Article about Aliens-ಮನುಷ್ಯನೆಂಬ ಅಹಂಕಾರ

ಲೇಖನ: "ಮನುಷ್ಯನೆಂಬ ಅಹಂಕಾರ"

ಭೂಮಿಯಿಂದ ದೂರವಿರುವ ಯಾವುದೋ ಗ್ರಹದಲ್ಲಿ ಜೀವಿಗಳು ಇರುವ ಕುರುಹು ಕಾಣಿಸಿದೆ. ಆ ಕುರುಹು ನೀರಿನಲ್ಲಿ ವಾಸಿಸಬಲ್ಲ ಸೂಕ್ಷ್ಮಾಣುಗಳದ್ದು. ಅಂದರೆ ಈ ಜೀವಿಗಳು ಇನ್ನೂ ಮೊದಲ ಹಂತದಲ್ಲಿವೆ. ಅಲ್ಲದೇ ಇವು ಸ್ವತಂತ್ರವಾಗಿ ಯೋಚಿಸಲಾಗದ ಜೀವಿಗಳ ಗುಂಪು. ಮುಂದೆ ಇವು ಅನೇಕ ಅನೇಕ ಕೋಶ ಜೀವಿಗಳಾಗಿ ಬೆಳೆದು, ಅಲ್ಲಿನ ಪರಸರಕ್ಕೆ ತಕ್ಕ ಪ್ರಾಣಿಗಳಾಗಿ, ನಂತರ ಸ್ವತಂತ್ರವಾಗಿ ಯೋಚಿಸಬಲ್ಲ (ಮಾನವನಂತೆ) ಪ್ರಾಣಿಯಾಗಲು ಬಹಳಷ್ಟು ಸಮಯವಿದೆ.
       
     
ಅಲ್ಲಿಯತನಕ ಆ ಜೀವಿಗಳ ಪಾಡೇನು? ಅದರ ಆಹಾರವೇನು? ಅದರ ನಿದ್ರೆ ಮತ್ತಿತರ ನೈಸರ್ಗಿಕ ಅವಶ್ಯಕತೆಗಳೇನು? ಅದು ಒಂದೇ ಇದ್ದರೆ ಸಂತಾನೋತ್ಪತ್ತಿ ಹೇಗಾಗುತ್ತದೆ. ಅದೆಲ್ಲವೂ ಅತ್ತಗಿರಲಿ... ಆ ಪ್ರಾಣಿ ಅಥವಾ ಮಾನವ ಇರಲು ಮನೆಯಿಲ್ಲದೇ, ಓಡಾಡಲು ಕಾರ್-ಬಸ್ ಇಲ್ಲದೇ ಯಾವ ಮನೋರಂಜನೆಯೂ ಇಲ್ಲದೇ ಹೇಗೆ ಇರಲು ಸಾಧ್ಯ?

ಹಾಗಿದ್ದರೆ........  ಹಾರುವ ತಟ್ಟೆಗಳಲ್ಲಿ ಆಗಾಗ ನಮಗೆ ದರ್ಶನ ಕೊಡುವವರು ಯಾರು???

ನಮ್ಮ ಕಲ್ಪನೆಯಲ್ಲಿ ಏಲಿಯನ್ಸ್ ಎಂದರೆ ಬೇರೆ ಗ್ರಹದ ಜೀವಿಗಳಿಗೆ ಮನುಷ್ಯನಿಗಿಂತಲೂ ತುಂಬಾ ಮುಂದುವರೆದ ಸ್ಥಾನ ಕೊಟ್ಟಿದ್ದೀವಿ. ನಮ್ಮ ಪ್ರಕಾರ ಅವರು ತಂತ್ರಜ್ಞಾನದ ಪರಾಕಾಷ್ಠೆ ತಲುಪಿದವರು. ತಮ್ಮ ಮೆದುಳಿನ ನೂರಕ್ಕೆ ನೂರು ಭಾಗದಷ್ಟು ಶಕ್ತಿಯನ್ನು ಪೂರ್ತಿಯಾಗಿ ಉಪಯೋಗಿಸಿಕೊಂಡವರು. ಒಂದು ರೀತಿಯಲ್ಲಿ ಹೇಳುವುದಾದರೆ ಅವರು ನಮ್ಮ ಪುರಾಣಗಳಲ್ಲಿ ಬರುವ ದೇವರಿಗೆ ಸಮನಾಗಿದ್ದಾರೆ.

ಆದರೆ ಆ ರೀತಿ ಇರುವ ಜೀವಿಗಳು ಅಥವಾ ಒಂದು ಜೀವಿಯೂ ಇನ್ನೂ ನಮ್ಮ ಕಣ್ಣಿಗೆ ಬಿದ್ದಿಲ್ಲ ಯಾಕೆ?

