ವಾತಾಪಿ ಗಣಪತಿ : ಎಂ.ಎ.ಕನ್ನಡ


 ಬಾದಾಮಿಯ ಮೊದಲ ಹೆಸರು “ವಾತಾಪಿ”.

ಉತ್ತರ ಕರ್ನಾಟಕದ ಬಾಗಲಕೋಟೆಯ ಜಿಲ್ಲೆಯಲ್ಲಿನ ಬಾದಾಮಿ ಪಟ್ಟಣವು ಕ್ರಿ.ಶ. ಆರನೇ ಶತಮಾನದಿಂದ ಕ್ರಿ.ಶ. ಎಂಟನೇ ಶತಮಾನದವರೆಗೂ ಚಾಲುಕ್ಯರ ರಾಜಧಾನಿಯಾಗಿತ್ತು. ಚಾಲುಕ್ಯರ ಸಾಮ್ರಾಜ್ಯವು ಕರ್ನಾಟಕ ಮತ್ತು ಆಂಧ್ರಪ್ರದೇಶದ ಹಲವು ಭಾಗಗಳನ್ನು ಒಳಗೊಂಡಿತ್ತು.

ಇದು ದಕ್ಷಿಣ ಭಾರತದಲ್ಲಿಯೇ ವೈವಿಧ್ಯಮಯವಾದ ದೇವಾಲಯಗಳ ನಿರ್ಮಾಣಕ್ಕೆ ಸಾಕ್ಷಿಯಾದ ಪಟ್ಟಣವಾಗಿದೆ.

ವಾತಾಪಿ ಗಣಪತಿಂ ಭಜೇಹಂ” ಎಂಬ ಪ್ರಖ್ಯಾತವಾದ ಈ ರಚನೆ ಹಂಸಧ್ವನಿ ರಾಗದಲ್ಲಿದೆ. ಇದರ ರಚನಕಾರರು ಮುತ್ತುಸ್ವಾಮಿ ದೀಕ್ಷಿತರು. 

ಇವರು ಕರ್ನಾಟಕದ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರು.

ಮುತ್ತುಸ್ವಾಮಿ ದೀಕ್ಷಿತರು ಸುಮಾರು ನಾಲ್ಕು ನೂರಕ್ಕೂ ಹೆಚ್ಚು ರಚನೆಗಳನ್ನು ಮಾಡಿದ್ದಾರೆ. ಆ ರಚನೆಗಳಲ್ಲಿ ಎರಡು ಅಥವಾ ಮೂರು ರಚನೆಗಳು ಮಾತ್ರ ತೆಲುಗು ಅಥವಾ **ಮಣಿಪ್ರವಾಳದಲ್ಲಿದ್ದು, ಉಳಿದ ರಚನೆಗಳೆಲ್ಲಾ ಸಂಸ್ಕೃತದಲ್ಲಿದೆ.

ಇವರ ರಚನೆಗಳು ಸಂಗೀತಸುಧೆಯಿಂದ ತುಂಬಿವೆ.

ಮುತ್ತುಸ್ವಾಮಿ ದೀಕ್ಷಿತರ ಹುಟ್ಟೂರು ತಂಜಾವೂರಿನ ಬಳಿಯ ತಿರುವಾರೂರು. ಇವರು ನಮ್ಮ ದೇಶದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಅಲ್ಲಿನ ದೇವಾನುದೇವತೆಗಳ ಬಗ್ಗೆ ಸಂಗೀತ ರಚಿಸಿದ್ದಾರೆ.

“ವಾತಾಪಿ ಗಣಪತಿ”ಗೆ ಹಾಗೆ ಹೆಸರು ಬರಲು ಒಂದು ಕಾರಣವಿದೆ.

ಚಾಲುಕ್ಯರು ಕರ್ನಾಟಕವನ್ನು ಆಳುತ್ತಿದ್ದ ಕಾಲದಲ್ಲಿ, ಚಾಲುಕ್ಯರ ಪ್ರಖ್ಯಾತ ದೊರೆಯಾದ ಇಮ್ಮಡಿ ಪುಲಿಕೇಶಿಯು ತನ್ನ ಸಾಮ್ರಾಜ್ಯವನ್ನು ದಂಡಯಾತ್ರೆಗಳ ಮೂಲಕ ಬಲಗೊಳಿಸುತ್ತಿದ್ದನು.

ಅಲೂಪ, ಗಂಗ ಮೊದಲಾದ ರಾಜವಂಶಗಳನ್ನು ಸೋಲಿಸಿದ ನಂತರ, ತಮಿಳುನಾಡಿನ ಕಂಚಿಗೆ ದಂಡೆತ್ತಿ ಹೋಗಿ ಪಲ್ಲವರನ್ನು ಸೋಲಿಸಿದನಂತೆ. ಪಲ್ಲವರ ರಾಜ ಒಂದನೇ ಮಹೇಂದ್ರವರ್ಮ ಚಾಲುಕ್ಯರ ಸಾರ್ವಭೌಮತ್ವವನ್ನು ಒಪ್ಪಿ ಚಾಲುಕ್ಯರ ಸಾಮಂತನಾದರೂ, ಈ ಅವಮಾನದ ಸೇಡಿಗಾಗಿ ಕಾಯುತ್ತಲೇ ಇದ್ದ.

