ಪೌರಾಣಿಕ-ಲೇಖನ : ಹಿಡಿಂಬೆ



ಎಲ್ಲಾ ಕ್ರಿಯೆಗಳಿಗೂ ಒಂದು ಮೂಲ ಕಾರಣ ಅಂತ ಇದ್ದೇ ಇರುತ್ತದೆ. ಎಂದೋ ಸಂಭವಿಸಬೇಕಾದ ಒಂದು ಮಹಾಯುದ್ಧಕ್ಕೆ ಬಹಳ ಪೂರ್ವದಿಂದಲೇ ತಯಾರಿ ಪ್ರಾರಂಭವಾಗಿರುತ್ತದೆ. ಕುರುಕ್ಷೇತ್ರ ಯುದ್ಧ ನಡೆದದ್ದು ಕೌರವ-ಪಾಂಡವರ ನಡುವೆಯಾದರೂ ಅದಕ್ಕೆ ಮುನ್ನುಡಿ ಬರೆದವಳು ಸತ್ಯವತಿ. ಶಂತನು ಸತ್ಯವತಿಯನ್ನು ಕಂಡು ಮೋಹಗೊಳ್ಳದಿದ್ದರೆ, ಸತ್ಯವತಿ ಅವನಿಗೆ ಮದುವೆಯಾಗಲು ಷರತ್ತು ಹಾಕದಿದ್ದರೆ, ಭೀಷ್ಮ ಆಜೀವ ಬ್ರಹ್ಮಚರ್ಯದ ಕಠಿಣ ನಿರ್ಧಾರ ಕೈಗೊಳ್ಳದಿದ್ದರೆ ಮಹಾಭಾರತ ಯುದ್ಧ ನಡೆಯುತ್ತಲೇ ಇರಲಿಲ್ಲ. ಹಾಗೆಯೇ ಆ ಮಹಾಯುದ್ಧದಲ್ಲಿ ಅರ್ಜುನನು ಕರ್ಣನ ಶಕ್ತ್ಯಾಯುಧಕ್ಕೆ ಬಲಿಯಾಗದಂತೆ ತಡೆಯಲು ಪರೋಕ್ಷ ಕಾರಣನಾಗುವವನು ಘಟೋತ್ಕಚ. ಇವನು ಹಿಡಿಂಬೆಯ ಮಗ. 

ಹಿಡಿಂಬೆ ಹುಟ್ಟಿನಿಂದ ರಾಕ್ಷಸಿಯಾದರೂ ಮಾನವರ ಸಕಲ ಗುಣ ಉಳ್ಳವಳು. ಉದಾರಿ, ಪ್ರೇಮಮಯಿ, ವೇದವ್ಯಾಸರ ಒಪ್ಪಂದದಂತೆ ತನಗೆ ಮಗ ಹುಟ್ಟುವವರೆಗೆ ಮಾತ್ರವೇ ಭೀಮನನ್ನು ಗಂಡನಾಗಿ ಪಡೆದಿದ್ದರೂ, ಜೀವನ ಪೂರ್ತಿ ಅವನ ನೆನಪಿನಲ್ಲಿಯೇ ಕಳೆಯುತ್ತಾಳೆ. ಆದರ್ಶ ನಾರಿಯಾಗಿ ಗಮನ ಸೆಳೆಯುತ್ತಾಳೆ. ಇದು ರಾಕ್ಷಸರ ಸ್ವಚ್ಚಂದ ಮನೋಭಾವದ ವಿರೋಧಾಭಾಸವಾಗಿ ಕಂಡು ಬರುತ್ತದೆ. ಎಲ್ಲೋ ನಿಮಿತ್ತವಾಗಿ ಬರುವ ಹಿಡಿಂಬೆ ಭೀಮ ಅವಳಿಂದ ದೂರಾದಾಗ ಓದುಗರ ಮನಸ್ಸಿನಿಂದಲೂ ಮರೆಯಾಗುತ್ತಾಳೆ. 

