Sad Fishing @ VK on 26.01.2020






ಯಾವುದೇ ವಿಷಯವಿರಲಿ ನಮ್ಮ ಯುವ ಜನತೆಗೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೇನೇ ಸಮಾಧಾನ. ಖುಷಿಯೇ ಇರಲಿ ಅಥವಾ ದುಃಖವೇ ಇರಲಿ ಎಲ್ಲರಿಗೂ‌ ಆ ವಿಷಯ ತಿಳಿಸಬೇಕು ಎನ್ನುವ ಹಪಾಹಪಿ. ಹಾಗಾಗಿ ಜನರು ಹಿಂದೆ ಮುಂದೆ ಯೋಚಿಸದೇ ತಮಗೆ ಅನ್ನಿಸಿದ್ದನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿಬಿಡುತ್ತಾರೆ. ಮತ್ತು ಓದುಗರ ಅನುಕಂಪ ಬಯಸುತ್ತಾರೆ. ಆದರೆ ನೋವಿನ ಭರದಲ್ಲಿ ತಮ್ಮೆಲ್ಲಾ ಗುಟ್ಟುಗಳನ್ನೂ ತಾವಾಗಿಯೇ ಜಗಜ್ಜಾಹೀರು ಮಾಡುವುದರಿಂದ ಮುಂದೆ ತಾವು ತೊಂದರೆಗೆ ಸಿಕ್ಕಿಹಾಕಿಕೊಳ್ಳಬಹುದು ಎಂಬ ಆಲೋಚನೆ ಆ ಸಂದರ್ಭದಲ್ಲಿ ಅವರಿಗೆ ಬರುವುದಿಲ್ಲ.

"ಸ್ಯಾಡ್ ಫಿಶಿಂಗ್" ಎನ್ನುವುದು ಒಂದು ಹೊಸ ಟ್ರೆಂಡ್ ಆಗಿದ್ದು, ಯುವ ಜನತೆ ತಮ್ಮೆಲ್ಲಾ ನೋವುಗಳನ್ನು ಜಾಲತಾಣದಲ್ಲಿ ಹರಿಯಬಿಟ್ಟು ಮತ್ತೊಬ್ಬರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಜಾಲತಾಣದ ಸಹೃದಯ ಓದುಗರು ಇದನ್ನು ಓದಿ ತನ್ನ ಬಗ್ಗೆ ಅನುಕಂಪದಿಂದ ಎರಡು ಮಾತುಗಳನ್ನಾಡಲಿ ಎನ್ನುವುದು ಅವರ ಆಶಯ.‌ ಅಲ್ಲದೇ ಯುವಜನರು ತಮ್ಮ ಭಾವನಾತ್ಮಕ ಸಮಸ್ಯೆಗಳಿಂದ ಹೊರಬರಲು ಪರಿಹಾರಕ್ಕಾಗಿಯೂ ಜಾಲತಾಣವನ್ನು ಆಶ್ರಯಿಸುತ್ತಿದ್ದಾರೆ. ಆದರೆ ತಮ್ಮ ಸಮಸ್ಯೆಗೆ ಪರಿಹಾರ ಸಿಗುವ ಬದಲು ಜನರ ಚುಚ್ಚುಮಾತುಗಳಿಂದ ಪರಿಹಾರ ಬಯಸಿದವರು ಭ್ರಮನಿರಸರಾಗುತ್ತಿದ್ದಾರೆ. ಜೊತೆಗೆ ಅದೇ ಸಂದರ್ಭದಲ್ಲಿ ತಮ್ಮ ಬಗ್ಗೆ ಅರಿತವರಿಂದ ದೌರ್ಜನ್ಯಕ್ಕೂ ಒಳಗಾಗುತ್ತಿದ್ದಾರೆ.

ಹೇಗೆ ಗೊತ್ತೇ?

