ಕವನ : "ಮುಟ್ಟು"


ಯಾರು ಹೇಳಿದರು
ಹನಿರಕ್ತವೂ ಅಮೂಲ್ಯವೆಂದು
ಸೋರಿ ಹೋಗುತ್ತಿದೆ ಇಲ್ಲಿ
ನಮ್ಮ ನರಳಾಟದಲ್ಲಿ
ಒಂದೊಂದು ಹನಿಯೂ ಹೊರಬರುವಾಗ
ಕಾಡಿಸಿ ನರಳಿಸಿ ಪೀಡಿಸಿ ಬರುತ್ತಿದೆ
ಯಾರ ಕಣ್ಣಿಗೂ ಕಾಣದೇ
ಯಾರಿಗೂ ಗೊತ್ತಾಗದೇ....

ನಮ್ಮ ನೋವು ನಮಗಷ್ಟೇ ಗೊತ್ತು
ಒಡಲಿನ ಸಂಕಟ ನುಲಿದಾಟದ ಗಮ್ಮತ್ತು
ಹೊರಗೆ ತೋರಿಸುವಂತಿಲ್ಲ
ಒಳಗೆ ಅನುಭವಿಸುವಂತಿಲ್ಲ..
ಎಷ್ಟೇ ಅಸಹನೆಯಾಗುತ್ತಿದ್ದರೂ
ಕಣ್ಣು ಕತ್ತಲಿಡುತ್ತಿದ್ದರೂ
ನಗುನಗುತ್ತಲೇ ಅಡ್ಡಾಡಬೇಕು
ಹೊಟ್ಟೆ ಬಟ್ಟೆಯಂತೆ ನುಲಿದು ಹಿಂಸೆಯಾಗುತ್ತಿದ್ದರೂ
ಬೆನ್ನು ಬಾಗಿಸದೇ ಓಡಾಡಬೇಕು

ಏಕೆಂದರೆ
ಮೂರು ದಿನಗಳ ರಜೆಯಿಲ್ಲ ನಮಗೀಗ
ಗಂಡಸರಿಗೆ ಸಮಾನರು ನಾವು
ಅವರು ಹಾಕಿದ್ದ ಬೇಲಿಯನ್ನು ಕಿತ್ತು
ಹೊರಗಡಿ ಇಟ್ಟಿರುವೆವು..
ಆದರೆ ಕಿತ್ತ ಬೇಲಿಯನ್ನು ಮತ್ತೆ
ಕೊರಳಿಗೇ ಸುತ್ತುಕೊಂಡಿರುವೆವು..
ಈಗ ಬೇಲಿ ಕೀಳಲೂ ಆಗದೇ
ಹಿಂದಡಿ ಇಡಲೂ ಆಗದೇ ಒದ್ದಾಡುತ್ತಿರುವೆವು..

*****
Published in Sakhi magazine 30.06.2012

ಕೆ.ಎ.ಸೌಮ್ಯ
ಮೈಸೂರು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)