Hunter's moon : "ಬಾಹ್ಯಾಕಾಶದಲ್ಲಿ ಇಬ್ಬರು ಸೂರ್ಯರು" (ಮಾನಸಾ)




ನಾನು ಚಿಕ್ಕವಳಿದ್ದಾಗ ಶಾಲಾ ರಜದ ಸಮಯದಲ್ಲಿ ಬೆಳಿಗ್ಗೆ ಬೇಗ ಎದ್ದುಬಿಟ್ಟರೆ "ಇವತ್ತು ಸೂರ್ಯ ಪಶ್ಚಿಮದಲ್ಲಿ ಹುಟ್ಟುತ್ತಾನೆ ಬಿಡು" ಅಂತ ಮನೆಯವರೆಲ್ಲಾ ಆಡಿಕೊಳ್ಳುತ್ತಿದ್ದರು. ಅಂದರೆ ಸೂರ್ಯ ಪಶ್ಚಿಮದಲ್ಲಿ ಹುಟ್ಟುವುದು ಸಾಧ್ಯವೇ ಇಲ್ಲ ಎನ್ನುವುದು ನಮ್ಮ ಅನಿಸಿಕೆ. ನಮಗೆ ಪ್ರಕೃತಿಯಲ್ಲಿ ಏನೋ ಒಂದು ನಿರೀಕ್ಷೆ ಇದೆ. ನಮ್ಮ ನಿರೀಕ್ಷೆಯಂತೆಯೇ ನಡೆದರೆ ಸರಿ. ಇಲ್ಲದಿದ್ದರೆ ಏನೇನೋ ಭಯಾನಕ ಕಲ್ಪನೆಗಳನ್ನು ಮಾಡಿಕೊಂಡು ಹೈರಾಣಾಗುತ್ತೇವೆ. ಪ್ರಕೃತಿಗೆ ಸಂಬಂಧಪಟ್ಟ ಎಲ್ಲಾ ಕಲ್ಪನೆಗಳೂ ಪ್ರಳಯದೊಂದಿಗೇ ಕೊನೆಯಾಗುವುದೊಂದು ವಿಶೇಷ. ಇನ್ನು ಪಶ್ಚಿಮದಲ್ಲಿ ಸೂರ್ಯ ಹುಟ್ಟುವುದನ್ನೇ ನಿರೀಕ್ಷಿಸಿರದ ನಾವು, ಆಕಾಶದಲ್ಲಿ ಇಬ್ಬರು ಸೂರ್ಯನನ್ನು ನೋಡಿದರೆ ಎಷ್ಟು ಹೆದರಿರಬಹುದು ಅಲ್ಲವೇ?

ಬಾಹ್ಯಾಕಾಶದಲ್ಲಿ ಇಬ್ಬರು ಸೂರ್ಯ:

