Dil Ne Phir Yad Kiya-2016 (Hye Bangalore)



ಮೊದಲ ಬಾರಿ…”

            
ಮದುವೆ ಆಗುವಾಗ ಎಲ್ಲರಿಗೂ ಏನೋ ಒಂದು ರೀತಿಯ ಉತ್ಸಾಹ ಇರುತ್ತದೆ. ಮುಂದಿನ ಜವಾಬ್ದಾರಿಗಳ ಯೋಚನೆ ಯಾರಿಗೂ ಇರೋಲ್ಲ. ಬರೇ ಮದುವೆಯಂದು ಉಡುವ ಬಟ್ಟೆ, ತೊಡುವ ಆಭರಣಗಳ ಕಡೆಯೇ ಗಮನವಿರುತ್ತದೆ

ನಾನೂ ಅಷ್ಟೇ.. 

ಬರೇ ಕನಸು ಕಾಣುತ್ತಾ ಮದುವೆಯಾದವಳು. ಬಹುತೇಕ ನಮ್ಮ ಕನಸುಗಳು ಸಿನೆಮಾಗಳನ್ನು ಅವಲಂಬಿಸಿರುತ್ತದೆ. ಸಿನೆಮಾದಲ್ಲಿ ಎಷ್ಟೋ ಕಷ್ಟಗಳನ್ನು ಅನುಭವಿಸಿ ಹೀರೋ-ಹೀರೋಯಿನ್ ಮದ್ವೆ ಆದ ತಕ್ಷಣ ಶುಭಂ ಅಂತಾರಲ್ಲ.. ಹಾಗೆ ಒಂದ್ಸಲ ಮದ್ವೆ ಆದ್ರೆ ಮುಗೀತು ಅಂತ ತಿಳಿದಿದ್ದವಳು. ಜೊತೆಗೆ ನಮಗೂ ಮದ್ವೆ ಮಾಡಬೇಕು ಅಂತ ಅಂದ್ಕೊಂಡಾಗಿಂದಲೂ ಗಂಡುಗಳನ್ನು ನೋಡಿ ನೋಡಿ ಸಾಕಾಗಿ ಇವನ್ಯಾರೋ ಒಪ್ಪಿರುವುದೇ ನಮಗೆ ಹೆಚ್ಚಾಗಿ ಬೇರೆ ಚಿಂತೆ ಮಾಡಲು ಹೋಗುವುದಿಲ್ಲ.
          
ನನಗೆ ಮದುವೆಯ ಬಿಸಿ ತಾಕಿದ್ದು ಮದುವೆಯಾದ ಒಂದು ವಾರಕ್ಕೆ. ಅಂದು ಮನೆಯಲ್ಲಿ ಚಪ್ಪರ ವಿಸರ್ಜನೆ ಕಾರ್ಯಕ್ರಮವಿತ್ತು. ಮದುವೆಗೆ ಬಂದಿದ್ದ ಬಂಧುಗಳು ಇನ್ನೂ ಇದ್ದರು. ಬೆಳಿಗ್ಗೆ ಸ್ನಾನ ಮಾಡಿದ ಕೂಡಲೇ ಮದುಮಕ್ಕಳನ್ನು ಕರೆದು ಚಪ್ಪರದ ಮುಂದೆ ಕೂರಿಸಿದರು

ಅಲ್ಲಿಯವರೆಗೂ ನನಗೆ ಎಲ್ಲವೂ ಚೆಂದವಿತ್ತು

ಅಲ್ಲಿಂದ ಶುರುವಾಯಿತು. ನನ್ನ ಗಂಡನೇ ಪೂಜೆ ಮಾಡಿಸುತ್ತಿದ್ದುದು. ಹಾಗಾಗಿ ಎಲ್ಲವೂ ಸರಿಯಾಗಿ ಅಣಿ ಮಾಡಿಲ್ಲ, ಕರ್ಪೂರ ತಂದಿಟ್ಟಿಲ್ಲ, ಬತ್ತಿ ನೆನೆಸಿಲ್ಲ, ತೆಂಗಿನಕಾಯಿ ಒಡೆದಿಲ್ಲ ಅಂತ ಎಲ್ಲರನ್ನು ಅತ್ತಿಂದಿತ್ತ ಓಡಾಡಿಸಿಬಿಟ್ಟರು. ನಾನು ಗಾಬರಿಯಿಂದ ಎಲ್ಲರೂ ಮಾಡುತ್ತಿದ್ದ ಗಡಿಬಿಡಿ ನೋಡುತ್ತಿದ್ದೆ.
            
