ಜೈನ ಕವಿ "ಆಂಡಯ್ಯ" Andaiah (Jain Poet)



ಆಂಡಯ್ಯ ಒಬ್ಬ ಜೈನ ಕವಿ. 

ಇವನ ಕಾಲ ಸುಮಾರು ಕ್ರಿ.ಶ. 1235. 

ಇವನು ಧಾರವಾಡದವನು. ಕದಂಬ ವಂಶಕ್ಕೆ ಸೇರಿದ ಕಾಮದೇವ ಇವನ ಆಶ್ರಯದಾತ. ಆಂಡಯ್ಯನು ಪಂಪ-ರನ್ನರಂತೆ ರಾಮಾಯಣ-ಮಹಾಭಾರತವನ್ನು ಆಧರಿಸಿದ ಲೌಕಿಕ ಗ್ರಂಥಗಳನ್ನು ಬರೆದಿಲ್ಲ. ಬದಲಾಗಿ ಇವನ ಕೃತಿಯಾದ ‘ಕಬ್ಬಿಗರ ಕಾವ’ ಒಂದು ಕಾಲ್ಪನಿಕ ಕೃತಿಯಾಗಿದೆ.

‘ಕಬ್ಬಿಗರ ಕಾವಂ’ ಎಂದರೆ ಸಂಸ್ಕೃತದ ಸಹಾಯವಿಲ್ಲದೇ ಅಚ್ಚ ಕನ್ನಡದಲ್ಲಿ ಬರೆದು ಕವಿಗಳನ್ನು ಕಾಪಾಡಿದವನು ಎಂಬರ್ಥ ಬರುತ್ತದೆ

ಸಂಸ್ಕೃತದ ಒಂದೂ ಪದವನ್ನು ಬೆರೆಸದೇ, ಅಚ್ಚ ಕನ್ನಡದ ದೇಸೀ ಪದಗಳನ್ನು ಬಳಸಿ ಕಾವ್ಯ ರಚನೆ ಮಾಡಿರುವುದು ಇವನ ಹೆಗ್ಗಳಿಕೆ. ಈ ಕೃತಿಗೆ “ಕಾವನ ಗೆಲ್ಲ”, “ಮದನ ವಿಜಯ”, “ಸೊಬಗಿನ ಸುಗ್ಗಿ” ಅಂತ ಹೆಸರುಗಳಿವೆ ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. 

ಇದು ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಒಂದು ಮಹತ್ವದ ಕೃತಿಯಾಗಿದೆ. ಆ ಕಾಲದಲ್ಲಿ ಕಾವ್ಯ ರಚನೆ ಕೇವಲ ಪಂಡಿತರಿಗಷ್ಟೇ ಅಲ್ಲ, ಜನ ಸಾಮಾನ್ಯರಿಗೂ ಕಾವ್ಯ ಅರ್ಥವಾಗಬೇಕು ಎಂದು ಭಾವಿಸಿದ ನಮ್ಮ ಕವಿಗಳು ಕವನದಲ್ಲಿ ದೇಸೀಯತೆಯನ್ನು ತಂದರು. ಅಲ್ಲದೇ ಸಂಸ್ಕೃತದಿಂದ ತದ್ಭವವನ್ನು ಮಾತ್ರ ಬಳಸಿದರು, ತತ್ಸಮ ಬಳಸುವುದಕ್ಕೆ ತಮಗೆ ತಾವೇ ನಿರ್ಬಂಧ ಹೇರಿಕೊಂಡರು.  ಅಂತಹ ಸಮಯದಲ್ಲಿ ಆಂಡಯ್ಯನ ಈ ಕೃತಿ ಪೂರ್ಣಗೊಂಡಿದ್ದು ಒಂದು ಮಹತ್ತರ ಸಾಧನೆಯಾಗಿದೆ.

