೇಣ ವಿಕಾಸ ಹೊಂದಿ ಮಾನವನಾಗಿ ಬದಲಾಗಿರಬಹುದು. ಆದರೆ ಹಾಗೆ ಉಗಮವಾಗಿರುವ ಜೀವಿಗಳು ಎಷ್ಟರಮಟ್ಟಿಗೆ ಮುಂದುವರೆದಿರಬಹುದು ಎಂಬುದು ಸಧ್ಯದ ನಮ್ಮ ಹೊಸ ಕುತೂಹಲ. ಯಾಕೆಂದರೆ ನಮಗೆ ನಾವೇ ಶ್ರೇಷ್ಠರು ಅನ್ನುವ ಮೂಢನಂಬಿಕೆ. ಇಡೀ ಸೌರವ್ಯೂಹದಲ್ಲಿ ನಾವೇ ಬುದ್ಧಿವಂತರು ಎಂಬ ಅಹಂಕಾರ ನಮಗಿದೆ.

ಆದರೆ ಅವರ ಬುದ್ಧಿವಂತಿಕೆ ಅಳೆಯಬಹುದಾದ ಯಾವ ಸಾಧನಗಳು ಸಧ್ಯಕ್ಕೆ ನಮ್ಮಲ್ಲಿ ಲಭ್ಯವಿಲ್ಲ. ಒಂದೊಮ್ಮೆ ಅವರೇ ನಮಗಿಂತ ಮುಂದುವರೆದಿದ್ದು, ನಮ್ಮ ಬುದ್ಧಿವಂತಿಕೆ ಟೆಸ್ಟ್ ಮಾಡಲು ನಮಗೆ ಏನಾದರೂ ಸಂಕೇತ ಕಳಿಸಿದ್ದರೆ ಅದನ್ನು ಕಂಡುಹಿಡಿಯುವ ತಂತ್ರಜ್ಞಾನವೂ ನಮ್ಮಲ್ಲಿ ಇಲ್ಲ. ಆದರೂ ನಾವೇ ಬುದ್ಧಿವಂತರು ಎಂಬ ಮೂಢನಂಬಿಕೆ ನಾವು ಬಿಡುವುದಿಲ್ಲ. ಹೊಸ ಗ್ರಹ ಸಿಕ್ಕಾಗ ಮಾನವ ಅಲ್ಲಿಗೆ ಹೋಗುವ ಸಾಧ್ಯತೆಯ ಬಗ್ಗೆ ಯೋಚಿಸುತ್ತಾನೆಯೇ ಹೊರತೂ ಇದ್ದ ಗ್ರಹವನ್ನು ಮತ್ತಷ್ಟು ಸುಂದರವಾಗಿಸಿಕೊಂಡು ಬದುಕುವ ಬಗ್ಗೆ ಯೋಚಿಸುವುದಿಲ್ಲ.

Published in Manasa on Aug 2019

**************

ಕೆ.ಎ.ಸೌಮ್ಯ
ಮೈಸೂರು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)