ಲೇಖನ: "ಮೂರ್'ತಿ ಮಹಿಮೆ" (ಸಖಿ ಮ್ಯಾಗಜೀನ್)

 


ಮೂರೂ ಮಕ್ಕಳು ಆಡುತ್ತಿರುತ್ತಾರೆ. ಒಬ್ಬಳು ಬೀಳುತ್ತಾಳೆ. ಇನ್ನೊಬ್ಬಳು ಎಬ್ಬಿಸುತ್ತಾಳೆ. ಬಿದ್ದವಳು ಅತ್ತರೆ ಮತ್ತೊಬ್ಬಳು ಸಮಾಧಾನ ಮಾಡುತ್ತಾಳೆ. ಕಣ್ಣ ಮುಂದೆಯೇ ಇದೆಲ್ಲಾ ನಡೆಯುತ್ತಿದ್ದರೂ ನನಗೆ ಬಿದ್ದವರ್ಯಾರು? ಅತ್ತವರ್ಯಾರು ಅಂತ ಗೊತ್ತಾಗೋಲ್ಲ.


ಏಕೆಂದರೆ ಅವರು ತ್ರಿವಳಿಗಳು!!

ಹೆಸರು ಸ್ನೇಹಾ, ಶೃತಿ, ಶ್ವೇತಾ. 'ಇವರಲ್ಲಿ ದೊಡ್ಡವರು ಯಾರು?' ಎಂದರೆ ಅಕ್ಷರಶಃ ತಬ್ಬಿಬ್ಬಾಗಿ ಹೋಗುತ್ತೇನೆ. ನನಗೂ ಅವರನ್ನು ತಕ್ಷಣಕ್ಕೆ ಗುರುತು ಹಿಡಿಯಲಾಗೋಲ್ಲ. 'ಅವರಮ್ಮಂಗೇ ಗುರುತು ಸಿಗೋಲ್ಲ ಅಂದ್ಮೇಲೆ ನಮಗೆಲ್ಲಿ ಗೊತ್ತಾಗುತ್ತೆ?' ಅಂತ ಜನ ಮುಂದೆ ಹೋಗ್ತಾರೆ.

ಈ ಮಕ್ಕಳ ಹುಟ್ಟಿನ ಕಥೆ ತುಂಬಾ ಇಂಟರೆಸ್ಟಿಂಗ್‌.

1) ಮೊದಲ ಸಲ ಸ್ಕ್ಯಾನಿಂಗ್ ಮಾಡಿಸಿದಾಗ 'ಮಗು ಆರೋಗ್ಯವಾಗಿದೆ' ಅಂದಿದ್ದರು.

2) ಎರಡನೇ ಸಲ ಸ್ಕ್ಯಾನಿಂಗ್ ಹೊತ್ತಿಗೆ 'ಕಳೆದ ಬಾರಿ ಗೊತ್ತಾಗಲಿಲ್ಲ. ಸಾರಿ ನಿಮಗೆ ಅವಳಿ ಮಕ್ಕಳು' ಅಂದ್ರು.

3) ಮೂರನೆಯ ಸಲ ಸ್ಕ್ಯಾನಿಂಗ್‌ನಲ್ಲಿ 'ಅವಳಿ ಅಲ್ಲ ತ್ರಿವಳಿ' ಅಂದ್ರು.

ಬಹುಶಃ ಜಗತ್ತಿನ ಯಾವ ತಾಯಿಗೂ ಈ ಅನುಭವ ಆಗಿರಲಿಕ್ಕಿಲ್ಲ. ಪ್ರತೀ ಸಲವೂ ಹೀಗೆ ಒಂದೊಂದು ಮಗು ಹೆಚ್ಚಾಗ್ತಾ ಇರೋದನ್ನು ನೋಡಿ, ನಾನಂತೂ ನಾಲ್ಕನೆಯ ಸಲ ಸ್ಕ್ಯಾನಿಂಗ್ ಹೋದಾಗ 'ನಾಲ್ಕು ಮಕ್ಕಳು' ಅಂತಾರೆ ಅಂದ್ಕೊಂಡಿದ್ದೆ. ಹಾಗಾಗಲಿಲ್ಲ.

ಮೂವರಲ್ಲಿ ಸ್ನೇಹಾ ಮೊದಲನೆಯವಳು.

ಉಳಿದಿಬ್ಬರಿಗಿಂತ ಒಂದು ನಿಮಿಷ ದೊಡ್ಡವಳಷ್ಟೇ. ಅವಳಿಗೆ ಅದು ಹೇಗೆ ತಿಳಿಯಿತೋ? ತಾನೇ ಯಜಮಾನಿಯಂತೆ ವರ್ತಿಸುತ್ತಾಳೆ. ಬೇರೆ ಮಕ್ಕಳು ಮಲಗಿದ್ದಾಗ ಹಾಸೋದು, ಹೊದಿಸೋದರಿಂದ ಹಿಡಿದು, ಅಳುವಾಗ ಹಾಲಿನ ಬಾಟಲಿ ಬಾಯಿಗಿಡುವ ತನಕವೂ ಅವಳು ಅಕ್ಕನೇ. ನೀನ್ಯಾರಮ್ಮ ಅಂದ್ರೆ "ಸ್ನೇಹಕ್ಕ" ಅಂತಾಳೆ. ಯಾವುದೇ ಕೆಟ್ಟ ಕೆಲಸ ಮಾಡುವುದಿರಲಿ ಇವಳದ್ದೇ ಮುಂದಾಳತ್ವ.