ಆದರೆ ಇವನಿಂದ ಸಾಧ್ಯವಾಗದ ಕೆಲಸ ಇವನ ಮಗನಾದ ಪಲ್ಲವ ನರಸಿಂಹನಿಂದ ಸಾಧ್ಯವಾಯಿತು.

ಕ್ರಿ.ಶ. 643 ರ ಹೊತ್ತಿಗೆ ಸಮಯ ಕಾದು, ನರಸಿಂಹವರ್ಮನು ಚಾಲುಕ್ಯ ರಾಜಧಾನಿ ವಾತಾಪಿಯ ಮೇಲೆ ದಂಡೆತ್ತಿ ಹೋಗಿ ತನ್ನ ತಂದೆಯ ಅವಮಾನದ ಕಿಚ್ಚನ್ನು ಶಮನಗೊಳಿಸಲು ಇಡೀ ಬಾದಾಮಿಯನ್ನು ಧ್ವಂಸ ಮಾಡಿದನಂತೆ.

ನಂತರ ಇದರ ನೆನಪಿಗಾಗಿ ಬಾದಾಮಿಯ ಗುಹಾದೇವಾಲಯದಲ್ಲಿದ್ದ ಗಣಪತಿಯ ಮೂಲ ವಿಗ್ರಹವನ್ನು ಹೊತ್ತೊಯ್ದರಂತೆ. ಈ ಮೂರ್ತಿಯನ್ನು ಪಲ್ಲವರ ಸೈನ್ಯಾಧಿಕಾರಿಯಾದ ಪರಂಜ್ಯೋತಿ ಎನ್ನುವವನು ತನ್ನ ಊರಾದ ತಿರುಚೆಂಕಾಂಟಗುಡಿಯಲ್ಲಿ ಸ್ಥಾಪಿಸಿದನಂತೆ.

ಬಾದಾಮಿಯ ಮೂಲ ಹೆಸರು ವಾತಾಪಿ. 

ಹಾಗಾಗಿ ತಿರುಚೆಂಕಾಂಟಗುಡಿಯಲ್ಲಿ ಸ್ಥಾಪಿಸಿದ ನಂತರ, ಈ ಗಣಪತಿ “ವಾತಾಪಿ ಗಣಪತಿ” ಎಂದೇ ಪ್ರಖ್ಯಾತವಾಯ್ತು. ಸ್ವಲ್ಪ ಕಾಲದ ನಂತರ ತಿರುವಾರೂರಿನ ತ್ಯಾಗರಾಜ ದೇವಾಲಯದ ಪ್ರಾಕಾರದಲ್ಲಿಯೂ ಈ ರೀತಿಯ ಮತ್ತೊಂದು ಗಣಪತಿಯ ಪ್ರತಿರೂಪವನ್ನು ಕೆತ್ತಿ ಪ್ರತಿಷ್ಟಾಪನೆ ಮಾಡಲಾಯಿತು. ಅಲ್ಲದೇ ಆ ಗಣಪತಿಯನ್ನೂ ವಾತಾಪಿ ಗಣಪತಿಯೆಂದೇ ಕರೆಯಲಾಗುತ್ತದೆ. ತಿರುವಾರಿನ ತ್ಯಾಗರಾಜ ದೇವಸ್ಥಾನದಲ್ಲಿ ಹದಿನಾರು ಬಗೆಯ ಗಣಪತಿ ಗುಡಿಗಳಿವೆ.

ಮುತ್ತುಸ್ವಾಮಿ ದೀಕ್ಷಿತರು ಅಲ್ಲಿರುವ ಎಲ್ಲಾ ಗಣಪತಿಗಳ ಬಗೆಗೂ ಒಂದೊಂದು ಕೃತಿ ರಚನೆ ಮಾಡಿದ್ದಾರೆ.

** (ಮಣಿಪ್ರವಾಳ: ಮಲಯಾಳಂ ಮತ್ತು ಸಂಸ್ಕೃತ ಬೆರೆತ ಭಾಷಾ ರಚನೆ. ಮೊದಲಿಗೆ ಮಲಯಾಳಂನಲ್ಲಿ ಇದೇ ರೀತಿಯ ರಚನೆಯಿದ್ದು, ನಂತರ ಮಲಯಾಳಂ ಸಂಸ್ಕೃತದಿಂದ ಸ್ವತಂತ್ರವಾಯ್ತು) **

*  *  *  *  *  *  * * * *  * * * * 

ಕೆ.ಎ.ಸೌಮ್ಯ
ಮೈಸೂರು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)