ಪಂಚ ಪಾಂಡವರು ತಮ್ಮ ತಾಯಿ ಕುಂತಿಯೊಂದಿಗೆ ಅರಗಿನ ಅರಮನೆಯ ಗುಪ್ತದ್ವಾರದಿಂದ ತಪ್ಪಿಸಿಕೊಂಡು ರಾತ್ರೋ ರಾತ್ರಿ ಕಾಡಿನಲ್ಲಿ ನಡೆಯುತ್ತಾ ಮುನ್ನಡೆಯುತ್ತಾರೆ. ತನ್ನ ತಾಯಿ, ಅಣ್ಣ, ತಮ್ಮಂದಿರು ನಡೆದು ನಡೆದು ಸೋತಾಗ ಭೀಮ ತಾನೊಬ್ಬನೇ ಅವರನ್ನು ಹೆಗಲ ಮೇಲೆ ಹೊತ್ತು ನಡೆಯುತ್ತಾನೆ. ಹೀಗೆ ನಡೆದು ನಡೆದು ದಟ್ಟವಾದ ಘೋರ ಕಾನನವೊಂದನ್ನು ಪ್ರವೇಶಿಸುತ್ತಾರೆ. ಮುಂದೆ ನಡೆಯುವುದು ಅಸಾಧ್ಯ ಎನ್ನಿಸಿದಾಗ ಭೀಮ ತಾಯಿ ಮತ್ತು ಸಹೋದರರಿಗೆ ಮಲಗಲು ಅಣಿ ಮಾಡಿಕೊಟ್ಟು ತಾನು ಅವರನ್ನು ಕಾವಲು ಕಾಯುತ್ತಾ ಕೂರುತ್ತಾನೆ. 

ಆ ಕಾಡು ಮಹಾರಾಕ್ಷಸನಾದ ಹಿಡಿಂಬಾಸುರನ ವನವಾಗಿರುತ್ತದೆ. ಪಾಂಡವರು ಆ ಕಾಡನ್ನು ಪ್ರವೇಶಿಸಿದಾಗ ಹಿಡಿಂಬನಿಗೆ ಮಾನವರ ವಾಸನೆ ಹೊಡೆಯುತ್ತದೆ. ತನ್ನ ತಂಗಿಯಾದ ಹಿಡಿಂಬೆಯನ್ನು ಕರೆದು ‘ಒಳ್ಳೆಯ ನರಮಾಂಸ ಸಿಗುವ ಹಾಗಿದೆ. ಆ ಮನುಷ್ಯರನ್ನು ಹೊಡೆದು ಇಲ್ಲಿಗೆ ತಾ, ಭರ್ಜರಿ ಭೋಜನ ಮಾಡೋಣ’ ಎಂದು ಅವಳನ್ನು ಪಾಂಡವರಲ್ಲಿಗೆ ಅಟ್ಟುತ್ತಾನೆ. ಹಿಡಿಂಬೆ ಆ ವಾಸನೆಯನ್ನೇ ಹಿಂಬಾಲಿಸಿ ಬಂದಾಗ ಮಲಗಿರುವ ಐವರು, ಅವರನ್ನು ಕಾಯುತ್ತಾ ಕುಳಿತಿರುವ ಭೀಮ ಕಣ್ಣಿಗೆ ಬೀಳುತ್ತಾರೆ. 

ಅವಳು ಭೀಮನನ್ನು ಕಂಡೊಡನೆ ಅವನ ಚೆಲುವಿಗೆ ಮನಸೋಲುತ್ತಾಳೆ. ಅರಗಿನ ಮನೆಯಿಂದ ತಪ್ಪಿಸಿಕೊಂಡು ಬಂದದ್ದು, ಎಲ್ಲರನ್ನೂ ಹೊತ್ತು ಬಂದ ಆಯಾಸ, ಈಗ ತಾನು ನಿದ್ರಿಸದೇ ಎಲ್ಲರನ್ನೂ ಕಾಯುತ್ತಾ ನಿದ್ದೆಯನ್ನು ತಡೆದು ಕೆಂಪಾಗಿರುವ ಕಣ್ಣುಗಳು, ಕೆದರಿರುವ ತಲೆ.. ಇವೆಲ್ಲವುಗಳಿಂದ ಭೀಮ ಹಿಡಿಂಬೆಯ ಕಣ್ಣಿಗೆ ರಾಕ್ಷಸನ ಹಾಗೆ ಕಂಡಿರಬೇಕು. ಹಾಗಾಗಿ ಇವನನ್ನು ಮದುವೆ ಮಾಡಿಕೊಳ್ಳಬೇಕೆಂದು ಬಯಸುತ್ತಾಳೆ. ತನ್ನ ಅಣ್ಣ ಬೇಕಿದ್ದರೆ ಉಳಿದ ಐವರನ್ನು ತಿನ್ನಲಿ, ಇವನು ನನಗೆ ಬೇಕು ಎಂದು ತನ್ನ ರೂಪವನ್ನು ಮಾನವ ಕುಲದ ಸುಂದರ ಕನ್ಯೆಯಂತೆ ಬದಲಿಸಿ ಭೀಮನ ಹಿಂದೆ ಮುಂದೆ ಸುಳಿದಾಡುತ್ತಾಳೆ. 