ಹೆಚ್ಚು ಕಡಿಮೆ ನಮ್ಮ ಸೌರವ್ಯೂಹದ ಎಲ್ಲ ಗ್ರಹಗಳ ಮತ್ತು ಅದರ ಚಂದ್ರಗಳ ಪರಿಚಯ ನಮಗಿದೆ. ಇದುವರೆಗೂ ಬೇರೆ ಗ್ರಹಗಳಲ್ಲಿ ಇದೇ ರೀತಿಯಾದ ಏಕಕೋಶೀಯ ಜೀವಿಗಳೋ ಅಥವಾ ಮಂಗಳನಲ್ಲಿ ಕಂಡ ಹಾಗೆ ಎಲ್ಲೋ ಒಂದು ಪ್ರಾಣಿ ಕಂಡಿರುವುದು ಬಿಟ್ಟರೆ ಎಲ್ಲಿಯೂ ನಮ್ಮ ಹಾಗೆ ಗುಂಪುಗುಂಪಾಗಿ ಜೀವಿಸುವ ಪ್ರಾಣಿಯಾಗಲೀ ಅಥವಾ ನೈಸರ್ಗಿಕ ಸಂಪನ್ಮೂಲಗಳನ್ನು ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಮಾರ್ಪಡಿಸಿಕೊಂಡ ಬುದ್ಧಿವಂತ ಜೀವಿಯಾಗಲೀ ಕಂಡು ಬಂದಿಲ್ಲ.

ಯಾರೋ ಎಲ್ಲೋ ಹಾರುವ ತಟ್ಟೆ ಕಂಡರಂತೆ ಅಂತ ಊಹಾಪೋಹಗಳು ಎದ್ದರೂ ಅದಕ್ಕೆ ಆಧಾರವಾಗಲೀ, ಅದನ್ನು ಪ್ರತಿನಿಧಿಸುವ ಚಿತ್ರವಾಗಲೀ ಇರುವುದಿಲ್ಲ. ನಾವು ಚಿಕ್ಕವರಿದ್ದಾಗ ಅಮೆರಿಕಾ ದೇಶದಲ್ಲಿ ಮಾತ್ರ ಹಾರುವ ತಟ್ಟೆ ಕಾಣುವುದು, ಅಲ್ಲಿಗೆ ಮಾತ್ರ ಬೇರೆ ಗ್ರಹದ ಜೀವಿ ಭೇಟಿ ಕೊಡುವುದು ಎಂದು ತಿಳಿದಿದ್ದೆವು. ಅಲ್ಲದೇ ಅಮೆರಿಕಾ ಸಹ ತನ್ನ ದೇಶಕ್ಕೆ ಭೇಟಿ ಕೊಡುವ ಏಲಿಯನ್ಸ್ ಗಳ ವಿವರಗಳನ್ನು ಗುಪ್ತವಾಗಿ ಇಡುವುದರಿಂದ ನಮಗೆ ಏಲಿಯನ್ಸ್ ಹೇಗಿವೆ, ಯಾವ ಬಣ್ಣದಲ್ಲಿವೆ, ಹೇಗೆ ಕಾಣುತ್ತದೆ ಅಂತೆಲ್ಲಾ ಊಹಿಸಿಕೊಳ್ಳುವುದಕ್ಕೆ ಇವತ್ತಿಗೂ ಸಹ ನಮಗೆ ಇಂಗ್ಲೀಷ್ ಸಿನೆಮಾಗಳ ಆಧಾರ ಬೇಕಾಗಿದೆ.

ಯಾವುದೋ ಗ್ರಹದಲ್ಲಿ ಏನೋ ಜೀವಿ ಕಂಡಿತು, ಮತ್ತೆಲ್ಲೋ ಯಾವುದೋ ಜೀವಿ ಇರುವ ಸುಳಿವು ಸಿಕ್ಕಿತು ಎನ್ನುವ ಸುದ್ದಿಗಳಿಂದ ಭೂಮಿಯ ಮೇಲಿನ ಮನುಷ್ಯ ಮಾತ್ರವೇ ಮುಂದುವರೆದಿರುವುದು ಅಂತ ನಮ್ಮ ಬಗ್ಗೆ ಹೆಮ್ಮೆಯುಂಟಾಗುವಂತೆ ಆಗುತ್ತದೆ. ನಮ್ಮನ್ನು ಸಂಪರ್ಕಿಸುಷ್ಟು ಅವರ ತಂತ್ರಜ್ಞಾನ ಬೆಳೆದಿಲ್ಲದಿರಬಹುದು ಅಂತ ಅನ್ನಿಸುತ್ತದೆ. ಈ ಕೃತಕ ಅಭಿಮಾನದಿಂದ ನಮಗೆ ನಿಜವಾಗಿ ಇರುವುದು ಕಾಣಿಸದೇ ಹೋಗಬಹುದು. ನಿಜಕ್ಕೂ ಅನ್ಯ ಗ್ರಹ ಜೀವಿಗಳು ನಮ್ಮ ದೃಷ್ಟಿಗೆ ನಿಲುಕದಷ್ಟು ದೊಡ್ಡವರಾಗಿರಬಹುದು. ಅವರ ಮುಂದೆ ನಾವು ಅಣು ಮಾತ್ರವೇ ಅಗಿರಬಹುದು. ಅವರನ್ನು ಕಂಡು ಹಿಡಿಯುವಲ್ಲಿ ನಾವು ವಿಫಲರಾಗಿರಬಹುದು.

