ಅಮ್ಮನ ದಿನ: published in VK 09/05/2015

         ಅವಳೆಂದರೆ ಎಲ್ಲರಿಗೂ ಇಷ್ಟ.. ಎಲ್ಲರಿಗೂ ಕಷ್ಟ ಬಂದಾಗ ಅವಳೇ ಬೇಕು.. ಮನೆಯಲ್ಲಿ ಏನು ಹುಡುಕಬೇಕಿದ್ದರೂ ಅದಕ್ಕೇ ಅವಳೇ ಸರಿ ಅಂತ ಎಲ್ಲರ ತೀರ್ಮಾನ. ಯಾಕೆಂದರೆ ಎಲ್ಲರ ವಸ್ತುಗಳನ್ನು ಅವಳು ಜೋಪಾನ ಮಾಡಿರುತ್ತಾಳೆ ಅಂತ ಎಲ್ಲರ ನಂಬಿಕೆ. ನಮಗೆ ಶೀತವಾದರೆ ನೆಗಡಿಯಾದರೆ ಅವಳ ಕಷಾಯ ಬೇಕು. ನಮಗೆ ಹೊರಗೆಲ್ಲಾದರೂ ಬೇಸರವಾದರೆ ಅವಳ ಸಮಾಧಾನ ಬೇಕು. ನಮಗೆ ಸಂತೋಷವಾದರೆ ಅವಳ ಪ್ರೋತ್ಸಾಹದ ನುಡಿಗಳು ಬೇಕು.
          ಒಟ್ಟಿನಲ್ಲಿ ನಮಗೆ ಜೀವನದಲ್ಲಿ ಏನೇ ಬರಲಿ ನೋವೇ ಬರಲಿ ನಲಿವೇ ಬರಲಿ ಅದನ್ನ ಅವಳಲ್ಲಿ ಹಂಚ್ಕೊಂಡ್ರೇನೇ ಸಮಾಧಾನ. ನಮಗೆ ಬೇಸರವಾದಾಗ ಅವಳು ಅದನ್ನು ಗಮನಿಸಿ ನಮ್ಮನ್ನು ರಮಿಸಬೇಕು, ಮಳೆ ಬರ್ತಿದ್ದಾಗ ನಮಗೆ ಇಷ್ಟವಾದ ಬೋಂಡಾವನ್ನು ನಾವು ಕೇಳದೇ ಮಾಡಿ ತಂದ್ಕೊಡಬೇಕು, ನಮ್ಮ ಇಷ್ಟ ಕಷ್ಟಗಳನ್ನೆಲ್ಲಾ ಅವಳು ಗಮನಿಸ್ತಾ ಇರಬೇಕು, ಅದಕ್ಕೆ ಸ್ಪಂದಿಸ್ತಾ ಇರ್ಬೇಕು ಅಂತ ಬಯಸ್ತೀವಿ..
          ಆದರೆ......
          ಒಂದು ಕ್ಷಣವಾದರೂ ಅವಳೂ ನಮ್ಮ ಬಗ್ಗೆ ಇದೇ ಥರ ಯೋಚಿಸಿರಬಹುದಲ್ವಾ ಅಂತ ನಾವ್ಯಾಕೆ ಯೋಚಿಸೋಲ್ಲ? ಅವಳೂ ಸಹ ಮಳೆ ಬರ್ತಿದ್ದಾಗ ಮಕ್ಕಳೇ ತನಗೆ ಕಾಫಿ ಮಾಡಿ ತಂದು ಕೊಡಲಿ ಅಂತ ಬಯಸ್ತಿರಬಹುದಲ್ವಾ?  ತನ್ನ ಸ್ವಲ್ಪ ಮುಖ ಸಪ್ಪಗಿದ್ದರೂ ಮಕ್ಕಳೋ ಗಂಡನೋ ಅದನ್ನ ಗಮನಿಸಿ 'ಯಾಕೆ ಸಪ್ಪಗಿದ್ದೀಯ?' ಅಂತ ಕೇಳಲಿ ಅಂತ ಅಂದುಕೊಳ್ತಿರಬಹುದಲ್ವಾ? ಅಥವಾ ಟಿವಿಯಲ್ಲಿ ಅವಳಿಷ್ಟದ ಪ್ರೋಗ್ರಾಮ್ ಬರ್ತಿದ್ದಾಗ 'ನೀನು ನೋಡ್ಕೋ ಅಮ್ಮಾಅಂತ ನನ್ನ ಬಿಡಬಾರದಾ ಅಂತ ಅವಳೂ ಅಂದ್ಕೊತಿರಬಹುದಲ್ವಾ?