ಭೀಮನಿಗೆ ಆಕೆಯ ಮೇಲೆ ಗಮನವಿಲ್ಲ. ಅವನ ಗಮನವೆಲ್ಲಾ ತನ್ನ ತಾಯಿ-ಸಹೋದರರನ್ನು ಕಾಪಾಡುವುದೇ ಆಗಿದೆ. ಅವನನ್ನು ಸೆಳೆಯಲು ವಿಫಲಳಾದ ಹಿಡಿಂಬೆ ಕೊನೆಗೆ ತಾನಾಗಿಯೇ ಅವನ ಬಳಿ ಬಂದು “ಈ ಮಹಾರಣ್ಯಕ್ಕೆ ಬರುವುದು ತುಂಬಾ ಅಪಾಯಕಾರಿ. ಇದು ನನ್ನ ಅಣ್ಣನಾದ ಹಿಡಿಂಬನ ವನ. ಇಲ್ಲಿ ಬಂದವರು ಯಾರೂ ತಿರುಗಿ ಹೋಗುವುದಿಲ್ಲ. ದೇವತೆಗಳೂ ಸಹ ಇಲ್ಲಿಗೆ ಬರಲು ಹೆದರುತ್ತಾರೆ. ಆದರೆ ನಾನು ನಿನ್ನನ್ನು ಮೆಚ್ಚಿದ್ದೇನೆ. ನೀನು ನನ್ನ ಮದುವೆಯಾಗು. ಉಳಿದವರನ್ನು ಬೇಕಾದರೆ ನನ್ನ ಅಣ್ಣ ತಿಂದು ಹಾಕಲಿ. ನಾವಿಬ್ಬರೂ ಓಡಿ ಹೋಗೋಣ” ಎಂದು ಕೇಳುತ್ತಾಳೆ. 

ಅಷ್ಟರಲ್ಲಿ ತಂಗಿ ಏಕೆ ತಡ ಮಾಡಿದಳೆಂದು ನೋಡಲು ಹಿಡಿಂಬನೇ ಅಲ್ಲಿಗೆ ಬರುತ್ತಾನೆ. ವಿಚಿತ್ರ ನೋಡಿ. ಹಿಡಿಂಬನೂ ಹಸಿವಿನಿಂದ ಕಂಗೆಟ್ಟಿದ್ದಾನೆ. ಭೀಮನೂ ತನ್ನವರನ್ನು ಕಾಯಲು ಹಸಿವು-ನಿದ್ರೆ ಇಲ್ಲದೇ ಕಂಗೆಟ್ಟಿದ್ದಾನೆ. ಇತ್ತ ಕಡೆ ಹಿಡಿಂಬೆಯದೂ ಅದೇ ಪರಿಸ್ಥಿತಿಯಾದರೂ ಅವಳ ಹಸಿವು ಬೇರೆ ರೀತಿಯದು. ಕೊನೆಗೆ ಭೀಮ ಹಿಡಿಂಬನನ್ನು ಕೊಂದು ಹಾಕುತ್ತಾನೆ. 

ಆದರೆ ಭೀಮ ತನ್ನಣ್ಣನನ್ನು ಕೊಂದು ಹಾಕಿದನೆಂದು ಹಿಡಿಂಬೆಗೆ ಭೀಮನ ಮೇಲೆ ಕೋಪ ಬರುವುದಿಲ್ಲ. ಬದಲಾಗಿ ತನ್ನನ್ನು ಭೀಮ ವರಿಸುವಂತೆ ಮಾಡಲು ಕುಂತಿ ಮತ್ತು ಪಾಂಡವರನ್ನು ಕೇಳಿಕೊಳ್ಳುತ್ತಾಳೆ. ಆದರೆ ಭೀಮ ಯಾರ ಮಾತಿಗೂ ಹಿಡಿಂಬೆಯನ್ನು ಮದುವೆಯಾಗಲು ಒಪ್ಪುವುದಿಲ್ಲ. ಒಂದು ವೇಳೆ ಅವನು ಒಪ್ಪದೇ ಇದ್ದಿದ್ದರೆ ಮುಂದೆ ಘಟೋತ್ಕಚನ ಜನ್ಮವಾಗದೇ ಮಹಾಭಾರತ ಯುದ್ಧದಲ್ಲಿ ನಡೆಯಬೇಕಾಗಿದ್ದ ಒಂದು ಮಹೋನ್ನತ ಉದ್ದೇಶವೇ ನೆರವೇರದೇ ಹೋಗುವಂತಾಗುತ್ತಿತ್ತು. ಆದರೆ ವಿಧಿ ಲಿಖಿತವನ್ನು ತಪ್ಪಿಸಿವವರು ಯಾರು? ಮಹರ್ಷಿ ವೇದವ್ಯಾಸರೇ ಅಲ್ಲಿಗೆ ಆಗಮಿಸಿ ‘ಒಬ್ಬ ಮಗನಾಗುವವರೆಗೆ ನೀನು ಹಿಡಿಂಬೆಯೊಡನಿರು ಸಾಕು’ ಎಂದು ಹೇಳಿ ಭೀಮನನ್ನು ಒಪ್ಪಿಸುತ್ತಾರೆ. 