ಕಬ್ಬಿಗರ ಕಾವ:  


“ಕನ್ನಡದೊಳ್ಪಿನ ನುಡಿಯಂ!
ಮುನ್ನಿನದಱೊಳೆ ನೋಡಿ
ತಿಳಿದುಕೊಳ್ವುದು ಚದುರಂ!!
ರನ್ನದ ಕನ್ನಡಿಯಂ ನಲ!
ವಿನ್ನೋಡಿದವಂಗೆ ಕುಂದದೇನಾದಪುದೇ?”


ಅಂತ ದಿಟ್ಟತನದಿಂದ ಸಂಸ್ಕೃತವನ್ನು ಬಳಸದೇ ಸಿರಿಗನ್ನಡದಲ್ಲಿಯೇ ಬರೆದ ಕನ್ನಡದ ಹೆಮ್ಮೆಯ ಕವಿ ಆಂಡಯ್ಯ. 


“ಕಬ್ಬಿಗರ ಕಾವ” ಭಾಷೆಗೆ ಸಂಬಂಧಿಸಿದ ಕಾರಣಕ್ಕಾಗಿ ಪ್ರಸಿದ್ಧವಾಗಿದೆ. ಆಂಡಯ್ಯನು ತನ್ನ ಕಾವ್ಯದಲ್ಲಿ ಸಂಸ್ಕೃತವನ್ನು ಕೈ ಬಿಟ್ಟು ಕೇವಲ ಕನ್ನಡ ಪದಗಳನ್ನು ಬಳಸುವೆನೆಂಬ ತೀರ್ಮಾನವನ್ನು ಪ್ರಜ್ಞಾಪೂರ್ವಕವಾಗಿಯೇ ತೆಗೆದುಕೊಳ್ಳುತ್ತಾನೆ. ಸಂಸ್ಕೃತ ಬಳಸದೇ ಕಾವ್ಯ ರಚನೆ ಸಾಧ್ಯವಿಲ್ಲ ಅಂತ ಹೇಳುತ್ತಿದ್ದ ವಿದ್ವಾಂಸರಿಗೆ ಉತ್ತರ ಕೊಡುವ ಹಾಗೆ ಕೇವಲ ಕನ್ನಡದಲ್ಲಿ ಕೃತಿ ರಚನೆ ಮಾಡುತ್ತಾನೆ.

ಆದರೆ ಆಂಡಯ್ಯನು ಸಂಸ್ಕೃತ ಬಳಸುವ ಅಡ್ಡದಾರಿಯೊಂದನ್ನು ಕಂಡುಕೊಳ್ಳುತ್ತಾನೆ. ಅದೇನೆಂದರೆ ಅವನು ಕೇವಲ ತತ್ಸಮ ಪದಗಳನ್ನು ಮಾತ್ರ ಬಳಸುವುದಿಲ್ಲ. “ತತ್ಸಮ” ಎಂದರೆ ಧ್ವನಿಯ ನೆಲೆಯಲ್ಲಿ, ಅರ್ಥದ ನೆಲೆಯಲ್ಲಿ ಯಾವುದೇ ಬದಲಾವಣೆ ಪಡೆಯದೇ, ಕನ್ನಡದಲ್ಲಿ ಬಳಕೆಯಾಗುವ ಸಂಸ್ಕೃತ ಪದಗಳು. 

ಆದರೆ ತದ್ಭವಗಳಲ್ಲಿ ಧ್ವನಿಬದಲಾವಾಣೆ ಸಾಮಾನ್ಯವಾಗಿಯೂ, ಅರ್ಥ ಬದಲಾವಣೆ ಅಪರೂಪವಾಗಿಯೂ ಇರುತ್ತದೆ. ಸಂಸ್ಕೃತದಿಂದ ಎರವಲು ತಂದ ಪದಗಳನ್ನು ಸಂಸ್ಕೃತದಲ್ಲಿರುವ ಹಾಗೆಯೇ ಬರೆಯಬೇಕು (ತತ್ಸಮ) ಅನ್ನುವುದು ಒಂದು ಸಂಪ್ರದಾಯ. 

