"ಜಾಹಿರಾತು ನಿಜವಲ್ಲ"- published in Vishwavani on 13.09.2016

ಲೇಖನ: "ಜಾಹಿರಾತು ನಿಜವಲ್ಲ"

          ಬಣ್ಣ ಬಣ್ಣದ ಜಾಹೀರಾತಿಗೆ ಮರುಳಾಗದವರು ಯಾರು? ನಾವೇ ಎಷ್ಟೋ ಸಲ ನಾವು ನೋಡುವ ಪ್ರೊಗ್ರಾಮಿಗಿಂತಲೂ ಕೆಲವು ಜಾಹೀರಾತುಗಳನ್ನು ನೋಡಲಿಕ್ಕಾಗಿ ಟಿವಿ ಮುಂದೆ ಕೂತಿರುತ್ತೀವಿ ಅಲ್ವಾ? ಆದರೆ ಜಾಹೀರಾತು ಹೇಳುವುದೆಲ್ಲಾ ನಿಜವಾ?

          ಉದಾಹರಣೆಗೆ, ತೀರಾ ಇತ್ತೀಚೆಗಷ್ಟೇ ಗ್ರೀನ್ ಟೀ ಎಂಬ ಪ್ರಾಡಕ್ಟ್ ಬಗ್ಗೆ ಟಿವಿಯಲ್ಲಿ ನಾವೆಲ್ಲರೂ  ನೋಡ್ತಿದ್ದೀವಿ. ಇದು ಕೊಬ್ಬು ಕರಗಿಸುತ್ತೆ ಅನ್ನುವುದೊಂದೇ ಪಾಯಿಂಟ್ ಸಾಕು ಜನರು ಹಳ್ಳದಲ್ಲಿ ಬೀಳೋಕ್ಕೆ. ಎಷ್ಟೋ ಜನ ದಿಢೀರ್ ಅಂತ ತಮ್ಮ ಅಭ್ಯಾಸವನ್ನು ಗ್ರೀನ್ ಟೀಗೆ ಬದಲಾಯಿಸಿಕೊಂಡು ಇನ್ನು ನಾವು ಸೇಫ್ ಎಂದುಕೊಂಡರು. ಅವರಿನ್ನೂ ಉಸಿರು ಬಿಟ್ಟಿಲ್ಲ, ಆಗಲೇ ಬಂತು ಬೆಚ್ಚಿ ಬೀಳಿಸುವಂತಹ ಸುದ್ದಿ ಬಂತು ಪತ್ರಿಕೆಗಳಲ್ಲಿ. ಗ್ರೀನ್ ಟೀಯಲ್ಲಿ ಕೇವಲ ಒಳ್ಳೆಯ ಅಂಶಗಳು ಮಾತ್ರವಲ್ಲ, ಕೆಟ್ಟ ಅಂಶಗಳೂ ಸಹ ಇವೆ, ಅದು ಕುಡಿದರೆ ಹಾಗೆ ಆಗುತ್ತೆ, ಹೀಗೆ ಆಗುತ್ತೆ ಅಂತ. ಸುದ್ದಿ ಓದಿ ಗ್ರೀನ್ ಟೀ ಬಳಸುತ್ತಿದ್ದವರು ಮೂರ್ಚೆ ತಪ್ಪುವುದೊಂದು ಬಾಕಿ.   ಆಗ ನಮಗನ್ನಿಸುತ್ತೆ, ಏನೇ ಆದರೂ ನಮ್ಮ ಹಳೆಯ ಅಭ್ಯಾಸವೇ ಯಾವತ್ತಿಗೂ ಬೆಟರ್ ಅಂತ...