          ಹೌದು. ಹಾಗಂತ ನಾವ್ಯಾಕೆ ಯೋಚಿಸೋಲ್ಲ? ಅವಳಿಗೆ ಅವಳದೇ ಆದ ಸಮಯ ಬೇಕು.. ಅವಳಿಗೂ ನಮ್ಮ ರೀತಿ ಏನೇನೋ ಇಷ್ಟಗಳಿರುತ್ತವೆ.. ಅದನ್ನ ಈಡೇರಿಸಿಕೊಳ್ಳಲು ಅವಳನ್ನು ಅವಳ ಪಾಡಿಗೆ ಬಿಡಬೇಕು ಅಂತ ನಮಗೆ ಅನ್ನಿಸೋದೆ ಇಲ್ವಲ್ಲ ಯಾಕೆ?
          ಅವಳು ಈಗ ನಮ್ಮ ಅಮ್ಮ ಆಗಿರಬಹುದು, ಆದರೆ ಮೊದಲು ಅವಳೂ ಒಂದು ಮಗುವಾಗಿಯೇ ಭೂಮಿ ಮೇಲೆ ಹುಟ್ಟಿರುತ್ತಾಳೆ. ಬಾಲ್ಯದಲ್ಲಿ ಅವಳಿಗೂ ಎಲ್ಲರಂತೇ ಅವಳಿಗೂ ಕನಸುಗಳಿರುತ್ತವೆ. ಆಸೆಗಳಿರುತ್ತವೆ. ಆಕಾಂಕ್ಷೆಗಳಿರುತ್ತದೆ. ಅವಳದನ್ನು ಪೂರೈಸಿಕೊಳ್ಳಲು ಪ್ರಯತ್ನ ಪಟ್ಟಿರುತ್ತಾಳೆ. ಆದರೆ ಮದುವೆಯಾದ ನಂತರ ತನ್ನ ಆಸೆ-ಕನಸುಗಳನ್ನೆಲ್ಲಾ ಬಿಟ್ಟು ಗಂಡ-ಮಕ್ಕಳ ಸೇವೆಯಲ್ಲಿಯೇ ಸುಖ ಕಾಣುತ್ತಿರುತ್ತಾಳೆ.
          ಹಿಂದೆಲ್ಲಾ ಹೆಣ್ಣು ಮಕ್ಕಳಿಗೆ ತಮಗೇ ಅಂತ ಕೆಲವು ಸಮಯ ಮೀಸಲಿರುತ್ತಿತ್ತು. ಇದೇನಪ್ಪಾ? ಹೆಣ್ಣುಮಕ್ಕಳಿಗೆ ಸಮಯ ಮೀಸಲಿಡುವುದು ಯಾವ ನಾಗರಿಕತೆಯೋ ಅಂತ ತಲೆ ಕೆರೆದುಕೊಳ್ಳಬೇಡಿ. ನಾನು ಹೇಳುತ್ತಿರುವುದು ನಮ್ಮ ಅಜ್ಜಿಯರ ಕಾಲದ ಬಗ್ಗೆ. ಆಗಿನ ಹೆಣ್ಣು ಮಕ್ಕಳು ಈಗಿನಂತೆ ವಿದ್ಯಾವಂತರಾಗಿರಲಿಲ್ಲ ನಿಜ. ಆದರೆ ಈಗಿನವರಿಗಿಂತ ಹೆಚ್ಚು ಮನಶಾಂತಿಯಿಂದ ಇರುತ್ತಿದ್ದರು.