ಹಳೆಗನ್ನಡದ ಸಂದರ್ಭದಲ್ಲಿ ಇಂತಹ ಪದಗಳನ್ನು ಸಂಸ್ಕೃತದಲ್ಲಿದ್ದ ಹಾಗೆಯೇ ಬರೆಯಬಹುದಿತ್ತು. ಆದರೆ ಆಂಡಯ್ಯ ಕನ್ನಡದ ಸೊಗಡನ್ನು ಕೆಡದಂತೆ ಆ ಸಂಸ್ಕೃತದ ಪದಗಳನ್ನು ಮಾರ್ಪಡಿಸಿ ತದ್ಭವಗಳನ್ನಾಗಿ ಮಾಡಿ ಬಳಸಿದ್ದಾನೆ. 

ಆಂಡಯ್ಯನು ತನ್ನ ಹಿರಿಯರಾದ ಪಂಪ-ರನ್ನರಂತೆ ಜೈನ ಧಾರ್ಮಿಕ ಕಾವ್ಯವನ್ನೂ ರಚಿಸಿಲ್ಲ ಮತ್ತು ರಾಮಾಯಣ-ಮಹಾಭಾರತವನ್ನಾಧರಿಸಿದ ಲೌಕಿಕ ಕಾವ್ಯವನ್ನೂ ರಚಿಸಿಲ್ಲ. 

ಕಬ್ಬಿಗರ ಕಾವ್ಯ ಕಾಮ (ಮನ್ಮಥ), ಈಶ್ವರ ಮತ್ತು ಚಂದ್ರರನ್ನು ಆಧರಿಸಿದ ಕಾಲ್ಪನಿಕ ಕೃತಿ. 

ವಿದ್ವಾಂಸರ ಪ್ರಕಾರ ಆಂಡಯ್ಯ ಈ ಕೃತಿಯನ್ನು ಬರೆಯಲು ಅನೇಕ ಕಾರಣಗಳಿವೆ. ಆಂಡಯ್ಯನು ಈ ಕೃತಿಯಲ್ಲಿ ಚಾರಿತ್ರಿಕ ಘಟನೆಗಳನ್ನು ಉಲ್ಲೇಖಿಸಿದ್ದಾನೆ. 

ಕದಂಬರ ರಾಜನಾದ ಕಾಮದೇವನು ಜೈನನಾಗಿದ್ದು, ಇವನು ಹೊಯ್ಸಳರ (ಹಿಂದೂ) ದೊರೆಯಾದ ಎರಡನೇ ವೀರಬಲ್ಲಾಳನ್ನು ಸೋಲಿಸಿ ಬನವಾಸಿಯನ್ನು ಗೆದ್ದ ವಿಜಯಕ್ಕಾಗಿ ರಚಿಸಲ್ಪಟ್ಟಿರಬಹುದು ಅಂತ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ರಾಜಕೀಯ
ಅಧಿಕಾರಕ್ಕಾಗಿ ಜೈನರು ಮತ್ತು ವೀರಶೈವರ ಮಧ್ಯೆ ಪ್ರಬಲ ಸ್ಪರ್ಧೆ ನಡೆಯುತ್ತಿದ್ದ ಆ ಕಾಲದಲ್ಲಿ ಇದೊಂದು ಮಹತ್ವದ ಘಟನೆಯಾಗಿತ್ತು.