ಈ ಪ್ರಪಂಚದಲ್ಲಿ ನಮ್ಮನ್ನು ಬಿಟ್ಟು ಬೇರೆ ಮುಂದುವರೆದ ಜೀವಿಗಳಿದ್ದಲ್ಲಿ ಅವರು ನಮಗೆ ಉತ್ತರಿಸಲಿ ಅಂತ ನಾವು ಸಂದೇಶ ಕಳಿಸಿರುವುದೇನೋ ನಿಜ. ನಮ್ಮ ಸಂದೇಶ ನಮಗೆ ಗೊತ್ತು. ಆದರೆ ಆ ಸಂದೇಶಕ್ಕೆ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೋ ಇಲ್ಲವೋ ನಮಗೆ ಗೊತ್ತಾಗುತ್ತಿಲ್ಲ. ಅಕಸ್ಮಾತ್ ಅವರು ಸಂದೇಶ ಕಳಿಸಿದ್ದರೂ ನಮಗಿನ್ನೂ ಆ ಸಂದೇಶವನ್ನು ಡಿಕೋಡ್ ಮಾಡಲಾಗಿಲ್ಲ.

ಪ್ರಪಂಚದ ಬೇರೆಡೆ ನಮಗಿಂತ ಮುಂದುವರೆದ ಜೀವಿಗಳಿದ್ದರೆ ಅವರಿನ್ನೂ ನಮ್ಮ ಕಣ್ಣಿಗೆ ಕಾಣಿಸಿಕೊಳ್ಳದೇ ಇರುವದಕ್ಕೆ ವಿಜ್ಞಾನಗಳು ಅನೇಕ ಕಾರಣಗಳನ್ನು ಕೊಡುತ್ತಾರೆ. ಆ ಕಾರಣಗಳಲ್ಲಿ ಒಂದನ್ನು ಗಮನಿಸಿದರೆ ಬೆಚ್ಚಿ ಬೀಳುವಂತಾಗುತ್ತದೆ. ಆ ಕಾರಣವೇನೆಂದರೆ ಅನ್ಯಗ್ರಹ ಜೀವಿಗಳು ನಮ್ಮ ಬಗ್ಗೆ ನಿರ್ಲಕ್ಷ್ಯ ಭಾವನೆ ತಳೆದಿರಬಹುದು ಎಂಬುದು. ಏಕೆಂದರೆ ನಾವು ತಂತ್ರಜ್ಞಾನದಲ್ಲಿ ಬಹಳ ಮುಂದುವರೆದಿದ್ದೇವೆ ಅನ್ನುವ ಹಮ್ಮು ನಮಗಿದೆ. ಎಲ್ಲೋ ಒಂದು ಕಡೆ ಪ್ರಪಂಚದ ಬೇರೆ ಜೀವಿಗಳಿಗಿಂತ ನಾವೇ ಮುಂದುವರೆದಿದ್ದೀವಿ ಅನ್ನುವ ಭಾವವೂ ಇದೆ. ಅಂದಮೇಲೆ ಅತ್ಯಂತ ಬುದ್ಧಿವಂತ ಪ್ರಾಣಿಯಾದ ಮನುಷ್ಯನನ್ನು ಕಂಡು ಕಾಣದ ಯಾವುದೋ ಜೀವಿಗಳು ನಿರ್ಲಕ್ಷ್ಯಿಸುವುದೆಂದರೆ?

ನಿಜಕ್ಕೂ ಮುಂದುವರೆಯುವುದು ಎಂದರೇನು ಎಂಬ ಪರಿಕಲ್ಪನೆಯೇ ನಮಗೆ ಗೊತ್ತಿಲ್ಲ!!!!!

ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿ, ಮತ್ತಷ್ಟು ಯಂತ್ರಗಳನ್ನು ಸೃಷ್ಟಿಸಿ, ನಮ್ಮ ಹಿಡಿತವನ್ನು ಅವುಗಳ ಕೈಲಿ ಕೊಟ್ಟು, ನಾವು ಇನ್ನಷ್ಟು ಸೋಮಾರಿಯಾಗುವುದನ್ನೇ ನಾವು ಮುಂದುವರೆಯುವುದು ಅಂತ ತಿಳಿದಿದ್ದೇವೆ. ನಿಸರ್ಗದಿಂದ ದೂರ ಸರಿಯುತ್ತಾ, ಕೃತಕ ಪರಿಸರದಲ್ಲಿ ವಾಸಿಸುತ್ತಾ, ದೇಹದ ಜೈವಿಕ ಗಡಿಯಾರಕ್ಕೆ ತಕ್ಕಂತೆ ವರ್ತಿಸದೇ, ಇಷ್ಟ ಬಂದದ್ದನ್ನು ಮಾಡುತ್ತಾ, ಅದನ್ನೇ ಸ್ವೇಚ್ಛೆ ಎಂದು ತಿಳಿಯುತ್ತಾ, ನಮಗಿಂತ ಯಾರೂ ಸುಖಿ ಇಲ್ಲ ಎಂಬ ಭ್ರಮೆಯಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಬೇರೆ ಗ್ರಹದ ಮುಂದುವರೆಗೆ ಜೀವಿಗಳು ನಮಗೆ ಕಾಣದಿರುವುದು, ಎಲ್ಲೋ ಏನೋ ಜೀವಿಯ ಕುರುಹು ಪತ್ತೆಯಾಗಿದೆ ಎಂಬ ಸುದ್ದಿ ನಮಗೆ ಆಪ್ಯಾಯಮಾನವಾಗಿ ಕಾಣುತ್ತದೆ. ನಾವೇ ಏಕಮೇವ ಅದ್ವಿತೀಯರು ಎಂಬ ಅಹಂಕಾರ ಮೂಡುವಂತಾಗುತ್ತದೆ.

ಇಷ್ಟಕ್ಕೂ ಅಕಸ್ಮಾತ್ ಮುಂದೊಮ್ಮೆ ಯಾವುದೋ ಗ್ರಹದಲ್ಲಿ ಜೀವಿಗಳು ಗುಂಪಾಗಿ ವಾಸ ಮಾಡುತ್ತಿವೆ ಎಂಬುದು ನಮಗೆ ಗೊತ್ತಾದಾಗ, ಅವರು ಯಾವ ತಂತ್ರಜ್ಞಾನವನ್ನೂ ಬಳಸದೇ ನೈಸರ್ಗಿಕವಾಗಿದ್ದಾರೆ, ಅವರನ್ನು ನಾವು ಬಹಳ ಹಿಂದುಳಿದವರು ಎಂದು ತೀರ್ಮಾನಿಸುವ ಸಾಧ್ಯತೆಗಳಿವೆ. ನಮ್ಮ ಪ್ರಕಾರ ತಂತ್ರಜ್ಞಾನದ ಪರಾಕಾಷ್ಟೆಯೇ ಅಭಿವೃದ್ಧಿಯ ಸೂಚಕ. ಕೇವಲ ಮಾನವರಾಗಿ ದೇಶ-ಜಾತಿಗಳನ್ನು ಮರೆತು ಬದುಕುವ ಕಲ್ಪನೆಯೇ ನಮಗಿಲ್ಲ.

ಆದರೂ ರಾತ್ರಿಯಾಗಸದಲ್ಲಿ ಅಸಂಖ್ಯಾತ ತಾರೆಗಳನ್ನು ನೋಡುವಾಗ ಆಕಾಶದ ಯಾವುದೋ ಮೂಲೆಯಲ್ಲಿ ಯಾರೋ ಒಬ್ಬ ರಾಜಕುಮಾರ ನನಗಾಗಿ ಕಾಯುತ್ತಾ ಕುಳಿತಿರಬಹುದು ಅಂತ ಅನ್ನಿಸುತ್ತದೆ. ಅಜ್ಜಿಯ ಕಥೆಗಳಲ್ಲಿ ಕುದುರೆ ಏರಿ ಬರುತ್ತಿದ್ದ ರಾಜಕುಮಾರ ಈಗ ಹಾರುವ ತಟ್ಟೆಯಲ್ಲಿ ಬರಬಹುದು ಅಂತ ಕಾಯುತ್ತಿದ್ದೇನೆ.

ಆದರೆ... 

ಹಾಗೆ ಬರುವ ರಾಜಕುಮಾರನಿಗೆ ಒಂದು ಕಣ್ಣು, ಎರಡು ಕೊಂಬು ಹಾಗೂ ನಾಲ್ಕು ತಲೆಗಳಿದ್ದರೆ !!!!!!!!!!!!!!!!!!!!

*      *      *    *      *      *      *      *


 -ಕೆ.ಎ.ಸೌಮ್ಯ
Published in manasa April 2016

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)