ಲೇಖನ: "ಪ್ರಿಮಾನಿಷನ್- ಒಂದು ಎಚ್ಚರಿಕೆ" Premonitions- published in manasa


          
ನೀವೊಂದು ಸಿನೆಮಾ ನೋಡಿರುತ್ತೀರಿ. ಕೆಲವು ಗೆಳೆಯರು ಪ್ಯಾರಿಸ್.ಗೆ ಹೋಗಲು ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಅವರಲ್ಲಿ ಒಬ್ಬನಿಗೆ ವಿಮಾನ ಹತ್ತುವ ಮುಂಚೆಯೇ ವಿಮಾನ ಅಪಘಾತಕ್ಕೀಡಾಗಿ ಎಲ್ಲರೂ ಸತ್ತಂತೆ ಕನಸು (ಸುಪ್ತ ಪ್ರಜ್ಞೆಯಲ್ಲಿ) ಕಾಣುತ್ತದೆ. ಅವನು ತನ್ನ ಗೆಳೆಯರನ್ನು ವಿಮಾನ ಹತ್ತದಂತೆ ತಡೆಯಲು ಯತ್ನಿಸುತ್ತಾನೆ

ಯಾರೂ ಅವನ ಮಾತು ನಂಬುವುದಿಲ್ಲ

ಆದರೂ ಅವನ ಕೆಲವು ಗೆಳೆಯರು ಅವನ ಮಾತು ಕೇಳಿ ವಿಮಾನ ಹತ್ತುವುದಿಲ್ಲ. ನಂತರ ಕೆಲವೇ ಸೆಕೆಂಡ್ ಗಳಲ್ಲಿ ಎಲ್ಲರೂ ಕೆಳಗಿನಿಂದ ನೋಡುನೋಡುತ್ತಿದ್ದಂತೆಯೇ ಮೇಲಕ್ಕೇರಿದ ವಿಮಾನದಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಾ ಕೆಳಗೆ ಬೀಳುತ್ತದೆ. ಕಂಡ ಕನಸು ನಿಜವಾಗುತ್ತದೆ.
          
ಇದನ್ನೇ "ಪ್ರಿಮಾನಿಷನ್" ಎನ್ನುವುದು. ಅಂದರೆ ಮುಂದೇನೋ ನಡೆಯಬಾರದ್ದು ನಡೆಯಲಿದೆ ಅಂದರೆ ಯಾವುದೋ ಅಪಾಯ ಕಾದಿದೆ ಎಂದು ನಮ್ಮ ಸುಪ್ತ ಮನಸ್ಸಿಗೆ ಮೊದಲೇ ತಿಳಿಸುವ ಎಚ್ಚರಿಕೆ

ಪ್ರಿಮಾನಿಷನ್ ಸಾಧಾರಣವಾಗಿ ಕನಸಿನಲ್ಲೇ ಕಾಣುವುದಾದರೂ, ಕೆಲವೊಮ್ಮೆ ನಾವು ಎಚ್ಚರವಿದ್ದಾಗಲೂ ನಾವು ಕಾಣಬಹುದಾಗಿದೆ. ಅಂದರೆ ನಾವು ಎಚ್ಚರವಿದ್ದಾಗ ಕಂಡದ್ದನ್ನು, ನಮಗೆ ನಿಜಕ್ಕೂ ಎಚ್ಚರವಾದಾಗ ಕನಸಲ್ಲಿ ಕಂಡಿರಬಹುದು ಎಂದು ಭ್ರಮಿಸುತ್ತೇವೆ.
          
