ಪೌರಾಣಿಕ-ಲೇಖನ : shoorpanakhi

     
ರಾಮಾಯಣದ ಎಲ್ಲಾ ಘಟನೆಗಳಿಗೂ ಮೂ¯ ಕಾರಣರಾದವರು ಇಬ್ಬರು. ಒಬ್ಬಳು ರಾಮನನ್ನು ಕಾಡಿಗಟ್ಟಿದ ಕೈಕೇಯಿಯಾದರೆ ಮತ್ತೊಬ್ಬಳು ಸೀತಾಪಹರಣಕ್ಕೆ ಕಾರಣಳಾದ ಶೂರ್ಪನಖಿ. ಶೂರ್ಪನಖಿ ಲಂಕಾಧಿಪತಿ ರಾವಣನ ತಂಗಿ. ರಾಮಾಯಣದ ಅನುಸಾರ ಶೂರ್ಪನಖಿಗೆ ಮದುವೆಯಾಗಿರುತ್ತದೆ. ಆದರೆ ಅವಳ ಗಂಡನನ್ನು ರಾವಣನೇ ಕೊಲ್ಲಿಸಿರುತ್ತಾನೆ. ಹಾಗಾಗಿ ಅಣ್ಣನ ಮೇಲಿನ ಕೋಪದಿಂದ ದಂಡಕಾರಣ್ಯದಲ್ಲಿ ತಿರುಗುತ್ತಿರುತ್ತಾಳೆ.

ಹೀಗೆ ಅರಣ್ಯದಲ್ಲಿ ತಿರುಗಾಡುತ್ತಿದ್ದಾಗ ಪಂಚವಟಿಯಲ್ಲಿ ಕಂಡ ರಾಮನಿಗೆ ಮನಸೋಲುತ್ತಾಳೆ ಶೂರ್ಪನಖಿ. ಆದರೆ ತನ್ನ ಮನದಾಸೆಯನ್ನು ರಾಮನಲ್ಲಿ ಹೇಳಿ. ನಂತರ ಆ ಬಯಕೆಯು ಕೈಗೂಡದೆ ತನ್ನ ಕಿವಿ-ಮೂಗು ಕಳೆದುಕೊಳ್ಳುತ್ತಾಳೆ. ಆದ ಅಪಮಾನ ತಾಳಲಾಗದೇ ಈ ಬಗ್ಗೆ ತನ್ನ ಅಣ್ಣ ಖರಾಸುರನಿಗೆ ದೂರು ಕೊಡುತ್ತಾಳೆ. ಖರಾಸುರನು ರಾಮನೊಂದಿಗೆ ಯುದ್ಧ ಮಾಡಿ ಮಡಿಯುತ್ತಾನೆ. ನಂತರ ಶೂರ್ಪನಖಿಯು ಲಂಕೆಯಲ್ಲಿರುವ ತನ್ನ ಅಣ್ಣ ರಾವಣನಲ್ಲಿಗೆ ದೂರು ಕೊಡಲು ಹೋದವಳು, ಸೀತೆಯ ಗುಣ ಮತ್ತು ಸೌಂದರ್ಯವನ್ನು ಉತ್ಪ್ರೇಕ್ಷೆ ಮಾಡಿ ಹೇಳಿ ರಾವಣನು ಸೀತೆಯನ್ನು ಅಪಹರಿಸುವಂತೆ ಮಾಡುತ್ತಾಳೆ. ಇದು ಮುಂದೆ ರಾಮ-ರಾವಣರ ಯುದ್ಧದಲ್ಲಿ ಕೊನೆಯಾಗುತ್ತದೆ.


ಕಾಡಿನಲ್ಲಿ ತಿರುಗಾಡುತ್ತಿದ್ದಾಗ ಶೂರ್ಪನಖಿ ರಾಮನನ್ನು ಕಂಡು ಇಷ್ಟ ಪಟ್ಟದ್ದು ತಪ್ಪಲ್ಲ. ಹೆಣ್ಣು-ಗಂಡುಗಳು ಭಿನ್ನಲಿಂಗಿಗಳನ್ನು ನೋಡುತ್ತಿದ್ದಂತೆಯೇ ಆಕರ್ಷಣೆಗೊಳಗಾಗುವುದು ಸಹಜ. ಆದರೆ ಪ್ರೀತಿಸಲು ಅಥವಾ ಪ್ರೇಮಿಸಲು ಅವರೂ ತಮ್ಮನ್ನು ಇಷ್ಟಪಡಬೇಕು ಎನ್ನುವುದು ಅಷ್ಟೇ ಅಗತ್ಯ. ಅದರ ಅರಿವಿಲ್ಲದ ಶೂರ್ಪನಖಿಯು ಅರಿತೋ ಅರಿಯದೆಯೋ ಕೆಲವು ತಪ್ಪುಗಳನ್ನು ಮಾಡಿದ್ದಾಳೆ.