ಅಷ್ಟರಲ್ಲಿ ಮಹರಾಯರು ನನ್ನ ಕಡೆ ತಿರುಗಿಏನು ನೋಡ್ತಾ ಕೂತಿದ್ದೀಯ? ಪೂಜೆ ಶುರು ಮಾಡುಎಂದರು

ಆಗ ಗಿರ್ರನೆ ತಿರುಗಿತು ನೋಡಿ ನನ್ನ ತಲೆ….. 

ಪೂಜೆ ಮಾಡೋಕ್ಕೆ ಬಂದ್ರಲ್ವಾ ಮಾಡೋಕ್ಕೆ? ನಾನು ನಮ್ಮ ಮನೆಯಲ್ಲಿ ತುಂಬಾ ಆಧುನಿಕವಾಗಿ ಬೆಳೆದವಳು. ಪೂಜೆ ಪುನಸ್ಕಾರ ಎಲ್ಲಾ ಅಮ್ಮ ಮಾಡುತ್ತಿದ್ದರು. ನಾನು ಅಟ್ ಲೀಸ್ಟ್ ಮಾಡೋದನ್ನ ನೋಡುತ್ತಲೂ ಇರಲಿಲ್ಲ

ಈಗ ಏಕಾಏಕಿ ಮಾಡು ಅಂದ್ರೆ ಏನು ಮಾಡೋದು

ಕಂಗಾಲಾಗಿ ಅತ್ತಿತ್ತ ನೋಡಿದೆ. ಯಾರೂ ನನ್ನ ಸಹಾಯಕ್ಕೆ ಬರುವ ಹಾಗೆ ಕಾಣ್ಲಿಲ್ಲ. ಯಾವುದೋ ಊಹೆಯ ಮೇಲೆ ಮೊದಲು ಅರಿಸಿನ, ನಂತರ ಕುಂಕುಮ ಹಚ್ಚಿ ಪೂಜೆ ಮಾಡಿದೆ

ನನ್ನ ಗಂಡ ಪೂಜೆ ಮುಗಿಯುವವರೆಗೂ ಹೀಗಾ ಮಾಡೋದು ಅಂತ ಹಾರಾಡ್ತಾನೆ ಇದ್ರು. ನನ್ನ ಕೈ ಕಾಲು ನಡುಗ್ತಾನೆ ಇತ್ತು. ಮನುಷ್ಯನ ಜೊತೆ ಜೀವನ ಪೂರ್ತಿ ಹೇಗಿರೋದಪ್ಪ ಅಂತ ಅನ್ನಿಸ್ತು.
            
ದೇವರಾಣೆ ಹೇಳ್ತೀನಿ.. ಅಂದು ಮೊದಲ ಬಾರಿ ನನಗೆ ಯಾಕಾದರೂ ಮದುವೆಯಾದೆನೋ ಅನ್ನಿಸ್ತು. ಜೊತೆಗೆ ವರ್ಷದಲ್ಲಿ ಎಷ್ಟು ಹಬ್ಬಗಳಿವೆ, ಬದುಕಿರೋ ತನಕ ಎಲ್ಲಾ ಹಬ್ಬಗಳಿಗೂ ಹೀಗೆ ಬೈಸ್ಕೊಳ್ತಾನೆ ಇರಬೇಕಲಪ್ಪ ಅಂತ ಕೂಡ ಅನ್ನಿಸ್ತು.

ಕೆ.ಎ.ಸೌಮ್ಯ
ಮೈಸೂರು
****

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮುದ್ದಣ ಮನೋರಮೆಯ ಸಲ್ಲಾಪ : ರಾಮಾಶ್ವಮೇಧಂ

ಭಾಷೆಯ ಉಗಮ (origin of language) : ಎಂ.ಎ.ಕನ್ನಡ