ಪ್ರಿಮಾನಿಷನ್ ಎಂದರೆ ಸಾಧಾರಣ ಕನಸಲ್ಲ

ಮುಂದಾಗಬಹುದಾದ್ದನ್ನು ತಿಳಿಸುವ ಕನಸು. ಆದರೆ ಇದು ಮೊದಲೇ ತಿಳಿದರೂ ಅದು ಸತ್ಯ ಅಂತ ಹೇಳಲು ಯಾವ ಆಧಾರವೂ ಇರುವುದಿಲ್ಲ. ಹೇಳಿದರೂ ಯಾರೂ ನಂಬುವುದೂ ಇಲ್ಲ. ವೈದ್ಯರೂ ಸಹ ನಮ್ಮ ಪ್ರೀತಿಪಾತ್ರ ಬಗ್ಗೆ ನಮಗೆ ಎಚ್ಚರಿಕೆ ಇರೋದ್ರಿಂದ ಅವರಿಗೆ ತೊಂದರೆಯಾದಂತೆ ಕನಸು ಬೀಳುವುದು ಸಾಮಾನ್ಯ ಅಂತ ಹೇಳಿಬಿಡುತ್ತಾರೆ. ನಮಗೂ ಅದು ನಿಜವಿರಬೇಕು ಅಂತನಿಸುತ್ತದೆ.
          
ನಮಗೆ ರೀತಿಯ ಪ್ರಿಮಾನಿಷನ್ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು. ನಿದ್ರೆ ಮಾಡುತ್ತಿದ್ದಾಗ  ಕನಸಿನ ರೂಪದಲ್ಲಿ ಅಥವಾ ಎಚ್ಚರವಿದ್ದಾಗ ಸುಪ್ತ ಮನಸಿನಲ್ಲಿ ಏನೋ ಅಪಾಯವೆಂಬ ಗಂಟೆ ಹೊಡೆಯುತ್ತಾ ಕಾಣಿಸಿಕೊಳ್ಳಬಹುದು. ಅಥವಾ ನಾವು ಏನನ್ನೋ ಬರೆಯುತ್ತಿರುವಾಗ ನಮಗೇ ಅರಿವಿಲ್ಲದೇ ಬೇರೆ ಏನನ್ನೋ ಬರೆದಿರಬಹುದು. "ಪ್ರಿಮಾನಿಷನ್" ಎಲ್ಲರಲ್ಲಿಯೂ ಇರುತ್ತದೆ. ಆದರೆ ಕೆಲವರಿಗಷ್ಟೇ ಅದರ ಅನುಭವ ಕಾಣಸಿಗುತ್ತದೆ.
          

"ಪ್ರಿಮಾನಿಷನ್" ಸಾಮಾನ್ಯವಾಗಿ ಕಾಣಿಸಿಕೊಳ್ಳುವಾಗ ಏನೋ ಒಂದು ರೀತಿಯ ತಳಮಳದ ಫೀಲ್ ಆಗುತ್ತದೆ

ಆಗಲೇ ಬೇಕಲ್ವಾ

ಏನೋ ತೊಂದರೆಯಾಗುತ್ತೆ ಅಂತ ಮೊದಲೇ ಗೊತ್ತಾಗೋಕ್ಕಿಂತಾ ತಳಮಳ ಬೇರೆ ಇದೆಯಾ? ಪ್ಲೇನ್ ಕ್ರಾಶ್ ಥರದ ಪ್ರಿಮಾನಿಷನ್ ಎಲ್ಲೆಡೆಯೂ ಸರ್ವೇ ಸಾಮಾನ್ಯವಾಗಿ ಬಿಟ್ಟಿವೆ. ಸೆಪ್ಟೆಂಬರ್ 11 ಅಮೆರಿಕಾದ ಅವಳಿ ಗೋಪುರದ ದುರಂತ ಘಟನೆ ಒಬ್ಬ ಮಹಿಳೆಗೆ ಮೊದಲೇ ಕಾಣಿಸಿಕೊಂಡಿತ್ತಂತೆ. ಮಹಿಳೆ ತನ್ನ ಕುಟುಂಬದವರೊಡನೆ ಡಿಸ್ನಿಲ್ಯಾಂಡ್ ಗೆ ಪ್ರವಾಸ ಹೋಗಬೇಕೆಂದಿದ್ದವರು, ಎಚ್ಚರಿಕೆಯನ್ನು ಸೀರಿಯಸ್ಸಾಗಿ ತೆಗೆದುಕೊಂಡು ಹೋಗದೇ ಉಳಿದರಂತೆ. ಆದರೆ ಎಲ್ಲರೂ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಕಡಿಮೆ.
          