ಮೊದಲು ಶೂರ್ಪನಖಿಯು ಶ್ರೀರಾಮಚಂದ್ರನಲ್ಲಿ ತನ್ನ ಪ್ರಣಯ ನಿವೇದನೆ ಮಾಡಿಕೊಂಡು “ಸೀತೆಯಂತಹ ಕುರೂಪಿಯನ್ನು ಏಕೆ ಕಟ್ಟಿಕೊಂಡಿರುವೆ? ಅದರ ಬದಲು ಸುಂದರಿಯೂ ತರುಣಿಯೂ ಆದ ನನ್ನನ್ನು ವರಿಸು” ಎಂದು ಕೇಳಿಕೊಳ್ಳುತ್ತಾಳೆ. ಅವಳ ಈ ಮಾತಿನಲ್ಲಿ ಸೀತೆಯನ್ನು ಕುರಿತು ಅಗಾಧವಾದ ಮಾತ್ಸರ್ಯ ಪ್ರಕಟವಾಗುತ್ತದೆ. ಅದನ್ನರಿತ ರಾಮ ಒಮ್ಮೆಗೇ ಬೇಸರಿಸದೇ, ಕೋಪಿಸಿಕೊಳ್ಳದೇ ಮೃದುವಾಗಿಯೇ ಆಕೆಯ ಮಾತನ್ನು ನಿರಾಕರಿಸಿ “ತನಗೆ ಈಗಾಗಲೇ ಪ್ರೀತಿಸುವ ಹೆಂಡತಿ ಇದ್ದಾಳೆ, ಲಕ್ಷ್ಮಣನಲ್ಲಿ ವಿಚಾರಿಸಿ ನೋಡು” ಎಂದಾಗ ಶೂರ್ಪನಖಿ ಲಕ್ಷ್ಮಣನಲ್ಲಿಗೆ ಓಡುತ್ತಾಳೆ. ಇದು ಅವಳು ಮಾಡುವ ಮೊದಲನೇ ತಪ್ಪು. ಇದರಿಂದ ಅವಳದ್ದು ನಿಜವಾದ ಪ್ರೇಮವಲ್ಲ, ಕೇವಲ ಕಾಮಾಂಧತೆ ಎಂದು ಗೊತ್ತಾಗುತ್ತದೆ. ನಂತರ ಲಕ್ಷ್ಮಣನೂ ತನ್ನನ್ನು ವರಿಸಲು ಒಪ್ಪದಿದ್ದಾಗ ಇದಕ್ಕೆಲ್ಲಾ ಕಾರಣ ಸೀತೆ ಎಂದು ಸೀತೆಯನ್ನು ಹುರಿದು ಮುಕ್ಕಲು ಮುನ್ನುಗ್ಗುತ್ತಾಳೆ. ಆಗ ರಾಮನ ಆಜ್ಞೆಯ ಅನುಸಾರವಾಗಿ ಲಕ್ಷ್ಮಣನು ಶೂರ್ಪನಖಿಯ ಮೂಗು ಮತ್ತು ಕಿವಿಯನ್ನು ಕತ್ತರಿಸಿ ಬಿಟ್ಟು ಬಿಡುತ್ತಾನೆ. ಅವಳ ಪಾಪಕ್ಕೆ ತಕ್ಕ ಶಿಕ್ಷೆಯಾದ ಹಾಗೆ ಆಗುತ್ತದೆ.