ಕಥಾಹಂದರ ಹೀಗಿದೆ: 


ಶಿವನು ಚಂದ್ರನನ್ನು ತನ್ನ ಜಟೆಯಲ್ಲಿ ಇಟ್ಟಿರುವುದು ಲೋಕದಲ್ಲಿ ಇರುವವರಿಗೆಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈ ವಿಷಯ ಕಾಮ (ಮನ್ಮಥನಿಗೆ) ಕೋಪ ತರಿಸುತ್ತದೆ. ಅದಕ್ಕಾಗಿ ಮನ್ಮಥನು ತನ್ನ ಸೇನೆಯೊಂದಿಗೆ ಈಶ್ವರನ ಮೇಲೆ ಯುದ್ಧಕ್ಕೆ ಬರುತ್ತಾನೆ. ಇನ್ನೇನು ಶಿವನ ಮೇಲೆ ಬಾಣ ಪ್ರಯೋಗ ಮಾಡಿ ಶಿವನನ್ನು ಗೆಲ್ಲಬೇಕೆನ್ನುವಷ್ಟರಲ್ಲಿ ಶಿವನು ಮನ್ಮಥನಿಗೆ ಶಾಪ ಕೊಡುತ್ತಾನೆ. ಶಿವನಿಂದ ಶಾಪ ಪಡೆದ ಮನ್ಮಥ ತದನಂತರದಲ್ಲಿ ಜೈನ ಮುನಿಯೊಬ್ಬನನ್ನು ಸಂಧಿಸಿ, ಆ ಮುನಿಯನ್ನು ಅವಮಾನ ಮಾಡಲೆತ್ನಿಸಿ ಸೋಲುತ್ತಾನೆ. ತನ್ನ ಸೋಲನ್ನು ಒಪ್ಪಿಕೊಂಡು ಆ ಮುನಿಯ ಪಾದದ ಬಳಿ ಕುಸಿದು ಬೀಳುತ್ತಾನೆ. ಆಗ ಮನ್ಮಥ ಪುಷ್ಪಬಾಣವಾಗಿ ಬದಲಾಗುತ್ತಾನೆ. ಈ ಕಥೆಯನ್ನು ಕೇಳಿದ ಬಳಿಕ ಅವನಿಗೆ ಶಾಪವಿಮೋಚನೆಯಾಗುತ್ತದೆ. ನಂತರ ತನ್ನ ಮೊದಲಿನ ರೂಪಕ್ಕೆ ಹಿಂತಿರುಗುತ್ತಾನೆ ಮನ್ಮಥ.

ಕಾಮ (ಮನ್ಮಥ) ಜೈನರ ಕಾವ್ಯಗಳಲ್ಲಿ ಶಾಶ್ವತ ಸ್ಥಾನ ಪಡೆದಿರುವಾತ. ಕಾಮ (ಮನ್ಮಥ) ಈಶ್ವರನನ್ನು ಗೆದ್ದ ಪೌರಾಣಿಕ ಪ್ರಸಂಗವನ್ನು ಆಂಡಯ್ಯ ತನ್ನ ಆಶ್ರಯದಾತನಾದ ಕಾಮದೇವನಿಗೆ ಹೋಲಿಸಿ ಕೃತಿಯನ್ನು ಚಾರಿತ್ರಿಕವನ್ನಾಗಿಸಿದ್ದಾನೆ. ಆಂಡಯ್ಯನ ಈ ಕೃತಿಯ ಮೇಲೆ ವೀರಶೈವ ಕವಿಯಾದ ಹರಿಹರನ ಪ್ರಭಾವವಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ.

ಆಂಡಯ್ಯನ ಈ ಕೃತಿಯು ಸಂಸ್ಕೃತದ ಪದಗಳ ನೆರವಿಲ್ಲದೆ ಕನ್ನಡ ಸಾಹಿತ್ಯ ರಚನೆ ಸಾಧ್ಯವಿಲ್ಲ ಎನ್ನುವವರಿಗೆ ಒಂದು ಉತ್ತರವಾಗಿದ್ದು ನಿಜವಾದರೂ, ಈ ರೀತಿಯ ಅಚ್ಚ ಕನ್ನಡದ ಪ್ರಯೋಗ ಮಾಡಿದವರಲ್ಲಿ ಆಂಡಯ್ಯನೇ ಮೊದಲನೆಯವನಲ್ಲ. 

