ಶುಕ್ರಗ್ರಹದ ಜೀವನ- published in Hosa digantha News paper 16.10.2016

ಕವನ: "ಶುಕ್ರಗ್ರಹದ ಜೀವನ"
ಭೂಮಿ ಮೇಲಿದ್ದ ಜನರನ್ನು
ರಾತ್ರೋ ರಾತ್ರಿ ಏಕಾಏಕಿ ಹೊತ್ತೊಯ್ದು
ಶುಕ್ರ ಗ್ರಹಕ್ಕೆ ಎತ್ತಂಗಡಿ ಮಾಡಲಾಯಿತು...
ನಮ್ಮ ಜನರೇನು ಹೆದರುವರೇ?
ಅಲ್ಲಿಯೂ ಅದೇ ಸೂರ್ಯ.. ಅದೇ ನಕ್ಷತ್ರ..
ಅದೇ ಕತ್ತಲು.. ಅದೇ ಆಕಾಶ..
ಚಂದ್ರನಿಲ್ಲ ಅಷ್ಟೇ..

ಹೊಸ ಜೀವನ ಶುರು ಮಾಡಿಯೇ ಬಿಟ್ಟರು..
ಗ್ರಹ ನಕ್ಷತ್ರ ದಿಕ್ಕು ದೆಸೆ ನೋಡಿ
ಹೊಸ ಪಂಚಾಂಗ ಬರೆದೇ ಬಿಟ್ಟರು..

ಇಲ್ಲಿ ಎಲ್ಲವೂ ಹೊಸತಾಗಿರುವುದರಿಂದ
ಎಲ್ಲವನ್ನೂ ಮೊದಲಿನಿಂದಲೇ
ಸರಿಯಾಗಿ ಮಾಡುವ ಅವಕಾಶ ಇರುವುದೆಂದು ಅರಿತರು..
ಭೂಮಿಯ ಮೇಲಿನ ಹಾಗೆ
ಸರಿ ಇಲ್ಲದಿರುವುದನ್ನು ಕೆಡವಿ ಸರಿಪಡಿಸುವ ಬದಲು
ಹೊಸದಾಗಿ ಸರಿಯಾಗಿ ಕಟ್ಟುವುದೇ ಲೇಸೆಂದು ಬಗೆದರು..
ಸಿಕ್ಕ ಅವಕಾಶದಿಂದ ಕುಣಿದರು..

ಪಂಚಾಂಗ ನೋಡುತ್ತಾ ವಾಸ್ತುಶಾಸ್ತ್ರ ಚೂರೂ ಬಿಡದೇ
ಯಾವ ಯಾವ ದಿಕ್ಕಿನಲ್ಲಿ ಏನಿರಬೇಕೋ
ಅಲ್ಲಲ್ಲಿ ಅದನ್ನೇ ನಿಂತು ನಿರ್ಮಿಸಿದರು..
ಪ್ರತಿ ನಿತ್ಯ ಹುಟ್ಟುವ ಸೂರ್ಯನಿಗೆ ನಮಸ್ಕರಿಸಿ
ಮೂಲೆಮೂಲೆಗಳನ್ನು ಗುರುತಿಸಿ
ಮನೆ-ಕಟ್ಟಡ-ಆಸ್ಪತ್ರೆ-ಶಾಲೆ ಕಟ್ಟಿದರು..

ಬಾನಿನಿಂದ ಸೂರ್ಯ ಇವರ ಆರ್ಭಟ ನೋಡಿ ನಗುತ್ತಿದ್ದ..
ಕಾರಣ ಅವನಿಗಷ್ಟೇ ಗೊತ್ತಿತ್ತು..
ಭೂಮಿಯ ಮೇಲಿನ ಜನರಿಗೆ
ಸೂರ್ಯ ಹುಟ್ಟುವುದೇ ಪೂರ್ವ ಮುಳುಗುವುದೇ ಪಶ್ಚಿಮ..
ಆದರೆ ಶುಕ್ರನಲ್ಲಿ ಇದು ಪೂರ್ತಿ ಉಲ್ಟಾ..
ಏಕೆಂದರೆ ಶುಕ್ರ ತಿರುಗುವುದೇ ಭೂಮಿಯ ವಿರುದ್ಧ ದಿಕ್ಕಿನಲ್ಲಿ..

ಪಶ್ಚಿಮವನ್ನೇ ಪೂರ್ವವೆಂದು ತಿಳಿದ ಜನರು
ಪೂರ್ವವನ್ನು ಪಶ್ಚಿಮವೆಂದು ತಿಳಿದರು..
ತಾವು ನಂಬಿದ್ದೇ ಅಂತಿಮ ಎಂದು ಬೀಗಿದರು..
ಅಸಾಧ್ಯವಾದ ಕೆಲಸವನ್ನು ಸೂರ್ಯ ಪಶ್ಚಿಮದಲ್ಲಿ
ಹುಟ್ಟಿದಾಗ ಮಾಡುವೆವು ಎಂದು ಇಲ್ಲಿಯೂ ಆಡಿಕೊಂಡರು..

ಇದನ್ನೆಲ್ಲಾ ನೋಡುತ್ತಿದ್ದ ಸೂರ್ಯ
ಅವರಿಗೆ ಸವಾಲೆಸೆಯುವಂತೆ ಪ್ರತಿದಿನ ಪಶ್ಚಿಮದಲ್ಲಿ ಹುಟ್ಟಿ
ಪೂರ್ವದಲ್ಲಿ ಮುಳುಗುತ್ತಿದ್ದ..
ಮೂಢ ಜನರು ದಿಕ್ಕುದೆಸೆಗಳ ಪರಿವೆಯಿಲ್ಲದೇ
ಕೈ ಮುಗಿಯುತ್ತಲೇ ಇದ್ದರು..

*******************


ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)