ಈಗ ಮಕ್ಕಳು ಔಷಧಿ ಕುಡಿಯಲು ಯಾವುದೇ ತಕರಾರು ಮಾಡುವುದಿಲ್ಲ. ಆದರೆ ಚಿಕ್ಕವರಿದ್ದಾಗ ಹೀಗಿರಲಿಲ್ಲ. ಒಂದು ಮಗುವಿಗೆ ಔಷಧಿ ಹಾಕಿದ ತಕ್ಷಣ "ಹೋ" ಎಂದು ಕಿರಿಚುತ್ತಿತ್ತು. ಅದರ ಅಳು ಕೇಳಿ ಉಳಿದ ತೊಟ್ಟಿಲಿನ ಮಕ್ಕಳಿಬ್ಬರೂ ಭಾರೀ ಅನಾಹುತ ಆದಂತೆ ಸುಮ್ಮಸುಮ್ಮನೆ ತಾವೂ "ಹೋ" ಎಂದು ಅಳುತ್ತಿದ್ದರು. ಸಮಾಧಾನ ಪಡಿಸುವಷ್ಟರಲ್ಲಿ ಸಾಕಾಗುತ್ತಿತ್ತು.

ಈಗ ಬೇರೆ ತರಹದ ತೊಂದರೆ.

ಒಂದೇ ವಸ್ತುವಿಗೆ, ಒಂದೇ ಬಟ್ಟೆಗೆ, ಒಂದು ಕಾಗದದ ತುಂಡಿಗೆ, ಕುರ್ಚಿಗೆ ಜಗಳ! ಸಧ್ಯ ಅಧಿಕಾರಕ್ಕಾಗಿ ಇನ್ನೂ ಮಕ್ಕಳಲ್ಲಿ ಜಗಳ ನಡೆದಿಲ್ಲ. ಏಕೆಂದರೆ ಮೂವರು ಮಕ್ಕಳಲ್ಲೂ ತುಂಬಾ ಒಗ್ಗಟ್ಟಿದೆ. ಒಬ್ಬಳಿಗೆ ಬೈದರೆ ಅಥವಾ ಹೊಡೆದರೆ ಉಳಿದಿಬ್ಬರು ತಿರುಗಿ ಬೀಳ್ತಾರೆ. ಅನ್ಯಾಯವನ್ನು ಪ್ರತಿಭಟಿಸುವ ಶಕ್ತಿ ಅವರಿಗಾಗಲೇ ಇದೆ.

ದೇವಸ್ಥಾನಕ್ಕೆ ಒಬ್ಬಳನ್ನು ಕರೆದೊಯ್ದರೆ, ಅವಳು ಬಾರದ ಇಬ್ಬರಿಗಾಗಿ ಪ್ರಾರ್ಥಿಸಿ ಹೂ ತಂದು ಕೊಡ್ತಾಳೆ. ಅಂಗಡಿಯಿಂದ ಏನು ತಂದರೂ ಮೂರು ತರಬೇಕು. ಅದನ್ನು ಮೂವರೂ ಜಗಳ ಮಾಡದೇ ಹಂಚಿಕೊಳ್ತಾರೆ. ಅಷ್ಟೇ ಅಲ್ಲ... ದಾಸಯ್ಯ ಬಂದರೆ ಮೂವರೂ ಅವನಿಗೆ ದುಡ್ಡು ಕೊಡಬೇಕು.

ಅನಾಹುತ- ಅವಾಂತರ ಯಾಕಾಗಿಲ್ಲ?

ಮೂವರೂ ಒಂದೇ ಥರ ಇರುವುದರಿಂದ ಊಟ ಮಾಡಿಸಿದ ಮಗುವಿನ ಬಾಯಿಗೇ ಅನ್ನ ತುರುಕುವುದು, ಔಷಧಿ ಕುಡಿಸಿದ ಮಗುವಿಗೇ ಮತ್ತೊಮ್ಮೆ ಔಷಧಿ ಸುರಿಯುವುದು ನಡೆಯುತ್ತಲೇ ಇರುತ್ತದೆ. ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಏಟು ತಿಂತಾರೆ. ಬಹುಶಃ ಸ್ಕೂಲಿಗೆ ಹೋಗುವ ಹೊತ್ತಿಗೆ ಈ ಸಮಸ್ಯೆ ಇನ್ನೂ ದೊಡ್ಡದಾಗಬಹುದು.

(Published in SAKHI on 15th March 2009)

*********
ಕೆ.ಎ.ಸೌಮ್ಯ
ಮೈಸೂರು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)