ಕೆಲವು ಬಾರಿ ಪ್ರಿಮಾನಿಷನ್ ತುಂಬಾ ಸರಳವಾಗಿರುತ್ತದೆ. ಎಷ್ಟು ಸರಳವೆಂದರೆ ನಮಗೆ "ಪ್ರಿಮಾನಿಷನ್" ಅನುಭವ ಆಗಿದೆ ಅಂತ ನಮಗೆ ಗೊತ್ತಾಗುವುದೇ ಇಲ್ಲ. ಅನುಭವ ಹೆಚ್ಚು ಕಡಿಮೆ ಎಲ್ಲರಿಗೂ ಆಗಿರುತ್ತದೆ. ಬೇಕಿದ್ದರೆ ನೆನಪಿಸಿಕೊಳ್ಳಿ. ಯಾರೋ ಫೋನ್ ಮಾಡಿದಾಗ ಪೋನ್ ನೋಡುವ ಮೊದಲೇ ಅದು ಯಾರು ಮಾಡಿರುವುದೆಂದು ನಿಮ್ಮ ಅಂತಃಪ್ರಜ್ಞೆ ಹೇಳಿರುತ್ತದೆ. ಅಥವಾ ಯಾರೋ ನಿಮಗೆ ಗಿಫ್ಟ್ ಕೊಟ್ಟಾಗ ಬಿಚ್ಚಿ ನೋಡುವ ಮೊದಲೇ ಅದರಲ್ಲೇನಿದೆ ಅಂತ ಹೊಳೆದಿರುತ್ತದೆ.
          
ಆದರೆ ನಿಜಕ್ಕೂ ನಾವು ಮುಂದಾಗುವುದನ್ನು ಕಾಣಬಲ್ಲೆವಾ?
          
ನಮಗೆ ಬೀಳುವ ಎಲ್ಲಾ ಕನಸುಗಳೂ ನಿಜವಾಗೋಲ್ಲ. ಹಾಗೆಯೇ ಕೆಲವು ನಿಜವಾಗುವುದೂ ಸುಳ್ಳಲ್ಲ. ಇದೊಂದು ರೀತಿ dejavu ಇದ್ದ ಹಾಗೆ. ಆದರೆ dejavu ಎಂದರೆ ಕಣ್ಮುಂದೆ ನಡೆಯುತ್ತಿರುವುದನ್ನು ಇಂಟರ್ ವೆಲ್ ಥರ ಅರ್ಧ ಮಾತ್ರ ತೋರಿಸಿ, ಮತ್ತೆ ಮೊದಲಿನಿಂದ ತೋರಿಸಿ, ಎರಡು ಬಾರಿ ನೋಡಿದ ಫೀಲ್ ಕೊಡುತ್ತದೆ. ಆಗ ಎರಡನೇ ಬಾರಿ ನೋಡುವಾಗ ಸನ್ನಿವೇಶ ಮೊದಲೇ ನೋಡಿದ ಹಾಗಿದೆಯಲ್ಲ ಎಂಬ ಕಳವಳ ಮೂಡಿಸುತ್ತದೆ. ಆದರೂ ಆಗ ನಮಗೆ ಮುಂದೆ ನಡೆಯುವುದನ್ನು ಮೊದಲೇ ನೋಡಿದ್ದೆ ಎಂಬ ಫೀಲ್ ಬರಲು ಸಾಧ್ಯವಿಲ್ಲ

ಹಾಗಾಗಿ "ಪ್ರಿಮಾನಿಷನ್" ಗೂ, dejavu  ಗೂ ವ್ಯತ್ಯಾಸವಿದೆ.
          