ಈ ಬದಲಾವಣೆಯು ಈ ಮೊದಲೇ ಅಂದರೆ ಸುಮಾರು ಕ್ರಿ.ಶ. 1112.ರಲ್ಲಿ ನಯಸೇನ ಎಂಬುವವನಿಂದ ಶುರು ಆಗಿರಬಹುದು ನಂಬಲಾಗಿದೆ. 

ಇವನ ಕೃತಿಯಾದ ಧರ್ಮಾಮೃತದಲ್ಲಿ, ಕನ್ನಡಕ್ಕೆ ಹೊಂದುವ ಸಂಸ್ಕೃತದ ಪದಗಳನ್ನು ಮಾತ್ರವೇ ಬಳಸಿ ರಚಿಸಿದ್ದಾನೆ. ಕನ್ನಡವನ್ನು ಉಳಿಸಲು ಇದೊಂದು ಪ್ರಯತ್ನ ಎಂದು ಭಾವಿಸಿದ ಆಂಡಯ್ಯನ್ನು ಅದನ್ನೇ ಮುಂದುವರೆಸಿ ಅಚ್ಚಕನ್ನಡದಲ್ಲಿಯೇ ಕೃತಿ ರಚಿಸುವ ಪ್ರಯತ್ನ ಮಾಡಿರುವುದು ವಿಶೇಷ. ಆದರೆ ಆಂಡಯ್ಯನ ನಂತರ ಬೇರೆ ಯಾರೂ ಈ ಸಂಪ್ರದಾಯವನ್ನು ಮುಂದುವರೆಸಲಿಲ್ಲ ಎನ್ನುವುದು ವಿಷಾದನೀಯ.

* ಕಬ್ಬಿಗರ ಕಾವ ಕೃತಿಯು ಚಂಪೂ ಶೈಲಿಯಲ್ಲಿದೆ. 

* ಅಂದರೆ ಪದ್ಯ ಮತ್ತು ಗದ್ಯದ ಹದವಾದ ಮಿಶ್ರಣದಲ್ಲಿದೆ. 

* ಇದು 272 ಪದ್ಯಗಳನ್ನು ಹೊಂದಿದೆ. ಈ ಪುಟ್ಟ ಕಾವ್ಯ ಅನೇಕ ಅಭಿಮಾನಿಗಳನ್ನು ಪಡೆದಿದೆ.

* ಇವನು ಎಲ್ಲರಂತೆ ಕೃತಿಯ ಕೊನೆಯಲ್ಲಿ ತನ್ನ ಗುರುಗಳ ಬಗ್ಗೆಯಾಗಲೀ, ತನಗಿದ್ದ ಬಿರುದು-ಬಾವಲಿಗಳ ಬಗ್ಗೆಯಾಗಲೀ ತಿಳಿಸಿಲ್ಲ. 

* ಆದರೆ ಆಂಡಯ್ಯನಿಗೆ ಕನ್ನಡ ನಾಡೆಂದರೆ ಅಪಾರ ಅಭಿಮಾನ. 

* ತನ್ನ ಕೃತಿಯುದ್ದಕ್ಕೂ ಓದುವವರ ಮನಸೂರೆಗೊಳ್ಳುವಂತೆ ಕನ್ನಡ ನಾಡನ್ನು ಬಣ್ಣಿಸಿದಾನೆ. 

* ಅಲ್ಲದೇ ಕಾವ್ಯದಲ್ಲಿ ಹೇರಳವಾದ ಶೃಂಗಾರದ ವರ್ಣನೆಯಿದೆ.

**************************

ಕೆ.ಎ.ಸೌಮ್ಯ
ಮೈಸೂರು
(ಎಂ.ಎ. ಕನ್ನಡ)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)