          ದೇವರ ಪೂಜೆ ಮಾಡುವ ಸಮಯ ಸಂಪೂರ್ಣ ಅವಳದ್ದೇ.. ಅಲ್ಲಿ ಅವಳು ದೇವರು ಬಿಟ್ಟರೆ ಮತ್ತೊಬ್ಬರಿಲ್ಲ.. ತಮ್ಮ ಗೋಳನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದವರು ಈಗ ದೇವರ ಮುಂದೆ ಕುಳಿತು, ದೇವರು ಯಾರಿಗಾದರೂ ಚಾಡಿ ಹೇಳುತ್ತಾನೆಂಬ ಭಯವಿಲ್ಲದೇ ಎಲ್ಲವನ್ನೂ ಮುಕ್ತವಾಗಿ ಅಭಿವ್ಯಕ್ತಿಸಬಹುದಿತ್ತು. ಅಥವಾ ಬಟ್ಟೆ ಒಗೆಯಲು ಒಬ್ಬಂಟಿಯಾಗಿ ಕೆರೆಗೆ ಹೋದಾಗ ಬಟ್ಟೆ ಒಗೆಯುತ್ತಾ ತನ್ನ ಬಗ್ಗೆಯೇ ಆತ್ಮಾವಲೋಕನ ಮಾಡಿಕೊಳ್ಳಬಹುದಿತ್ತು. ತನ್ನ ಜೊತೆಗೆ ಬಂದಿರುವವರ ಜೊತೆಗೆ ತನಗಿಷ್ಟವಾದ ವಿಷಯದ ಬಗ್ಗೆ ಮಾತನಾಡುತ್ತಾ ತನ್ನ ನೋವನ್ನು ಮರೆಯಬಹುದಿತ್ತು. ಅಡುಗೆಮನೆಯಲ್ಲಿ ರೊಟ್ಟಿ ಬಡಿಯುತ್ತಿರುವಾಗಲೋ ದೋಸೆ ಹುಯ್ಯುತ್ತಿರುವಾಗಲೋ ಸಿಗುತ್ತಿದ್ದ ಅಗಾಧವಾದ ಸಮಯದಲ್ಲಿ ಅವಳು ತನಗಿಷ್ಟ ಬಂದ ಬಗ್ಗೆ ಯೋಚಿಸುತ್ತಾ ಮೈ ಮರೆಯಬಹುದಿತ್ತು.
          ಆದರೆ ಕೂಡು ಕುಟುಂಬಗಳು ಕಣ್ಮರೆಯಾಗಿ ಎಲ್ಲರೂ ಅವರವರದೇ ಮನೆ ಮಾಡಿಕೊಂಡ ಮೇಲೆ ಮೊದಲ ಹೊಡೆತ ಬಿದ್ದಿರುವುದು ಅವಳಿಗೇ.. ಎಲ್ಲರನ್ನೂ ಎಲ್ಲವನ್ನೂ ಅವಳೇ ಗಮನಿಸಬೇಕು. ಆದರೆ ಅವಳನ್ನು ಗಮನಿಸುವವರು ಯಾರೂ ಇಲ್ಲ. ಎಲ್ಲರ ಬಗ್ಗೆ ಅವಳು ಕೇರ್ ತೆಗೆದುಕೊಳ್ಳಬೇಕು. ಆದರೆ ಅವಳ ಬಗ್ಗೆ ಕೇರ್ ತೆಗೆದುಕೊಳ್ಳುವವರು ಯಾರೂ ಇಲ್ಲ. ಕನಿಷ್ಠ ತನ್ನ ಬಗ್ಗೆ ಚಿಂತಿಸಲೂ ಅವಳಿಗೆ ಪುರಸೊತ್ತಿಲ್ಲ. ಸದಾ ಟೆನ್ಷನ್ ನಲ್ಲಿ ಇರಬೇಕು. ಪ್ರತಿ ನಿತ್ಯದ ಕೆಲಸದಲ್ಲಿ ತಾನ್ಯಾರು ಅಂತಲೇ ಮರೆತು ಹೋಗಿರುತ್ತಾಳೆ ಅವಳು. ತಾನು ಇಂಥವರ ಹೆಂಡತಿ, ಇಂಥವರ ಅಮ್ಮ ಅಂತ ಮಾತ್ರ ನೆನಪಿರುತ್ತದೆಯೇ ಹೊರತು ನಿಜಕ್ಕೂ ತಾನ್ಯಾರು? ತನ್ನಿಷ್ಟಗಳೇನು? ಅಂತ ಮರೆತೇ ಬಿಟ್ಟಿರುತ್ತಾಳೆ.