ಈಗ ರಾಮ ಮಾಡಿದ್ದು ಸರಿಯೇ ಎಂದು ನಮಗನ್ನಿಸಬಹುದು? ಏಕೆಂದರೆ ಪರಮಾತ್ಮನು ತನ್ನ ಭಕ್ತನಿಗೆ ಅಥವಾ ತನ್ನನ್ನು ಬೇಡಿದವರಿಗೆ ಇಲ್ಲ ಎನ್ನದೇ ಇರಲಾರ. ಹೀಗಿರುವಾಗ ರಾಮ ತನ್ನನ್ನು ಬಯಸಿ ಬಂದ ಶೂರ್ಪನಖಿಗೆ ಏಕೆ ಈ ಶಿಕ್ಷೆ ಕೊಟ್ಟ? ತನ್ನ ಆಶ್ರಯಕ್ಕೆ ಬಂದ ಹೆಣ್ಣಿಗೆ ಇಂತಹ ಶಿಕ್ಷೆ ಏಕೆ ಕೊಟ್ಟ?


ಇದಕ್ಕೆ ಹಲವು ಕಾರಣಗಳಿವೆ:

(1) ರಾಮ ಏಕ ಪತ್ನೀ ವ್ರತಸ್ತ.
(2) ತಕ್ಕುದಲ್ಲದ ಸಮಯದಲ್ಲಿ ಶೂರ್ಪನಖಿ ಪ್ರಣಯ ಭಿಕ್ಷೆ ಬೇಡಿದ್ದಳು.
(3) ಅಲ್ಲದೇ ಆ ಸಮಯದಲ್ಲಿ ಶೂರ್ಪನಖಿಯ ನಡತೆಯೂ ಶುದ್ಧವಾಗಿರಲಿಲ್ಲ. ಏಕ ಕಾಲದಲ್ಲಿ ಅವಳು
ರಾಮ-ಲಕ್ಷ್ಮಣ ಇಬ್ಬರ ಮೇಲೆಯೂ ಮೋಹಗೊಂಡಿದ್ದಳು. 

(4) ಸೀತಾದೇವಿಯ ವಿಷಯದಲ್ಲಿ ಮಾತ್ಸರ್ಯವನ್ನು ತಾಳಿ ಅವಳಿಗೆ ಕೇಡನ್ನು ಬಯಸಿದ್ದಳು. 

ಶ್ರೀಕೃಷ್ಣನಿಗೆ ಹದಿನಾರು ಸಾವಿರ ಹೆಂಡತಿಯರಿದ್ದರೂ ಎಲ್ಲರೂ ಒಬ್ಬರೊಟ್ಟಿಗೊಬ್ಬರು ಅನ್ಯೋನ್ಯತೆಯಿಂದಲೇ ಇದ್ದರು. ಸ್ವತಃ ಅವಳ ಅಣ್ಣನಾದ ರಾವಣನಿಗೇ ಅಷ್ಟೊಂದು ಜನ ಹೆಂಡತಿಯರಿದ್ದರೂ ಅವರೆಲ್ಲರೂ ಸವತಿ ಮಾತ್ಸರ್ಯವೇ ಇಲ್ಲದಂತೆ ವರ್ತಿಸುತ್ತಿದ್ದರು. ಆದರೆ ಶೂರ್ಪನಖಿಯ ಪ್ರೀತಿ ಹೀಗಿರಲಿಲ್ಲ. ಅವಳು ರಾಮನನ್ನು ಮನಸಾರೆ ಇಷ್ಟ ಪಟ್ಟಿರಲಿಲ್ಲ ಎನ್ನುವುದು ಒಂದಾದರೆ, ಅವಳು ಒಬ್ಬ ಸವತಿಯನ್ನೂ ಸಹಿಸಿಕೊಳ್ಳುವ ಮನಸ್ಸುಳ್ಳವಳಾಗಿರಲಿಲ್ಲ. ಹಾಗೆಂದೇ ರಾಮ ಮತ್ತು ಲಕ್ಷ್ಮಣ ಇಬ್ಬರೂ ತನ್ನನ್ನು ಒಪ್ಪದಿದ್ದಾಗ ಸೀತೆಯನ್ನು ತಿನ್ನಲು ಹೊರಟಿದ್ದಳು.

ಅದರಿಂದಲೇ ತಾನು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯನ್ನು ಅನುಭವಿಸಿದಳು. ಆದರೆ ಅದನ್ನು ಅರ್ಥ ಮಾಡಿಕೊಳ್ಳದ ಶೂರ್ಪನಖಿಯು ಮೊದಲು ಖರನ ಬಳಿ, ನಂತರ ರಾವಣನ ಬಳಿ ದೂರನ್ನು ತೆಗೆದುಕೊಂಡು ಹೋಗಿ, ರಾವಣನ ಬಳಿ ಸೀತೆಯ ಸೌಂದರ್ಯವನ್ನು ವರ್ಣಿಸಿ ಅವಳ ಅಪಹರಣಕ್ಕೆ ಕಾರಣವಾದಳು.