ಆದರೆ ನಿಜಕ್ಕೂ ನಡೆದೇ ಇಲ್ಲದಿರುವುದನ್ನು ಅದು ನಡೆಯುವ ಮೊದಲೇ ನಾವು ಕಾಣಲು ಸಾಧ್ಯವೇ? ನಿಜ ಎಂದು ತುಂಬಾ ಕಡೆ ಸಾಬೀತಾಗಿದೆ. ಆದರೆ ಜನರು ನಂಬುವುದಿಲ್ಲ ಎಂಬ ಕಾರಣದಿಂದ ಯಾರೂ ತಮಗೆ ಕಂಡದ್ದನ್ನು ಯಾರೊಡನೆಯೂ ಹೇಳಲು ಹೋಗುವುದಿಲ್ಲ. ಬೇರೆಯವರ ಮಾತಿರಲಿ ಮನೆಯವರೇ ನಂಬುವುದಿಲ್ಲ. ನಂಬದಿದ್ದರೂ ಚಿಂತೆಯಿಲ್ಲ, ತನಗೆ ಹುಚ್ಚು ಎಂದುಕೊಂಡರೆ ಎಂಬ ಭಯವೂ ಇರುತ್ತದೆ! ಯಾರಾದರೂ ನಂಬಲಿ ಬಿಡಲಿ ಬೈಬಲ್ ಉದ್ದಕ್ಕೂ "ಪ್ರಿಮಾನಿಷನ್" ಅನ್ನು ಕಾಣುತ್ತೇವೆ.
          
ನಮ್ಮ ಮಹಾಭಾರತದ ಪಂಚ ಪಾಂಡವರಲ್ಲಿ ಒಬ್ಬನಾದ ಸಹದೇವನಿಗೆ ಒಂದು ಶಕ್ತಿ ಇತ್ತು ಎಂಬುದು ನಿಮಗೆ ಗೊತ್ತಿದೆಯೋ ಇಲ್ಲವೋ? ಮಹಾಭಾರತದಲ್ಲಿ ಕೃಷ್ಣನಿಗೆ ಬಿಟ್ಟರೆ ಮುಂದಾಗುವುದನ್ನು ಕಾಣುವ ಶಕ್ತಿ ಇದ್ದದ್ದು ಸಹದೇವನಿಗೆ ಮಾತ್ರ. ಅವನಿಗೆ ಜೂಜಿನ ಮನೆಯಲ್ಲಿ ದ್ರೌಪದಿಗಾಗುವ ಅವಮಾನ ಮೊದಲೇ ಗೊತ್ತಿರುತ್ತದೆ. ವನವಾಸದಲ್ಲಿದ್ದಾಗ ಒಮ್ಮೆ ಪಾಂಡವರು ಆಹಾರ ಹುಡುಕಲು ಹೊರಟಾಗ ಇತ್ತ ಜಯದ್ರಥ ಬಂದು ದ್ರೌಪದಿಯನ್ನು ಹೊತ್ತೊಯ್ಯಲು ಯತ್ನಿಸುವುದು ಅವನಿಗೆ ಗೊತ್ತಾಗಿ ತನ್ನ ಸಹೋದರರನ್ನು ವಾಪಸ್ ಕರೆದುಕೊಂಡು ಬರುತ್ತಾನೆ. ಅವನೊಳಗೆ ನಿಜಕ್ಕೂ ಏನು ನಡೆಯಲಿದೆ ಎಂಬುದು ಖಚಿತವಾಗದಿದ್ದರೂ ದ್ರೌಪದಿಯೊಡನೆ ಏನೋ ಕೆಟ್ಟದು ನಡೆಯಲಿದೆ ಎಂಬ ಅಪಾಯದ ಗಂಟೆ ಮೊಳಗಿರಬಹುದು.
          