ಘಟೋತ್ಕಚ ಹುಟ್ಟುವವರೆಗೂ ಅವಳೊಡನಿದ್ದ ಭೀಮ ನಂತರ ತನ್ನ ತಾಯಿ ಮತ್ತು ಸಹೋದರರೊಂದಿಗೆ ಅಲ್ಲಿಂದ ಹೊರಟು ಬಿಡುತ್ತಾನೆ. ನಂತರ ತನಗೆ ಹಿಡಿಂಬೆ ಎಂಬ ಹೆಂಡತಿ ಇದ್ದಳು ಎಂಬುದನ್ನೇ ಮರೆತಂತೆ ಇದ್ದು ಬಿಡುತ್ತಾನೆ. ಅವನಿಗೆ ತನ್ನ ಹೆಂಡತಿ ಮತ್ತು ಮಗನ ನೆನಪಾಗುವುದು ಮಹಾಭಾರತ ಯುದ್ಧದ ಸಮಯದಲ್ಲೇ. ಆಗ ಹಿಡಿಂಬೆ ಸ್ವಲ್ಪವೂ ಬೇಸರಿಸದೇ ತನ್ನ ಜೀವಕ್ಕೆ ಜೀವವಾಗಿದ್ದ ಮಗನನ್ನು ಭೀಮನೊಡನೆ ಕಳಿಸಿಕೊಡುತ್ತಾಳೆ. ರಣರಂಗದಲ್ಲಿ ಘಟೋತ್ಕಚ ಕರ್ಣನ ಶಕ್ತ್ಯಾಯುಧಕ್ಕೆ ಬಲಿಯಾಗಿ ತನ್ನ ಜನ್ಮ ಸಾರ್ಥಕ ಪಡಿಸಿಕೊಳ್ಳುತ್ತಾನೆ. 

ಹಿಡಿಂಬಿ ರಾಕ್ಷಸಿಯಾದರೂ ಅವಳು ಮಾನಸಿಕವಾಗಿ ಮನುಷ್ಯಳಾಗಿ ನಮ್ಮನ್ನು ಕಾಡುತ್ತಾಳೆ. ಅವಳ ಪಾತ್ರ ಬಹಳ ಚಿಕ್ಕದಾದರೂ ತುಂಬಾ ಪ್ರಭಾವಕಾರಿಯಾಗಿದೆ. ಅವಳು ರಾಜಕುಮಾರಿ ಅಲ್ಲದಿರಬಹುದು. ಆದರೆ ಕೌರವರ ಎದೆ ನಡುಗಿಸುವಂತಹ ಮಗನನ್ನು ಹೆತ್ತು, ಕುರುಕ್ಷೇತ್ರ ಯುದ್ಧಕ್ಕೇ ಮಹತ್ತರ ತಿರುವು ನೀಡಬಲ್ಲ ಘಟನೆಗೆ ಸಾಕ್ಷಿಯಾಗುತ್ತಾಳೆ. ಮಹಾಭಾರತವೆಂಬ ಧರ್ಮ ಯುದ್ಧದಲ್ಲಿ ಎಲ್ಲರ ಹಾಗೆ ಹಿಡಿಂಬೆಯೂ ನಿಮಿತ್ತ ಮಾತ್ರವಾಗುತ್ತಾಳೆ. ನಂತರ ತೆರೆಗೆ ಸರಿಯುತ್ತಾಳೆ. 

*      *      *      *      *      *      *

ಕೆ.ಎ.ಸೌಮ್ಯ
ಮೈಸೂರು
prerana magazine on Jan 2014


ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)