ಈ ಹಂತದಲ್ಲಿ ಶೂರ್ಪನಖಿ ನಮಗೆ ಮಾರ್ಕೆಟಿಂಗ್ ತಜ್ಞೆಯ ಹಾಗೆ ಕಾಣುತ್ತಾಳೆ. ರಾಮನ ಬಳಿ ಸೀತೆಯನ್ನು “ಕುರೂಪಿ”-ಅವಳನ್ನು ಬಿಟ್ಟು ತನ್ನನ್ನು ಮದುವೆಯಾಗು ಎಂದು ಹೇಳಿದವಳು, ರಾವಣನ ಬಳಿ ಹೇಳುವಾಗ ಸೀತೆಯನ್ನು ಅತಿಲೋಕ “ಸುಂದರಿ”ಯನ್ನಾಗಿ ವರ್ಣಿಸುತ್ತಾಳೆ. ಯಾವ ವಿಷಯವನ್ನು ಯಾರ ಬಳಿ ಹೇಗೆ ಹೇಳಬೇಕೆಂದು ಚೆನ್ನಾಗಿ ತಿಳಿದಿದ್ದಾಳೆ. ಅಥವಾ ಯಾವ ವ್ಯಕ್ತಿಯನ್ನು ಯಾರ ಬಳಿ ಹೇಗೆ ವರ್ಣಿಸಬೇಕೆಂದು ಚೆನ್ನಾಗಿ ತಿಳಿದಿದ್ದಾಳೆ.

ಒಟ್ಟಿನಲ್ಲಿ ಶೂರ್ಪನಖಿಯ ಪಾತ್ರ ರಾಮಾಯಣದ ಅತ್ಯಂತ ಮಹತ್ವದ ಪಾತ್ರವಾಗಿದ್ದು, ರಾಮಾಯಣದ ಕಥೆಯೇ ಇವಳ ಪಾತ್ರದ ಪ್ರವೇಶದ ನಂತರ ಹೊಸ ತಿರುವು ಪಡೆಯುತ್ತದೆ. ರಾಮಾಯಣದ ಮೂಲ ಉದ್ದೇಶವೇ ರಾವಣನ ಸಂಹಾರ ಅಂತ ತಿಳಿದುಕೊಂಡಾಗ ಶೂರ್ಪನಖಿ ಕೇವಲ ಒಂದು ನಿಮಿತ್ತ ಮಾತ್ರವಾಗಿ ಗೋಚರಿಸುತ್ತಾಳೆ. ಆದರೆ ಈ ಉದ್ದೇಶವನ್ನು ಬದಿಗಿಟ್ಟು ನೋಡಿದರೆ ಶೂರ್ಪನಖಿಯಲ್ಲಿ ಒಬ್ಬ ಹೆಣ್ಣಿನ (ಸೀತೆಯ) ಮೇಲಿನ ಅತೀವ ಮಾತ್ಸರ್ಯ, ತಾನು ಬಯಸಿದ್ದು ಸಿಗದಿದ್ದಾಗ ಅವರಿಗೂ ಅವರು ಬಯಸಿದ್ದು ಸಿಗಬಾರದು ಎಂಬ ಹಠಮಾರಿತನ, ಅದನ್ನು ಸಾಧಿಸಿಕೊಳ್ಳುವ ಜಾಣತನ ಎಲ್ಲವೂ ಕಾಣಸಿಗುತ್ತದೆ. ಇಡೀ ರಾಮಾಯಣಕ್ಕೆ ಹೊಸದಿಕ್ಕು ನೀಡಿದವಳಾದರೂ, ನಂತರ ಅವಳ ಪಾತ್ರ ಮಿಂಚಿನಂತೆ ಮರೆಯಾಗಿಬಿಡುತ್ತದೆ.

*      *      *      *      *      *      *      *      *      *      * 
ಕೆ.ಎ.ಸೌಮ್ಯ

ಮೈಸೂರು

(Dec 2013 ಪ್ರೇರಣಾದಲ್ಲಿ ಪ್ರಕಟವಾಗಿದೆ) 
 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)