ನೀವೇ ಬಾಯಿ ಬಿಡದಿದ್ದರೆ ನಿಮ್ಮ ಬಗ್ಗೆ ಯಾರಿಗೆ ಏನು ಗೊತ್ತಾಗುತ್ತದೆ? ಆದರೆ ಮೀನಿಗೆ ಗಾಳ ಹಾಕುತ್ತಾ ಕೂತವರಿಗೆ ಮೀನು ತಾನಾಗಿಯೇ ಗಾಳಕ್ಕೆ ಬೀಳುವಂತೆ ತಮ್ಮ ಬಗ್ಗೆ ತಾವೇ ಹೇಳಿಕೊಳ್ಳುತ್ತಾರೆ ಕೆಲವರು. ಅದಕ್ಕಾಗಿಯೇ ಕಾದು ಕುಳಿತಿದ್ದವರಿಗೆ ಇದರಿಂದ ಭೂರಿಭೋಜನ ಸಿಕ್ಕಂತಾಗುತ್ತದೆ. ಕೂಡಲೇ ದುಃಖಿತರ ನೋವಿಗೆ ಮರುಗುವಂತೆ ಮಾತನಾಡಿ ಅವರಿಗೆ ಹತ್ತಿರವಾಗುತ್ತಾರೆ. ದುಃಖಿತರ ಪರವಾಗಿಯೇ ಮಾತನಾಡಿ ಅವರನ್ನು ಒಲಿಸಿಕೊಳ್ಳುತ್ತಾರೆ. ತಮ್ಮ ಪ್ರೀತಿಯ ಬಲೆಯಲ್ಲಿ ಕೆಡವಿಕೊಳ್ಳುತ್ತಾರೆ. ಅನುಕಂಪ ತೋರಿಸುತ್ತಿರುವ ಹಾಗೆ ನಾಟಕವಾಡಿ ದುಃಖಿತರಿಂದ ಸೆಕ್ಸ್ ಚಾಟ್ ಮಾಡುತ್ತಾ ಬೆತ್ತಲೆ ಫೋಟೋಗಳನ್ನು ತರಿಸಿಕೊಂಡು ನಂತರ ಬ್ಲಾಕ್ ಮೇಲ್ ಮಾಡಲು ಶುರು ಮಾಡುತ್ತಾರೆ. ಇದು ಬೀದಿಯಲ್ಲಿ ಹೋಗುತ್ತಿರುವ ಮಾರಿಯನ್ನು ಮನೆಗೆ ಕರೆದ ಹಾಗೆ ಆಗುತ್ತದೆ ಅಷ್ಟೇ.