          ಅದರಲ್ಲಿಯೂ ಸೋಪು-ಶ್ಯಾಂಪೂಗಳ ಜಾಹೀರಾತುಗಳನ್ನಂತೂ ಕೇಳುವುದೇ ಬೇಡ. ನನಗೆ ಚಿಕ್ಕಂದಿನಿಂದಲೂ ಒಂದು ಆಸೆ. ಏನೆಂದರೆ ನನ್ನ ಕೂದಲು ಉದ್ದ ಎಂದರೆ ತುಂಬಾ ಉದ್ದ ಬೆಳೆಯಬೇಕೆಂದು. ಇದು ನನ್ನ ಆಸೆ ಮಾತ್ರವಲ್ಲ ಪ್ರತಿಯೊಬ್ಬ ಮಹಿಳೆಯ ಆಸೆ ಎಂದರೂ ತಪ್ಪಲ್ಲ. ಅದನ್ನು ಚೆನ್ನಾಗಿ ತಿಳಿದುಕೊಂಡಿರುವ ಪ್ರಾಡಕ್ಟ್ ಗಳು ಒಂದಕ್ಕಿಂತ ಒಂದು ಪೈಪೋಟಿಯಿಂದ ಜಾಹೀರಾತು ಕೊಡುತ್ತವೆ. ನಂಬುವ ನಾವು ಹಳ್ಳಕ್ಕೆ ಬೀಳ್ತೀವಿ. ಅಲ್ಲ ಕಣ್ರೀ... ಯಾವುದೇ ವಿಶೇಷ ಆರೈಕೆ ಇಲ್ಲದೇ ಕೂದಲು ಅಷ್ಟುದ್ದ ಬೆಳೆಯಲು ಸಾಧ್ಯವಾ ಅಂತ ನಾವು ಯೋಚಿಸುವುದೇ ಇಲ್ಲ. ಇನ್ನು ಫೇರ್ ನೆಸ್ ಕ್ರೀಂಗಳದ್ದೇ ಒಂದು ಲೋಕ. ಅಲ್ಲಿ ಇರುವವರೆಲ್ಲರೂ ಸುರಸುಂದರಿಯರೇ... ಅವರು ಕ್ರೀಮ್ ಹಚ್ಚುವ ಮೊದಲೂ ಚೆನ್ನಾಗಿಯೇ ಇರ್ತಾರೆ. ಕ್ರೀಂ ಹಚ್ಚಿದ ಮೇಲೆ ಮತ್ತಷ್ಟು ಫಳಫಳಾಂತ ಹೊಳೀತಾರೆ. ನಾವೂ ಅದೇ ಥರ ಹೊಳೀತೀವಿ ಅಂತ ನಾವು ತಿಳ್ಕೊಂಡು ಮೋಸ ಹೋಗ್ತೀವಿ. ವರ್ಷಗಟ್ಟಲೇ ಹಚ್ಚಿದರೂ ನಮ್ಮ ಒರಿಜಿನಲ್ ಕಲರ್ ನಮ್ಮನ್ನ ಬಿಟ್ಟು ಹೋಗೋಲ್ಲ. ಆಗ ಫೇರ್ ನೆಸ್ ಕ್ರೀಂಗೆ ಒಂದು ಹಿಡಿಶಾಪ ಹಾಕಿ ಸುಮ್ಮನಾಗ್ತೀವಿ.

          ಮಜಾ ಏನ್ ಗೊತ್ತಾ? ಮಾತು ಮಾತಿಗೂ ಜಾಹೀರಾತುಗಳು " ಪ್ರಾಡಕ್ಟ್ ಅನ್ನು ಅಮೆರಿಕನ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಟೆಸ್ಟ್ ಮಾಡಲಾಗಿದೆ" ಅಂತ ಬಡ್ಕೊತಾವಲ್ಲ, ಯಾವುದ್ರೀ ಅದು ನಮ್ಮ ಇಂಡಿಯಾ ಮೇಲೆ ಇಷ್ಟೊಂದು ಕಾಳಜಿ ಇರುವ ಅಮೆರಿಕಾದ ಇನ್ಸ್ಟಿಟ್ಯೂಟು? ನಮ್ಮ ದೇಶದ ಜನರ ಕೂದಲು, ಮುಖ ಸೌಂದರ್ಯ, ಚರ್ಮದ ಆರೋಗ್ಯದ ಬಗ್ಗೆ ಬಿಟ್ಟಿಯಾಗಿ ರಿಸರ್ಚ್ ನಡೆಸುತ್ತಿರುವ ಇನ್ಸ್ಟಿಟ್ಯೂಟ್ ಒಂದು ಸಲಾಮ್ ಹೊಡೆಯಲೇಬೇಕು.