"ಪ್ರಿಮಾನಿಷನ್" ಅನ್ನು ನಾವು ಸಂಕೇತಗಳಲ್ಲಿಯೂ ಕಾಣಬಹುದು. ಅದನ್ನು ನಾವು ಅರ್ಥಮಾಡಿಕೊಳ್ಳಬೇಕಷ್ಟೇ. ಕೆಲವೊಮ್ಮೆ ನಾವು ಪ್ರಿಮಾನಿಷನ್ ಬಗ್ಗೆಯೇ ಯೋಚಿಸುತ್ತಾ ಮಲಗಿದ್ದರೆ ಅದರ ಬಗ್ಗೆಯೇ ಕನಸು ಬೀಳಬಹುದು. ಆದರೆ ಅದು ಸುಳ್ಳು ಪ್ರಿಮಾನಿಷನ್ ಆಗಿರುತ್ತದೆ. "ಪ್ರಿಮಾನಿಷನ್" ಯಾವಾಗಲೂ ಸಧ್ಯದಲ್ಲೇ ನಡೆಯುವ ಘಟನೆಯ ಬಗ್ಗೆ ಸುಳಿವು ಕೊಡುವುದರಿಂದ ನಮಗೆ "ಪ್ರಿಮಾನಿಷನ್" ಕಂಡ ಒಂದು ದಿನದೊಳಗೆ ಆ ಘಟನೆ ನಡೆಯುತ್ತದೆ. ಒಮ್ಮೊಮ್ಮೆ ನಾವು ಅದನ್ನು ಕಂಡರೂ ವರ್ಷಾನುಗಟ್ಟಲೆ ಆ ಘಟನೆ ನಡೆಯುವುದೂ ಇಲ್ಲ. ಆಗ ಅದನ್ನು ನಾವು ಸುಳ್ಳು "ಪ್ರಿಮಾನಿಷನ್" ಎಂದುಕೊಳ್ಳಬಹುದಾಗಿದೆ.
          
ಮತ್ತೆ ಮೊದಲಿನ ಸಿನೆಮಾಗೆ ಬರೋಣ.
          
ಆ ಸಿನೆಮಾದಲ್ಲಿ ವಿಮಾನ ಹತ್ತದೇ ಉಳಿದ ಗೆಳೆಯರು ತಾವು ಬದುಕಿದೆವು ಎಂದುಕೊಳ್ಳುತ್ತಾರೆ. ಆದರೆ ನಂತರ ಕೆಲವೇ ದಿನಗಳಲ್ಲಿ ಆ ವಿಮಾನ ದುರಂತದಲ್ಲಿ ಉಳಿದ ಎಲ್ಲರೂ ಒಬ್ಬೊಬ್ಬರೇ ಸಾಯುತ್ತಾ ಬರುತ್ತಾರೆ

ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಅವರ ನಂಬಿಕೆ

ಆದರೆ ನಮ್ಮ ಭಾರತೀಯ ನಂಬಿಕೆಯ ಪ್ರಕಾರ ಒಮ್ಮೆ ಒಂದು ದುರಂತದಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯುಸ್ಸು ಅಂದುಕೊಳ್ಳುತ್ತೇವೆ. ಯಾವುದೋ ಕಂಟಕ ಇತ್ತು, ಪರಿಹಾರವಾಯ್ತು, ಇನ್ಮುಂದೆ ಜೀವಕ್ಕೇನೂ ತೊಂದರೆಯಿಲ್ಲ ಎಂದು ನಿರಾಳವಾಗುತ್ತೇವೆ.
          
ಯಾರಿಗೆ ಗೊತ್ತು.. ಇಂದಿನ ನಿಮ್ಮ ಕನಸಿನಲ್ಲಿ "ಪ್ರಿಮಾನಿಷನ್" ಕಾಣಬಹುದು... ಗಮನಿಸಿ!!!!

***************** 
                                                                    -ಕೆ..ಸೌಮ್ಯ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)