ಉದಾಹರಣೆಗೆ ಒಬ್ಬಳು ಹುಡುಗಿ ತನಗೆ ಪ್ರೀತಿಯಲ್ಲಿ ಮೋಸವಾಗಿದ್ದರ ಬಗ್ಗೆ ಜಾಲತಾಣದಲ್ಲಿ ಹಾಕುತ್ತಾಳೆ. ಅದಕ್ಕೆ ಸ್ಪಂದಿಸಿದ ಮತ್ತೊಬ್ಬ ಅವಳ ಬಗ್ಗೆ ಅನುಕಂಪದಿಂದ ಮಾತನಾಡಿ ಆಕೆಯ ಬಗ್ಗೆ ಅರಿಯುತ್ತಾನೆ. ಅವರ ಸ್ನೇಹ ಮುಂದುವರೆದು ಪ್ರೀತಿಯಾಗುತ್ತದೆ. ಆದರೆ ಅವರೆಂದೂ ಮುಖಾಮುಖಿ ಭೇಟಿಯಾಗಿರುವುದಿಲ್ಲ. ಅವನ‌ ಅನುಕಂಪದ ಮಾತುಗಳಿಂದ ಆಕೆ ಅವನನ್ನು ಸಂಪೂರ್ಣವಾಗಿ ನಂಬಿರುತ್ತಾಳೆ. ಕೆಲವು ಸಮಯದ ನಂತರ ಆ ವ್ಯಕ್ತಿ ಅವಳ ಖಾಸಗಿ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳಲು ಒತ್ತಾಯಿಸುತ್ತಾನೆ. ಇದು ಮೊದಮೊದಲು ಆಕೆಗೆ ಕಿರಿಕಿರಿ ತರುತ್ತದೆ. ನಂತರ ಆತನ ನಡವಳಿಕೆ ಬಗ್ಗೆ ರೇಜಿಗೆ ಹುಟ್ಟಿಸಲು ಶುರುವಾಗುತ್ತದೆ.‌ ಕೊನೆಗೊಮ್ಮೆ ಆತ ತನಗಿಂತಾ ಮೂವತ್ತು-ನಲವತ್ತು ವರ್ಷಗಳಷ್ಟು ದೊಡ್ಡವನು ಎಂಬ ವಿಷಯ ಬೇರೆಯವರಿಂದ ಹೇಗೋ ಗೊತ್ತಾದಾಗ ಆಕೆಗೆ ಆಘಾತವಾಗುತ್ತದೆ. ಒಬ್ಬನಿಂದ ಮೋಸ ಹೋದವಳಿಗೆ ಮತ್ತೊಬ್ಬನಿಂದಲೂ ಮೋಸವಾಗಿರುತ್ತದೆ. ಈ ಕಾರಣದಿಂದಲೇ ಒಮ್ಮೆ ಮೋಸ ಹೋದವರು ಪದೇ ಪದೇ ಮೋಸ ಹೋಗುತ್ತಿರುತ್ತಾರೆ.

ತಿಳಿಯಲೇಬೇಕಾದ ಕೆಲವು ಸತ್ಯಗಳು:

*ನೊಂದ ಜನರನ್ನು ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಪೋಸ್ಟ್ ಮಾಡಬೇಡಿ ಅಂತ ನಿರ್ಬಂಧಿಸಲು ಯಾರಿಂದಲೂ ಸಾಧ್ಯವಿಲ್ಲ.

*ಆದರೆ ಸಂಬಂಧವೇ ಇರದ ಯಾವುದೋ ವ್ಯಕ್ತಿ ಅವರ ಸಮಸ್ಯೆಯ ಬಗ್ಗೆ ಅತಿಯಾದ ಆಸಕ್ತಿ ತೋರಿಸುತ್ತಿದ್ದರೆ ಆತನನ್ನು ಒಮ್ಮೆಗೇ ನಂಬಬಾರದು ಅಂತ ಹೇಳಬಹುದು.
*ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಕೆಟ್ಟವರು ಇರುವುದಿಲ್ಲ. ಹಾಗಂತ ಎಲ್ಲರೂ ಒಳ್ಳೆಯವರು ಇರುವುದಿಲ್ಲ. ಯಾರನ್ನೇ ಆಗಲಿ ನಂಬುವ ಮುಂಚೆ ಯೋಚಿಸಿಬೇಕಾಗುತ್ತದೆ. *ವೈಯುಕ್ತಿಕ ಸಮಸ್ಯೆಯನ್ನು ಜಾಲತಾಣದಲ್ಲಿ ಆದಷ್ಟೂ ಹಂಚಿಕೊಳ್ಳದಿರುವುದೇ ಒಳ್ಳೆಯದು.

*ಏಕೆಂದರೆ ನಾವು ನಂಬಿಕೆ ಇಟ್ಟು ಹಂಚಿಕೊಂಡ ಮಾಹಿತಿಯ ಬಲದಿಂದಲೇ ಬ್ಲಾಕ್ಮೇಲಿಗೆ ಒಳಗಾಗುವ ಸಾಧ್ಯತೆಗಳಿವೆ.
***********************
ಕೆ.ಎ.ಸೌಮ್ಯ
ಮೈಸೂರು

(26.01.2020 ರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)