          ನೀವು "ಚುಪ್ಕೆ ಸೆ" ಎನ್ನುವ ಹಿಂದಿ ಸಿನೆಮಾ ನೋಡಿದ್ರೆ ಗೊತ್ತಾಗೋದು. ಅದರಲ್ಲಿ ಮಿಸ್ ಇಂಡಿಯಾ ಆಗಿ ಯಾರು ಸೆಲೆಕ್ಟ್ ಆಗ್ತಾಳೆ ಅಂದ್ರೆ ನೋಡಲು ಸುಮಾರಾಗಿರುವ, ನಮ್ಮ ನಿಮ್ಮ ಮನೆಯ ಪಕ್ಕದ ಮನೆಯ ಹುಡುಗಿಯಂತಿರುವವಳು ಮಿಸ್ ಇಂಡಿಯಾ ಆಗ್ತಾಳೆ. ಯಾಕೆಂದರೆ ಅವಳು ನಮ್ಮೆಲ್ಲರ ಮನೆಯ ಮಗಳ ಹಾಗಿದ್ದರೆ ಅವಳನ್ನ ರೂಪದರ್ಶಿಯನ್ನಾಗಿಸಿ ಅವಳಿಂದ ಪ್ರಾಡಕ್ಟ್ ಮಾರಿಸುವುದು ಬಹಳ ಸುಲಭ. ಅಂತಹ ಮುಖದ ಹುಡುಕಾಟದಲ್ಲಿದ್ದೇನೆ ಅಂತ ಸಿನೆಮಾದ ಮುಖ್ಯ ಪಾತ್ರಧಾರಿ ಹೇಳುತ್ತಾಳೆ. ಈಗ ಗೊತ್ತಾಯ್ತಲ್ಲ ಮಿಸ್ ಇಂಡಿಯಾ, ಮಿಸ್ ವರ್ಲ್ಡ್ ಗಳೆಲ್ಲಾ ಯಾವ ಪುರುಷಾರ್ಥಕ್ಕೆ ಅಂತ? ಸಕಲವೂ ಜಾಹೀರಾತಿಗೇ.... ಅದರಲ್ಲಿ ಗೆದ್ದವರು ಸೋಪು, ಶ್ಯಾಂಪೂ ಹಿಡಿದು ಹಲ್ಲು ಕಿರಿಯುತ್ತಾ ಪೋಸು ಕೊಡುತ್ತಾರೆ. ನಾವು ಹಲ್ಕಿರಿದು ಸಾಮಗ್ರಿ ಬಳಸುತ್ತೇವೆ.

          ಮೊಬೈಲು ಫೋನು ಸ್ಟಾರ್ಟಿಂಗಿನಲ್ಲಿ ಬಂದಾಗ ಎಲ್ಲಿ ನೋಡಿದರೂ ಅದರದ್ದೇ ಹವಾ. ಈಗಲೂ ಕಡಿಮೆಯಾಗಿಲ್ಲ ಅನ್ನಿ. ನಾವು ಬಳಸಿ ಬಳಸಿ ರೂಢೀಯಾಗಿ ಈಗ ಅದನ್ನು ಬಿಟ್ಟಿರಲಾರೆವು ಎನ್ನುವ ಮಟ್ಟಕ್ಕೆ ಬಂದಾಗ ಹೆಚ್ಚು ಮೊಬೈಲ್ ಬಳಸುವುದರಿಂದ ಅಪಾಯ ಎಂದರು. ವಿಷಯ ಮೊದಲೇ ಗೊತ್ತಿರಲಿಲ್ಲವೇ?

          ಯಾವುದೇ ಒಂದು ಹೊಸ ಪ್ರಾಡಕ್ಟ್ ತಯಾರಾದಾಗ ಮೊದಲು ಅದರ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ನಂತರ ಅದನ್ನು ಮಾರುಕಟ್ಟೆಗೆ ಬಿಡಬೇಕು. ಆದರೀಗ ನೆನ್ನೆ ತಯಾರಾದ ಮಾಲು ಇವತ್ತು ಪೇಟೆಯಲ್ಲಿ ಸಿಗುತ್ತದೆ. ಅಂದವಾದ ಜಾಹೀರಾತು ನೀಡುತ್ತಾರೆ. ನಾವು ನಂಬ್ತೀವಿ, ಕೊಳ್ತೀವಿ. ಕೆಲವು ವರ್ಷ ಆದ ನಂತರ ಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹೇಳ್ತಾರೆ. ಅಷ್ಟು ಹೊತ್ತಿಗಾಗಲೇ ನಾವು ಪ್ರಾಡಕ್ಟ್ ಗೆ ಅದನ್ನು ಬಿಡಲಾಗದಷ್ಟು ಹೊಂದಿಕೊಂಡುಬಿಟ್ಟಿರುತ್ತೇವೆ.