ಅದು ಅಕ್ಟೋಬರ್ 2017ರ ಬೆಳಗ್ಗಿನ ಝಾವದ ಸಮಯ. ಅಮೆರಿಕಾದ ನ್ಯೂಯಾರ್ಕ್ ಸಿಟಿಯ ಜನರು ನೋಡುತ್ತಿದ್ದಂತೆಯೇ ಆಗಸದಲ್ಲಿ ಒಂದೇ ಸಮಯದಲ್ಲಿ ಎರಡು ಸೂರ್ಯ ಕಾಣಿಸಿಕೊಂಡಿತು. ನಾಸ್ಟ್ರಾಡಾಮಸ್ ಭವಿಷ್ಯವಾಣಿ ಮತ್ತು ಬಹು ಪುರಾತನವಾದ ಮಾಯನ್ ಸಂಸ್ಕೃತಿಗಳಲ್ಲಿ ಆಗಸದಲ್ಲಿ ಒಮ್ಮೆಲೇ ಇಬ್ಬರು ಸೂರ್ಯ ಅವತರಿಸುವ ಬಗ್ಗೆ ಪುರಾಣದ ಕಥೆಗಳಿವೆ. ಅದನ್ನೆಲ್ಲಾ ಓದಿರುವ ಜನರು ಈಗ ಈ ಇಬ್ಬರು ಸೂರ್ಯರನ್ನು ಒಟ್ಟಿಗೆ ನೋಡಿ ದಿಗಿಲಿಗೆ ಬಿದ್ದರು. ಪುರಾಣದ ಪ್ರಕಾರ ಒಬ್ಬ ಸೂರ್ಯ ನಾಶ ಮಾಡುವುದಕ್ಕೆ ಬಂದರೆ, ಮತ್ತೊಬ್ಬ ಸೂರ್ಯ ನಾಶದಿಂದ ಹಾನಿಗೊಳಗಾದವರಿಗೆ ಚಿಕಿತ್ಸೆ ಕೊಡಲು ಬರುತ್ತಾನಂತೆ. ಯಾವ ಸೂರ್ಯ ನಾಶ ಮಾಡುತ್ತಾನೋ? ಯಾವ ಸೂರ್ಯ ಬಚಾವು ಮಾಡುತ್ತಾನೋ? ಅಂತ ಜನರಿಗೆ ಅರ್ಥವಾಗದೇ ಭಯಭೀತರಾದರು.

ಭಾರತಕ್ಕೂ ಕಾಲಿಟ್ಟಿತು ವಿಡಿಯೋ:

ಕಳೆದ ವರ್ಷದ ಕೊನೆಯಲ್ಲಿ ಪ್ರಕೃತಿಗೆ ವಿರುದ್ಧವಾದ ಈ ಒಂದು ವಿದ್ಯಮಾನ ನಮ್ಮೆಲ್ಲರ ವಾಟ್ಸಾಪ್ಪಿನಲ್ಲಿ ಹರಿದಾಡಿತು. ಅಮೆರಿಕಾ ಮತ್ತು ಕೆನಡಾಗಳಲ್ಲಿ ಒಮ್ಮೆಲೇ ಎರಡು ಸೂರ್ಯ ಕಾಣಿಸಿಕೊಂಡ ವಿಡಿಯೋ ಅದು. ಅದನ್ನು ಚಿತ್ರೀಕರಿಸಿರುವುದನ್ನು ನೋಡುತ್ತಿದ್ದರೆ ಅದು ಸುಳ್ಳು ಅಂತ ಅನ್ನಿಸುತ್ತಲೇ ಇರಲಿಲ್ಲ. ಅಷ್ಟೊಂದು ನೈಜವಾಗಿತ್ತು. ಬರೇ ಬಾಯಲ್ಲಿ ಹೇಳಿದರೆ ಈ ವಿಷಯವನ್ನು ಯಾರೂ ನಂಬುವುದಿಲ್ಲ. ಆದರೆ ಆ ತಿಂಗಳುಗಳಲ್ಲಿ ಸೂರ್ಯ ಉದಯಿಸುವಾಗ ಮತ್ತು ಸೂರ್ಯ ಮುಳುಗುವಾಗ ಜನರ ಬರಿಕಣ್ಣಿಗೇ ಈ ಸೋಜಿಗ ಕಾಣಿಸಿಕೊಳ್ಳುತ್ತಿತ್ತು.

ಆದರೆ ಇದು ಸಾಧ್ಯವೇ? ನಮ್ಮ ಸೌರವ್ಯೂಹದಲ್ಲಿ ಇರುವುದು ಒಬ್ಬನೇ ಸೂರ್ಯನಲ್ಲವೇ? ಇನ್ನೊಬ್ಬ ಸೂರ್ಯ ಎಲ್ಲಿಂದ ಬಂದ. ಬಂದಿರುವುದು ಸುಳ್ಳಾದರೆ ವಿಡಿಯೋದಲ್ಲಿ ಕಾಣುತ್ತಿರುವುದು ಸುಳ್ಳಾ? ಹಾಗಾದರೆ.... ಪ್ರಪಂಚದ ಅಂತ್ಯ ಸಮೀಪಿಸಿರಬಹುದಾ? ಅಂತ ನಾವೆಲ್ಲರೂ ಸಾಕಷ್ಟು ತಲೆ ಕೆಡಿಸಿಕೊಂಡೆವು. ಏಕೆಂದರೆ ವಿಡಿಯೋ ಸೃಷ್ಟಿ ಮಾಡಿದ್ದಲ್ಲ, ನೈಜವಾಗಿ ಚಿತ್ರೀಕರಿಸಿರುವುದು. ಕಣ್ಣು ಕಾಣುತ್ತಿರುವುದನ್ನು ಮನಸ್ಸು ಒಪ್ಪದೇ ಸಾಕಷ್ಟು ಪರದಾಡಿದೆವು.