          ಅವಳಿಗೆ ತಾನ್ಯಾರು ಅಂತ ಕಂಡುಕೊಳ್ಳೋಕ್ಕೆ ನಾವ್ಯಾಕೆ ಸಮಯ ನೀಡಬಾರದು?
          ಪ್ರತಿ ನಿತ್ಯ ಅವಳಿಂದ ಸೇವೆ ಮಾಡಿಸಿಕೊಳ್ಳುವ ನಾವು ಒಂದು ದಿನ ಅವಳನ್ನು ಅವಳ ಪಾಡಿಗೆ ಬಿಟ್ಟರೆ ಅವಳೆಷ್ಟು ಖುಷಿ ಪಡ್ತಾಳೋ? ಸಮಯದಲ್ಲಿ ಅವಳು ತನಗಿಷ್ಟದ ಸೀರಿಯಲ್ ನೋಡುತ್ತಾ ತನ್ನ ನೋವು ಮರೆಯಬಹುದು. ಅದಕ್ಕೆ ನಾವು ಯಾಕೆ ಅವಕಾಶ ಮಾಡಿಕೊಡಬಾರದು? ಅಕ್ಕ ಪಕ್ಕದವರೊಡನೆ ಮಾತನಾಡುತ್ತಾ ತನ್ನ ಖುಷಿಯನ್ನು ಅದರಲ್ಲಿ ಹುಡುಕೊಕೊಳ್ಳಬಹುದು. ಅದಕ್ಕೆ ನಾವ್ಯಾಕೆ ಆಡಿಕೊಳ್ಳಬೇಕು? ಮದುವೆಗೂ ಮೊದಲೇ ಅವಳಿಗೆ ಅದೇನೇನು ಹವ್ಯಾಸವಿತ್ತೋ ಅದನ್ನೆಲ್ಲಾ ಈಗಲೂ ಮುಂದುವರೆಸಲು ಅವಳಿಗೆ ಸಮಯವನ್ಯಾಕೆ ನೀಡಬಾರದು? ಎಲ್ಲಕ್ಕಿಂತಾ ಹೆಚ್ಚಾಗಿ ನಮ್ಮ ನೋವು ದುಃಖ, ಸುಖ ನಲಿವುಗಳನ್ನೆಲ್ಲಾ ತಪ್ಪದೇ ಅವಳಿಗೆ ವರದಿ ಒಪ್ಪಿಸುವ ನಾವು ಒಂದು ದಿನ ಅವಳ ಮಾತನ್ಯಾಕೆ ಸ್ವಲ್ಪ ಹೊತ್ತು ಕೇಳಬಾರದು?
          ಸ್ವಲ್ಪ ಗಂಭೀರವಾಗಿ ಯೋಚಿಸಿ ನೋಡಿ.

**************

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)