          ಕೆಲವು ವರ್ಷದ ಹಿಂದೆ ದಿಢೀರ್ ಅಂತ ಎಲ್ಲರೂ ಓಟ್ಸ್ ಓಟ್ಸ್ ಎನ್ನಲಿಕ್ಕೆ ಶುರು ಮಾಡಿದರು. ಇಲ್ಲೇ ಇರುವುದು ತಮಾಷೆಯ ವಿಷಯ. ಓಟ್ಸ್ ದೇಹಕ್ಕೆ ಒಳ್ಳೆಯದು ಅಂತ ನಮ್ಮ ಜನಗಳ ತಲೆಗೆ ಜಾಹೀರಾತುದಾರರು ಯಶಸ್ವಿಯಾಗಿ ದಾಟಿಸಿದರು. ಆದರೆ ಜನರು ಅದನ್ನು ತಿನ್ನುವಂತೆ ಮಾಡಬೇಕಲ್ಲ? ನಮ್ಮ ಜನರು ದಿನಬೆಳಗಾದರೆ ರೊಟ್ಟಿ, ಚಪಾತಿ, ಉಪ್ಪಿಟ್ಟು, ದೋಸೆ, ವಾಂಗಿಬಾತ್ ಅಂತ ವೈವಿಧ್ಯಮಯ ತಿನಿಸನ್ನು ತಿಂದು ಅಭ್ಯಾಸ ಇರುವವರು. ಸಪ್ಪೆ ಓಟ್ಸ್ ಯಾರು ತಿಂತಾರೆ. ಅದಕ್ಕೆಂದೇ ಮಸಾಲಾ ಓಟ್ಸ್ ಬಂತು, ವಿತ್ ತರಕಾರಿ ಬಂತು, ಪೊಂಗಲ್ ಓಟ್ಸ್ ಸಹ ಬಂತು. ಈಗ....? ಓಟ್ಸ್ ಎಲ್ಲಿದೆ ಅಂತ ದುರ್ಬೀನು ಹಾಕಿ ಹುಡುಕಬೇಕಿದೆ.

          ಎಲ್ಲಕ್ಕಿಂತ ದೊಡ್ಡ ಹಾಸ್ಯ ಎಂದರೆ ತಮ್ಮದೇ ಕಂಪೆನಿಯ ಹಿಂದಿನ ಪ್ರಾಡಕ್ಟಿಗಿಂತ ಈಗ ತಯಾರಿಸಿರುವ ಪ್ರಾಡಕ್ಟ್ ಅತ್ಯುತ್ತಮ ಅಂತ ಅದೇ ಸಂಸ್ಥೆ ಹೇಳುವುದು. ಹಾಗಾದರೆ ಹಳೇ ಪ್ರಾಡಕ್ಟನ್ನು ವರ್ಷಾನುಗಟ್ಟಲೆ ಉಪಯೋಗಿಸಿರುವವರಿಗೆ ಕಂಪೆನಿ ಏನಾದರೂ ಪರಿಹಾರ ಕೊಡುತ್ತದಾ? ಫೇರ್ ನೆಸ್ ಕ್ರೀಂ ಇರಬಹುದು ಅಥವಾ ಟೂಥ್ ಪೇಸ್ಟ್ ಇರಬಹುದು... ಎರಡರಲ್ಲಿಯೂ ಆಗ್ಗಿಂದಾಗ್ಗೆ ಹೊಸ ಹೊಸ ಪ್ರಾಡಕ್ಟುವಳು ಬಿಡುಗಡೆಯಾಗುತ್ತಲೇ ಇರುತ್ತವೆ. ನಾವು ಹಳೆಯದನ್ನು ಒಂದು ಕೈಲಿ, ಹೊಸದನ್ನು ಒಂದು ಕೈಲಿ ಹಿಡಿದುಕೊಂಡು ಮಂಗನ ಹಾಗೆ ನಿಂತಿರ್ತೀವಿ.

          ನಾವು ನಮ್ಮ ಸಮಾಜವನ್ನು ನೋಡುತ್ತಲೇ ಬೆಳೆದವರು. ಯಾವುದು ನಿಜ ಯಾವುದು ಸುಳ್ಳು ಅಂತ ನಮಗೂ ಗೊತ್ತು. ಹಾಗಾಗಿ ಪೂರ್ತಿಯಾಗಿ ಜಾಹೀರಾತನ್ನು ನಂಬದೇ ಪರಾಮರ್ಶಿಸಿ ತೀರ್ಮಾನ ತೆಗೆದುಕೊಳ್ಳುವ ಪ್ರಬುದ್ಧತೆ ಬೆಳೆಸಿಕೊಳ್ಳಬೇಕಿದೆ.

**********

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)