ಹಂಟರ್ಸ್ ಮೂನ್ ಪರಿಣಾಮ:

ಇದನ್ನು "ಹಂಟರ್ಸ್ ಮೂನ್" ಎನ್ನುತ್ತಾರೆ. ಇದು ಬಾಹ್ಯಾಕಾಶದಲ್ಲಿ ಇಬ್ಬರು ಸೂರ್ಯ ಇರುವ ಹಾಗೆ ಭ್ರಮೆ ಹುಟ್ಟಿಸುತ್ತದೆ. ವರ್ಷದ ಕೆಲವೇ ತಿಂಗಳಿನಲ್ಲಿ ಮಾತ್ರ ಜರುಗುವ ವಿದ್ಯಮಾನ ಇದು. ಪ್ರತೀ ವರ್ಷ ಅಕ್ಟೋಬರ್ ಅಥವಾ ನವೆಂಬರಿನಲ್ಲಿ ಈ ವಿದ್ಯಮಾನ ಜರುಗುತ್ತದೆ.

ಸಾಯಂಕಾಲ "ಸೂರ್ಯ" ಮುಳುಗುವ ಹೊತ್ತು ಮತ್ತು ರಾತ್ರಿಯ "ಚಂದ್ರ" ಹುಟ್ಟುವ ಸಮಯ ಒಂದೇ ಆದಾಗ, ಸಂಜೆ ಸೂರ್ಯನ ಗಾಢ ಬೆಳಕು ಚಂದ್ರನ ಮೇಲೆ ಪ್ರತಿಫಲನಗೊಂಡು, ಚಂದ್ರ ಆಕಾಶದಲ್ಲಿ ಫಳ ಫಳ ಹೊಳೆಯುತ್ತದೆ. ಇದರಿಂದಾಗಿ ಆಕಾಶದಲ್ಲಿ ಇಬ್ಬರು ಸೂರ್ಯ ಇರುವ ಹಾಗೆ ನಮಗೆ ಕಾಣುತ್ತದೆ. ಕೆಲವು ದಿನಗಳವರೆಗೆ ಮಾತ್ರ ಈ ಪ್ರಭಾವ ಇರುತ್ತದೆ. ಸೂರ್ಯ -ಚಂದ್ರರಿಬ್ಬರೂ ಒಟ್ಟಿಗೆ ಆಗಸದಲ್ಲಿ ಕಾಣಿಸಿಕೊಂಡು ಕೆಲವೇ ಕ್ಷಣಗಳವೆರೆಗೆ ಇಬ್ಬರು ಸೂರ್ಯನಿರುವ ಹಾಗೆ ಭ್ರಮೆ ಮೂಡಿಸುತ್ತಾರೆ. ಇದರ ಬಗ್ಗೆ ತಿಳಿದಿದ್ದರೆ ಸರಿ. ಇಲ್ಲದಿದ್ದರೆ ಮೊದಲ ಬಾರಿಗೆ ಇದನ್ನು ನೋಡುವವರು ಗೊಂದಲದ ಗೂಡಾಗುವುದು ಖಚಿತ.
**************
ಕೆ.ಎ.ಸೌಮ್ಯ, ಮೈಸೂರು
Published in MANASA Magazine

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)